ಐ.ಕೆ.ಬೊಳುವಾರು
ಕಳೆದ ನಾಲ್ಕೂವರೆ ದಶಕಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಐ.ಕೆ ಬೊಳುವಾರು, ಒಂದು ಹಂತದ ಬಳಿಕ ರಂಗಭೂಮಿಯನ್ನು ಗಂಭೀರ ಹವ್ಯಾಸಿವಾಗಿ ಪರಿಗಣಿಸಿದವರು. ದೃಶ್ಯ, ಸಮುದಾಯ, ನಿರತ ನಿರಂತ ಮೊದಲಾದ ತಂಡಗಳ ಮೂಲಕ ಚಲಿಸಿ ಬಂದ ಐ.ಕೆ. ಇಂದಿಗೂ ರಂಗಕಾಯಕವನ್ನು ಉಸಿರಾಗಿಸಿದವರು.
೨೦೧೯ರಲ್ಲಿ ನಾವು ನಿರತ ನಿರಂತ ತಂಡದ ಮೂಲಕ ಪುತ್ತೂರಿನಲ್ಲಿರುವ ಹಾರಾಡಿ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಗ್ರಹಣ-ಕಂಕಣ ಎನ್ನುವ ಮಕ್ಕಳ ನಾಟಕವನ್ನು ಸಿದ್ಧಪಡಿಸಿದ್ದೆವು. ನಾಡಿನಾದ್ಯಂತ ಕಂಕಣ ಗ್ರಹಣದ ಬಗ್ಗೆ ಬಹುದೊಡ್ಡ ಚರ್ಚೆ ನಡೆಯುತ್ತಿರಬೇಕಾದರೆ ನಾವು ಮಕ್ಕಳ ನಾಟಕದ ಮೂಲಕ ಆ ಬಗ್ಗೆ ಮಾತುಕತೆಯಾಡಬೇಕೆಂದು ನಿರ್ಧರಿಸಿ ರಿಹರ್ಸಲ್ ನಡೆಸಿದ್ದೆವು. ಮಕ್ಕಳು ಉತ್ಸಾಹದಿಂದ ಭಾಗಿಯಾಗುತ್ತಿದ್ದರು.
ಹಾಡು ಕುಣಿತಗಳ ಆಕರ್ಷಣೆಯುಳ್ಳ ಲವಲವಿಕೆಯ ನಾಟಕ. ನಾಟಕ ಸಿದ್ಧಗೊಂಡ ಬಳಿಕ ಪುತ್ತೂರಿನ ಸುತ್ತಮುತ್ತ ನಾಲ್ಕೈದು ಪ್ರದರ್ಶನಗಳನ್ನು ನಡೆಸಿದ್ದೆವು. ಪ್ರೇಕ್ಷಕರ ಪ್ರೀತಿ ಮತ್ತು ಮೆಚ್ಚುಗೆ ಎರಡೂ ಪ್ರಾಪ್ತವಾಗಿದ್ದವು. ಅದೇ ಸಂದರ್ಭದಲ್ಲಿ ಮಂಗಳೂರಿನಲ್ಲಿ ಆರಂಭಗೊಂಡ ಪಾದುವಾ ಥೇಟರ್ ಹಬ್ ನವರು ನಮ್ಮ ಮಕ್ಕಳ ನಾಟಕ ತಂಡವನ್ನು ವಾರಾಂತ್ಯ ರಂಗಪ್ರದರ್ಶನಕ್ಕೆ ಆಹ್ವಾನಿಸಿದರು.
ರಂಗತಂಡವನ್ನು ಕಟ್ಟಿಕೊಂಡು ಬೇರೆ ಬೇರೆ ಊರುಗಳಿಗೆ ಹೋಗುವುದು ನಮ್ಮ ಉತ್ಸಾಹವೇ ಆಗಿರುವುದರಿಂದ ಮಧ್ಯಾಹ್ನದ ಶಾಲಾ ಅವಧಿ ಮುಗಿದ ಕೂಡಲೇ ಮಕ್ಕಳು, ಸಾಮಾನು-ಸರಂಜಾಮುಗಳನ್ನು ಕಟ್ಟಿಕೊಂಡು ೩೩ ಮಂದಿ ಮಂಗಳೂರಿಗೆ ಪ್ರಯಾಣಿಸಿದೆವು. ಪಾದುವಾ ಕಾಲೇಜಿನ ಬಯಲು ರಂಗ ಮಂದಿರ ಅಲ್ಲಿ ಕಟ್ಟಿಕೊಂಡಿದ್ದ ಸ್ಪಾಟ್‌ಲೈಟ್, ಪಾರ್‌ಲೈಟ್‌ಗಳನ್ನು ನೋಡುತ್ತ ನಮ್ಮ ತಂಡದ ಮಕ್ಕಳೆಲ್ಲರೂ ಸಂತಸಪಟ್ಟಿದ್ದರು.
ಗ್ರಹಣ-ಕಂಕಣ ನಾಟಕವನ್ನು ನಾವು ಎರಡು ಭಾಗಗಳಾಗಿ ವಿಂಗಡಿಸಿಕೊಂಡು – ಪ್ರದರ್ಶನವಾದ ಮೊದಲನೆಯ ಹತ್ತು ನಿಮಿಷಗಳನ್ನು ನೃತ್ಯರೂಪಕವಾಗಿಸಿ ಗ್ರಹಣದ ಕುರಿತ ಪೂರ್ವರಂಗವಾಗಿ ಪ್ರದರ್ಶಿಸುತ್ತಿದ್ದೆವು. ಅದು ನಾಟಕದ ‘ಕಟಕನ್ ರೈಸರ್ʼ ಅಂತ ಹೇಳಿದರೂ ಅಡ್ಡಿಯಿಲ್ಲವೇನೋ.. ಅದರಲ್ಲಿ ಪಾಲ್ಗೊಳ್ಳುವ ಎಲ್ಲ ಮಕ್ಕಳೂ ತಮಗಿರುವ ದೈಹಿಕ ಶಕ್ತಿಯೆಲ್ಲವನ್ನೂ ಬಳಸಿಕೊಂಡು ದನಿದು ಶಬ್ದ ಸಂಗೀತ ಆ ರೂಪಕದ ಆಕರ್ಷಣೆ.
ಅದಾದ ಬಳಿಕ ಹತ್ತು ನಿಮಿಷದ ಬಿಡುವಿನಲ್ಲಿ ಮಕ್ಕಳು ವೇಷಭೂಷಣಗಳನ್ನು ಬದಲಾಯಿಸಿ ಬೇರೆಯೇ ಬಟ್ಟೆ ಬರೆಗಳನ್ನು ತೊಟ್ಟುಕೊಳ್ಳಬೇಕಾಗುತ್ತಿತ್ತು. ಸಹಾಯಕ್ಕೆ ಮಂಜುಳಾ ಸುಬ್ರಹ್ಮಣ್ಯ, ಮೌನೇಶ ವಿಶ್ವಶರ್ಮ, ಪ್ರಶಾಂತ ಅನಂಕಾಡಿ, ಪ್ರತಿಮಾರೈ ಜೊತೆಯಲ್ಲಿದ್ದರೂ ಮಕ್ಕಳೆ ಅವೆಲ್ಲವನ್ನೂ ಮಾಡಿಕೊಳ್ಳಬೇಕು ಎಂಬುದು ನಮ್ಮ ನಿಲುವಾಗಿತ್ತು. ಸಂಜೆ ೬.೩೦ಕ್ಕೆ ಸರಿಯಾಗಿ ನಾಟಕದ ಮೊದಲ ಭಾಗವನ್ನು ಆರಂಭಿಸಿ ನಡುವಣ ಹತ್ತು ನಿಮಿಷಗಳ ಅವಧಿಯನ್ನು ನಾನು, ಪ್ರೇಕ್ಷಕರೊಂದಿಗೆ ಮಕ್ಕಳ ರಂಗಭೂಮಿ ಕುರಿತಾಗಿ ಮಾತುಕತೆ ನಡೆಸುವುದು. ಆ ಬಳಿಕ ನಾಟಕದ ಎರಡನೇ ಭಾಗವನ್ನು ಮುನ್ನಡೆಸುವುದು ಅಂತ ಥೇಟರ್ ಹಬ್ ಸ್ನೇಹಿತರ ಜೊತೆ ಒಪ್ಪಂದವಾಗಿತ್ತು.
ಸಮಯಕ್ಕೆ ಸರಿಯಾಗಿ ಮಕ್ಕಳು ಪೂರ್ವರಂಗವನ್ನು ಆರಂಭಿಸಿದರು. ಪ್ರೇಕ್ಷಕರಿಗೆ ಮಕ್ಕಳ ಪಾಲ್ಗೊಳ್ಳುವಿಕೆ ಇಷ್ಟವಾಯಿತು. ನೃತ್ಯರೂಪಕ ಮುಗಿದ ಕೂಡಲೇ ನಾಟಕದ ಮಕ್ಕಳೆಲ್ಲರೂ ಮೇಕಪ್ ಕೋಣೆಗೆ ಓಡೋಡಿ ಹೋದರು. ನಾನು ಮುಂದಿನ ಹತ್ತು ನಿಮಿಷಗಳ ಮಾತುಕತೆಯನ್ನು ಮೇಕಪ್ ಮಾಡಿಕೊಳ್ಳಬೇಕಿತ್ತು.
ನಿಮಿಷ ಕಳೆದಿರಬಹುದು. ಇದ್ದಕ್ಕಿದ್ದ ಹಾಗೆ ಅಚಾನಕ ಆಗಿ… ಜೋರಾಗಿ ಶಬ್ದ ಮಾಡುತ್ತಾ ಮಳೆಸುರಿಯಲಾರಂಭಿಸಿತು. ಸಿಡಿಲಿನ ಅಬ್ಬರ ಬೇರೆ. ಲೈಟ್ ಎಂಡ್ ಸೌಂಡ್‌ನವರು ಸಿಡಿಲಿನ ಸೌಂಡಿಗೆ ಹೆದರಿ ಗಡಿಬಿಡಿ ಮಾಡುತ್ತಾ ತಮ್ಮ ಉಪಕರಣಗಳನ್ನು ಅಲ್ಲಲ್ಲಿಯೇ ಮುಚ್ಚಿಡಲಾರಂಭಿಸಿದರು. ಬಯಲ ಪ್ರೇಕ್ಷಕರು ಕುಳಿತಲ್ಲೇ ಕೊಡೆ ಬಿಡಿಸಿ ಹಿಡಿದು ಮುಂದೆನಾಗುವುದೋ ಎಂಬ ಕುತೂಹಲದಲ್ಲಿದ್ದರು. ನಾಟಕ ಆರಂಭವಾಗುವ ಮೊದಲೇ ಪ್ರದರ್ಶನಕ್ಕೆ ಗ್ರಹಣ ಹಿಡಿಯಿತಲ್ಲಾ.. ಏನು ಮಾಡುವುದು ಪ್ರದರ್ಶನ ರದ್ದುಗೊಳಿಸುವುದಾ ಅಥವಾ ಮಳೆ ನಿಲ್ಲುವ ತನಕ ಕಾಯುವುದಾ? ಎಂದೆಲ್ಲಾ ಚರ್ಚೆಗಳಾದವು.
ಮಕ್ಕಳೆಲ್ಲರೂ ಹೊಸ ವೇಷ ಭೂಷಣ ಧರಿಸಿ ರಂಗ ವೇದಿಕೆಗೆ ಪ್ರವೇಶಿಸಿದ್ದರು. ಆಗ ಪಾದುವಾ ಕಾಲೇಜಿನ ಪ್ರಾಂಶುಪಾಲರು, ನಾಟಕಕಾರರು ಆಗಿರುವ ಫಾದರ್ ಸೆರಾವೊ ಹೇಳಿದರು. ನೀವು ಸಾಧ್ಯವಾದರೆ ನಮ್ಮ ಒಳಾಂಗಣ ರಂಗವೇದಿಕೆಯಲ್ಲಿ ಪ್ರದರ್ಶನ ಮಾಡಬಹುದು. ನಮ್ಮ ಕ್ರಿಸ್ಟೋಫರ್ ಬಳಗ ಅದನ್ನು ತಾತ್ಕಾಲಿಕವಾಗಿ ಸಜ್ಜುಗೊಳಿಸಿದ್ದಾರೆ. ನೀವೇನು ಮಾಡುತ್ತೀರಿ? ಎಂದು ನನ್ನನ್ನು ಪ್ರಶ್ನೀಸಿದರು. ನಾನು ಮಕ್ಕಳ ಜೊತೆ ನೀವೇನು ಮಾಡುತ್ತೀರಿ? ಎಂದೇ ಪ್ರಶ್ನೇಮಾಡಿದೆ. ಮಕ್ಕಳು “ಸರ್ ನಾವು ರೆಡಿ. ನೀವು ಎಲ್ಲಿ ನಾಟಕ ಮಾಡಬೇಕು ಎಂದು ಹೇಳುತ್ತಿರೋ ಅಲ್ಲಿ ನಾವು ನಾಟಕ ಮಾಡುವುದೇ…” ಎಂದು ಅವರ ಉತ್ತರವಾಗಿತ್ತು.
ಮುಂದಿನ ಐದು ನಿಮಿಷಗಳಲ್ಲಿ ಬಯಲು ರಂಗಮಂದಿರದಿಂದ ೨೫೦ ಮೀ ದೂರದಲ್ಲಿರುವ ಒಳಾಂಗಣ ರಂಗವೇದಿಕೆಗೆ ತಮ್ಮೊಂದಿಗೆ ತಂದ ರಂಗಪರಿಕರ, ಸಂಗೀತದ ಉಪಕರಣಗಳು, ಪೆಟ್ಟಿಗೆ-ಕೋಲುಗಳು, ಮುಖವಾಡಗಳು, ಶಿರಸ್ತ್ರಾಣಗಳು ಎಲ್ಲವನ್ನೂ ಹೊತ್ತುಕೊಂಡು ಓಡಿಕೊಂಡು ಹೋಗಿ-ಹೊಸವೇದಿಕೆಯಲ್ಲಿ ಮಕ್ಕಳೆಲ್ಲರೂ ನಾಟಕದ ಮೊದಲ ದೃಶ್ಯಕ್ಕೆ ಸಿದ್ಧವಾಗಿದ್ದರು.
ಮೈಕಿನೆದುರು ಹಲೋ ಹಲೋ ಹೇಳುವುದಾಗಲೀ ಬೆಳಕಿನ ಸೋಸಿರಗೆ ಕೈ ಅಡ್ಡ ಹಿಡಿದು ಹಾಯ್ ಹಾಯ್ ಮಾಡುವುದಾಗಲೀ ಯಾವುದೂ ನಡೆಯಲಿಲ್ಲ. ಹಾಗೆ ಮಾಡುವುದಕ್ಕೆ ಸಮಯವೂ ಇರಲಿಲ್ಲ. ಆ ಹೊತ್ತಿಗೆ ಮಳೆ ಸುರಿಯುವುದೂ ನಿಂತು ಹೋಗಿತ್ತು. ಮುಂದೆ ೫೦ ನಿಮಿಷಗಳ ಕಾಲ ಮುನ್ನಡೆದ ‘ಗ್ರಹಣ ಕಂಕಣ’ – ರಂಗಬೂಮಿಯವರ ಭಾಷೆಯಲ್ಲಿ ಹೇಳುವುದಾದರೆ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಮಕ್ಕಳ ಮೇಲಿನ ಪ್ರೀತಿಯಿಂದಲೋ ನಾಟಕದ ಜೊತೆಗಿನ ಅಭಿಮಾನದಿಂದಲೋ ಬಂದವರೆಲ್ಲರೂ ಅತ್ಯಂತ ಸಂತಸದಿಂದ ರಂಗ ಪ್ರಯೋಗದಲ್ಲಿ ಸಹಭಾಗಿಗಳಾದರು. ಬಳಿಕ ಊಟ ಮಾಡುವ ಸಮಯದಲ್ಲಿ ಪಾದುವಾ ಥೇಟರ್ ಹಬ್‌ಗೆ ಬಂದಿದ್ದ ಹಲವಾರು ನಟ-ನಟಿಯರು, ಪ್ರೇಕ್ಷಕರು ಮಕ್ಕಳೊಂದಿಗೆ ತಮಾಷೆ ಮಾಡುತ್ತಾ ಮೆಚ್ಚುಗೆಯ ಮಾತನಾಡಿದ್ದು, ನಾಟಕದ ವಸ್ತು, ವಿನ್ಯಾಸಕ್ಕಿಂತಲೂ ಮಕ್ಕಳ ಉತ್ಸಾಹ ಸಮಯಪ್ರಜ್ಞೆ ಅದನ್ನು ಎದುರಿಸಿದ ಕ್ರಮದ ಕುರಿತೇ ಆಗಿತ್ತು. ಅದು ಮಕ್ಕಳಿಗೆ ಕಲಿಕೆಯ ಭಾಗವೇ ಆಗಿ ಹೋದುದು ಸಂತಸದ ವಿಚಾರ.
0 ಪ್ರತಿಕ್ರಿಯೆಗಳು