ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂಗ್ಲಿಶ್ ಭಾಷೆಯ ಮಾನಸಿಕ ಗುಲಾಮರಾಗಿದ್ದಾರೆ

ಮಾತೃಭಾಷಾಮಾಧ್ಯಮ

ಜೆ.ಆರ್.ಲಕ್ಷ್ಮಣರಾವ್

ವಿಷಯಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಮತ್ತು ಮನಸ್ಸಿನಲ್ಲಿರುವುದನ್ನು ತಿಳಿಯ ಹೇಳುವುದಕ್ಕೆ – ಗ್ರಹಿಕೆ ಮತ್ತು ಅಭಿವ್ಯಕ್ತಿಗೆ – ಮಾತೃಭಾಷೆ ಅತ್ಯುತ್ತಮ ಮಾಧ್ಯಮವೆಂಬು ದು ಶಿಕ್ಷಣ ತಜ್ಞರೆಲ್ಲರ ಅಭಿಪ್ರಾಯ. ನಮ್ಮ ದೇಶದಲ್ಲಿ ಶಿಕ್ಷಣ ಸುಧಾರಣೆಗಾಗಿ ಆಗಾಗ ನೇಮಕಗೊಂಡಿರುವ ಆಯೋಗಗಳೆಲ್ಲವೂ ಈ ಮಾತನ್ನು ಒತ್ತಿ ಹೇಳಿವೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸ್ವಾತಂತ್ರ್ಯಾ ನಂತರ ಆಡಳಿತದ ಜವಾಬ್ದಾರಿ ವಹಿಸಿಕೊಂಡ ಅಂದಿನ ನಮ್ಮ ನೇತಾರರಿಗೆ ಈ ಮೂಲಭೂತ ತತ್ವದ ಅರಿವಿತ್ತು. ಆದುದರಿಂದ ಪ್ರೌಢಶಾಲೆಗಳವರೆಗೆ ಮಾತ್ರ ಲಭ್ಯವಿದ್ದ ಮಾತೃಭಾಷಾಮಾಧ್ಯಮವನ್ನು ಕಾಲೇಜುಗಳಿಗೆ ಮತ್ತು ವಿಶ್ವವಿದ್ಯಾನಿಲಯಗಳಿಗೆ ವಿಸ್ತರಿಸುವ ಪ್ರಯತ್ನಗಳು ಮೊದಲ ಎರಡು ಮೂರು ದಶಕಗಳಲ್ಲಿ ನಡೆದವು. ವಿಜ್ಞಾನ, ತಂತ್ರಜ್ಞಾನ ಮತ್ತು ಮಾನವಿಕ ಶಾಸ್ತ್ರಗಳ ಆ ಮಟ್ಟದ ಪ್ರೌಢ ಪಠ್ಯಪುಸ್ತಕಗಳನ್ನು ಹೊರತರಲು ಯೂನಿವರ್ಸಿಟಿ ಗ್ರಾಂಟ್ ಕಮಿಷನ್ನವರು ಎಲ್ಲ ವಿಶ್ವವಿದ್ಯಾನಿಲಯಗಳಿಗೂ ಧನಸಹಾಯ ನೀಡುತ್ತಿದ್ದರು. ಅದರ ಫಲವಾಗಿ ಹಲಕೆಲವು ಪಠ್ಯಪುಸ್ತಕಗಳೂ ಪ್ರಕಟಗೊಂಡವು.

ಅಲ್ಲಿಂದ ಈಚಿನ ಎರಡು ಮೂರು ದಶಕಗಳಲ್ಲಿ ಪರಿಸ್ಥಿತಿ ಗುರುತಿಸಲಾಗದಷ್ಟು ಬದಲಾಗಿಹೋಗಿದೆ. ತ್ಯಾಗಕ್ಕೆ ಸಿದ್ಧರಾಗಿ ಸೇವಾಮನೋಭಾವದಿಂದ ರಾಜಕೀಯ ಪ್ರವೇಶಿಸಿದ ಅಂದಿನ ನಮ್ಮ ನೇತಾರರು ಕಣ್ಮರೆಯಾದರು. ಬಹುತೇಕ ಸ್ವಾರ್ಥಕ್ಕಾಗಿ ಅಧಿಕಾರಲಾಲಸೆಯಿಂದ ರಾಜಕೀಯಕ್ಕೆ ಇಳಿದವರೇ ನಮ್ಮ ಇಂದಿನ ನೇತಾರರು. ಅಂದಿನವರು ರಾಜಕೀಯವಾಗಿ ನಮ್ಮನ್ನು ದಾಸ್ಯದಿಂದ ಬಿಡುಗಡೆ ಮಾಡಿದರು. ಇಂದಿನವರು, ಅದರಲ್ಲೂ ಮುಖ್ಯವಾಗಿ ನಗರವಾಸಿಗಳಾದ ಮಧ್ಯಮ ವರ್ಗದವರು ಮಾನಸಿಕ ದಾಸ್ಯವನ್ನು ತೆರೆದತೋಳುಗಳಿಂದ ಸ್ವಾಗತಿಸಿ ಇಂಗ್ಲಿಶ್ ಭಾಷೆಯ ಮಾನಸಿಕ ಗುಲಾಮರಾಗಿದ್ದಾರೆ. ನಮ್ಮ ಮೇಲೆ ಇಂಗ್ಲಿಶ್ ಮಾಧ್ಯಮವನ್ನು ಹೇರಿದ ಆಂಗ್ಲರು ಅದನ್ನು ಪ್ರೌಢಶಾಲೆಯ ಹಂತದಲ್ಲಿ ತಂದರು. ಇಂಗ್ಲಿಶ್ ಭಾಷೆಯ ಪರಿಚಯವನ್ನು ಮಕ್ಕಳು ತಕ್ಕಮಟ್ಟಿಗೆ ಪಡೆಯಲೆಂದು ಪ್ರಾಥಮಿಕ ಹಂತದಲ್ಲಿ ಅದಕ್ಕೆ ಅವಕಾಶ ಕಲ್ಪಿಸಿ ಅನಂತರ ಅದನ್ನು ಜಾರಿಗೆ ತಂದರು. ಇಂದಿನ ನಮ್ಮ ಆಂಗ್ಲಪ್ರೇಮಿಗಳಾದರೋ ತಮ್ಮ ಸ್ವಾಮಿನಿಷ್ಠೆ ಮೆರೆಸುವ ತವಕದಲ್ಲಿ ಪ್ರಾಥಮಿಕ ಹಂತದಲ್ಲಿಯೇ ಇಂಗ್ಲಿಷ್ಮಾಧ್ಯಮವನ್ನು ತುರುಕಿದರು. ಅದರಿಂದ ತೃಪ್ತರಾಗದೆ ಶಿಶುವಿಹಾರದ ತಂಡಗಳ ಮೇಲೂ ಅದನ್ನು ಹೇರಿದ್ದಾರೆ.

ವಿಪ್ರೊ ಕಂಪೆನಿ ಮತ್ತು ಎಜಿಕೇಶನಲ್  ಇನಿಶಿಯೇಟಿವ್ ನವರು ನಡೆಸಿದ ಸಮೀಕ್ಷೆಯ ಫಲಿತಾಂಶ ನಮ್ಮ ರಾಜಕೀಯ ಧುರೀಣರ ಕಣ್ಣು ತೆರೆಸುವ ಸಂಭವ ಕಡಮೆ. ಮಾತೃಭಾಷೆಯ ಮೇಲಿನ ಪ್ರೇಮದಿಂದ ಕನ್ನಡದ ಏಳಿಗೆಗಾಗಿ ದುಡಿಯುತ್ತಿರುವ ನಮ್ಮ ಮುಂದಾಳುಗಳ ಕಣ್ಣನ್ನು ಅದು ತೆರೆಸಿ ನಾವು ಮುಂದಿಡುತ್ತಿರುವ ಬೇಡಿಕೆಗಳಲ್ಲಿ ಯಾವುದಕ್ಕೆ ಆದ್ಯತೆ ನೀಡಬೇಕೆಂಬುದನ್ನು ಅದು ಮನವರಿಕೆ ಮಾಡಿಕೊಡುವುದೆಂಬುದು ಒಂದು ಅಭಿಲಾಷೆ.

ಸರ್ಕಾರೀ ಕಚೇರಿಗಳ ಮುಂದೆ, ಸಂಘ ಸಂಸ್ಥೆಗಳ ಮುಂದೆ, ಅಂಗಡಿಗಳ ಮುಂದೆ, ಎಲ್ಲ ಕಡೆಯೂ ಕನ್ನಡ ನಾಮಫಲಕಗಳಿರಬೇಕು. ಅಂಚೆಕಚೇರಿಗಳು, ಬ್ಯಾಂಕುಗಳು ಮುಂತಾದ ಸ್ಥಳಗಳಲ್ಲಿ ತುಂಬಬೇಕಾದ ಅರ್ಜಿ ನಮೂನೆಗಳು ಕನ್ನಡದಲ್ಲಿರಬೇಕು. ಪ್ರತಿಯೊಂದು ಚಿತ್ರಮಂದಿರವೂ ವಾರದಲ್ಲಿ ಇಂತಿಷ್ಟು ದಿನಗಳಾದರೂ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಬೇಕು. ಇವೇ ಮುಂತಾದ ಬೇಡಿಕೆಗಳು ಸಮರ್ಥನೀಯ, ಆದರೆ ಮುಖ್ಯವಲ್ಲ. ಅವುಗಳಿಂದ ಕನ್ನಡ ಜನಕ್ಕಾಗುವ ಒಳಿತು ಸೀಮಿತ. ಆದುದರಿಂದ ಅವುಗಳಿಗಾಗಿ ದೊಡ್ಡ ಹೋರಾಟ ನಡೆಸಿ ನಮ್ಮ ಶಕ್ತಿಯನ್ನು ವ್ಯಯ ಮಾಡಬೇಕಾಗಿಲ್ಲ. ಕನ್ನಡ ಭಾಷೆ ಅಭಿಜಾತ ಭಾಷೆ ಎಂದು ಘೋಷಿಸಬೇಕೆಂಬ ಬೇಡಿಕೆ ಭಾವಾತ್ಮಕವಾದುದು. ನಮ್ಮ ಸ್ವಾಭಿಮಾನಕ್ಕಾಗಿ ಮುಂದಿಡುವಂಥದು. ಅದರಿಂದ ಕನ್ನಡದ ಕೆಲಸಕ್ಕೆ ಅಷ್ಟಿಷ್ಟು ಧನಸಹಾಯವೂ ಒದಗಬಹುದು. ಈ ಎಲ್ಲ ಬೇಡಿಕೆಗಳಿಗಿಂತ ಆದ್ಯತೆ ನೀಡಬೇಕಾದ ಬೇಡಿಕೆ ಎಂದರೆ ನಮ್ಮ ಮಕ್ಕಳಿಗೆ ಎಲ್ಲ ಹಂತಗಳಲ್ಲೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ದೊರಕಬೇಕೆಂಬುದು. ಈ ಕೂಡಲೇ ಅದನ್ನು ಪ್ರಾಥಮಿಕ ಹಂತದಲ್ಲಿ ತಂದು, ಆದಷ್ಟು ಬೇಗ ಅದನ್ನು ಕಾಲಾಜು ಮತ್ತು ವಿಶ್ವವಿದ್ಯಾನಿಲಯಗಳಿಗೂ ವಿಸ್ತರಿಸಿದ್ದೇ ಆದರೆ ನಮ್ಮ ಯುವಕರ ಸೃಷ್ಟಿಸಾಮರ್ಥ್ಯಕ್ಕೆ ಪೋಷಣೆ ದೊರೆತು ಅದು ಹೊರಹೊಮ್ಮಿ ಹುಲುಸಾಗಿ ಫಸಲು ನೀಡುತ್ತದೆ.

ಕನ್ನಡ ಭಾಷೆಯು ತನಗೆ ತಾನೇ ಎಲ್ಲ ಕ್ಷೇತ್ರಗಳಿಗೂ ಹರಡುತ್ತದೆ. ಕನ್ನಡ ಓದುಗರ ಸಂಖ್ಯೆ ಅಧಿಕಗೊಂಡು ಕನ್ನಡ ಪುಸ್ತಕೋದ್ಯಮ ಚುರುಕಾಗುತ್ತದೆ. ಕನ್ನಡ ಜನತೆಯ, ಆಮೂಲಕ ಕನ್ನಡ ಭಾಷೆಯ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಬಲ್ಲ ಏಕೈಕ ಸಾಧನವೆಂದರೆ ಅದು ಕನ್ನಡ ಶಿಕ್ಷಣ ಮಾಧ್ಯಮ. ಕನ್ನಡದ ಸರ್ವತೋಮುಖ ಏಳಿಗೆಗೆ ಹಾಕಬೇಕಾದ ಸ್ವಿಚ್ ಅದು ಎಂದರೆ ಅದು ಅತಿಶಯೋಕ್ತಿಯಲ್ಲ.

ವಿದ್ವಜ್ಜನರ ಭಾಷೆ ಮತ್ತು ಜನಸಾಮಾನ್ಯರ ಭಾಷೆಗಳು ಬೇರೆಬೇರೆಯಾಗಿದ್ದರೆ, ಅಂಥ ಸಮಾಜಕ್ಕೆ ಭವಿಷ್ಯವಿಲ್ಲ ಎಂಬುದು ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ಸ್ಪಷ್ಟವಾಗುತ್ತದೆ. ಯೂರೋಪ್ ನಲ್ಲಿ ಪ್ರಾಚೀನ ಗ್ರೀಕ್  ಮತ್ತು ರೋಮನ ನಾಗರಿಕತೆಗಳ ಅವನತಿಯ ನಂತರ ಹದಿನೈದು ಹದಿನಾರನೆಯ ಶತಮಾನಗಳಲ್ಲಿ ಕಾಣಿಸಿಕೊಂಡ ರೆನೆಸಾನ್ಸ್ವರೆಗಿನ ಹಲವಾರು ಶತಮಾನಗಳ ದೀರ್ಘ ಕಾಲ ಬೌದ್ಧಿಕ ಚಟುವಟಿಕೆ ನಿಂತ ನೀರಿನಂತೆ ಸ್ತಬ್ಧವಾಗಿದ್ದುದಕ್ಕೆ ಕಾರಣ, ಇಂದು ಮಾತೃಭಾಷೆಯಾಗಿರುವ ಲ್ಯಾಟಿನ ವಿದ್ವತ್ವ್ಯವಹಾರಗಳ ಭಾಷೆಯಾಗಿದ್ದುದು; ಜನಸಾಮಾನ್ಯರ ಭಾಷೆಗಳಾದ ಇಂಗ್ಲಿಷ್, ಫ್ರೆಂಚ್, ಇಟ್ಯಾಲಿಯನ್, ಜರ್ಮನ ಮುಂತಾದವು ಉಪೇಕ್ಷೆಗೆ ಒಳಗಾಗಿದ್ದುದು.

ಜನಸಾಮಾನ್ಯರ ಭಾಷೆಯಲ್ಲಿಯೇ ವಿದ್ಯೆಗಳಿಗೆ ಸಂಬಂಧಿಸಿದ ವ್ಯವಹಾರಗಳೂ ನಡೆಯತೊಡಗಿದ ತರುವಾಯ ಎಲ್ಲ ಕ್ಷೇತ್ರಗಳಲ್ಲಿಯೂ ಬೌದ್ಧಿಕ ಪುನರುಜ್ಜೀವನ ಕಂಡುಬಂದಿತು. ಅದನ್ನೇ ಇತಿಹಾಸಕಾರರು ರೆನೆಸಾನ್ಸ್ ಎಂದು ಕರೆದಿರುವುದು. ಅದರ ಅಂಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿಯೂ ನವಚೇತನ ಮೂಡಿ ಅವು ನಾಗಾಲೋಟದ ಪ್ರಗತಿ ಸಾಧಿಸಿದವು. ಆ ಕ್ಷೇತ್ರದಲ್ಲಿ ಯೂರೋಪ್ ಅಗ್ರಸ್ಥಾನ ಪಡೆಯಿತು. ಬಡತನದ ಕಾರಣ ಬಾಲ್ಯದಲ್ಲಿಯೇ ಕ್ರಮಬದ್ಧ ಶಿಕ್ಷಣವನ್ನು ಮೊಟಕುಗೊಳಿಸಿ ಪುಸ್ತಕಗಳಿಗೆ ರಟ್ಟುಕಟ್ಟುವ ಕೆಲಸಕ್ಕೆ ಸೇರಿಕೊಂಡ ಫ್ಯಾರಡೇ ತಾನು ರಟ್ಟು ಕಟ್ಟುತ್ತಿದ್ದ ವಿಜ್ಞಾನದ ಪುಸ್ತಕಗಳನ್ನು ಓದಿ ವಿಜ್ಞಾನದಲ್ಲಿ ಆಸಕ್ತನಾಗಿ, ವಿಜ್ಞಾನದ ಇತಿಹಾಸದಲ್ಲಿಯೇ ಪ್ರಥಮ ಶ್ರೇಣಿಯ ವಿಜ್ಞಾನಿಯಾದ.

ಅಂದಿಗೆ ಎರಡು ಶತಮಾನಗಳ ಹಿಂದೆ ಇದ್ದಂತೆ ಲ್ಯಾಟಿನ್ವಿದ್ಯಾಕ್ಷೇತ್ರದ ಭಾಷೆಯಾಗಿದ್ದರೆ ಅನಾಮಧೇಯನಾಗಿ ಉಳಿಯುತ್ತಿದ್ದ ಫ್ಯಾರಡೇಯಂಥ ಎಷ್ಟೋ ಪ್ರತಿಭಾವಂತರು ಹಾಗೆ ಮೂಲೆಗುಂಪಾದರೋ ಗೊತ್ತಿಲ್ಲ. ನಮ್ಮ ದೇಶದಲ್ಲಿ ಸಂಸ್ಕೃತ ವಿದ್ವದ್ವ್ಯವಹಾರದ ಭಾಷೆಯಾಗಿ ಜನಸಾಮಾನ್ಯರಿಂದ ದೂರಸರಿದು ದೇಶದ ಅಭಿವೃದ್ಧಿಗೆ ಅಡ್ಡಗಾಲು ಹಾಕಿದ ದಿನಗಳು ಆಗಿಹೋದವು. ಈಗಿನವರು ಇಂಗ್ಲಿಷ್ಭಾಷೆಯನ್ನು ಆಸ್ಥಾನದಲ್ಲಿ ಕೂರಿಸಿ ಪುನಃ ದೇಶದ ಪ್ರಗತಿಗೆ ಕಂಟಕಪ್ರಾಯವಾಗುತ್ತಿರುವುದನ್ನು ವಿಪ್ರೊ ಮತ್ತು ಎಜಿಕೇಶನಲ್ ಇನಿಷಿಯೇಟಿವ್ಸ್ನವರ ಸಮೀಕ್ಷೆಯ ನಮಗೆ ಮನವರಿಕೆ ಮಾಡಿಕೊಟ್ಟಿದೆ. ಕನ್ನಡದ ಏಳಿಗೆಗಾಗಿ ಹೋರಾಡುತ್ತಿರುವ ನಮ್ಮ ಮುಂದಾಳುಗಳು ಶಿಕ್ಷಣ ಮಾಧ್ಯಮದ ಬೇಡಿಕೆಗೆ ಈಗಲಾದರೂ ಆದ್ಯತೆ ನೀಡುವರೆಂದು ಆಶಿಸೋಣ.

ಈ ದಿಕ್ಕಿನಲ್ಲಿ ಹೋರಾಡಲು ನಮಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬೆಂಬಲವಿದೆ. ಪ್ರೌಢಶಾಲೆ ಮುಗಿಸುವವರೆಗೂ ಕರ್ನಾಟಕದ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡತಕ್ಕುದೆಂದು ಈ ತೀರ್ಪು ಘೋಷಿಸಿದೆ. ಉಚ್ಚ ನ್ಯಾಯಾಲಯವು ಎಂದೋ ನೀಡಿದ್ದ ಒಂದು ತಡೆಯಾಜ್ಞೆಯಿಂದಾಗಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ. ನಮ್ಮ ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದಿದ್ದರೆ ಎಂದೋ ಆ ತಡೆಯಾಜ್ಞೆ ತೆರವುಗೊಳಿಸಬಹುದಾಗಿತ್ತು. ಇಚ್ಛಾಶಕ್ತಿಯ ಕೊರತೆಗೆ ಕಾರಣ, ನಮ್ಮ ಮಂತ್ರಿಮಹೋದಯರಲ್ಲಿ ಅನೇಕರು ಇಂಗ್ಲಿಶ್ ಮಾಧ್ಯಮದ ಶಾಲೆಗಳನ್ನು ನಡೆಸುತ್ತಿರುವುದು ಅಥವಾ ಹಾಗೆ ನಡೆಸುತ್ತಿರುವವರ ಕೈಗೊಂಬೆಗಳಾಗಿರುವುದು. ಅವರು ಮಣಿಯುವಂತೆ ಮಾಡಲು ನಮಗಿರುವ ಒಂದೇ ಮಾರ್ಗವೆಂದರೆ ಪ್ರಬಲವಾದ ಸಾರ್ವಜನಿಕ ಒತ್ತಡ. ಅದರಿಂದ ಮಾತ್ರ ಕನ್ನಡದ ಏಳಿಗೆ ಸಾಧ್ಯ.

‍ಲೇಖಕರು G

2 August, 2011

1 Comment

  1. viddullata

    nanna ishtada lekhakarada e hiriyarige vandanegalu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading