ರೂಪ ಹಾಸನ
ನಾವು ಮನೆ ಕಟ್ಟಲು ಕೊಂಡ ಸೈಟಿನಲ್ಲಿ ಮೊದಲಿಗೆ ಗಿಡ-ಮರ, ಬಳ್ಳಿ-ಪೊದೆಗಳು ತುಂಬಿತ್ತು. ಅದರಲ್ಲಿ ಅದೆಷ್ಟು ಜಾತಿಯ ಹಕ್ಕಿ-ಕೀಟ, ಹುಳು-ಹುಪ್ಪಟೆಗಳು ವಾಸವಾಗಿದ್ದವೋ! ಆ ಹಸಿರು ರಾಶಿಯನ್ನು ಕಡಿದು ಸಪಾಟಾಗಿಸಿ ನಾವು ಮನೆ ಕಟ್ಟಿಕೊಂಡು ವಾಸಕ್ಕೆ ಬಂದಾಗಲೇ ಅವುಗಳ ಜಾಗವನ್ನು ನಾವು ಆಕ್ರಮಿಸಿಕೊಂಡಿರುವ ಅರಿವಾಗಿದ್ದು! ಮೊದ ಮೊದಲು ಸೊಳ್ಳೆಗಳಂತೂ ಯುದ್ಧಕ್ಕೆ ನಿಂತ ಸೈನಿಕರಂತೆ ದಾಳಿ ಇಡುತ್ತಿದ್ದವು. ಇದರೊಂದಿಗೆ ಇರುವೆ, ಗೊದ್ದ, ನೆಂಟರಹುಳ, ಮಿಡತೆ, ನೊಣ, ಕಣಜ, ಕುದುರೆಹುಳ….. ನಾನು ನೋಡಿಯೇ ಇರದ, ಹೆಸರೂ ಗೊತ್ತಿರದ ಪುಟ್ಟಪುಟ್ಟ ಕೀಟ, ಹುಳು, ಹುಪ್ಪಟೆಗಳು ಕಿಟಕಿಯೊಳಗಿಂದ ನಮ್ಮ ಮನೆಯನ್ನು ಪ್ರವೇಶಿಸಿ, ಮತ್ತೆ ಹೊರಹೋಗಲು ತಿಳಿಯದೇ ನಮ್ಮನ್ನು ಗೋಳುಗುಟ್ಟಿಸಿ, ನಾವು ರಾತ್ರಿ ಕಿಟಕಿ ಬಾಗಿಲು ಹಾಕಿದ ನಂತರ ಅದರ ಗಾಜಿಗೆ ಬಡಿದು ಬಡಿದು ಬೆಳಗಾಗುವಷ್ಟರಲ್ಲಿ ಸತ್ತು ಬಿದ್ದಿರುತ್ತಿದ್ದವು. ಅವುಗಳಿಗೇನು ಉಸಿರು ಕಟ್ಟುತ್ತಿತ್ತೋ? ಆತಂಕವಾಗುತ್ತಿತ್ತೋ? ತಮ್ಮ ಸ್ಥಳವನ್ನು ನಾವು ಆಕ್ರಮಿಸಿಕೊಂಡಿದ್ದಕ್ಕೆ ಆಕ್ರೋಶ ಮೂಡುತ್ತಿತ್ತೋ? ಸಂಕಟದ ಆಕ್ರಂದನ ಮಾಡುತ್ತಿದ್ದವೋ? ಯಾರು ಬಲ್ಲರು?ಪ್ರತಿ ಕಿಟಕಿಯ ಗೋಡೆಯ ಚೌಕಟ್ಟಿನಲ್ಲಿ ಅಸಹಾಯಕತೆಯಿಂದ ಹೆಣವಾಗಿ ಬಿದ್ದ ಈ ಜೀವರಾಶಿಯನ್ನು ಕಂಡು ಕರುಳು ಚುರುಗುಡುತ್ತಿತ್ತು. ದಿನ ಬೆಳಗ್ಗೆ ವ್ಯಥೆಯಿಂದಲೇ ಅವುಗಳನ್ನು ಗುಡಿಸಿ ತೆಗೆಯುತ್ತಿದ್ದೆ.
ಚೆಂದ ಚೆಂದದ ಚಿಟ್ಟೆ, ಪತಂಗ, ಏರೋಪ್ಲೇನ್ ಚಿಟ್ಟೆ, ಬಣ್ಣಬಣ್ಣದ ಪುಟ್ಟ ಹಕ್ಕಿಗಳೂ ದಿಕ್ಕು ತಪ್ಪಿ ನಮ್ಮ ಮನೆಗೆ ಬರುತ್ತಲೇ ಇದ್ದವು. ಎಷ್ಟೋ ಬಾರಿ ಹೊರಗೆ ಹೋಗಲು ತಿಳಿಯದೇ ಮನೆಯಲ್ಲೇ ಸುತ್ತಿ ಸುತ್ತಿ ಸತ್ತು ಬೀಳುತ್ತಿದ್ದುದೂ ಉಂಟು. ಪ್ರತಿ ಬಾರಿ ಈ ಜಾಗದ ಮರದಲ್ಲೆಲ್ಲೋ ತನ್ನ ಗೂಡು ಕಟ್ಟಿ ರೂಢಿಯಾಗಿದ್ದ ಗುಬ್ಬಚ್ಚಿ, ಗೀಜಗಗಳು, ಚುಕ್ಕಿ ಮುನಿಯ, ನಮ್ಮ ಮನೆಯೊಳಗೆ ಹುಲ್ಲಿನ ಎಸಳು, ಎಲೆ, ನಾರು, ಹತ್ತಿಯನ್ನೆಲ್ಲಾ ತಂದು ಹಾಕಿ ಹೋಗುವುದು, ಮತ್ತೆ ಬಂದಾಗ ಅದನ್ನೆಲ್ಲಾ ಹುಡುಕುವುದು, ಜೋಡಿಸಿಡುವುದು ಮಾಡುತ್ತಿದ್ದವು.
ಒಮ್ಮೊಮ್ಮೆ ಮನೆಯೊಳಗೆ ಬಂದ ಹಕ್ಕಿಗಳಿಗೆ ಹೊರಗೆ ಹೋಗುವುದು ತಿಳಿಯದೇ ‘ಎಲ್ಲೋ ಬಂದು ಸೇರಿಕೊಂಡುಬಿಟ್ಟಿದ್ದೀನಿ’ ಅಂತ ಗಲಿಬಿಲಿಯಾಗಿ, ದಿಗಿಲಿನಿಂದ ಕೂಗಾಡುತ್ತ ಫ್ಯಾನು, ಅಟ್ಟ, ಪುಸ್ತಕಗಳ ಮಧ್ಯೆ ಸೇರಿಕೊಂಡು ಆತಂಕಪಡ್ತಿತ್ತು. ಅದರ ಗಾಬರಿ ನೋಡಿ ನಮಗೂ, ಪಾಪ! ಅವುಗಳನ್ನ ಹೊರಗೆ ಕಳಿಸಿದ್ರೆ ಸಾಕಪ್ಪ ಅನ್ನಿಸಿಬಿಡುತ್ತಿತ್ತು. ಅದನ್ನು ಹುಷಾರಾಗಿ ಹೊರಗೆ ಕಳಿಸುವ, ಜೊತೆಗೆ ಅವು ಹಾರಾಡುವ ರಭಸದಲ್ಲಿ ನಮಗೆಲ್ಲಿ ಬಡಿದುಬಿಡುತ್ತವೋ ಎಂಬ ಕಳವಳ ನಮ್ಮದು. ನಮ್ಮ ಗಡಿಬಿಡಿ ನೋಡಿ ಮತ್ತಷ್ಟು ದಿಗಿಲಾಗಿ ಗೋಡೆಯಿಂದ ಗೋಡೆಗೆ ಬಡಿದುಕೊಂಡು ಒದ್ದಾಡುತ್ತಾ ಹೊರಗೆ ಹಾರಿ ಹೋಗಲಾಗದ ಆತಂಕ ಅವುಗಳದು.

ಇಂತಹ ಘರ್ಷಣೆಗಳು ಹಲವು ಬಾರಿ ಆದ ಮೇಲೆ ‘ಇದು ಮನುಷ್ಯರ ಮನೆ, ತನ್ನ ಗೂಡು ಕಟ್ಟೋದಿಕ್ಕೆ ಸುರಕ್ಷಿತ ಜಾಗ ಅಲ್ಲ’ ಅಂತ ಅವಕ್ಕೆ ಗೊತ್ತಾಗಿ ಹೋಗಿರ್ಬೇಕು, ಮತ್ತೆ ಬರೋದನ್ನೇ ನಿಲ್ಲಿಸಿಬಿಟ್ಟವು! ಹೀಗೆ ಅದೆಷ್ಟು ಹಕ್ಕಿಗಳ ವಾಸ ಸ್ಥಾನವನ್ನು ನಮ್ಮ ಮನೆ ಕಬಳಿಸಿತ್ತೋ ಗೊತ್ತಿಲ್ಲ.
ಮನೆಗೆ ಬಂದ ಹೊಸದರಲ್ಲಿ ನಮ್ಮ ಮನೆಯ ಕಾಂಪೌಂಡ್ ಗೇಟಿಗೆ ಒಂದು ಪೋಸ್ಟ್ ಬಾಕ್ಸ್ ಸಿಕ್ಕಿಸಿದ್ದೆವು. ಅದರಲ್ಲಿ ಪತ್ರಗಳನ್ನ ಹಾಕುವುದಕ್ಕೆ ಆಗುವುದಿಲ್ಲ ಎಂದು ಪೋಸ್ಟ್ಮನ್ ಅದನ್ನು ಉಪಯೋಗಿಸುತ್ತಲೇ ಇರಲಿಲ್ಲ. ಮನೆಯೊಳಗೇ ಹಾಕಿ ಹೋಗ್ತಿದ್ದ. ಹಲವು ದಿನ ಬಿಟ್ಟು ಅದರಲ್ಲಿ ಕೆಲವು ಪತ್ರಗಳಿರೋದನ್ನ ಅದರ ಗಾಜಿನಿಂದ ನೋಡಿದ ನಾನು ದಿಢೀರನೆ ಅದರೊಳಗೆ ಕೈ ಹಾಕಿದೆ. ಆ ಡಬ್ಬಿಯೊಳಗೆ ಕಣಜಗಳು ಗೂಡು ಕಟ್ಟಿದ್ದು ನನಗೆ ತಿಳಿದಿರಲಿಲ್ಲ. ನೆಮ್ಮದಿಯಾಗಿ ಇದ್ದ ಅವುಗಳ ವಾಸಸ್ಥಾನಕ್ಕೆ ನನ್ನ ‘ಕೈ’ನ ಅತಿಕ್ರಮಣ ಪ್ರವೇಶವಾದ ಕೂಡಲೇ ಕಣಜಗಳು ನನ್ನ ಕೈ ಮೇಲೆ ಆಕ್ರಮಣ ಮಾಡಿ ಕಚ್ಚಿ ಹಾಕಿದವು! ಕಷ್ಟಪಟ್ಟು ಉಜ್ಜಿ ಅವುಗಳಿಂದ ಬಿಡಿಸಿಕೊಂಡಿದ್ದೆ. ಪಾಪ ನಾನು ಉಜ್ಜಿದ ರಭಸಕ್ಕೆ ಎಷ್ಟು ಕಣಜಗಳು ಕೈ ಕಾಲು ಮುರಿದುಕೊಂಡವೋ, ಸತ್ತು ಬಿದ್ದವೋ ಗೊತ್ತಿಲ್ಲ! ಆದರೆ ನನ್ನ ಕೈ ಬೆಲೂನಿನಂತೆ ಊದಿಕೊಂಡು, ತೀವ್ರ ನೋವಿನಿಂದ ಹಲವು ರಾತ್ರಿಗಳನ್ನು ನಿದ್ದೆಯಿಲ್ಲದೇ ಕಳೆದೆ.
ಆದರೆ ಆಗಲೇ ನನಗೆ ಇನ್ನೊಂದು ಮಗ್ಗುಲಿನಿಂದ ಯೊಚಿಸಲು ಸಾಧ್ಯವಾಗಿದ್ದು. ನಾವು ಮನುಷ್ಯರು ಮಾತ್ರ ಇಂತಹ ಹಲವು ಪುಟ್ಟ ಜೀವಿಗಳ ಬದುಕುವ ಹಕ್ಕನ್ನು ನಾಶ ಮಾಡಿ ಈ ಪ್ರಪಂಚವೆಲ್ಲಾ ನಮಗಾಗಿಯೇ ಸೃಷ್ಟಿಯಾಗಿದೆ ಎಂದು ಮೆರೆಯುತ್ತಿರುವುದಿರಬೇಕು. ನಮ್ಮಂತೆಯೇ ಪ್ರತಿಯೊಂದು ಜೀವಿಗೂ ಈ ಭೂಮಿ ಮೇಲೆ ನೆಮ್ಮದಿಯಾಗಿ ಬದುಕುವ ಹಕ್ಕಿದೆ ಎಂಬುದು ನಮ್ಮ ಗಮನಕ್ಕೇ ಬಂದಿರುವುದಿಲ್ಲ. ಅದು ನಮಗೆ ಮುಖ್ಯವೂ ಅಲ್ಲ.
‘ನಮ್ಮ ಜಾಗದೊಳಗೆ ಈ ಕ್ರಿಮಿ-ಕೀಟ, ಹಕ್ಕಿ-ಪ್ರಾಣಿಗಳು ಅತಿಕ್ರಮಣ ಪ್ರವೇಶ ಮಾಡಿಬಿಟ್ಟಿವೆ. ನಮಗೆ ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ’ ಎಂಬುದು ನಮ್ಮ ಆರೋಪ. ಆದರೆ ನಿಜವಾಗಿ ಅವುಗಳ ನೆಮ್ಮದಿಗೆ ನಾವು ಭಂಗ ತಂದಿದ್ದೇವೆ. ಗಿಡ-ಮರ-ಪೊದೆಗಳಲ್ಲಿ ಗೂಡು ಕಟ್ಟಿಕೊಂಡು ಆರಾಮವಾಗಿದ್ದ ಅವುಗಳ ನೆಲೆಗಳನ್ನು ನಾವು ನಾಶ ಮಾಡಿ, ನಮ್ಮ ಊರು, ಮನೆ, ಕಟ್ಟಡ….. ಕಟ್ಟಿಕೊಂಡು, ಅವುಗಳ ಊರು, ಮನೆ, ಗೂಡುಗಳನ್ನು ನಾವು ಆಕ್ರಮಿಸಿಕೊಂಡಿದ್ದೇವೆ! ಈಗ ಅವುಗಳು ಎಲ್ಲಿಗೆ ಹೋಗಬೇಕು?
ಒಂದು ಅಡಿ ಜಾಗ ಹೆಚ್ಚು ಕಡಿಮೆಯಾದರೆ ನಾವು ಜಗಳ ಮಾಡುತ್ತೇವೆ, ವ್ಯಾಜ್ಯ ಹೂಡುತ್ತೇವೆ, ನ್ಯಾಯಾಲಯದ ಕದ ತಟ್ಟುತ್ತೇವೆ. ಆದರೆ, ಈ ಬಡಪಾಯಿ ಪ್ರಾಣಿ ಪಕ್ಷಿಗಳ ವಾಸಸ್ಥಾನವನ್ನು ನಾಶಗೊಳಿಸಿ, ನಾವು ಆಕ್ರಮಿಸಿಕೊಂಡಿದ್ದಕ್ಕೆ ಅವು ನಮ್ಮ ವಿರುದ್ಧ ನ್ಯಾಯಾಲಯಕ್ಕೆ ಹೋಗಬಲ್ಲವೇ? ನ್ಯಾಯ ಕೇಳಬಲ್ಲವೇ?. ನಮ್ಮ ಒಂದು ಮನೆ ಕಟ್ಟಲೇ ಅದೆಷ್ಟು ಪುಟ್ಟ ಜೀವಿಗಳು ತಮ್ಮ ನೆಲೆ ಕಳೆದುಕೊಂಡವೋ, ಬಲಿಯಾದವೋ, ಜೀವ ಕಳೆದುಕೊಂಡವೋ ಲೆಕ್ಕವಿಟ್ಟವರ್ಯಾರು? ಇನ್ನು ಅಭಿವೃದ್ಧಿಯ ಹೆಸರಿನ ನಿರಂತರ ಪ್ರಾಕೃತಿಕ ಅತ್ಯಾಚಾರದಿಂದ ನಾವು ಬೆಲೆ ಕಟ್ಟಲಾಗದಂತಹ ಅಮೂಲ್ಯ ಜೀವರಾಶಿಗಳ ಖಜಾನೆಯನ್ನೇ ಕೊಂದಿದ್ದೇವೆ. ಆದರೆ ಮನುಷ್ಯನಿಗೆ, ಪ್ರಕೃತಿ ತನ್ನ ಅನುಕೂಲಕ್ಕೆ, ಸುಖಕ್ಕೆ, ಸಂತೋಷಕ್ಕೆ ಮಾತ್ರ ಇರುವುದು ಎಂಬ ದುರಹಂಕಾರ. ಹೀಗೆಂದೇ ನಮ್ಮ ಅಭಿವೃದ್ಧಿಯ ಪರಿಕಲ್ಪನೆಗಳೆಲ್ಲ ಮನುಷ್ಯ ಕೇಂದ್ರಿತವಾಗಿವೆ ಜೀವಕೇಂದ್ರಿತವಾಗಿಲ್ಲ ಅಲ್ಲವೇ?
ಉದಾಹರಣೆಗೆ ಪಶ್ಚಿಮಘಟ್ಟದ ಕಾಡುಗಳು. ಅಲ್ಲಿ ಇದುವರೆಗೆ ನಡೆದ ಅನೇಕ ಅಭಿವೃದ್ಧಿ ಕಾರ್ಯಗಳು, ಅವೈಜ್ಞಾನಿಕ ಹಾಗೂ ಅಸೂಕ್ಷ್ಮವೂ ಆದುದರಿಂದ ಅದರ ಶಾಶ್ವತ ದುಷ್ಪರಿಣಾಮಗಳನ್ನು ನಾವಿಂದು ಎದುರಿಸುತ್ತಿದ್ದೇವೆ. ಆನೆ ಮತ್ತಿತರ ವನ್ಯಜೀವಿಗಳು, ಕಾಡು ನಾಶವಾದಂತೆಲ್ಲಾ ನಾಡಿಗೆ ನುಗ್ಗಿ ಬೆಳೆ, ಮನೆ-ಮಠಗಳನ್ನು, ಜನರು ಕಟ್ಟಿಕೊಂಡ ಬದುಕನ್ನು ನಾಶಮಾಡಲು ಪ್ರಯತ್ನಿಸುತ್ತಿವೆ. ಇದು ಅವುಗಳ ತಪ್ಪಲ್ಲ. ಪ್ರಕೃತಿಯ ಸಂಪತ್ತೆಲ್ಲಾ ತನಗಾಗಿ ಮಾತ್ರವೇ ಇರುವುದೆಂಬಂತೆ ಅದನ್ನು ಅಮಾನವೀಯವಾಗಿ ಲೂಟಿ ಮಾಡುತ್ತಿರುವ ಮನುಷ್ಯನ ಪರಮ ಸ್ವಾರ್ಥದ ಮಹಾಪರಾಧದ ಫಲ ಇದು.
ಮುಖ್ಯವಾಗಿ ನಾವು ಗಮನಿಸಬೇಕಿರುವುದು ಅಭಿವೃದ್ಧಿಗಾಗಿ ನಾವು ತೆರುತ್ತಿರುವ ಬೆಲೆ ಏನು? ಹಾಗೂ ಪರಿಸರ ಸಂರಕ್ಷಣೆಗಾಗಿ ನಾವು ತೆರಬೇಕಿರುವ ಬೆಲೆ ಏನು? ಎಂಬುದು. ಪರಿಸರವನ್ನು ನಾಶಮಾಡದೇ ಕಟ್ಟಿಕೊಳ್ಳುವ ಅಭಿವೃದ್ಧಿ ಹಾಗೂ ಅಭಿವೃದ್ಧಿಗೆ ಪೂರಕವಾಗುವಂತೆ ಉಳಿಸಿಕೊಳ್ಳುವ ಪರಿಸರ ಎರಡೂ ನಮಗಿಂದು ಮುಖ್ಯವಾಗಬೇಕು. ಏಕೆಂದರೆ ಪರಿಸರ ಹಾಗೂ ಅಭಿವೃದ್ಧಿ ಎರಡೂ ಯಾವುದೇ ಒಂದು ಪ್ರದೇಶದ ಜನರಿಗೆ ಸೇರಿದ ವಿಷಯವಲ್ಲ. ಅದು ಸಾರ್ವತ್ರಿಕವಾದುದು ಹಾಗೂ ಸಾರ್ವಕಾಲಿಕವಾದುದು. ಅಭಿವೃದ್ಧಿ ಪ್ರಕೃತಿ ಕೇಂದ್ರಿತವಾಗಿದ್ದಾಗ ಅದು ಮಾನವೀಯವೂ ಸಕಲ ಜೀವಪರವೂ ಆಗಿರುತ್ತದೆ. ಆದರೆ ನಾವಿಂದು ಮಾಡುತ್ತಿರುವ ಅಭಿವೃದ್ಧಿ ಮನುಷ್ಯ ಕೇಂದ್ರಿತವಾಗಿರುವುದರಿಂದ ರೂಕ್ಷವೂ, ಅಮಾನವೀಯವೂ ಆಗಿದೆ ಎನ್ನಿಸುತ್ತದೆ.
ಹಾಂ! ಒಂದು ಸಂತೋಷದ ವಿಷಯ ಹೇಳುವುದೇ ಮರೆತಿದ್ದೆ. ನಾವು ಮನೆ ಕಟ್ಟಿಕೊಂಡು ಬಂದ ನಂತರ, ಇದು ತಮ್ಮ ವಾಸಕ್ಕೆ ಯೋಗ್ಯ ಸ್ಥಳವಲ್ಲವೆಂದು ಎಲ್ಲಿಗೋ ಹಾರಿ ಹೋಗಿದ್ದ ಜೋಡಿ ಚುಕ್ಕಿ ಮುನಿಯ ಹಕ್ಕಿಗಳು ಆರು ವರ್ಷದ ನಂತರ ಮತ್ತೆ ಬಂದು ಮನೆಯ ಮೇಲಿನ ಮೇಲ್ಛಾವಣಿಯಲ್ಲಿ ಗೂಡು ಕಟ್ಟಿ, ಮೂರು ಮೊಟ್ಟೆ ಇಟ್ಟು ಮರಿ ಮಾಡಿಕೊಂಡು ಬಾಣಂತನ ಮುಗಿಸಿ ಹೋಗಿವೆ! ಮುಂದೆ ಮತ್ತೆ ಬೇರೆ ಪಕ್ಷಿಗಳು ಗೂಡು ಕಟ್ಟಲು ಬರಬಹುದೆಂಬ ನಿರೀಕ್ಷೆಯಲ್ಲಿದ್ದೇವೆ. ನಿಧಾನಕ್ಕೆ ಅನೇಕ ಚಿಟ್ಟೆ, ಕೀಟಗಳು ನಮ್ಮ ಮನೆಯಲ್ಲಿ ಧೈರ್ಯವಾಗಿ, ನಮ್ಮೊಂದಿಗೆ ಒಡನಾಡುವ ಮನಸ್ಸು ಮಾಡುತ್ತಿವೆ. ಮತ್ತೆ ಅವುಗಳ ಪ್ರೀತಿಗೆ ಪಾತ್ರರಾದ ನಾವು ಧನ್ಯತೆಯನ್ನು ಅನುಭವಿಸುತ್ತಿದ್ದೇವೆ.






ನಿಮ್ಮ ಸೂಕ್ಷ್ಮತೆಗೆ ಧನ್ಯವಾದ.ಅದಕ್ಕಾಗಿಯೇ ಮತ್ತೆ ಜೋಡಿಹಕ್ಕಿಗಳು ನಿಮ್ಮಲ್ಲಿ ನೆಲೆಯಾಗಲು ತಯಾರಾಗಿವೆ.
olleya lekhana…
Rupahasana Avarige dhanyavadagalu,
neevu blagmandaladalli avu ellige hogabeku? Ankana tumba chennagithu, grameena bhagadalli badukannu nadesiddarinda nimage prani,pakshigalu, keetagalu mathu prakruthige purakavad charaacharagalabagge ollaya lekana baredideeri dhanyavadgalu
ganesh V.D
Journalist,
gowribidanur-561208
ಧನ್ಯವಾದಗಳು ಗಣೇಶ್. ಹೇಗಿದ್ದೀರಿ? ಬಹಳ ವಷಱಗಳ ನಂತರ ಇಲ್ಲಿ ಹೀಗೆ ನಿಮ್ಮ ಅಭಿಪ್ರಾಯದ ಮೂಲಕ ಕಂಡು ಸಂತೋಷವಾಯ್ತು.
Dhanyavadagalu hagu nenapugulu, neevu namma gowribidanurinavaru Embudee sontoshada vishaya, jothege prathibavantha sahithi, kaviethri, leekaki, nimma baravanige thappade odutiruteene
nenapugulu ganesh V.D.gowribidanur
ಸಹೃದಯ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು
Hi, lekhana nodi nanu nanna kelavu aparadhagalannu nenapisikonde. Hebbettu gatrada eradu hakkigalu namma maneya mundina nimbe gidadalli gudu katti samsara maduttive. Ondishtu samadhana mattu namma bagge nambike mudisida avakke thanks. Idannella nenapisida nimage kuda. Hegiddiri? – Budalu
ಮನೆ ಎನ್ನುವುದು ನಮಗೊಂದೇ ಅಲ್ಲ… ಅದು ನಮ್ಮ ಸುತ್ತಲಿರುವ ಪಕ್ಷಿ,ಪ್ರಾಣಿ,ಕೀಟ ,ಎಲ್ಲಕ್ಕೂ ಬೇಕು ಆದರೆ ನೀವು ಹೇಳಿದ ಹಾಗೆ ನಾವು ನಮ್ಮ ಸ್ವಾರ್ಥಕ್ಕಾಗಿ ಅವುಗಳ ಬದುಕನ್ನೇ ಬಂಜರಾಗಿಸಿ, ವೋಕ್ಕಲೆಬ್ಬಿಸಿ.. ನಮ್ಮ ಕಾಂಕ್ರೀಟು ಮನೆಗಳಲ್ಲಿ ಬರಡು ಬದುಕನ್ನು ಬದ್ದುಕುತ್ತಿದ್ದೇವೆ… ನನಗೆ ಆ ನಿಟ್ಟಿನಲ್ಲಿ ಮಲೆನಾಡು, ಪರಿಸರದಲ್ಲಿ ಅಲ್ಲಿ ಮನೆಗಳಜೋತೆ ಗಿಡ,ಮರ ಅದರೊಟ್ಟಿಗೆ ಪಕ್ಷಿ, ಎಲ್ಲವು ಕಾಣಲು ಸಾದ್ಯ… ಹಾಗಾಗಿ ಆ ಪರಿಸರಕ್ಕೆ ಒಂದು ವಿಭಿನ್ನ ಜೀವಂತಿಕೆ ಕೂಡ ಇದೆ…ಆ ವಿಷಯದಲ್ಲಿ ನಾನು ನನ್ನ ಮನೆಯ ಆವರಣದಲ್ಲಿ ಬರುವ ಗಿಳಿವಿಂಡು,ಮನೆಮಾಡಿಕೊಂಡಿರುವ,ಕಾಗೆ ಗುಬ್ಬಿ, ದಿನಾಲೂ ಮಾವಿನ ಮರಕ್ಕೆ ಬಂದು ಹೋಗುವ ಹತ್ತಾರು ಪಕ್ಷಿ ಸಂಕುಲ ನೋಡಿದಾಗ ಕುಶಿಯಾಗುತ್ತದೆ…ಹಲವೊಮ್ಮೆ ನನ್ನ ಮನಸಿನ ಬೇಸರ ಆ ಪಕ್ಷಿಗಳು ಕಳೆದಿದ್ದಿದೆ…. ನಿಮ್ಮ ಬರಹ ತುಂಬಾ ಅಪ್ಯಯಮನವಗಿದೆ.. ನನಗೆ ತುಂಬಾ ಕುಶಿಕೊಡ್ತು….ಇತ್ತೀಚಿಗೆ ನನ್ನ co -brother ಮನೆ ಗೃಹಪ್ರವೇಶ ಇತ್ತು… ಸಹಜವಾಗಿ ಕೊಡುವಂತೆ ಬಟ್ಟೆ ,ಗಿಫ್ಟ್ ಅದರೊಡನೆ ಎರಡು ತೆಂಗಿನ ಸಶಿ ತೆಗೆದು ಕೊಂದು ಹೋಗಿ ಕುಣಿ ತಗೆಸಿ ಸಶಿನೆಟ್ಟು ಬಂದೆ… ಅವರ ಮಗ ಅಭಿ ಎದುರುಗಡೆ ಇರುವದೊಡ್ಡ ತೆಂಗಿನ ಮರ ನೋಡಿ ನಮ್ಮದು ಅಸ್ತು ದೊಡ್ಡ ಮರವಾಗುತ್ತ ಅಂತಾ ಪ್ರಸ್ನೆ ಮಾಡಿದ…ಹೌದೆಂದು,ಅದು ಮುಂದೆ ಸಾವೀರಾರು ಕಾಯಿಕೊದುತ್ತದೆಂದು ಹೇಳಿ ತಲೆಸವರಿ ಬಂದೆ… ಇನ್ನು ಮುಂದೆ ಯಾರದೇ ಗೃಹ ಪ್ರವೇಶಕ್ಕೆ ಹೋದರು ಒಂದೆರಡು ತೆಂಗಿನ ಸಸಿ,ಹೂವಿನ ಗಿಡ ನೆಟ್ಟು ಬರಲು ನಿರ್ದರಿಸಿದ್ದೇನೆ…..
ರವಿವರ್ಮ.ಡಿ ..ಹೊಸಪೇಟೆ.
mitrare, nanna lekhana odi nimma nenapu hanchikondiddakke vandane.