ದತ್ತಾತ್ರೇಯ ಕುಲಕರ್ಣಿ
ಬೆಂಜೊ ಎಂಬ ಹೆಸರಿನಿಂದ ಪ್ರಸಿದ್ಧರಾದ ಯ್ಯಾಂಡ್ರು ಬಾರ್ಟನ್ ‘ಬೆಂಜೊ’ ಪ್ಯಾಟರ್ಸನ್ ಕಳೆದ ಶತಮಾನದಲ್ಲಿದ್ದ ಆಸ್ಟ್ರೇಲಿಯನ್ ಕವಿ (೧೮೬೪ – ೧೯೪೧). ಆಗಿನ್ನೂ ಬ್ರಿಟಿಶ್ ಮತ್ತು ಇತರ ಯುರೋಪಿಯನ್ ವಸಾಹತುಗಾರರು ಈ ದೇಶದಲ್ಲಿ ಬಂದು ನೆಲೆಸಲು ಪ್ರಾರಂಭಿಸಿದ್ದರು. ಹೀಗಾಗಿ ಬರವಣಿಗೆಯನ್ನು ಗಂಭಿರವಾಗಿ ಪರಿಗಣಿಸಿ ಸಾಹಿತ್ಯದ ಮೂಲಕ ತಮ್ಮನ್ನು ಅಭಿವ್ಯಕ್ತಿಗೊಳಿಸಲು ಯಾರೂ ಇನ್ನೂ ಪ್ರಾರಂಭಿಸಿರಲಿಲ್ಲ. ಇಂಥ ಸಮಯದಲ್ಲಿ ಇಲ್ಲಿಯೇ ಹುಟ್ಟಿದ ಎರಡನೆ ತಲೆಮಾರಿನವರಾದ ಬೆಂಜೊ ತಮ್ಮ ಆಸ್ಟ್ರೇಲಿಯನ್ ಜೀವನಕ್ರಮ ಅದರಲ್ಲಿಯೂ ‘ಬುಶ್ ಲೈಫ್’ ಎಂದೆ ಕರೆಸಿಕೊಳ್ಳುವ ಹಳ್ಳಿಗಾಡಿನ ಜೀವನಶೈಲಿಯನ್ನು ತಮ್ಮ ಕವಿತೆ ಮತ್ತು ಕಥೆಗಳ ಮೂಲಕ ಹಿಡಿದಿಟ್ಟoತಹ ಪ್ರಥಮ ವ್ಯಕ್ತಿ. ಇವರಂತೆಯೇ ಸರಿಸುಮಾರು ಇದೆ ಸಮಯದಲ್ಲಿ ಬರವಣಿಗೆಯನ್ನು ಪ್ರಾರಂಭಿಸಿ ಪ್ರಸಿದ್ಧರಾದವರು ಹೆನ್ರಿ ಲಾವ್ಸನ್(೧೮೬೭-೧೯೨೨). ಇವರಿಬ್ಬರನ್ನು ಆಸ್ಟ್ರೇಲಿಯನ್ ಇಂಗ್ಲಿಷ್ ಸಾಹಿತ್ಯದ ಮೂಲ ಪುರುಷರೆಂದು ಭಾವಿಸಲಾಗುತ್ತದೆ.
ಸಿಡ್ನಿ ಹತ್ತಿರವಿರುವ ಒಂದು ಹಳ್ಳಿಯಲ್ಲಿ ಹುಟ್ಟಿದ ಬೆಂಜೊ ಅವರಿಗೆ ಹಳ್ಳಿಯ ಜೀವನಶೈಲಿ ಮತ್ತು ತಮ್ಮ ಹಳ್ಳಿಯ ಮೂಲಕ ಹಾಯ್ದುಹೋಗುವ ಅಲೆಮಾರಿ ದನಗಾಹಿಗಳ ಜೀವನಕ್ರಮವನ್ನು ಹತ್ತಿರದಿಂದ ನೋಡುವ ಅವಕಾಶ ಸಹಜವಾಗಿ ಒದಗಿತ್ತು. ಅವಾಗಿನ ಅನುಭವಗಳನ್ನೇ ಅವರು ತಮ್ಮ ಬರಹಗಳ ಮೂಲಕ ವ್ಯಕ್ತಪಡಿಸಿ “ಆಸ್ಟ್ರೇಲಿಯನ್ ಬುಶ್ ಲೈಫ್”ಗೆ ಸಾಹಿತ್ಯದ ಸ್ಪರ್ಶವನ್ನು ಕೊಟ್ಟರು.
ಈ ಬುಶ್ ಲೈಫ್ ಅಥವಾ ಔಟ್ ಬ್ಯಾಕ್ ಎಂದು ಕರೆಸಿಕೊಳ್ಳುವ ಜೀವನ ಈ ಆಸ್ಟ್ರೇಲಿಯಾದ ರಾಷ್ಟ್ರೀಯ ಸಂಕೇತ ಎನ್ನುವಷ್ಟು ಪ್ರಸಿದ್ಧವಾಗಿದೆ. ಇಲ್ಲಿ ದೊಡ್ಡ ದೊಡ್ಡ ಗಿಡದ ಕಾಡುಗಳು ಅಪರೂಪ. ಸಮತಟ್ಟಾದ ನೆಲವನ್ನು ಹೊಂದಿರುವ ಈ ದೇಶದಲ್ಲಿ ಕುರುಚಲು ಗಿಡ ಗಂಟೆಗಳು, ಆಳೆತ್ತರದ ಹುಲ್ಲುಗಾವಲು ಎಲ್ಲ ಕಡೆಗೆ ಕಂಡುಬರುತ್ತದೆ. ಯುರೋಪಿಯನ್ನರು ಈ ದೇಶದಲ್ಲಿ ಬಂದು ನೆಲೆಸಿದ ಮೇಲೆ ಅನಿವಾರ್ಯವಾಗಿ ವ್ಯವಸಾಯವನ್ನು, ಹೈನುಗಾರಿಕೆಯನ್ನು ಮಾಡಬೇಕಾಗಿದ್ದರಿಂದ ಇಂತಹ ಬಯಲುಪ್ರದೆಶಗಳಲ್ಲಿ ತಮಗೆ ಬೇಕಾದ ಕಡೆಗೆ ಹೋಗಿ ಇರತೊಡಗಿದರು. ಅದರಲ್ಲಿಯೂ ಕೆಲವು ವಲಸೆಗಾರರು ಅಪರಾಧಿಗಳು/ ಜೈಲಿನಲ್ಲಿ ಇದ್ದು ಬಂದಂತಹ ಹಿನ್ನೆಲೆಯುಳ್ಳವರಾದದ್ದರಿಂದ ಅವರಿಗೆ ಇಂಥ ಬುಶ್ ಗಳಲ್ಲಿ ಇರುವದು ಒಂದು ತರಹದ ಸ್ವಾತಂತ್ರ್ಯವೆನಿಸಿ ಬಹಳ ಸಂತಸವಾಗಿತ್ತು. ಮುಂದೆ ಕಾಲಾನುಕ್ರಮದಲ್ಲಿ ಈ ತರಹದ ಜನರು ಇಂಥ ದೊಡ್ಡ ದೇಶದಲ್ಲಿ ಅತಿ ಸಣ್ಣ ಗುಂಪುಗಳಾಗಿ, ಸಣ್ಣ ಸಣ್ಣ ಸಂಖ್ಯೆಯಲ್ಲಿದ್ದಿದ್ದರಿಂದ ಬೇರೆ ಯಾರ ಸಹಾಯವಿಲ್ಲದೆ ತಮ್ಮಷ್ಟಕ್ಕೆ ತಾವೇ ಒಬ್ಬೊಬ್ಬರಾಗಿ ಇರುವದನ್ನು ರೂಢಿಸಿಕೊಂಡರು. ನೈಸರ್ಗಿಕ ಪ್ರಕೋಪಗಳನ್ನು ಎದುರಿಸುವದನ್ನು, ಅನಿರೀಕ್ಷಿತ ಅಪಾಯಗಳನ್ನು ಜಾಣತನದಿಂದ ಎದುರಿಸುವದನ್ನು, ಸ್ವಾವಲಂಬನೆಯನ್ನು ಮೈಗೂಡಿಸಿಕೊಂಡ ಈ ಬುಶ್ ಜನ ಮತ್ತು ಅವರ ಜೀವನಕ್ರಮ ಮುಂದೆ ರಾಷ್ಟ್ರೀಯ ಆದರ್ಶವೆಂದು ಪ್ರಸಿದ್ಧವಾಯಿತು. ಬುಶ್ ಮ್ಯಾನ್ ಎಂದರೆ ಚರ್ಮದ ಜಾಕೀಟು, ತಲೆಮೇಲೊಂದು ದೊಡ್ಡ ಟೊಪ್ಪಿಗೆ, ಮೊಣಕಾಲಿನ ತನಕ ಇರುವ ಶೂಗಳನ್ನು ಹಾಕಿಕೊಂಡು, ಅತಿ ರಂಜಿತ ವ್ಯಕ್ತಿತ್ವವನ್ನು ಹೊಂದಿ ಕುದುರೆ ಮೇಲೆ ಕುಳಿತ ತನ್ನದೇ ವಿಶಿಷ್ಟ ಶೈಲಿಯಲ್ಲಿ ದನಗಾಹಿ ಕೆಲಸವನ್ನು ಮಾಡುವವ ಎನ್ನುವ ಭಾವನೆ ಬೆಳೆದುಬಂದಿತು.

ಇಂತಹ ‘ಬುಶ್ ಮ್ಯಾನ್’ ಮತ್ತು ಅವರ “ಬುಶ್ ಲೈಫ್”ನ್ನು ಬೆಂಜೊ ಪ್ಯಾಟರ್ಸನ್ ಮತ್ತು ಹೆನ್ರಿ ಲಾವ್ಸನ್ ಸಾಹಿತ್ಯದ ಮೂಲಕ ಹಿಡಿದಿಟ್ಟರೆ ಹಲವು ಚಿತ್ರಕಾರರು ತಮ್ಮ ಪೇಂಟಿಂಗ್ಗಳಲ್ಲಿ, ಹಲವು ಸಂಗೀತಗಾರರು ತಮ್ಮ ಬುಶ್ ಬಲ್ಲಾಡ್ ಗಳಲ್ಲಿ ಅಭಿವ್ಯಕ್ತಿಸಿದ್ದಾರೆ.
ಈಗಿನ ಬಹಳಷ್ಟು ಆಸಿಗಳು ನಗರ ಪ್ರದೇಶಗಳಲ್ಲಿ ಇದ್ದರೂ ರಜಾದಿನಗಳಲ್ಲಿ ಇಂತಹ ಬುಶ್ ಪ್ರದೇಶದಲ್ಲಿ ಟೆಂಟ್ ಹಾಕಿ ವಾರಾನುಗಟ್ಟಲೇ ಇದ್ದು ಬುಶ್ ಜೀವನಶೈಲಿಯ ಸಂತಸವನ್ನು ಅನುಭವಿಸುತ್ತಾರೆ.
ಬೆಂಜೊ ಪ್ಯಾಟರ್ಸನ್ ಬರೆದ ಕವಿತೆಗಳಲ್ಲಿ ‘ವಾಲ್ಟ ಜಿಂಗ್ ಮಟಿಲ್ಡಾ’, “ಕ್ಲಾನ್ಸಿ ಆಪ್ ಓವರಫ್ಲೌ” ಮತ್ತು ದ ಮ್ಯಾನ್ ಫ್ರಾಮ್ ಸ್ನೋವಿ ರಿವರ್” ಈ ಮೂರು ಪ್ರಸಿದ್ಧವಾದ ಬುಶ್ ಕವಿತೆಗಳು.
ಕ್ಲಾನ್ಸಿ ಆಪ್ ಓವರಫ್ಲೌ ಕವನ
ಈ ಕವನದಲ್ಲಿ ನಗರದವನ ದೃಷ್ಟಿಯಲ್ಲಿ ಅವನ ಮತ್ತು ಬುಶ್ ವ್ಯಕ್ತಿಯ ಜೀವನ ಶೈಲಿಯಲ್ಲಿಯ ವ್ಯತ್ಯಾಸವನ್ನು ಬಿಂಬಿಸಲಾಗಿದೆ. ಈ ಕವನದ ಹಿಂದೆ ಬೆಂಜೊ ಅವರ ಜೀವನದಲ್ಲಾದ ಒಂದು ನೈಜ ಘಟನೆಯಿದೆ. ವಕೀಲರಾಗಿ ಕೆಲಸಮಾಡುತ್ತಿದ್ದ ಬೆಂಜೊ ಅವರು ತಮ್ಮ ಒಬ್ಬ ಕಕ್ಷಿದಾರರ ಅಣತಿಯಂತೆ ಆ ಕಕ್ಷಿದಾರರಿಗೆ ಕೊಡಬೇಕಾಗಿದ್ದ ಹಣವನ್ನು ಕೊಡುವಂತೆ ಓವರಫ್ಲೌ ಎನ್ನುವ ಹಳ್ಳಿಯಲ್ಲಿದ್ದ ಕ್ಲಾನ್ಸಿ ಎನ್ನುವನಿಗೆ ಪತ್ರ ಬರೆಯುತ್ತಾರೆ. ಆದರೆ ಸ್ವಲ್ಪ ದಿನಗಳಲ್ಲಿ “ಕ್ಲಾನ್ಸಿ ಹೋಗಿದ್ದಾನೆ ದನಗಳ ಹಿಂದೆ, ಗೊತ್ತಿಲ್ಲ ಈಗ ಎಲ್ಲಿದ್ದಾನಂತ!” ಇಷ್ಟೇ ವಾಕ್ಯವಿರುವ ಉತ್ತರ ಬರುತ್ತದೆ.ಅದೂ ಆ ಪತ್ರವನ್ನು ಟಾರನಲ್ಲಿ ಬೆರಳನ್ನು ಅದ್ದಿ ಬರೆಯಲಾಗಿರುತ್ತದೆ. ಈ ಪತ್ರದಿಂದ ಸ್ಪೂರ್ತಿ ಗೊಂಡ ಬೆಂಜೊ ಕ್ಲಾನ್ಸಿಯ ಒತ್ತಡವಿಲ್ಲದ ಜೀವನವನ್ನು ಕಲ್ಪಿಸಿಕೊಂಡು ಈ ಕವನವನ್ನು ಬರೆದಿದ್ದಾರೆ.
‘Clancy, of The Overflow’.
I had written him a letter which I had, for want of better
Knowledge, sent to where I met him down the Lachlan, years ago,
He was shearing when I knew him, so I sent the letter to him,
Just ‘on spec’, addressed as follows, ‘Clancy, of The Overflow’.
And an answer came directed in a writing unexpected,
(And I think the same was written with a thumb-nail dipped in tar)
‘Twas his shearing mate who wrote it, and verbatim I will quote it:
‘Clancy’s gone to Queensland droving, and we don’t know where he are.’
In my wild erratic fancy visions come to me of Clancy
Gone a-droving ‘down the Cooper’ where the Western drovers go;
As the stock are slowly stringing, Clancy rides behind them singing,
For the drover’s life has pleasures that the townsfolk never know.
And the bush hath friends to meet him, and their kindly voices greet him
In the murmur of the breezes and the river on its bars,
And he sees the vision splendid of the sunlit plains extended,
And at night the wond’rous glory of the everlasting stars.
I am sitting in my dingy little office, where a stingy
Ray of sunlight struggles feebly down between the houses tall,
And the foetid air and gritty of the dusty, dirty city
Through the open window floating, spreads its foulness over all.
And in place of lowing cattle, I can hear the fiendish rattle
Of the tramways and the buses making hurry down the street,
And the language uninviting of the gutter children fighting,
Comes fitfully and faintly through the ceaseless tramp of feet.
And the hurrying people daunt me, and their pallid faces haunt me
As they shoulder one another in their rush and nervous haste,
With their eager eyes and greedy, and their stunted forms and weedy,
For townsfolk have no time to grow, they have no time to waste.
And I somehow rather fancy that I’d like to change with Clancy,
Like to take a turn at droving where the seasons come and go,
While he faced the round eternal of the cash-book and the journal —
But I doubt he’d suit the office, Clancy, of ‘The Overflow’.
ಕ್ಲಾನ್ಸಿ ಆಪ್ ಓವರಫ್ಲೌ – ಕಲ್ಹಳ್ಳಿಯ ಗೊಲ್ಲ ಕಾಳಿಂಗನಾಗಿ ಕನ್ನಡದಲ್ಲಿ…
ನಾನು ಅವನಿಗೆ ಪತ್ರ ಬರೆದೆ ಮತ್ತಷ್ಟು ಅವನ ಬಗ್ಗೆ ತಿಳಿದುಕೊಳ್ಳಲು
ಕಳುಹಿಸಿದೆ ಅದನ್ನು ಅವನನ್ನು ನಾನು ನೋಡಿದ ಕಲ್ಹಳ್ಳಿಗೆ
ನಾನು ನೋಡಿದಾಗ ಅವನು ತಮ್ಮೂರಿನಲ್ಲಿ ತೆಗೆಯುತ್ತಿದ್ದ ಕುರಿ ಉಣ್ಣೆಯ
ಅದಕ್ಕೆ ಬರೆದೆ ಅಜಮಾಸಿನಲ್ಲಿ ಕಲ್ಹಳ್ಳಿಯ ಗೊಲ್ಲ ಕಾಳಿಂಗನಿಗೆ ಎಂದು ವಿಳಾಸವ
ತಕ್ಷಣ ಉತ್ತರ ಬಂತು ಒಂದು ವಿಚಿತ್ರ ರೀತಿಯಲ್ಲಿ
ನನಗನಿಸಿದಂತೆ ಪತ್ರವನ್ನು ಬರೆಯಲಾಗಿತ್ತು ಇದ್ದಲಿನಲ್ಲಿ
ಅದನ್ನು ಬರೆದದ್ದು ಅವನ ಗೆಳೆಯ, ಹೀಗಿತ್ತು ಅವನ ಬರಹ
ಕಾಳಿಂಗ ಹೋಗಿದ್ದಾನೆ ದನಗಳ ಹಿಂದೆ, ಗೊತ್ತಿಲ್ಲ ಈಗ ಎಲ್ಲಿದ್ದಾನಂತ!
ನನ್ನ ಖುಷಿಯ ಮನಸಿನ ತುಂಬ ಕಾಳಿಂಗನ ಚಿತ್ರವೇ ತುಂಬಿತಿಹುದು
ಗುಡ್ಡ ಬೆಟ್ಟಗಳಲ್ಲಿ, ಹುಲ್ಲಿಗಾವಲುಗಳಲ್ಲಿ ಅಲೆಮಾರಿ ಗೋಪಾಲನಾಗಿ
ಕಾಳಿಂಗ ಹಾಡುತ್ತಾನೆ ಹಾಡು, ಅನುಸರಿಸುತ್ತವೆ ಅವನನ್ನು ಅವನ ಹಿಂಡು
ಅಂತಹ ದನಗಾಹಿಯ ಜೀವನ ಖುಶಿ, ನಗರದವರಿಗೇನು ತಿಳಿದೀತು ಅದರ ಪರಿ?
ಅವನಿಗಿರುವದು ಒಳ್ಳೆ ಕೋರುವ ಹಳ್ಳಿ ಗೆಳೆಯರು
ಅವನು ನಡೆವ ನದಿ ದಂಟೆಯ ಗುಂಟ ಮೆಲುಗಾಳಿ ಸುಳಿದಾಡುವದು
ಅವನಿಗೆ ಕಾಣುವದು ಭೂರಮೆಯ ಸ್ಪರ್ಶಿಸುವ ದಿವ್ಯ ಹಗಲು
ಹಾಗು ರಾತ್ರಿಯ ಅಸಂಖ್ಯೆ ನಕ್ಷತ್ರಗಳ ಹೊನಲು.
ಆದರೆ ನಾನಿರುವದು ಈ ಮಬ್ಬಾದ ಗಗನ ಚುಂಬಿ ಕಟ್ಟಡದಲ್ಲಿ
ದುರ್ಬಲ ಬೆಳಕಿಲ್ಲಿ ಗೊಡೆಗಳ ಮೂಲಕ ತೂರಿ ದುರ್ಲಭಗೊಳ್ಳುವದು
ಖಮಟು ವಾಸನೆ, ಜಿಗಟು ಧೂಳು ಎಲ್ಲ ಕಡೆ ತುಂಬಿ
ಹೊಲಸು ಕಿಡಕಿಗಳ ಮೂಲಕ ಹರಡಿ ಊರನ್ನೆ ಮಲೀನಗೊಳಿಸಿಹುದು
ದನಕರುಗಳ ನಲಿತದ ಬದಲಾಗಿ ಕೇಳುವದಿಲ್ಲಿ
ಟ್ರೇನು-ಬಸ್ಸುಗಳ ಉಲಿತದ ಕರ್ಕಶ
ಹಾಗೂ ಅನವರತದ ಹೆಜ್ಜೆ ಸಪ್ಪಳದ ಬದಲಿಗೆ
ಈ ಗಟಾರ ಮಕ್ಕಳ ಹುಂಬ ಭಾಷೆಯ ಬೈಗಳ
ಈ ನಗರದ ಅವಸರದ ಜನ ಒಬ್ಬರಿಗೊಬ್ಬರು ಹೆಗಲು ತಿಕ್ಕುತ್ತಾ ತಡಬರಿಸುತ್ತಾರೆ
ಮತ್ತು ಸದಾ ಆತುರದಲ್ಲಿರುವ ಅವರ ಪೇಲವ ಮುಖ ನನ್ನ ಕಾಡುತ್ತದೆ.
ಕಾತುರದ ಕಣ್ಣುಗಳ ತುಂಬ ಅತ್ಯಾಸೆಯ ಕಸ ತುಂಬಿರುವ
ಇವರಿಗೆ ಬೆಳೆಯಲಿಕ್ಕೆ ಸಮಯವಿಲ್ಲ, ಹಾಳಾಗಲಿಕ್ಕೆ ಬಿಡುವುಇಲ್ಲ.
ನನಗೊಮ್ಮೊಮ್ಮೆ ನಾನು ಕಾಳಿಂಗನ ಜೊತೆ ಅದಲು ಬದಲಾಗುವ ಖಯಾಲಿ ಮೂಡುವದು
ನಾನು ಅವನ ಹಾಗೆ ದನಗಳ ಹಿಂದೆ ಋತುಮಾನಗಳ ಕಳೆಯಬೇಕು
ಹಾಗೂ ಅವನು ಅನವರತದ ಈ ಖಾತೆ-ಕಿರ್ದಿಗಳ ಪುಸ್ತಕಗಳಲ್ಲಿ ಕಳೆದೋಗಬೇಕು
ಆದರೆ ಇದಾಗುವದು ಸಾಧ್ಯವಿಲ್ಲ, ಸುಖಪುರುಷ ಕಲ್ಹಳ್ಳಿಯ ಗೊಲ್ಲ ಕಾಳಿಂಗನಿಗೆ ಇದು ಹೊಂದುವದಿಲ್ಲ.






very fine , Alas, every body on dis world want to exchange their life including this clancy of overflow also!
klansi of overflow kavan chennagide mattu adar kannada anuvaad sogasagi moodi bandide.