’ಆಯ್ತಪ್ಪ ಇನ್ಮೇಲೆ ಕಿತ್ತಳೆ ಬಗ್ಗೆ ಬರೆಯೋಣ’ ಅಂದ್ರು ಜೋಗಿ

ಕತ್ತಲೆ ಆವರಿಸಿದಾಗ ಕಿತ್ತಲೆಯ ಬಗ್ಗೆ ಬರೆಯಿರಿ!

ಜೋಗಿ

ನೀನು ದೇವರನ್ನು ನಂಬುತ್ತೀಯೋ ಇಲ್ಲವೋ, ಆದರೆ ನಂಬೋದಿಲ್ಲ ಅಂತ ಮಾತ್ರ ಬರೆಯಬಾರದು.
ಹಾಗಂತ ಹುಕುಂ ಹೊರಡಿಸುವವರಿದ್ದಾರೆ. ಯಾಕೆ ಅಂತ ಕೇಳಿದರೆ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಹಾಳಾಗುತ್ತದೆ ಅಂತ ಬೈಯುತ್ತಾರೆ. ನಮ್ಮ ಸಂಸ್ಕೃತಿಯ ಒಳಗೇ ದೇವರಿಲ್ಲ ಅಂತ ಹೇಳಿದ ಚಾರ್ವಾಕನಿದ್ದಾನಲ್ಲ, ಇಡೀ ಜೀವನದ ಉದ್ದಕ್ಕೂ ಬರೀ ಮಜಾ ಮಾಡಿಕೊಂಡೇ ಬದುಕಿದ ಅಜಮಿಳನಿದ್ದಾನಲ್ಲ. ನಮ್ಮದು ಏಕರೂಪದ ಸಂಸ್ಕೃತಿ ಅಲ್ಲ ಎಂದು ಹೇಳಿದರೆ ಅವರಿಗೆ ಸಿಟ್ಟು ಬರುತ್ತದೆ. ಹುಕುಂದಾರರಿಗೆ ಸಿಟ್ಟು ಬಂದರೆ ಫೇಸ್‌ಬುಕ್ಕು ಜೀವಂತವಾಗುತ್ತದೆ. ಫೇಸ್‌ಬುಕ್ಕು ಆಕ್ಟಿವ್ ಆಗುತ್ತಿದ್ದಂತೆ ಬರೆದವನ ಅಪ್ಪ, ಅಮ್ಮ, ಕುಲ ಎಲ್ಲವನ್ನೂ ಜಾಲಾಡಿಸಲಾಗುತ್ತದೆ. ಅವನನ್ನು ಅತ್ಯಂತ ನೀಚ ಶಬ್ದಗಳಿಂದ ನಿಂದಿಸಲಾಗುತ್ತದೆ.
ಹಾಗೆ ನಿಂದಿಸುವುದು, ಜನ್ಮಜಾಲಾಡುವುದು ಸಂಸ್ಕೃತಿಗೆ ವಿರೋಧ ಅಲ್ಲ. ಪರಂಪರೆಗೆ ಮಾರಕ ಅಲ್ಲ.
ಇದನ್ನೆಲ್ಲ ನೋಡುತ್ತಿದ್ದರೆ ಬರಹಗಾರರ ಸೆನ್ಸಾರ್‌ಶಿಪ್ಪು ಶುರುವಾಗುತ್ತಿದೆ ಎನ್ನುವ ಅನುಮಾನ ಯಾರಿಗೇ ಆದರೂ ಬರಬಹುದು. ಒಂದು ಲೇಖನಕ್ಕೂ ಒಂದು ಕತೆಗೂ ಒಂದು ಪ್ರಬಂಧಕ್ಕೂ ಇರುವ ಧ್ವನಿ ಮುಖ್ಯವಲ್ಲ. ಹುಕುಂದಾರರು ಕೇವಲ ಒಂದು ಸಾಲನ್ನು ಮಾತ್ರ ಹಿಡಕೊಂಡು ಕಿತ್ತಾಡಬಲ್ಲರು. ಅದನ್ನೆಲ್ಲ ನೋಡುತ್ತಿದ್ದರೆ ಹಿಂದೊಮ್ಮೆ ನಡೆದ ಪ್ರಸಂಗ ಮತ್ತು ಅದಕ್ಕೆ ನಾನೇ ಬರೆದ ಒಂದು ಪ್ರತಿಕ್ರಿಯೆ ನೆನಪಾಯಿತು. ಅದನ್ನು ಹಾಗ್ಹಾಗೇ ಕೊಟ್ಟಿದ್ದೇನೆ:
ನಾನು ಒಬ್ಬ ಲೇಖಕರ ಕುರಿತು ಬರೆಯುತ್ತಾ, ಅವರು ಲೆಕ್ಕಾಚಾರ ಹಾಕಿ, ಕತೆ ಹೀಗೆ ಶುರುವಾಗಿ ಹೀಗೆ ಮುಗಿಯಬೇಕು ಎಂದು ಮೊದಲೇ ತೀರ್ಮಾನಿಸಿ ಬರೆಯುವವರು ಎಂದು ಬರೆದಿದ್ದೆ. ಆ ಲೇಖಕರಿಗೆ ಅಸಂಖ್ಯಾತ ಅಭಿಮಾನಿಗಳಿದ್ದರು. ಆ ಬರಹ ಪ್ರಕಟವಾದ ಮೂರನೆಯ ದಿನ ಬಾಲ್ಯಸಖನೊಬ್ಬ ಫೋನ್ ಮಾಡಿದ್ದ. ‘ಮದ್ಯ’ರಾತ್ರಿ’ಯ ಕರೆಯಾದ್ದರಿಂದ ಭಯ ಮತ್ತು ಅನುಮಾನದ ಎತ್ತಿಕೊಂಡೆ. ಗಾಢ ನಿದ್ರೆಯಲ್ಲಿರುವವನ ದನಿಯಲ್ಲಿ ಹಲೋ ಅಂದೆ. ನನ್ನ ದನಿಯ ಏರಿಳಿತವನ್ನು ಗುರುತಿಸುವ ಸ್ಥಿತಿಯಲ್ಲಿ ಅವನಿರಲಿಲ್ಲ.
ನಮ್ಮಿಬ್ಬರ ನಡುವೆ ಆ ಅಪರಾತ್ರಿಯಲ್ಲಿ ಒಂದೂವರೆ ಗಂಟೆ ನಡೆದ ಸಂಭಾಷಣೆಯಲ್ಲಿ ಅವನದ್ದು ನೂರು ಮಾತು. ನಂದು ನೂರಿಪ್ಪತ್ತು ಸಲ ಅದೇ ಮಾತು. . ’ಸರಿಯಪ್ಪ, ಬರೆಯೋಲ್ಲ. ಇನ್ನು ಮುಂದೆ ಪೆನ್ನು ಮುಟ್ಟಿದರೆ ಕೇಳು ಅಂತ ನೂರಿಪ್ಪತ್ತು ಸಾರಿ ಹೇಳಿದ ನಂತರವೇ ಅವನು ಸುಮ್ಮನಾದದ್ದು. ಸರಿ ಹಾಗಿದ್ರೆ ಅನೌನ್ಸ ಮಾಡ್ತೀನಿ ಎಂದೂ ಹೇಳಿ ಆತ ನಾನು ಜೋಗಿಯನ್ನು ಬರೆಯದಂತೆ ಕನ್ವಿನ್ಸ ಮಾಡಿದ್ದೀನಿ ’ ಎಂದು ಬರೆದೂಬಿಟ್ಟ. ಬೆಳಗ್ಗೆ ಬಂದು ರಾತ್ರಿ ತುಂಬಾ ಅಪ್ಸೆಟ ಆಗಿದ್ದೆ ಅಂದಿದ್ದೂ ಆಯ್ತು.
ಹೀಗೇ ಬೆದರಿಕೆಗಳೂ ಪ್ರೀತಿಯ ಒತ್ತಾಯಗಳೂ ಬಂದ ನಂತರ ಸಾಹಿತ್ಯದ ಬಗ್ಗೆ, ಸಂಸ್ಕೃತಿಯ ಬಗ್ಗೆ, ಇತರೇ ಲೇಖಕರ ಬಗ್ಗೆ ಬರೆಯುವುದು ಬೇಡ ಎಂದುಕೊಂಡೆ. ನಮ್ಮಪ್ಪನನ್ನು ಬೇಕಾದರೂ ಬೈಯ್ರೀ, ಆಯಪ್ಪನವರನ್ನು ಮಾತ್ರ…. ಎಂದು ಮತ್ತೊಬ್ಬ ಗದ್ಗದಿತನಾಗಿ ಹೇಳುವಾಗ ನನಗೂ ಕಣ್ಣೀರು ಬಂದು ಸಾಯಿಪ್ರಕಾಶ ಸಿನಿಮಾಗಳು ನೆನಪಾದವು. ಕತೆ ಬರಿ ಅಂತ ಒಬ್ಬನೂ, ಹಿರಿಯ ಕವಿಗಳ ಬಗ್ಗೆ ಮಾತ್ರ ಬರಿ ಎಂದು ಮತ್ತೊಬ್ಬನೂ ಪ್ರಬಂಧವೇ ಸರಿ ಅಂತ ಇನ್ನೊಬ್ಬನೂ ತಾಕೀತು ಮಾಡಿದರು. ಇನ್ನೊಂದು ಸಾರಿ ಬರೆದರೆ ನಿನ್ನ ಜೊತೆ ಮಾತೇ ಬಿಡ್ತೇನೆ ಎಂದು ಮತ್ತೊಬ್ಬ ಹೇಳಿ ನನ್ನನ್ನು ಎಷ್ಟು ಟೆಂಪ್ಟ ಮಾಡಿದ್ದನೆಂದರೆ, ಈ ಸಲವೂ ಯಾರಾದರೊಬ್ಬರ ಬಗ್ಗೆ ಬರೆದೇ ಬಿಡಬೇಕು ಅಂದುಕೊಂಡಿದ್ದೆ. ಆದರೆ ಅವನು ಮಾತು ಉಳಿಸಿಕೊಳ್ಳುವವನಲ್ಲ ಎಂದು ಗೊತ್ತಿದ್ದರಿಂದ ಸುಮ್ಮನಿದ್ದೇನೆ.
ಮಿತ್ರ ಮಂಡಳಿಯನ್ನೂ ಉಗ್ರವಾದಿಗಳನ್ನೂ ಸೇರಿಸಿ ಒಂದು ಸಮಿತಿ ಮಾಡಿ, ಯಾರಯಾರು ಏನೇನು ಬರೆಯಬೇಕು ಅನ್ನುವ ಬಗ್ಗೆ ಮಾರ್ಗಸೂಚಿಯೊಂದನ್ನು ಯಾಕೆ ಹೊರತರಬಾರದು ಎನ್ನುವ ಅದ್ಭುತ ಯೋಜನೆ ಹುಟ್ಟಿದ್ದೂ ಆಗಲೇ. ಸರಿಯಾಗಿ ಕಾರ್ಯರೂಪಕ್ಕೆ ಬಂದರೆ ಇದು ಸಾಹಿತ್ಯ ಲೋಕದ ಅಪೂರ್ವವಾದ ಒಂದು ಯೋಜನೆ ಆಗುವುದರಲ್ಲಿ ಅನುಮಾನವೇ ಇಲ್ಲ. ಸಾಹಿತ್ಯಿಕ ಏರುಪೇರುಗಳೂ, ಒಳಜಗಳಗಳೂ, ಗಡಿ ಸಮಸ್ಯೆಗಳೂ ಇದರಿಂದ ಪರಿಹಾರವಾಗಬಹುದು.

ಉದಾಹರಣೆಗೆ ನವ್ಯ ಮಾರ್ಗದಲ್ಲಿ ಬರೆಯುವ ಸಾಹಿತಿಯೊಬ್ಬನಿದ್ದಾನೆ ಅಂತಿಟ್ಟುಕೊಳ್ಳಿ. ಅವನ ಬಳಿ ಹೋಗಿ ನಿನ್ನನ್ನು ನವ್ಯ ಸಾಹಿತಿ ಎಂದು ಹಣೆಪಟ್ಟಿ ಕಟ್ಟಿದ್ದಾರೆ. ಅದರಿಂದಾಗಿ ನೀನು ನೋಡುವ ದೃಷ್ಟಿಕೋನ ಸಂಕುಚಿತಗೊಂಡಿದೆ. ನಿನ್ನ ಸರ್ವತೋಮುಖ ಬೆಳವಣಿಗೆಗೆ ಹಾನಿಯಾಗಿದೆ. ಇನ್ನು ಮೂರು ವರುಷಗಳ ಕಾಲ ನೀನು ಪ್ರಗತಿಶೀಲ ಸಾಹಿತ್ಯ ರಚನೆ ಮಾಡು ಎಂದು ಸೂಚಿಸುವುದು. ಈ ಮಾರ್ಗದರ್ಶನಕ್ಕೆ ಯಥೋಚಿತ ಸಂಭಾವನೆಯನ್ನೂ ಪಡೆಯಬಹುದು. ಹಾಗೇ ಬಂಡಾಯ ಸಾಹಿತಿಯ ಬಳಿ ಹೋಗಿ ನಿನ್ನ ಸೇವೆ ಬಂಡಾಯ ಸಾಹಿತ್ಯಕ್ಕೆ ಸಾಕು. ಇನ್ನು ಮುಂದೆ ನೀನು ಪತ್ತೇದಾರಿ ಕಾದಂಬರಿಗಳನ್ನು ಬರೆಯತಕ್ಕದ್ದು ಎಂದು ಹೇಳಿ ಅವನ ಕ್ಷಿತಿಜವನ್ನು ವಿಸ್ತಾರ ಮಾಡುವುದು. ಈ ಮೂಲಕ ಸಾಹಿತಿಗಳಲ್ಲಿ ಗುಂಪುಗಾರಿಕೆ ತಪ್ಪಿಸಬಹುದು. ಎಲ್ಲಾ ಸಾಹಿತಿಗಳೂ ಎಲ್ಲಾ ಗುಂಪಿನಲ್ಲೂ ಕಾಣಿಸಿಕೊಳ್ಳುವುದರಿಂದ ಸೌಹಾರ್ದಯುತ ಸಂಬಂಧ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಒಳಜಗಳಗಳೂ ತಪ್ಪುತ್ತವೆ.
ಹೇಳಿಕೆಗಳನ್ನು ನೀಡುವ ವಿಚಾರಕ್ಕೂ ಇದನ್ನು ವಿಸ್ತರಿಸಬಹುದು. ದತ್ತಪೀಠ ವಿರೋಧಿಸಿ ಹತ್ತಾರು ವರುಷಗಳಿಂದ ಹೇಳಿಕೆ ನೀಡುತ್ತಾ ಬಂದಿರುವ ವಿಚಾರವಾದಿ, ಮುಂದಿನ ಕೆಲವು ವರುಷಗಳ ಕಾಲ ರಾಮಮಂದಿರ ನಿರ್ಮಾಣವನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡುವ ಮೂಲಕ ಎಲ್ಲಾ ವರ್ಗದ ಓದುಗರ ಪ್ರೀತಿಗೆ ಪಾತ್ರನಾಗಬಹುದು.
ನಕ್ಸಲರ ಕೃತ್ಯಗಳನ್ನು ಅನುಕಂಪದಿಂದ ನೋಡುವವನು ತನ್ನ ನಿಲುವು ನೋಟ ಬದಲಾಯಿಸಿಕೊಂಡು ಅವರನ್ನು ವಿರೋಧಿಸುವ ಚಳವಳಿಯ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಬಹುದು. ಭಾವಗೀತೆಗಳನ್ನು ಬರೆಯುತ್ತಿದ್ದವನು ಬಂಡಾಯದ ಹಾಡುಗಳನ್ನೂ ದಲಿತ ಸಂವೇದನೆಯ ಕಾದಂಬರಿ ಬರೆಯುತ್ತಿದ್ದವನು ರಮ್ಯ ಸಾಹಿತ್ಯವನ್ನೂ ಮುಸ್ಲಿಂ ಸಂವೇದನೆಯ ಬರಹಗಾರ ಎಂದು ಕರೆಸಿಕೊಂಡವನು ಮಾಧ್ವ ಕುಟುಂಬದ ಕತೆಗಳನ್ನು ಬರೆದು ಸಾರ್ವತ್ರಿಕ ಮನ್ನಣೆ ಪಡೆಯಬಹುದು ಎಂದೆಲ್ಲ ಸಮಿತಿಯ ಆಶೋತ್ತರಗಳನ್ನು ಪಟ್ಟಿ ಮಾಡಲಾಯಿತು.
ಇದಿನ್ನೂ ಕಾರ್ಯರೂಪಕ್ಕೆ ಬರದೇ ಇರುವುದರಿಂದ ನಾನು ಇವೆಲ್ಲದರ ಬಗ್ಗೆ ಬರೆಯುವಂತಿಲ್ಲ. ಈ ಸಮಿತಿ ಆದಷ್ಟೂ ಬೇಗ ಕಾರ್ಯಾರಂಭ ಮಾಡಲಿ ಎಂದು ಹಾರೈಸುತ್ತಾ ಕುಳಿತವನಿಗೆ ಗೆಳತಿಯೊಬ್ಬಳು ಫೋನ್ ಮಾಡಿ ಕಿತ್ತಳೆ ಹಣ್ಣಿನ ಬಗ್ಗೆ ಬರಿಯೋ ಅಂದಳು. ಎಂಥಾ ನಿರಾಳವಾಯಿತು ಎಂದರೆ ತಕ್ಷಣವೇ ಬರೆಯಲು ಕೂತಿದ್ದೇನೆ.
ಆದರೆ ಅದಕ್ಕೂ ಮೊದಲು ಕಿತ್ತಳೆ ಹಣ್ಣಿನ ಬಗ್ಗೆ ಬರೆದರೆ ಯಾರ ಮನಸ್ಸಿಗಾದರೂ ಬೇಜರಾಗುತ್ತದೋ ಎಂದು ಗಮನಿಸುವುದು ಮುಖ್ಯ ಅನ್ನಿಸಿತು. ಆ ಬಗ್ಗೆ ಸಮೀಕ್ಷೆ ನಡೆಸಿದಾಗ ಕೆಲವು ಕುತೂಹಲಕಾರಿ ಮಾಹಿತಿಗಳು ಸಿಕ್ಕವು.
ಕಿತ್ತಳೆ ಬೆಳೆಗಾರರು ಕೊಡಗಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರನ್ನು ನೋಯಿಸುವಂತೆ ಬರೆಯಬೇಡ ಎಂದು ಹಲವರು ಮೌಲಿಕ ಸಲಹೆ ಕೊಟ್ಟರು. ಅವರಿಗೆ ಕಿತ್ತಳೆಗಿಂತ ಕಾಫಿ ಮೇಲೆ ಪ್ರೀತಿ ಜಸ್ತಿ. ಕಾಫಿಯಿಂದ ಲಾಭ ಜಸ್ತಿ, ಹೀಗಾಗಿ ಕಿತ್ತಳೆಯ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮತ್ತೊಬ್ಬರು ಆ ವಾದವನ್ನು ತಳ್ಳಿ ಹಾಕಿದರು. ಮಾವಿನ ಹಣ್ಣಿನ ಬಗ್ಗೆ ಬರೆಯುವುದಕ್ಕಿಂತ ಕಿತ್ತಳೆ ವಾಸಿ. ನಮ್ಮ ಪುರಾಣಗಳಲ್ಲಿ ಮಾವಿನ ಹಣ್ಣಿನ ಪ್ರಸ್ತಾಪವಿದೆ. ಮಕ್ಕಳಾಗದವರಿಗೆ ಮಹರ್ಷಿಗಳು ಮಾವಿನ ಹಣ್ಣನ್ನು ಕೊಡುತ್ತಿದ್ದರು. ಮಾವಿನ ಹಣ್ಣಿನ ಬಗ್ಗೆ ಬರೆದರೆ ಪುರಾಣಪ್ರಿಯರಿಗೆ ನೋವಾಗುತ್ತಿತ್ತು, ಒಳ್ಳೆಯ ಕೆಲಸ ಮಾಡಿದೆ ಎಂದು ಅನೇಕರು ಅಭಿನಂದಿಸಿದರು.
ಕಿತ್ತಳೆ ಹಣ್ಣಿಗೆ ಆರೆಂಜ ಎನ್ನುತ್ತಾರೆ. ಅದು ಸಂಸ್ಕೃತದಿಂದ ಬಂದಿದ್ದು ಎನ್ನುವುದನ್ನು ಬರೆಯಲು ಮರೆಯಬೇಡ. ನಾರಂಗ ಎಂದು ಸಂಸ್ಕೃತದಲ್ಲಿ ಹೆಸರಾದ ಕಿತ್ತಳೆ ಇಂಗ್ಲಿಷಿನಲ್ಲಿ ಆರೆಂಜ ಆಗಿದೆ ಎಂದು ಭಾಷಾ ಶಾಸಜ್ಞರೊಬ್ಬರು ಸೂಚಿಸಿ, ಭಾಷಾ ತಜ್ಞರ ವಿರೋಧ ಕಟ್ಟಿಕೊಳ್ಳುವುದನ್ನು ತಪ್ಪಿಸಿದ್ದಕ್ಕೆ ಕೃತಜ್ಞತೆ. ಆ ಹೊತ್ತಿಗೆ ವಿಶ್ವವೇ ಒಂದು ಎಂದು ಭಾವಿಸಿರುವ ಹಿರಿಯರೊಬ್ಬರು ನಾರಂಗ ಎಂಬ ಪದ ಪರ್ಷಿಯನ ಮೂಲದ್ದು. ನಾರಂಗ ಎಂದು ಪರ್ಷಿಯನ್‌ನಲ್ಲಿ ಕರೆಯುತ್ತಾರೆ. ಮೂಲ ಸ್ಮರಿಸದೇ ಹೋದರೆ ದೇಶ ದೇಶಗಳ ನಡುವಿನ ಸಂಬಂಧ ಹಾಳಾಗುತ್ತದೆ ಎಂದು ಎಚ್ಚರಿಸಿದರು. ಬಹುಭಾಷಾ ತಜ್ಞರೊಬ್ಬರು ಅದಕ್ಕೂ ಹಿಂದಕ್ಕೆ ಹೋಗಿ ಆರ್ಮೇನಿಯನ ಭಾಷೆಯಲ್ಲಿ ನಾರಿಂಜ, ಅರೇಬಿಕ್‌ನಲ್ಲಿ ನಾರಂಜ, ಸ್ಪ್ಯಾನಿಷ ಮತ್ತು ಪೋರ್ಚುಗೀಸ ಭಾಷೆಯಲ್ಲಿ ಲಾರಂಜ ಎಂದೆಲ್ಲ ಕರೆಯುತ್ತಾರೆ. ಹಳೆ -ಫ್ರೆಂಚ ಭಾಷೆಯಲ್ಲಿ ಆರೇಂಜ ಎಂದು ಕರೆಯುತ್ತಾರೆ. ORENZ ಎಂದು ಬರೆಯುತ್ತಾರೆ ಎಂಬಿತ್ಯಾದಿ ವಿವರಗಳನ್ನೂ ಸೇರಿಸಿಕೊಳ್ಳಲು ಸೂಚಿಸಿದರು.
ಕಿತ್ತಳೆಯ ಬಹುಪಯೋಗದ ಬಗ್ಗೆ ಬರೆಯಲೇಬೇಕು ಎಂದು ವೈದ್ಯ ಮಿತ್ರರು ಎಚ್ಚರಿಸಿದರೆ, ಕಿತ್ತಳೆಯ ಸಿಪ್ಪೆಯಿಂದ ತಂಬುಳಿ ಮಾಡಲು ಬರುತ್ತದೆ. ಹೀಗಾಗಿ ಅದರಲ್ಲಿ ವ್ಯರ್ಥವಾದ ಭಾಗವೇ ಇಲ್ಲ ಎನ್ನುವುದು ಲೇಖನದಲ್ಲಿ ಬರಲೇಬೇಕು ಎಂದು ಒತ್ತಾಯಿಸಿದರು. ಕವಿಯೊಬ್ಬರು ತಮ್ಮ ಜನಾಂಗಕ್ಕೆ ಅವಮಾನ ಮಾಡದಿರಲು ಸೂಚಿಸಿ ನಂಜನಗೂಡಿನ ರಸಬಾಳೆ, ತಂದಿಹೆ ಕೊಡಗಿನ ಕಿತ್ತೀಳೆ’ ಹಾಡಿನ ಸಾಲುಗಳೂ ಬರಹದಲ್ಲಿರಲಿ ಎಂದು ಹೇಳಿ ನನಗಾಗಬಹುದಾಗಿದ್ದ ಮುಜುಗರವನ್ನು ತಪ್ಪಿಸಿzರೆ. ಅವರ ನೆರವನ್ನು ನಾನೆಂದೂ ಮರೆಯಲಾರೆ.
ಇಲ್ಲಿ ಬಿಟ್ಟು ಹೋಗಬಹುದಾದ ಇನ್ನಷ್ಟು ಮಾಹಿತಿಗಳನ್ನು ಕ್ರೋಡೀಕರಿಸುವಂತೆ ಸಲಹೆ ಕೊಟ್ಟವರು ಬಿಜಿಎಲ್ ಸ್ವಾಮಿ ಅಭಿಮಾನಿಗಳು. ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ ಎಂಬ ಪುಸ್ತಕದಲ್ಲಿ ಬಿಜಿಎಲ್ ಸ್ವಾಮಿ ಕಿತ್ತಳೆ ಹಣ್ಣಿನ ಬಗ್ಗೆ ಬರೆದಿದ್ದಾರಂತೆ. ಆ ಪುಸ್ತಕ ನನ್ನ ಸಂಗ್ರಹದಲ್ಲಿ ಸಿಗಲಿಲ್ಲ. ಅದನ್ನೂ ಮುಂದಿನ ಬಾರಿ ಈ ಲೇಖನವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಹೊತ್ತಿಗೆ ಸೇರಿಸುವುದಾಗಿ ಅವರಿಗೆ ಮಾತು ಕೊಟ್ಟು ಅವರ ವಿರೋಧದಿಂದ ಪಾರಾಗಿದ್ದೇನೆ.
ಕಿತ್ತಳೆ ಹಣ್ಣಿನ ಜ್ಯೂಸ ಬಗ್ಗೆ ಬರೆಯಬೇಕೆಂದು ನಮ್ಮ ಜಿಮ್ ಬಾಯ್ ಸಂದೀಪನ ಒತ್ತಾಯ. ಬೆಳಗ್ಗೆ ಕಿತ್ತಳೆ ಹಣ್ಣಿನ ರಸ ಕುಡಿಯುವುದರಿಂದ ಆರೋಗ್ಯ ಸುಧಾರಿಸುತ್ತದಂತೆ. ಕಿತ್ತಳೆ ಸಿಪ್ಪೆಯನ್ನು ಗುಲಾಬಿ ಗಿಡಕ್ಕೆ ಹಾಕಿದರೆ ಗಿಡ ಚೆನ್ನಾಗಿ ಬೆಳೆದು ಹೂ ಬಿಡುತ್ತದೆ ಎಂಬ ತೋಟಗಾರಿಕಾ ಮಿತ್ರರ ಸಲಹೆಯನ್ನೂ ನಾನು ನಮ್ರತೆಯಿಂದ ಸ್ವೀಕರಿಸಿದ್ದೇನೆ. ಕಿತ್ತಳೆಯ ಹೆಸರನ್ನೆ ಆ ಬಣ್ಣಕ್ಕೂ ಇಟ್ಟಿzರೆ. ಒಂದು ಹಣ್ಣಿನ ಹೆಸರನ್ನು ಬಣ್ಣಕ್ಕಿಟ್ಟದ್ದು ಅದೇ ಮೊದಲು ಎಂದು ಕಲಾವಿದರು ಹೇಳಿ ಅದರ ಮತ್ತೊಂದು ಆಯಾಮಕ್ಕೆ ನನ್ನನ್ನು ಪರಿಚಯಿಸಿದ್ದಾರೆ. ಅವರೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಕಿತ್ತಳೆಯಲ್ಲಿ ನಾಲ್ಕು ವಿಧ. ಪರ್ಷಿಯನ್, ನೇವಲ್, ಬ್ಲಡ್ ಮತ್ತು ವೆಲೆನ್ಷಿಯಾ ಆರೇಂಜ್ ಎಂದು ಪ್ರಬೇಧ ತಜ್ಞರು ಸೂಚಿಸಿದ ವಿವರಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಅದಕ್ಕಾಗಿ ವಿಷಾದ ಸೂಚಿಸುತ್ತೇನೆ.
ಎಲ್ಲರಿಗೂ ಶುಭವಾಗಲಿ, ಸಂತೋಷವಾಗಲಿ. ಸನ್ಮಂಗಳವಾಗಲಿ.

‍ಲೇಖಕರು G

June 20, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

 1. soory hardalli

  Superb. This is the problem of all writers. Thank you for the best morning reading

  ಪ್ರತಿಕ್ರಿಯೆ
 2. Kiran

  ‘ಎಷ್ಟು ಬೇಕಾದರೂ “ಬೈರಪ್ಪ” ಎಂದು ಜೋಗಿ ಕಾಮೆಂಟ್ ಹಾಕಿದ್ದು ನೆನಪಿಗೆ ಬರುತ್ತಿದೆ!

  ಪ್ರತಿಕ್ರಿಯೆ
 3. Chetan

  ನಕ್ಕು ನಕ್ಕು ಕೊನೆಯ ಪ್ಯಾರಾಗಳನ್ನು ಸರಿಯಾಗಿ ಓದಲಿಕ್ಕೆ ಆಗ್ಲಿಲ್ಲ 🙂 .. ಇಷ್ಟೆಲ್ಲಾ ಆದಮೇಲೆ ಸಾಹಿತಿ/ಕತೆಗಾರರು ಸೃಜನಶೀಲತೆಯನ್ನು ಕೂಡ ಉಳಿಸಿಕೊಳ್ಳಬೇಕು ಅಂತ ಹೇಳಿಲ್ಲ ನೋಡಿ !

  ಪ್ರತಿಕ್ರಿಯೆ
 4. ಕುಸುಮಬಾಲೆ

  ಸಿಕ್ಕಾಪಟ್ಟೆ ಇಷ್ಟಪಟ್ಟೆ..

  ಪ್ರತಿಕ್ರಿಯೆ
 5. vidyashankar

  I read this earlier… Pleasure reading again… apt for present situation…

  ಪ್ರತಿಕ್ರಿಯೆ
 6. amardeep.p.s.

  ಕಿತ್ತಳೆ ಹಣ್ಣಿನ ಬಗ್ಗೆಯೂ ಸಾಕಷ್ಟು ಸಲಹೆ ನೀಡಿದಂಥ ಸಹೃದಯರಿಗೆ ಮೊದಲು ಧ್ಯನ್ಯವಾದಗಳು… ಎಲ್ಲವನ್ನೂ ಕೃಡೀಕರಿಸಿ, ಸಮೀಕರಿಸಿ, ಮೂಲ, ಮಂತ್ರ, ಮಾತ್ರವಲ್ಲ, ಸಕಲ ಉಪಯೊಗವನ್ನೂ ಸವಿಸ್ತಾರವಾಗಿ ಹೇಳುತ್ತಲೇ ಯಾರ ಮನಸ್ಸಿಗೂ, ಮೂತ್ರಪಿಂಡಕ್ಕೂ ನೋವಾಗದಂತೆ ಜಾಗರೂಕತೆಯಿಂದ ಬರೆದು ನಾವು ನಗದಿರಲಾರದಂತೆ ಓದಲು ಅವಕಾಶ ನೀಡಿದ್ದಕ್ಕೆ ಜೋಗಿ (ಫಲಾನ್ವೇಷಕ) ಸರ್ ಗೆ ನನ್ನ ಅಭಿನಂದನೆಗಳು…… 🙂

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: