ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಎರಡು ಬಾಚಣಿಕೆ ನನ್ನ ಕಪಾಟಿನಲ್ಲಿ ಬೆಚ್ಚಗೆ ಕುಳಿತುಕೊಂಡಿವೆ..

ನಾಗೇಶ ತಳವಾರ

ಬೆಂದಕಾಳೂರು, ಕನಸಿನ ಮೂಟೆ ಹೊತ್ತು ಬರುವವರ ತಾಣ. ಒಟ್ಟಿನಲ್ಲಿ ಇದು ಕಲರ್ ಫುಲ್ ದುನಿಯಾ. ಈ ದುನಿಯಾದಲ್ಲಿ ನನ್ನದೊಂದು ಅಧ್ಯಾಯದ ಪುಟ ತೆರೆದುಕೊಂಡಿದೆ. ಹೇಳಿಕೇಳಿ ನಾನು ಬಯಲು ಸೀಮೆಯ ಹೈದ. ಓಣಿ ಓಣಿ ತಿರುಗಿರುವುದಕ್ಕೆ ನಾಕು ಗೋಡೆಯ ನಡುವೆ ಕಲೆತಿರುವುದು ಕಡಿಮೆ. ನನ್ನ ಬದುಕಿಗೆ ಹೊಸ ತಿರುವು ಕೊಟ್ಟ ಧಾರವಾಡದಿಂದ ಬಂದು ಬಿದ್ದಿರುವುದು ಕೆಂಪೇಗೌಡರ ನಾಡಲ್ಲಿ. ಇಲ್ಲಿ ಎಲ್ಲವೂ ಇದೆ. ಏನೂ ಇಲ್ಲ ಅನ್ನುವ ಭಾವ. ಇದರ ನಡುವೆ ಯಾಂತ್ರಿಕವಾಗಿ ಸಾಗುತ್ತಿದೆ ನನ್ನ ನ್ಯೂ ಲೈಫ್. ಮಲ್ಲೇಶ್ವರಂನಲ್ಲಿರುವ ಅರೆಕಾಲಿಕ ಬ್ರಹ್ಮಚಾರಿಗಳ ಹಾಸ್ಟೇಲಿನಲ್ಲಿ ನನ್ನದು ಒಂದು ಪಾಲು. ಅಲ್ಲಿಂದ ಕಚೇರಿಗೆ ಹೋಗಬೇಕಾದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೂಲಕ ಹೋಗಬೇಕು. ಮಿಡಿ, ಚಡ್ಡಿ ತೊಟ್ಟು ಕೃತಕ ನಗು ಚೆಲ್ಲುತ್ತಾ ಸಾಗುವವರ ಮಧ್ಯ ನನ್ನ ಸೆಳೆದವಳು ಆಕೆ.

ಬಿಬಿಎಂಪಿ ಬಳಿ ಇಳಿದು ನಾಕು ಹೆಜ್ಜೆ ಹಾಕಿದರೆ ಅವಳ ದರ್ಶನ ಭಾಗ್ಯ ನನಗೆ. ಎರಡು ಮೂರು ತೆಲೆಮಾರು ನೋಡಿರಬಹುದು. ಸುಕ್ಕು ಗಟ್ಟಿದ ಮುಖ, ದಣಿದ ದೇಹ, ಕಮರಿಹೋದ ಆಸೆ ಕನಸುಗಳು. ಆದರೂ ಬದುಕಿನ ಜೊತೆ ಹೋರಾಡುತ್ತಿದ್ದಾಳೆ. ನೆಲದ ಮೇಲೆ ಹಾಸಿರುವ ಒಂದು ಪ್ಲ್ಯಾಸ್ಟಿಕ್ ಹಾಳೆಯ ಮೇಲೆ ಹತ್ತಿಪ್ಪತ್ತು ಬಾಚಣಿಕೆಗಳು. ಅವುಗಳನ್ನು ಮಾರಿ ದಿನದ ತುತ್ತು ಸಂಪಾದಿಸಬೇಕು. ಅವಳ ಪಕ್ಕದಲ್ಲಿ ಸದಾ ಮಲಗಿರುವ ಸುಮಾರು 40ರ ಆಸುಪಾಸು ಇರುವ ವ್ಯಕ್ತಿ. ಆಕೆಯ ಮಗನಿರಬಹುದು. ಇದು ಬೆಂಗಳೂರಿನಲ್ಲಿ ಕಾಮನ್ ಎನ್ನಬಹುದು. ಆದ್ರೆ ಅವಳ ಕಣ್ಣಗಳಲ್ಲಿನ ಹತಾಸೆ, ಅಸಹನೆಯ ಛಾಯೆ ನನಗೆ ಸಾಕಷ್ಟು ಕಾಡಿದೆ.
ಅವಳಿಗೆ ಏನಾದರೂ ಸಹಾಯ ಮಾಡಬೇಕು ಅಂದುಕೊಳ್ಳುವುದು ಮುಂದೆ ಸಾಗುವುದು ನಡೆದಿತ್ತು. ಆದ್ರೆ ಏನು? ಹೇಗೆ? ಎನ್ನುವ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವಿರಲಿಲ್ಲ. ಒಂದು ಮಾತ್ರ ಗೊತ್ತಿತ್ತು, ನನ್ನ ಸಾಹಾಯಕ್ಕೆ ಅವಳ ಒಂದು ದಿನದ ತುತ್ತು ನೀಡುವ ಶಕ್ತಿ ಮಾತ್ರ ಇತ್ತು ಅನ್ನುವುದು. ಅವಳಿಗೆ ಕೇಳಬೇಕು ಎನ್ನುವಷ್ಟರಲ್ಲಿ, ಸುಮ್ಮನೆ ನಿದ್ದೆ ಮಾಡುತ್ತಾ ಕುಳಿತಿದ್ದ ನನ್ನ ಮನಸ್ಸು ಕಣ್ಣು ತಿಕ್ಕುತ್ತಾ ಎದ್ದು ಅವಳ ಸ್ವಾಭಿಮಾನಕ್ಕೆ ನಿನ್ನ ಬಿಡಿಗಾಸು ಬೇಡ ಅಂದಿತು. ಹೌದು, ಎಲ್ಲವು ನೆಟ್ಟಗೆ ಇದ್ದವರು ಬೇಡಿಕೊಂಡು ತಿನ್ನುತ್ತಿರುವಾಗ ಈ ಬಡ ಜೀವ ದುಡಿದು ತಿನ್ನುತ್ತಿದೆ. ಅವಳಿಗೊಂದು ಸಲಾಂ ಹೇಳು ಸಾಕು ಎಂದಿತು.
ಆದರೂ ಮನಸ್ಸು ಕೇಳದೆ ಅವಳೆದರು ನಿಂತು ಬಾಚಣಿಕೆ ಎಷ್ಟು ಅಂದೆ. 5ರೂಪಾಯಿ ಅಂದ್ಳು. 10ರೂಪಾಯಿ ಕೊಟ್ಟು ಎರಡು ಬಾಚಣಿಕೆ ಕೊಂಡು ಕಿಸೆಯಲ್ಲಿ ಇಟ್ಟುಕೊಂಡು ಹೆಜ್ಜೆ ಹಾಕಿದೆ. ಈಗ ಆ ಜಾಗ ಖಾಲಿ ಆಗಿದೆ. ಅವಳಿಲ್ಲ. ಆ ಎರಡು ಬಾಚಣಿಕೆ ನನ್ನ ಕಪಾಟಿನಲ್ಲಿ ಬೆಚ್ಚಗೆ ಕುಳಿತುಕೊಂಡಿವೆ. ಅದನ್ನು ನೋಡಿದಾಗೊಮ್ಮೆ ಅವಳ ಕಣ್ಣುಗಳಲ್ಲಿನ ಹತಾಸೆ ಈಗಲೂ ನನ್ನನ್ನು ಇರಿದು ಕೊಲ್ಲುತ್ತಿದೆ. ಈ ಜಗತ್ತಿನಲ್ಲಿ ಇವಳಂತೆ ಅಸಂಖ್ಯೆ ಜನರಿದ್ದಾರೆ. ನಾನೊಬ್ಬ ಒಳ್ಳೇಯವನು ಅಂತ ತೋರಿಸಿಕೊಳ್ಳುವುದಕ್ಕೆ ಈ ನಾಕು ಸಾಲು ಬರೆಯಲಿಲ್ಲ. ಅವಳ ನೆನಪು ಮಾಸುವ ಮುನ್ನ ನನ್ನ ಪುಟದಲ್ಲಿ ಅಚ್ಚಳಿಯದೆ ಉಳಿಯಲಿ ಎನ್ನುವ ಕಾರಣಕ್ಕೆ ಮಾತ್ರ. ಈಗ ಅದೇ ಬಿಬಿಎಂಪಿ ಮುಂದೆ ನಡೆದು ಹೋಗುತ್ತಿದ್ದೇನೆ. ಜಿಎಸ್ಎಸ್ ಅವರ ಸ್ತ್ರೀ ಎಂದರೆ ಅಷ್ಟೇ ಸಾಕೇ? ನೆನಪಾಗುತ್ತಿದೆ…

‍ಲೇಖಕರು avadhi

4 May, 2014

1 Comment

  1. Anil talikoti

    ಮನ ಕಲಕುವ ಬರಹ ಬೇರೇನು ಮಾಡಬಹುದಿತ್ತೋ ಗೊತ್ತಿಲ್ಲ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading