‘ವಾರೆ ನೋಟ’ದ ಆನಂದ ಎಂದೇ ಹೆಸರಾದ ಹ ನ ಆನಂದ ಅವರ ಹೊಸ ಕೃತಿ ಮಾರುಕಟ್ಟೆಯಲ್ಲಿದೆ.
‘ಬರೆಯದ ಪತ್ರಗಳು’ ನಗೆ ಕಚಗುಳಿ ಇಡುವ ಬರಹಗಳ ಸಂಕಲನ.
ಈ ಕೃತಿಗೆ ಮತ್ತೊಬ್ಬ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಬರೆದ ಮುನ್ನೋಟ ಇಲ್ಲಿದೆ

ಪ್ರೊ. ಭುವನೇಶ್ವರಿ ಹೆಗಡೆ
Life is a comedy to one who thinks
and a tragedy to one who feels
ಎಂಬ ಮಾತು ಹಾಸ್ಯದ ಹರಿಗೋಲಿನ ಮೂಲಕ ಭವ ಸಾಗರ ದಾಟಬಹುದೆಂಬ ನಂಬಿಕೆಯಿರುವ ‘ವಿನೋದ ಸ್ನೇಹಿ’ ಪ್ರವೃತ್ತಿಯವರಿಗೆ ಬಲು ಇಷ್ಟವಾದುದು. ಹಾಸ್ಯವನ್ನು ಸೃಜಿಸಬಲ್ಲವನು ಮತ್ತು ಆಸ್ವಾದಿಸಬಲ್ಲವನು ಭಾವುಕತೆಯ ಭಾರದಿಂದ ಬಳಲುವನಾಗಿರಲಾರ. ಭಾವುಕತೆಯ ಗಡಿಯಾಚೆ ನಿಂತು ಲೋಕವ್ಯಾಪಾರವನ್ನು ಈಕ್ಷಿಸಬಲ್ಲವ ಹಾಗೂ ಲೋಕದ ಡೊಂಕುಗಳ ಸಿಕ್ಕಿನಲ್ಲಿ ಉಸಿರುಗಟ್ಟಲು ಬಿಡದೆ ಅದರಿಂದಲೇ ಹೊರಬಂದು ಜಗದ ಹಗರಣಗಳನ್ನು ವಿನೋದದ ಕಣ್ಣುಗಳಿಂದ ಕಂಡು ನಗಬಲ್ಲವನಾಗಿರುತ್ತಾನೆ.
ಹಾಗೆಂದು ಭಾವುಕತೆಯ ಸ್ಪರ್ಶವೇ ಇಲ್ಲದ ಕಠೋರ ವಿಚಾರವಾದಿಗಾದರೂ ಜೀವನದ ಸೊಗಸು ಪ್ರಾಪ್ತವಾದೀತೆ? ಉಹೂಂ. ಕೇವಲ ಬುದ್ಧಿವಂತಿಕೆಯನ್ನು ನೆಚ್ಚಿಕೊಂಡವನ ಬರಹ ನೀರಸ ವರದಿಯಾದೀತು. ಅದಕ್ಕೇ ಸಾರಸ್ವತ ಲೋಕದ ಯಶಸ್ವೀ ಕೃತಿಗಳಲ್ಲಿ ಲೇಖಕನ ‘ಬುದ್ಧಿ-ಭಾವಗಳ ವಿದ್ಯುದಾಲಿಂಗನ ಅಥವಾ ವಿದ್ವದಾಲಿಂಗನ’ ಏರ್ಪಟ್ಟಿದ್ದನ್ನು ನೋಡುತ್ತೇವೆ. ಆಗ ಮಾತ್ರ ಓದಿನ ಓಘಕ್ಕೆ ಒಂದು ಸ್ವಾರಸ್ಯ ಪ್ರಾಪ್ತಿಯಾಗುತ್ತದೆ. ಅಂಥ ಸ್ವಾರಸ್ಯವೇ ಬಂಡವಾಳವಾಗಿರುವ ಆನಂದರ ಈ ಕೃತಿಗೆ ಮುನ್ನುಡಿ ಬರೆಯುವ, ಅದಕ್ಕೂ ಮೊದಲು ಈ ಕಾರಣಕ್ಕಾಗಿ ಅವರ ಲೇಖನಗಳನ್ನು ಓದುವ ‘ಆನಂದ’ ನನಗೆ ದೊರಕಿದೆ.
ಹಾಗೆ ನೋಡಿದರೆ ಕನ್ನಡದ ಹರಟೆಗಳಿಗೆ ಪಿತಾಮಹರಾಗಿದ್ದ ಲಾಂಗೂಲಾಚಾರ್ಯರ ಬರಹಗಳ ಚುರುಕುತನದಿಂದ, ಆನಂದರ ವಾರೆನೋಟದ ಪುಟಿಯುವ ಸ್ವಾರಸ್ಯಕರ ನಿರ್ವಹಣೆಯಿಂದ ಪ್ರೇರೇಪಣೆ ಪಡೆದು ಹಾಸ್ಯಕೃಷಿಗೆ ಧುಮುಕಿದವಳು ನಾನು. ಆನಂದರ ಬರವಣಿಗೆ ಈ ಕೃತಿಯ ರೂಪ ತಾಳುವ ಮೊದಲಿನಿಂದಲೂ ನನಗೆ ಪರಿಚಿತ ಮತ್ತು ಆಪ್ಯಾಯಮಾನ.
ಮಾಹಿತಿ ತಂತ್ರಜ್ಞಾನದ ಬೆನ್ನು ಹತ್ತಿರುವ ಪುರುಸೊತ್ತಿಲ್ಲದ ಪುರವಾಸಿಗಳು ದಿನಪತ್ರಿಕೆಗಳ ಓದಿಗೆ ಸಮಯ ಮೀಸಲಿಡುವುದೂ ಕಷ್ಟವಾಗಿದೆ. ಅಂಥದ್ದರಲ್ಲಿ ಸಾಹಿತ್ಯದ ಓದು, ಉತ್ತಮ ಸಾಹಿತ್ಯದ ನಿರ್ಮಾಣ ಇಂದಿನ ಒತ್ತಡದ ಜೀವನಶೈಲಿಗೆ ಧಾವಂತ ನಿವಾರಕಗಳಾಗಿ, ಆರೋಗ್ಯವರ್ಧಕಗಳಾಗಿ ಒದಗಿಬರುತ್ತವೆ ಎಂಬ ಅರಿವುಳ್ಳವರು ಎಷ್ಟು ಜನರಿದ್ದಾರು? ಪುಸ್ತಕ ಮಳಿಗೆಗಳ ಮಾಲೀಕರ ಅಭಿಪ್ರಾಯದಂತೆ ಪರಿಸ್ಥಿತಿ ಅಷ್ಟೇನೂ ಚಿಂತಾಜನಕವಾಗಿಲ್ಲ. ಓದುವ ಅಭ್ಯಾಸ ನಿರಂತರವಾಗಿರಲಿ ಎಂದು ಹಿತ ನುಡಿಯುವ ಅಕ್ಷರಮೋಹಿ ವರ್ಗವೂ ನಮ್ಮಲ್ಲಿದೆ. ‘ಓದುವ ಸುಖ’ದ ಮಹತ್ವ ಅರಿತ ಮನಸ್ಸುಗಳೂ ನಮ್ಮ ನಡುವಿರುವುದರಿಂದಲೇ ಸಾಹಿತ್ಯ ಪ್ರಪಂಚ ಜೀವಂತವಾಗಿದೆ. ಕಂಪ್ಯೂಟರ್ ಪರದೆಯಲ್ಲಿ ಓದುವ (ನೋಡುವ) ಓದಿನ ನಡುವೆಯೂ ಪುಸ್ತಕ ಪ್ರೀತಿಯ ಪ್ರಪಂಚ ಇನ್ನೂ ಅಸ್ತಿತ್ವ ಕಳೆದುಕೊಂಡಿಲ್ಲ. ಆದ್ದರಿಂದಲೇ ನಮ್ಮೆಲ್ಲ ವ್ಯವಹಾರಿಕ ಒತ್ತಡಗಳ ನಡುವೆಯೂ ಆಗೊಮ್ಮೆ ಈಗೊಮ್ಮೆ ‘ಓದಿ ಹಗುರಾಗುವುದು’ ಇಂದಿಗೂ ಸಾಧ್ಯವಿದೆ.
ಒಳ್ಳೆಯ ‘ಓದು’ ಕೈಗೆಟುಕಬೇಕಾದರೆ ಒಳ್ಳೆಯ ಬರಹಗಾರರು ದೊರಕಬೇಕು. ಒಳ್ಳೆಯ ಬರಹ ಮೂಡಬೇಕಾದರೆ ಅದರ ಹಿಂದೆ ಸಮೃದ್ಧ ‘ಓದಿನ’ ಪುಷ್ಠಿಯೂ ಬೇಕು. ಒಳ್ಳೇ ಸರಪಣಿ ಅಲ್ಲವೆ? ಅದರಲ್ಲೂ ಹಾಸ್ಯ ಸಾಹಿತ್ಯ ನಿರ್ಮಾಣ ಇನ್ನೂ ಕಷ್ಟಕರವಾದುದು. ತಮಾಷೆ ಬರೆಯೋದು ತಮಾಷೆ ಸಂಗತಿಯಲ್ಲ ಎಂದು ಲಾಂಗೂಲಾಚಾರ್ಯರು ಹೇಳುತ್ತಿದ್ದರು.
ಇಂಥದೊಂದು ಅಪರೂಪದ ‘ಸರಪಣಿ ಸಾಕ್ಷಾತ್ಕಾರ’ ನಮ್ಮ ಆನಂದರಿಗಿದೆ. ಜಗತ್ತಿನ ವಿದ್ಯಮಾನಗಳನ್ನೆಲ್ಲವನ್ನೂ ಗಮನಿಸುತ್ತ, ಸ್ವಾರಸ್ಯಕರವಾದುದನ್ನು ‘ಗ್ರಹಿಸಿ’ ಒಳಗಿಳಿಸಿಕೊಳ್ಳುತ್ತ, ತಮ್ಮದೇ ಶೈಲಿಯಲ್ಲಿ ಸ್ವಾರಸ್ಯಕರವಾಗಿ ಓದುಗರೆದುರು ಬೇರೆಯದೇ ಒಂದು ವಿನೋದದ ವರಸೆಯಲ್ಲಿ ಪ್ರಸ್ತುತಪಡಿಸುವ ಕಲೆಗಾರಿಕೆ (ನಗೆಗಾರಿಕೆ) ಅವರಿಗೆ ಸಿದ್ಧಿಸಿದೆ. ಹೇಳಬೇಕಾದುದನ್ನು ಹೆಚ್ಚು ಲಂಬಿಸದೆ ‘ಕಿರಿದರೊಳ್ ಪಿರಿದು ಪೇಳುವ’ ಅವರ ಶೈಲಿ ಅವಸರದ ಬರಹವಾಗಿ ಕಾಣಲಾರದು. ಬದಲು ಸಂಕ್ಷಿಪ್ತತೆಯೇ ಹೆಚ್ಚುಗಾರಿಕೆಯಾಗಿರುವ ಅಪರೂಪದ ಹಾಸ್ಯ ಪ್ರಕಾರವೊಂದರ ಪ್ರತಿನಿಧಿಯಂತೆ ಆನಂದರು ತೋರಿಬರುತ್ತಾರೆ. ‘Brevity is wit’ ಅಂಶವು ಇವರ ಪ್ರತಿ ಲೇಖನದಲ್ಲೂ ಕಂಡುಬರುತ್ತದೆ.
ಆನಂದರು ಕಂಡಿರುವ ಸಂಗತಿಗಳನ್ನು ನಾವೂ ನೀವೂ ಕಂಡಿರುತ್ತೇವೆ. ಆದರೆ ಅವರು ಅದನ್ನು ಗ್ರಹಿಸುವ ರೀತಿಯೇ ಬೇರೆ. ಈಗ ಕೆಲವು ದಿನಗಳ ಹಿಂದೆ ‘ಪ್ರಶಸ್ತಿ ವಾಪಸಾತಿ’ ಎಂಬ ವಿಚಾರವಾದಿಗಳ ವ್ಯಾಧಿ ಇಡೀ ದೇಶದ ಬುದ್ಧಿಜೀವಿಗಳ ಮಂಡೆ ಬೆಚ್ಚ ಮಾಡಿತ್ತು ತಾನೆ? ಅದನ್ನು ‘ಅವಾರ್ಡ್ ವೈರಾಗ್ಯ’ ಎಂಬ ಲೇಖನದಲ್ಲಿ ಆನಂದರು ವಿಡಂಬಿಸಿರುವ ರೀತಿ ಸ್ವಾರಸ್ಯಕರವಾಗಿದೆ. ಅವಾರ್ಡ್ ‘ಕೊಡುವವರು’ ಮತ್ತು ‘ಪಡೆದುಕೊಳ್ಳುವವ’ರ ವ್ಯತ್ಯಾಸ, ಒಂದು ಪಕ್ಷ ಅವಾರ್ಡ್ ಸಿಕ್ಕಿಯೇಬಿಟ್ಟು, ಆ ಮೊತ್ತದಲ್ಲಿ ಹೆಂಡತಿ ಒಡವೆ ಕೊಂಡು… ಆಮೇಲೆ ಒಂದು ದಿನ ಮನಸ್ಸು ಕದಡುವಂಥ ಘಟನೆ ನಡೆದು, ಆ ಪ್ರಶಸ್ತಿಯನ್ನು ವಾಪಸ್ ಮಾಡಲು ಡಿಸೈಡ್ ಮಾಡಿದರೆ ಪ್ರಸಿದ್ಧಿಯೇನೋ ಬರುತ್ತದೆ. ಆದರೆ ಆ ಒಡವೆ ವಾಪಸ್ ಮಾಡಕ್ಕಾಗತ್ತಾ? ಎಂಬ ಪ್ರಶ್ನೆ ಏಳುವ ಪರಿ ಸ್ವಾರಸ್ಯಕರವಾಗಿದೆ.
ಬೆಂಗಳೂರಿನ ಸುತ್ತಮುತ್ತಲಿನ ದೇವರುಗಳಿಗೆ ಸರ್ನೇಮ್ ಇರುವುದನ್ನು ಗುರುತಿಸಿರುವ ಲೇಖಕರು (ಸ್ಯಾಂಕಿ ಆಂಜನೇಯ, ರಾಗಿಗುಡ್ಡ ಆಂಜನೇಯ, ಸರ್ಕಲ್ ಮಾರಮ್ಮ…) ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರಸಾದಕ್ಕೆ ‘ಮಾರಿ’ ಬಿಸ್ಕತ್ ಸಿಕ್ಕಾಗ ‘ಕ್ರೀಂ; ಬಿಸ್ಕತ್ತಾದರೂ ಸಿಗಬಾರದಿತ್ತೆ ಎನ್ನುತ್ತಾರಾದರೂ ಕಮ್ಯುನಿಸ್ಟರು ಹೇಳುವಂತೆ ಅದೊಂದು ಕ್ರಾಂತಿಕಾರಿ ಬದಲಾವಣೆಯೇ ಸರಿ ಎನ್ನುತ್ತಾರೆ.
ಹೊಸ ಕ್ಯಾಲೆಂಡರ್ ಬಂದಾಕ್ಷಣ ಉದ್ಯೋಗಸ್ಥರೆಲ್ಲ ಹೊಸ ಪಂಚಾಂಗ ಬಂದಾಗ ಅವರ ಫಲ ಓದುವಷ್ಟೇ ಶ್ರದ್ಧೆಯಿಂದ ರಜಾ ದಿನಾಂಕಗಳನ್ನು ಗುರುತಿಸುತ್ತ ವಿಶ್ಲೇಷಣೆಗೆ ತೊಡಗುತ್ತೇವೆ ತಾನೆ? ‘ಮಿಶ್ರಫಲದ ಕ್ಯಾಲೆಂಡರ್’ ಲೇಖನದಲ್ಲಿ ಆನಂದರ ವಿಶ್ಲೇಷಣೆ ಬಲು ಸೊಗಸಾಗಿದೆ. – ಕೆಲವು ಬಾರಿ ಕ್ಯಾಲೆಂಡರ್ ಗಳು ಎಷ್ಟು ಕ್ರೂರವಾಗಿರುತ್ತವೆ ಎಂದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಒಂದು ರಜೆ ಇರದೆ, ಒಂದು ಮಾಸ ಬರಗಾಲ ಕಳೆದು ಅಕ್ಟೋಬರ್ ಎರಡರ ಗಾಂಧಿ ಜಯಂತಿಯನ್ನು ಎದುರು ನೋಡಬೇಕಾಗುತ್ತದೆ.
ಈ ಬಾರಿ ಸೆಪ್ಟೆಂಬರಿನಲ್ಲೇ ಗಣೇಶನ ಹಬ್ಬ ಬಂದಿದ್ದರೂ ಅದು ರವಿವಾರ ಆಗಿದ್ದರಿಂದ ರಜೆಗೆ ವಿಘ್ನ ಬಂದಿದೆ. ಗಾಂಧಿ ಜಯಂತಿಯೂ ಭಾನುವಾರ ಬಂದಿದೆ. ಗಾಂಧಿಯೂ ಇಷ್ಟು ಕ್ರೂರವಾಗಲು ಸಾಧ್ಯವೆ? ಎನ್ನುವ ಆನಂದರು ಕೊನೆಯಲ್ಲಿ – ಕ್ಯಾಲೆಂಡರ್ ಗಳದ್ದು ಯಾವಾಗಲೂ ಮಿಶ್ರಫಲ. ಬಂದಿದ್ದನ್ನು ಸ್ವೀಕರಿಸಲೇಬೇಕು. ಅತ್ತೆ ಸೊಸೆಯನ್ನು, ಸೊಸೆ ಅತ್ತೆಯನ್ನು ಸ್ವೀಕರಿಸುವಂತೆ ಎನ್ನುತ್ತಾರೆ. ಇದು ಆನಂದರ ದರ್ಶನದ ರೀತಿ. ಸಂಕಲನದುದ್ದಕ್ಕೂ ಇಂಥ ‘ವಿನೋದ ಆದರೂ ನಿಜ’ ಎಂಬಂತಿರುವ ಅನೇಕ ಸ್ವಾರಸ್ಯಕರ ಹೇಳಿಕೆಗಳು ಹೇರಳವಾಗಿ ದೊರೆಯುತ್ತವೆ.
ನೀನಾರಿಗಾದೆಯೋ ಹಳೆ ಫೋನೇ, ಚರಿತ್ರಾರ್ಹ ಅನಾಮಧೇಯರು, ರೋಟಿ ಕಪಡಾ ಔರ್ ಈಗ ಮೊಬೈಲ್, ಇಂಥ ಅನೇಕ ಲೇಖನಗಳು ಸೊಗಸಾದ ಓದನ್ನು ಒದಗಿಸುತ್ತವೆ. ಅಂದಂದಿನ ವಿದ್ಯಮಾನಗಳನ್ನು ಬಳಸಿಕೊಂಡು ಲಘು ವಿಡಂಬನೆಯ ಮಂತ್ರದಂಡದಿಂದ ಅದಕ್ಕೊಂದು ಹೊಳಪು ಬರಿಸಿ ಓದುಗರ ಮುಖದಲ್ಲಿ ನಗೆಯರಳಿಸುವ ಒಂದು ಚಂದದ ಮಾದರಿಯನ್ನೇ ಆನಂದರು ಹುಟ್ಟುಹಾಕಿದ್ದಾರೆ ಎಂದರೆ ಉತ್ಪ್ರೇಕ್ಷೆಯಾಗಲಾರದು.
ಆಗಿನ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಉಲ್ಟಾ ಸಿನಾರಿಯೋ ನೋಡಿ, ಗುಜರಿ ಸಾಮಾನಿನ ನಡುವೊಮ್ಮೆ ತೂರಿ, ಬರೆಯದ ಪತ್ರಗಳನ್ನು ಓದಿ….. ಆನಂದರ ಲೇಖನಿಯ ಮನೋಲಹರಯನ್ನನುಸರಿಸುತ್ತ ಹೋದರೆ ಮನಸ್ಸು ಪ್ರಫುಲ್ಲಗೊಂಡು ಉಲ್ಲಾಸದ ಸ್ಪರ್ಶ ನಮಗಾಗಿರುತ್ತದೆ.
ಈ ‘ನಗೆಸೇವೆ’ ಆನಂದರ ಲೇಖನಿಯಿಂದ ಇನ್ನೂ ಮತ್ತೂ ನಡೆಯುತ್ತಲೇ ಇರಲಿ. ಓದಿ ನಕ್ಕ ಸ್ವಸ್ಥ ಮನಸ್ಸಿನ ಕನ್ನಡಿಗರ ಸಂಖ್ಯೆ ಬೆಳೆಯಲಿ ಎಂದು ಹಾರೈಸಿ ಆನಂದರಿಗೂ, ಆನಂದರ ಈ ಕೃತಿಗೂ ಶುಭ ಕೋರುತ್ತೇನೆ.




ಮಾಹಿತಿ ದೊರೆತನಂತರ ದೀರ್ಘಾವಧಿ ಕಾಯುವಿಕೆ ಇರುತ್ತದೆ ಎಂದುಕೊಂಡಿದ್ದೆ. ಅಲ್ಪಾವಧಿಯಲ್ಲೇ ಪೂರ್ಣಾವಧಿಯಲ್ಲಿ ಹೇಳಬಹುದಾದನ್ನು ಪೋಣಿಸಿರುವ ಅವಧಿಯ ವಿಧಿ ಅನುಕರಣೀಯ ಹಾದಿ.
ಆನಂದರ ಕೃತಿಯ ಬಗೆಗಿನ ವಿಮರ್ಶೆ ಚೆನ್ನಾಗಿದೆ ಮೇಡಂ