ಬಡತನದ ಬೇರುಗಳನ್ನರಸುತ್ತಾ..
ಜಗದೀಶ್ ಕೊಪ್ಪ
ಡಾ.ಮಹಮ್ಮದ್ ಯೂನಸ್
(ಡಾ.ಮಹಮ್ಮದ್ ಯೂನಸ್ ವರ್ತಮಾನದ ಜಗತ್ತಿನಲ್ಲಿ ಒಂದು ಚಿರಪರಿಚಿತವಾದ ಹೆಸರು. ಬಡತನದ ವಾಖ್ಯಾನವನ್ನೇ ಬದಲಿಸುವುದರ ಮೂಲಕ, ಅರ್ಥಶಾಸ್ತ್ರದ ಸಿದ್ಧಾಂತಗಳಿಗೆ ವಾಸ್ತವಿಕ ನೆಲೆಗಟ್ಟನ್ನು ಒದಗಿಸುವುದರ ಜೊತೆ ಜೊತಗೆ ಬ್ಯಾಂಕಿಂಗ್ ವ್ಯವಹಾರದ ಮೂಲಸೂತ್ರಗಳನ್ನು ತಲೆಕೆಳಗು ಮಾಡಿದ ಅಪ್ರತಿಮ ಸಾಹಿಸಿ. ಇವೆಲ್ಲಕ್ಕಿಂತ ಹೆಚ್ಚಾಗಿ ಮಾನವೀಯ ಗುಣವುಳ್ಳ ಜಗತ್ತಿನ ಒಬ್ಬ ಶ್ರೇಷ್ಟ ಅರ್ಥಶಾಸ್ತ್ರಜ್ಞ. ಬಂಗ್ಲಾದೇಶದ ಬಡ ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಇವರು ಸ್ಥಾಪಿಸಿದ ಗ್ರಾಮೀಣ ಬ್ಯಾಂಕ್ ತನ್ನ ಕಿರುಸಾಲ ಯೋಜನೆಯ ಮೂಲಕ ಜಗತ್ತಿನ ತೊಂಬತ್ತಕ್ಕೂ ಹೆಚ್ಚು ರಾಷ್ಟ್ರಗಳಿಗೆ ಮಾರ್ಗದರ್ಶಿಯಾಗಿದೆ. ಸ್ವತಃ ವಿಶ್ವ ಬ್ಯಾಂಕ್ ಕೂಡ ಇದರ ತತ್ವಗಳನ್ನು ತನ್ನ ಸಾಲದ ನೀತಿಯಲ್ಲಿ ಅಳವಡಿಸಿಕೊಂಡಿದೆ. ಬಡವರ ಕುರಿತ ಕಾಳಜಿ ಮತ್ತು ಸೇವೆಗಾಗಿ ನೋಬಲ್ ಪ್ರಶಸ್ತಿ ಪಡೆದ ಮಹಮ್ಮದ್ ಯೂನಸ್ ರವರ ಆತ್ಮಕಥೆ ಬಃಚಿಟಿಞಜಡಿ ಖಿಠ ಖಿಜ ಕಠಠಡಿ ನಮ್ಮೆಲ್ಲರ ಕಣ್ಣು ಮತ್ತು ಹೃದಯ ತೆರೆಸಬಹುದಾದ ಒಂದು ಅಪರೂಪದ ಕೃತಿ. ಎದೆಯ ಕದ ತೆರೆದು’ ಹೆಸರಿನಲ್ಲಿ ಡಾ. ಎನ್. ಜಗದೀಶ್ ಕೊಪ್ಪ ಅನುವಾದಿಸಿರುವ ಯೂನಸ್ಸರ ಆತ್ಮಕಥನದ ಒಂದು ಅಧ್ಯಾಯ ಅವಧಿ ಓದುಗರಿಗಾಗಿ ಇಲ್ಲಿದೆ. )
ಅದು 1974ರ ವರ್ಷ ಪಾಕಿಸ್ಥಾನದಿಂದ ಬಿಡುಗಡೆಗೊಂಡು ಉದಯವಾಗಿದ್ದ ಬಂಗ್ಲಾ ದೇಶಕ್ಕೆ ಕೇವಲ ಎರಡು ವರ್ಷವಾಗಿತ್ತು. ಆ ವರ್ಷ ಬಂಗ್ಲಾದೇಶ ತನ್ನ ಇತಿಹಾಸದಲ್ಲಿ ಕಂಡರಿಯದ ಭೀಕರ ಕ್ಷಾಮಕ್ಕೆ ತುತ್ತಾಯಿತು. ಪ್ರತಿದಿನ ವೃತ್ತಪತ್ರಿಕೆಗಳು ಹೊತ್ತು ತರುತಿದ್ದ ಹಸಿವು ಮತ್ತು ಸಾವಿನ ವರದಿಗಳು ಇಡೀ ಮನುಕುಲವನ್ನೆ ಅಲುಗಾಡಿಸುವಂತಿದ್ದವು. ನಾನು ಅರ್ಥಶಾಸ್ತ್ರದ ಪ್ರಾದ್ಯಾಪಕನಾಗಿ ಕೆಲಸ ಮಾಡುತಿದ್ದ ಚಿತ್ತಗಾಂಗ್ ವಿಶ್ವವಿದ್ಯಾನಿಲಯ, ಬಂಗ್ಲಾದ ದಕ್ಷಿಣದ ತುದಿಯಲ್ಲಿರುವ ಬಂದರು ಮತ್ತು ಗುಡ್ಡಗಾಡುಗಳಿಂದ ಆವೃತ್ತವಾಗಿರುವ ಚಿತ್ತಗಾಂಗ್ ಪಟ್ಟಣದ ಹೊರವಲಯದಲ್ಲಿತ್ತು. ವಿ.ವಿ.ಯಲ್ಲಿ ಅರ್ಥಶಾಸ್ತ್ರ ಅಧ್ಯಯನ ಸೇರಿದಂತೆ ಹಲವಾರು ವಿಭಾಗಗಳಿದ್ದರೂ ಕೂಡ ಆರಂಭದಲ್ಲಿ ದೇಶದ ಹಸಿವು ಮತ್ತು ಕ್ಷಾಮದ ಬಗ್ಗೆ ನಾವ್ಯಾರು ಅಷ್ಟಾಗಿ ತಲೆ ಕಡೆಸಿಕೊಂಡಿರಲಿಲ್ಲ. ಆದರೆ ರಾಜಧಾನಿ ಢಾಕ್ಕಾ ನಗರದ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ನಡೆದಾಡುವ ಅಸ್ತಿಪಂಜರಗಳಂತೆ ಕಾಣುತಿದ್ದ ಜನರ ಚಿತ್ರಗಳು ಮತ್ತು ಎಲ್ಲೆಂದರಲ್ಲಿ ಹಸಿವಿನಿಂದ ಸತ್ತು ಮಲಗಿದ ಜನರನ್ನು ಕಂಡಾಗ ಕ್ಷಾಮದ ಭೀಕರತೆ ನನ್ನನ್ನೂ ಒಳಗೊಂಡಂತೆ ನನ್ನೆಲ್ಲಾ ಸಹೊದ್ಯೋಗಿಗಳನ್ನು ಇನ್ನಿಲ್ಲದಂತೆ ಕಾಡತೊಡಗಿತು.
ಇಡೀ ದೇಶಾದ್ಯಂತ ಪಟ್ಟಣ, ಹಳ್ಳಿಗಳು ಎಂಬ ತಾರತಮ್ಯವಿಲ್ಲದೆ ಜನತೆ ಹಸಿವಿನಿಂದ ತತ್ತರಿಸಿ ಹೋಗಿದ್ದರು. ಮಲಗಿದ್ದವರ ಪೈಕಿ ಜೀವಂತ ವ್ಯಕ್ತಿಗಳು ಯಾರು? ಶವಗಳು ಯಾವುವು? ಎಂಬುದನ್ನು ಪತ್ತೆ ಹಚ್ಚುವುದು ಕೂಡ ಕಷ್ಟವಾಗಿತ್ತು. ಮಕ್ಕಳು ಮತ್ತು ವೃದ್ಧರ ನಡುವೆ ವೆತ್ಯಾಸ ತಿಳಿಯದಾಗಿತ್ತು. ಸಕರ್ಾರ ಹಲವೆಡೆ ಗಂಜಿ ಕ್ರೆಂದ್ರಗಳನ್ನು ತೆರೆದಿತ್ತು. ದಿನ ನಿತ್ಯ ಬರುತಿದ್ದ ಮಾಧ್ಯಮದ ವರದಿಗಳು ಅರ್ಥಶಾಸ್ತ್ರಜ್ಞರನ್ನು ಮತ್ತು ಸಕರ್ಾರದ ಯೋಜನಾ ಆಯೋಗಗಳನ್ನು ನಿದ್ದೆಗೆಡಿಸಿದ್ದವು. ನಾವು ಕೂಡಲೇ ಅಂಕಿ ಅಂಶಗಳನ್ನು ಕಲೆ ಹಾಕಲು ಆರಂಭಿಸಿದೆವು. ಯಾವ ಯಾವ ಪ್ರಾಂತ್ಯದಲ್ಲಿ ಕ್ಷಾಮ ತಲೆದೋರಿದೆ. ಜನತೆ ಯಾವ ಪ್ರದೇಶದತ್ತ ವಲಸೆ ಹೋಗುತಿದ್ದಾರೆ ಎಂಬುದರ ಕುರಿತು ಮಾಹಿತಿ ಕಲೆ ಹಾಕತೊಡಗಿದವು. ಕೆಲವು ಧಾಮರ್ಿಕ ಸಂಸ್ಥೆ ಮತ್ತು ಸಂಘಟನೆಗಳು ಹಸಿವಿನಿಂದ ಸತ್ತವರ ಅಂತ್ಯ ಸಂಸ್ಕಾರ ನೆರವೇರಿಸಲು ಸ್ವಯಂಪ್ರೇರಿತವಾಗಿ ಪಾಲ್ಗೊಂಡಿದ್ದವು.
ಅ ದಿನಗಳ ಎಲ್ಲಾ ರೀತಿಯ ಸಾವು ಮತ್ತು ನೋವು ಹಾಗೂ ಹಸಿವಿಗೆ ಸಾಕ್ಷಿಯಾದ ನನ್ನ ಮನಸ್ಸಿನಲ್ಲಿ ಬಡವರ ಕುರಿತಂತೆ ಒಂದು ಸಣ್ಣ ಆಲೋಚನೆಯೊಂದು ಸುಳಿದು ಹೋಯಿತು.
ಈ ಅಮಾಯಕ ಬಡವರು ತಮ್ಮ ಅನ್ನಕ್ಕಾಗಿ ಯಾವುದೇ ಪ್ರತಿಭಟನೆಯ ಘೋಷಣೆಯನ್ನು ಕೂಗಲಿಲ್ಲ, ಅಥವಾ ಉಳ್ಳವರ ವರ್ಗಕ್ಕೆ ಸೇರಿದ ನಮ್ಮಂತಹವರ ಮನೆಗಳಲ್ಲಿ ನಾವು ಭಕ್ಷ ಭೋಜನಗಳನ್ನು ತಯಾರಿಸಿಕೊಂಡು ತಿನ್ನುವಾಗ ನಮ್ಮನ್ನು ಹೀಯಾಳಿಸಲಿಲ್ಲ ಇವೆಲ್ಲದರ ಬದಲಾಗಿ ದೈನೇಸಿ ಸ್ಥಿತಿಯಲ್ಲಿ ನಮ್ಮ ಮನೆ ಬಾಗಿಲಿಗೆ ಬಂದು ಕೈಯೊಡ್ಡಿ ನಿಲ್ಲುತಿದ್ದಾರಲ್ಲ! ಇವರೆಷ್ಟು ಅಮಾಯಕರಿರಬಹುದು? ಎಷ್ಟು ಹೃದಯವಂತರಿರಬಹುದು? ಅಂದು ಎದೆಯೊಳಗೆ ಮೊಳಕೆಯೊಡೆದ ಈ ಪ್ರಶ್ನೆಯ ಬೀಜ ನನ್ನ ಬದುಕಿನ ವ ಆಲೋಚನಾ ದಿಕ್ಕನ್ನೇ ಬದಲಾಯಿಸಿತು.
ಮನುಷ್ಯನೊಬ್ಬನ ಸಾವಿಗೆ ಹಲವು ಕಾರಣಗಳಿವೆ ಆದರೇ ಹಸಿವಿನಿಂದ ನನ್ನ ದೇಶದ ಜನ ಸಾಯುತಿದ್ದುದನ್ನು ಕಂಡಾಗ ಅದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಯಿತು. ನಿಮಿಷ, ಸೆಕೆಂಡಿಗೆ ಅಂತರವಿಲ್ಲದಂತೆ ಸಾವು ಬಂದು ಅಪ್ಪಳಿಸುತಿತ್ತು. ಹುಟ್ಟು ಮತ್ತು ಸಾವಿನ ನಡುವಿನ ಅವಧಿಯೇ ಅಲ್ಲಿ ಕ್ಷೀಣಿಸಿತ್ತು. ಹಸಿವಿನಿಂದ ಬೀದಿಯಲ್ಲಿ ಕೈಯೊಡ್ಡಿ ತಿರುಗುತಿದ್ದ ತಾಯಂದಿರ ಕಂಕುಳಲ್ಲಿ ಇದ್ದ ಮಕ್ಕಳು ಛೀರಿಡುತಿದ್ದವು, ಹಾಗೇ ಅತ್ತು ಅತ್ತೂ ನಿದ್ರೆಗೆ ಜಾರುತಿದ್ದವು. ಪುನಃ ಮಕ್ಕಳಿಗೆ ಎಚ್ಚರವಾದಾಗ ಆ ಮಕ್ಕಳಲ್ಲಿ ಅಳಲು ಶಕ್ತಿಯೇ ಇರುತ್ತಿರಲಿಲ್ಲ.
ಸಾವಿನ ಸೂತಕದ ಮನೆಯಂತಿದ್ದ ನನ್ನ ದೇಶದ ಆ ದಿನಗಳಲ್ಲಿ ಚಿತ್ತಗಾಂಗ್ನ ವಿ.ವಿ.ಯಲ್ಲಿ ನಾನು ಅರ್ಥಶಾಸ್ತ್ರದ ಸಿದ್ಧಾಂತಗಳ ಕುರಿತಂತೆ ವಿದ್ಯಾಥರ್ಿಗಳಿಗೆ ಪಾಠ ಮಾಡುವುದು ಆತ್ಮವಂಚನೆಯ ಕೆಲಸ ಎಂದು ಅನಿಸತೊಡಗಿತು. ನಾವು ಬೋಧಿಸುತ್ತಿರುವ ಪಠ್ಯ ಮತ್ತು ಸಿದ್ಧಾಂತಗಳಿಗೂ, ನಾವು ಕಾಣುತ್ತಿರುವ ಜಗತ್ತಿನ ಕಟು ವಾಸ್ತವ ಸಂಗತಿಗಳಿಗೂ ಅಜಗಜಾಂತರ ವೆತ್ಯಾಸವಿತ್ತು. ಜನತೆಯ ಆರ್ಥಿಕ ಚಟುವಟಿಕೆ ಮತ್ತು ಸುಖೀ ರಾಜ್ಯದ ಬಗ್ಗೆ ಅರ್ಥಶಸ್ತ್ರದ ಸಿದ್ಧಾಂತಗಳನ್ನು ವಿದ್ಯಾರ್ಥಿಗಳ ಮುಂದೆ ಮಂಡಿಸುವಾಗ ನನ್ನ ಎದೆಯೊಳಗೊಂದು ಶೂನ್ಯ ಭಾವ ಆವರಿಸಿಕೊಳ್ಳುತಿತ್ತು.
ತರಗತಿಯ ಕೊಠಡಿಯಲ್ಲಿ ನಾನು ಭೋಧಿಸುತಿದ್ದ ಪಠ್ಯಗಳೆಲ್ಲಾ ನನ್ನ ಪಾಲಿಗೆ ಮನರಂಜನೆಯ ಸಿನಿಮಾಗಳ ಚಿತ್ರ ಕಥೆಯಂತೆ ಭಾಸವಾಗತೊಡಗಿದವು. ಪ್ರತಿಯೊಂದು ಸಿನಿಮಾದಲ್ಲಿ ಒಳ್ಳೆಯ ಗುಣಗಳಿರುವ ನಾಯಕನಿಗೆ ಅಂತಿಮವಾಗಿ ಒಳಿತಾಗುವಂತೆ ನಮ್ಮ ಅರ್ಥಶಾಸ್ತ್ರದ ಸಿದ್ಧಾಂತಗಳಲ್ಲಿ ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಒಳಿತು ಮಾಡುವ ಸೂತ್ರಗಳೇ ಇದ್ದವು. ಆದರೆ; ಇವ್ಯಾವು ನಿಜ ಬದುಕಿಗೆ ಅಳವಡಿಸಿಕೊಳ್ಳಲಾರದ ಒಣ ಸಿದ್ಧಾಂತಗಳಾಗಿದ್ದವು. ಮನುಷ್ಯನೊಬ್ಬನ ಹಸಿವೆಗೆ, ಬಡತನಕ್ಕೆ ಪರಿಹಾರ ಸೂಚಿಸಲಾಗದ ಇಂತಹ ಪೊಳ್ಳು ಸಿದ್ಧಾಂತಗಳ ಪಠ್ಯದ ಬದನೆಕಾಯಿ ಕುರಿತು ವಿದ್ಯಾರ್ಥಿಗಳಿಗೆ ಭೋಧಿಸುವಾಗ, ಈ ವಿಶ್ವವಿದ್ಯಾನಿಲಯ, ಈ ಕೃತಕ ಅಕಾಡೆಮಿಕ್ ಬದುಕು ಎಲ್ಲವನ್ನು ತ್ಯಜೆಸಿ ದೂರ ಓಡಿ ಹೋಗಬೇಕೆನಿಸಿತು ನಾವು ಕಾಣುತ್ತಿರುವ ವಾಸ್ತವ ಬದುಕಿನ ಬವಣೆಗಳಿಗೆ ಉತ್ತರ ಕಂಡುಕೊಳ್ಳಲಾರದ ಅರ್ಥಶಾಸ್ತ್ರವನ್ನು ವಿದ್ಯಾರ್ಥಿಗಳಿಗೆ ಹೇಗೆ ಭೋಧಿಸಲಿ? ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿತು. ಇಂತಹ ಕಲ್ಪನೆಯ ಸಿದ್ಧಾಂತಗಳಿಗೆ ಬದಲಾಗಿ ಕಣ್ಣ ಮುಂದಿನ ವಾಸ್ತವ ಪ್ರಪಂಚದ ಬದುಕನ್ನು ಗ್ರಹಿಸುವುದೇ ನಿಜವಾದ ಅರ್ಥಶಾಸ್ತ್ರವನ್ನು ಅರ್ಥೈಸಿಕೊಳ್ಳುವ ಬಗೆ ಎಂದು ಅನಿಸತೊಡಗಿತು. ಇಂತಹ ದಿಕ್ಕಿನಲ್ಲಿ ನಾನು ಮುಂದುವರೆದರೇ ಮಾತ್ರ ನಿಜವಾದ ಅರ್ಥಶಾಸ್ತ್ರವನ್ನು ಗ್ರಹಿಸುವುದರ ಜೊತೆಗೆ ಹಸಿವಿಗೆ, ಬಡತನಕ್ಕೆ ಕಾರಣ ಕಂಡುಕೊಳ್ಳಬಹುದು ಎಂದು ನನಗೆ ಮನವರಿಕೆಯಾಯಿತು. ಈ ವಿಷಯದಲ್ಲಿ ನಾನು ಅದೃಷ್ಟವಂತನಾಗಿದ್ದೆ. ಏಕೆಂದರೇ ನನ್ನ ಬದುಕಿನ ಮೊದಲ ಪ್ರಯತ್ನ ಮತ್ತು ಪ್ರಯೋಗಕ್ಕೆ ನಾನು ಕೆಲಸ ಮಾಡುತಿದ್ದ ಚಿತ್ತಗಾಂಗ್ ವಿ.ವಿ.ಯ ಕ್ಯಾಂಪಸ್ ನ ಅನತಿ ದೂರದಲ್ಲಿ ಜೊಬ್ರ ಎಂಬ ಹಳ್ಳಿಯಿತ್ತು. ಆ ಹಳ್ಳಿಯನ್ನು ನನ್ನ ಸತ್ಯಶೋಧನೆಯ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡೆ.
ಪಾಕಿಸ್ಥಾನದ ಅಧ್ಯಕ್ಷರಾಗಿದ್ದ ಫೀಲ್ಡ್ ಮಾರ್ಷಲ್ ಅಯೂಬ್ ಖಾನ್ ಕ್ಷಿಪ್ರಕ್ರಾಂತಿಯ ಮೂಲಕ ಅಧ್ಯಕ್ಷ ಸ್ಥಾನಕ್ಕೇರಿ 1958 ರಿಂದ 1969ರ ವರೆಗೆ ಮಿಲಿಟರಿ ಸರ್ವಾಧಿಕಾರಿಯಂತೆ ಪಾಕಿಸ್ಥಾನವನ್ನು ಆಳಿದರು. ಇವರ ಆಳ್ವಿಕೆಯ ಅವಧಿಯಲ್ಲಿ ಪೂರ್ವ ಪಾಕಿಸ್ಥಾನದ ಹೆಸರಿನಲ್ಲಿ ಪಾಕಿಸ್ಥಾನಕ್ಕೆ ಒಳಪಟ್ಟಿದ್ದ ಬಂಗ್ಲಾದೇಶದ ಬಂದರು ಪಟ್ಟಣವಾಗಿದ್ದ ಚಿತ್ತಗಾಂಗ್ ನಲ್ಲಿ ವಿಶ್ವ ವಿದ್ಯಾನಿಲಯ ಆರಂಭವಾಗಿತ್ತು. ವಿಧ್ಯಾರ್ಥಿಗಳ ಬಗ್ಗೆ ಅಯೂಬ್ ಖಾನ್ ರಿಗೆ ಒಂದು ರೀತಿಯ ಅಸಹನೆ ಇತ್ತು. ಅವರ ದೃಷ್ಟಿಯಲ್ಲಿ ವಿದ್ಯಾರ್ಥಿಗಳು ಎಂದರೇ ಗಲಭೇಕೋರರು ಎಂಬುದಾಗಿತ್ತು. ಈ ಕಾರಣಕ್ಕಾಗಿ ಚಿತ್ತಗಾಂಗ್ ನ ಹೊರವಲಯದಲ್ಲಿದ್ದ ಪರ್ವತ ಪ್ರದೇಶದ ಮೇಲಿನ ಗುಡ್ಡಗಳನ್ನು ಕತ್ತರಿಸಿ, ಸಮತಟ್ಟು ಮಾಡಿ ಚಿತ್ತಗಾಂಗ್ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗಿತ್ತು. ವಿದ್ಯಾರ್ಥಿಗಳ ಮುಷ್ಕರ ನಡೆದರೆ, ಯಾವ ಕಾರಣಕ್ಕೂ ಪ್ರಮುಖ ಬಂದರು ನಗರವಾಗಿದ್ದ ಚಿತ್ತಗಾಂಗ್ನ ವಾಣಿಜ್ಯ ಚಟುವಟಿಕೆಗೆ ತೊಂದರೆಯಾಗಬಾರದೆಂಬುದು ಅಯೂಬ್ಖಾನ್ ರ ದೂರದರ್ಶಿತ್ವದ ನಿಲುವಾಗಿತ್ತು. ವಿಶ್ವ ವಿದ್ಯಾಲಯದ ಕ್ಯಾಂಪಸ್ಗೆ ಹೊಂದಿಕೊಂಡಂತೆ ಜೊಬ್ರ ಗ್ರಾಮ ಇದ್ದುರಿಂದ ನಾನು ನನ್ನ ಪ್ರಾಧ್ಯಾಪಕ ವೃತ್ತಿಯನ್ನು ಮರೆತು ಮತ್ತೇ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿ ಆ ಹಳ್ಳಿಯನ್ನೇ ನನ್ನ ವಿಶ್ವವಿದ್ಯಾನಿಲಯವನ್ನಾಗಿ ಮಾಡಿಕೊಂಡೆ.
ಪಠ್ಯ ಪುಸ್ತಕಗಳ ಮೂಲಕ ಬದುಕನ್ನು ಅರ್ಥಮಾಡಿಕೊಳ್ಳುವುದನ್ನು ಬದಿಗೊತ್ತಿ, ವಾಸ್ತವ ಬದುಕಿನ ಜೊತೆ ನೇರ ಮುಖಾಮುಖಿಯಾಗುವುದು ನನ್ನ ಉದ್ದೇಶವಾಗಿತ್ತು. ನಾವು ವಿ.ವಿ.ಗಳಲ್ಲಿ ಬೋಧಿಸುವ ಅರ್ಥಶಾಸ್ತ್ರದ ಪಠ್ಯಗಳು ಬಡತನ ಕುರಿತಂತೆ ವಿದ್ಯಾರ್ಥಿಗಳಿಗೆ ಒಂದು ಪಕ್ಷಿ ನೋಟ ನೀಡಬಹುದು ಅಷ್ಟೇ ಹೊರತು; ಅದರಾಚೆಗೆ ಯಾವ ಅನುಭವಗಳು ವಿದ್ಯಾರ್ಥಿಗಳ ಗ್ರಹಿಕೆಗೆ ನಿಲುಕುವುದಿಲ್ಲ. ಈ ಕಾರಣಕ್ಕಾಗಿ ಶಿಸ್ತುಬದ್ಧ ಅರ್ಥಶಾಸ್ತ್ರದ ಅಧ್ಯಯನ ಕ್ರಮದ ಚೌಕಟ್ಟನ್ನು ಮುರಿದು ಬಡತನ ಕುರಿತ ಅಧ್ಯಯನಕ್ಕೆ ವೈಯಕ್ತಿಕ ನೆಲೆಯಲ್ಲಿ ಲಿಂಗ ತಾರತಮ್ಯವಿಲ್ಲದೆ ಪ್ರತಿಯೊಬ್ಬ ವ್ಯಕ್ತಿಯ ಬದುಕನ್ನು ಸಂಶೋಧನೆ ಮತ್ತು ಅಧ್ಯಯನಕ್ಕೆ ಒಡ್ಡುವುದು ನನ್ನ ಗುರಿಯಾಗಿತ್ತು.
ವ್ಯಕ್ತಿಯೊಬ್ಬನ ಹಸಿವು ನೀಗಿಸುವುದಕ್ಕಾಗಿ ಗಂಜಿ ಕೇಂದ್ರಗಳನ್ನು ತೆರೆಯುವುದು, ಅಥವಾ ಸಂತ್ರಸ್ತರ ನೆರವಿಗಾಗಿ ನೆರೆ ಹೊರೆಯ ದೇಶಗಳತ್ತ ಸಹಾಯ ಹಸ್ತಕ್ಕಾಗಿ ಕೈಚಾಚುವುದು ಇವೆಲ್ಲವೂ ನನ್ನದೃಷ್ಟಿಯಲ್ಲಿ ಅರ್ಥಹೀನ ಸಂಗತಿಗಳಾಗಿದ್ದವು. ಇಂತಹ ಪ್ರಕ್ರಿಯೆಗಳು ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರಗಳಾಗಬಲ್ಲವೇ ಹೊರತು ಶಾಶ್ವತ ಪರಿಹಾರಕ್ಕೆ ನೆರವಾಗಲಾರವು. ಈ ನಿಟ್ಟಿನಲ್ಲಿ ಪರ್ಯಾಯ ಮಾರ್ಗ ಕಂಡುಕೊಳ್ಳುವುದು ನನ್ನ ಉದ್ದೇಶವಾಗಿತ್ತು.
ನನ್ನ ವಿ.ವಿ.ಯ ಪಾಠ, ಪ್ರವಚನಗಳ ನಡುವೆ ಜೊಬ್ರ ಗ್ರಾಮಕ್ಕೆ ಬೇಟಿ ನೀಡಲು ಆರಂಭಿಸಿದೆ. ನಾನು ತಕ್ಷಣದಲ್ಲಿ ಬಡವರಿಗೆ ಸಹಾಯ ಮಾಡಲು ನನಗೆ ಹಲವು ಮಾರ್ಗಳಿದ್ದವು. ನನ್ನ ಕರೆಗೆ ಓಗೊಟ್ಟು ಕೈ ಜೋಡಿಸಲು ಗೆಳಯರು, ಸಹೋದ್ಯೋಗಿಗಳಾಗಿದ್ದ ಪ್ರಾಧ್ಯಾಪಕರು, ಚಿತ್ತಗಾಂಗ್ ನಗರದ ಶ್ರೀಮಂತರು ಎಲ್ಲರೂ ಇದ್ದರು. ಆದರೇ ಸಹಾಯಕ್ಕೆ ಮುನ್ನ ಒಂದು ಹಳ್ಳಿಯ ಸಾಮಾಜಿಕ ಮತ್ತು ಆಥರ್ಿಕ ಚಟುವಟಿಕೆಯ ಮೂಲಕ ಜನತೆಯ ಬಡತನದ ಕಾರಣಗಳನ್ನು ತಿಳಿಯುವುದು ನನಗೆ ಮುಖ್ಯ ಉದ್ದೇಶವಾಗಿತ್ತು.
ನನ್ನ ಸಹೋದ್ಯೋಗಿ ಮಿತ್ರ ಪ್ರೊಪೆಸರ್ ಲತೀಪ್ ಜೊತೆ ಜೊಬ್ರ ಗ್ರಾಮಕ್ಕೆ ಬೇಟಿ ನಿಡಲು ನಿರ್ಧರಿಸಿದೆ. ಏಕೆಂದರೇ ಅವರು ಹಳ್ಳಯ ಜನರ ಜೊತೆ ಮೊದಲಿನಿಂದಲೂ ಬಾಂಧ್ಯವ್ಯ ಇರಿಸಿಕೊಂಡವರಾಗಿದ್ದರು. ಜೊಬ್ರ ಗ್ರಾಮದಲ್ಲಿ ಮೂರು ಬಗೆಯ ಧರ್ಮೀಯರು ಒಟ್ಟಿಗೆ ವಾಸಿಸುತಿದ್ದರು. ಬೌದ್ದ ಧರ್ಮೀಯರು ಇದ್ದ ಕೇರಿಗೆ ಬೇಟಿ ನೀಡಿದಾಗ ದೀಪಲ್ಚಂದ್ರ ಬರುವ ಎಂಬ ನಮ್ಮ ವಿ.ವಿ.ಯ ವಿದ್ಯಾರ್ಥಿ ನಮ್ಮನ್ನು ಸ್ವಾಗತಿಸಿ ಮನೆಗಳಿಗೆ ಕರೆದೊಯ್ದ. ಸ್ವತಃ ಕಡು ಬಡತನದ ಬೌದ್ದ ಧರ್ಮದ ಕುಟುಂಬದಿಂದ ಬಂದಿದ್ದ ಈ ವಿದ್ಯಾರ್ಥಿ ನಮ್ಮ ಅಧ್ಯಯನಕ್ಕೆ ಸ್ವಯಂಸೇವಕನಾಗಿ ದುಡಿಯಲು ಮುಂದೆ ಬಂದಿದ್ದ.
ಒಂದು ದಿನ ಬೆಳಿಗ್ಗೆ ನಾನು ಮತ್ತು ಪ್ರೊ. ಲತೀಪ್ ಇಬ್ಬರೂ ಜೊಬ್ರ ಗ್ರಾಮದಲ್ಲಿ ಸುತ್ತಾಡುತಿದ್ದಾಗ, ಒಂದು ಮುರುಕಲು ಗುಡಿಸಲು ಮನೆಯ ಮುಂದೆ ಹಾಗೇ ನಿಂತೆವು. ಇಂತಹ ಮುರುಕಲು ಮನೆಯಲ್ಲಿ ಮನುಷ್ಯರು ವಾಸಿಸಬಹುದು ಎಂಬ ಕಲ್ಪನೆಯೂ ಕೂಡ ನನಗಿರಲಿಲ್ಲ. ಮನೆಯ ಮಧ್ಯಭಾಗದಲ್ಲಿ ಕುಳಿತಿದ್ದ ಓರ್ವ ಮಹಿಳೆ ಬಿದಿರಿನ ಕುರ್ಚಿಯೊಂದನ್ನು ತಯಾರಿಸುತಿದ್ದಳು. ನಾನು ಆಕೆಯ ಚಟುವಟಿಕೆಯನ್ನು ನೋಡುತಿದ್ದಂತೆ;
ಲತೀಪ್ ನಾನು ಈ ಮಹಿಳೆಯೊಂದಿಗೆ ಮಾತನಾಡಬೇಕು ಎಂದೆ. ಕೂಡಲೇ ಪ್ರೊ. ಲತೀಪ್ ಮನೆಯ ಮುಂದೆ ಬೆಳದಿದ್ದ ತರಕಾರಿ ಗಿಡಗಳನ್ನು ಬದಿಗೆ ಸರಿಸುತ್ತಾ, ಅಲ್ಲಿಯೇ ಇದ್ದ ನಾಯಿ ಮತ್ತು ಕೋಳಿಗಳನ್ನು ಗದರಿಸುತ್ತಾ ಮನೆಯ ಬಾಗಿಲ ಬಳಿ ನಿಂತು ಮನೆಯಲ್ಲಿ ಯಾರಿದ್ದೀರಿ ಎಂದು ಆತ್ಮೀಯವಾಗಿ ಒಮ್ಮೆ ಕೂಗಿದರು.
ತನ್ನ ಕಾಲುಗಳನ್ನು ಉದ್ದಕ್ಕೂ ನೀಡಿ ತೊಡೆಯ ಮೇಲೆ ಇರಿಸಿಕೊಂಡಿದ್ದ ಕುರ್ಚಿಯನ್ನು ಹೆಣೆಯುತಿದ್ದ ಆ ಮಹಿಳೆ ಲತೀಫ್ ರವರ ಧ್ವನಿ ಕೇಳುತಿದ್ದಂತೆ ಕೆಲಸವನ್ನು ಅರ್ದಕ್ಕೆ ನಿಲ್ಲಿಸಿ ಎದ್ದು ಬಿದಿರಿನ ಬೊಂಬುಗಳಿಂದ ಮರೆಯಾಗಿದ್ದ ಅಡುಗೆ ಮನೆಗೆ ಹೋಗಿ ತಲೆಯ ಮೇಲೆ ಮುಸಕನ್ನು ಎಳೆದುಕೊಂಡು ನಿಂತಳು. ಆಕೆಯ ತಳಮಳ ಮತ್ತು ತಲ್ಲಣಗಳನ್ನು ಅರ್ಥಮಾಡಿಕೊಂಡ ಲತೀಪರು ಶಾಂತವಾದ ಧ್ವನಿಯಲ್ಲಿ ‘ ಗಾಬರಿಯಾಗಿ ಬೇಡಮ್ಮ ನಾವು ಪಕ್ಕದ ವಿಶ್ವವಿದ್ಯಾನಿಲಯದ ಮೇಷ್ಟ್ರು, ನಿನ್ನ ಬಳಿ ಒಂದಿಷ್ಟು ಪ್ರಶ್ನೆ ಕೇಳಬೇಕಿದೆ ಅದಕ್ಕಾಗಿ ಬಂದಿದ್ದೇವೆ ಎಂದರು.
ಲತೀಪರ ಅತ್ಮೀಯವಾದ ಧ್ವನಿಯಿಂದಾಗಿ ಧೈರ್ಯ ತಂದುಕೊಂಡ ಮಹಿಳೆ ಮನೆಯಲ್ಲಿ ಯಾರೂ ಇಲ್ಲ ಎಂದಳು.
ಅವಳ ಮಾತಿನ ಅರ್ಥ ಮನೆಯಲ್ಲಿ ಗಂಡನಿಲ್ಲದ ವೇಳೆ ಪರ ಪುರಷರ ಜೊತೆ ಮಾತನಾಡುವುದು ನಿಷಿದ್ಧ ಎಂಬುದಾಗಿತ್ತು. ಬಂಗ್ಲಾ ದೇಶದ ಕಟ್ಟಾ ಸಂಪ್ರದಾಯಸ್ತ ಮುಸ್ಲಿಂ ಕುಟುಂಬಗಳಲ್ಲಿ ತಮ್ಮ ಹತ್ತಿರದ ಸಂಬಂಧಿಗಳಾದ ಪುರುಷರನ್ನು ಹೊರತು ಪಡಿಸಿದರೇ, ಉಳಿದ ಪುರುಷರ ಜೊತೆ ಮಾತನಾಡುವುದು ಅಥವಾ ಅವರಿಗೆ ಮುಖ ತೋರಿಸುವುದು ನಿಷಿದ್ದ ಕ್ರಿಯೆಯಾಗಿತ್ತು. ಹೆಂಗಸರು ತಮ್ಮ ಸೀರೆಯ ಸೆರಗು ಅಥವಾ ಹೆಗಲ ಮೇಲಿನ ವಸ್ತ್ರವನ್ನು ತಲೆಯ ಮೇಲಿಂದ ಮುಖದವರೆಗೆ ಇಳಿಬಿಟ್ಟುಕೊಂಡು ಪುರುಷರ ಜೊತೆ ಮಾತನಾಡುವುದು ಪದ್ದತಿ.
ಮನೆಯ ಮುಂದೆ ಬೆತ್ತಲಾಗಿದ್ದ ಆಕೆಯ ಮೂರು ಮಕ್ಕಳು ಆಟವಾಡುತಿದ್ದವು. ಅವುಗಳ ಬಾಹ್ಯ ರೂಪದಿಂದಲೇ ಈ ಮಕ್ಕಳು ಅಕ್ಷರ ಲೋಕದಿಂದ ವಂಚಿತವಾದ ನತದೃಷ್ಟರು ಎಂದು ಗುರುತಿಸಬಹುದಾಗಿತ್ತು.
ನಾನು ಸ್ವತಃ ಚಿತ್ತಗಾಂಗ್ ನಗರದಲ್ಲಿ ಹುಟ್ಟಿ ಬೆಳೆದ ಕಾರಣ ಅಲ್ಲಿನ ಡೈಲೆಕ್ಟ್ ಭಾಷೆಯನ್ನು ಬಳಸಿ ಮಹಿಳೆಯೊಂದಿಗೆ ಮಾತನಾಡಲು ಅರಂಭಿಸಿದೆ. ನನ್ನ ಭಾಷೆ ಅಕೆಗೆ ಇವರು ನಮ್ಮವರು ಎಂಬ ಧೈರ್ಯ ಮೂಡಿತು. ಅದಕ್ಕೂ ಮೊದಲು ಬೆತ್ತಲಾಗಿ ನಿಂತಿದ್ದ ಆಕೆಯ ಮಗುವೊಂದನ್ನು ಎತ್ತಿಕೊಂಡೆ.
ಮೊದಲಿನಿಂದಲೂ ನನಗೆ ಮಕ್ಕಳೆಂದರೇ ಎಲ್ಲಿಲ್ಲದ ಅಕ್ಕರೆ. ನನ್ನ ತಂದೆ ತಾಯಿಗಳ ಹದಿನಾಲ್ಕು ಮಕ್ಕಳ ಪೈಕಿ ( ಉಳಿದದ್ದು ಮಾತ್ರ ಒಂಬತ್ತು ಮಂದಿ) ನಾನು ಮೂರನೇಯವನಾಗಿ ಜನಿಸಿದ್ದೆ.. ಬಾಲ್ಯದಿಂದಲೂ ನನ್ನ ಚಿಕ್ಕ ತಮ್ಮಂದಿರು ಮತ್ತು ತಂಗಿಯರನ್ನು ಎತ್ತಿ ಆಡಿಸುತ್ತಾ ಅಮ್ಮನಿಗೆ ನೆರವಾಗುವುದು ನನ್ನ ಬಾಲ್ಯದ ಮೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿತ್ತು.
ಮಕ್ಕಳನ್ನು ರಮಿಸುವುದರ ಮೂಲಕ ತಾಯಂದಿರ ವಿಶ್ವಾಸ ಗಳಿಸಬಹುದೆಂಬುದನ್ನ ಈ ಹವ್ಯಾಸ ನನಗೆ ಕಲಿಸಿಕೊಟ್ಟಿತ್ತು. ನಾನು ಮಗು ಎತ್ತಿಕೊಂಡಲೇ ಅದು ಅಳಲು ಆರಂಭಿಸಿ ಅಮ್ಮನ ಬಳಿ ಓಡಿತು. ಬಿದರಿನ ಬೊಂಬುಗಳ ಮರೆಯಲ್ಲಿ ನಿಂತಿದ್ದ ಸುಮಾರು ಇಪ್ಪತ್ತರ ಆಸು ಪಾಸಿನ ಆ ಮಹಿಳೆ ಮಗುವನ್ನು ಸೊಂಟದ ಮೇಲೆ ಎತ್ತಿಕೊಂಡು ನಾವು ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸತೊಡಗಿದಳು. ನಾನು ಪೆನ್ನು ಪುಸ್ತಕ ತೆಗೆದು ಕೊಂಡು ದಾಖಲಿಸತೊಡಗಿದೆ. ನಮ್ಮ ಸಂಭಾಷಣೆ ಹೀಗೆ ಸಾಗಿತ್ತು.
ಎಷ್ಟು ಮಕ್ಕಳು?
ಮೂರು
ಮಕ್ಕಳು ಮುದ್ದಾಗಿವೆ ಎಂದೆ.
ನಿನ್ನ ಹೆಸರು?
ಸಫಿಯಾ ಬೇಗಂ
ವಯಸ್ಸೆಷ್ಟು?
ಇಪ್ಪತ್ತೊಂದು ವರ್ಷ
ಈ ಬಿದರು ನಿನ್ನದು ತಾನೆ?
ಹೌದು
ಎಲ್ಲಿಂದ ತರುತ್ತಿ?
ಮಾರುಕಟ್ಟೆಯಿಂದ ಕೊಂಡು ತರ್ತೀನಿ.
ಇದರ ಬೆಲೆ ಎಷ್ಟು?
ಐದು ರೂಪಾಯಿ
ನಿನ್ನ ಬಳಿ ಇದನ್ನು ಕೊಳ್ಳು ಹಣ ಇದೆಯಾ?
ಇಲ್ಲ, ಮಾಲಿಕರಿಂದ ಸಾಲ ಪಡೆಯುತ್ತೀನಿ.
ಬಿದರಿನಿಂದ ತಯಾರಿಸಿದ ಈ ಕುಚಿಯನ್ನು ಎಷ್ಟು ಹಣಕ್ಕೆ ಮಾರುತ್ತೀಯಾ?
ಐದು ರೂಪಾಯಿ ಐವತ್ತು ಪೈಸೆಗೆ
ಏನು? ಐದುರೂಪಾಯಿ ಐವತ್ತು ಪೈಸೆಗಾ?
ಹೌದು. ಇವುಗಳ ಬೆಲೆ ಮಾರುಕಟ್ಟೆಯಲ್ಲಿ ಹತ್ತರಿಂದ ಹನ್ನೊಂದು ರೂಪಾಯಿ ಇದೆ. ಆದರೆ, ಬಿದಿರನ್ನು ಸಾಲ ಪಡೆಯುವಾಗ ಮಾಲೀಕರಿಗೆ ಹೆಣೆದ ಬುಟ್ಟಿ ಅಥವಾ ಕುರ್ಚಿಗಳನ್ನು ಸರಬರಾಜು ಮಾಡುತ್ತೇವೆ ಎಂದು ಮಾತು ಕೊಟ್ಟಿರುತ್ತೇವೆ.
ಕೇವಲ ಐವತ್ತು ಪೈಸೆ ಆದಾಯಕ್ಕಾಗಿ ದಿನವಿಡಿ ಕುಳಿತು ಈ ರೀತಿ ಕುರ್ಚಿ ತಯಾರಿಸುತ್ತೀಯಾ?
ಹೌದು. ಇದು ಆ ಮಹಿಳೆಯ ತಣ್ಣನೆಯ ಉತ್ತರವಾಗಿತ್ತು.
ಬಂಗ್ಲಾದೇಶದ ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹದ್ದೇ ಹಲವಾರು ಶೋಷಣೆಯನ್ನು ನಾನು ಕಂಡಿದ್ದೆ. ಅಲ್ಲಿನ ಸಣ್ಣ ರೈತ ತನ್ನ ಮನೆಯಲ್ಲಿ ದಿನಸಿ ಖಾಲಿಯಾದಾಗ, ಶ್ರೀಮಂತ ರೈತರಿಂದ ಸಾಲ ಪಡೆಯುತಿದ್ದ. ಫಸಲು ಬಂದ ನಂತರ ಎರಡೂವರೆ ಪಟ್ಟು ಹೆಚ್ಚು ಭತ್ತವನ್ನು ಆತ ಮರಳಿಸಬೇಕಾಗಿತ್ತು. ಅಂದರೇ ಹತ್ತು ಕೆ.ಜಿ. ಭತ್ತ ಪಡೆದಿದ್ದರೇ ಅದಕ್ಕೆ ಪ್ರತಿಯಾಗಿ ಅವನು 25 ಕ.ಜಿ. ಭತ್ತವನ್ನು ನೀಡಬೇಕಿತ್ತು. ಆದರೇ ನಾನು ಆ ಮಹಿಳೆಯ ಗುಡಿಸಲಿನಲ್ಲಿ ಭಿನ್ನವಾದ ಇನ್ನೊಂದು ಕರಾಳ ಮುಖಕ್ಕೆ ಸಾಕ್ಷಿಯಾಗಿದ್ದೆ.
ಬಂಗ್ಲಾ ದೇಶದಲ್ಲಿ ಬೆಳೆಸಾಲ, ತಮ್ಮ ಮಕ್ಕಳ ಮದುವೆಗಾಗಿ ಸಾಲ, ಆರೋಗ್ಯ ಏರುಪೇರು ಆದಾಗ ಚಿಕಿತ್ಸೆಗಾಗಿ ಮಾಡಿದ ಸಾಲ, ಇವುಗಳ ಬಡ್ಡಿಯ ಚಕ್ರವ್ಯೂಹದಲ್ಲಿ ಬಡವರು ಸಿಲುಕಿ ನರಳುವುದು ಸಾಮಾನ್ಯ ಸಂಗತಿ. ಇಂತಹದ್ದೇ ಇನ್ನೊಂದು ಚಕ್ರವ್ಯೂಹದಲ್ಲಿ ಸಫಿಯಾ ಬೇಗಂ ಕೂಡ ಸಿಲುಕಿದ್ದಳು.
ನಮ್ಮ ಮಾತುಕತೆ ಮುಗಿಯುತಿದ್ದಂತೆ ನಿಂತು ಹೋಗಿದ್ದ ಕುರ್ಚಿ ಹೆಣೆಯುವ ಕಾರ್ಯಕ್ಕಾಗಿ ಸಫಿಯಾ ಬೇಗಂ ಚಡಪಡಿಸುತಿದ್ದಳು. ಅವಳಿಗೆ ವಂದನೆ ಹೇಳಿ ನಾನು ಮತ್ತು ಮಿತ್ರ ಲತೀಪ್ರಾಕೆ ಗುಡಿಸಲಿನಿಂದ ಹೊರಬಂದೆವು.
ನನ್ನ ಅಷ್ಟು ವರ್ಷಗಳ ಬದುಕಿನಲ್ಲಿ, ನನ್ನ ಪ್ರೊಪೆಸರ್ಗಿರಿ ಹುದ್ದೆಯಲ್ಲಿ ಬೋಧಿಸುವಾಗ, ಬರೆಯವಾಗ ಅಥವಾ ನನ್ನ ಕುಟುಂಬದ ವ್ಯವಹಾರಗಳಲ್ಲಿ ಲಕ್ಷ ಲಕ್ಷ ರೂಪಾಯಿಗಳನ್ನು ಎಣಿಸಿದ್ದ ನಾನು; ವಾಸ್ತವ ಬದುಕಿನಲ್ಲಿ ಐವತ್ತು ಪೈಸೆ ಆದಾಯಕ್ಕಾಗಿ ಒಬ್ಬ ಬಡ ಮಹಿಳೆ ದಿನವಿಡಿ ದುಡಿಯುತ್ತಾಳೆ ಎಂಬ ಸತ್ಯವನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಯಿತು. ಆಕೆಯ ತಂದೆ ತಾಯಿ ಕಷ್ಟದಲ್ಲಿ ಹೇಗೆ ಬೆಳಸಿದ್ದರೋ, ಅದೇ ರೀತಿಯಲ್ಲಿ ಸಫಿಯಾ ಬೇಗಂ ಕೂಡ ತಾನೂ ಬೆಳೆದು ತನ್ನ ಮಕ್ಕಳನ್ನು ಬೆಳಸುತಿದ್ದಳು. ನಾನು ಆ ಕ್ಷಣದಲ್ಲಿ ನನ್ನ ಜೇಬಿನಿಂದ ಹಣ ತೆಗೆದು ಆಕೆಗೆ ಸಹಾಯ ಮಾಡಬಹುದಿತ್ತು. ನನ್ನ ಆರ್ಥಿಕ ಸಹಾಯದಿಂದ ಆಕೆಯನ್ನು ಬಡ್ಡಿಯ ಸುಳಿಯಿಂದ ಹೊರಗೆ ತರಬಹುದಿತ್ತು. ಆದರೆ, ಕೇವಲ ಒಬ್ಬ ಸಫಿಯಾ ಬೇಗಂಳನ್ನು ಸಾಲದ ಚಕ್ರವ್ಯೂಹದಿಂದ ಬಿಡುಗಡೆಗೊಳಿಸಿದ ಮಾತ್ರಕ್ಕೆ ಸಮಾಜದ ಬಡತನ ಅಳಿಸಿ ಹೋಗಲಾಗದು ಎಂಬ ಪ್ರಜ್ಞೆ ನನ್ನಲ್ಲಿತ್ತು.
ನಾನು ಪಾಠ ಮಾಡುವ ವಿ.ವಿ., ಅಲ್ಲಿನ ಅರ್ಥಶಾಸ್ತ್ರದ ಅಧ್ಯಯನ ವಿಭಾಗ, ಜಗತ್ತಿನ ಅರ್ಥಶಾಸ್ತ್ರಜ್ಞರು ಇವರೆಲ್ಲಾ ಏಕೆ ಬದುಕಿನ ತಳಮಟ್ಟದ ವಾಸ್ವವ ಸಂಗತಿಗಳ ಕುರಿತು ಅಥವಾ ಬಡತನದ ಬಗ್ಗೆ ಚಿಂತಿಸುತ್ತಿಲ್ಲ ಎಂಬುದನ್ನು ನೆನೆದು ಮನಸ್ಸಿಗೆ ತೀವ್ರ ಬೇಸರವಾಯಿತು.
ಬಡತನವೆಂಬುದು ಮನು ಕುಲಕ್ಕೆ ಶಾಪ ನಿಜ. ಇದು ಜಗತ್ತಿಗೇನು ಹೊಸತಲ್ಲ ಆದರೇ ಸದಾ ನಮ್ಮ ಕಣ್ಣ ಮುಂದೆ ಇರುವ ಬಡವರ ಬಗ್ಗೆ ಅವರನ್ನು ಕಾಡುತ್ತಿರುವ ಬಡತನದ ಬೇರುಗಳ ಕುರಿತು ನಾವು ಯಾವತ್ತಾದರೂ ಚಿಂತಿಸಿದ ದಿನಗಳು ಇವೆಯಾ?
ಸಫಿಯಾ ಬೇಗಂ ಒಬ್ಬ ಅನಕ್ಷರಸ್ತೆ ಇದು ವಾಸ್ತವಿಕ ಸತ್ಯ. ಆದರೆ ಅವಳಿಗೆ ಬದುಕುವ ಕಲೆ ಗೊತ್ತಿದೆಯಲ್ಲಾ? ಅವಳ ಕಲೆಗೆ, ಅವಳ ಕುಶಲತೆಗೆ ಈ ಸಮಾಜ ಏಕೆ ಬೆಲೆ ಕೊಟ್ಟಿಲ್ಲ? ಅವಳು ಸಹಜವಾಗಿ ರೂಡಿಸಿಕೊಂಡಿದ್ದ ದುಡಿಯುವ ಕಲೆಗೆ ಮತ್ತು ಅವಳ ಶ್ರಮಕ್ಕೆ ನಿಜವಾದ ಮೌಲ್ಯವನ್ನು ದೊರಕಿಸಿಕೊಟ್ಟಿದ್ದರೆ ಆಕೆ ಶೋಷಣೆ ಮುಕ್ತ, ಬಡತನ ಮುಕ್ತ ಬದುಕನ್ನು ಬಾಳಲು ಸಾಧ್ಯವಾಗುತ್ತಿರಲಿಲ್ಲವೆ? ಸಫಿಯಾಬೇಗಂನಂತಹ ಮಹಿಳೆಯರಿಗೆ ನನ್ನಂತಹವರ ಯಾವುದೇ ಸಹಾಯ ಅಥವಾ ಆಥರ್ಿಕ ನೆರವು ಬೇಕಾಗಿಲ್ಲ ಅವಳ ದುಡಿಮೆಗೆ ನಿಜವಾದ ಬೆಲೆ ದೊರಕಿಸಿಕೊಡುವುದೇ ನಾವು ಮಾಡಬಹುದಾದ ಅತಿ ದೊಡ್ಡ ಉಪಕಾರ ಎಂದು ನನಗೆ ಅನಿಸತೊಡಗಿತು.
ನಾನು ಮತ್ತು ಗೆಳೆಯ ಲತೀಪ್ ಜೊಬ್ರ ಹಳ್ಳಿಯಿಂದ ನಮ್ಮ ವಿ.ವಿ.ಕ್ಯಾಂಪಸ್ ಗೆ ವಾಪಸ್ ಬಂದು ಮನೆಯ ಮುಂದಿನ ತೋಟದ ಹುಲ್ಲುಗಾವಲಿನಲ್ಲಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ಅಂದಿನ ಘಟನೆಯ ಬಗ್ಗೆ ಯೋಚಿಸತೊಡಗಿದವು.
ನಮ್ಮನ್ನಾಳುವ ಸರ್ಕಾರಗಳ ಘೊಷಣೆಗಳು, ಆಶ್ವಾಸನೆಗಳು ಮತ್ತು ನಮ್ಮ ಕಣ್ಣ ಮುಂದಿನ ಜಗತ್ತಿನ ವಸ್ತು ಸ್ಥಿತಿಯ ನಡುವೆ ಇರುವ ಅಜಗಜಾಂತರದ ವೆತ್ಯಾಸ ಇವುಗಳನ್ನು ಕಂಡು ಮನಸ್ಸಿಗೆ ಮುಜುಗರವಾಯಿತು. ಮಾನವ ಹಕ್ಕು ಕುರಿತಂತೆ ವಿಶ್ವ ಸಂಸ್ಥೆಯ ಒಪ್ಪಂದಕ್ಕೆ ಜಗತ್ತಿನ ಎಲ್ಲಾ ಸದಸ್ಯ ರಾಷ್ಟ್ರಗಳು ಸಹಿ ಹಾಕಿವೆ. ಆ ಒಪ್ಪಂಧದ ಸಾರಾಂಶ ಹೀಗಿದೆ.
ಈ ಜಗತ್ತಿನ ಪ್ರತಿಯೊಬ್ಬ ಜೀವಿಯೂ ಆಹಾರ, ಆರೋಗ್ಯ, ವಸತಿ, ಹಾಗೂ ಶಿಕ್ಷಣ, ಸಾಮಾಜಿಕ ಸೇವೆ ಮತ್ತು ಭದ್ರತೆಯನ್ನು ಪಡೆಯುವುದು ಆತನ/ಳ ಸಾರ್ವಭೌಮ ಹಕ್ಕಾಗಿದೆ. ಅನಾರೋಗ್ಯ, ಅಂಗವಿಕಲತೆ, ವೃದ್ಧಾಪ್ಯ, ಮತ್ತು ಪಕೃತಿ ವಿಕೋಪ ಸಂದರ್ಭಗಳಲ್ಲಿ ಸಕರ್ಾರಗಳಿಂದ ಸೇವೆಯನ್ನು ಪಡೆಯುವ ಹಕ್ಕನ್ನು ಪ್ರತಿಯೊಬ್ಬ ನಾಗರೀಕ/ಳು ಹೊಂದಿರುತ್ತಾರೆ.
ಈ ಒಪ್ಪಂಧಕ್ಕೆ ಸಹಿ ಹಾಕಿರುವ ಪ್ರತಿಯೊಂದು ಸದಸ್ಯ ರಾಷ್ಟ್ರವೂ ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದು ವಿಶ್ವ ಸಂಸ್ಥೆ ಒತ್ತಾಯಿಸಿದೆ. ಆದರೆ, ಜಗತ್ತಿನಲ್ಲಿ ತಾಂಡವವಾಡುತ್ತಿರುವ ಬಡತನ ಸೃಷ್ಟಿಸಿರುವ ಸನ್ನೀವೇಶದಲ್ಲಿ ಬಡವರು ತಮ್ಮ ಹಕ್ಕುಗಳ ಬಗ್ಗೆ ಮಾತನಾಡುವ ಸ್ವಾತಂತ್ರ್ಯವನ್ನೇ ಕಳೆದುಕೊಂಡಿದ್ದಾರೆ. ಬಡತನ ನಿರ್ಮೂಲನೆಯ ಮಾತುಗಳು ರಾಜಕಾರಣಿಗಳು ಒಪ್ಪಂಧ ಪತ್ರಕ್ಕೆ ಹಾಕಿರುವ ಸಹಿಗಳಲ್ಲಿ ಮತ್ತು ಅಧಿಕಾರಿಗಳು ಮತ್ತು ಸರ್ಕಾರದ ಕೃಪಾಪೋಷಿತ ಸಂಸ್ಥೆಗಳು ಪ್ರಕಟಿಸುವ ಪುಸ್ತಕಗಳಲ್ಲಿ ಮಾತ್ರ ಜೀವಂತವಾಗಿವೆ.
ಸುಫಿಯ ಬೇಗಂಳ ಬದುಕು ನನ್ನ ಅಷ್ಟು ವರ್ಷದ ಆರ್ಥಿಕ ಚಿಂತನೆಯನ್ನು ಅಗ್ನಿಪರೀಕ್ಷೆಗೆ ಒಡ್ಡಿತು. ಕೇವಲ ಐದು ರೂಪಾಯಿಯ ಬಂಡವಾಳಕ್ಕೆ ತನ್ನ ಶ್ರಮಕ್ಕೆ ಸೂಕ್ತವಾದ ಬೆಲೆಯಿಲ್ಲದೆ ಜೀತದಾಳುವಿನಂತೆ ದುಡಿಯುವ ಅವಳ ದಾರುಣ ಬದುಕು ನನಗೆ ಜಗತ್ತನ್ನು ನೋಡುವ, ಗ್ರಹಿಸುವ ಹೊಸ ದೃಷ್ಟಿಕೋನವನ್ನು ನೀಡಿತು.
ಅವಳಿಗೆ ಸ್ವಂತದ್ದು ಎನಿಸುವ ಐದು ರುಪಾಯಿ ಬಂಡವಾಳ ಸಿಗದಿದ್ದರೆ, ಅವಳು ಜೀವನ ಪೂರ್ತಿ ವ್ಯವಸ್ಥೆಯ ವಿಷ ಚಕ್ರದಿಂದ ಹೊರಬರಲಾರಳು ಎನಿಸಿತು. ಅವಳಿಗೆ ಸಹಾಯದ ರೂಪದಲ್ಲಿ ಅಥವಾ ಬಡ್ಡಿಯ ಹೊರೆಯಿಲ್ಲದ ಸಾಲದ ರೂಪದಲ್ಲಿ ಸಹಾಯ ದೊರಕಿದಾಗ ಮಾತ್ರ ಅವಳ ಬದುಕು ಹಸನಾಗಬಲ್ಲದು ಎಂದು ನಿಶ್ಚಯಿಸಿಕೊಂಡೆ.
ಮರುದಿನ ವಿಶ್ವ ವಿದ್ಯನಿಲಯಕ್ಕೆ ಹೋಗಿ ಶಿಷ್ಯೆಯಾದ ಮಾಯಿಮುನಾ ಎಂಬಾಕೆಯನ್ನು ಕರೆದು ಜೊಬ್ರ ಗ್ರಾಮಕ್ಕೆ ಹೋಗಿ, ಸಫಿಯ ಬೇಗಂ ರೀತಿಯಲ್ಲಿ ಎಷ್ಟು ಕುಟುಂಬಗಳು ಸಾಲದ ಸುಳಿಯಲ್ಲಿ ಸಿಲುಕಿವೆ ಎಂಬುದನ್ನು ಮಾಹಿತಿ ಸಂಗ್ರಹಿಸಿಕೊಂಡು ಬರಲು ತಿಳಿಸಿದೆ.
ಒಂದು ವಾರದ ನಂತರ ಆಕೆ ಸಂಗ್ರಹಿಸಿ ತಂದ ಮಾಹಿತಿ ನಿಜಕ್ಕೂ ನನಗೆ ಶಾಕ್ ನೀಡಿತು. ಜೊಬ್ರ ಗ್ರಾಮದ ನಲವತ್ತೇರಡು ಕುಟುಂಬಗಳು ಕೇವಲ 856 ರೂಪಾಯಿಗಳಿಗೆ ಐವತ್ತು ಪೈಸೆ ಕೂಲಿ ದರದಲ್ಲಿ ಮಾಲಿಕನಿಗೆ ಕುರ್ಚಿ ಹೆಣೆದುಕೊಡುತಿದ್ದವು. ಮಾಹಿತಿ ಸಂಗ್ರಹಿಸುವ ಸಲುವಾಗಿ ಪ್ರತಿ ಕುಟುಂಬಕ್ಕೂ ಬೇಟಿ ನೀಡಿದ್ದ ನನ್ನ ಸಂಶೋಧನಾ ವಿದ್ಯಾರ್ಥಿನಿ ಮಾಯಿಮುನಾ ಅಲ್ಲಿನ ಬಡತನ ಹಸಿವು ಇವುಗಳನ್ನು ಕಣ್ಣಾರೆ ಕಂಡು ದಿಗ್ಭ್ರಾಂತಿಗೆ ಒಳಗಾದವಳಂತೆ ಕಂಡಳು.
ಅಂದಿನ ದಿನಗಳಲ್ಲಿ ಬಡವರಿಗೆ ಬ್ಯಾಂಕುಗಳು ಸಾಲ ನೀಡುವುದಿರಲಿ, ಅವರನ್ನು ಒಳಕ್ಕೆ ಬಿಟ್ಟು ಕೊಳ್ಳುವುದೇ ಕಷ್ಟವಾಗಿತ್ತು. ಹಾಗಾದರೇ ಈ ಬಡವರ ಬವಣೆಗೆ ಪರಿಹಾರವೇನು? ಬಡವರೆಂದ ಮಾತ್ರಕ್ಕೆ ಅವರು ಸೋಮಾರಿಗಳಲ್ಲ ದಿನವಿಡಿ ದುಡಿದರೂ ಅವರ ಮೂಲಭೂತ ಬೇಡಿಕೆಗಳ ಅವಶ್ಯಕತೆಗಳು ಪೂರೈಕೆಯಾಗುತ್ತಿಲ್ಲ. ಸಮಾಜದ ವ್ಯವಸ್ಥೆಯ ಒಂದು ಶಾಪವಾಗಿರುವ ಸಾಲದ ಕೂಪದಲ್ಲಿ ಸಿಲುಕಿರುವ ಅವರನ್ನು ಮೇಲೆತ್ತೆಲು ಆಥರ್ಿಕ ಸಹಾಯ ನೀಡಬಹುದಾದ ಸಂಸ್ಥೆಗಳು ಇಲ್ಲ. ಇದು ಕೇವಲ ವ್ಯಕ್ತಿಯೊಬ್ಬನ ಸಮಸ್ಯೆಯಲ್ಲ ಇಡೀ ಸಮಾಜದ ಸಮಸ್ಯೆ ಎನಿಸಿತು. ಇದಕ್ಕೆ ಸರ್ಕಾರಗಳ ಅನೇಕ ನ್ಯೂನ್ಯತೆಗಳು ಸಹ ನೀರೆರೆದಿದ್ದವು. ಇದಕ್ಕೆ ಪರಿಹಾರ ಕಂಡು ಹಿಡಿಯಲೇಬೇಕೆನಿಸಿತು.
ಮಾಯಿಮುನ ಮತ್ತು ಅವಳ ಸ್ನೆಹಿತೆಯರನ್ನು ಕರೆದು 856 ರೂಪಾಯಿಗಳನ್ನು ಕೊಟ್ಟು ಎಲ್ಲಾ ಕುಟುಂಬಗಳಿಗೆ ಹಣ ವಿತರಿಸಿ, ಅವರನ್ನು ಸಾಲದಿಂದ ಬಿಡುಗಡೆಗೊಳಿಸಿ ಬನ್ನಿ ಎಂದೆ.
ಇನ್ನು ಮುಂದೆ ಅವರು ಸ್ವತಂತ್ರವಾಗಿ ಬಿದಿರನ್ನು ಖರೀದಿಸಿ, ಅದರಿಂದ ಬುಟ್ಟಿ ಇಲ್ಲವೇ ಕುರ್ಚಿ ಹೆಣೆಯಲಿ. ತಮಗೆ ಸೂಕ್ತ ಎನಿಸಿದ ಬೆಲೆಗೆ ಮಾರಲಿ, ಈ ಹಣ ಯಾವುದೇ ನಿರ್ಧಿಷ್ಟ ಅವಧಿಯಲ್ಲಿ ತೀರಿಸ ಬೇಕೆಂಬ ಕಡ್ಡಾಯ ವಿಲ್ಲ. ಅವರು ಸಂಪಾದನೆಯಲ್ಲಿ ಉಳಿತಾಯ ಮಾಡಬಹುದಾದ ಶಕ್ತಿ ಬಂದಾಗ ಹಿಂತಿರುಗಿಸಲಿ ಎಂಬ ಸಂದೇಶವನ್ನು ಪ್ರತಿ ಕುಟುಂಬಕ್ಕೆ ವಿವರಿಸುವಂತೆ ಶಿಷ್ಯೆಯರಿಗೆ ತಿಳಿಸಿದೆ.
ಪ್ರತಿ ರಾತ್ರಿ ಮಲಗಿ ದಿಂಬಿಗೆ ತಲೆ ಕೊಟ್ಟ ತಕ್ಷಣ ನಿದ್ರೆಗೆ ಜಾರುವ ನನಗೆ ಆ ರಾತ್ರಿ ನಿದ್ರೆ ಹತ್ತಲಿಲ್ಲ. ಸಫಿಯಾ ಬೇಗಂ ಳ ಬದುಕು ಇದಕ್ಕೆ ಪರಿಹಾರ ಹುಡುಕುವಂತೆ ನನ್ನನ್ನು ಪ್ರೇರೇಪಿಸಿತ್ತು. ಈ ಸಮಸ್ಯೆಗೆ ವ್ಯಯಕ್ತಿಕ ಪರಿಹಾರ ಉತ್ತರವಲ್ಲ, ಸಾಂಸ್ಥಿಕ ರೂಪದ ಪರಿಹಾರವೇ ಮಾರ್ಗವೇ ಸೂಕ್ತ ಎನಿಸಿದಾಗ ನನಗೆ ಹೊಳೆದ ಉತ್ತರವೇ ಗ್ರಾಮೀಣ ಬ್ಯಾಂಕ್ ಹೌದು ಗ್ರಾಮೀಣ ಬ್ಯಾಂಕ್ ಎಂಬ ಪರಿಕಲ್ಪನೆ.
ಕೇವಲ ಎರಡು ತಿಂಗಳ ಅವಧಿಯಲ್ಲಿ
ನಾನು ಧನ ಸಹಾಯ ಮಾಡಿದ ಕೇವಲ ಎರಡು ತಿಂಗಳ ಅವಧಿಯಲ್ಲಿ ಜೊಬ್ರ ಗ್ರಾಮದ ಬಡ ಕುಟುಂಬಗಳಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತು. ಬೆತ್ತಲಾಗಿದ್ದ ಅವರ ಮಕ್ಕಳ ಮೈ ಮೇಲೆ ಬಟ್ಟೆಗಳು ಕಾಣಿಸಿಕೊಂಡವು, ದಿನಕ್ಕೆ ಒಂದು ಹೊತ್ತು ಗಂಜಿ ಕುಡಿಯುತಿದ್ದ ಜನ ಎರಡು ಹೊತ್ತಿನ ಅನ್ನ ತಿನ್ನುವಷ್ಟು ಸಶಕ್ತರಾಗಿದ್ದರು. ತಾವೇ ಮಾರುಕಟ್ಟೆಯಲ್ಲಿ ಸ್ವತಂತ್ರವಾಗಿ ಖರೀದಿಸಿದ ಬಿದಿರಿನಿಂದ ತಯಾರಿಸಿದ ವಸ್ತುಗಳನ್ನು ಮುಕ್ತವಾಗಿ ಮಾರಾಟ ಮಾಡುವುದರ ಮೂಲಕ ತಮ್ಮ ದುಡಿಮೆಗೆ ತಕ್ಕ ಪ್ರತಿಫಲ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಹೀಗೆ ಜೊಬ್ರ ಗ್ರಾಮದ ಬಡ ಮಹಿಳೆ ಸಫಿಯಬೇಗಂಳ ಬದುಕು ನನ್ನ ಆರ್ಥಿಕ ಚಿಂತನೆಯನ್ನು ಬದಲಾಯಿಸಿದ್ದೇ ಅಲ್ಲದೇ ಗ್ರಾಮೀಣ ಬ್ಯಾಂಕ್ ಸ್ಥಾಪನೆಗೆ ಪರೋಕ್ಷವಾಗಿ ಪ್ರೇರಣೆಯಾಯ್ತು.
1976ರಲ್ಲಿ ನಾಲ್ವರು ಮಹಿಳೆಯರ ಸಹಾಯದಿಂದ ಸ್ಥಾಪಿಸಿದ ಗ್ರಾಮೀಣ ಬ್ಯಾಂಕ್ ಇಂದು ಬಂಗ್ಲಾದೇಶದ ಬಡವರ ಜೀವನಾಡಿಯಾಗಿದೆ. ರಾಜಧಾನಿ ಡಾಕ್ಕಾ ನಗರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಗ್ರಾಮೀಣ ಬ್ಯಾಂಕ್ ದೇಶಾದ್ಯಂತ 1112 ಶಾಖೆಗಳನ್ನು ಹೊಂದಿದೆ. 12,589 ಸಿಬ್ಬಂಧಿಯನ್ನು ಹೊಂದುವುದರ ಮೂಲಕ ಬಂಗ್ಲಾದ 38,551 ಹಳ್ಳಿಗಳನ್ನು ತನ್ನ ಸೇವಾ ವ್ಯಾಪ್ತಿಗೆ ಒಳಪಡಿಸಿದೆ. ಬ್ಯಾಂಕ್ನ ಅಂಗ ಘಟಕಗಳಾಗಿ ಸ್ಥಾಪಿತವಾಗಿರುವ ಗ್ರಾಮೀಣ್ ಟ್ರಸ್ಟ್, ಗ್ರಾಮೀಣ್ ಅಗ್ರಿಕಲ್ಚರ್ಪೌಂಡೇಷನ್, ಗ್ರಾಮೀಣ್ ಉದೋಗ್, ಗ್ರಾಮೀಣ್ ಪಂಡ್, ಗ್ರಾಮೀಣ್ ಶಕ್ತಿ, ಗ್ರಾಮೀಣ್ ಶಿಕ್ಷಾ, ಹೀಗೆ 18 ಸಂಸ್ಥೆಗಳು ಬಂಗ್ಲಾದೇಶದ 65 ಸಾವಿರ ಹಳ್ಳಿಗಳಲ್ಲಿ ಕೇಂದ್ರಗಳನ್ನು ತೆರೆದು ಸೇವೆ ಸಲ್ಲಿಸುತ್ತಿವೆ.
ಗ್ರಾಮೀಣ ಬ್ಯಾಂಕ್ನ ಶೇರುದಾರರಲ್ಲಿ 22 ಲಕ್ಷ ಮಹಿಳಾ ಶೇರುದಾರರಿದ್ದರೆ, 1ಲಕ್ಷದ 24 ಸಾವಿರ ಪುರುಷ ಶೇರುದರರಿದ್ದಾರೆ. ಬ್ಯಾಂಕ್ ಬಡವರಿಗೆ ಯಾವುದೇ ಭದ್ರತೆ ಇಲ್ಲದೆ ನೀಡಿರುವ ಸಾಲದಲ್ಲಿ ಮರು ಪಾವತಿಯ ಪ್ರಮಾಣ ಶೇಕಡ 98 ರಷ್ಟು ನಿಖರವಾಗಿದೆ. ಇದೇ ಗ್ರಾಮೀಣ ಬ್ಯಾಂಕ್ ರೂಪಿಸಿದ ಕಿರು ಸಾಲ ಯೋಜನೆಯನ್ನು ವಿಶ್ವಬ್ಯಾಂಕ್ ಅಳವಡಿಸಿಕೊಂಡ ಫಲವಾಗಿ ಜಗತ್ತಿನ ಹತ್ತು ಕೋಟಿ ಮನೆಗಳಿಗೆ ಈ ಯೋಜನೆ ತಲುಪಿದೆ.
ನಾನು ಬದುಕಿನಲ್ಲಿ ಮುಖಾಮುಖಿಯಾದ ಒಂದು ಸಮಸ್ಯೆ ಗ್ರಾಮೀಣ ಬ್ಯಾಂಕ್ ಎಂಬ ಪರಿಹಾರ ಮತ್ತು ಪರಿಕಲ್ಪನೆಯ ರೂಪದಲ್ಲಿ ಬೆಳೆಯಿತು ಜೊತೆಗೆ ನನನ್ನೂ ಬೆಳಸಿತು. 2006ರಲ್ಲಿ ನನ್ನನ್ನು ನೊಬಲ್ ಪ್ರಶಸ್ತಿಗೆ ಪಾತ್ರನಾಗುವಂತೆ ಮಾಡಿತು.ೆ. ಜಗತ್ತಿನ ಎಲ್ಲಾ ಮಹಾ ಯಾತ್ರೆಗಳು ಒಂದು ಸಣ್ಣ ಹೆಜ್ಜೆಯ ಮೂಲಕ ಆರಂಭವಾಗುತ್ತವೆ ಎಂಬ ನಾಣ್ಣುಡಿಗೆ ನನ್ನ ಈ ಬದುಕು ಮತ್ತು ಅನುಭವ ಸಾಕ್ಷಿಯಾಗಿದೆ.









ಡಾ. ಕೊಪ್ಪ ಅವರೆ, ನಿಮ್ಮ ಈ ಲೇಖನಕ್ಕಾಗಿ ಕೃತಜ್ಞತೆಗಳು! ಡಾ. ಯೂನಸ್ ಅವರ ಕಾರ್ಯ ಅಭಿನಂದನೀಯವೂ ಅನುಸರಣ ಯೋಗ್ಯವೂ ಆಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಬೇಕಾದುದು ಸರಿಯಾದ ಮುಂದಾಳುತ್ವ ಎನ್ನುವುದು ಇದರಿಂದ ಗೊತ್ತಾಗುತ್ತದೆ. ನಮ್ಮ ವಿಶ್ವವಿದ್ಯಾಲಯಗಳು ಕನಿಷ್ಠ ಒಂದೊಂದು ಹಳ್ಳಿಯನ್ನಾದರೂ ಪ್ರಾಯೋಗಿಕವಾಗಿ ದತ್ತು ತೆಗೆದುಕೊಂಡು ಇಂಥ ಕೆಲಸ ಮಾಡಬೇಕು.
ಕೆ.ವಿ. ತಿರುಮಲೇಶ್
great…