ಜಯಲಕ್ಷ್ಮಿ ಕಂಡಂತೆ ಜರ್ಮನಿ ೫: ಈ ನೀರವತೆ ನನಗೆ ಒಗ್ಗದು ಅನಿಸಿತ್ತು

ಜಯಲಕ್ಷ್ಮಿ ಶೇಖರ್

ಫಲಶ್ರುತಿ
ನಾವು ಈ ಪ್ರವಾಸದಲ್ಲಿ ನೋಡಿದ ಸ್ಠಳಗಳು ಕಡಿಮೆ ಈ ದೇಶ ಹೇಗಿರಬಹುದು ಎಂಬುದರ ಸ್ಥೂಲ ಪರಿಚಯ ಸಿಕ್ಕಿತು. ಅಂದು ಜರ್ಮನಿಯಲ್ಲಿ ಇಳಿದಾಗೊಮ್ಮೆ ವಾಪಸ್ ಹೋಗಿಬಿಡೋಣ, ಈ ನೀರವತೆ ನನಗೆ ಒಗ್ಗದು ಅನಿಸಿತ್ತು. ಮರುದಿನ ಬೆಳಿಗ್ಗೆ ಪ್ಯಾರಿಸ್ ಗೆಂದು ಹೊರಟು ರೈಲ್ವೆ ಸ್ಟೇಶನ್ ಗೆ ನಡೆಯುತ್ತಿದ್ದಾಗ ಅಲ್ಲಿನ ಸ್ವಚ್ಛತೆಗೆ, ಸೌಂದರ್ಯಕ್ಕೆ, ಜನರ ಶಿಸ್ತಿಗೆ ಅಚ್ಚರಿಯೆನಿಸಿತು. ಇದು ಇವರಿಗೆ ಹೇಗೆ ಸಾಧ್ಯವೆನಿಸಿತು, ನಮಗೇಕೆ ಸಾಧ್ಯವಾಗದು ಎಂದು ಯೋಚಿಸಿದೆ. ಪ್ಯಾರಿಸ್ ಜರ್ಮನಿಯಷ್ಟು ಶುಭ್ರವಿಲ್ಲ ಎಂದು ಗಮನಿಸಿದಾಗ ಏನೋ ವಿಚಿತ್ರ, ಕೆಟ್ಟ ಖುಷಿ. ಪತಿಯು ನಿರೀಕ್ಷಿಸುವ ಅತೀ ಅಚ್ಚುಕಟ್ಟುತನ ಜರ್ಮನ್ ಕಂಪೆನಿಯಲ್ಲಿ ದುಡಿದುದರ ಫಲ ಎಂದು ಅರಿತುಕೊಂಡೆ.
ಪ್ಯಾರಿಸ್ ನ ರೈಲುಗಳಲ್ಲಿ ಹಾಡುಹೇಳಿ, ವಾದ್ಯನುಡಿಸಿ ಆಮೇಲೆ ಜನರ ಬಳಿ ಪರ್ಸ್ ಮುಂದೆ ಮಾಡುವ ಸೂಟು-ಬೂಟುಧಾರೀ ಭಿಕ್ಷುಕರನ್ನು ಕಂಡೆ.ಅಲ್ಲಿಯೂ ಕೊಲೆ-ಸುಲೆಗೆ,ಕಿಸೆಗಳ್ಳತನಗಳಿವೆ ಎಂದು ತಿಳಿದಾಗ ಏನೋ ತೃಪ್ತಿ ಮನಸ್ಸಿಗೆ (ಲೋಕಾಃ ಸಮಸ್ತಾ ಸುಖಿನೋ ಭವಂತು). ಭಾರತದಲ್ಲಿ ವಿದೇಶೀಯರು ಕಂಡರೆ ಅವರನ್ನು ಮಾತನಾಡಿಸಲು, ಅವರಿಗೆ ಸಹಾಯ ಮಾಡಲು ನಾವು ಕಾತುರರಾಗುತ್ತೇವೆ, ಆದರೆ ಜರ್ಮನರಿಗೆ ಇನ್ನೊಬ್ಬ ವ್ಯಕ್ತಿ – ಆತ ಸ್ವದೇಶಿ ಇರಲಿ, ಪರದೇಶಿಯೇ ಆಗಲಿ….ಯಾವ ಆಸಕ್ತಿಯೂ ಇರುವುದಿಲ್ಲ. ಅವರ ಪ್ರತಿಯೊಂದು ನಡವಳಿಕೆಯಲ್ಲಿಯೂ ಅಚ್ಚುಕಟ್ಟುತನದ, ಗಾಂಭೀರ್ಯದ ಮುದ್ರೆ ಇರುತ್ತಿತ್ತು. ನಿಶ್ಚಿತ, ಪೂರ್ವನಿಯೋಜಿತ ಜೀವನವೋ, ಇವರ ಜೀವನದ ಶಿಲ್ಪಿಗಳು ಇವರೇ ಎಂಬಷ್ಟು ಕರಾರುವಾಕ್ಕಾದ ಜೀವನ.ಸಮಯಕ್ಕೆ ಬಹಳ ಗೌರವ, ಮರ್ಯಾದೆ ಕೊಡುವುದು ಇವರಿಗೆ ರಕ್ತಗತವೇ ಆಗಿದೆ.
ರೈಲುಸ್ಟೇಶನ್ ಗಳಲ್ಲಿ ರೈಲಿನ ಬರ ಹೋಗುವ ಸಮಯ ಪ್ರಕಟ ಆಗುತ್ತಲೇ ಇರುತ್ತದೆ ಮತ್ತು ರೈಲು ಅದೇ ಸಮಯಕ್ಕೆ ಬಂದು ಹೋಗುತ್ತಿರುತ್ತದೆ. ಆ ಸಮಯದ ಯಂತ್ರ ನಿಂತರೆ, ಕರೆಂಟ್ ಹೋದರೆ, ರೈಲು ನಿಂತುಹೋದರೆ……..ಎಂಬ ಪ್ರಶ್ನೆಗಳೇ ಇವರನ್ನು ಕಾಡುವುದಿಲ್ಲವೇನೋಯಾವ ಸಮಸ್ಯೆಗೂ ಇವರಲ್ಲಿ ಉತ್ತರವಿದೆ.
ಅಲ್ಲಿ ಜನರ ಆಹಾರ ಪಧ್ಧತಿ ವಿಚಿತ್ರ, ಅಷ್ಟು ಚಳಿಯಿದ್ದರೂ ಬಿಸಿ ಆಹಾರ ಬೇಕೆಂದಿಲ್ಲ ಅವರಿಗೆ! ಬ್ರೆಡ್ಡು, ಮತ್ತು ಬ್ರೆಡ್ಡಿನ ರೂಪಾಂತರಗಳೇ ಅವರ ಆಹಾರ! ಬ್ರೆಡ್ಡೊಳಗೆ ಮಾಂಸವಿಟ್ಟು ತಿಂದು ಕೋಕ್,ಕಾಫಿ ಕುಡಿದು ಸಿಗರೇಟು ಸೇದಿದರೆ ತೃಪ್ತರು.ನಮ್ಮ ಅವಲಕ್ಕಿ,ಪೂರಿ,ದೋಸೆಗಳ ರುಚಿ ತಿಳಿಯದೆ ಇವರೆಷ್ಟು ಮುಂದುವರಿದರೇನು ಫಲ? ಅಕ್ಕಿ ಉಂಡವ ಹಕ್ಕಿಯಾಗುವನು. ರಾಗಿ ಉಂಡವ ನಿರೋಗಿ, ಜೋಳ ಉಂಡವ ತೋಳನಾಗುವ ಎಂಬ ನಾಣ್ಣುಡಿ ನೆನಪಾಗುತ್ತಿತ್ತು.ನಾವಿಳಿದುಕೊಂಡಿದ್ದ ಹೋಟೆಲ್ ನಲ್ಲೇ ನಮ್ಮ ಬೆಳಗಿನ ಉಪಾಹಾರ ಮುಗಿಯುತ್ತಿತ್ತು,ನಾನಾ ತರಹದ ಬ್ರೆಡ್ ಗಳಿರುತ್ತಿದ್ದವು,ಅವುಗಳಿಗೆ ಜಾಮ್,ಬೆಣ್ಣೆ ಸವರಿ ತಿಂದರೆ ರುಚಿಯೆನಿಸುತ್ತಿತ್ತು.
ಯಥೇಚ್ಚವಾಗಿ ಸಿಗುತ್ತಿದ್ದ ಹಣ್ಣುಗಳಂತೂ ಅತ್ಯಂತ ರಸಭರಿತವಾಗಿ ಇರುತ್ತಿದ್ದವು. ಅಲ್ಲಿಯ ಸೇಬು ಕಚ್ಚಿದರೆ ರಸ ಸಿಡಿಯುತ್ತಿತ್ತು.ಸೇಬು, ಕಿತ್ತಳೆ, ಸ್ಟಾಬೆರಿ, ರೆಂಬುಟಾನ್, ಕಲ್ಲಂಗಡಿ ಅಲ್ಲದೇ ನಮ್ಮ ಮಡಿಕೇರಿಯ ಅಪ್ಪಟ ದೇಸೀ ಹಣ್ಣಾದ ಗುಮ್ಮಟೆಹಣ್ಣು ಸಹಾ ಅಲ್ಲಿ ಸಿಕ್ಕಿತು. ತಿಂಡಿ ಊಟವು ಇವರ ಸಂಸ್ಕೃತಿಯ ಭಾಗವಲ್ಲವೋ ಏನೋ!ಬಚ್ಚಲಿನಲ್ಲಿ (ಇವರ ಶೌಚ ವ್ಯವಸ್ಥೆ ಬಿಡಿ,ನಮಗೆ ಒಗ್ಗಲಿಕ್ಕಿಲ್ಲ) ಬಳಸುವ ನೀರು ಸಂಸ್ಕರಿತ ನೀರು, ಕುಡಿಯುವುದು ಸೋಡಾನೀರು, ನಾವು ನೀರಡಿಕೆ ಆದಾಗೆಲ್ಲ ಅಡಿಗೆಮನೆಯ ನಲ್ಲಿಯಿಂದ ನೇರವಾಗಿ ಕುಡಿಯುತ್ತಿದ್ದೆವು. ಇಡೀ ಜರ್ಮನಿಗೆ thermostat ವ್ಯವಸ್ಥೆಯ ಮೂಲಕ ಬಿಸಿನೀರ ಸರಬರಾಜು! ನಲ್ಲಿ ತಿರುಗಿಸಿದರಾಯಿತು.ಬೇಕಾದ ಪ್ರಮಾಣದಲ್ಲಿ ಬಿಸಿನೀರು ಲಭ್ಯ.

ಇವರಿಗೆ ಜೀವನ ಸರಾಗ,ಇವರಿಗೆದುರಾಗುವಂಥ ಸಮಸ್ಯೆಗಳೇನಿರಬಹುದೊ ತಿಳಿಯಲಿಲ್ಲ. ಇಳಿವಯಸ್ಸಿನಲ್ಲಿ ಮಕ್ಕಳು ದೂರಾಗುವುದು ಇವರಿಗೆ ಒಂದು ಸಮಸ್ಯೆಯೇ ಇರಲಾರದು.ಯಾಕೆಂದರೆ ತಂದೆ ತಾಯಿ ಮಕ್ಕಳು ಹದಿಹರೆಯಕ್ಕೆ ಕಾಲಿಡುತ್ತಿದ್ದಂತೇ ಅವರು ಮನೆಯಿಂದ ಹೊರಹೋಗಿ ಸ್ವತಂತ್ರವಾಗಿ ಜೀವಿಸುವುದನ್ನು ಪ್ರೋತ್ಸಾಹಿಸುತ್ತಾರೆ. ನಾವು ಪ್ಯಾರಿಸ್ ನಿಂದ ಸ್ಟುಟ್ ಗಾರ್ಟ್ಗೆ ಹಿಂದಿರುಗುತ್ತಿದ್ದ ರೈಲಿನಲ್ಲ್ಲಿ 5-6 ತಿಂಗಳ ಮಗುವಿನೊಂದಿಗೆ ಅದರ ಅಜ್ಜ ಮತ್ತು ಅಮ್ಮ ಇದ್ದರು. ಆ ಮಗುವನ್ನು ತೊಟ್ಟಿಲಿನಂಥದ್ದರಲ್ಲಿರಿಸಿ ಸೀಟಿನಲ್ಲಿ ಮಲಗಿಸಿದರು. ಮಗು ಬೆಚ್ಚಗೆ ಸುಸಜ್ಜಿತವಾಗಿತ್ತು,ತಾಯಿ-ಅಜ್ಜ ಆ ಮಗುವನ್ನಲ್ಲಿರಿಸಿ ಸ್ವಲ್ಪ ಹೊತ್ತು ಅದನ್ನು ಮಾತನಾಡಿಸಿದ ಶಾಸ್ತ್ರ ಮಾಡಿ ತಾವು ತಮ್ಮಲ್ಲಿ ಮಗ್ನರಾದರು.
ತನ್ನ ಪಾಡಿಗೆ ತಾನು ತನ್ನ ಭಾಷೆಯಲ್ಲಿ ಮಾತನಾಡುತ್ತಾ ತಾನೇ ನಿದ್ದೆಗೆ ಜಾರಿತು.ಎಚ್ಚರಾದ ಮೇಲೆ ಕಾಲಿನಿಂದ ಒದ್ದೂ ಒದ್ದೂ ಹೊದಿಕೆಯನ್ನು ಕೆಳಹಾಕಿತು.ತಾಯಿ ಆ ಮಗುವಿನತ್ತ ಪ್ರೀತಿಯಿಂದ ಏನೋ ಹೇಳಿ ಅದನ್ನು ಅದರ ಕಾಲಿಗೆ ಹೊದೆಸಿದಳು,ಮತ್ತೂ 2-3 ಬಾರಿ ಹಾಗೆಯೇ ಆಯಿತು,ಆಮೇಲೆ ಆಕೆ ಅದನ್ನೇನೋ ಮಾತನಾಡಿಸಿದಳು.ನಮ್ಮಲ್ಲಿ ಅಜ್ಜ ಅಜ್ಜಿಯರಿಗೆ ಮೊಮ್ಮಕ್ಕಳೆಂದರೆ ಸರ್ವಸ್ವ.ಇವರಿಗೆ? ಇವರಿಗೆ ಪ್ರೀತಿಯಿಲ್ಲ ಎಂದೆನಿಸಲಿಲ್ಲ ನನಗೆ….ಆದರೆ ಪ್ರೀತಿಯ ಅಭಿವ್ಯಕ್ತಿಯಲ್ಲಿಯೂ ಒಂದು ರೀತಿಯ ನಿಯಮಪಾಲನೆ.ತೋರಿಯೂ ತೋರದಂತಿರಬೇಕು ಎಂದೋ ಏನೋ, ನಿರ್ಮಮಕಾರವನ್ನು ಸಾಧಿಸಿದ್ದಾರೆಯೇ ಇವರು? ಎಳೆಮಗುವನ್ನು ಒಂದೇ ಒಂದು ತಂದೆತಾಯಿ ಎತ್ತಿರುವುದನ್ನು ಕಾಣಲಿಲ್ಲ. ಪ್ರಾಂ ನಲ್ಲಿ ಮಲಗಿಸಿ ತಳ್ಳಿಕೊಂಡು ಹೋಗುತ್ತಿದ್ದರು.ಬಿಸಿಲು,ಮಳೆಯಿಂದ ರಕ್ಷಿಸುವ ವ್ಯವಸ್ಠೆಯೂ ಆ ಪ್ರಾಂ ನಲ್ಲಿರುತ್ತಿತ್ತು.ಮಗು ತನ್ನ ಪಾಡಿಗೆ ತಾನು ನಿದ್ದೆ ಮಾಡುತ್ತಿತ್ತು,ಆಡುತ್ತಿತ್ತು. ತಾಯಿಗೆ ತನ್ನ ಮಗುವೇ ತನ್ನ ಜೀವನ ಎಂಬಂಥಾ ವಿಸ್ಮೃತಿ ಆವರಿಸುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆ.


ಈ ಜನರು ನಾಯಿಯನ್ನು ಸಾಕುತ್ತಾರೆ, ಅದರ ಬಾಯಿಗೆ ಪಟ್ಟಿಯನ್ನು ಜಡಿಯುತ್ತಾರೆ, ಕಂಡ ಕಂಡಲ್ಲಿ ಬಾಯಿ ಹಾಕಬಾರದೆಂದೋ ಏನೋ! ಮಕ್ಕಳು ಹಠ ಹಿಡಿದು ರಂಪಾಟ ಎಬ್ಬಿಸುವುದನ್ನಾಗಲೀ ನಾಯಿಗಳು ಬೊಗಳುವುದನ್ನಾಗಲೀ ಕಾಣಲಿಲ್ಲ…ಬಹುಶಃ ಅವು ಕಚ್ಚುವ ನಾಯಿಗಳಿರಬೇಕು..!! ರೈಲುಗಳಲ್ಲಿ ನಾಯಿಗೂ ಮಕ್ಕಳಿಗೂ ಒಂದೇ ಟಿಕೆಟ್ ದರ!!!!!
ಅಂಗವಿಕಲರೂ ಸ್ವಾವಲಂಬಿಗಳಾಗಿ ವಿಶೇಷ ಕುರ್ಚಿಗಳಲ್ಲಿ ಕುಳಿತು ಎಲ್ಲಿಂದೆಲ್ಲಿಗೂ ಪ್ರಯಾಣಿಸುತ್ತಿದ್ದರು. ರಸ್ತೆಯನ್ನು ದಾಟಬೇಕಿದ್ದರೆ ನಾವು ಇಷ್ಟ ಬಂದಲ್ಲಿ ದಾಟಲಾಗುತ್ತಿರಲಿಲ್ಲ.ಝೀಬ್ರಾ ಪಟ್ಟಿ ಇರುವಲ್ಲೇ ದಾಟಬೇಕಿತ್ತು. ಪಾದಚಾರಿಗಳು ಆ ಪಟ್ಟಿಯಲ್ಲಿ ರಸ್ತೆ ದಾಟುವಾಗ ಯಾವನೇ ದೊಡ್ಡ ಮನುಷ್ಯನಾಗಲಿ,ತನ್ನ ವಾಹನವನ್ನು ನಿಲ್ಲಿಸಲೇಬೇಕಿತ್ತು, ಟ್ರಾಫಿಕ್ ನಿಯಮವನ್ನಾಗಲೀ,ಇನ್ಯಾವುದೇ ನಿಯಮವನ್ನಾಗಲೀ ಅವರು ಮುರಿಯಲಾರರು ಎಂದು ತಿಳಿಸಲು ಪತಿ ತಮಾಷೆಯ ಪ್ರಸಂಗವೊಂದನ್ನು ಹೇಳಿದರು.
ಜನರು ಒಬ್ಬರನ್ನೊಬ್ಬರು ಅಭಿವಂದಿಸುವಾಗ ನಾವು ನಮಸ್ಕಾರ,ಹೆಲೋ ಎನ್ನುವಂತೆ Hallo ಎಂದು ಒಂದು ಬಗೆಯ ರಾಗದಲ್ಲಿ ಒತ್ತಿ ಹೇಳುತ್ತಾರೆ, ಮಾತನಾಡುವಾಗ ಕೇವಲ ಇವರ ಬಾಯಿಯಲ್ಲ,ಕಣ್ಣುಗಳು,ಭುಜಗಳು ಎಲ್ಲವೂ ತಿರುಗಿ,ವಿಚಿತ್ರವಾಗಿ ಸುತ್ತಿ ಸಂವಹಿಸಬಲ್ಲುದು! ಸಿಗರೇಟೆಳೆಯುವುದರಲ್ಲಿ ಹೆಣ್ಣು-ಗಂಡೆಂಬ ತಾರತಮ್ಯ ಇರಲಿಲ್ಲ,ಹಾಗೆ ನೋಡಿದರೆ ಹೆಣ್ಣು ಗಂಡು ತಾರತಮ್ಯ ಯಾವುದರಲ್ಲಿಯೂ ಇರಲಿಲ್ಲ.
ಅವರು ಸೇದುವ ಸಿಗರೇಟು ಬಹಳ ಕಡುವಾದದ್ದಿರಬೇಕು, ಅದರ ಘಾಟು ನನ್ನ ಘ್ರಾಣೇಂದ್ರಿಯದೊಳಗೆ ಸೇರಿಹೋದಂತೆನಿಸುತ್ತದೆ. ಸಿಗರೇಟು, ಮಾಂಸ, ಮದ್ಯದ ಕಡುನಾತದಿಂದ ರೋಸಿಹೋಗಿ ಒಮ್ಮೆ ನನ್ನ ಗಂಡನ ಬಳಿ ? ಇಲ್ಲಿ ಮಲ್ಲಿಗೆ, ಸೇವಂತಿಗೆ ಹೂ ಮಾರುವುದಿಲ್ವಾ?? ಎಂದು ಅಸಹಜವಾಗಿ ಪ್ರಶ್ನಿಸಿ ನಗೆಪಾಟಲಿಗೀಡಾಗಿದ್ದೆ. ಇವರಿಗೆ ಇಂಗ್ಲಿಷ್ ಭಾಷೆಯ ಬಗ್ಗೆ ವಿಚಿತ್ರ ವ್ಯಾಮೋಹವಿಲ್ಲ, ಸರ್ಕಾರೀ ಶಿಕ್ಷಣವೆಲ್ಲ ಜರ್ಮನ್ ಮಾಧ್ಯಮದಲ್ಲಿ ಉಚಿತವಾಗಿ ನಡೆಯುತ್ತದೆ, ಇಂಗ್ಲಿಷ್ ಮಾಧ್ಯಮ ಶಾಲೆಗಳೂ ಇವೆ, ಆದರೆ ಅದರ ಶುಲ್ಕ ಬಹಳ ದುಬಾರಿ ಎಂದು ವಂದನ ತಿಳಿಸಿದಳು. ನನ್ನ ಪತಿಗೆ ಜರ್ಮನ್ ಭಾಷೆಯ ಸ್ವಲ್ಪ ಪರಿಚಯ ಇದೆ. ಅವರಿಂದ ನಾನೂ ಕೆಲಶಬ್ದಗಳನ್ನು ಕಲಿತೆ. ಪರಿಚಿತರೇ ಇರಲಿ, ಅಪರಿಚಿತರೇ ಇರಲಿ, ಹಲ್ಲೊ ಅಥವಾ ಗುಟೆನ್ ಟಾಗ್ ಅನ್ನುತ್ತಾರೆ. ಇಂಗ್ಲಿಷ್ ನಲ್ಲಿ ಮಾತನಾಡಲು ಹಿಂಜರಿಯಲಾರರು, ಆದರೆ ತಮ್ಮ ಭಾಷೆ ಅಷ್ಟು ಚೆನ್ನಾಗಿಲ್ಲ ಎಂದು ಹೇಳಿಯೇ ಮಾತಾಡುತ್ತಾರೆ. Seife-soap,wasser-water, Kalt-cold, Gemuse-fruits, Brot-bread, Strasse-street, Zucker-sugar, bitte-please, Chyus-bye ಹೀಗೆ ಕೆಲವು ಶಬ್ದಗಳನ್ನು ನಾನು ಕಲಿತುಕೊಂಡೆ. ಈ ಜನರು ಯಾವುದೇ ಕೆಲಸವಾಗಲಿ ಅದು ಎಷ್ಟೇ ಚಿಕ್ಕದಿರಲಿ, ದೊಡ್ಡದಿರಲಿ, ಅಖಂಡವಾದ ಪ್ಲಾನ್ ಮಾಡ್ತಾರೆ ಎಂಬುದು ಜ್ಞಾನ ಶೇಖರರು ಗಳಿಸಿದ ಜ್ಞಾನ. ಅಂಗಡಿಗಳಲ್ಲಿ ಎಷ್ಟೇ ಸಣ್ಣ ವಸ್ತುವನ್ನು ಕೊಂಡರೂ ಅದನ್ನು ಗೌರವಪೂರ್ವಕವಾಗಿ ಪ್ಲಾಸ್ಟಿಕ್ ಕವರ್ ಗೆ ಹಾಕಿಕೊಡುವ, ಇಲ್ಲದಿದ್ದರೆ ಅದನ್ನು ನಮ್ಮ ಹಕ್ಕೆಂಬಂತೆ ಕೇಳಿ ಪಡೆಯುವ ನಾವು.. ಈ ಜನರು ಎಷ್ಟೇ ದೊಡ್ಡ ವಸ್ತು ಕೊಂಡರೂ ಪ್ಲಾಸ್ಟಿಕ್ ಕವರ್ ಕೊಡುವುದಿಲ್ಲ, ಕೊಡುವುದಿದ್ದರೂ ಅದನ್ನು ಪುಕ್ಕಟೆಯಾಗಂತೂ ಕೊಡುವುದಿಲ್ಲ ಎಂಬುದನ್ನು ಮನಗಾಣಲೇಬೇಕಿದೆ.
ಒಟ್ಟು ಆ ದೇಶದ ಅಚ್ಚುಕಟ್ಟುತನಕ್ಕೆ, ನಿಯಮಪಾಲನೆಗೆ ಮಾರುಹೋದೆ. ಅಲ್ಲಿಯ ಒಳ್ಳೆಯ ಅಂಶಗಳನ್ನು ಮನಸ್ಸು ಗ್ರಹಿಸಿದರೂ ನಮ್ಮ ದೇಶದೊಂದಿಗೆ ತುಲನೆ ಮಾಡುತ್ತಿತ್ತು. ಇವುಗಳನ್ನೆಲ್ಲ ಮುಕ್ತಮನದಿಂದ ಶ್ಲಾಘಿಸಿದರೆ ನನ್ನ ದೇಶಾಭಿಮಾನ ಎಲ್ಲಿ ಘಾಸಿಗೊಳ್ಳುವುದೋ, ನನ್ನ ದೇಶಕ್ಕೆಲ್ಲಿ ದ್ರೋಹ ಬಗೆದಂತಾಗುವುದೋ ಎಂಬ ದ್ವಂದ್ವದಲ್ಲಿ ಹೈರಾಣಾಗಿದ್ದೆ. ಆದರೆ ಏನೇ ಭಿನ್ನತೆಯಿರಲಿ, ನಾವೆಲ್ಲ ವಿಶ್ವಮಾನವ ನಿಯಮಕ್ಕೆ ಬದ್ಧರು, ಪ್ರೇಮಸೂತ್ರದಲ್ಲಿ ಬಂಧಿತರು ಎಂಬ ಅರಿವನ್ನು ಮನಕ್ಕೆ ತಂದುಕೊಳ್ಳಲು ಯತ್ನಿಸುತ್ತಿದ್ದಾಗ ಈ ದ್ವಂದ್ವ ಮರೆಯಾಗುತ್ತಿತ್ತು.

‍ಲೇಖಕರು G

October 14, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Anitha Naresh manchi

    ಸೂಪರ್.. ನಿಮ್ಮ ಲೇಖನ ನನ್ನನ್ನು ಜರ್ಮನಿ ಸುತ್ತಿಸಿತು..

    ಪ್ರತಿಕ್ರಿಯೆ
  2. Govinda Nelyaru

    ಲೇಖನ ಕುಶಿಯಾಯಿತು. ಜರ್ಮನ್ ಬಾಷೆಯಲ್ಲಿ ನನಗೆ ಎಂದೂ ಮರೆಯದ ಶಬ್ದ – ಪ್ರತಿ ಊರಲ್ಲೂ ಕಾಣುವ ರಸ್ತೆ ಹೆಸರು einbahnstrasse. ನಾನಾಗ ಸೈಕಲು ಪ್ರವಾಸಿಯಾಗಿದ್ದೆ. ಪ್ರತಿ ಊರಲ್ಲೂ ಈ ಹೆಸರಿನ ರಸ್ತೆ ಕಂಡು ಇವನಾರೋ ನಮ್ಮ ಮಹಾತ್ಮ ಗಾಂದಿಯಂತಿರಬಹುದೆಂದು ಊಹಿಸಿದ್ದೆ. ಕೊನೆಗೆ ಗೆಳೆಯರು ಹೇಳಿದರು – ಅದು ಏಕ ಮುಖ ರಸ್ತೆ. 🙂

    ಪ್ರತಿಕ್ರಿಯೆ
  3. ಜಯಲಕ್ಷ್ಮಿ

    ನನ್ನ ಅಪಕ್ವ ಬರಹವನ್ನು ಓದಿ,ತಿದ್ದಿ ತೀಡಿ ತನ್ನ ಬ್ಲಾಗಿನಲ್ಲಿ ಕೇವಲ ವಿಶ್ವಾಸದ ಕಾರಣದಿಂದ ಪ್ರಕಟಿಸಿದ ಅಭಯ ಸಿಂಹ,ಅಶೋಕವರ್ಧನರಿಗೂ,ಈ ಬರಹವನ್ನು ಮತ್ತೂ ಹಲವು ಮಂದಿ ಓದಬೇಕೆಂದು ಸ್ವತಃ ಕಾಳಜಿ ವಹಿಸಿ ಅವಧಿಯಲ್ಲಿ ಪ್ರಕಟವಾಗುವಂತೆ ಮಾಡಿದ ಅನಿತಾ ನರೇಶ್ ಮಂಚಿಗೂ ಹೃತ್ಪೂರ್ವಕ ವಂದನೆಗಳು, ಪ್ರಕಟಿಸಿದ ಅವಧಿ ತಂಡಕ್ಕೆ ಕೃತಜ್ಞತೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: