ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಇಂದಿನ ಶಿಕ್ಷಣ ಹಣ ಉಳ್ಳವರಿಗೆ ಮಾತ್ರ….’

ನಮ್ಮ ಇಂದಿನ ಶಿಕ್ಷಣದ ದುಃಸ್ಥಿತಿ

– ಬಿ ರಾಜಶೇಖರ ಮೂರ್ತಿ



ಜನವರಿ 26, 1950ರಲ್ಲಿ ನಾವು ಒಪ್ಪಿಕೊಂಡು ‘ಸಂವಿಧಾನ’ದಲ್ಲಿ ಅಡಕವಾಗಿರುವಂತೆ 1960 ರೊಳಗೆ ಸರ್ವರಿಗೂ ಶಿಕ್ಷಣ ಒದಗುವಂತಾಗಬೇಕೆಂಬ ಗುರಿಯನ್ನು ಹೊಂದಲಾಗಿತ್ತು. ಇಲ್ಲಿಗೆ 74 ವರ್ಷ ಕಳೆಯುತ್ತಿದ್ದರೂ ಇಂದಿಗೂ ಇದು ಗುರಿಯಾಗಿಯೇ ಉಳಿದಿದೆ. ಒಂದು ಸಮಾಜದ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಬದಲಾವಣೆ ಆ ಸಮಾಜದ ಶಿಕ್ಷಣದ ಪರಿಸ್ಥಿತಿಯನ್ನು ಅವಲಂಭಿಸುತ್ತದೆಂದು ತಜ್ಞರು ಹೇಳುತ್ತಾರೆ. ಈ ರೀತಿಯಲ್ಲಿರುವಾಗ ಶಿಕ್ಷಣಕ್ಕೆ ಕೊಡಬೇಕಾದ ಮಹತ್ವವನ್ನು ನಮ್ಮ ದೇಶದಲ್ಲಿ ಸ್ವಾತಂತ್ರ್ಯಾ ಪೂರ್ವದಲ್ಲೂ, ಸ್ವಾತಂತ್ರ್ಯಾನಂತರದಲ್ಲೂ ಉದ್ದೇಶಪೂರ್ವಕವಾಗಿಯೇ ಸರ್ವರಿಗೂ ಒದಗಿಸದೆ, ನಮ್ಮ ದೇಶದಲ್ಲಿ ಅಕ್ಷರ-ಜ್ಞಾನ, ಶಿಕ್ಷಣ-ಕೌಶಲ್ಯವನ್ನು ಕೆಲವರ ಸ್ವತ್ತಾಗಿಸಿಕೊಂಡು ಗುತ್ತಿಗೆಯಲ್ಲಿ ಹಿಡಿದಿಟ್ಟುಕೊಳ್ಳಲಾಗಿದೆ. ಹೀಗಾಗಿ ಬಹು ಸಂಖ್ಯಾತ ಜನತೆ ಇಂದು ಕೂಡ ಅಕ್ಷರ ಜ್ಞಾನದಿಂದ ವಂಚಿತಾಗಿರುವವರ ಸಂಖ್ಯೆ ನಮ್ಮ ರಾಜ್ಯದಲ್ಲೇ ಒಂದುವರೆ ಕೋಟಿಗಿಂತ ಹೆಚ್ಚಿದ್ದಾರೆ.
ಇಂತಹ ಪರಿಸ್ಥಿತಿಯಿಂದ ಹೊರಬರುವ ನಿಟ್ಟಿನಲ್ಲಿ 1966ರಲ್ಲಿ ‘ಕೊಠಾರಿ ಅಯೋಗ’ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿತ್ತು. ಮುಖ್ಯವಾಗಿ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಶೇ.10 ಹಾಗೂ ರಾಷ್ಟ್ರಿಯ ಉತ್ಪನ್ನದಲ್ಲಿನ ಶೇ.30 ಹಣವನ್ನು ರಷ್ಟನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು. ಹಾಗೆಯೇ ರಾಜ್ಯ ಸರ್ಕಾರಗಳು ಶೇ.30ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕು (ಪ್ರಸಕ್ತ 2014-15ರ ಬಜೆಟ್ ನಲ್ಲಿ ಶಿಕ್ಷಣಕ್ಕೆ ಶೇ.15ರಷ್ಟನ್ನು ಮಾತ್ರ ರಾಜ್ಯ ಸರ್ಕಾರ ಮೀಸಲಿಟ್ಟಿದೆ.) ಎಂಬಿತ್ಯಾದಿ ಶಿಕ್ಷಣದ ಪ್ರಾಮುಖ್ಯತೆಯ ಅಂಶಗಳ ಬಗ್ಗೆ ಕೊಠಾರಿ ಆಯೋಗ ಒತ್ತಿ ಹೇಳಿತ್ತು. ಆದರೆ ಕೇಂದ್ರ-ರಾಜ್ಯ ಸರ್ಕಾರಗಳು ಈ ಶಿಪಾರಸ್ಸಿಗೆ ವಿರುದ್ಧವಾದ ನೀತಿಗಳನ್ನೇ ಅನುಸರಿಕೊಂಡು ಬರುತ್ತಿವೆ.
ಪರಿಣಾಮವಾಗಿ ಇಂದು ಪ್ರಾಥಮಿಕ ಪೂರ್ವ ಶಿಕ್ಷಣದಿಂದ ಉನ್ನತ ಶಿಕ್ಷಣ ಮತ್ತು ವೃತ್ತಿ ಶಿಕ್ಷಣ ಖಾಸಗಿ ಶಿಕ್ಷಣೋಧ್ಯಮಿಗಳ ಪಾಲಾಗಿದೆ. ಸಹಿ ಮಾಡುವುದಕ್ಕೆ ಬರುವವರನ್ನು ಅಕ್ಷರಸ್ತರೆಂದು ಪರಿಗಣಿಸಿರುವ ನಮ್ಮ ದೇಶದಲ್ಲಿ, 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿರುವ ಒಟ್ಟು 61130704 ಜನಸಂಖ್ಯೆಯಲ್ಲಿ ಪುರುಷರು 31057742, ಮಹಿಳೆಯರು 30072962 ರಷ್ಟಿದ್ದಾರೆ. ಇವರಲ್ಲಿ 2011ರ ಜನಗಣತಿಯಂತೆ ರಾಜ್ಯದಲ್ಲಿ ಶೇ.75.60 ರಷ್ಟು ಅಕ್ಷರಸ್ತರು ಮತ್ತು ಇನ್ನೂ ಶೇ.24.40 ರಷ್ಟು ಅನಕ್ಷರಸ್ತರಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 68.86 ಮಾತ್ರ ಅಕ್ಷರಸ್ತರಾಗಿದ್ದಾರೆ. ಇನ್ನೂ ಶೇ.31.14 ರಷ್ಟು ಗ್ರಾಮೀಣ ಜನತೆ ಅನಕ್ಷರಸ್ತರಾಗಿಯೇ ಉಳಿದಿದ್ದಾರೆ. ಅದೇ ರೀತಿಯಲ್ಲಿ ಒಟ್ಟು ರಾಜ್ಯದಲ್ಲಿರುವ ಮಹಿಳೆಯರಲ್ಲಿ ಶೇ.68ರಷ್ಟು ಮಾತ್ರ ಅಕ್ಷರಸ್ತರಾಗಿದ್ದಾರೆ. ಉಳಿದ 31.87 ರಷ್ಟು ಮಹಿಳೆಯರು ಅನಕ್ಷರಸ್ತರಾಗಿ ಉಳಿದಿದ್ದಾರೆ. ಇವರಲ್ಲಿ ಗ್ರಾಮೀಣ ಮಹಿಳೆಯರು ಅದರಲ್ಲೂ ದಲಿತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.
2011ರ ಜನಗಣತಿಯ ಪ್ರಕಾರ ಸಾಕ್ಷರತೆ, ಕರ್ನಾಟಕ ಆರ್ಥಿಕ ಸಮೀಕ್ಷೆ 2013-14
ಕರ್ನಾಟಕ                                              ಭಾರತ                                    ಗ್ರಾಮೀಣ ಕರ್ನಾಟಕ                               ನಗರ ಕರ್ನಾಟಕ
ಒಟ್ಟು                   75.60                                              74.04                                                       68.86                                                               86.21
ಪುರುಷರು            82.85                                               82.14                                                        77.92                                                              90.54
ಮಹಿಳೆಯರು       68.13                                               65.46                                                         59.60                                                                81.71
 
ಇನ್ನು 0-6 ವರ್ಷದಲ್ಲಿನ ಮಕ್ಕಳು 68,55,801 ಮಕ್ಕಳಿದ್ದಾರೆ. ಅಂದರೆ ಒಟ್ಟು ಜನ ಸಂಖ್ಯೆಯಲ್ಲಿ 11.21 ರಷ್ಟಿದ್ದಾರೆ. ಇವರೆಲ್ಲಾರಿಗೂ ಪ್ರಾಥಮಿಕ ಶಿಕ್ಷಣ ಒಗದುವ ಖಾತ್ರಿ ಇಲ್ಲ. ಯಾಕೆಂದರೆ ಕನಿಷ್ಠ ಮೂಲಭೂತವಾದ ಸೌಕರ್ಯಗಳಿಲ್ಲದ ಅಂಗನವಾಡಿ ಕೇಂದ್ರಗಳು ಬಡ ಮಕ್ಕಳ ಭವಿಷ್ಯ ರೂಪಿಸುವ ಸಾಮಾಥ್ರ್ಯವನ್ನು ಕಳೆದುಕೊಂಡಿವೆ. ಇನ್ನೂ ಬಿಸಿಊಟ ಯೋಜನೆಗಳನ್ನು ಸರ್ಕಾರೇತರ ಸಂಸ್ಥೆಗಳಿಗೆ ಕೊಡಲಾಗುತ್ತಿದೆ. ಪ್ರಾಥಮಿಕ ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ದತ್ತು ಕೊಡುವುದು. ‘ಶಿಕ್ಷಣ ಹಕ್ಕು ಕಾಯ್ದೆ’ಯನ್ನು ಸಮರ್ಪಕವಾಗಿ ಜಾರಿಗೆ ತರುವ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಹಕ್ಕು ಕಾಯ್ದೆಯ ಕಾನೂನುಗಳನ್ನು ಉಲ್ಲಂಘಿಸುತ್ತಿವೆ. ಪೂರ್ವ ಪ್ರಾಥಮಿಕ ಶಿಕ್ಷಣದಲ್ಲೂ ಕೂಡ ಪೋಷಕರಿಂದ ಡೋನೇಷನ್ ಹೆಸರಿನಲ್ಲಿ ಹಣ ಲೂಟಿ ಮಾಡಲು ಹುಚ್ಚಣಬೆಯಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿವೆ. ಪ್ರಾಥಮಿಕ ಶಿಕ್ಷಣವನ್ನು ಆಳುವ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದಕ್ಕೆ ಉದಾ: 38 ಸಾವಿರ ಪ್ರಾಥಮಿಕ ಶಿಕ್ಷಕರ ಹುದ್ದೆಗಳನ್ನು ತುಂಬಿಕೊಳ್ಳದೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ತಿಂಗಳಿಗೆ ಕೇವಲ ರೂ.6000 ಸಂಬಳ ನಿಗದಿ ಮಾಡಲಾಗಿದೆ. ಜೊತೆಗೆ ಖಾಸಗಿ ಎಜನ್ಸಿಗಳಿಂದಲೂ ಅತ್ಯಲ್ಪ ವೇತನ ನೀಡಿ ದುಡಿಸಿಕೊಳ್ಳಲಾಗುತ್ತಿದೆ.

ಒಟ್ಟಾರೆ ವ್ಯವಸ್ಥಿತವಾಗಿ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ನಾಶ ಮಾಡುತ್ತಾ ಶಿಕ್ಷಣ ಖಾಸಗೀಕರಣಕ್ಕೆ ಕೊಡುತ್ತಿರುವ ಆಧ್ಯತೆಯನ್ನು ಗಮನಿಸಬೇಕಾದರೆ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅಂಕಿ ಅಂಶಗಳನ್ನು ಗಮನಿಸಬೇಕು. 2012-2013ರ ಶೈಕ್ಷಣಿಕ ವರ್ಷದಲ್ಲಿ ಒಟ್ಟು 60036 ಕಿರಿಯ-ಹಿರಿಯ ಪ್ರಾಥಮಿಕ ಶಾಲೆಗಳಿವೆ. ಇವುಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ಶಾಲೆಗಳು ಸೇರಿ ಸರ್ಕಾರಿ ಶಾಲೆಗಳು 45383 ಇನ್ನೂ ಖಾಸಗಿ ಪ್ರಾಥಮಿಕ ಶಾಲೆಗಳು 14653 ರಷ್ಟಿವೆ. ಅದೇ ರೀತಿಯಲ್ಲಿ ಒಟ್ಟು ಇರುವ 14194 ಪ್ರೌಢ ಶಾಲೆಗಳಲ್ಲಿ ಸರ್ಕಾರಿ ಶಾಲೆಗಳು 4988 ಮಾತ್ರ. ಉಳಿದಂತೆ 9206 ಖಾಸಗಿ ಪ್ರೌಢ ಶಾಲೆಗಳಿವೆ. ಕರ್ನಾಟಕದಲ್ಲಿ ನಿರ್ವಹಣಾ ವ್ಯವಸ್ಥೆವಾರು ಶಾಲೆಗಳ ಸಂಖ್ಯೆ (2012-13)ರ ಪಟ್ಟಿಯನ್ನು ನೋಡಿದರೆ ಸರ್ಕಾರಿ ಪ್ರಾಥಮಿಕ ಶಾಲೆಗಳು ಮಾತ್ರ ಹೆಚ್ಚಿರುವುದರಿಂದ ನೋಡುತ್ತೇವೆ. ಆದರೆ ಪ್ರೌಢಶಾಲೆಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ವ್ಯತ್ಯಾಸದಲ್ಲಿ ಖಾಸಗಿ ಶಾಲೆಗಳೇ ಹೆಚ್ಚಿರುವುದರಿಂದ ವಿದ್ಯಾರ್ಥಿಗಳು ಖಾಸಗಿ ಶಾಲೆಗಳನ್ನು ಅವಲಂಭಿಸುವ ಪರಿಸ್ಥಿತಿ ಇದೆ. ಈ ಖಾಸಗಿ ಶಾಲೆಗಳ ಶಿಕ್ಷಣ ಸಂಸ್ಥೆಗಳು, ಶಿಕ್ಷಣವನ್ನು ಸೇವಾ ಮನೋಭಾವದಿಂದ ನೀಡಲು ಸ್ಥಾಪನೆಗೊಂಡಿಲ್ಲ. ಬದಲಿಗೆ ಶಿಕ್ಷಣವನ್ನು ಮಾರಾಟ ಮಾಡುವ ಶಿಕ್ಷಣೋಧ್ಯಮಗಳಾಗಿವೆ. ಈ ಖಾಸಗಿ ಶಿಕ್ಷಣೋಧ್ಯಮಗಳಲ್ಲಿ ದುಡಿಯುವವರಿಗೆ ಉದ್ಯೋಗ ಭದ್ರತೆ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಯುವ ಶಿಕ್ಷಕ ಮತ್ತು ಶಿಕ್ಷಕೇತರರನ್ನು ಕೂಡ ಅಮಾನವೀಯ ಶೋಷಿಸಲಾಗುತ್ತಿದೆ.
ಕರ್ನಾಟಕ ಸರಕಾರದ ಅಂಕಿ ಅಂಶಗಳು 2011-2012 ರಂತೆ, 6-14 ವರ್ಷದ ಮಕ್ಕಳು 7890997 ರಷ್ಟಿದ್ದಾರೆ. ಸರ್ವ ಶಿಕ್ಷಣ ಅಭಿಯಾನದ ವರದಿಯಂತೆ 7-14 ವರ್ಷದ ಶಾಲೆ ಬಿಟ್ಟ ಮಕ್ಕಳು 51994 ಮಕ್ಕಳು. ಶಾಲೆಗೆ ದಾಖಲಾಗಿ ಬಿಟ್ಟವರು, ದಾಖಲಾಗದವರ ಈ ಸಂಖ್ಯೆಕ್ಕಿಂತ ಅಧಿಕವಾಗಿದ್ದಾರೆ. ರಾಜ್ಯ ಸರ್ಕಾರದ ಇನ್ನೊಂದು ಮಾಹಿತಿ ಪ್ರಕಾರ 1,11, 218 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇನ್ನೊಂದೆಡೆ 6ಲಕ್ಷಕ್ಕಿಂತ ಹೆಚ್ಚು ಬಾಲಕಾರ್ಮಿಕರಿದ್ದಾರೆ. ಇನ್ನೂ ಮೂಲಭೂತ ಸೌಕರ್ಯಗಳ ಕೊರತೆ. ಖಾಸಗಿ ಸಂಸ್ಥೆಯ ಸಮೀಕ್ಷೆ ಪ್ರಕಾರ ಶೇ.58ರಷ್ಟು ಶಾಲೆಗಳಿಗೆ ಶೌಚಾಲಯಗಳಿಲ್ಲ. ಟ್ಯೂಷನ್ ಹಾವಳಿಯಂತೂ ಬಡ ವಿದ್ಯಾರ್ಥಿ – ಪೋಷಕರಿಗೆ ರಣ್ಣ ಹದ್ದುಗಳಾಗಿವೆ. ಇಂತಹ ಶೋಷಣೆಗಳ ಬಗ್ಗೆ ಸರ್ಕಾರಗಗಳು ಜಾಣ ಕಿವುಡುತನ ಮತ್ತು ಕುರುಡುತನವನ್ನು ಪ್ರದರ್ಶಿಸುತ್ತಿವೆ. ಇಂಗ್ಲೀಷ್ ಮಾಧ್ಯಮದ ಹೆಸರಿಲ್ಲೂ ಪೊಷಕರಿಂದ ಹಣ ಲೂಟಿ. ಇಂತಹ ದುಸ್ಥಿತಿಯಲ್ಲಿರುವ ನಮ್ಮ ಪ್ರಾಥಮಿಕ ಶಿಕ್ಷಣದಿಂದ ಸಮಾನ ಗುಣ ಮಟ್ಟದ ಶಿಕ್ಷಣವನ್ನು ಸರ್ವರಿಗೂ ಕಡ್ಡಾವಾಗಿ ನೀಡುವುದು ಸಾಧ್ಯವೇ?
ಪದವಿ ಪೂರ್ವ ಮತ್ತು ಪದವಿ ಶಿಕ್ಷಣ:
ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ವ್ಯವಸ್ಥಿತವಾಗಿ ಖಾಸಗೀಕರಣದ ಹಾದಿಯಲ್ಲಿಯೇ ಕೊಂಡ್ಯೊಲಾಗುತ್ತಿದೆ. ಉದಾ: 4,676 ಪದವಿ ಪೂರ್ವ ಕಾಲೇಜುಗಳಲ್ಲಿ 1,216 ಮಾತ್ರ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿರುವುದು. ಉಳಿದಂತೆ 3,460 ಖಾಸಗಿ ಪದವಿ ಪೂರ್ವ ಕಾಲೇಜುಗಳಿವೆ. ಅದೇ ರೀತಿಯಲ್ಲಿ ಪ್ರಸಕ್ತವರ್ಷದಲ್ಲಿ ಒಟ್ಟು 10,36,803ರಷ್ಟು ಪದವಿ ಪೂರ್ವ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಈ ವಿಭಾಗದಲ್ಲಿ 4,000ಕ್ಕಿಂತ ಹೆಚ್ಚು ಭೋದಕ ಮತ್ತು ಭೋದಕೇತರ ಹುದ್ದೆಗಳು ಖಾಲಿ ಇವೆ. ವಿದ್ಯಾರ್ಥಿಗಳ ಅನುಪಾತ ಮತಿತ್ತರ ಇತರೆ ವಿಷಯಗಳನ್ನಾಧರಿಸಿ 15 ಸಾವಿರ ಹುದ್ದೆಗಳ ಅವಶ್ಯಕತೆ ಇದೆ.
ಅದೇ ರೀತಿಯಲ್ಲಿ 2013-14 ರಲ್ಲಿ 362 ಸರ್ಕಾರಿ ಪದವಿ ಕಾಲೇಜುಗಳು ಮತ್ತು 315 ಖಾಸಗಿ ಪದವಿ ಕಾಲೇಜುಗಳಿದ್ದು 5,19,830 ಪದವಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಈ ವಿಭಾಗದಲ್ಲಿ 5 ಸಾವಿರ ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಉಪನ್ಯಾಸಕ ಹುದ್ದೆಗಳು ಮತ್ತು 2 ಸಾವಿರ ಭೋದಕೇತರ ಹುದ್ದೆಗಳು ಖಾಲಿ ಇವೆ. ಉದ್ಯೋಗ ಅಭದ್ರತೆಯಲ್ಲಿರುವ 10,600 ಅತಿಥಿ ಉಪನ್ಯಾಸಕರಿಂದಲೇ ಪದವಿ ಶಿಕ್ಷಣ ನಡೆಯುತ್ತದೆಂಬ ಪರಿಸ್ಥಿತಿ ಇದೆ. ಪದವಿ ಶಿಕ್ಷಣದಲ್ಲೂ ಖಾಸಗಿ ಶಿಕ್ಷಣ ಸಂಸ್ಥೆಗಳ ಧನದಾಹಿ ನೀತಿಗಳಿಂದ ಬಿಸಿನೆಸ್ ಮ್ಯಾನೇಜ್ಮೆಂಟ್, ಹೊಟೆಲ್ ಮ್ಯಾನೇಜ್ಮೆಂಟ್, ಆರ್ಕಿಟೆಕ್ಟ್, ಫ್ಯಾಷನ್ ಮುಂತಾದ ವ್ಯಾವಹಾರಿಕ ಕೋರ್ಸುಗಳಿಗೆ ಆದ್ಯತೆ ಕೊಡಲಾಗುತ್ತಿದೆ. ಇದರಿಂದಾಗಿ ಮೂಲ ಶಿಕ್ಷಣಕ್ಕೆ ಆಧ್ಯತೆ ಇಲ್ಲದಾಗಿದೆ. ಇನ್ನೂ ಶೈಕ್ಷಣಿಕ ಕ್ಷೇತ್ರದ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹತ್ತಿಕ್ಕಲಾಗಿದೆ. ಸುಪ್ರೀಂ ಕೋರ್ಟ್ ನಿದೇರ್ಶನದಂತೆ ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನು ನಡೆಸಲಾಗುತ್ತಿಲ್ಲ. ಇನ್ನೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರದ ಕೊರತೆ ಹಾಗೂ ಶೈಕ್ಷಣಿಕ ಸೌಲಭ್ಯಗಳಿಲ್ಲದೆ ಬಡ ದಲಿತ ಹಿಂದುಳಿದ ವಿದ್ಯಾಥಿಗಳು ಪರಿತಪಿಸುವಂತಾಗಿದೆ.
ಉನ್ನತ ಶಿಕ್ಷಣ ಉಳ್ಳವರ ಸ್ವತ್ತು:
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 22 ಖಾಸಗಿ ವಿ.ವಿ.ಗಳಿಗೆ ಪರವಾನಗಿಯನ್ನು ನೀಡಿ ತಾನು ಶಿಕ್ಷಣೋಧ್ಯಮಿಗಳ ಪರವೆಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ. 23 ಸರ್ಕಾರಿ ವಿ.ವಿ.ಗಳಿದ್ದು, 1 ಲಕ್ಷ ವಿದ್ಯಾರ್ಥಿಗಳು ಉನ್ನತ ಆಧ್ಯಯನ ಮಾಡುತ್ತಿದ್ದಾರೆ. ಖಾಸಗಿ ವಿಶ್ವ ವಿದ್ಯಾಲಯಗಳ ಮುಂದೆ ಸರ್ಕಾರಿ ವಿ.ವಿ.ಗಳು ತೋಳಗಳ ಮುಂದೆ ಕುರಿಗಳು ನಿಂತಂತಾಗಿದೆ. ಸರ್ಕಾರಿ ವಿಶ್ವ ವಿದ್ಯಾಲಯಗಳು ಮೂಲಭೂತವಾಗಿ ಬದ್ಧತೆಯನ್ನೆ ಕಳೆದುಕೊಳ್ಳುತ್ತಿವೆ. ವಿ.ವಿ.ಗಳ ಮೌಲ್ಯವಂತೂ ಮೂಲೆ ಗುಂಪಾಗಿದೆ. ಶೈಕ್ಷಣಿಕ ಭ್ರಷ್ಟಾಚಾರ ಎಲ್ಲೆ ಮೀರಿದೆ. ಇನ್ನೂ ಖಾಸಗಿ ವಿಶ್ವ ವಿದ್ಯಾಲಯಗಳಲ್ಲಿ ಶುಲ್ಕ ನಿಗದಿ, ಕೋರ್ಸುಗಳ ನಿರ್ವಹಣೆ, ಪರೀಕ್ಷೆಗಳು ಮತ್ತು ಅಂಕಪಟ್ಟಿ ವಿತರಣೆ ಮುಂತಾದವುಗಳ ಬಗ್ಗೆ ಶೈಕ್ಷಣಿಕ ನೀತಿ ನಿರೂಪಕಗಳನ್ನು ಸ್ವಾಯತ್ತ ಪದವಿ ಕಾಲೇಜುಗಳು ಮತ್ತು ಖಾಸಗಿ.ವಿ.ವಿ.ಗಳೇ ನಿರ್ಧರಿಸುತ್ತವೆ. ಹೀಗಾಗಿ ಸ್ವಜಪಕ್ಷಪಾತ, ಶೈಕ್ಷಣಿಕ ಭ್ರಷ್ಟಾಚಾರ, ಗುಣಮಟ್ಟದ ಶಿಕ್ಷಣ ಮೌಲ್ಯ ಕುಸಿತ ಮುಂತಾದವು ಮಿತಿ ಮಿರುತ್ತಿವೆ. ಕೇವಲ ಹಣ ಮಾಡುವ ದಂಧೆಯೇ ಖಾಸಗಿ ವಿ.ವಿ.ಗಳ ನೀತಿಯಾಗಿವೆ. ವಿಶ್ವ ವಿದ್ಯಾಲಯಗಳ ಪರಿಕಲ್ಪನೆಯನ್ನೇ ನಾಶ ಮಾಡಲಾಗುತ್ತಿದೆ. ಒಟ್ಟಾರೆ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹತ್ತಿಕ್ಕಲಾಗಿದೆ. ರಾಜ್ಯದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಧಿಕ್ಕರಿಸಿ ಕಾಲೇಜು ಮತ್ತು ವಿ.ವಿ.ಗಳಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ನಡೆಸುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಸಂಘಟನೆಗಳಿಗೆ ಮಾನ್ಯತೆಯೂ ಇಲ್ಲ. ಹೆಸರಿಗೆ ತರಗತಿಯ ಪ್ರತಿನಿಧಿಗಳೆಂದು ಗುರುತಿಸಿ ಅವರಿಂದ ಕಾಲೇಜಿಗೆ ಸಂಬಂಧ ಪಟ್ಟ ಕೆಲಸ-ಕಾರ್ಯಗಳನ್ನು ಮಾಡಿಸಿಕೊಳ್ಳುವ ಪರಿಸ್ಥಿತಿ ಇದೆ. ಹೀಗಾಗಿ ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆಯಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅವಕಾಶವನ್ನೇ ನೀರಾಕರಿಸಲಾಗಿದೆ. ಇದೇ ಪರಿಸ್ಥಿತಿ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳದ್ದು ಆಗಿದೆ. ಇಂತಹ ಪರಿಸ್ಥಿತಿಗೆ ಮೂಲ ಕಾರಣ 1980ರ ನಂತರದಲ್ಲಿ ಜಾರಿಗೆ ತರಲಾದ ಹೊಸ ಆರ್ಥಿಕ ನೀತಿಗಳಿಂದಾದ ಫಲವಾಗಿದೆ.

ಇಂತಹ ದುಸ್ಥಿತಿಯಿಂದ ಹೊರಬರಬೇಕಾದರೆ ಎಲ್ಲಾ ಹಂತದಲ್ಲೂ ಪ್ರಜಾಸತ್ತಾತ್ಮಕ ನೆಲೆಗಟ್ಟಿನ್ನಲ್ಲಿ ಪ್ರತಿರೋಧವನ್ನು ಒಡ್ಡುವ ಪರಿಸ್ಥಿತಿಗಾಗಿ ಕೈಜೋಡಿಸದಿದ್ದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಉಚ್ಛಜಾತಿಯವರಿಗೆ ಮಾತ್ರ ಅಂದಿನ ಶಿಕ್ಷಣ ಮೀಸಲಿದ್ದಂತೆ, ಇಂದಿನ ಶಿಕ್ಷಣ ಇಂದು ಹಣ ಉಳ್ಳವರಿಗೆ ಮಾತ್ರ ಮೀಸಲು ಎಂಬ ಅಲಿಖಿತ ಕಾನೂನು ಸಂಪೂಣ ಜಾರಿಯಾಗುವ ಸಮಯ ದೂರವಿಲ್ಲವೆಂಬ ಸ್ಥಿತಿ ಎದುರಾಗಲಿದೆ.
 

‍ಲೇಖಕರು avadhi

27 April, 2014

1 Comment

  1. Pramod

    ಜ್ವಲ೦ತ ಸಮಸ್ಯೆಗ ಬಗ್ಗೆ ಇನ್ನೂ ಜಾಸ್ತಿ ಪ್ರಚಾರ ಸಿಗಬೇಕು. ಆದರೆ ಮಾಧ್ಯವಗಳೇ ಇ೦ತಹ ವರ್ಚಸ್ಸಿನ ಹಿ೦ದೆ ಇದ್ದಾಗ ಜನರ ಕೂಗು ಎಲ್ಲಿಗೂ ತಲುಪುವುದಿಲ್ಲ.
    ಮಧ್ಯಮ ಹಾಗು ಕೆಳ ವರ್ಗವನ್ನು ಹರಿದು ಹ೦ಚಿ ತಿನ್ನುವ ಬಕಾಸುರಗಳಲ್ಲಿ ಶಾಲೆ ಮೊದಲನೆಯದ್ದು.
    ತ೦ದೆ ತಾಯಿಯ ಆದಾಯ, ಪದವಿ ಮೇಲೆ ಮಕ್ಕಳನ್ನು ಶಾಲೆಗೆ ಸೇರಿಸುವ ಅಲಿಖಿತ ನಿಮಯಾವಳಿ ಎಲ್ಲಾ ಖಾಸಗಿ ಸ೦ಸ್ಥೆಗಳಲ್ಲಿ ಕಡ್ಡಾಯವಾಗಿ ಪಾಲಿಸುತ್ತಿವೆ. ಇದರ ನಡುವೆ, ಜನರ ಕೂಗು ಬರಿ ಅರಣ್ಯ ರೋದನವಷ್ಟೇ.
    ಶಿಕ್ಷಣದ ಗುಣಮಟ್ಟ ಪಾತಳಕ್ಕೆ ಇಳಿದಿದೆ. ಮೌಲ್ಯಾಧರಿತ ಶಿಕ್ಷಣ ಶೂನ್ಯ. ಆದರೆ ಮಕ್ಕಳಿಗೆ ಟಾಬ್ಲೆಟ್, ಲಾಪ್ಟೋಪ್ ಕಡ್ದಾಯ.
    ಸರಕಾರದ, ಜನರ ದೂರದರ್ಶಿ ಮನೋಭಾವದ ಕೊರತೆ ಇದು.
    ಮು೦ದಿನ ಜನಾ೦ಗ ಅಮೆರಿಕನ್ನರ(ದುಡ್ಡಿದ್ದವರ) ಗುಲಾಮರಾಗುವರಲ್ಲಿ ಸ೦ದೇಹವೇ ಇಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading