ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ಆಮ್ಚಿ ಲೋಕ(ಲ್)ವಯ್ಯಾ..

ಆಮ್ಚಿ ಮುಂಬೈ ಲೋಕಲ್ ಲಹರಿ

rajeev nayak (1)

ರಾಜೀವ ನಾರಾಯಣ ನಾಯಕ

ಸಾಮಾನ್ಯ ಸಂದರ್ಭಗಳಲ್ಲಿ ಸಮಯವನ್ನು ನಾವು ಗಂಟೆ, ಅರ್ಧಗಂಟೆ, ಕಾಲುಗಂಟೆ ಅಥವಾ ಐದು ಹತ್ತು ನಿಮಿಷಗಳಲ್ಲಿ ಅಳೆಯುತ್ತೇವೆ. ಆದರೆ ಚಿಲ್ಲರೆ ನಿಮಿಷಗಳ ವೇಳಾಪಟ್ಟಿಯಂತೆ ಚಲಿಸುವ ಮುಂಬೈ ಲೋಕಲ್ ಟ್ರೇನುಗಳು ಕಾಲವನ್ನು ನಿಮಿಷ ನಿಮಿಷಗಳಲ್ಲಿ ಕತ್ತರಿಸಿ ಹಾಕುತ್ತವೆ ಮತ್ತು ಕಾಲದ ವೇಗವನ್ನು ನಮ್ಮ ಪ್ರಜ್ಞೆಯ ಭಾಗವಾಗಿಸುತ್ತವೆ. ಕೋಟಿಗಟ್ಟಲೆ ಜನರ ಕರ್ಮಭೂಮಿ ಮುಂಬಯಿಯಾದರೂ ದೂರದ ಉಪನಗರಗಳಲ್ಲಿ ನೆಲೆ ನಿಲ್ಲುವುದು ಅನಿವಾರ್ಯವಾದ್ದರಿಂದ ಟ್ರೇನುಗಳು ಬದುಕಿನ ಭಾಗವಾಗುತ್ತದೆ. ಸಾವಿರಾರು ಜನರನ್ನು ತುಂಬಿಕೊಂಡು ಕಾಲಿಡಲು ಜಾಗವಿಲ್ಲದ ಬೋಗಿಯಲ್ಲಿ ಹೇಗೋ ನುಸುಳಿ ಮುಂದಿನ ಹತ್ತಿಪ್ಪತ್ತು ಸ್ಟೇಶನ್ನುಗಳನ್ನು ಗಚ್ಚಾಗಿಚ್ಚಿಯಲ್ಲಿ ದಾಟುತ್ತಾ ಅಂತಿಮ ಸ್ಥಾನ  ತಲುಪುವಷ್ಟರಲ್ಲಿ ಜಿಂದಗಿ ಹೈರಾಣಾಗುತ್ತದೆ. ಇದು ನಿತ್ಯದ ಯಾಂತ್ರಿಕ ಬದುಕೆನಿಸಿದರೂ ಈ ಟ್ರೇನುಗಳು ಮುಂಬಯಿಕರರನ್ನು ಸದಾ ಚಲನಶೀಲಗೊಳಿಸುತ್ತವೆ ಎಂಬುದು ಮಾತ್ರ ನಿಜ!

mumbai trainಅಡ್ಜಸ್ಟ್ ಕರಕೆ ಜೀಯೋ

ಸುಮಾರು ನೂರೈವತ್ತು ವರ್ಷಗಳ ಇತಿಹಾಸವಿರುವ, ಮುಂಬೈನ ಲೈಫ್ ಲೈನ್ ಅಥವಾ ಜೀವನಾಡಿ ಎಂದು ಖ್ಯಾತಿ ಪಡೆದ ಲೋಕಲ್ ಟ್ರೇನುಗಳಲ್ಲಿ ದಿನಕ್ಕೆ ಎಂಬತ್ತು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಅಡ್ಡಾಡುತ್ತಾರೆ. ಹಗಲು ರಾತ್ರಿಯೆನ್ನದೇ ಈ ಮಾಹಾನಗರಿಯಲ್ಲಿ ಪ್ರತಿ ದಿನ ಸುಮಾರು 2500 ಟ್ರೇನುಗಳು ಚಲಿಸುತ್ತವೆ. ಇನ್ನೂರು ಜನರ ಸಾಮರ್ಥ್ಯದ ಒಂದು ಬೋಗಿಯಲ್ಲಿ ಸಾವಿರ ಜನರು “ಅಡ್ಜಸ್ಟ್” ಮಾಡಿಕೊಂಡು ಪ್ರಯಾಣಿಸುತ್ತಾರೆ. ಅವನಂಗಿಯಿಂದ ಇವನಂಗಿಗೆ ಮತ್ತೆ ಇನ್ನೊಬ್ಬನಂಗಿಗೆ ವರ್ಗಾವಣೆ ಹೊಂದುತ್ತಾ ಸಾಗುವ ಬೆವರಿನ ನದಿಯೊಂದು  ಗುಪ್ತಗಾಮಿನಿಯಾಗಿ ಹರಿಯುತ್ತದೆ. ಮೂರು ಜನ ಕುಳ್ಳುವ ಸೀಟಿನಲ್ಲಿ ನಾಲ್ಕನೆಯವನೂ ಅಡ್ದ ಕೂತು ಏಕಪೃಷ್ಠ ಪೀಠಸ್ಥನಾಗುತ್ತಾನೆ. ಎರಡು ಬೆಂಚುಗಳ ನಡುವೆ ಕಾಲಿಡುವ ಜಾಗದಲ್ಲಿ ಒಳತೂರಿಕೊಂಡು ನಿಲ್ಲುವ ಮತ್ತು ಆಚೀಚೆ ದಾಟಾಡುವ ಪ್ರಯಾಣಿಕರ ತಿಕಕ್ಕೆ ನಿಮ್ಮ ಮುಖ ತಿರಿದುಕೊಳ್ಳದಂತೆ ಇಟ್ಟುಕೊಳ್ಳಬೇಕಾದರೆ ಸ್ಕೂಲಲ್ಲಿ ಕಲಿತ  ಜಾಮೆಟ್ರಿ, ಟ್ರಿಗಾನಮೆಟ್ರಿಯನ್ನು ನೆನಪು ಮಾಡಿಕೊಳ್ಳಬೇಕಾಗುತ್ತದೆ!

ಲೋಕಲ್ ಟ್ರೇನ್ ಹತ್ತುವಾಗ ಇಳಿಯುವಾಗ ನಿಲ್ಲುವಾಗ ಕುಳ್ಳುವಾಗ ಅನೇಕ ಅಲಿಖಿತ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ತಪ್ಪಿದರೆ ವಕ್ರತುಂಡೋಕ್ತಿಗಳು ಪಕ್ಕಾ! ಸಾಲಾ ಬೆಂಚೋದ್…ವಗೈರೆ ವಗೈರೆ “ಗಾಲಿ”ಗಳನ್ನು ”ತಿನ್ನ”ಬೇಕಾಗುತ್ತದೆ. ಈ ಬೈಗುಳಗಳ ಜಗಳ ವಿಪರೀತಕ್ಕೆ ಹೋದರೂ ಕೈ ಕೈ ಮಿಲಾಯಿಸುವ ಸಂದರ್ಭಗಳು ಕಡಿಮೆ. ಯಾಕೆಂದರೆ ಆ ಗಚ್ಚಾಗಿಚ್ಚಿಯಲ್ಲಿ ಕೈಗಳು ಅವರವರ ಸ್ವಾಧೀನದಲ್ಲಿ ಇರುವುದಿಲ್ಲವಲ್ಲ!

mumbai‘ಇಗೋ’ ಮಾರಿಬಿಡಿ

ಅಹಂಕಾರವನ್ನು ಗೆದ್ದು ಆತ್ಮಜ್ಞಾನದ ಅನುಭೂತಿ ಪಡೆಯಲು ನೀವು ಹಿಮಾಲಯ ಹತ್ತುವುದು ಬೇಕಾಗಿಲ್ಲ. ಪೀಕ್ ಅವರ್‌ನಲ್ಲಿ ಒಮ್ಮೆ ಮುಂಬೈ ಲೋಕಲ್ ಟ್ರೇನಿನಲ್ಲಿ ಅಡ್ಡಾಡಿದರೆ ಸಾಕು. ಬರೀ ಹತ್ತು ರೂಪೈನಲ್ಲಿ ನಿಮಗೆ ಇಂಥ ಆತ್ಮಜ್ಞಾನ ಸಿದ್ಧಿಸುತ್ತದೆ. ಹನ್ನೆರಡು ಡಬ್ಬಿಗಳ ಈ ಲೋಕಲ್ ಟ್ರೇನುಗಳು  ಅಹಂಕಾರವನ್ನೂ, ಕೀಳರಿಮೆಯನ್ನೂ ಸಪಾಟು ಮಾಡಿಬಿಡುತ್ತವೆ. ನಾನು ನನ್ನದು ಎನ್ನುವ ಈ ಶರೀರವು ಸರ್ವ ದಿಕ್ಕಿನಿಂದಲೂ ಸುತ್ತುವರಿದ ಅನ್ಯ ದೇಹಗಳೊಂದಿಗೆ ಅನುಸಂಧಾನ ನಡೆಸಿ ಭೌತಿಕ ಆಯಾಮದಲ್ಲಿ ವಿಶ್ವಪ್ರಜ್ಞೆಯ ಅರಿವನ್ನು ಮೂಡಿಸುತ್ತದೆ! ನಾವೆಲ್ಲ ಬೆವರುಸ್ವರೂಪಿಗಳೆಂಬ ಆತ್ಮಸಾಕ್ಷಾತ್ಕಾರವಾಗುತ್ತದೆ!

ಮುಂಬಯಿ ಕನ್ನಡ ಸಂಘವೊಂದರ ಕಾರ್ಯಕ್ರಮಕ್ಕೆ ನಾಡಿನ ಹೆಸರಾಂತ ಸಾಹಿತಿಯೊಬ್ಬರು ಅತಿಥಿಗಳಾಗಿ ಬಂದಿದ್ದರಂತೆ. ಖ್ಯಾತರಾದ್ದರಿಂದ ಹಲವು ಸಂಘ ಸಂಸ್ಥೆಗಳು ಅವರಿಗೆ ಶಾಲು ಹೊದೆಸಿ ಪುಷ್ಪಗುಚ್ಛ ನೀಡಿ ಗೌರವಿಸಿದರು. ಕಾರ್ಯಕ್ರಮ ಮುಗಿದ ಮೇಲೆ ಸನ್ಮಾನ್ಯರಿಗೆ ಲೋಕಲ್ ಟ್ರೇನು ಹತ್ತುವ ಆಸೆಯಾಯಿತು. ಸರಿ, ಹೆಗಲಮೇಲೆ ಮೂರ್ನಾಲ್ಕು ಶಾಲುಗಳು ಕೈಯಲ್ಲಿ ಹತ್ತಾರು ಗಂಧದ ಹಾರಗಳನ್ನು ಹಿಡಿದುಕೊಂಡೇ ಟ್ರೇನು ಹತ್ತಿದರಂಬುದಾಯ್ತು. ಲೋಕಲ್ ಟ್ರೇನುಗಳಲ್ಲಿ ರಶ್ ಕಡಿಮೆಯಿರುವ ಸಮಯದಲ್ಲಿ ಬಗೆಬಗೆಯ ಐಟಂಗಳನ್ನು ಮಾರುವವರ ಭರಾಟೆ ಜೋರಾಗಿರುತ್ತದೆ. ಘನ ಸಾಹಿತಿಗಳನ್ನೂ ಮಾರಾಟಕ್ಕೆ ಬಂದವನೆಂದು ತಿಳಿದು ಪ್ರಯಾಣಿಕನೊಬ್ಬ ”ಭೆಜ್ನಾ ಹೈ ಕ್ಯಾ? ಕಿತನೇಕಾ ಹೈ ಬೈ?’ (ಮಾರೋದಾ? ಬೆಲೆಯೆಷ್ಟು?) ಎಂದು ಚೌಕಶಿಗಿಳಿದಾಗ ಸನ್ಮಾನ್ಯರು ಕೆಂಪುಕೆಂಪಾದರಂತೆ!

ತಾಳಾ ತಂಬೂರಿ ಟ್ರೇನಿನೊಳಗೆ

ಪ್ರತಿನಿತ್ಯ ಒಂದು ನಿರ್ದಿಷ್ಟ ಟೈಮ್‌ನಲ್ಲಿ ಮತ್ತು ನಿರ್ದಿಷ್ಟ ಬೋಗಿಯಲ್ಲಿ ಪ್ರಯಾಣಿಸುವವರು ಭಾಷೆ ಪ್ರದೇಶ ಜಾತಿ ಧರ್ಮಗಳನ್ನು ಮೀರಿ ಪರಿಚಯದ ಸಹಯಾತ್ರಿಗಳಾಗುತ್ತಾರೆ. ತಮ್ಮದೇ ಗ್ರುಪ್ ಮಾಡಿಕೊಂಡು ಮಾತುಕತೆ, ತಮಾಷೆ, ಚರ್ಚೆ, ನಗುವಿನಲ್ಲಿ ದಾರಿ ಸವೆಸುತ್ತಾರೆ. ಕೆಲವು ಸಂಗೀತ ಪ್ರೇಮಿಗಳು ಬೇರೆಯದೇ ಗ್ರುಪ್ ಮಾಡಿಕೊಂಡು ಮಹಮ್ಮದ್ ರಫಿ, ಕಿಶೋರ್ ಕುಮಾರರ ಹಳೆಯ ಹಾಡುಗಳನ್ನು ಹಾಡುತ್ತಾರೆ. ಇನ್ನು ಕೆಲವು ಬೋಗಿಗಳಲ್ಲಿ ಭಜನಾ ಮಂಡಳಿಗಳು ತಾಳ ತಂಬೂರಿಯೊಂದಿಗೆ ದಾರಿಯುದ್ದಕ್ಕೂ ವಿಠೋಬನನ್ನೂ ರುಕಮಾಮಾಯಿಯನ್ನೂ ಜೊತೆಗೇ ಕರೆದೊಯ್ಯುತ್ತಾರೆ. ಭಜನೆಯು ತಾರಕ ಸ್ವರಕ್ಕೆ ತಲುಪಿದಾಗ ಅದು ನಗರ ಬದುಕಿನ ಜಂಜಾಟಗಳಿಂದ ಮುಕ್ತಿ ಕೊಡು ಪ್ರಭುವೇ ಎಂಬ ಆರ್ತಧ್ವನಿಯಂತೆ ಕೇಳಿಸುತ್ತದೆ.

mumbai train crowdಈ ಗ್ಯಾಸ್‌ಗೆ ಸಬ್ಸಿಡಿಯಿಲ್ಲ

ತಿನ್ನುಉಣ್ಣುವುದರಲ್ಲಿ ಹೆಚ್ಚುಕಮ್ಮಿಯಾಗಿ ಒಂದಿಷ್ಟು ಗ್ಯಾಸು ಹೊರಹಾಕಿದರೆ ಜೀವಕ್ಕೆ ಸಮಾಧಾನ ಆದೀತೆಂದು ಆಶಿಸಿ ಟ್ರೇನಿನಲ್ಲಿ ಪ್ರಯಾಣಿಸುವಾಗ ಯಾರಾದರೂ ಚೂರು ಲೀಕು ಮಾಡಿದರೂ ಸಾಕು…ಬಿತ್ತು ಗಾಲಿ! ‘ ಬೆಂಛೋದ್, ಸಾಲಾ, ಗೋಬರ್ ಖಾಕೇ ಆಯಾ ಹೈ ಕ್ಯಾ?’ ಇತ್ಯಾದಿ. ಈ ಗಚ್ಚಾಗಚ್ಚಿಯಲ್ಲಿ ಗ್ಯಾಸ್ ಬಿಟ್ಟವರು ಯಾರೆಂದು ಪತ್ತೆಯಾಗೋದಿಲ್ಲ ಎಂದು ಭಾವಿಸಿದರೆ ಅಂಥ ದಡ್ಡರು ಯಾರಿಲ್ಲ. ಇಲ್ಲಿ ಲೀಕ್‌ನ ಸೋರ್ಸ್‌ನ್ನು ಕರೆಕ್ಟಾಗಿ ಕಂಡುಹಿಡಿಯಲಾಗುತ್ತದೆ ಮತ್ತು ಬಿಟ್ಟ ಗ್ಯಾಸಿನ ಗಾಢತೆ ಹಾಗೂ ಗಂಧದ ಅನುಪಾತದಲ್ಲಿಯೇ ಗಾಲಿಗಳೂ ಗೂಸಾಗಳೂ ಇರುತ್ತವೆ!

ಹುಡುಗೀರು ಸಾರ್ ಹುಡುಗೀರು

ಪ್ರತಿ ಲೋಕಲ್ ಟ್ರೇನಿನಲ್ಲೂ ಲೇಡೀಸ್ ಕಂಪಾರ್ಟಮೆಂಟುಗಳಿರುತ್ತವೆ. ಅದೂ ಅಲ್ಲದೇ ಮುಂಜಾನೆ ಮತ್ತು ಸಂಜೆ ಆಫೀಸಿನ ಸಮಯದಲ್ಲಿ ಮಹಿಳೆಯರಿಗೆ ಅನುಕೂಲವಾಗಲು “ಲೇಡೀಸ್ ಸ್ಪೆಷಲ್” ಟ್ರೇನುಗಳನ್ನು ಬಿಡಲಾಗುತ್ತದೆ. ಲೇಡೀಸ್ ಸ್ಪೆಷಲ್‌ನಲ್ಲಿ ಎಲ್ಲ ಬೋಗಿಗಳೂ ಮಹಿಳೆಯರಿಗೇ. ಅಷ್ಟೇನು ರಶ್ ಇಲ್ಲದ ಆ ಲೋಕಲ್ಲಿನಲ್ಲಿ ಹಾಯಾಗಿ ಕೂತು ಅಥವಾ ಗಾಳಿಗೆ ನಿಂತು ಪ್ರಯಾಣಿಸುವ ಹುಡುಗಿಯರನ್ನು ನೋಡುವಾಗ  ಗಂಡಸರಲ್ಲೂ ಒಂದು ಕ್ಷಣ “ಹೆಣ್ಣಾಗಿ ಹುಟ್ಟಬಾರದಿತ್ತೆ” ಎಂಬ ಭಾವನೆ ಸುಳಿದು ಹೋಗುತ್ತದೆ!  ಮಾತು ಕತೆ, ತಿಂಡಿ ತಿನಿಸು, ಕನ್ನಡಿ, ಲಿಪ್‌ಸ್ಟಿಕ್, ಮೇಕಪ್, ಆಗಾಗ ಪಾರ್ಟಿ…ಲೇಡೀಸ್ ಕಂಪಾರ್ಟ್‌ಮೆಂಟ್‌ನೊಳಗೆ  ಬೇರೆಯದೇ ಲೋಕ.

ಲೇಡೀಸ್ ಸ್ಪೆಷಲ್ ಕೊನೆಯ ಸ್ಟೇಶನ್ ಸಿಎಸ್‌ಟಿ ಅಥವಾ ಚರ್ಚ್‌ಗೇಟ್ ತಲುಪಿದಾಗ ಪ್ಲಾಟ್‌ಫಾರ್ಮ್ ಮೇಲೆ ಆ ತುದಿಯಿಂದ ಈ ತುದಿ ವರೆಗೂ ಆತ್ಮವಿಶ್ವಾಸದಿಂದ ಇಳಿದುಹೋಗುವ ಮಹಿಳೆಯರ ಸಾಲನ್ನು ನೋಡುವುದೇ ಒಂದು  ಚಂದದ ಅನುಭವ. ಮುಂಬಯಿಯ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವು ನೀಡುವ ಆತ್ಮವಿಶ್ವಾಸದಿಂದ ಅವರೆಲ್ಲ ಸುಂದರಿಯರಾಗಿ ಕಾಣುತ್ತಾರೆ. ಹಾಗಂತ ಮುಂಬಯಿ ಹೆಣ್ಣುಗಳೆಂದರೆ ಕೋಮಲೆಯರು ಎಂದು ಭಾವಿಸಿದರೆ ಫಸಿ ಬೀಳುವಿರಿ. ಸೀಟು ಹಿಡಿಯಲು ಟ್ರೇನು ಚಲಿಸುತ್ತಿರುವಾಗಲೇ ಪುರುಷರಂತೆ ಜಂಪ್ ಹೊಡೆಯುವ ಸಾಹಸಿ ಸ್ತ್ರೀಯರೂ ಇದ್ದಾರೆ. ಒಮ್ಮೊಮ್ಮೆ ಹೆಂಗಸರಲ್ಲೇ ಕುಚ್ ಗಡಬಡ್ ಆಗಿ ಮಾರಾಮಾರಿಯಾಗುವುದು ಗಂಡಸರಿಗೆ ನಾವೇನು ಕಡಿಮೆ ಎಂದು ಸವಾಲು ಹಾಕುವಂತಿರುತ್ತದೆ.

salam bmbayಆಮ್ಚಿ ಲೋಕಲ್

ಇತ್ತೀಚೆಗೆ ಮುಂಬಯಿ ದರ್ಶನಕ್ಕೆ ಬರುವ ದೇಶಿ ಮತ್ತು ವಿದೇಶಿ ಯಾತ್ರಿಕರೂ ಲೋಕಲ್ ಪ್ರಯಾಣದ “ರುಚಿ” ನೋಡುತ್ತಾರೆ. ಪ್ರತಿ ಮೂರು ನಿಮಿಷಕ್ಕೊಂದರಂತೆ ಚಲಿಸುವ ಟ್ರೇನುಗಳು ಲಕ್ಷಾಂತರ ಪ್ರಯಾಣಿಕರನ್ನು ಅವರವರ ಸ್ಥಾನಗಳಿಗೆ ತಲುಪಿಸುವ ಕೆಲಸವನ್ನು ನಿರಂತರವಾಗಿ ಮಾಡುವುದು ಎಲ್ಲರನ್ನೂ ಚಕಿತಗೊಳಿಸುತ್ತದೆ. ಎಲ್ಲ ರಾಜ್ಯಗಳ ಎಲ್ಲ ಭಾಷೆಗಳ ಜನರು ತುಂಬಿರುವ ಲೋಕಲ್ ಟ್ರೇನುಗಳು ಸಮಗ್ರ ಭಾರತದ ದರ್ಶನ ನೀಡುತ್ತವೆ.

ನಿಜ, ಇಲ್ಲಿ ಅವಘಡಗಳಾಗುತ್ತವೆ. ವರ್ಷಕ್ಕೆ ಸಾವಿರಾರು ಜನ ಚಲಿಸುವ ಟ್ರೇನಿನಿಂದ ಬಿದ್ದೋ ಅಥವಾ ಹಳಿ ದಾಟುವಾಗಲೋ ಅಪಘಾತಕ್ಕೀಡಾಗಿ ಸಾವನ್ನಪ್ಪುತ್ತಾರೆ. ಕೆಲವೊಮ್ಮೆ ಈ ಟ್ರೇನುಗಳು  ಮಾನವ ಸಂವೇದನೆಗಳನ್ನು ಹಣಿದು ಹಳಿಯಾಗಿಸಿಬಿಡುತ್ತವೆ ಅನಿಸುತ್ತದೆ. ಇದೆಲ್ಲದರ ನಡುವೆಯೂ ಲೋಕಲ್ ಟ್ರೇನುಗಳು ಈ ಮಹಾನಗರದ ಉಸಿರಾಗಿವೆ.

ನಡುರಾತ್ರಿ ವರೆಗೂ ಹೆಣ್ಣುಮಕ್ಕಳು ಸುರಕ್ಷಿತವಾಗಿ ಅಡ್ಡಾಡುವುದಕ್ಕೆ ಅವಕಾಶ ಮಾಡಿಕೊಡುವ, ಜಾತಿ-ಮತಬಡವ-ಬಲ್ಲಿದ ಎಂದು ಬೇಧ ಮಾಡದ ಈ ಲೋಕಲ್ ಟ್ರೇನ್‌ಗಳು ಬದುಕನ್ನು ಅರಸಿ ಮುಂಬಯಿಗೆ ಬರುವ ಮೆಹನತೀ ಜನರನ್ನು ನಿರಂತರ ಚೈತನ್ಯಶೀಲರನ್ನಾಗಿಟ್ಟಿವೆ. ಅದಕ್ಕಾಗಿಯೇ ಮುಂಬಯಿಕರ್‌ರಿಗೆ ಈ ಟ್ರೇನುಗಳು ಆಮ್ಚಿ ಲೋಕಲ್ ಆಗಿರುವುದು!

‍ಲೇಖಕರು Admin

6 June, 2016

2 Comments

  1. Shama, Nandibetta

    ಒಮ್ಮೆ ಹೋಗಿಯೇ ಸಿದ್ಧ ೆನ್ನುವಂತೆ ಮಾಡಿಸಿತು ಈ ಬರಹ. Thanks

    • Anonymous

      You are most welcome Shama ji- rajeev

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading