
ನೆಂಪೆ ದೇವರಾಜ್, ತೀರ್ಥಹಳ್ಳಿ
ಇವತ್ತು ಆರಿದ್ರಾ ಮಳೆ ಸ್ವಲ್ಪ ಮಟ್ಟಿನ ತನ್ನ ಭೀಭತ್ಸತೆ ತೋರಿಸಿದಂತೆ ಕಾಣುತ್ತಿದೆ. ಕುಂಟುತ್ತಿದ್ದ ಹಳ್ಳಗಳು ಧುಮ್ಮಿಕ್ಕುವ ಹಂತದಲ್ಲಿವೆ.. ಬೆಳಿಗ್ಗೆ ಬಾಗಿಲು ತೆಗೆದು ನೋಡಿದಾಗ ಮನೆ ಎದುರಿನ ಬೆಳ್ಳಾಲೆ ಮರದ ಮೇಲೆ ಕುಳಿತು ಜಗಳಾಡುತ್ತಾ, ಮುದ್ದಿಸಿ ಕೊಳ್ಳುತ್ತಾ ಚಿಪಿಲಿಗುಟ್ಟುತ್ತಿದ್ದ ಹಕ್ಕಿಗಳ ಕೂಗು ಆರಿದ್ರಾ ಮಳೆಯ ಹೊಡೆತಕ್ಕೆ ಕ್ಷೀಣಿಸಿತ್ತು. ಪಶ್ಚಿಮದಲ್ಲಿ ಹೊಗೆಯುಗುಳುತ್ತಾ ಭುಗಿಲೇಳುತ್ತಿರುವ ಮೋಡಗಳು ಹೊಳೆ ಹಳ್ಳಗಳಿಗೆ ಗತಿ ಕಾಣಿಸುವಂತೆ ರಾಕ್ಷಸಾಕಾರದಿಂದ ಓಡುತ್ತಿವೆ.
ಈ ಆರಿಧ್ರಾ ಆಥವಾ ಆದ್ರೆ ಮಳೆ ಶುರುವಾಗುವುದೆಂದರೆ ಮದುವೆಗಳಿಗೆ ಸುಗ್ಗಿ. ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾದಲ್ಲಿ ಒಂದೇ ದಿನ ಹತ್ತರಿಂದ ಹನ್ನೆರಡು ಮದುವೆಗಳಾಗಿದ್ದೂ ಇದೆ.ಒಂದು ಕಾಲದಲ್ಲಿ ನಮ್ಮ ಭಾಗದಲ್ಲಿ ಮದುವೆಗಳಾಗುವುದೆಂದರೆ ಅದು ರಾಮೇಶ್ವರ ದೇವಸ್ಥಾನದಲ್ಲೇ ಆಗಬೇಕು ಎಂಬುದು ನಿಯಮ. ಇದೀಗ ತೀರ್ಥಹಳ್ಳಿಯ ಪಟ್ಟಣದ ತುಂಬಾ ಹತ್ತಿಪ್ಪತ್ತು ಕಲ್ಯಾಣ ಮಂಟಪಗಳಾಗಿವೆ. ಕಲ್ಯಾಣ ಪಂಟಪಗಳಲ್ಲಿ ಡೇಟು ದೊರಕಿಸಿಕೊಳ್ಳಲು ನಾಲ್ಕಾರು ತಿಂಗಳವರೆಗೆ ಮದುವೆ ಮುಂದೂಡುವವರೂ ಇದ್ಧಾರೆ.
ಇಪ್ಪತ್ತು ವರ್ಷಗಳ ಹಿಂದೆ ಒಂದು ಕಲ್ಯಾಣ ಮಂಟಪವೂ ತೀರ್ಥಹಳ್ಳಿಯಲ್ಲಿ ಇರಲಿಲ್ಲ. ಒಂದೇ ದಿನ ಹತ್ತಾರು ಮದುವೆಗಳು ರಾಮೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದರಿಂದ ನಾವೆಲ್ಲ ರಾಕ್ಷಸ ಹಸಿವಿನೊಂದಿಗೆ ಬೆಲ್ಲದಿಂದ ಕಲಿಸಿದ ಅವಲಕ್ಕಿಗಾಗಿ ಬಾಳೆಲೆಯ ಕೀತು ಹಿಡಿದು ಕಾದದ್ದು ಅನೇಕ ಸಲ. ಬೇಗಾಡಿ ಬಾಳೆಲೆಯ ಚೂರಿಗೆ ಹಾಕಿಸಿಕೊಂಡು ತಿನ್ನುತ್ತಿದ್ದ ಅವಲಕ್ಕಿ ಉಪ್ಪಿಟ್ಟುಗಳು ಯಾರ ಮದುವೆಗೆ ಸಂಬಂಧಿಸಿದ್ದು ಎಂಬುದನ್ನು ತಿಳಿಯುವುದೇ ಸಾಹಸದ ಕೆಲಸವಾಗಿತ್ತು. ಅವಲಕ್ಕಿ ಮತ್ತು ಬೆಲ್ಲದ ಪಾನಕದ ಪೂರೈಕೆಯ ಆಧಾರದ ಮೇಲೆ ಮದುವೆಯ ಯೋಗ್ಯತೆಗಳೂ ಅಳೆಯಲ್ಪಡುತ್ತಿದ್ದವು. ಗುಣಾತ್ಮಕತೆ ಎಂಬುದು ಆಯಾ ಮದುವೆ ವಾರಸುದಾರರ ಆತ್ಮೀಯ ನಡವಳಿಕೆಯನ್ನು ಅವಲಂಭಿಸಿತ್ತು.
ಬಿರು ಬೇಸಿಗೆಯಲ್ಲಿ ಅಂದರೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆಗುತ್ತಿದ್ದ ಮದುವೆಗಳು ಜಾತಕ, ದಿನ, ಬಳಿ, ವಾರ, ತಿಥಿಗಳ ಆಧಾರದಲ್ಲಿ ನಿಷ್ಕರ್ಷೆಯಾಗುತ್ತಿದ್ದರೆ ಆರಿಧ್ರಾ ಮಳೆಯ ರಬಸದ ಕಾಲದಲ್ಲಿ ಆಗುತ್ತಿದ್ದ ಮದುವೆಗಳು ಕೆಲವಷ್ಟಾದರೂ ಮೌಢ್ಯಗಳಿಗೆ ತಿಲಾಂಜಲಿ ಈಯುತ್ತಿದ್ದುದು ಸರ್ವೇ ಸಾಮಾನ್ಯ ಸಂಗತಿ.
ವರ್ಷಕ್ಕೆ ಹತ್ತಾರು ಕಲ್ಯಾಣಗಳನ್ನು ಮಾಡಿಸಿ ಪುಣ್ಯ ಕಟ್ಟಿಕೊಳ್ಳುತ್ತಿದ್ದೇವೆ ಎಂಬ ಆತ್ಮವಿಶ್ವಾಸದಿಂದ ಹತ್ತಾರು ತಿರುಗಾಟಗಳನ್ನು ಮಾಡಿ ಕಾಲು ಹಿಮ್ಮಡಿ ಸವೆಸಿಕೊಳ್ಳುತ್ತಿದ್ದ ದಲ್ಲಾಳರು, ಏಜೆಂಟರು, ಮೀಡಿಯೇಟರುಗರುಗಳೆಂದು ನಾಮಾಂಕಿತಗೊಂಡಿದ್ದವರು ಹುಡುಗ ಮತ್ತು ಹುಡುಗಿಯರನ್ನು ತಲಾಶು ಮಾಡಿ ಒಗ್ಗೂಡಿಸುತ್ತಿದ್ದ ರೀತಿ ಬಹುರಾಷ್ಟ್ರೀಯ ಕಂಪೆನಿಗಳ ಉತ್ಪನ್ನಗಳ ಮಾರಾಟದ ತಂತ್ರಗಳಿಗೆ ಸವಾಲೇ ಸರಿ.
ಹುಡುಗನ ಅಥವಾ ಹುಡುಗಿಗೆ ಸೇರಿಸುತ್ತಿದ್ದ ಗುಣವಿಶೇಷಗಳು ಯಾವುದೇ ಸಿನಿಮಾ ನಟಿ ಅಥವಾ ನಟನು ಹುಬ್ಬೇರಿಸುವಂತೆ ಮಾಡುತ್ತಿತ್ತು. ಸುಂದರಿಯರಲ್ಲದ, ಅನೇಕ ಮಹಾನುಭಾವ ವರರಿಂದ ತಿರಸ್ಕರಿಸಲ್ಪಟ್ಟ ಹುಡುಗಿಯರೂ ಕೂಡಾ ದಲ್ಲಾಳರ ಮಾತಿನ ಚಾಕಚಕ್ಯತೆಯಿಂದ ಹಾಲಿನಂತೆ ಬೆಳ್ಳಗಾಗುತ್ತಿದ್ದರು. ಆರಿದ್ರಾ ಮಳೆಯ ಹೊಡೆತವೂ ಕೂಡಾ ಏನಾದರಾಗಲಿ ಮದುವೆಯೊಂದು ಆದರೆ ಸಾಕು ಎಂಬ ತೀರ್ಮಾನಕ್ಕೆ ಹುಡುಗನ ಮನೆಯವರು ಬರುವಂತೆಮಾಡುತ್ತಿತ್ತು .
ಹುಡುಗನ ಮನೆಯಲ್ಲಿ ಕೂಡಿಟ್ಟ ಭತ್ತದ ಮೂಟೆಗಳು ಅಡಿಕೆ ಮೂಟೆಗಳಾಗಿಯೂ, ಹಚ್ಚ ಹೊಸ ಚಿಗುರಿನ ಗೊನೆಗಳಿಂದ ಕಂಗೊಳಿಸುವ ಸಾಹುಕಾರರ ಅಡಿಕೆ ತೋಟ ಮದುವೆ ದಲ್ಲಾಳರ ಮಾತಿನ ವೈಖರಿಯಿಂದ ಹುಡುಗನ ಮಾಲೀಕತ್ವದ್ದೇ ಆಗಿ ಪರಿವರ್ತಿತವಾಗುವ ರೀತಿ ಅನನ್ಯವಾದುದು. ಈ ವಿಷಯದಲ್ಲಿ ಮದುವೆ ದಲ್ಲಾಳರು ಹುಡುಗಿಯ ಮನೆಯವರನ್ನು ಒಪ್ಪಿಸುವ ಚಾಕಚಕ್ಯತೆಯ ಮಾತುಗಾರಿಕೆಗೆ ಹುಡುಗಿಯ ಕುಟುಂಬಸ್ಥರು ಸಂಪೂರ್ಣ ವಶೀಕರಣವಾಗದೆ ಬೇರೆ ದಾರಿಯೇ ಇಲ್ಲವೆನಬೇಕು.
ಆರಿದ್ರಾ ಮಳೆ ಶುರುವಾಯಿತೆಂದರೆ ಗಂಡು ಮತ್ತು ಹೆಣ್ಣುಗಳಿಬ್ಬರ ಕಡೆಯೂ ಏನಾದರಾಗಲಿ ಮದುವೆಯಾದರೆ ಸಾಕು ಎಂಬ ಅವಸರದಲ್ಲಿರುತ್ತಿದ್ದರಿಂದ ಬಹಳ ಸೂಕ್ಷ್ಮವಾಗಿ ಎಲ್ಲವನ್ನೂ ಪರೀಕ್ಷಿಸುವ ಹಂತಕ್ಕೆ ಎರಡೂ ಕಡೆಯವರೂ ಹೋಗುತ್ತಿರಲಿಲ್ಲ. ವಸೂಲಿ ಬಾಜಿ, ಚರ್ಚೆ- ಮರು ಚರ್ಚೆಗಳಿಗೆ ಅವಕಾಶ ನೀಡದೆ ಮದುವೆಗಳು ನೂರು ಎಣಿಸುವ ಮುನ್ನವೇ ನಿಷ್ಕರ್ಷೆಯಾಗುತ್ತಿದ್ದವು. ದಲ್ಲಾಳರು ಮೀಸೆಯ ಮೇಲೆ ಕೈ ಇಟ್ಟು ಕಿರು ನಗೆ ಬೀರಿ ಬೆನ್ನು ಚಪ್ಪರಿಸಿಕೊಳ್ಳುತ್ತಿದ್ದುದು ಮಾಮೂಲಿ.
ಮಳೆಯ ಹೊಡೆತದ ಸಂದರ್ಭದಲ್ಲಿ ವರ ಮತ್ತು ವಧುವಿನ ಜಾತಕ ತೋರಿಸಿ ‘ಪುರೋಹಿತರೇ ಈ ಜಾತಕ ಕೂಡಿಸಿಕೊಡಿ’ ಎಂದು ಹೇಳುವುದೊಂದೇ ತಡ. ಹೆಣ್ಣು ಮತ್ತು ಗಂಡಿನ ಜಾತಕಗಳನ್ನು ಹೊಂದಿಸಿಕೊಡಲು ಹರ ಸಾಹಸ ಪಡುವ ರೀತಿಯಲ್ಲಿ ನಟಿಸುವುದೂ, ಇಬ್ಬರನ್ನೂ ಕೂಡಿಸಲೋಸುಗ ಎರಡೋ ಮೂರೋ ಹಳೆಯ ಕಾಲದ ಹೊತ್ತಿಗೆಗಳನ್ನು ಬದಲಿಸುವುದನ್ನು ನೋಡಿದರೆ ಮಹತ್ತಾದುದೇನನ್ನೋ ಮಾಡಲು ತಿಣುಕಾಡುತ್ತಿದ್ದಾರೆ ಎನಿಸದಿರದು.
ಓರ್ವ ಪುರೋಹಿತರು ‘ಈ ಮದುವೆ ಸಾಧ್ಯವೇ ಇಲ್ಲ’ ಎಂದು ಮುಖಕ್ಕೆ ಹೊಡೆದಂತೆ ಖಡಾಖಂಡಿತವಾಗಿ ಹೇಳಿದರೂ ತಲೆ ಕೆಡಿಸಿಕೊಳ್ಳದ ಹೆಣ್ಣು ಮತ್ತು ಗಂಡಿನ ಕಡೆಯವರು ಸಲೀಸಾಗಿ ಮತ್ತೋರ್ವ ಪುರೋಹಿತರಿಂದ ಜಾತಕ ಕೂಡಿಸಿಕೊಂಡು ಮನೆ ಕಡೆ ಬರುವುದರಲ್ಲಿ ನಮ್ಮ ಕಡೆ ವಿಶೇಷವೇನಲ್ಲ. ಕೆಲವು ದಿನಾಂಕಗಳಲ್ಲಿ ಮದುವೆಯೇ ಇಲ್ಲ ಎಂಬ ಈ ಹಿಂದಿನ ತೀರ್ಮಾನಗಳನ್ನು ತಲೆಕೆಳಗು ಮಾಡುವ ಪುರೋಹಿತರು ಹುಡುಗ ಹುಡುಗಿಗೆ ಆದಷ್ಟು ಬೇಗ ಮದುವೆ ಮಾಡಿಸುವ ಸವಾಲನ್ನು ಸ್ವೀಕರಿಸಿ ಎರಡೂ ಕಡೆಯಿಂದಲೂ ಪ್ರಶಂಸೆಗೆ ಪಾತ್ರರಾಗುವುದು ಆರಿಧ್ರಾ ಮಳೆ ಸಂದರ್ಭದಲ್ಲಿ ಮಾಮೂಲಿ ಸಂಗತಿ.
ಒಂದು ಕಡೆ ಜಿರ್ರಾಪತಿ ಮಳೆ, ಮನೆಯ ಅಂಗಳದ ಕೆಸರು, ಅಲ್ಲಲ್ಲಿ ಬಿದ್ದ ಚಪ್ಪಲಿಗಳು, ಒಂದೊಂದೇ ಸಣ್ಣ ಸಣ್ಣ ಪಂಕ್ತಿಗಳಿಗಾಗಿ ಕಾಯವ ಹಸಿದ ಮುಖಗಳು, ಕಾಲಿಗೆ ಕೆಸರು ಹಿಡಿಯಬಾರದೆಂಬ ಜಾಗರೂಕತೆಯಿಂದ ರೇಷ್ಮೆ ಸೀರೆಯನ್ನು ಅರ್ಧಕ್ಕೆ ಎತ್ತಿಕೊಂಡು ಹೋಗುವ ಹುಡುಗಿಯರೂ, ಅವರ ದಂತದಂತಹ ಕಾಲುಗಳನ್ನು ನೋಡಿಯೇ ತೃಪ್ತಿ ಹೊಂದುವ ಚಿಗುರು ಮೀಸೆಯ ಹುಡುಗರೂ, ಹುಡುಗ ಹುಡುಗಿಯರನ್ನು ಕೂರಿಸಿ ಶಾಸ್ತ್ರ ಮಾಡಿಸುವಾಗ ತಪ್ಪು ತಪ್ಪೇ ಸೋಭಾನೆ ಪದ ಹೇಳಿದರೂ ವರನಿಂದ ಒಂದೋ ಎರಡೋ ರೂಪಾಯಿಗಳನ್ನ ಪಡೆದಾಗ ಮುತ್ತೈದೆಯರ ಮುಖದಲ್ಲಿ ಜಿರ್ರಾಪತಿ ಮಳೆಯಲ್ಲೂ ಮೂಡುವ ಅಪೂರ್ವ ಮಂದಹಾಸ ನೆನಪುಗಳಷ್ಟೆ.





🙂 🙂 🙂 🙂
Also dibbana used to be in Bullock cart..fixing of marriages was very easy. People from both side used to go to kambada Gana’pathi n priest used make flowers fall from right side of Ganesh.wow I remember all this as if it is happening now.
lekhana hitavaada nenapugalha hoo gucchadantide……deepthi
ಅವಧಿಗೆ ದಿನ ಬರೋದಕ್ಕೆ ಇನೊಂದು ನೆಪ್ಪ… ನಿಮ್ಮ ಲೇಖನಗಳು 🙂
ದಂತದ ಕಾಲು ….ನಿಮ್ಮ ವರ್ಣನೆಯೆ ಅದರ್ವಣ..