– ಕೆ ಎನ್ ಲಾವಣ್ಯ ಪ್ರಭಾ
ಹೊರಗೆ ತಣ್ಣನೆಯ ಇರುಳಿನಲ್ಲಿ
ಹೊಳೆವ ಚಂದ್ರ, ಗ್ರಹ, ತಾರೆ,
ಇಡೀ ಸೌರ ಮಂಡಲ
ಹಗಲಿನಲ್ಲಿ ಬೆಳ್ಳಂ ಬೆಳಕಿನ
ಹದವಾದ ಬಿಸಿಲ ಶಾಖದಲ್ಲಿ
ಕಾಣುತ್ತವೆ….
ಮರ ಗಿಡ ಹೂವು ಹಕ್ಕಿ ಪ್ರಾಣಿ
ನೆಲ ಭೂಮಿ ಇಮಾರತು ರಸ್ತೆ
ಅಸಂಖ್ಯ ವಾಹನ ಧೂಳು ಕಸ
ತರಹೇವಾರಿ ಜನ ಮನ ನದಿ
ಸಾಗರ ಸಂಗಮ
ಹನಿವ ಮಳೆಯೊಳಗೆ ರಂಗು
ರಂಗಿನ ಕಾಮನ ಬಿಲ್ಲು
ಆಹಾ! ಮನಸ್ಸು ಕುಣಿಕುಣಿದು
ನಯವಾದ ಮಖಮುಲ್ಲು
ಮೋಹ ಪ್ರೇಮ ಕಾಮದೊಳಗೆ
ಮರೆಯಾದ ಅಂತಃಕರಣ ಕರುಣ
ಬೇಕೋ ಬೇಡವೋ ಹೊರಗೆ
ಕಂಡ ಕಂಡದ್ದೆಲ್ಲಾ ಬೇಕೆನಿಸುವ
ದುರಾಸೆಗೆ ಆಮದು ಮಾಡಿಕೊಂಡ
ರೋಗ ರುಜಿನಕ್ಕೆ ದುಬಾರಿ ವೈದ್ಯರ ಬಿಲ್ಲು
ಗಾಢ ಬೆಳಕಿನಲಿ ಜನ ಸಂದಣಿಯಲಿ
ಬಾಂಬು ಸ್ಫೋಟದ ಭೀತಿಯಲ್ಲಿ
ಸ್ನೇಹ ವಿಶ್ವಾಸಗಳನ್ನು ಹುಡುಕುತ್ತಾ
ಗಲ್ಲಿಗಲ್ಲಿಗಳಲಿ ಫುಟ್ಪಾತು ಕೈಗಾಡಿಗಳಲಿ
ಪಾನಿಪೂರಿ ಮಸಾಲ ಪೂರಿ ಉಬ್ಬುಬ್ಬಿ
ಕೊಬ್ಬಿನಲಿ ಮೆರೆಯುವಾಗ
ಕವಿತೆಗಳು ಮುಖ ಸಪ್ಪಗಾಗಿಸಿ
ತಬ್ಬಿಬ್ಬಾಗುತ್ತವೆ
ಹಗಲು ಇರುಳೆರಡರಲ್ಲೂ ಮನೆಯ
ತಂಪಿನ ನೆರಳಲ್ಲಿ ಕಾಣುತ್ತವೆ..
ಕುಕ್ಕರ್ ಓವನ್ ಮಿಕ್ಸಿ ಫ್ರಿಜ್ಜು
ತರಹೇವಾರಿ ತರಕಾರಿ, ಬೇಳೆಕಾಳು ದಿನಸಿ
ತಟ್ಟೆ ಲೋಟ ಪಾತ್ರೆ ಲಟ್ಟಣಿಗೆ
ಚಾಕು ಫೋರ್ಕು ಸ್ಪೂನು ತುರಿಮಣೆ
ಜೊತೆ ಸಣ್ಣಗೆ ಹಾಡೊಂದು
ಗುನುಗುತ್ತಾ
ಚಪಾತಿ ಲಟ್ಟಿಸಿ ಅನ್ನ ಬೇಯಿಸಿ
ಸಾರು ಕುದಿಸಿ ಪಲ್ಯ ತಿರುವಿ
ಹದವಾದ ಸ್ವಾದಿಷ್ಟ ತಿನಿಸನ್ನು
ಡೈನಿಂಗ್ ಟೇಬಲಿಗೆ ರವಾನಿಸಿ
ಬಂದು ಕೂತವರಿಗೆಲ್ಲಾ ಬಡಿಸಿ
ಮುಗಿಸಿ ಅಡುಗೆ ಮನೆ ಕಟ್ಟೆ ಸ್ಟೌವ್
ಕ್ಲೀನು ಮಾಡುವ ಕೆಲಸದ ಜೊತೆ
ನನ್ನವರ ಹೊಟ್ಟೆ ತಂಪಾಗಿಸುವ ಕಾಳಜಿ
ಕಕ್ಕೂಲಾತಿಯ ಹಿಂದೆ
ಮಂದ್ರ ಬೆಳಕಿನಲ್ಲಿ ಹೊಳೆವ
ನನ್ನದೇ ಬೆವರಿನ ಘಮ , ತೋಳಿನ ಶ್ರಮ
ಅಡುಗೆ ಕೋಣೆಯಲ್ಲರಳಿದ
ಸ್ವಾದಿಷ್ಟ ರುಚಿಯ ಹಿಂದಿನ
ತಾಯ್ತನದ ಮಿಡಿತ
ಕಾಪಿಡುವ ತುಡಿತದ
ಒಳಮನದ ಪಲುಕು
ಏಕಾಂತದೊಳಗಿನ ಮೌನ
ತಾದಾತ್ಮ್ಯದೊಳಗಿನ ಕನಸು
ಮೆಲುಕು ಹಾಕಿದ ನೆನಪು
ಒಟ್ಟಾಗಿ ಗೀಚಿದ ಕವಿತೆಯ
ತಿನಿಸು ಸವಿದವರ ಸುಖದಲ್ಲಿ
ಹೂದಾನಿಯಲ್ಲರಳಿದ ಹೂಗಳು
ಮುಖ ನೋಡಿಕೊಂಡು
ಮುಗುಳ್ನಗುತ್ತವೆ






ಈ ಹೂದಾನಿಯಲ್ಲರಳಿದ ಹೂಗಳು ನಗುವುದೆಂದರೆ-ಸರಸರನೆ-ಬಿರಬಿರನೆ ಕಣ್ಣರಳಿಸಿಸಿನೋಡಿ, ಮನೆಗೆಲಸವ ಮಾಡಿ ಪದ್ ಮೂಡಿಸುವುದ ನೋಡಿ ಬೆರಗಾದವೆ, ಅವು ಲಾವಣ್ಯ.ಚೆಂದದ ಪದ್ಯ