ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ಅದೇ ಮನೆ..

ಕೊಲ್ನಾಡು ಮನೆಗೆ ಮುನ್ನೂರು

ಶಾಂತ ತಮ್ಮಯ್ಯ

ಇದು ಅದೇ ಮನೆ.

ಪತ್ನಿಯನ್ನು ಕಳೆದುಕೊಂಡು ಮಗಳೊಂದಿಗೆ ಬದುಕು ಕಟ್ಟಿಕೊಳ್ಳಲು ಹೆಣಗಾಡಿದ ಶ್ರಮಜೀವಿ, ತನ್ನದೂ ಎಂಬ ಒಂದಡಿ ಭೂಮಿ ಸಂಪಾದಿಸಬೇಕು ಎಂದು ತಾನು ಮಣ್ಣಾಗುವವರೆಗೂ ಕನಸು ಕಾಣುತ್ತಿದ್ದ ಚೋಮನ ಬೆವರನ್ನು ಸುರಿಸುತ್ತಾ, ತನ್ನ ಬೇಸರ, ನೋವು, ಹತಾಶೆಗಳೆಲ್ಲವನ್ನೂ ದುಡಿ ಬಾರಿಸುತ್ತಾ ಹೊರಹಾಕುತ್ತಿದ್ದ ಚೋಮನ ಯಜಮಾನನ ಮನೆ.

ಇದು ನಿಜವಾಗಿ ಅಲ್ಲ, ಬದಲಾಗಿ ‘ಚೋಮನ ದುಡಿ’ ಚಲನಚಿತ್ರದಲ್ಲಿ!

ಸುಮಾರು 70ರ ದಶಕದಲ್ಲಿ ತೆರೆಕಂಡ ‘ಚೋಮನ ದುಡಿ’ ಚಲನಚಿತ್ರ ನೋಡಿದವರಿಗೆ ಈ ಚಿತ್ರಣ ನೆನಪಾಗಬಹುದು. ಚೋಮನ ಮಗಳು ಪ್ರಿಯಕರನ ಜೊತೆಗಿದ್ದುದನ್ನು ಚೋಮ ಕಂಡು ನೊಂದಿದ್ದು ಇದೇ ಮನೆಯಲ್ಲಿ. ಈ ಎಲ್ಲಾ ಚಿತ್ರಣಗಳನ್ನು ಕಟ್ಟಿಕೊಟ್ಟಿದ್ದು ಈ ಮನೆ.

ಅಂದರೆ 1975ರಲ್ಲಿ ಬಿ.ವಿ. ಕಾರಂತರು ನಿರ್ದೇಶಿಸಿದ ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆದ ‘ಚೋಮನ ದುಡಿ’ ಚಿತ್ರದ ಬಹುಪಾಲು ಚಿತ್ರೀಕರಣ ನಡೆದದ್ದು ಈ ಮನೆಯಲ್ಲಿ.

300 ವರ್ಷದ ಇತಿಹಾಸ

ದಕ್ಷಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕೊಲ್ನಾಡು ಗ್ರಾಮದ ಈ ಮನೆ 300 ವರ್ಷ ಹಳೆಯದು ಎಂದು ಊರಿನವರು ಹೇಳುತ್ತಾರೆ. ಡಾ. ಶಿವರಾಮ ಕಾರಂತರ ಪಾತ್ರಗಳಿಗೆ ತಕ್ಕಂತಿರುವ ಮನೆಯನ್ನು ಬಿ.ವಿ. ಕಾರಂತರು ಹುಡುಕುತ್ತಾ ಹೊರಟಾಗ ಕಂಡಿದ್ದು ನೂಜಿಬೈಲು ಮನೆತನದ ಈ ಗೃಹ.

ಅಮೆರಿಕದಲ್ಲಿ ವಾಸ

ಕಾಲಾಂತರದಲ್ಲಿ ಈ ಮನೆಯಲ್ಲಿ ವಾಸವಿದ್ದ ನೂಜಿಬೈಲು ಮನೆಯವರು ಅಮೆರಿಕಕ್ಕೆ ತೆರಳಿದರು. ಎರಡು ಮೂರು ವರ್ಷಗಳಿಗೊಮ್ಮೆ ಊರಿಗೆ ಬಂದಾಗ ಇದೇ ಮನೆಯಲ್ಲಿ ಉಳಿಯುತ್ತಿದ್ದರು. ಮನೆಗೆಲಸದವರು ಆಗಾಗ್ಗೆ ಬಂದು ಸ್ವಚ್ಛಗೊಳಿಸಿ ಹೋಗುತ್ತಿದ್ದರು. ಎರಡು ವರ್ಷಗಳ ಹಿಂದೆ ನೂಜಿಬೈಲು ಮನೆತನ ಈ ಮನೆಯನ್ನು ಮಾರಾಟ ಮಾಡಿತ್ತು.

ದುಡಿಯ ಸದ್ದು…

ಹೊಸ ಯಜಮಾನನ ತೆಕ್ಕೆಗೆ ಬಂದ ಈ ಮನೆ ಹೊಸ ರೂಪ ಪಡೆಯಿತು. ಸುಣ್ಣ ಬಣ್ಣ ಕಂಡಿತು. ಅದಕ್ಕಿಂತ ಹೆಚ್ಚಾಗಿ ಮನೆಯ ಯಜಮಾನ ವಿಕಾಸ್ ಪುತ್ತೂರು ಅವರಿಗೆ ಚಿಕ್ಕಂದಿನಲ್ಲಿ ನೋಡಿದ್ದ ಸಿನಿಮಾ ಅಚ್ಚೊತ್ತಿತ್ತು. ಅಡಕೆ, ರಬ್ಬರ್ ಬೆಳೆಗಾರರಾದ ವಿಕಾಸ್ ಜಮೀನುದಾರಿಕೆಯ ದರ್ಪದ ಬಗ್ಗೆ ಒಂದು ಆಕ್ರೋಶ ಬೆಳೆಸಿಕೊಂಡು ಬಂದರು.

ನೂಜಿಬೈಲಿನ ಈ ಮನೆ ಮಾರಾಟಕ್ಕಿದೆ ಎಂಬ ಸುದ್ದಿ ತಿಳಿದಾಗ ಜಿದ್ದಿಗೆ ಬಿದ್ದು ಆ ಮನೆಯನ್ನು ಕೊಂಡುಕೊಂಡರು. ಯಾಕೋ ಏನೋ ಈ ಮನೆಯಲ್ಲಿ ನನಗೆ ಚೋಮನ ದುಡಿಯ ಸದ್ದೇ ಕೇಳುತ್ತದೆ ಎನ್ನುತ್ತಾರೆ ವಿಕಾಸ್.

ಮುಕ್ತ ಪ್ರವೇಶ

ಈ ಮನೆಯಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ. ಕಾರಂತರ ‘ಚೋಮನ ದುಡಿ’ ಕಾಲ್ಪನಿಕವೋ ಅಥವಾ ಎಲ್ಲೋ ನಡೆದದ್ದನ್ನು ಬರೆದರೋ ಗೊತ್ತಿಲ್ಲ. ಪರದೆಯ ಮೂಲಕ ಅದನ್ನು ತೋರಿಸಿದ್ದು ಪ್ರಭಾವಿಯಾಗಿತ್ತು.

ಈ ಮನೆಯನ್ನು ಕೊಳ್ಳುವಾಗಲೇ ನನಗೆ ಇಲ್ಲಿ ಯಾರ ಬದುಕೂ ಕತ್ತಲಾಗಬಾರದು ಎಂದು ಅನಿಸಿತ್ತು. ಮನೆಯ ಗೋಡೆ, ಚಾವಡಿ, ಕಂಬಗಳು, ಅಂಗಳ, ಹಿತ್ತಲುಗಳೆಲ್ಲೆಲ್ಲೂ ಚೋಮನೇ ನೆನಪಾಗುತ್ತಾನೆ ಎನ್ನುತ್ತಾರವರು.

ಸದ್ಯ ಹಳೇ ಮನೆಯ ಆ ಅಪ್ಪಟ ಸೌಂದರ್ಯವನ್ನು ಇಂದಿಗೂ ಅದೇ ರೀತಿ ಕಾಪಾಡಿಕೊಂಡು ಬಂದಿದ್ದಾರೆ.

21 May 2013 / ಕನ್ನಡಪ್ರಭ

‍ಲೇಖಕರು avadhi

2 April, 2017

1 Comment

  1. G.N.Nagaraj

    ಆ ಮನೆ ಹಾಗೇ ಉಳಿದಿರುವುದು ಸಂತೋಷ. ಚೋಮನ ದುಡಿ ಕಾದಂಬರಿಯಲ್ಲಿ ಕಂಡ ಬದುಕು ಮತ್ತು ಸಿನೆಮಾ ಬಗ್ಗೆ ಒಂದು ಮ್ಯೂಸಿಯಂ ಮಾಡಲು ಸಾಧ್ಯವಾದರೆ ! !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading