ಪ್ರಸಾದ್ ನಾಯ್ಕ್
ಚಂದ್ರಮೋಹನ್ ಜೈನ್ ಅಲಿಯಾಸ್ ಆಚಾರ್ಯ ರಜನೀಶ್ ಅಲಿಯಾಸ್ ಭಗವಾನ್ ಶ್ರೀ ಆಚಾರ್ಯ ರಜನೀಶ್ ಉರ್ಫ್ ಓಶೋ ರಜನೀಶ್!
ಆಚಾರ್ಯ ರಜನೀಶ್ ಎಂಬುದು ಎಪ್ಪತ್ತರ ದಶಕದಲ್ಲಿ ಭಾರೀ ಧೂಳೆಬ್ಬಿಸಿದ ಹೆಸರು. ಪುಟ್ಟದೊಂದು ಪಾರ್ಕಿನಲ್ಲಿ ಒಂದಷ್ಟು ಜನರೊಂದಿಗೆ ಸಮಾಲೋಚನೆಗಳನ್ನು ನಡೆಸುತ್ತಾ ತನ್ನ ಪಯಣವನ್ನು ಆರಂಭಿಸಿದ್ದ ಅದ್ಭುತ ವಾಗ್ಮಿ ರಜನೀಶ್ ಕ್ರಮೇಣ ಇಡೀ ದೇಶವೇ ತನ್ನತ್ತ ತಿರುಗಿನೋಡುವಂತಿನ ಭಕ್ತವರ್ಗವನ್ನು ಸೃಷ್ಟಿಸಿದ್ದರು.
ಸೆಕ್ಸ್ ಟು ಸೂಪರ್ ಕಾನ್ಷಿಯಸ್ (ಸಂಭೋಗದಿಂದ ಸಮಾಧಿಯೆಡೆಗೆ) ನಂಥಾ ಸಾಹಿತ್ಯಕ್ಕೆ ಆ ಕಾಲದ ಭಾರತೀಯ ಸಮಾಜವು ತಯಾರಾಗಿರಲೇ ಇರಲಿಲ್ಲ. ಹೀಗಾಗಿ ತನ್ನ ಕೃತಿಗಳು ಮತ್ತು ಕ್ರಾಂತಿಕಾರಿಯೆನ್ನಿಸಬಹುದಾದ ಮುಕ್ತ ಧೋರಣೆಗಳಿಂದಾಗಿ ಧರ್ಮ-ಆಧ್ಯಾತ್ಮ-ಆಚರಣೆಗಳ ಸಾಂಪ್ರದಾಯಿಕ ದೃಷ್ಟಿಕೋನಕ್ಕೆ ನೇರ ದಾಳಿಯಿಟ್ಟ ಆಚಾರ್ಯ ರಜನೀಶರನ್ನು ಜಗತ್ತು ಸೆಕ್ಸ್ ಗುರು ಎಂದು ಕರೆಯಿತು.

ಮುಂದೊಮ್ಮೆ ಶ್ರೀಕೃಷ್ಣ ಪರಮಾತ್ಮನ ಬಗೆಗಿನ ತನ್ನ ಉಪನ್ಯಾಸದ ನಂತರ ಬಂದವರೆಲ್ಲಾ ಭಾವಪರವಶರಾಗಿ ರಜನೀಶರನ್ನೇ ಶ್ರೀಕೃಷ್ಣನೆಂದು ಭಾವಿಸಿಕೊಂಡು, ಅವರ ಸುತ್ತಲೂ ಗರ್ಬಾ ಕುಣಿಯುತ್ತಾ ಅವರನ್ನು ಭಗವಾನ್ ಪದವಿಗೇರಿಸಿದ್ದು ಈಗ ಇತಿಹಾಸ.
ಓಶೋರ ಸಾರ್ವಜನಿಕ ಜೀವನವನ್ನು ಸರಳವಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು: ಪೂನಾ – 1, ಒರೆಗಾನ್ (ಅಮೆರಿಕಾ) ಮತ್ತು ಪೂನಾ – 2. ಪೂನಾ-1 ಓಶೋರ ಯಶಸ್ಸಿನ ಆರಂಭದ ಭಾಗ. ಇದು ಭಾರತದ ಪೂನಾಗಷ್ಟೇ ಸೀಮಿತ.
ನಂತರ ಬರುವ ಒರೆಗಾನ್ ಹಂತವು ಓಶೋ ಮತ್ತು ಮುಖ್ಯವಾಗಿ ಶೀಲಾ ಅಮೆರಿಕಾದ ಒರೆಗಾನ್ ನಲ್ಲಿ 1981 ರಿಂದ 1985 ರ ನಡುವೆ ನಡೆಸಿದ್ದ ಕರಾಮತ್ತುಗಳ ಅಧ್ಯಾಯ. ಇನ್ನು ಕೊನೆಯದಾಗಿ 1986 ರಿಂದ 1990 ರ ಪೂನಾ – 2 ಭಾಗವು ಭಾರತಕ್ಕೆ ಓಶೋರ ಮರಳುವಿಕೆ ಮತ್ತು ಅವರ ಸಂಶಯಾಸ್ಪದ ನಿಧನದೊಂದಿಗೆ ಅಂತ್ಯವಾಗುತ್ತದೆ.
ಪೂನಾ -1 ರ ಭಾಗವು ರಜನೀಶರ ಅನುಯಾಯಿಗಳ ಪುಟ್ಟ ಹಿಂಡೊಂದು ದೊಡ್ಡ ಗುಂಪಾಗಿ, ಆಶ್ರಮದ ಸ್ಥಾಪನೆಯಾಗಿ ಪುಣೆಯ ಹೆಸರನ್ನು ಜಗತ್ತಿನ ಭೂಪಟದಲ್ಲಿ ತಂದ ಮತ್ತು ಪುಣೆಯನ್ನು ಅಪ್ಪಟ ಪ್ರವಾಸೋದ್ಯಮ ಕೇಂದ್ರವನ್ನಾಗಿಸಿದ ಪ್ರಮುಖ ಅವಧಿ.
ಆಶ್ರಮದೊಳಗೆ ನಡೆಯುತ್ತಿದ್ದ ಕ್ಯಾಂಪುಗಳಲ್ಲಿ ಹಿಂಸಾತ್ಮಕ ಲೈಂಗಿಕತೆ, ಮಾದಕ ದ್ರವ್ಯಗಳು ಮತ್ತು ಕರೆನ್ಸಿಗಳ ಕಳ್ಳಸಾಗಾಣಿಕೆಗಳಂಥಾ ಗಂಭೀರ ವಿವಾದ-ಆರೋಪಗಳಿದ್ದರೂ ವಿದೇಶಿ ಭಕ್ತರ ನಿರಂತರ ಆಗಮನದಿಂದ ಆಶ್ರಮವು ಡಾಲರುಗಳೊಂದಿಗೆ ತುಳುಕುತ್ತಾ ಆರ್ಥಿಕ ನೆಲೆಯಲ್ಲಿ ಸಮೃದ್ಧವಾಗಿತ್ತು.
ಸಿರಿವಂತ ಭಕ್ತರಿಂದ ದೊರಕುತ್ತಿದ್ದ ಧಾರಾಳ ದೇಣಿಗೆಗಳು ಮತ್ತು ತಮ್ಮ ಸೂಪರ್ ಹಿಟ್ ಪುಸ್ತಕಗಳ ಸ್ವಪ್ರಕಟಣೆಯೂ ಸೇರಿದಂತೆ ಹಲವು ಮೂಲಗಳಿಂದ ಆರ್ಥಿಕ ಸ್ವಾವಲಂಬನೆಯನ್ನು ಪಡೆದುಕೊಳ್ಳುವಲ್ಲಿ ಪುಣೆಯ ಆಶ್ರಮವು ಕೆಲವರ್ಷಗಳಲ್ಲೇ ಯಶಸ್ವಿಯಾಗಿತ್ತು.
ಇನ್ನು ಪುಣೆಯ ಆಶ್ರಮದಲ್ಲಿ ಮುಕ್ತ ಲೈಂಗಿಕತೆಗೆ ಅವಕಾಶವಿದೆಯೆಂದು ಆಸೆಯಿಂದ ಬರುತ್ತಿದ್ದ ಸ್ಥಳೀಯವರ್ಗವನ್ನು ಬುದ್ಧಿವಂತಿಕೆಯಿಂದ ಸಾಗಹಾಕಿದ್ದು ಓಶೋರಿಗಿದ್ದ ಸಮಯಪ್ರಜ್ಞೆಗೆ ಒಂದೊಳ್ಳೆಯ ನಿದರ್ಶನ.
ಓಶೋ ತಮ್ಮ ಆಶ್ರಮದಲ್ಲಿ ನಡೆಯುತ್ತಿದ್ದ ಆಯ್ದ ಶಿಬಿರಗಳ ಪ್ರವೇಶ ದರವನ್ನು ಏಕಾಏಕಿ ಏರಿಸಿ ಸ್ಥಳೀಯರನ್ನು ದೂರವಿಟ್ಟಿದ್ದಲ್ಲದೆ, ಇಂಥಾ ಶಿಬಿರಗಳು ಭಾರತೀಯರಿಗೆ ಹೇಳಿಮಾಡಿಸಿದ್ದಲ್ಲ. ಭಾರತೀಯರು ದೈವಿಕ ಅಂಶವನ್ನು ಜನ್ಮತಃ ಪಡೆದುಕೊಂಡು ಬಂದಿರುವವರು. ಈ ಕಸರತ್ತುಗಳ ಅವಶ್ಯಕತೆಯೇನಿದ್ದರೂ ಅದು ವಿದೇಶೀಯರಿಗೆ ಮಾತ್ರ, ಎನ್ನುತ್ತಾ ಭಾರತೀಯರ ಮನದಲ್ಲಿ ಹುಸಿಹೆಮ್ಮೆಯನ್ನು ಮೂಡಿಸಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು.
ಓಶೋ ರಜನೀಶರಿಗೆ ಮೊದಲಿನಿಂದಲೂ ಧ್ಯಾನ-ಆಧ್ಯಾತ್ಮಗಳು ಒಂದೊಳ್ಳೆಯ ಉತ್ಪನ್ನವೆಂದೂ, ಅವುಗಳನ್ನು ವ್ಯವಸ್ಥಿತವಾಗಿ ಬಿಕರಿಗಿಟ್ಟರೆ ಸಂಪತ್ತಿನ ಹೊಳೆಯನ್ನೇ ಸೃಷ್ಟಿಸಬಹುದು ಎಂಬುದರ ಬಗ್ಗೆ ಬಲವಾದ ನಂಬಿಕೆಯಿತ್ತು. ತಮ್ಮ ಚಾಣಾಕ್ಷ ಮಾರ್ಕೆಟಿಂಗ್ ಕಾರ್ಯತಂತ್ರಗಳಿಂದ ಅವರು ಅದರಲ್ಲಿ ಯಶಸ್ವಿಯಾದರು ಕೂಡ.
1980 ರ ಹೊತ್ತಿಗೆ ಸಾವಿರಗಟ್ಟಲೆ ಜನರನ್ನು ಹೊಂದಿದ್ದ ಪುಣೆಯ ಆಶ್ರಮವು ಮತ್ತಷ್ಟು ವಿದೇಶಿ ಭಕ್ತರಿಂದ ತುಂಬಿಕೊಂಡು ಸ್ಥಳಾವಕಾಶವೇ ಇಲ್ಲದಂತಾಗುತ್ತದೆ. ಇತ್ತ ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ರಾಜಕೀಯ ನೆಲೆಯಲ್ಲೂ ಹೊಸ ಸಮಸ್ಯೆಗಳು ಹುಟ್ಟಿಕೊಂಡಿದ್ದವು. ರಜನೀಶರ ಆಶ್ರಮದ ಮೇಲಿದ್ದ ತೆರಿಗೆ ಕಳ್ಳತನದ ಆರೋಪಗಳು ಒಂದು ಕಡೆಯಾದರೆ, ಮೊರಾರ್ಜಿ ದೇಸಾಯಿಯವರ ಸ್ವಮೂತ್ರಪಾನದ ಬಗ್ಗೆ ವ್ಯಂಗ್ಯವಾಡುತ್ತಿದ್ದ ರಜನೀಶರು ದೇಸಾಯಿಯವರ ಕೆಂಗಣ್ಣಿಗೆ ಗುರಿಯಾಗಿದ್ದರು.
ಈ ಅವಧಿಯಲ್ಲೇ ಭಕ್ತರ ಗುಂಪಿನಲ್ಲಿ ಕುಳಿತಿದ್ದ ಆಗಂತುಕನೊಬ್ಬ ಚಾಕುವನ್ನು ಎಸೆದು ರಜನೀಶರ ಹತ್ಯೆಗೆ ಯತ್ನಿಸಿದ್ದನಂತೆ. ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗುವ ಆಶ್ರಮದ ಅನುಯಾಯಿಗಳು ಆದಷ್ಟು ಬೇಗ ರಜನೀಶರನ್ನು ಹೊಸ ಸುರಕ್ಷಿತ ಸ್ಥಳವೊಂದಕ್ಕೆ ವರ್ಗಾಯಿಸುವತ್ತ ಸಕ್ರಿಯರಾಗುತ್ತಾರೆ.
ಈ ನಿಟ್ಟಿನಲ್ಲಿ ಆಶ್ರಮದ ಸ್ಥಳಾಂತರಕ್ಕಾಗಿ ಗುಜರಾತಿನ ಕಛ್, ದೆಹಲಿ ಮತ್ತು ಮುಂಬೈ ಸೇರಿದಂತೆ ಹಲವು ಪ್ರದೇಶಗಳನ್ನು ಪರಿಶೀಲಿಸಲಾಗುತ್ತದೆ. ಸೂಕ್ತವಾದ ಹೊಸ ಸ್ಥಳವೊಂದನ್ನು ಆರಿಸಿದ ನಂತರವೇ ನೀನಿಲ್ಲಿ ಕಾಲಿಡಬೇಕು. ಅಲ್ಲಿಯವರೆಗೆ ಮರಳಬೇಡ, ಎಂದು ತನ್ನ ಆಪ್ತಕಾರ್ಯದರ್ಶಿಯಾಗಿದ್ದ ಲಕ್ಷ್ಮಿಗೆ ಗಡುವಿನ ಸಹಿತವಾಗಿ ಆದೇಶ ನೀಡುವ ರಜನೀಶರ ಒತ್ತಡವು ಲಕ್ಷ್ಮಿಗೆ ಮುಳುವಾಗುತ್ತದೆ.
ಸ್ಥಳಪರಿಶೀಲನೆಯ ಕಾರಣದಿಂದಾಗಿ ಉಂಟಾಗುವ ಲಕ್ಷ್ಮಿಯ ದೀರ್ಘ ಅನುಪಸ್ಥಿತಿಯಲ್ಲಿ ಶೀಲಾರ ಪ್ರಾಬಲ್ಯವು ಕ್ರಮೇಣ ಹೆಚ್ಚುತ್ತಾ ಒಟ್ಟಾರೆಯಾಗಿ ಲಕ್ಷ್ಮಿಯ ಪ್ರಭಾವವು ಬಹುಬೇಗನೇ ಮಸುಕಾಗುತ್ತದೆ. ಇತ್ತ ಸಮಯ-ಸಂದರ್ಭಗಳು ಸೂಕ್ತವಾಗಿಲ್ಲದ ಕಾಲದಲ್ಲಿ ಇಂಥಾ ವಿಲಕ್ಷಣ ಒತ್ತಡಕ್ಕೆ ಸಿಲುಕುವ ಲಕ್ಷ್ಮಿಯ ತನಗೆ ಆದೇಶಿಸಲಾಗಿದ್ದ ಕರ್ತವ್ಯಪಾಲನೆಯಲ್ಲಿ ವಿಫಲಳಾಗಿ ಕೊನೆಗೂ ತನ್ನ ಹುದ್ದೆಯನ್ನು ಕಳೆದುಕೊಳ್ಳುತ್ತಾಳೆ.
ಈ ಹಂತದಲ್ಲಿ ರಂಗಪ್ರವೇಶವಾಗುವ ಹೊಸ ಪ್ರಮುಖ ಪಾತ್ರವೇ ಮಾ ಆನಂದ್ ಶೀಲಾ!
**********
ಶೀಲಾ ಅಂಬಾಲಾಲ್ ಪಟೇಲ್.
ಗುಜರಾತ್ ಮೂಲದ ಶೀಲಾ ಇಪ್ಪತ್ತರ ಅಂಚಿನಲ್ಲಿರುವಾಗಲೇ ತನ್ನ ತಂದೆಯೊಂದಿಗೆ ಪುಣೆಯ ಆಶ್ರಮಕ್ಕೆ ಬಂದಿದ್ದಾಗ ರಜನೀಶರನ್ನು ಕಂಡು ಅವರತ್ತ ಆಕರ್ಷಿತಳಾಗಿದ್ದವಳು. ಆ ಕಾಲದಲ್ಲೇ ತನ್ನ ಸಂಗಾತಿಯಾಗಿದ್ದ ಮಾರ್ಕ್ ಸಿಲ್ವರ್ ಮ್ಯಾನ್ ನನ್ನು ಇಷ್ಟಪಟ್ಟು ವಿವಾಹವಾಗಿ ಶೀಲಾ ಸಿಲ್ವರ್ ಮ್ಯಾನ್ ಆಗಿದ್ದವರೂ ಕೂಡ.

ರಜನೀಶರ ಭೇಟಿಯ ನಂತರ ಸಮ್ಮೋಹಿತಳಾದವಳಂತೆ ಮತ್ತೆ ಅವರತ್ತಲೇ ಸಾಗುವ ಶೀಲಾ ಬಹುಬೇಗನೇ ಅಲ್ಲೇ ದೀಕ್ಷೆಯನ್ನು ಪಡೆದುಕೊಳ್ಳುತ್ತಾರೆ. ಸಂಗಾತಿಯಾದ ಮಾರ್ಕ್ ನನ್ನೂ ಕೂಡ ಕರೆಸಿಕೊಂಡು ತಮ್ಮ ಗುಂಪಿನಲ್ಲಿ ಸೇರಿಸಿಕೊಳ್ಳುತ್ತಾಳೆ. ದೀಕ್ಷೆಯ ನಂತರ ಶೀಲಾ ಪಟೇಲ್ ‘ಮಾ ಆನಂದ್ ಶೀಲಾ’ ಆಗಿಯೂ, ಮಾರ್ಕ್ ಸಿಲ್ವರ್ ಮ್ಯಾನ್ ‘ಸ್ವಾಮಿ ಚಿನ್ಮಯ’ನಾಗಿಯೂ ರಜನೀಶರ ಅನುಯಾಯಿಗಳ ಒಬ್ಬರಾಗುತ್ತಾರೆ.
ಮುಂದಿನ ಬೆರಳೆಣಿಕೆಯ ವರ್ಷಗಳಲ್ಲಿ ತನ್ನ ದೀರ್ಘಾವಧಿಯ ಅನಾರೋಗ್ಯದಿಂದಾಗಿ ಸಂಭವಿಸುವ ಸ್ವಾಮಿ ಚಿನ್ಮಯರ ನಿಧನದ ತರುವಾಯ, ಇತ್ತ ಆಗಲೇ ರಜನೀಶರ ಆಪ್ತ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಷ್ಮಿಯ ಕಾರ್ಯದರ್ಶಿಯಾಗಿ ಶೀಲಾ ಮುಂದುವರಿಯುತ್ತಾರೆ.
ಅಮೆರಿಕಾದಲ್ಲಿ ವಿದ್ಯಾಭ್ಯಾಸದ ಹಿನ್ನೆಲೆಯಿದ್ದ ಶೀಲಾ ಮೊದಲಿನಿಂದಲೂ ಪಾಶ್ಚಿಮಾತ್ಯ ಜೀವನಶೈಲಿಯ ಐಷಾರಾಮ ಮತ್ತು ವಿಲಾಸಗಳತ್ತ ಒಲವಿದ್ದವರು. ಭಾರತವು ಎಂದಿಗೂ ಆಕೆಗೆ ಬಿಸಿ ಮತ್ತು ಅಸಹ್ಯವಾಗಿದ್ದ ಪ್ರದೇಶದಷ್ಟೇ ಆಗಿತ್ತು. ಈ ಬಗ್ಗೆ ಮುಕ್ತವಾಗಿ ಬರೆಯುತ್ತಾ ತಮ್ಮ ಹ್ಯಾಂಡ್ ಬ್ಯಾಗಿನಲ್ಲಿ ವಿದೇಶೀ ಉತ್ಪನ್ನಗಳನ್ನು ಹೊಂದಿದ್ದ ಪುಟ್ಟ ಸೂಪರ್ ಮಾರ್ಕೆಟ್ಟೇ ಇತ್ತೆಂದು ಅವರು ತಮ್ಮ ಕೃತಿಯಲ್ಲಿ ಕೊಚ್ಚಿಕೊಂಡಿದ್ದಾರೆ.
ರಜನೀಶರು ತಮ್ಮ ಆಶ್ರಮಕ್ಕೆಂದು ಹೊಸ ಸ್ಥಳದ ತಲಾಶೆಯಲ್ಲಿದ್ದಾಗ ಅಮೆರಿಕಾದಂಥಾ ಲಿಬರಲ್ ರಾಷ್ಟ್ರವೇ ತಮ್ಮ ಕಮ್ಯೂನ್ (ರಜನೀಶರ ಅನುಯಾಯಿಗಳ ಗುಂಪು) ಗೆ ಉಜ್ವಲ ಭವಿಷ್ಯವೆಂದು ಸಲಹೆಯನ್ನು ನೀಡುವುದು ಇದೇ ಶೀಲಾ.
ಲಕ್ಷ್ಮಿಯ ಉಚ್ಚಾಟನೆಯ ನಂತರ ಓಶೋರ ಆಪ್ತ ಕಾರ್ಯದರ್ಶಿಯಾಗಿ ಭಾರೀ ಜವಾಬ್ದಾರಿಯ ಹುದ್ದೆಯನ್ನು ವಹಿಸಿಕೊಳ್ಳುವ ಶೀಲಾ ತನ್ನ ಸಹೋದರ ಮತ್ತು ಕೆಲ ಗೆಳೆಯರ ನೆರವಿನೊಂದಿಗೆ ಅಮೆರಿಕಾದ ಹಲವು ಸ್ಥಳಗಳನ್ನು ಪರಿಶೀಲಿಸುತ್ತಾ ಕೊನೆಗೆ 64000 ಎಕರೆಯಷ್ಟಿದ್ದ ಒರೆಗಾನ್ ಪ್ರದೇಶವನ್ನು ಆರಿಸಿಕೊಳ್ಳುತ್ತಾರೆ. ಓಶೋರ ಆಪ್ತ ಕಾರ್ಯದರ್ಶಿಯಾಗುವುದೆಂದರೆ ಅವರ ಇಡೀ ಮಿಲಿಯನ್ ಡಾಲರುಗಟ್ಟಲೆ ವ್ಯವಸ್ಥೆಯ ಸಂಪೂರ್ಣ ಚುಕ್ಕಾಣಿಯನ್ನು ಹಿಡಿಯುವ ಬೃಹತ್ ಜವಾಬ್ದಾರಿಯೂ ಆಗಿತ್ತು.
ನಿಸ್ಸಂದೇಹವಾಗಿ ಓಶೋರ ಹಿಂದಿನ ಆಪ್ತಕಾರ್ಯದರ್ಶಿಯಾಗಿದ್ದ ಲಕ್ಷ್ಮಿ ಮತ್ತು ಶೀಲಾರ ನಂತರ ಬರುವ ಹಾಸ್ಯಾರಿಗೆ ಹೋಲಿಸಿದರೆ ತನ್ನ ಜವಾಬ್ದಾರಿಯನ್ನು ವಿಭಿನ್ನವಾಗಿ ನಿಭಾಯಿಸಿದ್ದು ಆನಂದ್ ಶೀಲಾ ಮಾತ್ರ.
ಒರೆಗಾನ್ ಪ್ರದೇಶವು ಶೀಲಾರ ಯೋಜನೆಯಂತೆ ಓಶೋರ ಕಮ್ಯೂನಿಗೆ ಪ್ರಶಸ್ತವಾದ ಸ್ಥಳವಾಗಿತ್ತು. ಒರೆಗಾನ್ ಮುಖ್ಯ ಪ್ರದೇಶದಿಂದ ಮೂವತ್ತು ಮೈಲಿಗಳಷ್ಟು ದೂರವಿದ್ದ ಹಸಿರು ಹೊದ್ದ ನಿರ್ಜನ ಗುಡ್ಡಗಳು ತಮ್ಮ ಕಮ್ಯೂನಿಗೆಂದೇ ಮೀಸಲಿಟ್ಟಂತಿದ್ದವು. ಮೇಲಾಗಿ ನೂರಕ್ಕೂ ಕಮ್ಮಿ ಜನಸಂಖ್ಯೆಯಿದ್ದ ಒರೆಗಾನ್ ಪ್ರದೇಶದಲ್ಲಿ ಹಲವು ವರ್ಷಗಳಿಂದ ತಮ್ಮ ಪಾಡಿಗೆ ತಾವು ಸುಖವಾಗಿ ಸೆಲೆಸಿದ್ದ ನಿರುಪದ್ರವಿ ಜನರ ಗುಂಪೇ ಇದ್ದಿದ್ದು ಶೀಲಾರನ್ನು ಆಕರ್ಷಿಸಿತೇನೋ.

ಒಟ್ಟಿನಲ್ಲಿ ಓಶೋರ ಮಾರ್ಗದರ್ಶನದೊಂದಿಗೆ ಶೀಲಾರ ನೇತೃತ್ವದಲ್ಲಿ ಅಲ್ಲಿ ನೆಲೆಯೂರುವ ಕಮ್ಯೂನ್ ಈ 64000 ಎಕರೆ ಪ್ರದೇಶದಲ್ಲಿ ತಮ್ಮ ಅವಿರತ ಪ್ರಯತ್ನಗಳೊಂದಿಗೆ ಶಹರದ ನಕ್ಷೆಯನ್ನೇ ಸಿನಿಮೀಯ ಶೈಲಿಯಲ್ಲಿ ಬದಲಾಯಿಸುತ್ತದೆ. ಹೀಗೆ ರೂಪುಗೊಳ್ಳುವುದೇ ‘ರಜನೀಶಪುರಂ’ ಎಂಬ ಪುಟ್ಟ ನಗರ.
ಕುಡಿಯುವ ನೀರು ಮತ್ತು ವಿದ್ಯುತ್ ಸೌಲಭ್ಯಗಳ ಸುಸಜ್ಜಿತ ವ್ಯವಸ್ಥೆಗಳನ್ನಲ್ಲದೆ, ಆರಕ್ಷಕ ದಳ, ಅಗ್ನಿಶಾಮಕ ದಳ, ಹೋಟೇಲು, ಶಾಪಿಂಗ್ ಮಾಲ್, ಬಸ್ ವ್ಯವಸ್ಥೆ, ಕೃಷಿ ಭೂಮಿ, ಅಣೆಕಟ್ಟು, ವಿಮಾನ ನಿಲ್ದಾಣಗಳನ್ನೂ ನಿರ್ಮಿಸಿ ಓಶೋರ ಕನಸಿನ ಮನುಷ್ಯನ ನಿರ್ಮಾಣಕ್ಕೆ ಅತ್ಯುತ್ಕಷ್ಟ ವೇದಿಕೆಯೊಂದನ್ನು ಅನುಯಾಯಿ ವರ್ಗವು ಸಿದ್ಧಪಡಿಸುತ್ತದೆ.
ವಿವಿಧ ಹಂತಗಳಲ್ಲಿ ಹೀಗೆ ಸಿದ್ಧವಾಗುವ ರಜನೀಶಪುರಂ ಕ್ರಮೇಣ ಐದರಿಂದ ಏಳು ಸಾವಿರ ಓಶೋ ಅನುಯಾಯಿಗಳ ದೀರ್ಘಾವಧಿಯ ನೆಲೆಯಾಗುತ್ತದೆ. ಇನ್ನು ವಾರ್ಷಿಕ ಉತ್ಸವಗಳಿದ್ದಾಗ ಜಗತ್ತಿನಾದ್ಯಂತ ಇರುವ ರಜನೀಶರ ಕಮ್ಯೂನ್ ಗಳಿಂದ ಬರುತ್ತಿದ್ದ ಅನುಯಾಯಿಗಳಿಂದ ಈ ಸಂಖ್ಯೆಯು ಹತ್ತರಿಂದ ಹನ್ನೆರಡು ಸಾವಿರಕ್ಕೆ ಏರುವ ಸಂದರ್ಭಗಳೂ ಇರುತ್ತಿದ್ದವು.
ಇತ್ತ ಶಾಂತಕೊಳದಂತಿದ್ದ ತಮ್ಮ ಬದುಕಿಗೆ ಕಲ್ಲೆಸೆದ ಪರಿಣಾಮವಾಗಿ ಒರೆಗಾನ್ ನಾಗರಿಕರ ಮನಃಶಾಂತಿಯು ಮೂರಾಬಟ್ಟೆಯಾಗುತ್ತದೆ. ಕೆಂಪು ವಸ್ತ್ರಗಳನ್ನು ಧರಿಸಿದ್ದ ವಿದೇಶಿ ಆಗಂತುಕರು ಮೊದಮೊದಲಿಗೆ ತಮ್ಮ ಪುಟ್ಟ ಗೂಡುಗಳನ್ನು ಕಟ್ಟುಕೊಳ್ಳುವುದರಲ್ಲೇ ವ್ಯಸ್ತರಾಗಿದ್ದರೂ, ಕ್ರಮೇಣ ಇಡೀ ಶಹರವನ್ನೇ ಆಕ್ರಮಿಸಿಕೊಳ್ಳುವುದನ್ನು ಕಂಡ ಒರೆಗಾನ್ ನಾಗರಿಕರು ತಮ್ಮ ನೆಲದಲ್ಲೇ ನೆಲೆ ಕಳೆದುಕೊಂಡವರಂತೆ ಗಾಬರಿಯಾಗುತ್ತಾರೆ.
ಹೀಗೆ ರಜನೀಶಪುರಂ ಸಮುದಾಯ ಮತ್ತು ಒರೆಗಾನ್ ನಾಗರಿಕರ ನಡುವೆ ಶುರುವಾಗುವ ಕಾನೂನು ಘರ್ಷಣೆಯು ಕ್ರಮೇಣ ನಿಯಂತ್ರಣಕ್ಕೂ ಸಿಗದಷ್ಟು ಗಂಭೀರವಾಗಿ ಅಮೆರಿಕಾ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನವನ್ನೂ ತನ್ನತ್ತ ಸೆಳೆಯುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಹೀಗೆ ಓಶೋರ ಬದುಕಿನ ಎರಡನೇ ಹಂತವಾದ ಒರೆಗಾನ್ ಅವಧಿಯಲ್ಲಿ ರಜನೀಶರ ಸಾಮ್ರಾಜ್ಯ ಉತ್ತುಂಗಕ್ಕೇರುವುದೂ, ಮುಂದೆ ಕುಸಿಯತೊಡಗುವುದೂ ಈ ಆನಂದ್ ಶೀಲಾರ ಅವಧಿಯಲ್ಲೇ.
ಅಸಲಿಗೆ ಒರೆಗಾನ್ ಆರಂಭದ ದಿನಗಳಲ್ಲಿ ನಡೆದಿದ್ದ ‘ಜೋನ್ಸ್ ಟೌನ್ ದುರಂತ’ದ ಬಗ್ಗೆ ಇಲ್ಲಿ ಹೇಳಲೇಬೇಕು. ಗಯಾನಾದ ಜೋನ್ಸ್ ಟೌನ್ ನಲ್ಲಿ ಸಕ್ರಿಯವಾಗಿದ್ದ ಒಂದು ಬಗೆಯ ಕಲ್ಟ್ ಅನುಯಾಯಿಗಳ ಗುಂಪೊಂದು ತಮ್ಮ ನಾಯಕನಾಗಿದ್ದ ಜಿಮ್ ಜೋನ್ಸ್ ಎಂಬಾತನ ಆಣತಿಗನುಗುಣವಾಗಿ, ಸಾಮೂಹಿಕ ಆತ್ಮಹತ್ಯೆಯಂಥಾ ಅವಸರದ ಹೆಜ್ಜೆಯನ್ನಿಟ್ಟು ಬೆಂಕಿಗೆ ಹಾರುವ ಹಾತೆಗಳಂತೆ ಬಲಿಯಾಗಿರುತ್ತದೆ.
ಒಂದೇ ದಿನದಂದು ಇಲ್ಲಿಯ ಕ್ಯಾಂಪಸ್ಸಿನಲ್ಲಿ ಒಂಬೈನೂರ ಹದಿನೆಂಟು ಮಂದಿ ತಮ್ಮ ಕಲ್ಟ್ ಗುರುವಿನ ಆದೇಶದಂತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಖ್ಯೆಯಲ್ಲಿ ಮುನ್ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿದ್ದರಂತೆ. ಈ ಘಟನೆಯು ಅಮೆರಿಕಾವನ್ನಷ್ಟೇ ಅಲ್ಲದೆ ವಿಶ್ವದೆಲ್ಲೆಡೆ ವರದಿಯಾಗಿ ಜನರನ್ನು ಬೆಚ್ಚಿಬೀಳಿಸಿತ್ತು. ಹೀಗಾಗಿ ಒರೆಗಾನ್ ನಾಗರಿಕರು ಹೊಸದಾಗಿ ತಮ್ಮ ಪ್ರದೇಶದಲ್ಲಿ ನೆಲೆಯೂರಿದ್ದ ರಜನೀಶರ ಗುಂಪೂ ಕೂಡ ಇಂಥಾ ಅಮಾನವೀಯ, ಕಾನೂನುಬಾಹಿರ ಚಟುವಟಿಕೆಗಳಿಗೆ ಇಳಿಯಬಹುದು ಎಂದು ಭಯಪಟ್ಟಿದ್ದರಲ್ಲಿ ಅಚ್ಚರಿಯೇನಿಲ್ಲ.
ಹೀಗೆ ಹಲವಾರು ಕಾರಣಗಳಿಂದಾಗಿ ಒರೆಗಾನ್ ನಾಗರಿಕರು ಮತ್ತು ರಜನೀಶಪುರಂ ಸಮುದಾಯದ ನಡುವೆ ನಿರಂತರವಾಗಿ ನಡೆಯುತ್ತಿದ್ದ ಕಾನೂನು ಸಮರದಲ್ಲಿ ರಜನೀಶಪುರಂ ಸಮುದಾಯದ ಕಡೆಯಿಂದ ಎದ್ದು ಕಾಣುವ ಏಕೈಕ ಹೆಸರೆಂದರೆ ಮಾ ಆನಂದ್ ಶೀಲಾ.
ಶೀಲಾ ಆ ದಿನಗಳಲ್ಲಿ ಓಶೋರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಿದ್ದಲ್ಲದೆ ಸಮುದಾಯದ ವಕ್ತಾರರಾಗಿಯೂ ನಿರಂತರವಾಗಿ ಮಾಧ್ಯಮಗಳೆದುರು ಕಾಣಿಸಿಕೊಳ್ಳತೊಡಗಿದ್ದರು. ಮೊದಲೇ ಅಗ್ನಿಕುಂಡದಂತಿದ್ದ ವಿವಾದಕ್ಕೆ ತುಪ್ಪ ಸುರಿಯುವಂತಿದ್ದ ಶೀಲಾರ ಕಿಡಿಕಿಡಿ ಮಾತುಗಳು ಆಕೆಯನ್ನು ಓರ್ವ ಬಲುಘಾಟಿ ಹೆಣ್ಣೆಂದೂ, ಓಶೋ ಸಮುದಾಯವು ಅಗತ್ಯಬಿದ್ದರೆ ಯಾವ ದುಸ್ಸಾಹಸಕ್ಕೂ ಕೈಹಾಕಲು ಹೇಸಲಾರದು ಎಂಬ ಖಾರದ ಸಂದೇಶವನ್ನೂ ಖುಲ್ಲಂಖುಲ್ಲಾ ರವಾನಿಸಿತ್ತು.
ವಿವಾದಗಳು ಬಿಸಿಬಿಸಿಯಾಗಿದ್ದಷ್ಟು ಎಲ್ಲರಿಗೂ ಲಾಭ. ಹೀಗಾಗಿ ಇದೇ ಇಮೇಜ್ ಅನ್ನು ನೀನು ಕಾದಿರಿಸಿಕೊಳ್ಳಬೇಕು, ಎನ್ನುವ ರಜನೀಶರ ಆಣತಿಯನ್ನು ನಾನು ಶಿಸ್ತಿನಿಂದ ಪಾಲಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಶೀಲಾ, ಪ್ರತೀಬಾರಿ ವಿವಾದಗಳಾದಾಗಲೂ ಓಶೋರ ಚಿತ್ರವಿದ್ದ ಕಾಫಿ ಮಗ್ಗುಗಳನ್ನು ಹಿಡಿದು ಓಶೋರ ಪುಸ್ತಕಗಳವರೆಗೂ ಆಶ್ರಮದ ಉತ್ಪನ್ನಗಳು ಬಿಸಿದೋಸೆಯಂತೆ ಮಾರಾಟವಾಗುತ್ತಾ ಕಮ್ಯೂನಿಗೆ ಸಂಪತ್ತಿನ ಹೊಳೆಯು ಹರಿದು ಬರುತ್ತಿದ್ದಿದ್ದನ್ನು ತಮ್ಮ ಕೃತಿಯಲ್ಲಿ ಸ್ಮರಿಸಿಕೊಳ್ಳುತ್ತಾರೆ.
ಒಟ್ಟಿನಲ್ಲಿ ಒರೆಗಾನ್ ನಿವಾಸಿಗಳಿಗೆ ಮಾ ಆನಂದ್ ಶೀಲಾ ಎಂಬ ಹೆಸರಿನೊಂದಿಗೆ ತಾಳೆಯಾಗುತ್ತಿದ್ದ ಏಕೈಕ ಇಮೇಜ್ ಎಂದರೆ ಲೇಡಿ ವಿಲನ್ ಮಾತ್ರ.
। ಇನ್ನುಳಿದದ್ದು ನಾಳೆಗೆ ।






Is this article going to continue ? Looks incomplete . Also, seems to completely ignore spiritual aspects/ contributions of Osho and highlight only controversial aspects.