
ಎಚ್ ಎನ್ ಆರತಿ
ಚಿಕ್ಕವಳಿದ್ದಾಗಿನಿಂದಲೂ ನಮ್ಮ ಮನೆಯಲ್ಲಿ ಅಜ್ಜಿ, ಅಮ್ಮ ಎಲ್ಲರಿಗೂ ಮನೆಯ ಸುತ್ತ ಒಳ್ಳೆಯ ಹಸಿರು ತುಳುಕುವ ಕೈತೋಟ ಮಾಡುವ, ಅವುಗಳನ್ನು ಪ್ರೀತಿಸುವ ಹವ್ಯಾಸವಿತ್ತು. ಹಾಗಾಗೋ ಏನೋ, ನನಗೂ ತುಂಬಾ ಹೂ, ಹಣ್ಣು, ಗಿಡ ಮರಗಳ ಹೆಸರು, ಅವುಗಳ ವಿಶೇಷತೆ ಇವುಗಳ ಬಗ್ಗೆ ವಿಶೇಷ ಆಸಕ್ತಿ. ಎಲ್ಲಿಗೇ ಹೋಗಲಿ, ನನ್ನ ಕಣ್ಣು ಮೊದಲು ಅಲ್ಲಿನ ಸುತ್ತಲ ಗಿಡಮರಗಳ ಕಡೆಗೇ ವಾಲುತ್ತದೆ.
ಫ್ರಾಂಕ್ಫರ್ಟ್, ಬರ್ಲಿನ್, ಜೆಕ್ ನ ಪ್ರಾಗ್, ಗ್ರೀಸ್, ಲಂಡನ್…ಈ 20 ದಿನದ ಪ್ರಯಾಣದಲ್ಲಿ ನನ್ನ ಅತೀವ ಪ್ರೀತಿಯ ಗಿಡಮರಗಳು ನೋಡಿದಲ್ಲೆಲ್ಲಾ ಪ್ರಿಯಕರನಂತೆ ಹಣಕಿ, ಕೈ ಚಾಚಿ, ಕೆಲವೊಮ್ಮೆ ಢಾಳಾಗಿ ಎದುರಿಗೇ ನಿಂತು, ಅಂತೂ ಯಾವಾಗಲೂ ಜೊತೆಗಿದ್ದು ಮನವರಳಿಸಿ ಮುದಕೊಡುತ್ತಿದೆ.
ಅಳತೆಯಿಲ್ಲದೇ ನಮ್ಮ ನಗರಗಳಂತೇ ಈ ನಗರಗಳು ಎರ್ರಾಬಿರ್ರಿ ಬೆಳೆದಿದ್ದರೂ, ಹಸಿರನ್ನು ಉಸಿರಾಗಿಸಿಕೊಂಡಿರುವ ಈ ಆಧುನಿಕ ನಗರ ವಿನ್ಯಾಸಗಳ ಬಗ್ಗೆ ಅಪಾರ ಮೆಚ್ಚುಗೆಯೊಂದಿಗೆ ಅಸೂಯೆಯೂ ಆಗುತ್ತದೆ.
ನಾವು ಈಗ ಇರುವ ಈ ಅಕ್ಟೋಬರ್ ಕೊನೆಯ ದಿನಗಳು, fall season, ಎಲೆ ಉದುರುವ ಕಾಲ. ಇಡೀ ಮರ ತನಗಿಷ್ಟ ಬಂದ ಬಣ್ಣ ಹೊತ್ತು ಬೀಗುತ್ತಾ, ಮರುಘಳಿಗೆಯೇ, ಯೌವನ ಕಳಚಿಟ್ಟ ನಿರ್ಲಿಪ್ತತೆಯಂತೆ, ಒಂದೊಂದೇ ಎಲೆಗೆ ವಿದಾಯ ಹೇಳುವ ಕಾಲ…
ಚೆರ್ರಿ ಮರಗಳಂತೂ ಎಲೆಗೊಂದು ಹಣ್ಣು ಧರಿಸಿ ಬಾಗಿದ್ದರೆ, ಕಾಡು ಜಾತಿಯ ಸೇಬು ನಾನೇನು ಕಡಿಮೆ ಎಂಬ ಪೈಪೋಟಿಗಿಳಿದ್ದಿದ್ದೂ, ಅಂಗಡಿಗಳಲ್ಲಿ ತರಾವರಿ ಹಣ್ಣುಗಳದ್ದೇ ಕಾರುಬಾರು…
ಈ ಲೋಕ ಇಷ್ಟು ಸುಂದರ ಎಂದು ತಿಳಿಸಿ, ಮಗುವಿನಂತೆ ಕಣ್ಣರಳಿಸಿ ನೋಡಿ ಮೆಚ್ಚುವ ಹೃದಯ ಕೊಟ್ಟ ಮನೆಯ ಹಿರಿಯರಿಗೆ ಸಾಷ್ಟಾಂಗ ನಮಸ್ಕಾರಗಳು…






ಎಲೆಯುದುರುವ ಕಾಲ
ಮನವರಳುವ ಕಾಲ
ಕಾಲಬಳಿ ಕುಸಿದುಬಿದ್ದಿರುವ ಕಾಲದ ಪಳಿಯುಳಿಕೆಗಳು
ಹೊಸಜೀವಕೆ ಆತ್ಮವಾಗುವ ಕಾಲ
ಎಲ್ಲರೂ ಕವಿತೆ ಬರೆಯುತ್ತಿದ್ದಾರೆಂದು ನಾನೂ ಒಂದು ಹೊಸೆದೆ. ಮೊದಲನೆಯದು. ನನ್ನ ಕವಿ ಮಿತ್ರರೊಬ್ಭರಿಗೆ ಕಳುಹಿಸಿ ಹೇಗಿದೆ ಎಂದೆ. ನಿನ್ನ ಕವಿತೆ ಗದ್ಯ ಫಾರ್ಮ್ಯಟಿನಲ್ಲಿದೆ, ಪುರಸೊತ್ತಿದ್ದರೆ ರಿಪೇರಿ ಮಾಡುವ ಅವಕಾಶವಿದೆ ಎಂದರು. ನನಗಷ್ಟು ತಾಳ್ಮೆ ಇರಲಿಲ್ಲ. ಅವಧಿ ಕ್ಲಿಕ್ಕಿಸಿದೆ. ಎಲೆ ಉದುರುವ ಕಾಲ ನೋಡಿದೆ. ಪದ್ಯ ಗಧ್ಯವೋ, ಗಧ್ಯ ಪದ್ಯವೋ ನಾನರಿಯೆ. ಒಟ್ನಲ್ಲಿ ಚೆನ್ನಾಗಿದೆ!