ಪ್ರಭುತ್ವ ಮತ್ತು ಸಾಂಸ್ಕೃತಿಕ ಯಜಮಾನಿಕೆಯ ಒತ್ತಾಸೆ
ಡಾ ಎಸ್ ಬಿ ಜೋಗೂರ
‘ಗ್ಲೋಬಲ್ ವಿಲೇಜ್’ ಎನ್ನುವ ಪರಿಕಲ್ಪನೆಯ ಅಡಿಯಲ್ಲಿ ಬಹುತ್ವದ ಲೋಕಲ್ ಸಾಂಸ್ಕೃತಿಕ ಅಸ್ಮಿತೆಯನ್ನು ಏಕತ್ವದ ಒಳಗಡೆ ತುರುಕಿ, ಕರಗಿಸಿಬಿಡುವ ಭರಾಟೆ ಜಾಗತೀಕರಣ ಪ್ರಕ್ರಿಯೆಯೊಂದಿಗೆನೇ ಆರಂಭವಾಯಿತು. 1990 ರ ದಶಕದ ಮೊದಲು ಈ ಬಗೆಯ ಕೆಲಸವನ್ನು ಪಾಶ್ಚಾತ್ತೀಕರಣಕ್ಕೆ ಗುತ್ತಿಗೆ ನೀಡಿದಂತಿತ್ತು. ಅದಕ್ಕಿಂತಲೂ ಮೊದಲು ವಸಾಹತೀಕರಣ ಈ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಪರೋಕ್ಷವಾಗಿ ಹತ್ತಿಕ್ಕುವ, ಆ ಮೂಲಕ ಯುರೋಪಿನ ರಾಷ್ಟ್ರಗಳ ಸಾಂಸ್ಕೃತಿಕ ಯಜಮಾನಿಕೆಯನ್ನು ಇತರೆ ಸಣ್ಣ ಪುಟ್ಟ ಪೂರ್ವದ ರಾಷ್ಟ್ರಗಳ ಮೇಲೆ ಹೇರುವ ಹುನ್ನಾರ ಮಾಡುತ್ತಲೇ ಬಂದಿರುವ ಬಗ್ಗೆ ಸಾಕಷ್ಟು ಚಾರಿತ್ರಿಕವಾದ ಆಧಾರಗಳಿವೆ. ಕೇವಲ ಭೌತಿಕ ಜೀವನದಲ್ಲಿಯ ಶ್ರೇಷ್ಟತೆ ಮಾತ್ರವಲ್ಲದೇ, ತಮ್ಮ ಆಲೋಚನೆಗಳು ಮಾತ್ರ ಆಲೋಚನೆ, ಮಿಕ್ಕ ಪೂರ್ವದ ರಾಷ್ಟ್ರಗಳ ಆಲೋಚನೆಗಳೆಲ್ಲವೂ ತಮ್ಮ ಆಲೋಚನೆಗಳ ಪ್ರಭಾವದಿಂದ ಬಾಲಿಶವಾದ ನಕಲು ಎಂದು ಸಾರುತ್ತಲೇ ಪೂರ್ವದ ಸಂಸ್ಕೃತಿಯನ್ನು ಹೀಗಳೆಯುವ ಪರಿಪಾಠವನ್ನು ಬಿತ್ತಿದ ಯುರೋಪಿನ ಸಾಂಸ್ಕೃತಿಕ ಯಜಮಾನಿಕೆ ಸಣ್ಣ -ಪುಟ್ಟ ಅನನ್ಯವಾದ ಸಂಸ್ಕೃತಿಗಳನ್ನು ನುಂಗಿ ನೀರು ಕುಡಿಯುತ್ತಲೇ ಸಾಮ್ರಾಜ್ಯಶಾಹಿ ದಾಹವನ್ನು ಹಿಂಗಿಸಿಕೊಂಡಿದೆ. ಸಣ್ಣ ಸಂಸ್ಕೃತಿಗಳನ್ನು ನುಂಗುವ ಹಪಾಪಿತನ ಎಲ್ಲ ಬಲಾಢ್ಯ ರಾಷ್ಟ್ರಗಳಿಗಿರುವ ಒಂದು ಸಹಜ ಗುಣ. ತನಗೆ ಬೇಕಾಗಿರುವದನ್ನು ಪಡೆಯಲು ಎಲ್ಲ ಬಗೆಯ ಷಡ್ಯಂತ್ರಗಳನ್ನು ಬಳಸುವ, ಹೇರುವ ಆ ಮೂಲಕ ಪರೋಕ್ಷವಾಗಿ ಜನವಿರೋಧಿ ನೀತಿಯ ಬುಡದ ಮೇಲೆಯೇ ಸಾಮ್ರಾಜ್ಯ ಕಟ್ಟುವ, ಆಳುವ ಕ್ರಿಯೆಯನ್ನು ಪೋಷಿಸಿಕೊಂಡು ಬರುವುದು ಚರಿತ್ರೆಯುದ್ದಕ್ಕೂ ನಡೆದಿದೆ. ಇದನ್ನು ಗಮನದಲ್ಲಿರಿಸಿಕೊಂಡೇ ಮಾರ್ಕ್ಸ್ ಅಸ್ತಿತ್ವದಲ್ಲಿರುವ ಸಮಾಜಗಳ ಚರಿತ್ರೆ ಎನ್ನುವದು ವರ್ಗ ಸಂಘರ್ಷವೇ ಆಗಿದೆ ಎಂದಿದ್ದರು.

ವಿಶ್ವದ ಬಹುತೇಕ ಅನ್ಯ ಸಂಸ್ಕೃತಿಗಳು ತಮ್ಮ ತಮ್ಮ ಸಾಂಸ್ಕೃತಿಕ ಶ್ರೇಷ್ಟತೆಯ ನಡುವೆಯೇ ಪಶ್ಚಿಮದ ಸಂಸ್ಕೃತಿಯನ್ನು ಅನುಕರಣೆ ಮಾಡತೊಡಗಿದ್ದೇ ತನ್ನದಲ್ಲದ ಸಂಸ್ಕೃತಿಯನ್ನು ಅಂತರ್ಗತ ಮಾಡಿಕೊಳ್ಳುವ, ಆ ಮೂಲಕ ಯುರೋಪಿನ ರಾಷ್ಟ್ರಗಳು ಬಯಸುತ್ತಿರುವ ಸಾಂಸ್ಕೃತಿಕ ಯಜಮಾನಿಕೆಯ ನೊಗ ಹೊರಲು ಸಜ್ಜಾಗುವ ಕ್ರಿಯೆಗೆ ಅಣಿಯಾಗತೊಡಗಿದರು. ಈಗಂತೂ ಈ ಪಶ್ಚಿಮದ ಪ್ರಭಾವದ ತೀವ್ರತೆ ಎಷ್ಟಿದೆ ಎಂದರೆ ಅದನ್ನು ದಿಪಂಕರ ಗುಪ್ತಾ ಎನ್ನುವ ಸಮಾಜಶಾಸ್ತ್ರಜ್ಞ ‘ಘಜಣಠಥಛಿಚಿಣಠಟಿ’ ಎಂದೇ ಕರೆದರು. ಈ ಪಾಶ್ಚಾತ್ತೀಕರಣ ಎನ್ನುವದು ಒಂದು ಬಗೆಯ ಅಮಲು ಹಾಗೂ ಗೀಳಾಗಿ, ಗಾಢವಾಗಿ ವಿಶ್ವದ ಸಣ್ಣ ಪುಟ್ಟ ಸಂಸ್ಕೃತಿಗಳನ್ನು ಪ್ರಭಾವಿಸುತ್ತಾ ಅವುಗಳನ್ನು ಕಸಗೂಡಿಸುತ್ತ ಸಾಗಿಬರುವ ಮೂಲಕ ಸಾಂಸ್ಕೃತಿಕ ಯಜಮಾನಿಕೆಗೆ ರಹದಾರಿ ಮಾಡಿಕೊಟ್ಟಿರುವದಿದೆ. ಸದ್ಯದ ಜಾಗತೀಕರಣದಲ್ಲೂ ಮುಕ್ತ ಮಾರುಕಟ್ಟೆಯ ಹೆಸರಲ್ಲಿ ನಮ್ಮದೇ ನೆಲದ ಉತ್ಪಾದನೆಯೊಂದು ಅಗಾಧವೆನಿಸುವಂತೆ ಮಾರ್ಪಾಟು ಮಾಡುವ ಕ್ರಮ, ಮತ್ತು ಅದನ್ನು ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಉತ್ಪಾದಿಸುವ ಮಾರುವ ಕ್ರಮಕ್ಕೂ ಅಂದಿನ ವಸಾಹತುಶಾಹಿ ಧೋರಣೆಗೂ ತೀರಾ ಅಂತರಗಳು ಕಾಣುವದಿಲ್ಲ.
ಯುರೋಪಿನಲ್ಲಿ ಮುಂಚಿನಿಂದಲೂ ರಾಜಕೀಯ ಪ್ರಭುತ್ವ ಮತ್ತು ಸಾಮ್ರಾಜ್ಯದ ವಿಸ್ತರಣೆಯ ದಾಹ ಹೇಗಿತ್ತು ಎನ್ನುವದನ್ನು ಕಿಪ್ಲಿಂಗ್ ಮತ್ತು ಕೊನ್ರಾಡ್ ತೋರಿಸಿಕೊಟ್ಟಿರುವದಿದೆ. ಇವರು ಮಾತ್ರವಲ್ಲದೇ ಮ್ಯಾಕ್ಸ್ ಮುಲ್ಲರ್, ಬೆಂಜಾಮಿನ್ ಕಿಡ್, ಡಾವರ್ಿನ್, ರೆನಾನ್, ಚಾಲ್ಸರ್್ ಟೆಂಪಲ್ ಮುಂತಾದವರು ಕೂಡಾ ಯುರೋಪಿನ ಸಾಂಸ್ಕೃತಿಕ ಶ್ರೇಷ್ಟತೆಯನ್ನು ಒಪ್ಪಿಕೊಂಡೇ ಮಾತನಾಡುವದಿದೆ. ಯುರೋಪಿಯನ್ನರು ಆಳುವ ವರ್ಗ, ಮಿಕ್ಕವರು ಆಳಿಸಿಕೊಳ್ಳುವ ವರ್ಗ. ಎನ್ನುವದನ್ನು ನೇರವಾಗಿಯೇ ಇವರು ಪ್ರತಿಪಾದಿಸುವ ರೀತಿಯನ್ನು ಎಡ್ವರ್ಡ್ ಸೈದ್ ತಮ್ಮ ಕೃತಿ ‘ಕಲ್ಚರಲ್ ಇಂಪೀರಿಯಲಿಜಂ’ ಎನ್ನುವದರಲ್ಲಿ ಚರ್ಚಿಸಿದ್ದಾರೆ. ಕೇವಲ ಇವರು ಮಾತ್ರವಲ್ಲ ಇಂಥಾ ಇನ್ನೂ ಅನೇಕ ಅಧಿಕೃತ ವಕ್ತಾರರು ಕೂಡಾ ಯುರೋಪಿನ ಎದುರಲ್ಲಿ ನಿಂತು ಬಣ್ಣದ ತಗಡಿನ ತುತ್ತೂರಿಯನ್ನು ಊದುವವರಿದ್ದಾರೆ. ಈ ಸಾಂಸ್ಕೃತಿಕ ಯಜಮಾನಿಕೆಯ ಪಾರುಪತ್ಯ ಹೊರಲು ಹೊರಟ ಯುರೋಪಿನ ಸಂಸ್ಕೃತಿಯಲ್ಲಿಯೂ ಜನಾಂಗೀಯ ತಾರತಮ್ಯಗಳು ಅಡಕವಾಗಿದ್ದವು ಎನ್ನುವದನ್ನು ಎಸ್.ಜೆ.ಗೌಲ್ಡ್ ಹಾಗೂ ನ್ಯಾನ್ಸಿ ಗೌಲ್ಡ್ ಎನ್ನುವ ಚಿಂತಕರು ಅಭಿಪ್ರಾಯಪಟ್ಟಿರುವದಿದೆ. ಭಾರತದಂತಹ ಸಾಂಪ್ರದಾಯಿಕ ನೆಲದಲ್ಲಿ ಮುಕ್ತ ಶಿಕ್ಷಣದ ಹೆಸರಲ್ಲಿ ಇಂಗ್ಲಿಷನ್ನು ಕಲಿಸುವ ಜೊತೆಗೆ ಆಂಗ್ಲರ ಶ್ರೇಷ್ಟತೆಯನ್ನು ಕೂಡಾ ಪರೋಕ್ಷವಾಗಿ ಹೇರಲಾಯಿತು.

ಪೂರ್ವದ ರಾಷ್ಟ್ರಗಳ ಮೇಲೆ ತಮ್ಮ ಸಾಂಸ್ಕೃತಿಕ ಶ್ರೇಷ್ಟತೆಯನ್ನು ಖುದ್ದಾಗಿ ತಾವೇ ಘೋಷಿಸಿಕೊಂಡು ಇತರರ ಸಂಸ್ಕೃತಿಯನ್ನು ಕೀಳು ಎಂದು ಪರಿಭಾವಿಸುತ್ತಾ ಬರುವ ಜೊತೆಗೆ, ವೆಸ್ಟ್ ಇಂಡೀಜ್ ನ ಕಪ್ಪು ಜನಾಂಗದವರು ಹುಟ್ಟಿದ್ದೇ ಇವರ ಸೇವೆಗಾಗಿ ಎನ್ನುವಂತೆ ನೋಡಿಕೊಂಡರು. ಕುಂಬಳಕಾಯಿಯನ್ನು ಬೆಳೆಯುವದರಲ್ಲಿಯೇ ನಿಮ್ಮ ಹಿತವಡಗಿದೆ ಅದನ್ನು ಮೀರಿದರೆ ನೀವು ಮತ್ತೆ ಗುಲಾಮಗಿರಿ ಶಾಪಕ್ಕೆ ಸಿಲುಕುವಿರಿ ಎಂದು ಹೇಳುತ್ತಲೇ ಅವರನ್ನು ದಾಸ್ಯದಲ್ಲಿ ಇಡಲಾಯಿತು. ಬ್ರಿಟಿಷರ ವಸಾಹತು ನೀತಿಯಲ್ಲಿದ್ದ ಸಮೃದ್ಧಿ ಮತ್ತು ಪ್ರಗತಿಗೆ ಈ ಕಪ್ಪು ಜನಾಂಗವೇ ಆಧಾರವಾಗಬೇಕಾಯಿತು. ಅವರ ಶ್ರಮ ಇವರಿಗಾಗಿ ಎನ್ನುವ ಅಘೋಷಿತ ಕರಾರೊಂದು ಆಗ ಪ್ರಚಲಿತದಲ್ಲಿತ್ತು. ಕರಿಯರು ಯಾವುದೇ ಕಾರಣದಿಂದಲೂ ಸಾಮಾಜಿಕ ಅಂತಸ್ತಿನ ವಿಷಯವಾಗಿ ಮೇಲ್ಮುಖ ಸಂಚಲನೆ ಹೊಂದದೇ ಕೇವಲ ಸಮಾನಾಂತರ ಸಂಚಲನೆಯಲ್ಲಿಯೇ ತೃಪ್ತಿ ಅನುಭವಿಸುವ ಮನ:ಸ್ಥಿತಿಯೊಂದನ್ನು ಸೃಷ್ಟಿಸಿದ ಕೊಡುಗೆ ಈ ಯುರೋಪಿನ ಮೇಲಿನ ಸ್ತರಗಳ ಕುಟಿಲತನಕ್ಕೆ ಸಲ್ಲಬೇಕು.
ಆಂಗ್ಲ ಭಾಷೆಯನ್ನು ಜಾಗತಿಕ ಭಾಷೆ ಎನ್ನುವ ಭ್ರಮೆಯನ್ನು ಪ್ರಭುತ್ವದ ಮೂಲಕ, ಸಾಂಸ್ಕೃತಿಕ ಯಜಮಾನಿಕೆಯ ಮೂಲಕ ಬಿತ್ತಲಾಯಿತು. ಪರಿಣಾಮವಾಗಿ ಅನೇಕ ಸಣ್ಣ ಪುಟ್ಟ ಪ್ರಾದೇಶಿಕ ಭಾಷೆಗಳ ನಾಲಿಗೆಯನ್ನೇ ಕತ್ತರಿಸಿದಂತಾಯಿತು. ‘ಲಿಂಗ್ವಾ ಫé್ರಾಂಕಾ’ ಎನ್ನುವ ಮೂಲಕ ಅದನ್ನು ಜಾಗತಿಕ ಭಾಷೆ ಎಂದು ಮಿಕ್ಕ ಭಾಷೆಗಳ ಮೇಲೆ ಹೇರುವದು ಮಾತ್ರವಲ್ಲದೇ ಅದನ್ನು ಕಲಿಯದಿದ್ದರೆ ಉಳಿಗಾಲವಿಲ್ಲ ಎನ್ನುವ ಸ್ಥಿತಿಯನ್ನು ನಿರ್ಮಾಣ ಮಾಡಲಾಯಿತು. ಥಾಮಸ್ ಕಾರ್ಲೈಲ್ ಮತ್ತು ರಸ್ಕಿನ್ ರಂಥಾ ಚಿಂತಕರು ಕೂಡಾ ಇಂಗ್ಲಂಡ್ ಆಳಬಹುದಾದ, ಪ್ರಭುತ್ವ ಸ್ಥಾಪಿಸಬಹುದಾದ ರಾಷ್ಟ್ರ. ಅದು ತನ್ನ ವಸಾಹತುಗಳನ್ನು ವಿಸ್ತರಿಸುವ ಮೂಲಕ ವೃದ್ಧಿಯಾಗುತ್ತದೆ ಎನ್ನುವ ಭವಿಷ್ಯ ನುಡಿದಿರುವದಿದೆ. ಇಂಗ್ಲಂಡ ಮಾತ್ರ ಆಳುವ, ಪ್ರಭುತ್ವ ಪ್ರತಿಷ್ಟಾಪಿಸುವ ರಾಷ್ಟ್ರ ಎನ್ನುವಾಗ ಪೂರ್ವದ ಅನೇಕ ರಾಷ್ಟ್ರಗಳ ಉಪೇಕ್ಷೆಯೂ ಅಲ್ಲಿ ಅಡಕವಾಗಿತ್ತು. ಹೀಗೆ ಯುರೋಪಿನ ಸಾಮ್ರಾಜ್ಯಶಾಹಿ ಧೋರಣೆಗೆ ಅಂಟಿಕೊಂಡು ಅದನ್ನು ಬೆಂಬಲಿಸುವಂತೆ ಮಾತನಾಡಿದವರು ಹಲವರು ಚಿಂತಕರು, ಬರಹಗಾರರಿದ್ದಾರೆ. ಹೀಗೆ ಮಾತನಾಡುವವರು ಕೂಡಾ ಮೇಲರಿಮೆಯ ಮಿತಿಯಿಂದ ಹೊರಬಂದವರಲ್ಲ.
ಬ್ರಿಟಿಷರ ಸಾಮಾರಾಜ್ಯಶಾಹಿ ಧೋರಣೆ ಈ ಕೆಳಗಿನ ಅನೇಕ ಆಕ್ರಮಣಗಳಿಗೆ, ದಬ್ಬಾಳಿಕೆಗೆ ಕಾರಣವಾಗಿದೆ. ಅದು 1839-42 ರ ಅವಧಿಯಲ್ಲಿ ಚೈನಾದಲ್ಲಿ ನಡೆದ ಯುದ್ಧವಾಗಿರಬಹುದು.1840 ರ ಸಂದರ್ಭದಲ್ಲಿ ದಕ್ಷಿಣ ಆಫé್ರಿಕಾದ ಕಾಫéಿರರ ಮೇಲೆ ಮತ್ತು ನ್ಯುಜಿಲ್ಯಾಂಡಿನ ಮಾವೋರಿಗಳ ಮೇಲಿನ ಆಕ್ರಮಣವಾಗಿರಬಹುದು. ಹಾಗೆಯೇ 1854-56 ರ ಕ್ರಿಮಿಯನ್ ಯುದ್ಧ, 1854 ರ ಬಮರ್ಾದ ಕೆಲ ಪ್ರದೇಶದ ಮೇಲಿನ ಆಕ್ರಮಣ, 1856 ರಲ್ಲಿ ಚೈನಾದ ಮೇಲೆ ಎರಡನೆ ಬಾರಿ ಆಕ್ರಮಣ, 1857 ರಲ್ಲಿ ಪಷರ್ಿಯಾದ ಮೆಲೆ ಧಾಳಿ, 1857 ಭಾರತದ ದಂಗೆಯನ್ನು ಹತ್ತಿಕ್ಕಿದ್ದು, 1882 ರಲ್ಲಿ ಈಜಿಪ್ತಿನ ಮೇಲೆ ಧಾಳಿ ಮಾಡುವ ಮೂಲಕ ಸಾಮ್ರಾಜ್ಯ ವಿಸ್ತರಣೆಯ ದಾಹವನ್ನು ಮತ್ತೆ ಮತ್ತೆ ತೋರಿರುವದಿದೆ. ಜೊತೆಗೆ ಬ್ರಿಟಿಷ್ ಸಂಸ್ಕೃತಿಯ ಹೆಸರಲ್ಲಿ ಅವರ ವಿಚಾರ, ಭಾಷೆ, ಅಭಿರುಚಿ, ನೈತಿಕತೆ, ಕುಟುಂಬ, ಚರಿತ್ರೆ, ಕಲೆ, ಶಿಕ್ಷಣ ಮುಂತಾದವುಗಳನ್ನು ಸಾಂಸ್ಕೃತಿಕ ಯಜಮಾನಿಕೆಯ ಮೂಲಕ ಹೇರಿದ್ದು, ಹಾಗೆ ಅವರಿಗೆ ಹೇರಲು ಸಾಧ್ಯವಾದದ್ದು ಅವರು ಈಗಿನ ಬಹುರಾಷ್ಟ್ರಿಯ ಕಂಪನಿಗಳ ಹಾಗೆ ವಸ್ತು ಹಾಗೂ ಉತ್ಪಾದನೆಯ ಸಾಧನಗಳ ಮೇಲೆ ಹೊಂದಿರುವ ಒಡೆತನವೇ ಆಗಿತ್ತು. ಆ ಮೂಲಕ ಯುರೋಪೇತರ ರಾಷ್ಟ್ರಗಳನ್ನು ನೋಡುವಲ್ಲಿಯೇ ಒಂದು ವಕ್ರ ದೃಷ್ಟಿ ಅದಾಗಲೇ ಬೆಳೆದಿತ್ತು. ಸಾಂಸ್ಕೃತಿಕ ಜಗತ್ತಿನ ಆಯಾಮಗಳಲ್ಲಿ ತನ್ನದೇ ಸರ್ವಶ್ರೇಷ್ಟ, ಮಿಕ್ಕವುಗಳೆಲ್ಲವುಗಳು ತನ್ನ ಯಜಮಾನಿಕೆಗೆ ಒಳಪಡಬೇಕು ಎನ್ನುವ ಒತ್ತಾಸೆಯನ್ನು ಬೇರೆ ಬೇರೆ ಮಾರ್ಗಗಳ ಮೂಲಕ ಹೇರುವ ಕ್ರಮವನ್ನು ವ್ಯವಸ್ಥಿತಗೊಳಿಸಲಾಯಿತು.
19 ನೇ ಶತಮಾನದ ಸಂದರ್ಭದಲ್ಲಿ ದೇಶದ ಆರ್ಥಿಕ ಚಟುವಟಿಕೆಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ವಸಾಹತೀಕರಣ ಅನಿವಾರ್ಯ ಅದರಿಂದ ಮಾತ್ರ ಸಮೃದ್ಧಿ ಮತ್ತು ಪ್ರಗತಿ ಸಾಧ್ಯ ಎಂದು ಪೂರ್ವದ ನೆಲೆಗಳನ್ನು ವ್ಯವಸ್ಥಿತವಾಗಿ ನಂಬಿಸುವ ಮೂಲಕ ತಮ್ಮ ಹಿತಸಾಧನೆಗೆ ಅಣಿಯಾದರು. ಇದು ಸದ್ಯ ಜಾಗತೀಕರಣದಿಂದ ಲಾಭಗಳೇ ಹೆಚ್ಚು ಎನ್ನುವವರ ಮಾತಿಗಿಂತ ತೀರ ಭಿನ್ನವೆನಿಸುವದಿಲ್ಲ.







ನೀವೇನೇ ಹೇಳಿ ಸಾರ್,ಕರ್ನಾಟಕ ರಾಜ್ಯಕ್ಕಿಂತ ದೊಡ್ಡದಿರುವ ಇಂಗ್ಲೆಂಡ್ನನ ನಾಗರಿಕರು ತಮ್ಮ ಭಾಷೆಯನ್ನು ವಿಶ್ವದ ಬಹುತೇಕ ಕಡೆ ಅನಿವಾರ್ಯ ಎನ್ನುವಂತೆ ಮಾಡಿದ ರೀತಿಗೆ ಶಹಬಾಸ್ ಹೇಳೆಲೆ ಬೇಕು …