ಆಷಾಢದ ಒಂದು ದಿನ ಮತ್ತು ಅನಭಿಜ್ಞ ಶಾಕುಂತಲಕ್ಕೆ ಪ್ರವೇಶಿಸಿದಾಗ
ಮೋಹನ್ ರಾಕೇಶ್ ಅವರ ಆಷಾಡದ ಒಂದು ದಿನ ಮತ್ತು ಕೆ ವೈ ನಾರಾಯಣ ಸ್ವಾಮಿಯವರ ಈಚಿನ ಅನಭಿಜ್ಞ ಶಾಕುಂತಲ ನಾಟಕಗಳು ಕಾಳಿದಾಸನ ವೈಯುಕ್ತಿಕ ಬದುಕಿನ ಸುತ್ತ ನಡೆದರೂ ಆ ಮೂಲಕ ಸೃಜನಶೀಲತೆಯ ಭಿನ್ನ ಮುಖಗಳನ್ನು ಕಾಣಲು ಸಾಧ್ಯವಿದೆ. ಎರಡೂ ನಾಟಕಗಳು ಅಭಿಜ್ಞಾನ ಶಾಕುಂತಲವನ್ನು ಅಧ್ವೈತಗೊಳಿಸಿಕೊಂಡಂತೆ ರಚಿತವಾಗಿವೆ. ಮೋಹನ್ ರಾಕೇಶ್ ಅವರು ಕಥನ ಕ್ರಮದ ಮೂಲಕ ಪೃಕೃತಿ ಮತ್ತು ಮನುಷ್ಯ ಸಂಬಂಧಗಳನ್ನು ಅಧ್ವೈತಗೊಳಿಸಿದರೆ ನಾರಾಯಣಸ್ವಾಮಿ ಮುಂದುವರೆದು ಕವಿತ್ವದ ಮೂಲಕ ಆ ಸಂಬಂಧಗಳ ಸೇತುವೆಯನ್ನು ಮತ್ತಷ್ಟು ದೇಸಿಗೆ ಒಳಪಡಿಸುತ್ತಾರೆ. ಹಾಗೆ ನೋಡಿದರೆ ಅನಭಿಜ್ಞ ಶಾಕುಂತಲ ಆಷಾಡದ ಬಂದ ದಿನದಿಂದ ಸಾಕಷ್ಟು ಪಡೆದುಕೊಂಡಿದೆಯಾದರೂ ನಾಟಕದ ಮಧ್ಯಭಾಗದಿಂದ ತನ್ನದೇ ಆದ ಹುಡುಕಾಟಗಳನ್ನು ಶೋಧಿಸುತ್ತದೆ.
ಮೋಹನ್ ಅವರು ಕೂಡಾ ಬುಡಕಟ್ಟು ಬದುಕನ್ನು ಶೋಧಿಸಿರುವ ಪರಿ ಹಾಗು ಅದರ ಜ್ಞಾನ ಪರಂಪರೆಯ ಕ್ರಮಗಳು ಸ್ವಲ್ಪ ಸ್ವೂಪಜ್ಞಶೀಲತೆಯನ್ನು ದಕ್ಕಿಸಿಕೊಂಡಿರುವ ರೀತಿಯನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಕೆ ವಿ ನಾರಾಯಣ ಅವರು ಅನಭಿಜ್ಞ ಶಾಕುಂತಲದ ಬಗ್ಗೆ ಬರೆಯುವಾಗ ಹೆಣ್ಣು ನೆಲೆಯಿಂದ ಸಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ. ಆಷಾಡದ ಒಂದು ದಿನಕ್ಕೆ ಕೂಡಾ ಹೆಣ್ಣು ನೆಲೆಯಿಂದಲೇ ಸಾಗುತ್ತದೆ. ಆಷಾಡದ ಮಲ್ಲಿಕಾ ಒಂದು ವಿಚಿತ್ರ ಸಂವೇದನೆಯ ಪಾತ್ರವಾಗಿ ಮೂಡಿಬಂದಿದ್ದಾಳೆ. ಹಾಡಿಯ ಪೃಕೃತಿಯ ಸಂವೃಧ್ಧತೆ ಮತ್ತು ಮಲ್ಲಿಕಾಳ ಮನಸ್ಸು ಬೇರೆ ಬೇರೆ ಅಲ್ಲ. ಕಾಳಿದಾಸನ ಮಾನಸಿಕ ರಾಣಿಯಾಗಿಯೇ ಇದ್ದಾಳೆ. ಪೃಕೃತಿಯನ್ನು ಕಾಳಿದಾಸ ಅಸಾದಿಸುವಷ್ಟೇ ಮಲ್ಲಿಕಾಳು ಆಸ್ವಾದಿಸುತ್ತಾಳೆ. ಅರಿವು ಮತ್ತು ಬದುಕು ಮುಖಾಮುಖಿಯಾದಾಗ ಇವರಿಬ್ಬರೂ ಆಯ್ಕೆಮಾಡಿಕೊಳ್ಳುವುದು ಅರಿವನ್ನೇ ಅನಿಸುತ್ತದೆ. ಕಾಳಿದಾಸನ ಅರಿವನ್ನು ಹಾಡಿಯಲ್ಲಿಯೇ ಸೀಮಿತಗೊಳಿಸುವುದು ಮಲ್ಲಿಕಾಳಿಗೆ ಇಷ್ಟವಿಲ್ಲ. ಅವನ ಪಾತ್ರಗಳು ಲೋಕಕ್ಕೆ ವ್ಯಾಪಿಸಬೇಕೆಂಬ ನಿಲುವು ಆಕೆಯದು.

ಕಾಳಿದಾಸ ಪ್ರಭುತ್ವದ ಒಳಹೊರಗುಗಳನ್ನು ಬಲ್ಲವನು ಒಂದು ಕಡೆ ದಂತಲು ಎಂಬ ರಾಜ್ಯದ ಅಧಿಕಾರಿ ಶಬ್ದಾರ್ಥವಾದರು ಗೊತ್ತೇ ನಿನಗೆ ಎಂದು ಕಾಳಿದಾಸನಲ್ಲಿ ಪ್ರಶ್ನಿಸುತ್ತಾನೆ. ಶಬ್ದ ಮತ್ತು ಅರ್ಥ ರಾಜಪುರುಷರ ಸೊತ್ತು ಎಂದು ತಿಳಿದು ಆಶ್ಚರ್ಯವಾಯಿತಿ ಎಂದು ಹೇಳುತ್ತಾನೆ,. ಭಾರತೀಯ ಪರಂಪರೆಯಲ್ಲಿ ಶಬ್ದ ಮತ್ತು ಅರ್ಥಗಳ ಜಗ್ಗಾಟಗಳು ನಡೆದೇ ಇವೆ. ಕಾಳಿದಾಸ ನೀಡುವ ಉತ್ತರ ಅವು ಪ್ರತಿಭೆಗೆ ಸಂಬಂಧ ಪಟ್ಟಿವೆ ವಿನ: ಯಾವುದೇ ಸಮುದಾಯ ಪ್ರಭುತ್ವಗಳು ಅಡಿಯಾಳಾಗಿ ಇಲ್ಲ ಎಂಬುದು. ಈ ಶತಮಾನದ ಕನ್ನಡದ ಪ್ರತಿಭಾವಂತ ಕವಿ ಕುವೆಂಪು ಅವರೂ ಕೂಡಾ ತಮ್ಮ ಜಲಗಾರ, ಶೂದ್ರ ತಪಸ್ವಿ, ಬೆರಳ್ಗೆ ಕೊರಳ್, ಎಂಬ ನಾಟಕಗಳಲ್ಲಿ ಈ ಪ್ರಶ್ನೆಯನ್ನೇ ಶೋಧಿಸುತ್ತಾರೆ. ಹಾಗೆ ನೋಡಿದರೆ ಮಲ್ಲಿಕಾಗೂ ಈ ಶಬ್ದಾರ್ಥಗಳು ದೂರವಾಗಿಲ್ಲ
ಪೃಕೃತಿ ಮತ್ತು ಅದರಲ್ಲಿ ಲೀನವಾಗಿರುವ ಸಕಲ ಜೀವ ರಾಶಿಗಳು ಯಾರ ಸ್ವತ್ತು ಅಲ್ಲವೆಂಬುದು ಕಾಳಿದಾಸನ ನಿಲುವು. ನಿಸರ್ಗವನ್ನು ಆವಾಹಿಸಿಕೊಳ್ಳುವುದು ಈ ನಾಟಕದಲ್ಲಿ ಭಿನ್ನವಾಗಿ ಕೆಲಸ ಮಾಡಿದೆ. ಕಾಳಿದಾಸ ರಾಜಾಶ್ರಯವನ್ನು ಪ್ರಾರಂಭದಲ್ಲಿ ವಿರೋಧಿಸುವುದು ಕೂಡಾ ನಿಸರ್ಗದ ಹಿನ್ನೆಲೆಯಲ್ಲಿಯೇ. ನೆಲದ ಮಣ್ಣನ್ನು ಮರೆಯುತ್ತೇನೆಂಬ ಭಯವಿದ್ದರೂ ಮಲ್ಲಿಕಾ ಅದಕ್ಕೆ ನೆನಪುಗಳು ಯಾವತ್ತೂ ಸಾಯುವುದಿಲ್ಲ. ನಿನ್ನ ಬರಹಲೋಕದಲ್ಲಿ ನಾವೆಲ್ಲರೂ ಅಪ್ರಜ್ಞಾಪೂರ್ವಕವೇ ಇರುತ್ತೇವೆ ಎಂದು ಹೇಳುತ್ತಾಳೆ. ಒಂದು ಬಗೆಯಲ್ಲಿ ಮಲ್ಲಿಕಾ ಇಷ್ಟಪಡುವ ಪೃಕೃತಿ ಕಾಳಿದಾಸ ಬಯಸುವ ಪೃಕೃತಿ ಏಕಬಗೆಯದೇ. ಇದಕ್ಕೆ ಸಮಾಧಿ ಸ್ಥಿತಿ ಎಂದು ಕರೆಯುವುದು. ಮಲ್ಲಿಕಾ ಭಾವನೆಯನ್ನು ವರಿಸುವುದೂ ಕೂಡಾ ಸಮಾಧಿ ಸ್ಥಿತಿಯಲ್ಲೇ. ರಾಕೇಶ್ ಅವರು ಈ ಸ್ಥಿತಿಯನ್ನು ಕೇವಲ ಕಾಳಿದಾಸ ಮತ್ತು ಮಲ್ಲಿಕಾರಲ್ಲಿ ಕಾಣುವಂತೆ ಮಾಡಿದ್ದಾರೆ. ಮಲ್ಲಿಕಾ ಪದೇ ಪದೇ ಮಳೆಯಲ್ಲಿ ತೊಯ್ದುಕೊಳ್ಳುವುದು ಇದನ್ನೇ ಸೂಚಿಸುತ್ತಿದೆ. ಪ್ರೆಮವನ್ನು ಮೀರಿದ್ದು ಈ ದರ್ಶನ. ಕೆ ವೈ. ಇದನ್ನು ಮತ್ತಷ್ಟು ವಿಸ್ತರಿಸಿ ಮೂವರಲ್ಲಿ ಈ ಬಗೆಯನ್ನು ನೋಡುತ್ತಾರೆ.
ಕುವೆಂಪು ಅವರ ತಿಮ್ಮಿ, ಜಲಗಾರ, ಶಂಭೂಕ, ತೇಜಸ್ವಿಯವರ ಮಂದಣ್ಣ ಈ ಹಾದಿಯಲ್ಲಿ ನಿಸರ್ಗವನ್ನು ಗಮನಿಸದವರೆ ಈ ದರ್ಶನ ಪಾಶ್ಚಾತ್ಯರ ಭವ್ಯತೆಯನ್ನು ಮೀರಿದ್ದು. ನಾವು ಇಂದು ಸಬಾಲ್ಟ್ರನ್ ಎಂದು ಯಾವುದನ್ನು ಚಚರ್ಿಸುತ್ತೇವೆಯೋ ಅದನ್ನು ಒಳಗೊಂಡಂತೆ ಇವರೆಲ್ಲಾ ಸ್ಠಳೀಯ ಅಥವಾ ದೇಸೀಕಾಲುದಾರಿಗಳಲ್ಲಿ ನಡೆದವರು. ರಾಜಕುಮಾರಿ ವಿಧ್ಯೆಯನ್ನು ಪಡೆದುಕೊಂಡಿದ್ದರೂ ಈ ಸ್ಥಿತಿಗೆ ತಲುಪಲಾರಳು. ಈ ನಾಟಕದಲ್ಲಿ ಮಲ್ಲಿಕಾಳ ಪ್ರೆಮ ಪ್ರಕ್ಷುಬ್ದತೆಯ ಕಡೆಗೆ ಚಲಿಸುವಂತೆ ಕಂಡರೂ ಅದು ಅಕೆಯ ಆಯ್ಕೆ ಎಂಬಂತೆ ಬಿಂಬಿತಗೊಂಡಿದೆ. ಕಾಳಿದಾಸನ ಮಾನಸಿಕ ಜಗತ್ತನ್ನು ಅರ್ಥಮಾಡಿಕೊಂಡಿದ್ದವಳು ವಿಲೋಮನಿಗೆ ಹೆಂಡತಿಯಾಗುತ್ತಾಳೆ. ಕಾಳಿದಾಸ ಅದೇ ಜಾಗಕ್ಕೆ ಹಿಂತಿರುಗುವ ಸನ್ನಿವೇಶ ನಾಟಕದ ತಂತ್ರದ ದೃಷ್ಟಿಯಿಂದ ಬಹುಮುಖ್ಯ ಭಾಗವೆಂದು ಕರೆಯಬಹುದು. ಕೆ ವೈ. ಅವರ ನಾಟಕದಲ್ಲಿ ಈ ತಂತ್ರ ಬದಲಾಗಿದೆ. ಇಬ್ಬರೂ ಶೋಧಿಸುವುದು ಕಾಳಿದಾಸನ ಒಳಬದುಕನ್ನೇ ಆದರೂ ರಾಕೇಶ್ ಅವರು ಕಾಳಿದಾಸನ ಎಲ್ಲಾ ಕೃತಿಗಳಲ್ಲಿ ಹೆಣ್ಣು ಪಾತ್ರಗಳು ಮಲ್ಲಿಕಾಳೇ ಆಗಿದ್ದಾಳೆ ಎಂಬುದನ್ನು ಹುಡುಕುವ ಪ್ರಯತ್ನ ಮಾಡುತ್ತಾರೆ. ಇದು 79ನೇ ಪುಟದಲ್ಲಿ ವಿವರವಾಗಿ ದಶರ್ಿತಗೊಂಡಿದೆ.
ಅಂತಿಮ ಗಳಿಗೆಯಲ್ಲಿ ಕಾಳಿದಾಸನ ಮನಸ್ಸು ಮಲ್ಲಿಕಾಗೆ ಹಾತೊರೆಯುವುದು ಕಂಡುಬರುತ್ತದೆ. ಆದರೆ ಕೆ ವೈ ನಾಟಕದಲ್ಲಿ ಈ ಹೆಣ್ಣು ನೆಲೆಗಳು ವಿಚಿತ್ರವಾಗಿ ತೆರೆದುಕೊಂಡಿವೆ. ಕೆ ವೈ ಅವರು ಈ ನಾಟಕಕ್ಕೆ ಮೌಖಿಕ ಪುರಾಣ ಮತ್ತು ಜನಪದ ಕಥೆಗಳ ಮೈಯನ್ನು ತೊಡಿಸಿರುವುದು ಕಂಡುಬರುತ್ತದೆ. ಇಲ್ಲಿ ಕಾಳಿದಾಸನನ್ನು ನೆಪವಾಗಿ ಬಳಸಿಕೊಂಡು ಹೆಣ್ಣು ನೆಲೆಗಳನ್ನು ಶೋಧಿಸುತ್ತದೆ. ಮೊದಲನೇ ದೃಶ್ಯದಲ್ಲೇ ಕಾಳಿದಾಸನ ಕೊಲೆಯಾಗುತ್ತದೆ. ಉದ್ದಕ್ಕೂ ಜನಪದ ಕಥೆಯಂತೆ ಸಾಗುವ ನಾಟಕ ತೆಲುಗಿನ ಬೊಮ್ಮಲ ಬಾಲನಾಗಮ್ಮ ಕಥೆಯನ್ನು ನೆನಪಿಸುತ್ತದೆ. ಭೂತ ವರ್ತಮಾನಗಳು ಸಮ್ಮಿಲನಗೊಂಡಂತೆ ಸಾಗುವ ಪರಿ ಆಶ್ಚರ್ಯ ಹುಟ್ಟುತ್ತದೆ. ನೆನಪುಗಳ ಮೂಲಕವೇ ಒಂದು ಲೋಕದೃಷ್ಟಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ಈ ಬಗೆಯ ತಂತ್ರ ಮೌಖಿಕ ಪುರಾಣಗಳದ್ದು. ಕಾಳಿದಾಸನ ಪ್ರಾಣ ತೆಗೆದದ್ದೂ ಕೊನೆಯವರೆಗೂ ರಹಸ್ಯವಾಗಿ ಉಳಿಯುವ ತಂತ್ರವೂ ಈ ಬಗೆಯದೇ. ಕೆ. ವೈ ಗೆದ್ದಿರುವುದು ಈ ಬಗೆಯ ಒಳದಾರಿಗಳನ್ನು ರಂಗಭೂಮಿಗೆ ಪರಿಚಯಿಸುವ ಬಗೆಯಲ್ಲಿ ಎನ್ನಬಹುದು.
ರಾಕೇಶ್ ಅವರು ಸೃಷ್ಟಿಮಾಡಿದ ಪಾತ್ರಗಳ ನೆನಪುಗಳನ್ನು ಕೆ ವೈ ಸಂಪೂರ್ಣವಾಗಿ ಅದಲು ಬದಲು ಮಾಡುತ್ತಾರೆ. ಮಲ್ಲಿಕಾ ಮದುವೆಯಾದರೂ ಕಾಳಿದಾಸನನ್ನು ಹುಡುಕಿಕೊಂಡು ಪಟ್ಟಣಕ್ಕೆ ಬರುವುದು ಗಂಧರ್ವ ಕನ್ಯೆಯಂತೆ ಕಾಣುವ ಸ್ಥಳೀಯ ಯಜಮಾನನ ಸೊಸೆ ಅಪಾದಿತೆಯಾಗಿ ಬರುವುದು, ಒತ್ತಾಯದಿಂದ ಕಾಳಿದಾಸನನ್ನು ಒಳಿಸಿಕೊಳ್ಳಲು ಪ್ರಯತ್ನಿಸಿದ ರಾಜಕುಮಾರಿಯು ಮುಸಿಕಿನಾಕೆಯಾಗಿ ಬರುವುದು ಹೀಗೆ ನಾಟಕ ಮೂರು ದಾರಿ ಸೇರುವ ಜಾಗದಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಇದರ ಮಾನಸಿಕ ಸ್ವೇಚ್ಚೆಯನ್ನು ಇಲ್ಲಿ ಕಾಣಬಹುದು. ಮಲ್ಲಿಕಾ ರಾಕೇಶ್ ರವರಲ್ಲಿ ಪ್ರಧಾನವಾಗಿ ಕಂಡರೂ ಕೆ. ವೈ ಗಂಧರ್ವ ಕನ್ಯೆ ಮತ್ತು ರಾಜಕುಮಾರಿಯರಿಗೆ ಅಷ್ಟೇ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಗಂಧರ್ವ ಕನ್ಯೆಯ ಉಂಗುರ ಪ್ರಸಂಗವನ್ನು ಜನಪದೀಯಗೊಳಿಸಿರುವುದು ಕಂಡುಬರುತ್ತದೆ. ಉಂಗುರ ಮೂಲನಾಟಕದ ಪಾತ್ರಗಳಿಂದ ಪ್ರಭಾವಿತಗೊಂಡರೂ ಕಾಳಿದಾಸನ ವೈಯುಕ್ತಿಕ ಚೌಕಟ್ಟಿಗೆ ಹೊಂದಿಕೆಯಾಗುವಂತೆ ಇದೆ. ಯಜಮಾನನ ಸೊಸೆ ಗಂಧರ್ವ ಕನ್ಯೆಯಂತೆ ಗೋಚರಿಸಿದರೂ ಆಕೆ ಒಬ್ಬ ಜನಪದರಲ್ಲಿ ಬರುವ ಅತೃಪ್ತ ಹೆಣ್ಣಿನಂತೆ ಅಲ್ಲವೇ? ಹಾಗೆ ನೋಡಿದರೆ ಮೂವರೂ ಅತೃಪ್ತರೇ
ಇವರ ಪ್ರೆಮದ ಹುಡುಕಾಟ ಯಾವ ಬಗೆಯದು. ಯಜಮಾನನ ಸೊಸೆಯು ಮಗ ಕಾಳಿದಾಸನನ್ನು ಕೊಲೆ ಮಾಡುವುದರಲ್ಲಿ ಉಧ್ಬವಿಸುವ ಪ್ರಶ್ನೆಗಳು ಗುಮಾನಿಗೆ ತಿರುಗುತ್ತವೆ. ರಾಕೇಶ್ ಅವರು ಮಲ್ಲಿಕಾ ಮೂಲಕ ಹುಡುಕಾಡಿದ ಪ್ರೆಮಕ್ಕೂ ಕೆ. ವೈ ಅವರು ಈ ಮೂವರ ಹಿನ್ನೆಲೆಯಲ್ಲಿ ಪ್ರೇಮವನ್ನು ಕಂಡುಕೊಂಡ ಕ್ರಮಕ್ಕೆ ವ್ಯತ್ಯಾಸಗಳು ಸ್ಪಷ್ಟವಾಗಬೇಕು ಅನಿಸುತ್ತಿದೆ. ಕೆ ಎಂ ಮರುಳಸಿದ್ದಪ್ಪನವರು ಅಭಿಪ್ರಾಯಪಡುವಂತೆ ಅನಭಿಜ್ಞ ನಾಟಕ ವಸ್ತುವನ್ನು ಹೇಳುವ ತಂತ್ರ ಮುಖ್ಯವಾಗಿ ಕಂಡಿದೆ. ಎರಡೂ ನಾಟಕಗಳ ಮುಖೇನ ಓದುಗ ಭಿನ್ನ ಅನುಭವಗಳನ್ನು ಪಡೆದುಕೊಳ್ಳುವಲ್ಲಿ ಅನುಮಾನವಿಲ್ಲ. ಮೋಹನ್ ರಾಕೇಶ್ ಅವರ ಆಷಾಢದ ಒಂದು ದಿನ ನಾಟಕವನ್ನು ಕನ್ನಡಕ್ಕೆ ಸಿದ್ದಲಿಂಗ ಪಟ್ಟಣ ಶೆಟ್ಟಿ ಅವರು ಸೊಗಸಾಗಿ ತಂದಿದ್ದಾರೆ.







vimarhe chennaagide. vedikeyayyi adannu kandaagina anubhava illi dakkilla.