ಪ್ರಸಾದ್ ನಾಯ್ಕ್
ಸುಮಾರು ಹತ್ತು ವರ್ಷಗಳ ಹಿಂದಿನ ಮಾತು.
ನಾನು ಮತ್ತು ಮೊನಾಲಿಸಾ ಎನ್.ಐ.ಟಿ.ಕೆ ಯ ಕ್ಲಾಸ್ ರೂಮೊಂದರಲ್ಲಿ ಅಂದು ಶಥಪಥ ತಿರುಗುತ್ತಿದ್ದೆವು.
ನಾವಿಬ್ಬರೂ ಆಗ ಎಂಜಿನಿಯರಿಂಗ್ ಕೋರ್ಸಿನ ಮೂರನೇ ವರ್ಷದ ವಿದ್ಯಾರ್ಥಿಗಳು. ಸಾಹಿತ್ಯಲೋಕದಲ್ಲಿ ಆ ದಿನಗಳಲ್ಲಿ ಹ್ಯಾರಿ ಪಾಟರ್ ಭರಾಟೆಯು ಜೋರಾಗಿತ್ತು. ಕಾಲೇಜಿನ ಲೈಬ್ರರಿಯಲ್ಲಿ ಸಾಹಿತ್ಯದ ಕೃತಿಗಳು ಸಾಕಷ್ಟಿದ್ದರೂ ಅವುಗಳಿಗೆ ಅಂಥಾ ಓದುಗರೇನೂ ಇರಲಿಲ್ಲ. ಬಹುಷಃ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಈ ಬಗ್ಗೆ ಅಂತಹ ಮಹಾನಿರೀಕ್ಷೆಗಳೂ ಇರಲಿಲ್ಲ. ಅಂಥದ್ದರಲ್ಲಿ ನನ್ನಂಥವರ ಗಂಭೀರ ಓದು ಆಗಷ್ಟೇ ಆರಂಭವಾಗಿದ್ದರೆ ಮೊನಾಲಿಸಾ ಆಗಲೇ ಆನ್ ರಾಂಡ್ ಳಂಥಾ ದಿಗ್ಗಜರ ದಪ್ಪ ಪುಸ್ತಕಗಳನ್ನು ಕಂಕುಳಲ್ಲಿಟ್ಟುಕೊಂಡು ನಮ್ಮಲ್ಲಿ ಅಚ್ಚರಿಯನ್ನು ಮೂಡಿಸುತ್ತಿದ್ದಳು. ಸಮಾಜವಾದ, ಕ್ರಾಂತಿ, ಆದಿವಾಸಿಗಳ ಹೋರಾಟ, ಚಳುವಳಿಗಳ ಬಗ್ಗೆ ಮಾತನಾಡುತ್ತಾ ನಮ್ಮನ್ನು ಮೂಕವಿಸ್ಮಿತಳಾಗಿಸುತ್ತಿದ್ದಳು. ಅಸಲಿಗೆ ರಾಂಡ್ ರವರ “ದ ಫೌಂಟೇನ್ ಹೆಡ್” ಮತ್ತು “ಅಟ್ಲಾಸ್ ಶ್ರಗ್ಡ್” ಕೃತಿಗಳನ್ನು ನಾನು ನೋಡಿದ್ದು ಅದೇ ಮೊದಲು. ಸ್ವತಃ ಚಿತ್ರಕಲಾವಿದೆಯಾಗಿದ್ದ ಮೊನಾಲಿಸಾ ಕಾಲೇಜು ದಿನಗಳು ಮುಗಿದ ನಂತರವೂ ಕಂಪೆನಿ ಉದ್ಯೋಗಗಳತ್ತ ತಲೆ ಹಾಕದೆ ಈ ಕ್ಷೇತ್ರದಲ್ಲೇ ಮುಂದುವರಿದಿದ್ದು ವಿಶೇಷ. ಆ ಕಾಲಕ್ಕೂ ಅದೊಂದು ದಿಟ್ಟತನದ ವಿಶಿಷ್ಟ ನಡೆಯೇ ಆಗಿತ್ತು.
ಅಂದಹಾಗೆ ನಾವಿಬ್ಬರು ಅಂದು ವಿಪರೀತವೆನ್ನಿಸುವಷ್ಟು ತಲೆಕೆಡಿಸಿಕೊಂಡಿದ್ದು ಚಿತ್ರಕಲಾ ಪ್ರದರ್ಶನವೊಂದರ ಬಗ್ಗೆ. ನಮ್ಮ ಕಾಲೇಜಿನಲ್ಲಿ “ಆರ್ಟಿಸ್ಟ್ಸ್ ಫೋರಂ” ಎಂಬ ಕಲಾವಿದರ ತಂಡವೊಂದು ಹಲವು ವರ್ಷಗಳಿಂದ ಇದ್ದರೂ ನೆನಪಿನಲ್ಲುಳಿಯುವಂತಹ ಕಾರ್ಯಕ್ರಮಗಳೇನೂ ಆವರೆಗೆ ತಂಡದಿಂದ ಬಂದಿರಲಿಲ್ಲ. ಅಂಥದ್ದರಲ್ಲಿ ಕಾರ್ಯಕಾರಿ ಸಮಿತಿಯ ಯಾವುದೇ ಹುದ್ದೆಗಳನ್ನು ಹೊಂದಿರದ ನಾವಿಬ್ಬರು ಫೋರಂಗೆ ಹೊಸದೊಂದು ದೊಡ್ಡ ತಿರುವನ್ನು ನೀಡಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೆವು. ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಯಲ್ಲಿ ಪ್ರತೀವರ್ಷವೂ ನಡೆಸಲಾಗುತ್ತಿದ್ದ ‘ಇನ್ಸಿಡೆಂಟ್’ ಎಂಬ ಹೆಸರಿನ ಸಾಂಸ್ಕೃತಿಕ ಉತ್ಸವವು ನಮಗೆ ಬಹುದೊಡ್ಡ ವೇದಿಕೆಯಾಗಿತ್ತು. ಕಾಲೇಜಿನ ಪಠ್ಯಕ್ಕಿಂತಲೂ ಹೆಚ್ಚು ಶ್ರಮಪಟ್ಟು ನಾವುಗಳು ಆ ದಿನಗಳಲ್ಲಿ ತೊಡಗಿಸಿಕೊಂಡಿದ್ದೆಂದರೆ ಕಾಲೇಜಿನ ಇಂಥಾ ಸಾಂಸ್ಕೃತಿಕ ಉತ್ಸವಗಳಲ್ಲಿ ಮಾತ್ರ.

ಈ ನಿಟ್ಟಿನಲ್ಲಿ ನಾಡಿನ ಖ್ಯಾತ ಚಿತ್ರಕಲಾವಿದರಿಂದ ಕೆಲ ಶಿಬಿರಗಳನ್ನು ನಡೆಸಬೇಕೆಂಬ ಉದ್ದೇಶವು ನಮಗಿದ್ದರೂ ಈ ಬಗ್ಗೆ ಹೇಗೆ ಮುಂದುವರಿಯಬೇಕೆಂಬ ಅನುಭವವಾಗಲಿ, ಕಲ್ಪನೆಯಾಗಲಿ ನಮಗಿರಲಿಲ್ಲ. ಇನ್ನು ಖ್ಯಾತನಾಮ ಸಾಧಕರ ಸಂಪರ್ಕಗಳಂತೂ ಮೊದಲೇ ಇರಲಿಲ್ಲ. ಎನ್.ಐ.ಟಿ.ಕೆ ಯಲ್ಲಿದ್ದ ಸಾವಿರಾರು ವಿದ್ಯಾರ್ಥಿಗಳು ಭಾರತದ ಹಲವು ಮೂಲೆಗಳಿಂದ ಬಂದಿರುವವರಾದ್ದರಿಂದ ಆಯಾ ರಾಜ್ಯಗಳ ಖ್ಯಾತ ಕಲಾವಿದರನ್ನು ನಮ್ಮಲ್ಲಿಗೆ ಆಹ್ವಾನಿಸಬಹುದಿತ್ತು. ಆದರೆ ಈ ಕಲಾವಿದರ ಸಂಭಾವನೆ, ವಾಸ್ತವ್ಯ ಮತ್ತು ವಿಮಾನ ಪ್ರಯಾಣದ ಖರ್ಚುಗಳನ್ನು ಭರಿಸುವಷ್ಟು ಹಣಕಾಸಿನ ಸಾಮರ್ಥ್ಯ ಕಾಲೇಜು ವಿದ್ಯಾರ್ಥಿಗಳಾದ ನಮ್ಮ ಕೈಯಲ್ಲಿರಲಿಲ್ಲ. ಒಟ್ಟಿನಲ್ಲಿ ನಾನು ಕರ್ನಾಟಕದ ಕರಾವಳಿ ಪ್ರದೇಶದವನೇ ಆಗಿದ್ದರಿಂದ ಸ್ಥಳೀಯ ಚಿತ್ರಕಲಾವಿದರಿಂದಲೇ ಒಳ್ಳೆಯ ಕಾರ್ಯಕ್ರಮವೊಂದನ್ನು ಆಯೋಜಿಸುವುದೆಂದು ನಾವೆಲ್ಲರೂ ಕುಳಿತು ಸಮಾಲೋಚನೆಯಲ್ಲಿ ನಿರ್ಧರಿಸಿದೆವು.
ಸಂಘಟನೆಯ ಕಿಂಚಿತ್ತು ಅನುಭವವೂ ಇಲ್ಲದಿದ್ದ ನಾನು ಕೆಲ ಜೂನಿಯರ್ ವಿದ್ಯಾರ್ಥಿಗಳೊಂದಿಗೆ ನಮ್ಮ ಯೋಜನೆಯ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೆ. ನಾಡಿನ ಹಲವು ಚಿತ್ರಕಲಾವಿದರ ಹೆಸರುಗಳು ನನಗೆ ಗೊತ್ತಿತ್ತೇ ಹೊರತು ವೈಯಕ್ತಿಕ ನೆಲೆಯಲ್ಲಿ ಯಾರೊಬ್ಬರ ಸಂಪರ್ಕವೂ ಇರಲಿಲ್ಲ. ನಮ್ಮ ಮನೆಯಲ್ಲಿ ಸಾಮಾನ್ಯವಾಗಿ ‘ತರಂಗ’ ವಾರಪತ್ರಿಕೆಯನ್ನು ತರಿಸುವ ರೂಢಿಯಿತ್ತು. ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಧಾರಾವಾಹಿಗಳೊಂದಿಗೆ ಅದ್ಭುತವಾಗಿ ಮೂಡಿಬರುತ್ತಿದ್ದ ಪಿ. ಎನ್. ಆಚಾರ್ಯರ ಚಿತ್ರಗಳು ಮನಸೂರೆಗೊಳ್ಳುವಂತೆ ಇರುತ್ತಿದ್ದವು. ಬಿ. ಕೆ. ಎಸ್. ವರ್ಮಾರ ತೈಲಚಿತ್ರಗಳಲ್ಲಿ ದೈವಿಕವಾದಂತಹ ಮೋಡಿಯಿರುತ್ತಿತ್ತು. ಆಗಾಗ ಎಲ್ಲೋ ಕಾಣಸಿಗುತ್ತಿದ್ದ ಮೋಹನ್ ಸೋನಾ, ದಿನೇಶ್ ಹೊಳ್ಳರ ಕಲಾಕೃತಿಗಳು ಸ್ವತಃ ಒಂದು ವಿನೂತನ ಪ್ರಯೋಗವೆಂಬಂತೆ ಕಾಣಿಸಿಕೊಳ್ಳುತ್ತಿದ್ದವು. ಇನ್ನು ವ್ಯಂಗ್ಯಚಿತ್ರಗಳ ವಿಚಾರಕ್ಕೆ ಬಂದರೆ ಜೇಮ್ಸ್ ವಾಜ್, ಶ್ರೀಧರ್ ಹುಂಚ, ನಾಡಿಗ್, ಪಿ. ಮಹಮ್ಮದ್ ಮತ್ತು ಹರಿಣಿ ನನ್ನಂತಹ ಅಸಂಖ್ಯಾತ ಅಜ್ಞಾತ ಓದುಗರನ್ನು ರಂಜಿಸುತ್ತಿದ್ದರು.
ಶಾಲಾದಿನಗಳಲ್ಲಿ ಉಡುಪಿಯ ಜಂಗಮಮಠ ಚಿತ್ರಶಾಲೆಯಲ್ಲಿ ಕೆಲ ತಿಂಗಳುಗಳ ಕಾಲ ವಿದ್ಯಾರ್ಥಿಯಾಗಿದ್ದ ನಾನು ನನ್ನೊಳಗಿದ್ದ ಅರೆಬರೆ ಚಿತ್ರಕಾರನನ್ನು ಕೊಂಚ ಪಳಗಿಸಿದ್ದೆ. ಜಂಗಮಮಠ ಚಿತ್ರಕಲಾ ಮಂದಿರದಲ್ಲಿ ಕ್ಯಾನ್ವಾಸು-ಕಾರ್ಡುಬೋರ್ಡುಗಳಿಂದ ಹಿಡಿದು ತಮ್ಮ ಪಾಡಿಗೆ ಬಿದ್ದುಕೊಂಡಿರುತ್ತಿದ್ದ ಲೋಹಗಳವರೆಗೆ ಬಹುತೇಕ ಎಲ್ಲವೂ ಕಲೆಯ ಅವತಾರವನ್ನು ಪಡೆದುಕೊಳ್ಳುತ್ತಿದ್ದವು. ಆ ದಿನಗಳಲ್ಲಿ ಉಡುಪಿ ಪರಿಸರದಲ್ಲಿ ನಡೆಯುತ್ತಿದ್ದ ಹಲವು ಚಿತ್ರಕಲಾ ಸಂಬಂಧಿ ಚಟುವಟಿಕೆಗಳಲ್ಲಿ ‘ದೃಶ್ಯ’ ಖ್ಯಾತಿಯ ರಮೇಶ್ ರಾವ್ ರವರು ಬಹಳ ಸಕ್ರಿಯರಾಗಿದ್ದರು. ಇನ್ನು ವರ್ಷಕ್ಕೊಮ್ಮೆ ಚಿತ್ರಕಲಾ ಸ್ಪರ್ಧೆಯ ನೆಪದಲ್ಲಿ ಕುಂಜಿಬೆಟ್ಟಿನಲ್ಲಿರುವ ಇನಾಯತ್ ಆರ್ಟ್ ಗ್ಯಾಲರಿಯಲ್ಲಿ ಕಾಲ ಕಳೆಯುವುದು ನಮ್ಮಂತಹ ಚಿಣ್ಣರಿಗೆ ಸಂತಸದ ಸಂಗತಿಯಾಗಿತ್ತು. ಕಲಾತ್ಮಕ ಶೈಲಿಯಲ್ಲಿ ನಿರ್ಮಿಸಿರುವ ಆ ಮನೆಯಲ್ಲಿ ಲಿಯಾಖತ್ ಆಲಿಯವರ ತೈಲಚಿತ್ರಗಳನ್ನು ನೋಡುವುದೇ ಚಂದ.
ಹೀಗೆ 2010 ರ ಇನ್ಸಿಡೆಂಟ್ ಅವಧಿಯಲ್ಲಿ ನನ್ನ ತಲಾಶಿಗೆ ಪೂರಕವಾಗಿ ಆಕಸ್ಮಿಕವಾಗಿ ಎದುರಾಗಿದ್ದು ಹರಿಣಿಯವರ ‘ಗ್ಲೋಬಲ್ ವಾರ್ಮಿಂಗ್’ ವ್ಯಂಗ್ಯಚಿತ್ರ ಪ್ರದರ್ಶನಗಳ ಸರಣಿ. ಕಾಲೇಜಿನ ಫೋರಂ ತಂಡವು ಪ್ರತೀವರ್ಷವೂ ಕಲಾಕೃತಿ ಎಂಬ ಹೆಸರಿನಲ್ಲಿ ನಡೆಸುತ್ತಿದ್ದ ಚಿತ್ರಕಲಾ ಪ್ರದರ್ಶನಕ್ಕೆ ಇದು ವಿಶೇಷ ಮೆರುಗನ್ನು ನೀಡಲಿರುವುದು ನಮಗೆ ಖಚಿತವಾಗಿತ್ತು. ವ್ಯಂಗ್ಯಚಿತ್ರಗಳ ಲೋಕದಲ್ಲಿ ಸ್ವತಃ ತಮ್ಮ ಛಾಪನ್ನು ಮೂಡಿಸಿದ್ದ ಹರಿಣಿ ಮತ್ತು ಜೀವನ್ ಶೆಟ್ಟಿಯವರು ಅಂದು ನನ್ನೊಂದಿಗೆ ಚರ್ಚಿಸುತ್ತಿದ್ದರೆ ಸಾಮಾಜಿಕ ಸಂದೇಶವನ್ನೊಳಗೊಂಡ ರಾಜ್ಯಮಟ್ಟದ ವ್ಯಂಗ್ಯಚಿತ್ರಗಳ ಪ್ರದರ್ಶನವು ನಮ್ಮದೇ ಅಂಗಳದಲ್ಲಿ ಅರಳಲಿರುವ ಬಗ್ಗೆ ನಾನು ಕನಸು ಕಾಣುತ್ತಿದ್ದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಸತೀಶ್ ಆಚಾರ್ಯ, ಪ್ರಕಾಶ್ ಶೆಟ್ಟಿ, ಜೇಮ್ಸ್ ವಾಜ್, ಜಾನ್ ಚಂದ್ರನ್ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಖ್ಯಾತನಾಮರ ವ್ಯಂಗ್ಯಚಿತ್ರಗಳನ್ನು ಒಂದೇ ವೇದಿಕೆಯಲ್ಲಿ ಪ್ರಸ್ತುತಪಡಿಸುವುದೇ ನಮಗೆ ಖುಷಿಯ ವಿಚಾರವಾಗಿತ್ತು.
ಕಾರ್ಯಕ್ರಮವೊಂದು ಬಂತೆಂದರೆ ದಿನರಾತ್ರಿಗಳ ಪರಿವೆಯಿಲ್ಲದೆ ದುಡಿಯುತ್ತಿದ್ದ ನಮಗೆ ಚಿತ್ರಕಲಾ ಪ್ರದರ್ಶನದ ಆಯೋಜನೆಯು ಹೆಚ್ಚುವರಿ ಶ್ರಮದಂತೇನೂ ಅನಿಸಲಿಲ್ಲ. ಹೀಗಾಗಿ ಆ ವರ್ಷಕ್ಕೆ ನಿಗದಿಯಾದ ‘ಅರೇಬಿಯನ್ ನೈಟ್ಸ್’ ಥೀಮ್ ಅನ್ನು ಹೊಂದಿದ್ದ ಕಲಾಮಹೋತ್ಸವಕ್ಕೆ ನಾವು ಹಿಂದೆಂದಿಗಿಂತಲೂ ಹೆಚ್ಚಿನ ಹುಮ್ಮಸ್ಸಿನಲ್ಲಿ ಅಣಿಯಾದೆವು. ಆಗ ಎನ್.ಐ.ಟಿ.ಕೆ ಯ ನಿರ್ದೇಶಕರಾಗಿದ್ದ ಡಾ. ಸಂದೀಪ್ ಸಂಚೇತಿಯವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧಿಕೃತವಾಗಿ ಚಾಲನೆಯನ್ನು ನೀಡಿದ್ದರು. ಉಳಿದಂತೆ ಆಗ ಡೀನ್ ಆಗಿದ್ದ ಡಾ. ಕೆ. ಎಲ್. ಲೋಕೇಶ್ ರವರ ಪ್ರೋತ್ಸಾಹ, ನಮ್ಮ ಫೋರಂನ ಸಲಹಾಕಾರರಾಗಿದ್ದ ಡಾ. ಅರುಣ್ ರವರ ಮಾರ್ಗದರ್ಶನ ಹಾಗೂ ಫೋರಂನ ಸದಸ್ಯರ ಅವಿರತ ಶ್ರಮದಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ವ್ಯಂಗ್ಯಚಿತ್ರಗಳ ಪ್ರದರ್ಶನವು ಯಶಸ್ವಿಯಾಗಿತ್ತು.

ಇದರದ್ದೇ ಮುಂದುವರಿದ ಭಾಗವೆಂಬಂತೆ ಹರಿಣಿಯವರು ನಡೆಸಿಕೊಟ್ಟಿದ್ದ ಕಾರ್ಟೂನಿಂಗ್ ಶಿಬಿರವೂ ಕೂಡ ನಿರೀಕ್ಷೆಯಂತೆ ಯಶಸ್ವಿಯಾಗಿತ್ತು. ಅಸಲಿಗೆ ತಂಡಕ್ಕೆ ಕಾಲೇಜಿನಿಂದ ನೀಡಲಾಗುವ ಚಿಕ್ಕ ವಾರ್ಷಿಕ ಬಜೆಟ್ ಒಂದನ್ನು ಆಧಾರವಾಗಿಟ್ಟುಕೊಂಡು ನಮ್ಮಂತಹ ಅನನುಭವಿ ವಿದ್ಯಾರ್ಥಿಗಳು ಫೋರಂ ಹೆಸರಿನಲ್ಲಿ ವರ್ಷವಿಡೀ ಹಲವು ಚಟುವಟಿಕೆಗಳನ್ನು ಆಯೋಜಿಸಬೇಕಾಗುತ್ತದೆ. ಇನ್ನು ಇಂತಹ ಕಾರ್ಯಕ್ರಮಗಳಲ್ಲೂ ಸಿನಿ ಸೆಲೆಬ್ರಿಟಿಗಳಿಗೆ ನೀಡಲಾಗುವ ಸಂಭಾವನೆಗೆ ಹೋಲಿಸಿದರೆ ಉಳಿದ ಕ್ಷೇತ್ರಗಳ ಸಾಧಕರಿಗೆ ನೀಡಲಾಗುವ ಸಂಭಾವನೆಯು ಏನೇನೂ ಅಲ್ಲವೆಂಬಷ್ಟು ಚಿಕ್ಕದಾಗಿರುತ್ತದೆ. ಇತ್ತ ನನ್ನನ್ನೂ ಸೇರಿದಂತೆ ಫೋರಂನ ಕೆಲ ಸದಸ್ಯರು ಕಲಾವಿದರಿಗೆ ನೀಡಬೇಕಿದ್ದ ಸಂಭಾವನೆಯಲ್ಲಿ ಚೌಕಾಶಿ ಮಾಡಲು ಸಿದ್ಧರಾಗಿಲ್ಲದಿದ್ದ ಪರಿಣಾಮವಾಗಿ ವಾರ್ಷಿಕ ಬಜೆಟ್ ವ್ಯವಸ್ಥೆಯ ನಿರ್ವಹಣೆಯು ಹೆಚ್ಚೇ ಬಿಗಿಯಾಗಿತ್ತು ಎನ್ನಲಡ್ಡಿಯಿಲ್ಲ. ಹೀಗಿರುವಾಗ ಹರಿಣಿಯವರ ಈ ಒಂದು ಶಿಬಿರವು ಆರ್ಥಿಕ ನಿರ್ವಹಣೆ ಮತ್ತು ಗುರುತಿಸುವಿಕೆಯ ನೆಲೆಯಲ್ಲಿ ಅಂದು ನಮ್ಮ ಫೋರಂಗೆ ನೆರವಾಗಿದ್ದು ಸತ್ಯ.
ಆಸಕ್ತರ ಕ್ಯಾರಿಕೇಚರ್ ಗಳನ್ನು ಕೂತಲ್ಲೇ ಚಕಚಕನೆ ಬಿಡಿಸುತ್ತಿದ್ದ ಹರಿಣಿಯವರು ಕಾಲೇಜು ಕ್ಯಾಂಪಸ್ಸಿನಲ್ಲಿ ಹೊಸದೊಂದು ಅಚ್ಚರಿಯ ಲೋಕವನ್ನೇ ಸೃಷ್ಟಿಸಿದ್ದರು. ತಮ್ಮದೇ ಮುಖಾರವಿಂದ ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಹಾಸ್ಯಮಯ ಶೈಲಿಯಲ್ಲಿ ನೋಡಿ ಕಣ್ಣರಳಿಸುತ್ತಿದ್ದ ವಿದ್ಯಾರ್ಥಿಗಳ ಉತ್ಸಾಹವನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ. ಕೊನೆಗೆ ಎಲ್ಲವನ್ನೂ ಮುಗಿಸಿ ಪ್ಯಾಕಪ್ ಹಂತದಲ್ಲಿದ್ದಾಗ ನನ್ನದೂ ಒಂದು ಕ್ಯಾರಿಕೇಚರ್ ಬೇಕಿತ್ವಲ್ವಾ ಸಾರ್ ಎಂದು ನಾನು ಅವರಲ್ಲಿ ಸಂಕೋಚದಿಂದ ಕೇಳಿದ್ದೆ. ಇದರಿಂದಾಗಿ ಹರಿಣಿಯವರ ಮ್ಯಾಜಿಕಲ್ ರೇಖೆಗಳಲ್ಲಿ ನಾನೂ ಮರುಸೃಷ್ಟಿಯಾಗಿದ್ದೆ. ಹತ್ತು ವರ್ಷಗಳ ಹಿಂದಿನ ಈ ಚಿತ್ರವನ್ನು ಇತ್ತೀಚೆಗೆ ನೋಡಿದಾಗ ಕಾಲೇಜುದಿನಗಳ ನೆನಪುಗಳೆಲ್ಲಾ ಹಸಿರಾಗಿದ್ದವು.
ಹರಿಣಿಯವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮವು ನಮ್ಮ ಆರ್ಟಿಸ್ಟ್ಸ್ ಫೋರಂ ತಂಡವು ಮತ್ತಷ್ಟು ಹುಮ್ಮಸ್ಸಿನೊಂದಿಗೆ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಶಕ್ತಿಯನ್ನು ತುಂಬಿತ್ತು. ಮುಂದೆ ಖ್ಯಾತ ಚಿತ್ರಕಲಾವಿದರಾದ ಕೆ. ಎಲ್. ಭಟ್, ವೆಂಕಿ ಪಲಿಮಾರ್ ರಂತಹ ದಿಗ್ಗಜರು ನಮ್ಮ ಕಾಲೇಜಿಗೆ ಬಂದುಹೋದರು. ಡಾ. ಎಸ್. ಎಮ್. ಶಿವಪ್ರಕಾಶ್ ಸರ್ ಆಯೋಜಿಸಿದ್ದ ಪೋಟ್ರೇಟ್ ವರ್ಕ್‍ಶಾಪ್ ಮತ್ತು ‘ಚಿಟ್ಟೆ’ ಖ್ಯಾತಿಯ ಖ್ಯಾತ ‘ಪೇಪರ್ ಎಂಜಿನಿಯರ್’ ಅರುಣ್ ದೇಸಾಯಿಯವರ ಹಿಟ್ ಕಾರ್ಯಕ್ರಮಗಳು ನಮ್ಮ ತಂಡವು ಮೈಕೊಡವಿಕೊಂಡು ಹೊಸದೊಂದು ದಿಕ್ಕಿನತ್ತ ಹೊರಳುವಂತೆ ಮಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದವು. ಸ್ವತಃ ಲೇಖಕರೂ ಆಗಿರುವ ಡಾ. ಶಿವಪ್ರಕಾಶ್ ರವರ ಪೋಟ್ರೇಟ್ ಗಳನ್ನು ಮತ್ತು ಜೀವನೋತ್ಸಾಹ ತುಂಬುವ ಹಲವು ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಣುವುದು ಇಂದಿಗೂ ಸೊಗಸು.

ಆರ್ಟಿಸ್ಟ್ಸ್ ಫೋರಂ ಆ ದಿನಗಳಲ್ಲಿ ಸಂಘಟನಾ ಚಟುವಟಿಕೆಯನ್ನಷ್ಟೇ ಅಲ್ಲದೆ ಬದುಕಿನ ಬಹಳಷ್ಟು ಮೌಲ್ಯಗಳನ್ನೂ ನಮಗೆ ಕಲಿಸಿಕೊಟ್ಟಿತ್ತು. ಪರೀಕ್ಷೆಗಳು, ಅಸೈನ್ಮೆಂಟುಗಳು, ಉದ್ಯೋಗ ಸಂಬಂಧಿ ಸಂದರ್ಶನಗಳ ತೀವ್ರ ಒತ್ತಡದ ನಡುವೆಯೂ ನಾವು ನಿತ್ಯವೂ ತಾಸುಗಟ್ಟಲೆ ಬಣ್ಣ-ಬ್ರಷ್-ಬ್ಯಾನರುಗಳ ಮಧ್ಯೆ ಕಳೆಯುತ್ತಿದ್ದೆವು. ಇದರೊಂದಿಗೆ ಜೂನಿಯರ್-ಸೀನಿಯರ್ ಗಳೆನ್ನದೆ ಎಲ್ಲರೊಂದಿಗೆ ಬೆರೆಯುವುದು, ಪರಸ್ಪರರಿಂದ ಕಲಿಯುತ್ತಾ ಮತ್ತಷ್ಟು ಉತ್ತಮರಾಗುವುದು, ಮಹತ್ತರವಾದ ಗುರಿಯನ್ನಿಟ್ಟುಕೊಂಡು ಆಯಾಸಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತಿನ ಬದ್ಧತೆಯೊಂದಿಗೆ ದುಡಿಯುವುದು, ವೈಯಕ್ತಿಕ ಒತ್ತಾಸೆಗಳನ್ನು ಬದಿಗೊತ್ತಿ ತಂಡವಾಗಿ ಮುನ್ನಡೆಯುವುದು… ಇತ್ಯಾದಿಗಳೆಲ್ಲಾ ಕ್ರಮೇಣ ನಮ್ಮ ಜೀವನಶೈಲಿಯ ಭಾಗವಾಗಿ ಹೋದವು.
ಬರೋಬ್ಬರಿ ನೂರು ಮಂದಿ ವಿದ್ಯಾರ್ಥಿಗಳ ಗುಂಪಾಗಿದ್ದ ಫೋರಂ ಕಾಲಾಂತರದಲ್ಲಿ ಕೇವಲ ಕಲಾವಿದರ ತಂಡವಾಗಿಯಷ್ಟೇ ಉಳಿಯದೆ ಒಂದು ಸುಂದರ ಕುಟುಂಬವಾಗಿ ರೂಪುಗೊಂಡಿತ್ತು. ಹೀಗಾಗಿಯೇ ವಿದ್ಯಾರ್ಥಿಗಳು ನಿತ್ಯವೂ ತಮ್ಮ ತರಗತಿಗಳನ್ನು ಮುಗಿಸಿ, ಸ್ವಇಚ್ಛೆಯಿಂದ ಬಂದು ತಮ್ಮನ್ನು ತಾವು ತಾಸುಗಟ್ಟಲೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ದೊಡ್ಡ ಸಂಗತಿಯಾಗಲಿಲ್ಲ. ಪ್ರತಿಭಾವಂತರಿಗೆ ವೇದಿಕೆಯನ್ನು ಕಲ್ಪಿಸುವುದು ಮತ್ತು ಆಸಕ್ತರಿಗೆ ನಿರಂತರ ಕಲಿಕೆಯನ್ನು ಜೀವನಶೈಲಿಯೆಂಬಂತೆ ಪರಿವರ್ತಿಸುವಂತಹ ಆರೋಗ್ಯಕರ ವಾತಾವರಣವನ್ನು ನಿರ್ಮಿಸುವಲ್ಲಿ ನಾವೇ ರೂಪಿಸಿದ್ದ ಫೋರಂ ಯಶಸ್ವಿಯಾಯಿತು. ನಮ್ಮ ಆರ್ಟಿಸ್ಟ್ಸ್ ಫೋರಂ ತಂಡದಲ್ಲಿದ್ದ ಹಲವು ವಿದ್ಯಾರ್ಥಿಗಳು ಇಂದು ಹಲವು ದೇಶಗಳಲ್ಲಿ ಚದುರಿ ಹೋಗಿದ್ದಾರೆ. ಕಲೆಯನ್ನೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಪ್ರಯೋಗಗಳನ್ನು ನಡೆಸುತ್ತಾ ಇಂದಿಗೂ ಈ ಮಂದಿ ಮುನ್ನಡೆಯುತ್ತಿದ್ದಾರೆ.
ಕಳೆದ ವರ್ಷ ಮನೆಗೆ ಹೋಗಿದ್ದಾಗ ಕಾಲೇಜಿನ ನೆನಪಿನ ಮಾಲಿಕೆಯೆಂಬಂತೆ ಸಿದ್ಧಪಡಿಸಿ ನಮಗೆಲ್ಲರಿಗೂ ನೀಡಲಾಗಿದ್ದ ‘ಸ್ಮೃತಿ’ ಸ್ಲ್ಯಾಮ್ ಬುಕ್ ಕೈಗೆ ಸಿಕ್ಕಿತ್ತು. “ಬದುಕಿನಲ್ಲಿ ಮುಂದೇನಾಗಬೇಕು” ಎಂಬ ಪ್ರಶ್ನೆಯೆದುರು “ನನಗೆ ಲೇಖಕನಾಗಬೇಕು” ಎಂದು ಆ ಸಂಗ್ರಹದಲ್ಲಿ ಬರೆದಿದ್ದೆ. ಬರವಣಿಗೆಯನ್ನು ಹೊಸದಾಗಿ ಆರಂಭಿಸಿದ್ದ ಆ ದಿನಗಳಲ್ಲಿ ನನ್ನೊಳಗೆ ನಿಜಕ್ಕೂ ಅಂಥದ್ದೊಂದು ತುಡಿತವಿತ್ತೇ ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ಏಕೆಂದರೆ ಅವೆಲ್ಲಾ ಬಹುತೇಕ ಹುಡುಗಾಟದ ದಿನಗಳೇ ಆಗಿದ್ದವು. ಹೀಗಾಗಿ ಅದನ್ನು ನಾನು ಪ್ರಜ್ಞಾಪೂರ್ವಕವಾಗಿಯೇ ಬರೆದಿದ್ದೆ ಎಂದು ಆತ್ಮವಿಶ್ವಾಸದಿಂದ ಹೇಳುವುದು ಕಷ್ಟ.
ಒಟ್ಟಿನಲ್ಲಿ ನನ್ನ ಹತ್ತು ವರ್ಷಗಳ ಹಿಂದಿನ ನೆನಪುಗಳನ್ನು ನೀವೀಗ ಪುಟ್ಟ ಬರಹವಾಗಿ ಓದುತ್ತಿದ್ದೀರಿ. ಅದಷ್ಟೇ ಸತ್ಯ!






0 Comments