ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಿರಿಜಾ ಶಾಸ್ತ್ರಿ ಅಂಕಣ: ಆಕೆ.. ಮಹಾಮಾಯಿ

ಮಹಾಮಾಯಿ ಸಿಂಧುತಾಯಿ ಸಪ್ಕಾಳ್

“ಎ.ಬಿ.ಪಿ ಮಾಝಾ” ಎನ್ನುವ ಒಂದು ಮರಾಠಿ ಛಾನೆಲ್. ಅದರಲ್ಲಿ ಉದ್ಧವ ಠಾಕರೆ ಒಬ್ಬ ಲಕ್ಷಣವಾದ, ಎಪ್ಪತ್ತರ ಹರೆಯದ ಧಡೂತಿ ಹೆಂಗಸಿನೊಂದಿಗೆ ಫೋನಿನಲ್ಲಿ ಸಂವಾದ ಮಾಡುತ್ತಿರುವುದನ್ನು ತೋರಿಸುತ್ತಿದ್ದರು. ಆ ಹೆಂಗಸು “ಬಾಳಾ ಬೋಲ್, ಬೋಲ್ ಬೇಟಾ.. ಬಾಳಾ ಸಾಹೇಬಾಂಚ್ಯ ಪಿಲ್ಯಾ ಬೋಲ್ (ಹೇಳು ಮಗೂ, ಹೇಳು ಮಗನೇ ಬಾಳಾಸಾಹೇಬರ ಮರಿಯೇ ಹೇಳು)

“ಏನಿಲ್ಲ ಯಾರೋ ನನಗೆ ವಾಟ್ಸಾಪ್‍ನಲ್ಲಿ ಕಳುಹಿಸಿದ್ದರು. ನಿಮ್ಮ ಆಶೀವಾದ ಸಿಕ್ಕಿದೆ”

“ಈಗ ಎಂಥ ಕಷ್ಟದ ಪರಿಸ್ಥಿತಿ ಬಂದಿದೆ… ಎಂಥಾ ಕಷ್ಟ ಬಂದಿದೆ ಬಾಳಾ!”

“ಆಯುಷ್ಯ ಪೂರ್ತಿ ನೀವೂ ಅಂತಹ ಕಷ್ಟದ ಪರಿಸ್ಥಿತಿಗಳನ್ನು ನಿಭಾಯಿಸುತ್ತಾ ಬಂದಿರಲ್ಲ ಮಾಯಿ?”

“ಎಷ್ಟೆಂದರೂ ನೀನು ಬಾಳಾಸಾಹೇಬರ ರಕ್ತವಲ್ಲವೇ?  ಸಮರ್ಥವಾಗಿ ಮುಂದೆ ನಡೆಸುತ್ತೀ”

“ನಾನು ಹಿಂದಕ್ಕೆ ಹೋಗುವವನಲ್ಲ”

“ನಾಹೀರೆ ನಾಹೀರೆ, ನಾಹೀ ನಾಹೀ. ಆದರೆ ಒಂದು ಹೇಳಲಾ ಉದ್ಧವಾ? ಎಷ್ಟು ಸರಳವಾದ ಮುಖ್ಯಮಂತ್ರಿ! ಸ್ವಲ್ಪವೂ ಬದಲಾಗಿಲ್ಲ ನೀನು ನೋಡು”

“ಹಹ್ಹ ಹ್ಹ..ಮುಖ್ಯಮಂತ್ರಿ ಆಗಿಬಿಟ್ಟರೆ ಏನು? ನಾವು ಇರುವ ಹಾಗೆ ಇರವುದಪ್ಪ”

“ಖರೆ ಖರೆ ಮಹಾರಾಷ್ಟ್ರದ ರಕ್ತವಲ್ಲವಾ.. ನಿನ್ನ ಮುಂದೆ ಎಷ್ಟು ಸವಾಲುಗಳೋ ಮಗುವೆ?”

“ಹೇಗಾದರೂ ನಿಭಾಯಿಸಬಲ್ಲೆ (ಮಾಯಿ) ನಿನ್ನ ಆಶೀರ್ವಾದ ಒಂದು ಬೇಕು”

“ಖಂಡಿತಾ ಇದೆ ಕಣೋ ಮಗನೇ ಇದೆ”

“ತುಮ್ಹೀ ಪಣ್ ಕಾಳಜಿ ಘ್ಯಾ ಬಾಹೇರ್ ಜಾವೂ ನಕಾ” (ನೀವೂ ಹುಶಾರು.. ಹೊರಗೆ ಬರಬೇಡಿ..)

“ನೀನೂ ಬೇಟಾ… ಜಗದ ಜವಾಬ್ದಾರಿ ಈಗ ನಿನ್ನ ಮೇಲಿದೆ. ಮಹಾರಾಷ್ಟ್ರ ಈಗ ನಿನ್ನ ಭುಜದ ಮೇಲಿದೆ…ಹುಶಾರು.. ಇದು ಎಲ್ಲಾ (ಈ ಸಂಕಟಕಾಲ) ಕಳೆದ ಮೇಲೆ ನಾನು ನಿನ್ನನ್ನು ಒಮ್ಮೆ ಭೇಟಿಯಾಗಲು ಬರುವೆ”.

“ಅವಶ್ಯ ಬನ್ನಿ ಬನ್ನಿ”

“ಬೇಟಾ ಸಾಂಭಾಳ್…. ಕಾಳಜಿ ಘೇ ಪಿಲ್ಯಾ ಕಾಳಜಿ ಘೇ” (ಜೋಪಾನ ಮಗನೇ, ಕಾಳಜಿ ತೆಗೆದುಕೋ)

ಈ ಹೆಂಗಸನ್ನು ಎಲ್ಲೋ ನೋಡಿದ ಹಾಗಿದೆಯಲ್ಲಾ? ಖರೆ..ಇದು ಸಿಂಧುತಾಯಿ ಸಪ್ಕಾಳ್!

ಸಾವಿರಾರು ತಬ್ಬಲಿಗಳನ್ನು ತಬ್ಬಿಕೊಂಡ ತಾಯಿ, ಸಿಂಧುತಾಯಿ ಸಪ್ಕಾಳ್. ಕೊರೋನಾದಂತಹ ಮಹಾಮಾರಿಯೊಂದು ತಲೆಯಮೇಲೆ ಕತ್ತಿ ತೂಗಿಸುತ್ತಾ ಮರಣ ಶಾಸನ ಬರೆಯುತ್ತಿರುವಾಗ, ತಾಯಿಯಲ್ಲದೇ ಇನ್ನಾರು ನೆನಪಿಗೆ ಬರಬೇಕು? ಅವಳನ್ನಲ್ಲದೇ ಇನ್ನಾರನ್ನು ಕರೆಯಬೇಕು? ಈ ತಾಯಿಯೊಡನೆ ಸಂವಾದವನ್ನು ಮರಾಠಿ ಸುದ್ದಿ ವಾಹಿನಿಯವರು ಅನೇಕ ಸಲ ತೋರಿಸಿದ್ದು ಕಾಕತಾಳಿಯವೇನಲ್ಲ.

“ನನಗೆ ಇದ್ದ ಪರಮ ಶತ್ರು ಎಂದರೆ ರೈಲ್ವೇ ಟಿ.ಟಿ. ನೋಡಿ” ಎನ್ನುತ್ತಾಳೆ ಸಿಂಧುತಾಯಿ. ಏಕೆಂದರೆ ಗಾಡಿಯಿಂದ, ಗಾಡಿಗೆ ಕಳ್ಳತನದಲ್ಲಿ ಹತ್ತಿ ಇಳಿಯುತ್ತಾ, ಸಣ್ಣ ಕೂಸನ್ನು ಮಡಿಲಲ್ಲಿ ಕಟ್ಟಿಕೊಂಡು ಭಿಕ್ಷೆ ಬೇಡುತ್ತಿದ್ದವಳಿಗೆ ಟಿ.ಟಿ ಯಮಕಿಂಕರನಾಗಿ ಕಂಡರೆ ಆಶ್ಚರ್ಯವೇನು?

“ಯಾವುದಾದರೂ ಸ್ಟೇಷನ್ ಬಂದಿತೆಂದರೆ ನಾನು ಎದ್ದು ಹೊರಗೆ ಹೋಗುತ್ತಿದ್ದೆ. ಯಾಕೆಂದರೆ ಆಗ ಪ್ರಯಾಣಿಕರು ತಂಗಳು ಭಕ್ಕರಿ, ಹಳಸಿದ ತಿಂಡಿ ಹೊರಗೆ ಎಸೆಯಲು ಬರುತ್ತಿದ್ದರು. ಅದನ್ನು ತಿಂದು ಬದುಕಿದವಳು ನಾನು”

ಎಂತಹ ದೊಡ್ಡ ಸಂದರ್ಶನವೇ ಆಗಲೀ ಬೇಟಾ, ಬಾಳಾ ಎನ್ನುತ್ತ “ನಾನು ಭಿಕ್ಷೆ ಬೇಡುತ್ತಿದ್ದವಳೋ, ನಾನು ಬೇಡದ ಜಾಗವೇ ಇಲ್ಲ. ದಾದರ್, ವಿಟಿ, ಥಾಣೆ, ಕಲ್ಯಾಣ್ ಎಲ್ಲೆಲ್ಲಿ ಭಿಕ್ಷೆ ಬೇಡಿದ್ದೇನೆ ಗೊತ್ತಾ?” ಎನ್ನುತ್ತಾಳೆ. ಹಾಡು ಹೇಳಿಕೊಂಡು ಭಿಕ್ಷೆ ಎತ್ತಿದ ಸಿಂಧುತಾಯಿ ಇಂದು ರಾಜ್ಯದ ಮುಖ್ಯ ಮಂತ್ರಿಯನ್ನು ‘ಬೇಟಾ.. ಬಾಳ’ ಎಂದು ಸಲುಗೆಯಿಂದ ಕರೆಯುವ ಎತ್ತರಕ್ಕೆ ಬೆಳೆದಿದ್ದಾಳೆ ಎಂದರೆ ಅವಳ ಕರ್ಮದ ಪಾಂಗಿನ ಬಗ್ಗೆ ಅಚ್ಚರಿಯಾಗದಿರದು.

“ಬೆಳಿಗ್ಗೆಯಲ್ಲಾ ಊರಿನ ರೈಲ್ವೇ ನಿಲ್ದಾಣದಲ್ಲಿ ಭಿಕ್ಷೆ ಬೇಡಿದರೆ ರಾತ್ರಿ ತಂಗುವುದು ಸ್ಮಶಾನದಲ್ಲಿ. ನನಗೆ ಗೊತ್ತಿದ್ದ ಒಂದೇ ಠಿಕಾಣವೆಂದರೆ ಅದು ಸ್ಮಶಾನ. ನನಗೆ ದೆವ್ವ ಭೂತಗಳ ಹೆದರಿಕೆಯಿರಲಿಲ್ಲ. ಆದರೆ ಮನುಷ್ಯರ ಬಗೆಗೆ ಹೆದರಿಕೆಯಿತ್ತು. ಒಮ್ಮೆ ಹೀಗೆ ಸ್ಮಶಾನದಲ್ಲಿ ಕುಳಿತಿದ್ದಾಗ ಮಡಿಲಲ್ಲಿ 16 ದಿವಸದ ಸಣ್ಣ ಕೂಸು. ಭಯಂಕರ ಹಸಿವು. ‘ಹಸಿವು ಬಹಳ ಕೆಟ್ಟದ್ದು ನೋಡು’.. ನನಗೆ ಯಾರೂ ಇಲ್ಲ, ನನ್ನನ್ನು ಕೇಳುವರಿಲ್ಲ, ನಾನು ಸಾಯಬೇಕು ಎಂದು ಜೋರಾಗಿ ಅಳುತ್ತಿದ್ದೆ. ಆಗ ಎಲ್ಲಿಂದಲೋ ಒಂದು ಧ್ವನಿ ಕೇಳಿಸಿತು. “ಕಫನ್ ಕೋ ಜೇಬ್ ನಹೀ ಹೋತಿ, ಮೌತ್ ಕಭೀ ರಿಶ್ವತ್ ನಹೀ ಲೇತಿ… ಮರನಾ ನಹೀಂ ಜೀನಾ ಸೀಖೋ, ತಪ್ಪು ಮಾಡುತ್ತಿರುವೆ ಸಿಂಧುತಾಯಿ ನೀನು” ಎಂದಿತು. ನನ್ನ ಕಫನ್‍ನ್ನು ಅದು ಸುಟ್ಟು ಬಿಟ್ಟಿತು. ಅಂದಿನಿಂದ ನನ್ನ ಸಾಯಬೇಕೆಂಬ ಯೋಚನೆ ಕ್ಯಾನ್ಸಲ್..” ಎಂದು ನಗುತ್ತಾಳೆ.

“ಕಫನ್ ಸುಟ್ಟರೂ ಪರವಾಗಿಲ್ಲ ದಫನ್ ಮಾತ್ರ ಆಗಬಾರದು ನೋಡು” (ಕಫನ್ ಜಲ್ನೇ ದೋ ಲೇಕಿನ್ ಧಫನ್ ಮತ್ ಹೋನೇ ದೋ) ಬದುಕಿನಲ್ಲಿ ಸಂಕಷ್ಟಗಳು, ದುಃಖಗಳು ಬಂದೆರಗುತ್ತವೆ ನಿಜ. ಆದರೆ ನಾವು ನಡೆಯುವುದನ್ನು ನಿಲ್ಲಿಸಬಾರದು, ಧೈರ್ಯಗೆಡಬಾರದು, ಆಗ ಹಾದಿಯ ಮುಳ್ಳುಗಳೂ ಕೂಡ ತಲೆಬಾಗುತ್ತವೆ. (“ಹಮ್ ಜುಕ್ತೇ ಹೈಂ ತುಮ್ ಚಲ್ನಾ ಸೀಖೋ ಎನ್ನುತ್ತವೆ ನೋಡು)” ಎನ್ನುತ್ತಾಳೆ. ಎಂತಹ ಆತ್ಮ ವಿಶ್ವಾಸ! ಅವಳು ಹಾದುಬಂದ ಮುಳ್ಳಿನ ಹಾದಿ ಅವಳಿಗೆ ಇಂದು ಇಂತಹ ಆತ್ಮವಿಶ್ವಾಸವನ್ನು ಕೊಟ್ಟಿದೆ.

“ನನ್ನ ಬಳಿ ಒಂದು ತಟ್ಟೆಯಾ? ಲೋಟವಾ ಏನಿತ್ತು? ಸ್ವಲ್ಪ ಜೋಳದ ಹಿಟ್ಟಿತ್ತು. ಸ್ಮಶಾನದಲ್ಲಿದ್ದ ಒಂದು ಮರವೇರಿ ಎಲೆಯನ್ನು ಕಿತ್ತು ಹೆಣದ ಬೆಂಕಿಯಲ್ಲಿ ಭಕ್ಕರಿ ಸುಟ್ಟು ಉಂಡಿದ್ದೇನೆ” ಎನ್ನುವ ಕರಳು ಕಲಕುವ ಸಂಗತಿಗಳು ಸಿಂಧುತಾಯಿಯ ಬದುಕು ಗಟ್ಟಿಯಾದುದರ ಹಿನ್ನೆಲೆಯನ್ನು ಒದಗಿಸುತ್ತವೆ.

ಒಂದು ಟಿ.ವಿ ಸಂದರ್ಶನದಲ್ಲಿ ಸಂದರ್ಶಕ “ಮಾಯಿ ನಿನಗೆ 1400 ಮಕ್ಕಳಿದ್ದಾರೆ ಈಗ” ಎಂದರೆ

“ಹಾಗೆ 250 ಜನ ಅಳಿಯಂದಿರೂ ಇದ್ದಾರೆ ಬಾಳ..” ಎಂದು ನಗೆಚಾಟಿಕೆ ಹಾರಿಸುತ್ತಾಳೆ.

“ಹೇಗೆ ಸಂಭಾಳಿಸುವೆ? ಒಂದೆರೆಡು ಮಕ್ಕಳಿರುವ ನಮ್ಮ ಅಮ್ಮಂದಿರಿಗೇ ಮಕ್ಕಳನ್ನು ಸಾಕುವುದೆಂದರೆ ಸಾಕು ಸಾಕೆನಿಸುತ್ತದೆ”

ಎಂದು ಕೇಳಿದರೆ, “ನನಗೆ ಒಂದು ಕಾಲzಲ್ಲಿ ಯಾರೂ ಕೇಳುವವರಿರಲಿಲ್ಲ. ನಿನಗೆ ಹಸಿವಾ? ಉಣ್ಣುವೆಯಾ? ಎನ್ನುವರಿರಲಿಲ್ಲ. ಮನೆಗೆ ಕರೆಯುವವರಿರಲಿಲ್ಲ. ಯಾರಾದರೂ ಕರೆಯಬಾರದಾ ಎಂದುಕೊಳ್ಳುತ್ತಿದ್ದೆ. ಈಗ ಇಷ್ಟು ಜನ ಮಕ್ಕಳು ನನ್ನನ್ನು ‘ಮಾಯಿ’ ಎಂದು ಕರೆಯುತ್ತಾರೆ. ದೇಶದ ಉದ್ದಗಲಕ್ಕೆ ದೊಡ್ಡ ದೊಡ್ಡ ಹುದ್ದೆಯಲ್ಲಿರುವ ನನ್ನ ಮಕ್ಕಳಿದ್ದಾರೆ ಎನ್ನಲು ಖುಷಿಯಾಗುತ್ತದೆ ಕಣೋ”

“ನನ್ನ ಮೊದಲ ದೊಡ್ಡ ಶತ್ರುವೆಂದರೆ ಶಾಲೆಗೆ ನನ್ನನ್ನು ಕಳಿಸಲು ವಿರೋಧಿಸುತ್ತಿದ್ದ ನನ್ನ ತಾಯಿಯೇ!  ಸಗಣಿ ಎತ್ತುವ ನೆಪದಿಂದ ನಮ್ಮ ತಂದೆ ನನ್ನನ್ನು ಶಾಲೆಗೆ ಕಳುಹಿಸಿದರು. ನಾನು ಕಲಿತವಳಲ್ಲ ಮರಾಠಿ ನಾಲ್ಕನೇ ಇಯತ್ತೇ ಪಾಸ್, ಅಷ್ಟೇ. ಈಗ ನನಗೆ ಡಾಕ್ಟರೇಟ್ ಕೊಟ್ಟಿದ್ದಾರೆ! ಈಗ ನಾನು ಡಾಕ್ಟರ್ ಎಂದು ಹೆಮ್ಮೆಯಿಂದ ಹೇಳುತ್ತಾಳೆ. ಬಹಿಣಾ ಬಾಯಿ ಏನು ಕಲಿತಿದ್ದಳು? ಆದರೆ ಎಂತೆಂತಹ ಓವಿಗಳನ್ನು ರಚಿಸಿದ್ದಾಳೆ !” ಇನ್ನು ಶುರು ಓವಿಗಳು ಓತಪ್ರೋತ ಸಿಂಧುತಾಯಿಯ ಬಾಯಲ್ಲಿ!!!!

ಹತ್ತು ವರುಷಕ್ಕೆ ಗಂಡನ ಮನೆಹೊಕ್ಕ ಸಿಂಧೂತಾಯಿಗೆ ಸಿಕ್ಕಿದ್ದು ಹೊಡೆದು ಬಡಿಯುವ ಗಂಡ, ಅತ್ತೆ. ಇಪ್ಪತ್ತು ವರುಷಕ್ಕೆ ಗಂಡ ಅವಳನ್ನು ಬಿಟ್ಟಾಗ ಅವಳಿಗೆ ಇದ್ದ ಒಂದು ಮಾರ್ಗವೆಂದರೆ ಭಿಕ್ಷೆ ಬೇಡುವುದೊಂದೇ! “ಹೀಗೆ ಬೇಡುತ್ತಿದ್ದಾಗ ಒಂದೂಕಾಲು ತಿಂಗಳ ಒಂದು ಮಗುವನ್ನು ಇಟ್ಟುಕೊಂಡು ಒಬ್ಬ ತಾಯಿ ಅಳುತ್ತಿದ್ದಳು. ಆನಂತರ ಅವಳು ಅಲ್ಲೇ ಪ್ರಾಣ ಬಿಟ್ಟಳು. ರೈಲ್ವೇ ನಿಲ್ದಾಣದಲ್ಲಿ ನೂಕುನುಗ್ಗಲು. ಜನ ಆ ಹೆಣವನ್ನು ತುಳಿದುಕೊಂಡು ಹೋಗುತ್ತಿದ್ದರೇ ವಿನಃ ಯಾರೂ ಅವಳ ಕೂಸಿನ ಕಡೆ ನೋಡಲಿಲ್ಲ. ನಾನು ಹತ್ತಿರ ಹೋಗಿ ಮೆಲ್ಲನೇ ಆ ಕೂಸನ್ನು ಎತ್ತಿಕೊಂಡು ಬಂದೆ. ಈಗ ನೋಡಿ ಅವನೇ ನಿಮ್ಮ ಮುಂದೆ ನಿಂತಿದ್ದಾನೆ ವಿನಯ್” ಮೂವತ್ತು ವರುಷದ ಒಬ್ಬ ಸಧೃಡ ಯುವಕನನ್ನು ತೋರಿಸಿ ಅವನ ಕೈಯನ್ನು ಭದ್ರವಾಗಿ ಹಿಡಿದುಕೊಳ್ಳುತ್ತಾಳೆ.

“ನನಗೆ ಸತ್ಕಾರ ಮಾಡುವಾಗ ನನ್ನ ಗಂಡ ಬಂದಿದ್ದ. ದೂರದಿಂದಲೇ ನೋಡಿ ಅಳುತ್ತಿದ್ದ. ಅವನಿಗೆ ಪಶ್ಚಾತ್ತಾಪವಾಗಿತ್ತು. ನಾನು ಹತ್ತಿರ ಹೋಗಿ ಅವನ ಕೈ ಹಿಡಿದುಕೊಂಡೆ. ಅವನನ್ನು ಕ್ಷಮಿಸಿದ್ದೇನೆ” ಎನ್ನುವ ಸಿಂಧುತಾಯಿ ಅವನನ್ನು ಗಂಡನನ್ನಾಗಿ ಸ್ವೀಕರಿಸುವುದಿಲ್ಲ. “ನನ್ನ ಬಳಗಕ್ಕೆ ಇನ್ನೊಂದು ದೊಡ್ಡ ಮಗು ಸೇರಿತು. ಈಗ ನಾನು ಎಲ್ಲರಿಗೆ ತಾಯಿ ತಾನೇ? ಅವನು ನನ್ನನ್ನು ದೂರ ಮಾಡದಿದ್ದರೆ ನಾನು ಈ ಎತ್ತರಕ್ಕೆ ಬೆಳೆಯಲು ಸಾಧ್ಯವಿತ್ತೇ?” ನಗುತ್ತಾಳೆ. ಹಾಗೆಯೇ ಮಗಳು ತನ್ನನ್ನು ಬಿಟ್ಟು ಹೋಗದಿದ್ದರೆ ತಾನು ಸಾವಿರಾರು ಮಕ್ಕಳಿಗೆ ತಾಯಿಯಾಗಲು ಸಾದ್ಯವಿತ್ತೇ? ಎಂದೂ ಸಂತಸ ಪಡುತ್ತಾಳೆ. 90ನೇ ವರುಷದಲ್ಲಿ ಗಂಡ ಮೃತಪಟ್ಟಾಗ “ನನ್ನ ಬಹಳ ಅಪಾಯಕಾರಿ ಮಗು ನಮ್ಮನ್ನು ಬಿಟ್ಟು ಹೋಯಿತು” ಎನ್ನುತ್ತಾಳೆ.

ಅವಳ ಮಾತೆಂದರೆ ಎಷ್ಟು ಸ್ಪಷ್ಟ. ಅವಳ ಗುರಿಯ ಹಾಗೆಯೇ. ಮಧ್ಯೆ ಮಧ್ಯೆ ಶಾಯಿರಿಗಳನ್ನು ಹೇಳುವುದು, ಹಿಂದಿ ಹಾಡುಗಳನ್ನು ಹೇಳುವುದು. ಎಂತಹ ಕಂಚಿನ ಕಂಠ ! ರಂಗ ಗೀತೆಗಳಿಗೆ ಹೇಳಿಮಾಡಿಸಿದ ಹಾಗೆ. ಮರಾಠಿ ರಂಗಭೂಮಿಗೆ ಇವಳು ಸೇರಬೇಕಿತ್ತು ಎಂದು ಆ ಕ್ಷಣ ನನಗೆ ಅನ್ನಿಸಿದ್ದು ಸುಳ್ಳಲ್ಲ.

“ನನಗೆ ನನ್ನ ಬಗ್ಗೆ ಅಭಿಮಾನವಿದೆ. ಜಾಗ ಬದಲಾದಾಗ ನಾವು ಬದಲಾಗಬಾರದು ಕಣೋ ನೋಡು. ನಾನು ಹತ್ತಾರು ದೇಶಗಳಿಗೆ ಹೋಗಿ ಬಂದಿರುವೆ. ಅಲ್ಲಿಗೆಲ್ಲಾ ಈ ಒಂಬತ್ತು ಗಜದ ಸೀರೆಯನ್ನೇ ಉಟ್ಟುಕೊಂಡು ಹೋಗಿರುವೆ” ಎಂದು ನಗುತ್ತಾಳೆ ಸಿಂಧೂತಾಯಿ.

ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್ ಹಾಗೂ ಪ್ರಣವ್ ಮುಖರ್ಜಿ ಈ ಮೂವರು ರಾಷ್ಟ್ರಪತಿಗಳಿಂದಲೂ ಸನ್ಮಾನಿತಳಾದುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ.

ಸಿಂಧುತಾಯಿ ಹುಟ್ಟಿದ್ದು ಗೋವಳಿಗರ ಮನೆಯಲ್ಲಿ.  ನವೆಂಬರ್ 14, 1948 ರಂದು, ಮಹಾರಾಷ್ಟ್ರದ ವಾಘಾ ಜಿಲ್ಲೆಯ ಬೇರಾರ್ ಎಂಬಲ್ಲಿ. ಯಾರಿಗೂ ಬೇಡವಾದ ಮಗುವಾಗಿ ಹುಟ್ಟಿದ ಕಾರಣ ಇವಳನ್ನು ‘ಚಿಂದಿ’ ಎನ್ನುತ್ತಿದ್ದರಂತೆ. ಅವಳ ತಾಯಿಯ ಇಷ್ಟಕ್ಕೆ ವಿರುದ್ಧವಾಗಿ ಅವಳ ತಂದೆ ಸಿಂಧುತಾಯಿಯನ್ನು ಶಾಲೆಗೆ ಕಳುಹಿಸಿದರು. ಬಡತನದ ಕಾರಣ ಶಾಲೆಯನ್ನು ಮುಂದುವರಿಸಲಾಗದೇ ಹನ್ನೆರಡನೇ ವಯಸ್ಸಿಗೆ ಅವಳಿಗಿಂತ ವಯಸ್ಸಿನಲ್ಲಿ ಇಪ್ಪತ್ತು ವರುಷ ದೊಡ್ಡವನಾದ ವರನಿಗೆ ಕೊಟ್ಟು ಮದುವೆ ಮಾಡಿದರು. ಗಂಡನ ಮನೆಯಲ್ಲಿ ವಿಪರೀತ ಹಿಂಸೆ. ಧೈರ್ಯಗೆಡದೇ ಸಗಣಿ ಬಾಚಿ ಜೀವನ ನಿರ್ವಹಿಸಿದಳು. ಅವಳಿಗೆ ಇಪ್ಪತ್ತು ವರುಷಗಳಾಗುವ ಹೊತ್ತಿಗೆ ಮೂರು ಮಕ್ಕಳು. ನಾಲ್ಕನೆಯ ಬಾರಿ ಗರ್ಭಿಣಿಯಾದಳು. ಒಂಬತ್ತು ತಿಂಗಳ ಗರ್ಭಿಣಿಯನ್ನು ಗಂಡ ಹೊಡೆದು ಬಡಿದು ಮನೆಯಾಚೆಗೆ ಅಟ್ಟಿದ. ದನದ ಕೊಟ್ಟಿಗೆಯಲ್ಲಿ ರಾತ್ರಿಯೆಲ್ಲ ಕಳೆದು ಹೆಣ್ಣು ಮಗುವಿಗೆ ಜನ್ಮನೀಡಿದಳು. ಅಂದಿನಿಂದ ಹೊಟ್ಟೆಯಪಾಡಿಗೆ ರೈಲ್ವೇ ಪ್ಲಾಟ್ ಫಾರಂಗಳ ಮೇಲೆ ಭಿಕ್ಷೆ ಬೇಡಲು ಆರಂಭಿಸಿದಳು. ಗಂಡಸರ ಭಯದಿಂದ ರಾತ್ರಿ ಹೊತ್ತು ಸ್ಮಶಾನದಲ್ಲಿ ಕಾಲ ಕಳೆಯ ಹತ್ತಿದಳು. ಜನ ಅವಳನ್ನು ದೆವ್ವವೆಂದು ಭಾವಿಸತೊಡಗಿದರು.

ಬದುಕನ್ನು ಅರಸುತ್ತಾ ಅಮರಾವತಿ ಜಿಲ್ಲೆಯ ಚಿಕಲ್‍ಧಾರ ಎಂಬ ಪ್ರದೇಶಕ್ಕೆ ಬಂದಳು. ಅಲ್ಲಿ ಹುಲಿ ಸಂರಕ್ಷಣೆಯ ನೆಪದಲ್ಲಿ ಅಲ್ಲಿನ ಆದಿವಾಸಿಗಳನ್ನು ಒಕ್ಕಲೆಬ್ಬಿಸಿದಾಗ ಸಿಂಧುತಾಯಿಗೆ ಅಸಹಾಯಕರಾದ ಅವರ ಪರವಾಗಿ ಹೋರಾಡಬೇಕೆನ್ನಿಸಿತು. ಆದಿವಾಸಿಗಳ 84 ಹಳ್ಳಿಗಳ ಪುನರ್ವಸತಿಗಾಗಿ ಪ್ರತಿಭಟನೆ ಆರಂಭಿಸಿದಾಗ ಅದು ಮಹಾರಾಷ್ಟ್ರದ ಅರಣ್ಯ ಮಂತ್ರಿಯ ಗಮನಕ್ಕೆ ಬಂದು ಆದಿವಾಸಿಗಳಿಗೆ ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸುವಲ್ಲಿ ಅವಳ ಹೋರಾಟ ಯಶಸ್ವಿಯಾಯಿತು.

ಯಾವುದೇ ಮಾರ್ಗವಿಲ್ಲದೇ ಮೈಲುಗಟ್ಟಲೆ ನಡೆದು ತಾಯಿಯ ಆಶ್ರಯ ಸಿಗಬಹುದೆಂದು ಅಲ್ಲಿಗೆ ಹೋದಳು. ಅಲ್ಲಿ ತಾಯಿ ಅವಳನ್ನು ಮನೆಗೆ ಸೇರಿಸದೇ ಹೊರ ದಬ್ಬಿದಳು. ಸಿಂಧುತಾಯಿಗೆ ಸಾಯುವ ಆಲೋಚನೆಯೂ ಬಂದಿತು. ಆಗ ರೈಲ್ವೇ ಪ್ಲಾಟ್ ಫಾರಂ ಮೇಲೆ ಅನೇಕ ಅನಾಥ ಮಕ್ಕಳು ಹಸಿವಿನಿಂದ ಅಡ್ಡಾಡುವುದನ್ನು ಕಂಡಳು.  ಆಗ ಅವಳಿಗೆ ತನ್ನ ದಾರಿ ಸ್ಪಷ್ಟವಾಯಿತು. ತಾನು ಸಾಯಬಾರದು ಎಂದುಕೊಂಡಳು. ಅಲ್ಲಿದ್ದ ಅನಾಥ ಮಕ್ಕಳನ್ನೆಲ್ಲಾ  ತನ್ನ ಬಳಿ ಸೇರಿಸಿಕೊಂಡು ಅವರನ್ನು ಸಲಹಲು ಇನ್ನೂ ಹೆಚ್ಚು ಹೆಚ್ಚು ಭಿಕ್ಷೆ ಬೇಡತೊಡಗಿದಳು. ತನ್ನ ಬಳಿಗೆ ಬಂದ ಪ್ರತಿಯೊಂದು ಮಗುವಿಗೆ ತಾಯಿಯಾಗಲು ನಿರ್ಧರಿಸಿದಳು. ಅವಳ ಬದುಕಿನಲ್ಲಿ ಹೊಸ ತಿರುವೊಂದು ಮೂಡಿತು. ಅವಳ ಇಡೀ ಜೀವನವನ್ನು ಅನಾಥ ಮಕ್ಕಳ ಏಳ್ಗೆಗಾಗಿ ಮುಡಿಪಾಗಿಟ್ಟಳು. ಇದರಿಂದಾಗಿ ಅವಳನ್ನು ‘ಮಾಯಿ’ ಎಂದು ಜನ ಕರೆಯತೊಡಗಿದರು.

ಅವಳು ಸಾಕಿದ ಮಕ್ಕಳೆಲ್ಲ ಇಂದು ಉನ್ನತ ಶಿಕ್ಷಣ ಪಡೆದು ವೈದ್ಯರುಗಳಾಗಿ, ವಕೀಲರಾಗಿ ಪ್ರಸಿದ್ದಿ ಪಡೆದಿದ್ದಾರೆ. ಇಂದಿಗೂ ಸಿಂಧುತಾಯಿ ಮಕ್ಕಳ ಯೋಗಕ್ಷೇಮಕ್ಕಾಗಿ ಹೋರಾಡುತ್ತಿದ್ದಾಳೆ. ಅವಳು 71ರ ಈ ವಯಸ್ಸಿನಲ್ಲಿಯೂ ಬಿಡುವಿಲ್ಲದೆ ದುಡಿಯುತ್ತಿದ್ದಾಳೆ. ಮುಂಜಾನೆ ಒಂದು ಊರಾದರೆ ಸಂಜೆ ಇನ್ನೊಂದು ಊರು. ಹೀಗೆ ಜನ ಅವಳ ಮಾತಿಗಾಗಿ ಕಾತರಿಸುತ್ತಾರೆ. ಅನೇಕ ಸಂಘಟನೆಯ ಕಾರ್ಯಕರ್ತರುಗಳು ಅವಳ ಈ ಕೆಲಸವನ್ನು ಗೌರವಿಸಿ ಧನಸಹಾಯ ಮಾಡಿದ್ದಾರೆ.

·         ಸನ್ಮತಿ ಬಾಲ ನಿಕೇತನ್ ಭೆಲೇಕರ್ ವಸ್ತಿ (ಪುಣೆ),

·         ಮಮತಾಬಾಲ ಸದನ (ಸಾಸವಾಡ),

·         ಮಾಯಿ ಆಶ್ರಮ, ಚಿಕಲ್ ಧಾರ (ಅಮರಾವತಿ),

·         ಗಂಗಾಧರ ಬಾಬ ಛತ್ರಾಲಯ (ಗುಹ),

·         ಸಪ್ತಸಿಂದು ಮಹಿಳಾ ಆಧಾರ ಶಿಶುಸಂಗೋಪನ ಆಣಿ ಶಿಕ್ಷಣ್ ಸಂಸ್ಥಾ (ಪುಣೆ)

ಹೀಗೆ ಅನೇಕ ಸಂಸ್ಥೆಗಳನ್ನು ಕಟ್ಟಿ ಬೆಳಸುತ್ತಿದ್ದಾಳೆ. ಅದರಲ್ಲಿ ಒಂದು ಸಂಸ್ಥೆಯನ್ನು ಅವಳ ಮಗಳು ನೋಡಿಕೊಳ್ಳುತ್ತಿದ್ದಾಳೆ. ಇಂದು 250 ಅಳಿಯಂದಿರ, 36 ಸೊಸೆಯಂದಿರು ಹಾಗೂ ಸಾವಿರಾರು ಮೊಮ್ಮಕ್ಕಳಿರುವ ಭವ್ಯ ಸಂಸಾರ ಅವಳದು.

ಅವಳ ಈ ಎಣೆಯಿಲ್ಲದ ಹೋರಾಟವನ್ನು ಅವಳ ಆಸ್ಥೆಯನ್ನು ಗಮನಿಸಿ ಅನೇಕ ಪುರಸ್ಕಾರಗಳು ದೊರೆತಿವೆ:

Ø  ರಾಷ್ಟ್ರಪತಿಗಳು ನೀಡುವ, ಮಹಿಳೆಯರಿಗಾಗಿ ಇರುವ ಅತ್ಯಂತ ಶ್ರೇಷ್ಠ ನಾಗರಿಕ ಪ್ರಶಸ್ತಿಯಾದ ನಾರಿ ಶಕ್ತಿ ಪ್ರಶಸ್ತಿ (2017)

Ø  ವೊಖಾರ್ಡ್ ಫೌಂಡೇಷನ್ ಅವರು ಕೊಡಮಾಡುವ ಸಾಮಾಜಿಕ ಕಾರ್ಯಕರ್ತೆ ಪ್ರಶಸ್ತಿ (2016)

Ø  ಅಹಮ್ಮದೀಯ ಮುಸ್ಲಿಂ ಶಾಂತಿ ಪ್ರಶಸ್ತಿ (2014)

Ø  ಪುಣೆಯ ಬಸವ ಸೇವಾ ಸಂಘ ಕೊಡಮಾಡುವ ಬಸವ ಭೂಷಣ ಪುರಸ್ಕಾರ (2014)

Ø  ಸಾಮಾಜಿಕ ನ್ಯಾಯಕ್ಕಾಗಿ ಮದರ್ ಥೆರೆಸಾ ಪ್ರಶಸ್ತಿ(2013)

Ø  ಮಹಿಳೆ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ಮಹಾರಾಷ್ಟ್ರ ಕೊಡುವ ಅಹಿಲ್ಯಾ ಬಾಯಿ ಹೋಳ್ಕರ್ ಪ್ರಶಸ್ತಿ (2010)

ಹೀಗೆ ಇನ್ನೂ ಹತ್ತು ಹಲವಾರು ಪ್ರಶಸ್ತಿಗಳು ಸಿಂಧುತಾಯಿಯನ್ನು ಅರಸಿಕೊಂಡು ಬಂದಿವೆ. ಹೊರ ದೇಶಗಳಿಂದಲೂ ಇವಳಿಗೆ ಕರೆ ಬಂದು ಹತ್ತಾರು ದೇಶಗಳಿಗೆ ಭೇಟಿ ನೀಡಿ, ತನ್ನ ಉದ್ದೇಶವನ್ನು ಮನದಟ್ಟು ಮಾಡಿಸಿದ್ದಾಳೆ. ಹಾಗೆಯೇ ಸನ್ಮಾನ ಸ್ವೀಕರಿಸಿದ್ದಾಳೆ.

ಸಿಂಧುತಾಯಿಯ ಸಾಹಸ ಗಾಥೆಯಿಂದ ಉತ್ತೇಜಿತರಾದ ಅನಂತ ಮಹಾದೇವನ್ ಅವರು “ಮೀ ಸಿಂಧೂತಾಯಿ ಸಪ್ಕಾಳ್” ಎನ್ನುವ ಹೆಸರಿನ ಚಲನ ಚಿತ್ರವನ್ನೂ ಮರಾಠಿಯಲ್ಲಿ ಹೊರ ತಂದಿದ್ದಾರೆ.

ಇಷ್ಟೆಲ್ಲಾ ಗರಿಗಳು ಅವಳ ಕಿರೀಟಕ್ಕೆ ಮೂಡಿದ್ದರೂ ಸ್ವಲ್ಪವೂ ಗರ್ವವಿಲ್ಲದೇ ಎಲ್ಲರನ್ನೂ ‘ಬೇಟಾ… ಬಾಳಾ’ ಎಂದೇ ಕರೆಯುವ ವಾತ್ಸಲ್ಯಮಯಿ ಸಿಂಧೂತಾಯಿ, ತಲೆಯ ತುಂಬಾ ಸೆರಗು ಹೊದ್ದು ಮೈಕನ್ನು ಹಿಡಿದಳೆಂದರೆ ಅವಳ ವಾಗ್ಝರಿಗೆ ಬೆರಗಾಗದಿರುವವರೇ ಇಲ್ಲ.

‍ಲೇಖಕರು avadhi

21 April, 2020

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. Jayalaxmi Patil

    ವರ್ಷದ ಹಿಂದೆ ಸಿಂಧುತಾಯಿ ಬೆಂಗಳೂರಿನ ಸಮಾರಂಭವೊಂದಕ್ಕೆ ಬಂದಿದ್ದರು. ಅವರಿಲ್ಲಿ ಬರುವ ಮುಂಚೆಯೇ ನಾನವರ ಜೀವನಾಧಾರಿತ ಮರಾಠಿ ಸಿನಿಮಾ ನೋಡಿದ್ದೆನಾದ್ದರಿಂದ, ಅವರನ್ನೊಮ್ಮೆ ಮಾತನಾಡಿಸಿ ಕಾಲು ಮುಟ್ಟಿ ನಮಸ್ಕರಿಸಲೇಬೇಕು ಎಂದು ಆ ಸಮಾರಂಭದಲ್ಲಿ ನನ್ನಾಸೆ ನೆರವೇರಿಸಿಕೊಂಡೆ. ತುಂಬು ಮನಸಿಂದ ಆಶೀರ್ವದಿಸಿದರು ಮಾಯಿ. ‘ಮಾಯಿ, ನಾನೊಮ್ಮೆ ನಿಮ್ಮಾಶ್ರಮ ನೋಡಬೇಕು. ಅದರಿಂದ ನನಗೂ ಏನಾದರು ಈ ನಿಟ್ಟಿನಲ್ಲಿ ಮಾಡುಲು ದಾರಿ ಸಿಕ್ಕೀತು ಅನ್ನೊ ಆಸೆಯಿದೆ ಮಾಯಿ. ಬರಬಹುದೆ?’ ಎಂದು ಕೇಳಿದ್ದಕ್ಕೆ, ‘ಯೇ ಗ ಬಾಳ ನಕ್ಕಿ ಯೆ. (ಬಾ ಮಗು ಖಂಡಿತ ಬಾ)’ ಎನ್ನುತ್ತಾ ಪಕ್ಕದಲ್ಲಿ ನಿಂತ ಅವರ ಕಡೆಯ ಯುವಕನೊಬ್ಬನಿಗೆ ‘ಫೋನ್ ನಂಬರ್ ದೇ ತಿಲಾ (ಫೋನ್ ನಂಬರ್ ಕೊಡು ಇವಳಿಗೆ)’ ಎಂದು ಆದೇಶಿಸಿದರು. ಹೋಗಬೇಕಿದೆ ಅಲ್ಲಿಗೆ. ಹೋಗುವ ಮೊದಲು ಸಂಕಲ್ಪ ಗಟ್ಟಿಯಾಗಬೇಕು. ಅದಕ್ಕಾಗಿ ಕಾಯುತ್ತಿದ್ದೇನೆ. ನಿಮ್ಮ ಈ ಬರಹ ಸಿಂಧುತಾಯಿಯರನ್ನು ಭೇಟಿಯಾದ ಕ್ಷಣಗಳನ್ನು ನೆನಪಿಸಿತು ಗಿರಿಜಾ.

  2. Ahalya

    ಅಬ್ಬಾ ಎಂತಹ ಜೀವನ!

  3. Kotresh T A M Kotri

    ಕೈ ಎತ್ತಿ ಮುಗಿಯಬೇಕಾದ ಚೇತನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading