ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಕಾಶದಿಂದ ಬಿಟ್ಟ ಹಿಮದ ತೆಳ್ಳನೆ ಸೀರೆ..

ಹಿಮ ಬಂತು ಹಿಮ

Vinathe Sharma1

ವಿನತೆ ಶರ್ಮ

ಚಳಿ ದೇಶವಾದ ಇಂಗ್ಲೆಂಡಿನ ಜನರು ಹವಾಮಾನ ಕುರಿತು ಒಂದು ಕಾಮೆಂಟ್ ಹೇಳಿಯೇ ತಮ್ಮ ಮಾತು ಶುರು ಮಾಡುವುದು.  ನೀಲಿ ಆಕಾಶ ಕಾಣಿಸಿ, ಸೂರ್ಯನ ಬಿಸಿಲು ಬಂದರೆ ಎಲ್ಲರಿಗೂ ಖುಷಿ, ಉತ್ಸಾಹ. ಮಳೆ ಬಂದರೆ ಹೆದರಿ ಓಡಿ ಒಳ ಸೇರುವವರೇ ಹೆಚ್ಚು. ಯಾರೋ ಏಲಿಯನ್ ಗಳು ಬಂದು ಹೊರಗಡೆಯ ಇಡೀ ಪರಿಸರದ ಮೇಲೆ ಬೂದು ಬಣ್ಣ ಎರಚಿ ಚೆಲ್ಲಿ ಅದನ್ನು ಒರೆಸಲು ಮರೆತೆರೇನೋ ಎಂಬಂತೆ ಸದಾ ಮೋಡ ಕವಿದ, ಒಂಥರಾ ಬೆಪ್ಪಿಡುವ ಪ್ರಪಂಚ ಈ ದೇಶದಲ್ಲಿ.

ø;

ø;

ಎಪ್ರಿಲ್ ನಲ್ಲಿ ಮರಗಿಡಗಳ ಚಿಗುರು ಕಾಣಿಸಿ, ಆಗಸ್ಟ್ ನಲ್ಲಿ ಹಣ್ಣುಗಳ ತಿಂದು ಅಕ್ಟೋಬರ್ ಬರುವಷ್ಟರಲ್ಲಿ ಎಲ್ಲರಿಗೂ ಅದೇನೋ ಚಿಂತೆ – ಮತ್ತೆ ಆ ಹಾರಿಬಲ್  ಚಳಿಗಾಲ ಬಂತಲ್ಲಾ! ಪುನಃ ಮೈಮೇಲೆ ದಪ್ಪ ಟಾಪು, ಕೋಟು, ಓವರ್ ಕೋಟು, ವಾಟರ್ ಪ್ರೂಫ್ ಕೋಟು ಬೂಟು, ತಲೆಗೆ ಟೋಪಿ. ಹಾಕಿಕೊಂಡವರಿಗೆ ಸಂಕಟ, ನನಗೇನೋ ನೋಡಲಿಕ್ಕೆ ಚೆಂದ – ಎಷ್ಟೊಂದು ತರಾವರಿ ಡಿಸೈನ್ ಗಳು!!

ಯಾಕೋ ಏನೋ ನಾವಿರುವ ಹಳ್ಳಿಯಲ್ಲಿ ಸ್ಥಳೀಯರು  ಹೇಳುವಂತೆ ಅಷ್ಟೊಂದು ಮಳೆ ಚಳಿ ಇಲ್ಲವಂತೆ!!!  ನಾನಂತೂ ನಂಬಿಲ್ಲ. ಆದರೂ, ಹೋದ ವರ್ಷ ನಮ್ಮ ಮೊದಲ ಚಳಿಗಾಲದಲ್ಲಿ ಯಾಕೋ ಸ್ನೋ-ರಾಯ ಕಣ್ತಪ್ಪಿಸಿ ಮಾಯವಾಗಿದ್ದ.  ಸಾಂತಾ ಜೊತೆ ಉತ್ತರ ಧ್ರುವಕ್ಕೆ ಹೊರಟು ಹೋದನೇನೋ. ನಿರಾಸೆಯಾಗಿತ್ತು. ಈ ಬಾರಿ ಹಾಗಲ್ಲ. ಡಿಸೆಂಬರ್ ನಲ್ಲಿ ಸುಮಾರು ಕಡೆ ಫ್ಲಡ್ ಹಾವಳಿ, ಪಾಪ ಎಷ್ಟೋ ಮಂದಿಗೆ ‘ವಾಟರ್ಡ್ ಡೌನ್’ ಕ್ರಿಸ್ಮಸ್. ಜೊತೆಗೆ ಮತ್ತೊಂದು ಗಾಬರಿ ಕೂಡ – ಅಲ್ಲಲ್ಲಿ ಡಾಫೊಡಿಲ್ ಹೂ ಕಾಣಿಸಿಕೊಂಡಿದೆ, ಅಯ್ಯೊಯ್ಯೋ ಗ್ಲೋಬಲ್ ವಾರ್ಮಿಂಗ್ ಪರಿಣಾಮವೇ ಇದು?

ನಾವೆಲ್ಲಾ ಈ ಬಾರಿಯೂ ಹಿಮದ ದರ್ಶನವಿಲ್ಲ ಎಂದುಕೊಳ್ಳುವಷ್ಟರಲ್ಲೇ ಹವಾಮಾನ ಇಲಾಖೆ ಹೇಳಿತ್ತು – ಜನವರಿಯಲ್ಲಿ ಹಿಮರಾಣಿ ಬರುತ್ತಾಳೆ, ಕಾದಿರಿ. ಮೂರು ದಿನದ ಹಿಂದೆ ಕಾರನ್ನ ರಸ್ತೆಗಿಳಿಸಿದರೆ ಅದು ಜಾರೋಬಂಡಿ, ಗಿರಿಗಿಟ್ಟಲೆ ಎಲ್ಲಾ ಆಡೋದೇ… ಎದೆ ಡವಡವ ಎಂದಿತ್ತು. ಸದ್ಯ ಮೈಕೆಲ್  ಶೂಮಶರ್ ನ ಸ್ಥಿತಿ ಬರಲಿಲ್ಲ. ರಸ್ತೆ ಮೇಲೆಲ್ಲಾ ಬ್ಲಾಕ್ ಐಸ್. ಮೈನಸ್ ಡಿಗ್ರಿ ಆಕಾಶದಿಂದ ಅದೇ ಆ ಏಲಿಯನ್ಗಳು ಬಿಟ್ಟ ಹಿಮದ ತೆಳ್ಳನೆ ಸೀರೆ.

ವಾಹ್.  ಜನವರಿ ೧೭ರ ಬೆಳಿಗ್ಗೆ ಎದ್ದು ನೋಡಿದರೆ ಹಿಂದಿನ ರಾತ್ರಿಯೆಲ್ಲಾ ಸುರಿದಿದ್ದ ಹಿಮ! ಎಲ್ಲೆಲ್ಲೂ  ಬೆಳ್ಳನೆಯ ಹಿಮ ಸುಂದರಿ. ತಿಂಡಿ ತಿಂದು, ಬೆಚ್ಚಗಿನ ಬಟ್ಟೆಗಳ ಪದರಗಳು ವಾಟರ್ ಪ್ರೂಫ್ ಟಾಪು ಬಾಟಮ್ಮು, ಸ್ನೋ ಬೂಟುಗಳನ್ನ ಹಾಕಿಕೊಂಡು ಹೊರ ಹೋಗಿ ಸ್ನೋ ಮ್ಯಾನ್ ಬೊಂಬೆಯನ್ನ ಮಾಡಿ ನಕ್ಕೆವು. ಆಪಲ್ ಮರದಿಂದ ಹಿಮವನ್ನು ಮೈಮೇಲೆ ಉದುರಿಸಿಕೊಂಡು ಅರಚಿದೆವು; ಹಿಮಚೆಂಡು ಮಾಡಿ ಕೋಲು ಹಿಡಿದು ಕ್ರಿಕೆಟ್ ಆಡಕ್ಕಾಗುವುದಾ ನೋಡಿದೆವು. ಮುಖದ ಮೇಲೆ ಮುಸುಕನ್ನ ಎಳೆದುಕೊಂಡು ಸ್ತಬ್ಧಚಿತ್ರದಂತೆ ಇದ್ದ ಆ ಸುಂದರಿಯ ಕೆಲ ಚಿತ್ರಗಳು ಇಲ್ಲಿವೆ. ಮಧ್ಯಾನ್ಹ ಮೂಳೆ ಕೊರೆಯುವ ಚಳಿಯಲ್ಲಿಕಡ್ಡಾಯ ಫ್ಯಾಮಿಲಿ ವಾಕ್ ಗೆ ಸೀಮಿತ ಅರಣ್ಯ ಪ್ರದೇಶಕ್ಕೆ ಹೋದರೆ ಅಲ್ಲಿ ಆಗಲೇ ಹಿಮವೆಲ್ಲಾ ಕರಗಿತ್ತಲ್ಲಾ!

ø;

ø;

ø;

 

‍ಲೇಖಕರು Admin

18 January, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading