ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ಯೋಗರಾಜ್ ಭಟ್ಟರು ನಮಗಾಗಿಯೇ ಬರೆದದ್ದು ಅನ್ನಿಸಿಬಿಡ್ತದೆ..

ಗಂಡ್ಮಕ್ಕಳ ಪುಣ್ಯಕೋಟಿ ಕಥೆಯಂತೆ ನೇರ ಮೆದು ಮೆದುಳಿಗೇ

ಗುಂಡ್ಪಿನ್ನು ಚುಚ್ಚುತ್ತೆ ಈ ಹಾಡು

ಶಿವು ಮೋರಿಗೇರಿ

ಅದಕ್ಕೇ ಮತ್ತೆ ಮತ್ತೆ ಕೇಳಿದ್ದೇನೆ ಈ ಗೀತೆಯನ್ನು. ಮೊದಲು ಟಿವಿಯಲ್ಲಿ ಈ ಹಾಡಿನ ತುಣುಕೊಂದನ್ನು ನೋಡಿದ ತಕ್ಷಣ ಕಂಪಿಸಿಬಿಟ್ಟೆ. ಮರು ಕ್ಷಣವೇ ಪೂರ್ತಿ ಹಾಡನ್ನು ಕೇಳಿಬಿಡಬೇಕು ಅದೇನಾದ್ರೂ ಆಗೋಗ್ಲಿ ಅನ್ನುವಂಥಹ ಗಂಟಲು ಬಿಗಿತ. ಆದ್ರೆ ಕೆಲಸದ ಒತ್ತಡದಿಂದ ಕೆಲಸ ಮುಗಿಯುವಷ್ಟರಲ್ಲಿ ನಾನೀ ಹಾಡಿನ ಗುಂಗನ್ನೇ ಮರೆತು ಮನೆ ತಲುಪಿದಾಗ ಸರಿಯಾದ ಸರಿರಾತ್ರಿ. ಮನೆಗೆ ಬಂದ ತಕ್ಷಣ ನಿದ್ರೆಗೆ ಜಾರಿದ್ದು ಕಡಿಮೆ. ಕೆಲ ಹೊತ್ತಿನ ನಂತರ ಫೇಸ್ ಬುಕ್ ಓಪನ್ ಮಾಡಿದಾಗ  ಮತ್ತೆ ಕಾಣಿಸಿತು ಈ ಹಾಡು. ಒಂದೇ ಗುಕ್ಕಿಗೆ ಹಾಡು ಕೇಳಿದಾಗ ನನ್ನೆದೆ ನಿರ್ಜನ ಮಸಣ. ಯಾರೋ ಹಿಡಿದು ಕೆನ್ನೆಗೆ ಬಾರಿಸಿ ಮಂಪರು ಇಳಿಸಿದಂತೆ. ಯಾಕೋ ಹಸಿವು ಹಿಂಗಲಿಲ್ಲ ಅಂದ್ಕೊಂಡು ರಿಪೀಟ್ ರಿಪೀಟ್ ಮತ್ತೆಷ್ಟು ಬಾರಿ ಕೇಳಿದ್ನೋ… ಒಂದೊಂದು ಬಾರಿ ಕೇಳುವಾಗಲೂ ಮನಸು ಇನ್ನೆಲ್ಲೋ. ಹುಟ್ಟಿದ ಊರನ್ನ ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದು ಬಾಕಿಯಿದೆ ? ಹೌದಲ್ವಾ !  ಈ ಪ್ರಶ್ನೆಗೆ ಉತ್ತರವಿಲ್ಲ ನನ್ನ ಬಳಿ.

ತೀರಾ ದೀರ್ಘಕ್ಕೆ ಹೋಗದೆ ಈ ಹಾಡಿನ ತಾತ್ಪರ್ಯವನ್ನು ಕೇವಲ ರಾಜ್ಯಮಟ್ಟದಲ್ಲಷ್ಟೇ ಯೋಚಿಸಿದ್ರೂ, ರಾಜಧಾನಿಯ ಮಗ್ಗುಲು ಜಿಲ್ಲೆಯ ಅಲೆಮಾರಿಗಳಿಗೆ ಈ ಹಾಡಿನ ಸಾಲುಗಳು ಅಷ್ಟಾಗಿ ತಟ್ಟಲಿಕ್ಕಿಲ್ಲ. ಆದ್ರೆ ತೊಟ್ಟಿಲ ಮನೆ ತಲುಪೋಕ್ಕೆ ಇಡೀ ನೈಟ್ ಜರ್ನಿ ಬೇಡುವ ಹೈದ್ರಬಾದ್, ಉತ್ತರ ಕರ್ನಾಟಕದ ಅಲೆಮಾರಿಗಳಿಗೆ ? ಇದು ಯೋಗರಾಜ್ ಭಟ್ಟರು ನಮಗಾಗಿಯೇ ಬರೆದದ್ದು ಅನ್ನಿಸಿಬಿಡ್ತದೆ. ನಂಗಿಲ್ಲೊಂದು ಪ್ರಶ್ನೆ ಕಾಡುತ್ತೆ. ತಲೆಮಾರುಗಳಿಂದ ಹಳ್ಳಿಗಳಿಂದ ವಲಸೆ ಬರ್ತೀವಲ್ಲ ಇದಕ್ಕೆ ಕಾರಣ ಯಾರು ?

ಇದಕ್ಕೆಲ್ಲಾ ಯಾರೋ ಒಬ್ಬಿಬ್ಬರೇ ಕಾರಣವಾಗಿದ್ರೆ ಎದೆ ಮ್ಯಾಲಿನ ಅಂಗಿ ಹಿಡಿದು ಕೇಳಬಹುದಿತ್ತು. ಬಿಸಿ ಧೂಳಿನ ಧರೆಯಲ್ಲಿ ನಾವುಗಳು ಹುಟ್ಟಿದ್ದೇ ತಪ್ಪಾ ? ಮಳೆ ಬರದೇ ಇರೋದು ಇದೆ ಮೊದಲ ವರ್ಷವೇನಲ್ಲ. ಓದೋದು ಕನ್ನಡ ಮೀಡಿಯಂ ಸರ್ಕಾರಿ ಶಾಲೇಲಿ, ಓದ್ತಿದಿನಿ ಅನ್ನೋ ಧಿಮಾಕಿಗೆ ಬೇಸಾಯದ ಮಾತು ದೂರ ಇರಲಿ, ಹೊಲ ಗದ್ದೆಗಳತ್ತ ತಿರುಗಿಯೂ ನೋಡಲ್ಲ. ಸಣ್ಣ ಅಂಗಡಿನೋ, ಹೋಟೆಲ್ಲಿನ ಗಲ್ಲೆದ ಮೇಲೆನೋ ಕೂಡೋಣ ಅಂದ್ರೆ ಹಳ್ಳಿಗಳಲ್ಲಿನ ಉದ್ರಿ ಬರ್ಕೊಳ್ಳೊ ಪುಸ್ತಕದ ಗಾತ್ರ ದಿಗ್ಗನೆ ನೆನಪಾಗುತ್ತೆ. ಅತ್ತ ಆರಕ್ಕೇರದ ಮೂರಕ್ಕಿಳಿಯದ ಮೂರಾಬಟ್ಟಿ ಬದುಕು, ಹೆಂಗೋ ಒಂದು ಲೆಕ್ಕಕ್ಕೆ ಓದು ಮಗಿಸಿದ್ರೆ ಕೆಲಸಗಳೆಲ್ಲಿವೆ ನಮಗಲ್ಲಿ ? ನಾರ್ಮಲ್ ಹಳ್ಳಿ ವಿದ್ಯಾವಂತರೆಲ್ಲ ಬೇರು ಕಳಚಿಕೊಳ್ಳಲೇಬೇಕಲ್ಲಾ ? ಅಲ್ಲಿಗೆ ಹುಟ್ಟೂರು ಬಿಡೋದಕ್ಕೆ ಕೊನೇ ಬಸ್ಸಿನ ಟೈಮಾಗಿರುತ್ತೆ.

ಇನ್ನು ಮದ್ಯಮ ವರ್ಗದ ಹೈಕಳೂ ಊರು ಬಿಡೋಕ್ಕೆ ಶೋಕಿಗಳ್ಯಾವೂ ಉತ್ತೇಜನ ನೀಡೊಲ್ಲ. ಕಲ್ಲು ಕೊಟರೆಗಳಲ್ಲಿ ಸಿಕ್ಕಿಕೊಂಡ ಕುಟುಂಬದ ಬಂಡಿಯನ್ನ ಸರಿ ದಾರಿಗೆ ಮನೆಯ ಯಾರಾದ್ರೂ ತರ್ಲೇ ಬೇಕಲ್ಲ, ಬೇರೆ ದಾರಿನೇ ಇಲ್ಲದೆ ಮಾರ್ಕೆಟ್ಟಲ್ಲಿ ಹಣ್ಣಿನ ಬುಟ್ಟಿ ಹೊರಲಿಕ್ಕೆ, ಕಟ್ಟಡ ನಿರ್ಮಾಣ ಕೆಲಸಕ್ಕೆ, ಸೆಕ್ಯುರಿಟಿ ಕೆಲಸಗಳಿಗೆ, ಕಾಲ್ ಸೆಂಟರ್ ಹುದ್ದೆಗಳಿಗೆ, ಮತ್ಯಾವುದೋ ಫ್ಯಾಕ್ಟರಿಯ ಮೆಕಾನಿಕಲ್ ಹೆಲ್ಪರ್ ಹೆಣಗಾಟಕ್ಕೆ, ಗಾಣದೆತ್ತಿನಂತಹ ಕೆಲಸದ ಗಾರ್ಮೆಂಟ್ಸ್ ಗಳಿಗೆ, ಹೀಗೆ ಎಲ್ಲೋ ಒಂದುಕಡೆ ನೂರಿನ್ನುರು ಉಳಿತಾಯಕ್ಕೆ ರಕ್ತ ಬಸಿಯುತ್ತಾರಲ್ಲಾ ಇದಕ್ಕೆಲ್ಲಾ  ‘ಅಭಿವೃದ್ಧಿ’ ಎನ್ನುವ ಅಮಲೇ ಕಾರಣ ಅನ್ನಿಸಿಬಿಡ್ತದೆ ಒಮ್ಮೊಮ್ಮೆ. ‘ಎಲ್ಲಾ ಸವಲತ್ತನ್ನೂ ನೀಡ್ತೈತಲ್ರೀ ಸರ್ಕಾರ’ ಅಂತಾನೂ ಕೆಳೋರಿರಬಹುದು. ಏನಂದ್ರೆ, ಶ್ರಮಕ್ಕೆ ತಕ್ಕ ಪ್ರತಿಫಲ ಅಥವಾ ಉಳಿತಾಯದ ಮೌಲ್ಯಕ್ಕೆ ತಕ್ಕುದಾದ ಅವಕಾಶಗಳು ಅಲ್ಲೆಲ್ಲಾ ಕಮ್ಮಿನೇ. ಇಷ್ಟರ ಮೆಲೂ ಯೋಚಿಸ್ತಾ ಕೂತ್ರೆ ನಮ್ಮ ನಾಯಿಪಾಡಿನ ಬದುಕು ನಮ್ಮೆದಿರೇ ಚಪ್ಪಾಳೆ ತಟ್ಟಿ ತಟ್ಟಿ ನಕ್ಕಂಥಾ ಭಾವ. ಕಂಡಿಷನ್ ಹಿಂಗಿದೆ ಮಗ್ನೆ ವಾಪಸ್ಸು ಹೊಂಟ್ಹೋಗೋ ಶಿವನೇ…ಅಂದಷ್ಟು ಸುಲಭನಾ…?

ಪರಪಂಚ ಅನ್ನೋ ಸಿನ್ಮಾಕ್ಕಾಗಿ ಅದ್ಯಾವಾಗ ಯೋಗರಾಜ್ ಭಟ್ರು ಈ ರಿಕಾರ್ಡ್ ಬರದ್ರೋ ಗೊತ್ತಿಲ್ಲ. ಸಾಹಿತ್ಯದ ಒಂದೊಂದು ಪದಗಳಿಗೂ ಜೀವಕಾಳು ತುಂಬಿ ಕೇಳುಗರ ಮನ ಗೆದ್ದುಬಿಡ್ತಾರೆ ನಟ, ನಿರ್ದೇಶಕ, ಹುಚ್ಚ ವೆಂಕಟ್. ಹಾಡಿನ ಶೈಲಿಯ ಫೀಲಿಂಗಿನ ಮೊನಚು ಬಾಣವನ್ನು ಕೇಳುಗನೆದೆಗೆ ನುಗ್ಗಿಸಿ ಕಣ್ಣ ಕೆರೆಯ ಕೋಡಿ ಕೆಡವುತ್ತೆ ಸಂಗೀತ. ಅಷ್ಟಿಲ್ಲದೆ ಸಾವಿರಾರು ಕೇಳುಗರ ಮೆಚ್ಚುಗೆಯನ್ನ ಗಳಿಸಲಿಕ್ಕೆ ಸಾಧ್ಯವಾಗುವುದಾದ್ರೂ ಹೇಗೆ ? ಈ ಹಿಂದೆ ಇಂಥಹದ್ದೇ ಹಾಡುಗಳು ಬಂದಿರಬಹುದು ಇನ್ಮುಂದೆನೂ ಬರಬಹುದು ಅದಲ್ಲ ಮ್ಯಾಟ್ರು, ಯಾವುದ್ಯಾವುದೋ ತಿಕ್ಕಲುಗಳಿಗೆ ಊರುಬಿಟ್ಟು ಬಂದವರಲ್ಲೊಬ್ಬ ಮಗ್ಗಲು ಕೂತು ತನ್ನ ಎದೆ ಭಾರವನ್ನು ಇಳಸಿಕೊಂಡು ನಮ್ಮೊಳಗಣ್ಣಿನ ಕದ ಕದಲಿಸುತ್ತಾನಲ್ಲ, ಆ ಅಂಶ ಸಿಹಿ ಸಿಹಿಯಾಗಿ ಕಾಡುತ್ತೆ. ಹಾಗಾಗಿಯೇ ಊರು ಬಿಟ್ಟು ಬಂದವರೆಲ್ಲರಿಗೂ ಗಂಡ್ಮಕ್ಕಳ ಪುಣ್ಯಕೋಟಿ ಕಥೆಯಂತೆ ನೇರ ಮೆದು ಮೆದುಳಿಗೇ ಗುಂಡ್ಪಿನ್ನು ಚುಚ್ಚುತ್ತೆ ಈ ಹಾಡು. ನಮ್ಗೂ ಇನ್ನೆಲ್ಲೋ ಡಿಮ್ಯಾಂಡು ಇರುತ್ತೆ ಅಲ್ವಾ ? ಅಂತ ಮತ್ತೆ ದುರ್ಬಿನ್ನು ಹಾಕಿಕೊಂಡು ನನ್ನನ್ನೇ ನಾನು ನನ್ನೊಳಗೆ ಹುಡುಕಲೊರಟಾಗಲೂ ಉತ್ತರಗಳು ಮಿಂಚು ಹುಳುಗಳಾಗಿ ಯಾಮಾರಿಸ್ತವೆ. ಯಾಕಂದ್ರೆ ನಮ್ಮಂಥಹ ಪರದೇಶಿಗಳ ಬದುಕು ಸಗಣಿ ಮೇಲಿನ ಸಂಕ್ರಾತಿ ಹೂವಿನಂತಿರದೆ ಇನ್ನೆಂಗೆ ಇದ್ದೀತು ?

‍ಲೇಖಕರು admin

21 December, 2015

2 Comments

  1. guru

    ತುಂಬಾ ಕಾಡೋ ಹಾಡು. ಕೇಳಿದಷ್ಟು ಸಾಕೆನಿಸಲ್ಲ. ನಿಜ ಉತ್ತರಗಳು, ಮಿಂಚುಹುಳಗಳು ಯಾಮಾರಿಸುತ್ತವೆ

  2. ಮುಗಿಯದ ಮೌನ- GKN

    ನಮ್ಮಂಥಹ ಪರದೇಶಿಗಳ ಬದುಕು ಸಗಣಿ ಮೇಲಿನ ಸಂಕ್ರಾತಿ ಹೂವಿನಂತಿರದೆ ಇನ್ನೆಂಗೆ ಇದ್ದೀತು ?

    ,,,,,,,,,ಎಂತಹ ಮಾತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading