ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಊರು ಈ ಸೂರು

 

ಎಚ್ ಕೆ ಶರತ್

ಕತ್ತಲ ಲೋಕವೂ ಜೀವಂತಿಕೆಯ ಪಾಕ ಎಂದು ಬೋಧಿಸಿತು ಆ ಊರು. ನಗರದ ನೆರಳಲ್ಲಿ ನಾನೀಗ ಕುಂತಿರುವ ಈ ಸೂರಿಗೆ ಕತ್ತಲೆಂದರೆ ಕತ್ತಲಷ್ಟೇ; ಬೆಳಕಿನ ಗೈರು ಹಾಜರಿ ಹಡೆಯುವ ಕೂಸು. ಈ ಕತ್ತಲು ಕೊಲ್ಲಲು ನಾನಾ ಕಸರತ್ತುಗಳು. ಕರೆಂಟು… ಇನ್ನೂ ಏನೇನೋ ನಂಟು. ಮನೆ, ರಸ್ತೆ ಎಲ್ಲಿಯೂ ಪೂರ್ತಿ ಕತ್ತಲು ಜೀವಂತವಾಗಿ ಉಳಿದಿಲ್ಲ. ಹಾಗೆ ಉಳಿಯಲು ನಾವ್ಯಾರೂ ಬಿಟ್ಟಿಲ್ಲ.
ಆ ಊರಿನ ಕತ್ತಲ ಲೋಕ ಹಾಗಿರಲಿಲ್ಲ. ಹೊಗೆ ಕಾರುವ, ಆದರೂ ಪೂರ್ತಿ ಕತ್ತಲು ಕೊಲ್ಲದ ಸೀಮೆ ಎಣ್ಣೆ ದೀಪಗಳು ಅಲ್ಲಿ ರಾತ್ರಿ ಕಣ್ತೆರೆಯುತ್ತಿದ್ದವು. ಇಲ್ಲಿನಂತೆ ಅಲ್ಲಿ ಬಾರುಗಳ ಕಾರುಬಾರು ಇರಲಿಲ್ಲ. ಕಳ್ಳಭಟ್ಟಿ ಕುಡಿದು ಕುತೂಹಲ ಹುಟ್ಟಿಸುವ ಕತೆ, ವ್ಯಥೆಗಳನ್ನು ಅವರಿವರು ಹೇಳುತ್ತಿದ್ದರು. ಟೀವಿಯ ಪರಿಚಯವಿರಲಿಲ್ಲ. ಮೆಗಾ ಸೀರಿಯಲ್ಲುಗಳು, ರಿಯಾಲಿಟಿ ಶೋಗಳು ಹಾಳುಮೂಳುಗಳ ಗಂಧಗಾಳಿಯೂ ಸುಳಿದಿರಲಿಲ್ಲ. ರಾತ್ರಿ ಎಂಟಕ್ಕೆಲ್ಲ ಎಲ್ಲರೂ ಕೌದಿಯ ಮೇಲೆ ನಿದ್ರಿಸುತ್ತಿದ್ದರು. ಹಾಗೆ ನಿದ್ರಿಸುವ ಮುನ್ನ ದೀಪದ ಬೆಳಕಿನಲ್ಲಿ ಚೌಕಾಬಾರ, ಆನೆ ಕಟ್ಟುವ, ತುಪ್ಪ ಕಾಯಿಸುವ ಆಟ ಆಡುತ್ತಿದ್ದರು. ಮಧ್ಯರಾತ್ರಿ ಗೊರಕೆಯ ಸದ್ದಿನ ಹೊರತು ಬೇರೆ ಮಾತಿರಲಿಲ್ಲ.

ಆ ಊರಿನ ಮುಂಜಾನೆಗಳು ಈ ನಗರಿಯ ಸೂರಿನಡಿಯ ಮುಂಜಾನೆಗಳಂತಿರಲಿಲ್ಲ. ಬೆಳಗಿನ ಬಹುಮುಖ್ಯವಾದ ಕಾಯಕ ಮನೆ ಒಳಗೇ ಮುಗಿಯುತ್ತಿರಲಿಲ್ಲ. ಬೇಲಿ ಸಾಲು, ಪೊದೆಗಳೇ ದೇಹ ಬಾಧೆಯ ಮುಕ್ತಿಧಾಮ. ಎದ್ದ ಕೂಡಲೇ ಆ ಜನ ಬರಗಾಪಿ ಕುಡಿದು ಕಾಯಕದಲ್ಲಿ ತಲ್ಲೀನರಾಗುತ್ತಿದ್ದರು. ದೂರದೂರಿನಲ್ಲಿರುವ ಹಾಲಿನ ಡೈರಿಗೆ ಕರೆದ ಹಾಲು ಕೊಡಲು ತರಾತುರಿಯಲ್ಲಿ ಒಂದಷ್ಟು ಜನ ಹೊರಡುತ್ತಿದ್ದರು. ಕೊಟ್ಟಿಗೆ ಕಸ ಬಾಚುವವರು, ಒಲೆ ಹೊತ್ತಿಸುವವರು ಹೀಗೆ ಎಲ್ಲರೂ ಏನಾದರೊಂದು ಕಾಯಕದಲ್ಲಿ ಮಗ್ನರಾಗಿರುತ್ತಿದ್ದರು.
ಈ ನಗರಿಯ ಮುಂಜಾನೆಗಳು ಹಾಗಿಲ್ಲ. ಟ್ರ್ಯಾಕ್ ಸೂಟು ಹಾಕಿಕೊಂಡು, ಹೆಣಬಾರದ ದೇಹ ಹೊತ್ತುಕೊಂಡು ಮಂದಿ ಹುಚ್ಚರಂತೆ ಓಡುತ್ತಾರೆ. ಮರ್ಯಾದೆ ಉಳಿಸಿಕೊಳ್ಳಲು ಜಾಗ್ ಎಂದು ಅದಕ್ಕೆ ಹೆಸರಿಡುತ್ತಾರೆ. ನಡೆದು ನಡೆದು ಕಳ್ಳಬೆವರು ಹರಿಸುತ್ತಾರೆ.
ಆ ಊರು ಇಲ್ಲಗಳ ತವರು. ಕರೆಂಟು, ರಸ್ತೆಯ ನಂಟು ಇರಲಿಲ್ಲ. ಆಧುನಿಕತೆಯ ಸೋಂಕು ತಾಕಿರಲಿಲ್ಲ. ಆದರೆ ಅಲ್ಲಿ ನೆಮ್ಮದಿಗೆ ಬರವಿರಲಿಲ್ಲ. ಜೀವಂತಿಕೆಯ ಹರಿವಿಗೆ ತಡೆ ಇರಲಿಲ್ಲ.
ಈ ಊರಿನ ಸೂರಿನಡಿಯಲ್ಲಿ ಸೌಕರ್ಯಗಳೆಲ್ಲವೂ ಇವೆ. ಅವೆಲ್ಲ ವಸ್ತುಗಳಾಗಷ್ಟೇ ಉಳಿದಿವೆ. ಎಲ್ಲಾ ಓಟಕ್ಕೂ ನಾವೇ ನಿರ್ಮಿಸಿಕೊಂಡ ಅಡೆತಡೆಗಳ ಅಡಚಣೆ ಇದೆ.
 

‍ಲೇಖಕರು G

30 October, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading