ಅಮೇರಿಕಾದಲೊಬ್ಬರು ಕನ್ನಡದ
ಅದ್ಭುತ ಕಥೆಗಾರ ಪ್ರಕಾಶ್ ನಾಯಕ್

ಅಮೇರಿಕಾದಿಂದ ಪ್ರಸನ್ನ ಸಂತೆಕಡೂರು
ಇತ್ತೀಚೆಗೆ ‘ಅವಧಿ’ ಅಂತರ್ಜಾಲ ಪತ್ರಿಕೆಯಲ್ಲಿ ಕವಿಯತ್ರಿ ಶ್ರೀದೇವಿ ಕೆರೆಮನೆಯವರು, ಎಲ್ಲಿದ್ದರು ಈ ಕಥೆಗಾರ ಇಷ್ಟು ದಿನ? ಎಂದು ತಾವು ಓದಿದ “ಅಮೂರ್ತ ಚಿತ್ತ” ಎಂಬ ಕಥಾಸಂಕಲನದ ಕಥೆಗಾರನ ಬಗ್ಗೆ ಕೆಲವು ಸಾಲುಗಳು ಬರೆದಿದ್ದರು.
ಆ ಕಥೆಗಾರರೇ ಪ್ರಕಾಶ್ ನಾಯಕ್.
ಇವರು ಮೂಲತಃ ಉತ್ತರಕನ್ನಡ ಜಿಲ್ಲೆಯವರು. ಐ.ಐ.ಟಿ . ಮದ್ರಾಸ್ ನಲ್ಲಿ ವಿದ್ಯಾಭ್ಯಾಸ ಮಾಡಿ. ಪ್ರಸ್ತುತ ಅಮೇರಿಕಾದ, ಕ್ಯಾಲಿಫೋರ್ನಿಯಾದ ಸಿಲಿಕಾನ್ ಕಣಿವೆಯ ಕುಪರ್ಟಿನೋ ನಗರದಲ್ಲಿ ನೆಲೆಸಿದ್ದಾರೆ.
ಶ್ರೀದೇವಿಯವರ ಸಾಲುಗಳನ್ನ ಓದಿ ಪ್ರಕಾಶ್ ನಾಯಕರಿಗೆ ಅವರ ಪುಸ್ತಕ ಎಲ್ಲಿ ಸಿಗುತ್ತದೆ ಎಂದು ಕೇಳಿದೆ. ತಕ್ಷಣ ನನ್ನ ವಿಳಾಸಕ್ಕೆ ಪುಸ್ತಕವನ್ನೇ ಕಳಿಸಿದರು. ಅದು ಹದಿನಾಲ್ಕು ಕಥೆಗಳನ್ನೊಳಗೊಂಡ ಸಂಕಲನ. ಪುಸ್ತಕದ ಮೊದಲ ಕಥೆ “ಮಸಾರಿ” ಓದಿ ಮುಗಿಸುವುದರೊಳಗೆ ಎಷ್ಟೊಂದು ಅದ್ಭುತವಾಗಿ ಬರೆದಿದ್ದಾರೆ ಎಂದನಿಸಿತು. ಮಸಾರಿ ಎಂದರೆ ಒಂದು ಸಾಕು ಆಮೆಯ ಹೆಸರು. ಮಹಿಳೆಯೊಬ್ಬಳು ಸದಾ ಕೆಲಸದ ಪ್ರವಾಸದಲ್ಲಿರುತ್ತಿದ್ದ ಪತಿ ಮತ್ತು ದೂರದ ಊರಲ್ಲಿ ಓದುತ್ತಿರುವ ಮಗ ಹತ್ತಿರವಿಲ್ಲದೆ ಬೃಹತ್ ಬಂಗಲೆಯಲ್ಲಿ ಒಂಟಿತನದಿಂದ ತನ್ನ ಸಾಕು ಆಮೆಯನ್ನ ಹೆಚ್ಚಾಗಿ ಹಚ್ಚಿಕೊಂಡಿರುತ್ತಾಳೆ. ಆ ಆಮೆ ಇದ್ದಕ್ಕಿದ್ದಂತೆ ಒಂದು ದಿನ ಕಾಣೆಯಾಗಿರುತ್ತದೆ. ಆಮೆ ಏನಾಯ್ತು? ಕೊನೆಗೆ ಆಮೆ ಅವಳಿಗೆ ಮತ್ತೇ ಸಿಕ್ಕಿತೆ? ಕಥೆಯನ್ನ ಓದಿದರೆ ಮಾತ್ರ ಅದರ ನಿಜವಾದ ಮಜಾ.
ಮೂಕ ಮರ್ಮರ, ಅನಾಥರು, ಒಂದು ಸಂಜೆಯ ವೃತ್ತಾಂತ ಮತ್ತು ಕ್ಷಣಭಂಗುರ ನನಗೆ ತುಂಬಾ ಇಷ್ಟವಾದ ಕಥೆಗಳು. ಪ್ರಕಾಶ್ ನಾಯಕರು ತಮ್ಮ ಮೊದಲ ಕಥಾಸಂಕಲನದಲ್ಲಿಯೇ ಕನ್ನಡಕ್ಕೆ ಅದ್ಭುತವೆನ್ನುವ ಒಂದಕ್ಕಿಂತ ಒಂದು ಚೆನ್ನಾಗಿರುವ ಕಥೆಗಳನ್ನ ಕೊಟ್ಟಿದ್ದಾರೆ.
“ಕ್ಷಣ ಭಂಗುರ” ಕಥೆಯಂತೂ ಓದಿದ ಪ್ರತಿಯೊಬ್ಬ ವ್ಯಕ್ತಿಗೂ ಇಷ್ಟವಾಗುತ್ತದೆ ಎಂದು ನನ್ನ ಭಾವನೆ. ಇಂದು ಮಾನವೀಯ ಸಂಬಂಧಗಳು ಎಷ್ಟು ಯಾಂತ್ರಿಕತೆಯಿಂದ ಮತ್ತು ವ್ಯಾಪಾರ ಬುದ್ದಿಯಿಂದ ಕೂಡಿರುತ್ತವೆ ಎನ್ನುವುದನ್ನ ಈ ಕಥೆಯಲ್ಲಿ ಬಹಳ ಪ್ರಭಾವಶಾಲಿಯಾಗಿ ಚಿತ್ರಿಸಿದ್ದಾರೆ. ವೃದ್ದಾಶ್ರಮದಲ್ಲಿರುವತಾಯಿಯೊಬ್ಬಳು ಬಿದ್ದು ಆಸ್ಪತ್ರೆ ಸೇರಿ ಮತ್ತೆ ಮನೆಗಿಂತ ವೃದ್ದಾಶ್ರಮವೇ ಬೇಕು ಎಂದು ಹೊರಡುವುದು. ನಂತರ ಅನೀರಿಕ್ಷಿತವಾಗಿ ಯಾರು ಕಲ್ಪಿಸಲಾಗದಷ್ಟು ಕಥೆಯ ತಿರುವು ಓದುಗನನ್ನ ಬೆಚ್ಚಿಬೀಳಿಸುತ್ತದೆ. ಸಾಹಿತ್ಯದಲ್ಲಿ ಆಸಕ್ತಿಯಿರುವ ಪ್ರತಿಯೊಬ್ಬರೂ ಓದಲೇ ಬೇಕಾದ ಕಥೆ. ಈ ಕಥೆ ಸಮಕಾಲೀನ ಕನ್ನಡ ಕಥಾ ಸಾಹಿತ್ಯದಲ್ಲಿ ಹೊಸ ಸಂಚಲನ ಮೂಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲವೆನ್ನುವುದು ನನ್ನ ಅಭಿಪ್ರಾಯ. ಹೊಸದಾಗಿ ಬರೆಯಬೇಕೆನ್ನುವವರು ತಪ್ಪದೇ ಓದ ಬೇಕಾದ ಪುಸ್ತಕವಿದು.
ಈ ಪುಸ್ತಕವನ್ನ ಪರಿಚಯಿಸಿದ ಶ್ರೀದೇವಿಯವರಿಗೆ, ‘ಅವಧಿ’ಗೆ ಧನ್ಯವಾದಗಳನ್ನ ಸಲ್ಲಿಸುತ್ತಾ. ಹಿಂದೆಯೇ ಈ ಕಥಾಸಂಕಲನದ ಬಗ್ಗೆ ಉತ್ತಮವಾದ ಟಿಪ್ಪಣಿಬರೆದಿರುವ ನರೇಂದ್ರ ಪೈ ಅವರನ್ನೂ ನೆನೆಯುತ್ತ….. ಹೀಗೆ ಪ್ರಕಾಶ್ ನಾಯಕ್ ಅವರು ಕನ್ನಡ ಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನ ಇನ್ನೂ ಹೆಚ್ಚು ಹೆಚ್ಚು ಕಥೆ, ಕಾದಂಬರಿಗಳ ಮೂಲಕ ಕೊಡಲಿ ಎಂದು ಆಶಿಸುತ್ತೇನೆ.
ಪ್ರಕಾಶ್ ನಾಯಕ್ ಅವರ ಕಥೆಗಳನ್ನು ಇಲ್ಲಿ ಓದಿ




Thanks for introducing Prakash. Nayak. This is what we need today. Thanks to Avadhi for giving chance to such articles and writers to introduce less known, but good writers. Planning to read Prakash Nayak’s stories.
ಪ್ರಕಾಶ ನಾಯಕ್ ಅವರ ಪುಸ್ತಕ ಚೆನ್ನಾಗಿದೆ ಎಂದು ಬರೆದಿದ್ದೀರ . ಆ ಪುಸ್ತಕಗಳು ಎಲ್ಲಿ ಸಿಗುತ್ತ ವೆ, ಪ್ರಕಟಣೆ ಯಾರದು , ತಿಳಿ ಸಿದರೆ ಅನುಕೂಲ
ಪ್ರಕಾಶಣ್ಣ ಒಳ್ಳೆಯ ಕಥೆಗಾರ
PUSTIKE ODUVA KUTUHALA HECHHAGIDE…
ಪ್ರಕಾಶ ನಾಯಕರ ಅಮೂರ್ತ ಚಿತ್ತ ದ ಕುರಿತು ವಿಮರ್ಶೆ ಸಿದ್ಧವಾಗಿದೆ. ಇನ್ನೆರಡು ದಿನಗಳಲ್ಲಿ ನಿಮ್ಮೆದುರು ಇಡುವ ಪ್ರಯತ್ನ ಮಾಡುವೆ. ಯಾರಿಂದಲೋ ಈ ಪ್ರತಿ ಶ್ರೀದೇವಿಗೆ ಎಂದು ಪುಸ್ತಕ ಕಳುಹಿಸಿದ ಪ್ರಕಾಶ ನಾಯಕರನ್ನು ಹುಡುಕಲು ನಾನು ಪಟ್ಟ ಪಾಡು ಅಷ್ಟಿಷ್ಟಲ್ಲ. ನನ್ನದೊಂದು ನಾಲ್ಕು ಸಾಲಿನ ಪರಿಚಯ ಿಷ್ಟಲ್ಲ ಸಹೃದಯಿ ಓದುಗರನ್ನು ಹುಟ್ಟು ಹಾಕಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಧನ್ಯವಾದಗಳು ಅವಧಿ……