ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘‘ಇಂಗ್ಲಿಷ್ ಎಂದರೆ ವಿದ್ಯೆ. ವಿದ್ಯೆ ಅಂದರೆ ಇಂಗ್ಲಿಷ್’’ ಎಂಬ ಮೂಢನಂಬಿಕೆ – ಚಂದ್ರಶೇಖರ ಕಂಬಾರ

ವಾರ್ತಾ ಭಾರತಿ ವಿಶೇಷಾಂಕಕ್ಕೆ ಕಂಬಾರರು ಬರೆದ ಲೇಖನ

ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣಗೊಳಿಸಿ

ಚಂದ್ರಶೇಖರ ಕಂಬಾರ

ಎರಡು ಸಂಸ್ಕೃತಿಗಳು ಪರಸ್ಪರ ಸಂಪರ್ಕಗೊಂಡಾಗ ಎರಡರ ಮಧ್ಯೆ ಸಮಾನವಾದ ಕೊಡಕೊಳ್ಳುವ ವ್ಯವಹಾರ ನಡೆದರೆ ಇಬ್ಬರಿಗೂ ಬೆಳವ, ಬೆಳೆಸುವ ಅವಕಾಶ ಇರುತ್ತದೆ. ಹಿಂದೆ ಮುಸ್ಲಿಮರು, ಕ್ರಿಶ್ಚಿಯನ್ನರು ಇಲ್ಲಿಗೆ ಬಂದಾಗ ನಡೆದದ್ದು ಹಾಗೆ. ಆದರೆ ಬ್ರಿಟಿಷರು ತಮ್ಮ ಬಡಿವಾರದ ಭಾಷೆಯೊಂದಿಗೆ ಇಲ್ಲಿಗೆ ಬಂದಾಗ ಹಾಗಾಗಲಿಲ್ಲ. ಇಲ್ಲಿಯ ನೆಲವನ್ನ ಗೆದ್ದು ಸಂಪತ್ತು ಲೂಟಿ ಮಾಡುವ ಉದ್ದೇಶವಾದ್ದರಿಂದ ಅವರು ಇಲ್ಲಿ ಮಾಡಿದ ಮೊದಲನೇ ಕೆಲಸವೆಂದರೆ- ಇಲ್ಲಿಂದ ಪ್ರಜೆಗಳಲ್ಲಿ ಕೀಳರಿಮೆಯನ್ನು ಸೃಷ್ಟಿಸಿದ್ದು.!

ಇಲ್ಲಿ ಶಿಕ್ಷಣವಿಲ್ಲ, ಕೋರ್ಟ್ ಕಚೇರಿಗಳಿಲ್ಲ, ಸ್ಕೂಲ್ ಕಾಲೇಜುಗಳಿಲ್ಲ ಇತ್ಯಾದಿ ಅನೇಕ ಇಲ್ಲಗಳನ್ನು ಎತ್ತಿ ತೋರಿಸಿದರು. ಜೊತೆಗೆ ಜಾತಿಗಳಿವೆ, ಮೂಢನಂಬಿಕೆಗಳಿವೆ ಇತ್ಯಾದಿ ಸಂಗತಿಗಳನ್ನು ತೋರಿಸಿ ನಾವು ನಾಚಿಕೆಯಿಂದ ಮುದುಡಿಕೊಳ್ಳುವಂತೆ ಮಾಡಿದರು. ಜೊತೆಗೆ ತಮ್ಮಲ್ಲಿ ಇರುವ ಶ್ರೀಮಂತ ಸಾಹಿತ್ಯ, ವಿದ್ಯೆ ಮುಂತಾದ ಆಧುನಿಕ ನಾಗರಿಕತೆಯ ಪ್ರದರ್ಶನ ಮಾಡಿ ‘‘ನಮ್ಮ ಸ್ಕೂಲುಗಳ ಒಂದು ಕಪಾಟಿನಲ್ಲಿರುವಷ್ಟು ಪುಸ್ತಕಗಳ ಜ್ಞಾನಕ್ಕೆ ನಿಮ್ಮ ಇಡೀ ದೇಶದ ಎಲ್ಲ ಜ್ಞಾನ ಸಮ!’’ ಎಂದು ಹೇಳಿದರು. ಹೇಳಿ ‘‘ಇಂಗ್ಲಿಷ್ ಎಂದರೆ ವಿದ್ಯೆ. ವಿದ್ಯೆ ಅಂದರೆ ಇಂಗ್ಲಿಷ್’’ ಎಂಬ ಮೂಢನಂಬಿಕೆಯನ್ನು ನಮ್ಮ ಆಳದಲ್ಲಿ ಬಿತ್ತಿ ಹೋದರು. ಈಗ ಅದೇ ಕೀಳರಿಮೆಯಿಂದ ದೇಶ ಬಳಲುತ್ತಿದೆ. ಅವರು ಹೋದ ಮೇಲೆ ನಮ್ಮಲ್ಲಿದ್ದ ಗುಲಾಮಗಿರಿ ಇನ್ನಷ್ಟು ಆಳವಾಗಿ ಬೇರೂರಿ ಇಂಗ್ಲಿಷಿನ ದಾಸಾನುದಾಸರಾಗಿದ್ದೇವೆ. ನಮಗ್ಯಾರಿಗೂ ಆತ್ಯಹತ್ಯೆ ಮಾಡಿಕೊಳ್ಳುತ್ತಿದ್ದೇವೆಂಬುದೂ ತಿಳಿಯದಾಗಿದೆ.

ನಮ್ಮ ಮಕ್ಕಳಿಗೆ ನಾವೀಗ ಎರಡು ಬಗೆಯ ಶಿಕ್ಷಣ ಕೊಡುತ್ತಿದ್ದೇವೆ. ಒಂದು : ಎಲ್ಲ ಸುಸಜ್ಜಿತ ಸೌಕರ್ಯಗಳುಳ್ಳ ಖಾಸಗಿ ಶಾಲೆಗಳಲ್ಲಿ ಕೊಡುತ್ತಿರುವ ಶಿಕ್ಷಣ. ಎರಡು: ಸೌಲಭ್ಯಗಳೇ ಇಲ್ಲದ ಶಿಕ್ಷಕರೂ ಇಲ್ಲದ, ಇದ್ದರೂ ಅಗತ್ಯವಿರುವಷ್ಟು ಶಿಕ್ಷಕರಿಲ್ಲದ, ಗಾಳಿ ಮಳೆ ಬೆಳಕುಗಳಿಗೆ ಉದಾರವಾಗಿ ತೆರೆದುಕೊಂಡ, ಹೆಣ್ಣು ಮಕ್ಕಳಿಗೆ ಕೂಡ ಅಗತ್ಯವಾದ ಬಾತ್‌ರೂಮಿಲ್ಲದ ಹೊಲಸು ಕೊಚ್ಚೆಯಿಂದ ಕೂಡಿದ ಸರಕಾರಿ ಶಾಲೆಗಳಲ್ಲಿ ಕೊಡುವ ಶಿಕ್ಷಣ. ಸಹಜವಾಗಿ ಉಳ್ಳವರು ಸುಸಜ್ಜಿತ ಖಾಸಗಿ ಶಾಲೆಗಳಲ್ಲೂ, ಬಡವರು ಸರಕಾರಿ ಶಾಲೆಗಳಲ್ಲೂ ಮಕ್ಕಳನ್ನು ಓದಿಸುತ್ತಿದ್ದಾರೆ. (ಇದಕ್ಕೆ ಅಪವಾದವಾಗಿ ಒಳ್ಳೆಯ ಸರಕಾರಿ ಶಾಲೆಗಳೂ ಹುಡುಕಿದರೆ ಸಿಕ್ಕಬಹುದು.

ಮೇಲ್ಜಾತಿಯವರಂತೆ ಕೆಳಜಾತಿಯಲ್ಲಿ ಹುಟ್ಟುವವರ ದೈವವೂ ಹುಟ್ಟಿನಲ್ಲಿಯೇ ತೀರ್ಮಾನವಾಗಿ ಬಿಡುತ್ತದೆ. ಮುಂದೆ ‘ಕೆಳಜಾತಿ’ಯವರ ಅಂದರೆ ಬಡವರ ಸುತ್ತ ಮೇಲ್ಜಾತಿಯವರು ಅದೃಶ್ಯ ವಲಯವೊಂದನ್ನು ಕಟ್ಟಿ, ನಾಚಿಕೆ, ಕೀಳರಿಮೆಗಳಿಂದ ಕ್ರೂರವಾದ ಭಯದವರೆಗೆ ಅನೇಕ ಹಿಂಜರಿಕೆಗಳನ್ನ ಹೆಣೆದು ಬಡವರನ್ನು ನಿಯಂತ್ರಿಸುತ್ತಾರೆ. ಇಂಥ ಮೇಲ್ಜಾತಿಯ ಕೃಪಾಕಟಾಕ್ಷದಲ್ಲೇ ಬೆಳೆಯುವ, ಬೆಳೆಸುವ ಪ್ರವೃತ್ತಿಯುಳ್ಳ ಪ್ರಜೆಗಳನ್ನು ಪ್ರಜ್ಞಾಪೂರ್ವಕವಾಗಿ ಬೆಳೆಸುವುದು ಇದ್ಯಾವ ಸೀಮೆಯ ಪ್ರಜಾಪ್ರಭುತ್ವ? ಪ್ರಜೆಗಳೆಲ್ಲಾ ಸಮಾನರೆನ್ನುವ ನಾವು ಹುಟ್ಟಿನಿಂದಲೇ ಉದ್ದೇಶಪೂರ್ವಕ ಎರಡು ವರ್ಗಗಳನ್ನು ಸೃಷ್ಟಿ ಮಾಡುತ್ತಿಲ್ಲವೇ?

ಸದರಿ ತರತಮ ನಾಶವಾಗ ಬೇಕಾದರೆ ಒಂದೋ- ಸರಕಾರಿ ಶಾಲೆಗಳಿಗೆ ಖಾಸಗಿ ಶಾಲೆಗಳಲ್ಲಿರುವ ಎಲ್ಲ ಸೌಲಭ್ಯಗಳನ್ನು ತಕ್ಷಣವೇ ನೀಡಿ ಎಲ್ಲರಿಗೂ ಸಮಾನ ಶಿಕ್ಷಣ ಸಿಗುವಂತೆ ಮಾಡುವುದು. ಆದರೆ ಹೀಗೆಂದು ಕೋರ್ಟು ಬೇಕಾದಷ್ಟು ಸಲ ಸರಕಾರಕ್ಕೆ ತಾಕೀತು ಮಾಡಿದರೂ ಪರಿಣಾಮವೇನೂ ಆಗಿಲ್ಲ. ತನ್ನ ತಪ್ಪನ್ನು ಮರೆಮಾಚಲು ಸರಕಾರ ಇದೀಗ ಕೆಲವು ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನುಳ್ಳ ಸುಮಾರು ನಾಲ್ಕು ಸಾವಿರ ಶಾಲೆಗಳನ್ನು ಹೆಚ್ಚು ಹುಡುಗರಿರುವ ಶಾಲೆಗೆ ಸ್ಥಳಾಂತರಿಸಿತು! ನಿಜ ಏನೆಂದರೆ ಸದರಿ ಶಾಲೆಗಳಲ್ಲಿ ಕಡಿಮೆ ವಿದ್ಯಾರ್ಥಿಗಳಿರುವುದಕ್ಕೆ ಕಾರಣ, ಸೌಲಭ್ಯಗಳಿಲ್ಲದಿರುವುದು! ಇದು ಅಸಂಗತವಲ್ಲವೇ?

ನಾನು ಹೇಳುವುದಿಷ್ಟು: ಸರಕಾರಕ್ಕೆ ರಾಜಕಾರಣಿಗಳಿಗೆ ನಿಜವಾಗಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ 1 ರಿಂದ 10ನೆ ತರಗತಿಯವರೆಗೆ ಏಕೂರೂಪ ಶಿಕ್ಷಣ ಇರಬೇಕು. ಅಂದರೆ ಒಂದರಿಂದ ಹತ್ತನೆ ತರಗತಿಯವರೆಗೆ ಶಿಕ್ಷಣವನ್ನು ಖಾಸಗಿಯವರಿಂದ ತಪ್ಪಿಸಿ ಸರಕಾರವೇ ತನ್ನ ಸ್ವಾಧೀನಕ್ಕೆ ತಗೋಬೇಕು. ಮತ್ತು ಆ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ನಡೆಯಬೇಕು. ಇಂಗ್ಲಿಷ್ ಮಾಧ್ಯಮದ ಮೂಲಕ ಅಲ್ಲ.

ಇಂಗ್ಲಿಷ್ ಶಿಕ್ಷಣ ಅತ್ಯಗತ್ಯವೆಂದು ಬಡ ಪಾಲಕರಿಗೆ ಯಾಕೆ ಅನಿಸುತ್ತಿದೆ? : ಕನ್ನಡಕ್ಕೆ ಉದ್ಯೋಗ ನೀಡುವ ಶಕ್ತಿಯಿಲ್ಲ ಎನ್ನುವುದು ಅವರ ವಾದ. ಇದನ್ನೇ ಮುಂದೆ ಮಾಡಿಕೊಂಡು ಲಾಭಕೋರ ಖಾಸಗಿ ಸಂಸ್ಥೆಗಳು ನಿಮ್ಮ ಅಗತ್ಯವನ್ನು ನಾವು ಪೂರೈಸುತ್ತೇವೆ ಬನ್ನಿ ಎನ್ನುತ್ತಿವೆ. ಆದರೆ ವಸ್ತುಸ್ಥಿತಿ ಏನೆಂದರೆ ಉದ್ಯೋಗ ನೀಡುವುದು ಸರಕಾರದ ಕರ್ತವ್ಯ. ಅಮೆರಿಕದ ಅಧ್ಯಕ್ಷರು ಚುನಾವಣೆಯ ಕಾಲಕ್ಕೆ ನೀಡಿದ್ದ ಭರವಸೆಯನ್ನು ಈಡೇರಿಸಲು ಕೆಲವು ಲಕ್ಷ ಉದ್ಯೋಗಗಳ ಅಗತ್ಯವಿತ್ತು. ಅದಕ್ಕಾಗಿ ಭಾರತಕ್ಕೆ ದಯಮಾಡಿಸಿದರು. ಅವರ ಆಗಮನದಿಂದಲೇ ಆನಂದ ತುಂದಿಲರಾಗಿ ರೋಮಾಂಚಿತರಾದ ನಮ್ಮ ಪ್ರಧಾನ ಮಂತ್ರಿಗಳು ಅವರು ಕೇಳಿದಷ್ಟು ಉದ್ಯೋಗಗಳನ್ನು ಕೊಟ್ಟು ಕಳುಹಿಸಿದರು.

ಆದರೆ ಅಂಥ ಘನ ಸರಕಾರಕ್ಕೆ ನಮ್ಮ ದೇಶದಲ್ಲೂ ನಿರುದ್ಯೋಗವಿದೆ. ನಮ್ಮ ಮಕ್ಕಳಿಗೂ ಇಂಥ ಉದ್ಯೋಗಗಳ ಕೊರತೆಯಿದೆ ಎಂದು ಇಂದಿಗೂ ಅನ್ನಿಸಿಲ್ಲ. ಕರ್ನಾಟಕವನ್ನೇ ತಗೊಳ್ಳಿ: ಕೈಗಾರಿಕೆಗಳ ಸ್ಥಾಪನೆಗಾಗಿ ಸ್ವದೇಶಿ ವಿದೇಶಿ ಸಾವ್ಕಾರರನ್ನು ಆಮಂತ್ರಿಸಿ ಸಾವಿರಾರು ಎಕರೆ ಜಮೀನು ನೀಡಿ ವಿದ್ಯುತ್ತು, ಸಾರಿಗೆ, ನೀರು ಇನ್ನೂ ಅನೇಕ ಸೌಲಭ್ಯಗಳನ್ನು ನೀಡುವುದು ಯಾವ ಪುರುಷಾರ್ಥಕ್ಕಾಗಿ? ಇಷ್ಟು ನೀಡಿ ಕನ್ನಡಿಗರಿಗೆ ಇಂತಿಷ್ಟು ಕೆಲಸ ಕೊಡಬೇಕೆಂದು ಕರಾರು ಹಾಕಿದರ? ಇದನ್ನು ಹೇಳುವ ಮಹಿಷಿ ವರದಿ ಎಲ್ಲಿದೆ? ಭೂಮಿ ಸೀಮೆ ಕಳೆದುಕೊಳ್ಳುವ ಕನ್ನಡಿಗರಿಗೆ ಕೆಲಸ ಕೇಳುವ ಹಕ್ಕಿಲ್ಲವೇ ? ಮಕ್ಕಳಿಗೆ ಇಂಗ್ಲಿಷ್ ಕಲಿಸಿ ಅಮೆರಿಕದ ಭಾವಿ ನಾಗರಿಕರಾಗಲು ತಕ್ಕ ಪ್ರಜೆಗಳನ್ನು ಮಾಡುವ ಕನಸಿನಲ್ಲೇ ಇರುವ ಪಾಲಕರಿಗೆ ಇದು ಗೊತ್ತಿಲ್ಲವೇ? ಇಂಥವರಿಗೆ, ಇಂಗ್ಲಿಷ್ ಕಲಿತು ಉದ್ಧಾರ ಮಾಡಬೇಕೆನ್ನುವವರಿಗೆ ಏನು ಹೇಳೋಣ?

‍ಲೇಖಕರು G

30 October, 2012

1 Comment

  1. Anand

    “ಉದ್ಯೋಗ ನೀಡುವುದು ಸರ್ಕಾರದ ಕೆಲಸ, ನಿರುದ್ಯೋಗ ಭತ್ಯೆ ನೀಡುವುದುದ್ ಸರ್ಕಾರದ ಕೆಲಸ, ಆಸ್ಪತ್ರೆ, ಶಾಲೆ ಕಾಲೇಜು ಎಲ್ಲಾನೂ ಸರ್ಕಾರ ನಡೆಸಬೇಕು, ಕಾರ್ಖಾನೆಗಳನ್ನು ಸರ್ಕಾರ ನಡೆಸಬೇಕು, ನಮ್ಮ ಬದುಕೆಲ್ಲಾ ಸರ್ಕಾರದ ಕೈಲಿರಬೇಕು” ಎನ್ನುವ ಮನಸ್ಥಿತಿಯೂ ಅಸಮಾನ ಶಿಕ್ಷಣ ವ್ಯವಸ್ಥೆಯಷ್ಟೇ ಅಪಾಯಕಾರಿ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading