ರಶ್ಮಿ ಎಸ್
ಆಹಾ ಥಂಡಿ… ಅಪ್ಪಿ ಕುಂಡಿ.. ಆಹಾ ಥಂಡಿ… ಅವ್ವಿ ಕುಂಡಿ.. ಹಿಂಗ ಹೇಳ್ಕೊಂತ ಥಂಡಿನ್ನ ಕರೀತಿದ್ರೊ… ಕೆರೀತಿದ್ರೊ ಅಥವಾ ಬೈತಿದ್ರೊ ಗೊತ್ತೇ ಇಲ್ಲ. ಆದ್ರ ಈಗೂ ಸ್ವಲ್ಪ ಹೆಚ್ಗಿ ಥಂಡಿ ಅನಿಸ್ತಂದ್ರ ನನ್ನ ಬಾಯಿಗೆ ಇದೇ ಉದ್ಗಾರ ಬರ್ತದ. (ಮತ್ತೆಲ್ಲಿಯೂ ಉದ್ಗಾರ ಬರೂದಿಲ್ಲ ಬಿಡ್ರಿ..) ನನ್ನ ಮಕ್ಕಳೂ ಇದೇ ಕಲ್ತಾವ… ಈ ಸಾಲಿನ ನಾಲ್ಕನೆ ಪದದ ಬಗ್ಗೆ ಅದ್ಯಾಕಷ್ಟು ಪ್ರೀತಿ ಅಂತ ಗೊತ್ತಿಲ್ಲ…
ಅವರು ಅನ್ನೂದು, ನಾ ಗದರಿದ್ಹಂಗ ಕಣ್ಣು ಕಿಸಿಯೂದು, ನಕ್ಕೊಂತ ನಾನೂ ಮನಸಿನಾಗ ಆಗಾಗ ಅಂದ್ಕೊಳ್ಳೂದು ನಡದೇ ಇರ್ತದ. ಇದ್ಯಾವುದರ ಗಮನವೇ ಇರದ್ಹಂಗ ಥಂಡಿಗಾಳಿ ಮಾತ್ರ ಸೂಸ್ಕೊಂತ, ಬಾಗಿಲ ಸಂದಿಯಿಂದ, ಕಿಟಕಿ ಸಂದಿಯಿಂದ ಸೂಸಿ ಬಂದು ನಮಗ ಅಪ್ತಿರ್ತದ…
ಈ ಥಂಢಿಗೂ ಅಪ್ಪುಗೆಗೂ ಭಾರಿ ಸಮೀಪದ ಸಂಬಂಧ ಐತಿ ನೋಡ್ರಿ. ಚೂರು ಥಂಡಿ ಅನಿಸಿದ್ರ ಸಾಕು… ನನ್ನ ಮಕ್ಕಳು, ನಾಯಿ ಮರಿ ತಾಯಿನಾಯಿ ಹೊಟ್ಟಿಗೆ ಅಪ್ಗೊಂಡು ಮಲಗೂಹಂಗ ಬಂದೇ ಬಿಡ್ತಾರ. ನನ್ನ ಮೈನೆ ನನಗ ಭಾರ ಆಗಿ, ಉಸ್ಸಪ್ಪ ಅಂತ ಮಲಗಿದಾಗ.. ಇವು ಬಂದು ಮೆತ್ಕೊಂಡ್ರ, ಮೊದಲ ಬೈಗುಳ ಥಂಡಿಗೆ ಸಲ್ಲಿದ್ರೂ, ನಾನೂ ಬೆಚ್ಚಗ ಮಕ್ಕೊಂತೀನಿ.
ಚಳಿಗಾಲಕ್ಕೂ ಬೆಚ್ಗ ಮಕ್ಕೋಳೂದಕ್ಕೂ ಸೋಮಾರಿತನದ ಸಂಬಂಧ ಅಗ್ದಿ ಗಾಢ ಅದ ನೋಡ್ರಿ. ಚಳಿನೂ ಹಂಗೆ.. ಹಗುರಕ್ಕ ಅದೇ ಆಗ ಜಿಂಕಿನೋ, ಕೋಳಿನೋ ನುಂಗಿದ ಹೆಬ್ಬಾವು ಸಾವಕಾಶ ತೆವಳಕೊಂತ ಹೋಗುಹಂಗ ಸಣ್ಣಗೆ, ತಣ್ಣಗೆ ನಮ್ಮನ್ನ ಆವರಸ್ತದ. ಕಾಲಿನಿಂದ… ಅಂಗಾಲಿನಿಂದ.. ಶುರುವಾದ್ರ ಮೊಣಕಾಲಿನ ತನಾನೂ ತನ್ನ ದಂಡಯಾತ್ರೆ ಜೋರೆ ಇಟ್ಕೊಂಡಿರ್ತದ.
ನೋಡ್ರಿ ಬೇಕಾದ್ರ… ನಾ ಏನು ಸುಳ್ಳು ಹೇಳೂದಿಲ್ರೀಪಾ… ಆ ಥಂಡಿ ಮ್ಯಾಲಿನಾಣಿ. ನಾಲ್ಕನೆ ಪದದ ಮ್ಯಾಲೆ ಅಲ್ಲ ಮತ್ತ!! ತಾ ಹೋದಲ್ಲಿ ಎಲ್ಲ, ಚರ್ಮ ಬಿರುಕು ಮೂಡಿಸಿ, ಅಗ್ದಿ ಬರ ಬಿದ್ದ ಎರಿ ಹೊಲದ್ಹಂಗ ಚಿತ್ತಾರ ಬಿಡಿಸಿರ್ತದ. ಅಷ್ಟೇ ಅಲ್ಲ, ಕೆರೆತ ಆಗೂಹಂಗೂ ಮಾಡ್ತದ. ಈ ಮೀನಖಂಡ, ಮೊಣಕಾಲಿನ ಹಿಂಭಾಗ… ಅದಕ್ಕ ಕನ್ನಡದಾಗ ಏನಂತಾರ ಗೊತ್ತಿಲ್ರಿಪಾ… ನನ್ನ ಮಗಳು ಕೈ–ತೋಳುಗಳ ಕೆಳಗಿರೂದು ಕಂಕುಳ ಆದ್ರ, ಇದು ಮೊಂಕುಳ ಇರಬಹುದು ಅಂತಿದ್ಲು.. ಅಲ್ಲೆಲ್ಲ ತುರಿಕಿ ಹುಟ್ಟಿಸಿ, ಯಾರಿಗೂ ತಗ್ಗಿಬಗ್ಗಿ ನಡಿಯೋರು ಅಲ್ದೇ ಇದ್ರು, ತಮ್ಮ ಕಾಲಿಗೆ ತಾವೇ ಬೀಳುಹಂಗ ಮಾಡ್ತದ.. ಈ ಥಂಡಿ.
ಇರಲಿ… ಇರಲಿ.. ಸೋಮಾರಿಹಂಗ ಮಾರಿಯ ಮ್ಯಾಲಿನ ಗಲ್ಲದ ಮ್ಯಾಲೆ, ಮೂಗಿನ ಬದಿ ತನ್ನ ಚಿತ್ತಾರ ಬಿಟ್ರೂ ಇದನ್ನ ಓಡಸಾಕ ಮಾತ್ರ ತೆಂಗಿನೆಣ್ಣಿಯ ಜಿಡ್ಡೇ ಬೇಕು. ನನಗ ಇದೇ ಮಜಾ ಅನಸ್ತದ. ತೆಂಗಿನೆಣ್ಣಿಯ ಜಿಡ್ಡು ಈ ಒಣ ಚರ್ಮದ ಶುಷ್ಕತನ ಹೋಗ್ತದಂತ… ಗೊತ್ತಾಯ್ತಲ್ಲ… ಚರ್ಮಕ್ಕೂ ಎಣ್ಣೀನೇ ಬೇಕಂತ…
ಕರುಳಿಗೂ ಬೇಕವಾ ತಂಗಿ ಅಂತ ನಮ್ಮನಿ ಮುಂದಿನ ಕುಡುಕ ಚೀರಿಚೀರಿ ಹೇಳ್ತಿರ್ತಾನ. ಈ ಮಾತು ತಪ್ಪನಿಸಿದ್ರ ಹೊಟ್ಯಾಗ ಹಾಕ್ಕೋರಿ. ನಮ್ಮವ್ವ, ನಮ್ಮಜ್ಜ, ನಮ್ಮಮ್ಮ (ಅಮ್ಮನ ಅಮ್ಮ) ಇವರು ಹೊಟ್ಟೀಗೆ ಎಣ್ಣಿ ಹಾಕ್ಕೊಂತಿರಲಿಲ್ಲ. ಅದು ಗಟ್ಟಿಯಾದಾಗ ಹೊಟ್ಯಾಗ ಇಟ್ಕೊಂಡು ಕೂಡ್ತಿದ್ರು. ದೇಹದ ಶಾಖಕ್ಕ ಅದು ಲಗುಟ ಕರಗ್ತದ. ಅವ್ವಾ… ಹಿಂಗ ಹೇಳೂದ್ರಾಗ ಎಲ್ಲರೆ ಮತ್ತ ನಮ್ಮಜ್ಜ, ನಮ್ಮವ್ವ, ನಮ್ಮಮ್ಮ ಎಣ್ಣಿ ಹೊಟ್ಟಿಗೆ ಹಾಕ್ಕೊಂತಿದ್ರು ಅಂತ ಅಂದ್ನೇನು.. ಈ ಚಳಿಗಾಲದ ನಶಾನೆ ಹಂಗ…
ಬೆಚ್ಚಗ ಹೊದ್ದು ಮಲಗಿದಾಗ, ಗಂಟಲಗುಂಟ ಕರುಳಿಗೆ ಇಳಿಯೂತನಾನೂ ಬಿಸಿ ಇರುವ ಚಹಾ ಗುಟಕರಿಸಬೇಕನಸ್ತದ. ಸಂಜೀಕ ಎಳೀಬಿಸಿಲಿನ ಕೋಲುಗಳು, ಬೆಳಕಿನ ರೇಕುಗಳಾಗಿ ಹಿತ ಅನಿಸುಹಂಗ ನಮಗ ಸೋಕಬೇಕಾದ್ರ, ಹೊಗಿಯಾಡುವ ಕಾಫಿಯ ಬಿಸುಪು ಅಂಗೈಗೆ ತಾಕಲಿ ಅಂತ ಮನ ಬಯಸ್ತದ.
ತಣ್ಣನೆಯ ಕುಳಿರ್ಗಾಳಿ ಕೆನ್ನೆಗೆ ತಾಕಿ ಹೋಗೂಮುಂದ, ಬ್ಯಾಡಬ್ಯಾಡಂದ್ರೂ ಎಳೀಮಕ್ಕಳ ಕಿರುಬೆರಳು ಹಾಲುಣ್ಣಿಸುಮುಂದ ಗಲ್ಲಕ ತಾಕಿದ ನೆನಪು ತರ್ತಾವ. ಎದಿಗೂಡು ಬೆಚ್ಚಗ ಆಗ್ತದ. ಹಂಗೇ ಕಾಲನ ಕರೆಗೆ ಓಗೊಟ್ಟು ಮರೆಯಾದ ತಾಯಂದಿರ ಬೆಚ್ಚನೆಯ ಅಪ್ಪುಗೆಯೂ ನೆನಪಾಗಿ, ಹೊಟ್ಯಾಗ ಬೆಂಕಿ ಬಿದ್ದಂಗ ಆಗ್ತದ.
ಚಳಿಗಾಲಂದ್ರ ಹಂಗ.. ಮರಗಳು ಬಟಾಬಯಲಾದ್ಹಂಗ, ನೂರು ಬಯಕಿಗಳಿದ್ರೂ, ಬಯಕಿಗಳನ್ನೆಲ್ಲ ಉದುರಿಸಿ, ನಿರೀಕ್ಷೆಗಳಿಲ್ಲದೆ, ಬಾಂಧವ್ಯಗಳನ್ನು ಅಪ್ಗೊಂಡ್ರ ಬೆಚ್ಗಿರ್ತೇವಿ. ಇಲ್ಲಾಂದ್ರ ತರಗೆಲೆಗಳಿಗೆ ಬೆಂಕಿ ಇಟ್ಟಂಗ ನಮ್ಮನ್ನ ನಾವೇ ಸುಟ್ಕೊಂತ ಇರ್ತೇವಿ. ಇಲ್ಲಾಂದ್ರ… ಆಹಾ ಥಂಡಿ… ಮುಂದಿಂದು ನಾ ಹೇಳಾಂಗಿಲ್ಲ ಈಗ… ನಿಮಗ ಗೊತ್ತದ.. ಇದು ಮೂಲಾಧಾರದ ಮಾತು ಅಂತ..! ಬುಡಕಿನ ಮಾತು.. ಮರದ ಅಮರದ ಬುಡದ ಮಾತಂತ!!
0 ಪ್ರತಿಕ್ರಿಯೆಗಳು