ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂಥ ಮಹನೀಯರು; ನಮ್ಮ ಹೆಚ್ ಎಲ್ ಕೆ

ಎನ್ ಆರ್ ವಿಶುಕುಮಾರ್ 

ಬಯಲು ಸೀಮೆ ಮಂಡ್ಯದ ಪ್ರಗತಿಪರ ಮನಸ್ಸಿನ ಹಿರಿಯ ಜೀವ ಹೆಚ್ . ಎಲ್ ಕೇಶವಮೂರ್ತಿ ನಿಧನರಾಗಿದ್ದರೆ .  78 ವರ್ಷಗಳ ಸಾರ್ಥಕ ಬದುಕನ್ನು ಮುಗಿಸಿ ಎಲ್ಲರಿಂದಲೂ ಒಳ್ಳೆಯವರೆನ್ನಿಸಿಕೊಂಡು ಈ ಲೋಕದಿಂದ ತೆರಳಿದ್ದಾರೆ.

ನಾಗಮಂಗಲ ತಾಲ್ಲೂಕಿನ ಹೆರಗನಹಳ್ಳಿ ಇವರ ಹುಟ್ಟೂರು. ‘ಜಾನಪದ ಲೋಕ’ದ ಖ್ಯಾತಿಯ ಹೆಚ್ ಎಲ್ ನಾಗೇಗೌಡರ ಹುಟ್ಟೂರು ಕೂಡ ಇದೇ . ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ಆ ಕಾಲಕ್ಕೆ ಇಂಜಿನೀಯರ್ ಪಾಸು ಮಾಡಿದ್ದ ಕೇಶವಮೂರ್ತಿಯವರು ಮನಸ್ಸು ಮಾಡಿದ್ದರೆ ಸರ್ಕಾರೀ ಕೆಲಸಕ್ಕೆ ಸೇರಿ ಪಿ ಡಬ್ಲ್ಯೂ ಡಿ ಇಲಾಖೆಯಲ್ಲಿ ದೊಡ್ಡ ಹುದ್ದೆಗೇರಿ ಕೈ ತುಂಬಾ ಕಾಸು ಮಾಡಿಕೊಂಡು ಐಶಾರಾಮಿ ಜೀವನ ನಡೆಸಿ ಜೈ ಜೈ ಎಂದು ಜಮ್ಮೆನ್ನುವ ಜೀವನ ನಡೆಸಬಹುದಿತ್ತು.

ಆದರೆ ಆಗ ಕೇಶವ ಮೂರ್ತಿಯವರ ಹೆಸರು ಸರ್ಕಾರೀ ಕಡತದಲ್ಲಿ, ಹೆಚ್ಚು ಎಂದರೆ ಕೆಲವು ಕಂಟ್ರಾಕ್ಟರ್ ಗಳ ಬಾಯಲ್ಲಿ  ಉಳಿಯಬಹುದಿತ್ತು. ಆದರೆ ಇಂದು ಅವರು ಮಂಡ್ಯದ ಪ್ರಗತಿಪರ ಹೋರಾಟಗಾರರ ಕಣ್ಮಣಿಯಾಗಿದ್ದಾರೆ. ನಾಡಿನ ಪ್ರಜ್ಞಾವಂತರ ಮನಸ್ಸಿನಲ್ಲಿ  ನೆಲೆಯೂರಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದು ಹೆಚ್ ಎಲ್ ಕೆ ಯವರ ಹೆಗ್ಗಳಿಕೆ.

ಅವರ ಹೆಮ್ಮೆಯ ನೆನಪಿಗಾಗಿ ಒಂದೆರಡು ಪ್ರಸಂಗಗಳನ್ನು ಇಲ್ಲಿ ಹಂಚಿ ಕೊಳ್ಳುತ್ತೇನೆ .

ಹೆಚ್ ಎಲ್ ಕೆ ಮಂಡ್ಯದ ಮಾಜಿ ಶಾಸಕರಾದ ಪ್ರತಿಷ್ಠಿತ ಮನೆತನದ ಜಿ.ಎಸ್  ಬೊಮ್ಮೇಗೌಡರ ಅಳಿಯ. ಅದನ್ನೆಂದೂ ಅವರು ಎಲ್ಲಿಯೂ ಬಳಸಿಕೊಳ್ಳಲಿಲ್ಲ. ಅಳುವ ವರ್ಗದ ಅಳಿಯನಾಗಿದ್ದು ಕೊಂಡು ಆ ವರ್ಗದ ವಿರುದ್ಧವೇ ಅವರು ಸದಾ ಹೋರಾಡುತ್ತಿದ್ದರು. ಇವರು ಮಂಡ್ಯದಲ್ಲಿ ತಳ ಸಮುದಾಯಗಳ ಹೋರಾಟಗಳಿಗೆ ಬೆನ್ನೆಲುಬಾಗಿ ಅವರಿಗೆ ಮಾರ್ಗದರ್ಶಿಗಳೂ ಸಹ ಆಗಿದ್ದರು.

ಮಂಡ್ಯದಲ್ಲಿ ಯಾವುದೇ ಜನಪರ ಹೋರಾಟ ಇವರ ನೇತೃತ್ವ ಇಲ್ಲದೇ ಆರಂಭವಾಗುತ್ತಲೇ ಇರಲಿಲ್ಲ. ರೈತ ಚಳವಳಿ ಇರಲಿ, ದಲಿತ ಹೋರಾಟವಿರಲಿ, ಕಾವೇರಿ ವಿವಾದವಿರಲಿ ಅಲ್ಲಿ ಹೆಚ್ ಎಲ್ ಕೆ ಇರಲೇಬೇಕು. ಅಷ್ಟರ ಮಟ್ಟಿಗೆ ಅವರು ಮಂಡ್ಯದ ಜನಪರ ಹೋರಾಟಗಳಿಗೆ ಅನಿವಾರ್ಯವಾಗಿದ್ದರು.

ಬೆಸಗರ ಹಳ್ಳಿ ರಾಮಣ್ಣ, ಹೆಚ್ ಎಲ್ ಕೆ ಜೋಡಿ ಮಂಡ್ಯದ  ಜನಪರ ಹೋರಾಟಗಳ ಬಂಡಿಯನ್ನು ಜೋಡೆತ್ತಿನಂತೆ ಹತ್ತಾರು ವರ್ಷಗಳ ಕಾಲ ಎಳೆದಿದ್ದಾರೆ. ಮಂಡ್ಯದ ಇಂತಹ ಹೆಮ್ಮೆಯ ಇಬ್ಬರು ಮಹನೀಯರು ನನ್ನ ಬೆಳವಣಿಗೆಯ ಆರಂಭದ ದಿನಗಳಲ್ಲಿ ನನಗೆ ಮಾರ್ಗದರ್ಶನ ನೀಡಿದ್ದು ನನಗೆ ಈಗಲೂ ನೆನಪಿದೆ.

ರಾಮಣ್ಣನವರಂತೂ ನನ್ನನ್ನು ತಮ್ಮ ದೊಡ್ಡ ಮಗನಂತೆ ನೋಡಿಕೊಂಡಿದ್ದಾರೆ. ಹೆಚ್ ಎಲ್ ಕೆ ಅವರು ನನ್ನ ‘ಕನ್ನಂಬಾಡಿ’ ಪತ್ರಿಕೆಗೆ ಆರಂಭದ ದಿನಗಳಲ್ಲಿ ಹಾಸ್ಯದ ಅಂಕಣ ಬರೆದುಕೊಟ್ಟಿದ್ದರು.ಅವರು ಸದಾ ಹಸನ್ಮುಖಿ. ಎಲ್ಲರಿಗೂ ಒಳ್ಳೆಯ ಗೆಳೆಯರಾಗಿದ್ದರು.

ಹೆಚ್ ಎಲ್ ಕೆ ಹೋರಾಟದ ಬದುಕನ್ನೇ ಆರಿಸಿಕೊಂಡಿದ್ದರೂ ಸಹ ಸರ್ಕಾರಿ ಅಧಿಕಾರಿಗಳ ಜೊತೆ ಒಳ್ಳೆಯ ಒಡನಾಟವನ್ನು ಇಟ್ಟುಕೊಂಡಿದ್ದರು. ಮಂಡ್ಯದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಕಿರಿಯ  ಅಧಿಕಾರಿಗಳೆಲ್ಲರೂ ಸಹ ಇಂದಿಗೂ ಹೆಚ್ ಎಲ್ ಕೆ ಯವರ ಬಗ್ಗೆ ಮೆಚ್ಚುಗೆಯ, ಮಧುರ ನೆನಪುಗಳನ್ನು ಉಳಿಸಿಕೊಂಡಿದ್ದಾರೆ.

ಇವರ ನಿಧನದ ಸುದ್ದಿಯನ್ನು ನಾನು ಮೆಸೇಜ್ ಮಾಡಿದ  ಮರುಕ್ಷಣವೇ ರಾಜ್ಯದ ಅಭಿವೃದ್ಧಿ ಆಯುಕ್ತರಾದ ಟಿ.ಎಂ.  ವಿಜಯ ಭಾಸ್ಕರ್ ಅವರು ಇಂಥ ಪ್ರಗತಿಪರ ಚಿಂತಕರ ನಿಧನದ ಸುದ್ದಿ ಕೇಳಿ ನನಗೆ ತುಂಬಾ ನೋವಾಗಿದೆ. ಅವರ ಆತ್ಮಕ್ಕೆ ಚಿರ ಶಾಂತಿ ದೊರೆಯಲಿ ಎಂದು ಸಂತಾಪ ಸೂಚಿಸಿದರು.

ಇಪ್ಪತೈದು ವರ್ಷಗಳ ಹಿಂದೆ ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿ ಈಗ ರಾಜ್ಯದ ಉನ್ನತ ಹುದ್ದೆಯಲ್ಲಿರುವ ಇವರು ಈಗಲೂ ಹೆಚ್ ಎಲ್ ಕೆ ಅವರ ಜನಪರ ಚಿಂತನೆ ಬಗ್ಗೆ ಅಭಿಮಾನ ಹೊಂದಿದ್ದಾರೆ.

ಹೆಚ್ ಎಲ್ ಕೆ ಸಾವಿನ ಸುದ್ದಿ ಕೇಳಿದ ಮರುಕ್ಷಣವೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಬಸವರಾಜ ಹೂಗಾರ  ದೂರದ ಧಾರವಾಡದಿಂದ ರಾತ್ರಿ ಪ್ರಯಾಣಿಸಿ ಬಂದಿದ್ದರು. ಇವರು ಸಹ ಮಂಡ್ಯದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾಗ ಹೆಚ್ ಎಲ್ ಕೆ ಒಡನಾಟದಲ್ಲಿ ಬಂದಿಯಾಗಿ ಅವರ ಆಪ್ತ ಬಳಗದಲ್ಲಿ ಸೇರಿಹೋಗಿದ್ದರು. ಹೀಗೆ ಅವರು ಅಧಿಕಾರಿ ವಲಯದಲ್ಲಿ ಕೂಡ ಆಪ್ತ ಬಳಗವನ್ನು ಸೃಷ್ಟಿಸಿಕೊಂಡಿದ್ದರು.

ಇನ್ನು ಕೌಟುಂಬಿಕ ಬದುಕಿನ ಬಗ್ಗೆ ಹೇಳುವುದಾದರೆ ನಮ್ಮ, ನಮ್ಮ ಕುಟುಂಬಗಳನ್ನ ಹೇಗೆ ಸಲಹಬೇಕು ಎನ್ನುವುದನ್ನು ನಾವು ಹೆಚ್ ಎಲ್ ಕೆ ಅವರಿಂದ ನೋಡಿ ಕಲಿಯಬೇಕು. ತಮ್ಮ ಸಹೋದರರ ಏಳಿಗೆಗಾಗಿ ಅವರುತಮ್ಮ ಜೀವನವನ್ನು ಅಕ್ಷರಷಃ ತೇದಿದ್ದಾರೆ. ಅವರು ತಮ್ಮ ಸೋದರರನ್ನು ಹಾಗೂ ಅವರ ಕುಟುಂಬ ನಿರ್ವಹಣೆಯನ್ನು ಹಚ್ಚಿಕೊಳ್ಳದೆ  ತಮ್ಮ ಪಾಡಿಗೆ ತಾವಿದ್ದಿದ್ದರೆ ತಮ್ಮ ಬದುಕಿನಲ್ಲಿ ಹೆಚ್ ಎಲ್ ಕೆ ಆರಾಮವಾಗಿ ಇರಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ . ಕುಟುಂಬದ ಹಿರಿಯ ಮಗನಾಗಿ ತನ್ನ ಸಹೋದರರ ಬದುಕನ್ನು ರೂಪಿಸುವುದು ನನ್ನದೇ ಕರ್ತವ್ಯ ಎಂದು ಭಾವಿಸಿ ಅವರು ತಮ್ಮ ಸಹೋದರರ ಎಲ್ಲ ಕಷ್ಟಗಳನ್ನು ತಮ್ಮ ಮೈ ಮೇಲೆ ಎಳೆದುಕೊಂಡು ಅದನ್ನು ನಿವಾರಿಸುವಲ್ಲಿ ಬಳಲಿ ಬಸವಳಿದು ಹೋದರು.

ಹೀಗೆ ಇತರರಿಗೆ ನಾನು ಮಾರ್ಗದರ್ಶಿಯಾಗಿರಬೇಕು ಎಂದು ಅವರು ಸದಾ ಚಡಪಡಿಸುತ್ತಾ ತಮ್ಮ ಬದುಕನ್ನು ತೆರೆದ ಪುಸ್ತಕದಂತೆ ಇಟ್ಟಿದ್ದರು. ತಮ್ಮ ಪ್ರೀತಿಯ ಮಗ ಮದುವೆಯಾದ ಅಲ್ಪಕಾಲದಲ್ಲೇ ಅಕಾಲಿಕವಾಗಿ ಅಸು ನೀಗಿದಾಗ ಹೆಚ್ ಎಲ್ ಕೆ ಅಕ್ಷರಶಃ ಕುಸಿದು ಹೋದರು. ಆದರೆ ಎದೆಗುಂದಲಿಲ್ಲ. ಸ್ವಲ್ಪ ದಿನಗಳ ನಂತರ ಚೇತರಿಸಿಕೊಂಡು  ತನ್ನ ಮಗನ ಅಕಾಲಿಕ ಸಾವಿನಿಂದಾಗಿ ತನ್ನ ಸೊಸೆಯ ಬದುಕು ಬರಡಾಗಬಾರದೆಂದು ನಿರ್ಧರಿಸಿ ತಾವೇ ಮುಂದೆ ನಿಂತು ತಮ್ಮ ಸೊಸೆಗೆ ವರನನ್ನು ಹುಡುಕಿ ಮರು ಮದುವೆ ಮಾಡಿದರು. ಇಂಥ ಮಹನೀಯರು ; ನಮ್ಮ ಹೆಚ್ ಎಲ್ ಕೇಶವ ಮೂರ್ತಿ.

ಇನ್ನು ಇವರ ಬಗ್ಗೆ ಬರವಣಿಗೆ ಮುಂದುವರಿಸುವ ಅಗತ್ಯವಿಲ್ಲ. ಅವರಿಗೆ ಸಂದಿರುವ ಪ್ರಶಸ್ತಿ, ಬಿರುದು ಬಾವಲಿಗಳೆಲ್ಲ ಇವರ ಈ ನಡೆಯ ಮುಂದೆ ನಾಚಿ ತಲೆ ತಗ್ಗಿಸಬೇಕು. ಇಂತಹ ಹಿರಿಯ ಜೀವದ ಜೊತೆ ಒಡನಾಡಿದ ನಾವೇ ಧನ್ಯರು .

‍ಲೇಖಕರು avadhi

31 March, 2017

2 Comments

  1. RAGHAVENDRA RAO H S

    ನನಗೆ ವೈಯಕ್ತಿಕವಾಗಿ ಗೊತ್ತಿರದಿದ್ದರೂ ಕೇಶವಮೂರ್ತಿಯವರದು ಅತ್ಯಂತ ಪ್ರಾಮಾಣಿಕವೂ ದಿಟ್ಟವೂ ಆಗಿದ್ದ ಸಾರ್ವಜನಿಕ ಬದುಕು. ಯಾರನ್ನೂ ಸ್ಪೇರ್ ಮಾಡದಿದ್ದ ಲಂಕೇಶ್ ಅವರು ಕೂಡ ಇವರ ಬಗ್ಗೆ ನೆಗೆಟಿವ್ ಆಗಿ ಬರೆದಿರಲಿಲ್ಲ. ಅಧಿಕಾರಸ್ಥಾನಗಳನ್ನು ಹುಡುಕಿಕೊಂಡು ಹೋಗದ, ಪಬ್ಲಿಸಿಟಿಯನ್ನು ಬಯಸದ ಇಂಥವರಿಂದ ಸಾರ್ವಜನಿಕ ಜೀವನ ಆರೋಗ್ಯಕರವಾಗುತ್ತದೆ.
    ಎಚ್.ಎಸ್.ಆರ್.

  2. C P Nagaraja

    ಹಣತೆಯನ್ನು ಹಚ್ಚಿದರು
    ಪತ್ರಕರ್ತ ಮತ್ತು ವಿಡಂಬನ ಸಾಹಿತ್ಯದ ಬರಹಗಾರರೆಂದು ಖ್ಯಾತಿಯನ್ನು ಪಡೆದಿದ್ದ ಎಚ್.ಎಲ್.ಕೇಶವಮೂರ್ತಿಯವರು ಕಳೆದ ನಲವತ್ತು ವರ್ಷಗಳಿಂದ ಮಂಡ್ಯಜಿಲ್ಲೆಯಲ್ಲಿ ನಡೆಯುತ್ತಿದ್ದ ಜನಪರವಾದ ಎಲ್ಲಾ ಬಗೆಯ ಚಳುವಳಿಗಳಲ್ಲಿಯೂ ಕ್ರಿಯಾಶೀಲರಾಗಿ ಭಾಗವಹಿಸುತ್ತಾ , ಜನಸಮುದಾಯಗಳು ತಂತಮ್ಮ ಜಾತಿಧರ್ಮದೇವರುಗಳ ಸೀಮಿತವಾದ ಎಲ್ಲೆಗಳಿಂದ ಹೊರಬಂದು ಬಾಳಬೇಕೆಂಬ ಅರಿವನ್ನು ಮೂಡಿಸುತ್ತಿದ್ದರು.
    ರೈತರ , ದಲಿತರ , ಅಲ್ಪಸಂಖ್ಯಾತರ ಮತ್ತು ಮಹಿಳೆಯರ ಮೇಲೆ ನಡೆಯುತ್ತಿದ್ದ ಹಲ್ಲೆಗಳ ವಿರುದ್ಧ ಶಾಂತಿಯುತವಾದ ಸತ್ಯಾಗ್ರಹದ ಪ್ರತಿಭಟನೆಗಳನ್ನು ಸಂಘಟಿಸಿ , ನೆಮ್ಮದಿಯಿಂದ ಕೂಡಿದ ಸಹಬಾಳ್ವೆಯು ಸಮಾಜಕ್ಕೆ ಅಗತ್ಯವೆಂಬ ಎಚ್ಚರವನ್ನು ಜನಮನದಲ್ಲಿ ಬಿತ್ತುತ್ತಿದ್ದರು. ಅಬ್ಬರದ ದನಿಯಿಲ್ಲದ , ಗಂಭೀರವಾದ ನಡೆನುಡಿಯ ಪ್ರೊ.ಕೇಶವಮೂರ್ತಿಯವರು ತಮ್ಮ ಬರಹ , ಮಾತು ಮತ್ತು ಕ್ರಿಯೆಗಳಿಂದ ಹಚ್ಚಿದ ಅರಿವಿನ ಹಣತೆಯು ಜನಮನದಲ್ಲಿ ಎಂದೆಂದಿಗೂ ಬೆಳಗುತ್ತಿರಲೆಂದು ಬಯಸುತ್ತೇನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading