ಚಂದ ಕವಿತೆ ಬರೆಯುವ ಡೀ ಎಸ್ ರಾಮಸ್ವಾಮಿ ಬ್ಲಾಗ್ ಲೋಕ ಪ್ರವೇಶಿಸಿದ್ದಾರೆ-ಬೆಂಕಿ ಕಡ್ಡಿ ಹಿಡಿದು.
ಬೆಂಕಿ ಕಡ್ಡಿ- ಬೆಳಕು,ಶಾಖ ಮತ್ತು ಉರಿಯ ಚಿಕ್ಕತುಂಡು. ನಾವೆಲ್ಲರೂ ಈ ಲೌಕಿಕದ ಬೆಂಕಿಯಲ್ಲಿ ಬೇಯುತ್ತಲೇ ಮತ್ತೊಂದು ಬೆಳಕು, ಶಾಖ ಮತ್ತು ಉರಿಯನ್ನು ಸೃಜಿಸುತ್ತಿರುವವರು.ಅದಕ್ಕೆಂದೇ ಈ ಬರಹಗಳ ಶೀರ್ಷಿಕೆ “ಬೆಂಕಿಕಡ್ಡಿ”. ಈಗಾಗಲೇ ಪ್ರಕಟಿಸಿರುವ ಸಂಕಲನಗಳಿಂದ ಮತ್ತು ಹೊಸ ಪದ್ಯ ಹಾಗೇ ಆಕಾಶವಾಣಿಯ ಚಿಂತನಕ್ಕೆ ಬರೆದ ಲೇಖನಗಳನ್ನೂ ಸೇರಿಸುವ ಇರಾದೆ ಈ ಬ್ಲಾಗಿಗನಿಗೆ…ಎನ್ನುವ ರಾಮಸ್ವಾಮಿ ಎರಡು ಕವನ ಸಂಕಲನಗಳು- ’ಮರೆತ ಮಾತು’(೨೦೦೨)’ಉಳಿದಪ್ರತಿಮೆಗಳು’ (೨೦೦೭) ಗಳನ್ನು ಹೊರ ತಂದಿದ್ದಾರೆ. ಶಿವಮೊಗ್ಗ ಕರ್ನಾಟಕ ಸಂಘದ ಪ್ರೊ. ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಕಾಂತಾವರ ಕನ್ನಡ ಸಂಘವು ಹಸ್ತಪ್ರತಿಗೆ ನೀಡುವ ಮುದ್ದಣ ಕಾವ್ಯ ಪುರಸ್ಕಾರ ೨೦೦೬ ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ ೨೦೦೪, ೨೦೦೫ ಮತ್ತು ೨೦೦೮ರ ಬಹುಮಾನ. ಆಕಾಶವಾಣಿ ಹಾಸನ ಕೇಂದ್ರ ೧೦೦ಕ್ಕೂ ಹೆಚ್ಚು ಚಿಂತನಗಳನ್ನು ಪ್ರಸಾರ ಮಾಡಿದೆ.
ರಾಮಸ್ವಾಮಿ ಅವರ ಕವಿತೆಯೊಂದು ಇಲ್ಲಿದೆ…
ಅಳತೆ
ಹಿಂದೆಂದೋ ರಾಮಾನುಜನ್ ಪರಿಚಯಿಸಿದ್ದ
ಆ ಅದೇ ಅಂಗುಲದ ಹುಳು
ಮೊನ್ನೆ ಮಾರ್ಕೆಟ್ಟಲ್ಲಿ ಅಚಾನಕ್ಕಾಗಿ ಸಿಕ್ಕು
ಉಭಯ ಕುಶಲೋಪರಿ ಕೇಳಿತು:
ಗುಬ್ಬಚ್ಚಿಯ ಬಾಲ, ಮುದಿ ಗೂಬೆಯ ಹೊಟ್ಟೆ
ಹಂಸದ ಕತ್ತು, ಹಾಗೇ ಹಾಲಕ್ಕಿಯ ಮೂಗು
ಕೊಕ್ಕರೆಯಂತೇ ಇದ್ದ ಇನ್ಯಾರದೋ ತೆಳ್ಳನೆಯ ಕಾಲು,
ಉದ್ದವಾಗುವ ನಾಲಿಗೆ, ಕುಕ್ಕುವ ಕೊಕ್ಕು,
ಯೋನಿ, ಲಿಂಗಗಳನ್ನಳೆಯುವಾಗಲೂ ಸಂತ-
ನಂತಿದ್ದೂ, ಹಾಡನ್ನಳೆಯುವ ನೆವದಲ್ಲಲೆದೂ ಅಳೆದೂ
ಸವೆದಿರುವ ತನ್ನ ಅಳತೆಯ ಪಟ್ಟಿ-
ಗೆ ಪ್ರಮಾಣ ಪತ್ರ ಕೊಟ್ಟವರ ಪಟ್ಟಿ ಬಿಡಿಸಿಟ್ಟಿತು.
ಹಾಗೇ ಬುದ್ಧ, ಬಸವ, ಗಾಂಧಿ, ಏಸು
ಕನಕ, ಪುರಮ್ದರರ ಜೊತೆಗೇ ಬೆರೆವ
ಅದೆಷ್ಟೆಷ್ಟೋ ಹೆಸರುಗಳನುದ್ಧರಿಸಿತು.
ನಿಖರವಾಗದವರಳತೆ ಸೋತೆನೆಂದಿತು.
ಇಷ್ಟಿಷ್ಟೇ ಎಂದು ತುಂಬಿಸಿಕೊಂಡಿದ್ದ ಕೈಯ ಚೀಲ
ಭಾರವೆನ್ನಿಸಿ ಕೈ ಬದಲಿಸಲು, ದೃಷ್ಟಿ ಬದಲಿಸಿದೆ.
ಆ ಹುಳು ಮತ್ತೆಲ್ಲೋ ಮರೆಯಾಗಿ ಹೋಯಿತು!






0 Comments