ರಂಗ ತಂಡ ಕಟ್ಟಿ ನೋಡು..

ಶಶಿಧರ ಭಾರಿಘಾಟ್

ರಂಗಭೂಮಿಯಲ್ಲಿ ನಲುವತ್ತು ವರ್ಷಗಳ ಅನುಭವ. ನಟ, ನಾಟಕಕಾರ, ನಿರ್ದೇಶಕ, ಸಂಘಟಕ -ಹೀಗೆ ವಿವಿಧ ಪ್ರಕಾರಗಳಲ್ಲಿ ಗಟ್ಟಿಯಾಗಿ ಬೇರೂರಿದ ಶಶಿಧರ ಭಾರಿಘಾಟ್ ಸಮುದಾಯ ತಂಡದ ಗುರಿಕಾರರಲ್ಲೊಬ್ಬರು. ವೃತ್ತಿಯಲ್ಲಿ ಅಧ್ಯಾಪಕರಾಗಿ ಪ್ರವೃತ್ತಿಯಲ್ಲಿ ರಂಗಭೂಮಿಯನ್ನು ದುಡಿಸಿಕೊಂಡವರು. ಬೆಂಗಳೂರಿನ ರಂಗಭೂಮಿಯ ಅನಿವಾರ್ಯ ವ್ಯಕ್ತಿತ್ವ.

‘ದೇಶ ಸುತ್ತು-ಕೋಶ ಓದು’ ಎನ್ನುವ ಹಾಗೆ, ರಂಗಭೂಮಿಯೂ ಕೂಡ. ನಾಟಕ ಮಾಡುತ್ತಾ, ನೋಡುತ್ತಾ-ತಂಡದೊಂದಿಗೆ ದೇಶ ಸುತ್ತುವುದು ಹತ್ತು ಹಲವು ಅನುಭವಕ್ಕೆ ಕಾರಣವಾಗುತ್ತದೆ. ಹಲವು ವಿಶೇಷಗಳು, ವಿಸ್ಮಯಗಳು, ನೋವು-ನಲಿವುಗಳು ರಂಗಭೂಮಿಯ ಒಡನಾಟದಲ್ಲಿ ಅನುಭವಕ್ಕೆ ಬರುತ್ತವೆ.

ರಂಗತಂಡಗಳನ್ನು ಕಟ್ಟಿಕೊಂಡು ಸುತ್ತುವಾಗ, ಹೊಸ ನಾಟಕದ ಸೃಷ್ಠಿಗೆ ಅವಕಾಶವಾಗಿದೆ. ಕಥೆ, ಕವನ, ನಾಟಕಗಳ ಓದು, ರಂಗಗೀತೆಗಳ ಗಾಯನ, ಒಂದು ರೀತಿಯಲ್ಲಿ ಸಮಕಾಲೀನ ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ ಹಾಗೂ ಸಾಮಾಜಿಕ ಸನ್ನಿವೇಶಗಳ ಬಗ್ಗೆ ಚರ್ಚೆಯೂ ಸಾಧ್ಯವಾಗಿದೆ. ಮತ್ತೊಂದು ವಿಶೇಷವೆಂದರೆ ಅನೇಕ ರಂಗಜೋಡಿಗಳ ಪ್ರೇಮಪ್ರಸಂಗ, ವಿವಾಹ ಪ್ರಸಂಗಗಳಿಗೂ ಕಾರಣವಾಗಿರುವ ಇಂತಹ ರಂಗಪಯಣಗಳು ಒಂದು ರೀತಿಯಲ್ಲಿ ರೋಚಕ ಪ್ರವಾಸ ಕಥನ.

ನಾಲ್ಕು ದಶಕಗಳ ರಂಗಜೀವನದಲ್ಲಿ ಸಾಕಷ್ಟು ರಂಗಪ್ರವಾಸಗಳಾಗಿವೆ. ಈ ಪ್ರವಾಸಗಳು ಕೆಲವು ಆಹ್ಲಾದಕರವಾಗಿದ್ದರೆ, ಮತ್ತೆ ಕೆಲವು ಪ್ರಯಾಸಗಳಾಗಿಯೂ ಆಗಿವೆ. ನಮ್ಮಲ್ಲಿ ಸಾಮಾನ್ಯವಾದ ಒಂದು ಕೊರತೆ ಎಂದರೆ, ರಂಗ ಪ್ರವಾಸಗಳ ದಾಖಲೆಗಳನ್ನು ಸರಿಯಾಗಿ ಇಡದೇ ಇರುವುದು. ನನ್ನ ನೆನಪಿನಿಂದ, ಹೆಕ್ಕಿ ಎರಡು-ಮೂರು ಪ್ರಸಂಗಗಳನ್ನು ನಿಮ್ಮ ಮುಂದಿಡಲು ಪ್ರಯತ್ನಿಸುತ್ತೇನೆ. ನಟನಾಗಿ, ತಂತ್ರಜ್ಞನಾಗಿ, ನಿರ್ದೇಶಕನಾಗಿ, ಸಂಘಟಕನಾಗಿ ಈ ಪ್ರಯಾಣದ ಸುಖವನ್ನು ಅನುಭವಿಸಿದ್ದೇನೆ. ಸಾಮಾನ್ಯವಾಗಿ ಸಂಘಟನೆಯಲ್ಲಿ ತೊಡಗಿಕೊಂಡು, ಟಿಕೆಟ್ ಬುಕ್ಕಿಂಗ್, ಊಟ, ಸ್ಥಳೀಯ ವ್ಯವಸ್ಥೆ ಮುಂತಾದವುಗಳನ್ನು ನಿರ್ವಹಿಸುವುದು ಅಭ್ಯಾಸವಾಗಿ ಬಿಟ್ಟಿದೆ.

ಭೋಜಪುರದ ಹೆಜ್ಜೇನಿನ ಸವಿ….

ಮೈಸೂರಿನಲ್ಲಿ ರಂಗಾಯಣ ಆರಂಭವಾದ ದಿನಗಳು. ರಂಗಾಯಣದ ನಿರ್ದೇಶಕರಾಗಿ ರಂಗಭೀಷ್ಮ ಬಿ.ವಿ.ಕಾರಂತರು ಬಂದರು. ಅದೇ ಸಂದರ್ಭದಲ್ಲಿ ಪಂಡಿತ್ ಜವಹರಲಾಲ್ ನೆಹರು ಅವರ ಜನ್ಮ ಶತಮಾನೋತ್ಸವ ವರ್ಷ (1989) ಆಚರಣೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ದೇಶದ ಪ್ರತಿಷ್ಠಿತ ರಂಗ ನಿರ್ದೇಶಕರ ನಾಟಕೋತ್ಸವಕ್ಕೆ ಮುಂದಾಗಿತ್ತು. ಶ್ರೀ ಬಿ.ವಿ.ಕಾರಂತರೂ ಕೂಡ ಒಂದು ನಾಟಕವನ್ನು ಪ್ರದರ್ಶಿಸಬೇಕಿತ್ತು. ಅದಕ್ಕೆ ಅವರು ಆಯ್ದುಕೊಂಡಿದ್ದು ಗಿರೀಶ್ ಕಾರ್ನಾಡರ ‘ಹಯವದನ’.

ಬೆಂಗಳೂರಿನಲ್ಲಿ 70ರ ದಶಕದಲ್ಲಿ ಮಾಡಿದ ಹಾಗೆ ಅನೇಕ ತಂಡಗಳನ್ನು ಒಗ್ಗೂಡಿಸಿ, ‘ಮಿತ್ರವಿಂದ’ ಎಂಬ ತಂಡವನ್ನು ಮೈಸೂರಿನಲ್ಲಿ ಕೂಡಿ ಹಾಕಿದರು. 30-40 ದಿನಗಳ ಸುದೀರ್ಘ ತಾಲೀಮು. ಸುಮಾರು 40 ಜನರ ದೊಡ್ಡ ತಂಡ. ನಾಟಕ ತಂಡದಲ್ಲಿ ದೂರದ ದೆಹಲಿಗೆ ಪ್ರಯಾಣ ಮಾಡುತ್ತಿದ್ದವರಲ್ಲಿ ಬಹುತೇಕರು ಮೊದಲಿಗರು. ಪ್ರತಿಷ್ಠಿತ ನಿರ್ದೇಶಕರು, ಪ್ರತಿಷ್ಠಿತ ಉತ್ಸವ. ದೆಹಲಿಯ ಕಮಾನಿ ರಂಗಮಂದಿರದಲ್ಲಿ ನಾಟಕ, ನಂತರ ಮೈಸೂರಿಗೆ ಹಿಂತಿರುಗುವಾಗ ಭೋಪಾಲ್ ರಂಗಮಂಡಲದಲ್ಲಿ ನಾಟಕ ಏರ್ಪಾಡಾಗಿತ್ತು.

ಸಾಮಾನ್ಯವಾಗಿ ಯಾವುದೇ ರಂಗತಂಡ ಹೊರ ಊರಿಗೆ ಹೋದಾಗ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಅವಕಾಶ ಕಲ್ಪಿಸಿಕೊಳ್ಳುವುದು ವಾಡಿಕೆ ಅದರಂತೆ ಭೋಪಾಲ್‍ನಿಂದ ಸಾಂಚಿ ಬುದ್ಧ ಸ್ಥೂಪ, ಭೀಮ್‍ಬೆಟಕಾ (ಶಿಲಾಯುಗದ Rock painting) ನೋಡಿ ಇಡೀ ತಂಡ ಬೋಜಪುರವೆಂಬ ಒಂದು ಸಣ್ಣ ಗ್ರಾಮಕ್ಕೆ ಬಂದೆವು. ಅಲ್ಲೊಂದು 11ನೇ ಶತಮಾನದಷ್ಟು ಪ್ರಾಚೀನದ ಬೃಹತ್ ಶಿವಾಲಯ, ಯಾವುದೋ ಕಾರಣಕ್ಕೆ ಅರ್ಧಕ್ಕೆ ನಿಂತು ಹೋದ ಈ ದೇವಾಲಯದಲ್ಲಿ ಬಿಸಿಲುಮಳೆಗೆ ಜಗ್ಗದೆ ನಿಂತಿರುವ ಬೃಹತ್ ಶಿವಲಿಂಗ. ಶಿವಲಿಂಗದ ಮೇಲೆ ಭಾರಿ ಹೆಜ್ಜೇನಿನ ಗೂಡುಗಳು. ಎಂದಿನಂತೆ ಕಲಾವಿದರ ಗುಂಪು ದೇವಾಲಯವನ್ನು ನೋಡುತ್ತಾ, ಬೃಹತ್ ಶಿವಲಿಂಗದ ಸುತ್ತಲೂ ನಿಂತು ಫೋಟೋ ತೆಗೆದುಕೊಳ್ಳುವ ಸಂಭ್ರಮ. ಯಾಕೋ ರೊಚ್ಚಿಗೆದ್ದ ಜೇನು ನೊಣಗಳು ಇಡೀ ತಂಡದ ಮೇಲೆ ಆಕ್ರಮಣ ಮಾಡಿ, ತಂಡವೆಲ್ಲಾ ಚಿಲ್ಲಾಪಿಲ್ಲಿ. ರಸ್ತೆಯ ಮೇಲೆ ಮುಖ ಕೆಳಗೆ ಹಾಕಿ ಮಲಗಿದ್ದು, ಮೇಲೆ ರಣಬಿಸಿಲಿಗೆ ಕಾದ ಕಪ್ಪು ಡಾಂಬರು, ಒಂದಿಬ್ಬರು ನಟರು ಜ್ಞಾನ ತಪ್ಪಿ, ಹತ್ತಿರ ಆಸ್ಪತ್ರೆಯಲ್ಲಿ ಡ್ರಿಪ್ ಹಾಕಿಸಿ, ಯಾವುದೇ ಹೆಚ್ಚಿನ ಹಾನಿ ಆಗದೆ ಹಿಂತಿರುಗಿದ್ದು…. ಬಹುಶಃ ಈ ರೀತಿಯ ಅನುಭವಗಳು ಎಲ್ಲಾ ರಂಗತಂಡಗಳಲ್ಲೂ ಆಗಿರುತ್ತದೆ.

ಪೂರ್ವದ ಕಡಲಲ್ಲಿ ಮುಳುಗಲಿದ್ದ ‘ಚಂದಿರ’

ಬೆಂಗಳೂರು ಸಮುದಾಯದ ತಂಡ ಕೊಲ್ಕತ್ತಾದ ರಾಷ್ಟ್ರೀಯ ನಾಟಕೋತ್ಸವಕ್ಕೆ ಹೆಚ್.ಎಸ್. ಶಿವಪ್ರಕಾಶರ ‘ಮಾದಾರಿ ಮಾದಯ್ಯ’ ನಾಟಕ ಪ್ರದರ್ಶನಕ್ಕಾಗಿ ತೆರಳಿತ್ತು. ಸಿ.ಬಸವಲಿಂಗಯ್ಯ ನಿರ್ದೇಶಕರು. 1991 ಮಾರ್ಚ್ ತಿಂಗಳು ಕೊಲ್ಕತ್ತದಲ್ಲಿ ಪ್ರದರ್ಶನ ಮುಗಿಸಿ ಚೆನ್ನೈ (ಮದರಾಸು) ಮೂಲಕ ಹಿಂತಿರುಗುತ್ತಿದ್ದವು. ಬೆಳಿಗ್ಗೆ ಚೆನ್ನೈಗೆ ಬಂದ ನಮಗೆ ಮತ್ತೆ ರೈಲು ಇದ್ದದ್ದು ಸಂಜೆಗೆ. ಅಲ್ಲಿಯವರೆಗೆ ನಮ್ಮೆಲ್ಲಾ ವಸ್ತುಗಳನ್ನು ಲಗ್ಗೇಜ್ ರೂಂಗೆ ಹಾಕಿ, ಹೊರಟಿದ್ದು ಹತ್ತಿರದ ಮೆರಿನಾ ಬೀಚ್‍ಗೆ.

ಸಮುದ್ರ ಸ್ನಾನದಲ್ಲಿ ಉತ್ಸಾಹದಲ್ಲಿದ್ದ ತಂಡದಲ್ಲಿ ಒಬ್ಬ ನಟ, ಅವರ ಹೆಸರು ಸೋಫಾಚಂದ್ರು-ಬೆಮೆಲ್ ನೌಕರರು. ನೋಡುತ್ತಾ, ನೋಡುತ್ತಾ ಅಲೆಗಳ ನಡುವೆ ಸಿಕ್ಕಿ, ತೀರದಿಂದ ದೂರ ದೂರಕ್ಕೆ ಹೋಗಿ ಬಿಟ್ಟರು. ಇಡೀ ತಂಡ ಸ್ತಬ್ಧ. ಯಾರೂ ಏನೂ ಮಾಡಲು ತೋಚುತ್ತಿಲ್ಲ. ಅದೃಷ್ಟವೆಂದರೆ ಹೀಗೆ ಇರಬೇಕು, ತೀರದಲ್ಲಿದ್ದ ಇಬ್ಬರು ಮೀನುಗಾರ ಯುವಕರು ಸಮುದ್ರಕ್ಕೆ ಧುಮುಕಿ, ಅಂತೂ ಇಂತೂ ಚಂದ್ರು ಅವರ ಪ್ರಾಣ ಉಳಿಸಿದರು. ಅವರದಷ್ಟೇ ಅಲ್ಲ, ನಮ್ಮೆಲ್ಲರದ್ದು, ಎಂಥಾ ಭಾವುಕ ಕ್ಷಣ ಅದು. ಸಾವಿನ ಮನೆಯ ಕದ ತಟ್ಟಿ ಬಂದಿದ್ದ ಚಂದ್ರು ಮತ್ತು ಆ ಘಟನೆಯ ನೆನಪು ನಿರಂತರ.

ಮಧ್ಯಪ್ರದೇಶದ ಮಧ್ಯದಲ್ಲಿ ಚಿತ್ರಾನ್ನ

1996 ರಲ್ಲಿ ನಮ್ಮ ತಂಡದ ‘ಮಹಾಚೈತ್ರ’-ರಚನೆ ಹೆಚ್.ಎಸ್. ಶಿವಪ್ರಕಾಶ, ನಿರ್ದೇಶನ-ಇಕ್ವಾಲ್ ಅಹಮದ್; ಮಧ್ಯಪ್ರದೇಶದ ಐದು ಕೇಂದ್ರಗಳಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಆಹ್ವಾನದ ಮೇರೆ ಪ್ರದರ್ಶನ ನೀಡಲು ತೆರಳಿತ್ತು. ಭೋಪಾಲ್, ಜಬ್ಬಲ್‍ಪುರ, ಬಿಲಾಸ್‍ಪುರ್, ಉಜ್ಜಯಿನಿ, ಗ್ವಾಲಿಯರ್ ನಲ್ಲಿ ನಾಟಕದ ಪ್ರದರ್ಶನಗಳು. ಸಮುದಾಯಕ್ಕೆ ಹಾಗೂ ಇಡೀ ತಂಡದ ಗೆಳೆಯರಿಗೆ ಇದೊಂದು ಮಹತ್ವದ ರಂಗಪ್ರವಾಸ. ಭೋಪಾಲ್‍ವರೆಗೆ ರೈಲಿನಲ್ಲಿ ಹೋದೆವು. ನಂತರ ಉಳಿದ ಕೇಂದ್ರಗಳಿಗೆ ಒಂದು ಮಿನಿಬಸ್ ವ್ಯವಸ್ಥೆ ಮಾಡಿಕೊಟ್ಟರು. ಅವಿಭಜಿತ ಮಧ್ಯಪ್ರದೇಶವನ್ನು ಬಸ್ ಮೂಲಕ ಹತ್ತು ದಿನಗಳ ಕಾಲ ಸುತ್ತಾಡಿದ ಅನುಭವ ತಂಡಕ್ಕೆ ದೊರಕಿತು.

ಜಬ್ಬಲ್‍ಪುರದಿಂದ ಬಿಲಾಸ್‍ಪುರಕ್ಕೆ ತೆರಳುವಾಗ ರಾತ್ರಿ ಪ್ರಯಾಣ, ಕಾಡುಹಾದಿ. ನಮಗೆಲ್ಲಾ ಅಪರಿಚಿತ ಪ್ರದೇಶ. ಮಾರ್ಗ ಮಧ್ಯದಲ್ಲಿ ಮರ ಉರುಳಿ ಮುಂದೆ ಹೋಗದ ಸ್ಥಿತಿ. ತಂಡದವರ ಹೊಟ್ಟೆ ಹಸಿವು ಹೇಳಲಸಾಧ್ಯ. ನಮ್ಮ ಬಸ್ ನಿಂತ ಎದುರು ಒಂಟಿಮನೆ. ಭಾಷೆ ತಿಳಿಯದು. ಹರಕು ಮುರಕು ಹಿಂದಿಯಲ್ಲಿ ಆ ಮನೆಯವರಿಗೆ ನಮ್ಮ ಪರಿಸ್ಥಿತಿ ತಿಳಿಸಿ, ನಾವುಗಳೇ ಅವರ ಮನೆಯಲ್ಲಿದ್ದ ಅಡುಗೆ ಸಾಮಾನಿನಿಂದ ವಗ್ಗರಣೆ ಚಿತ್ರಾನ್ನ, ಟೊಮೊಟೊ ಗೊಜ್ಜು ಮಾಡಿ ತಿಂದದ್ದು. ಇಂದಿಗೂ ನಾವೆಲ್ಲ ಆಗೊಮ್ಮೆ ಈಗೊಮ್ಮೆ ನೆನಪಿಸಿಕೊಳ್ಳುತ್ತೇವೆ. ನಾವು ಮಾಡಿದ ಪ್ರದರ್ಶನಗಳನ್ನು ನೋಡಲು ಪ್ರೇಕ್ಷಕರು ಬೆರಳಿಣಿಕೆಯಷ್ಟು ಇರುತ್ತಿದ್ದುದು ಮಾತ್ರ ನಮ್ಮಲ್ಲಿ ಬೇಸರ ಹುಟ್ಟಿಸುತ್ತಿತ್ತು.

ಬದುಕು-ಬದ್ಧತೆ

ಇನ್ನು ನಮ್ಮ ತಂಡ ಬೀದಿ ನಾಟಕವನ್ನು ಬದ್ಧತೆಯಿಂದ ಮಾಡಿಕೊಂಡು ಬಂದಿದೆ. ಸನ್ನಿವೇಶದ ಅಗತ್ಯಕ್ಕೆ ಸ್ಪಂದಿಸುತ್ತಾ ವಿವಿಧ ಸಂದರ್ಭದಲ್ಲಿ ಸಮುದಾಯ ಸಾಂಸ್ಕೃತಿಕ ಜಾಥ ಸಂಘಟಿಸಿದೆ. ಕೋಮು ಸೌಹಾರ್ದತೆಯನ್ನು ಪ್ರತಿಪಾದಿಸುತ್ತಾ, ಜನತೆಯಲ್ಲಿ ಸಾಮರಸ್ಯದ ಸಂದೇಶ ತೆಗೆದುಕೊಂಡು ಹೋಗಿ, ನಮ್ಮ ತಂಡದ ಕಲಾವಿದರು ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದೂ ಇದೆ. ವಿಚಾರವೇದಿಕೆ ಕರ್ನಾಟಕ-ವಿವೇಕ-ಆಶ್ರಯದಲ್ಲಿ ಬೊಳುವಾರು ಮಹಮದ್ ಕುಂಞ್ ಅವರ ‘ಕೇಸರಿ ಬಿಳಿ ಹಸಿರು’ ಕಥೆಯನ್ನು ಬೀದಿನಾಟಕವನ್ನಾಗಿಸಿ, ಪ್ರದರ್ಶಿಸುತ್ತಾ, 2002ರ ಮೇ 1 ರಂದು ಆನೇಕಲ್‍ಗೆ ಹೋದ ನಮಗೆ, ಅಲ್ಲಿನ ಕೆಲವು ಸಮಾಜಘಾತುಕ ಗೂಂಡಾಗಳು, ರಾಜಕೀಯ ಪಕ್ಷದಿಂದ ಪ್ರೇರಿತರಾಗಿ ಮಾಡಿದ ಹಲ್ಲೆಯಿಂದ ನಮ್ಮ ಹಿರಿಯ ಸಂಗಾತಿ ಸಿ.ಕೆ.ಗುಂಡಣ್ಣ ಬದುಕಿ ಉಳಿದಿದ್ದು ನಮ್ಮ ಕನ್ನಡ ರಂಗಭೂಮಿಯ ಅದೃಷ್ಟವೆನ್ನಬೇಕು.

ರಂಗತಂಡವನ್ನು ಕಟ್ಟಿಕೊಂಡು ತಿರುಗಿದ್ದನ್ನು ಬರೆಯುತ್ತಾ ಹೋದರೆ ಇನ್ನು ಬಹಳಷ್ಟು ಸಂಗತಿಗಳಿವೆ. ಅನುಭವಗಳೂ ಇದೆ. ಈ ಸಾಂಸ್ಕೃತಿಕ ಅನುಭವಗಳು ನಿರಂತರವಾಗಿ ನೆನಪಿನಲ್ಲಿರುತ್ತವೆ.

‍ಲೇಖಕರು Avadhi

December 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: