ಅಶೋಕ ಹೊಸಮನಿ
ಮರಣದ ದಿನ
ನಿನ್ನನ್ನ
ಸಂಧಿಸಿದಾಗಲೇ
ಚಂದಿರ ತುಂಡಾಗಿದ್ದ
ನಡುಮಧ್ಯಾಹ್ನದ ಗಂಟಲು ಆರಿತ್ತು
ನಿನ್ನ ಕೊನೆಯ ಭೇಟಿಗೆ ಪರಿತಪಿಸುವ ಜನಗಳು
ಹೂವಿನ ಹಾರಗಳ ಹಳಹಳಿಕೆಗಳು
ಕೊನೆಗೊಳ್ಳದಿರಲೆಂದು
ಹಾರೈಸುವ ತಾಯಂದಿರು
ಹಸುಳೆಗಳು
ನೋವಿನ ಬೀದಿಗಳು
ನಿನ್ನ ಮರಣದ ದಿನ
ಸವೆದ ಪಾದಗಳು
ಬತ್ತಿದ ಕಣ್ಣಾಲಿಗಳು
ದಣಿದಿಹ ತೋಳುಗಳು
ಏನನ್ನೂ ಉಣಲಾಗಲಿಲ್ಲ
ಉಡಲಾಗಲಿಲ್ಲ
ನಿನ್ನ ಮರಣದ ದಿನ
ಬಿರು ಬಿಸಿಲಿನ ತೋಳ ತೆಕ್ಕೆಯಲ್ಲಿ
ಮುದುಡಿಹ ಗುಬ್ಬಿಯ ಬಾಯಾರಿಕೆಯನ್ನ
ಹೇಗೆ ಮುಂದೂಡಬಲ್ಲೆ?
ನಿನ್ನ ಮರಣದ ದಿನ
ಗಾಯಗಳು ಕ್ಷಮೆಯಾಚಿಸಿದರೂ
ಇರುಳು ಕೊಂಡೊಯ್ದ ದಾರಿಗುಂಟ
ಕೊಲೆಗಾರನ ಸಂಚುಗಳು
ಏನಾಗಿದ್ದವು?
ಯಾವ ಗುರಿಯತ್ತ ಚಲಿಸಿದವು?
ನಿನ್ನ ಮರಣದ ದಿನ
ನಕ್ಷತ್ರದ ಬಿಕ್ಕಳಿಕೆ
ವೃತ್ತದ ಜನಜಂಗುಳಿಯ
ವಿದಾಯದ ಕಂಬನಿ
ಏನನ್ನು ಅರುಹೀತು?
ನಿನ್ನ ಮರಣದ ದಿನ
ನಿತ್ರಾಣ ಗಡಿಯಾರವು
ಉಸಿರಿಲ್ಲದ ಉಂಗುರವು
ಉಡುಗೊರೆಯನ್ನಾಗಿ
ಏನನ್ನು ಯಾಚಿಸಬಹುದು
ಸೃಷ್ಟಿಕರ್ತನಲ್ಲದ ಸೃಷ್ಟಿಕರ್ತನನ್ನ
0 Comments