ಅವಳ ಕೆನ್ನೆಯ ಗುಳಿ
ಕು.ಸ.ಮಧುಸೂದನ, ರಂಗೇನಹಳ್ಳಿ
ನಕ್ಕಾಗ ಮಾತ್ರವಲ್ಲದೆ ಮಾತಾಡಿದಾಗಲೂ
ಅವಳ ಕೆನ್ನೆಯೊಳಗೊಂದು ಗುಳಿ ಬೀಳುತ್ತಿತ್ತು
ನನ್ನ ಮನೆಯ ಹಿಂದಿನ ಬೀದಿಯಲ್ಲಿದ್ದ ಅವಳು
ಮೇಲ್ಜಾತಿಯ ಹುಡುಗಿ ಅವಳತ್ತ ನೋಡಿದರೆ
ತಪ್ಪಾಗುತ್ತದೆಯೆಂದು ಅಜ್ಜಿ ಆಗಾಗ ಹೇಳುತ್ತಿದ್ದಳು.
ಹೋಗುವಾಗ ಬರುವಾಗ ಅವಳಜೊತೆ ಕದ್ದು ಮಾತಾಡುತ್ತಿದ್ದುದು
ಅಜ್ಜಿಗೆ ಹೇಗೆ ಗೊತ್ತಾಯಿತೊ?
ಒಂದು ದಿನ ಅವಳ ಮನೆಯ ಮುಂದೆ
ಹಸಿರು ಚಪ್ಪರವೆದ್ದು ಓಲಗದ ಸದ್ದು ತೇಲಿ ಬಂತು
ನೋಡಲೆಂದು ಹಿತ್ತಲಿಗೆ ಹೋದರೆ
ಅವಳ ಮದುವೆ ಕಣೊ ಅಜ್ಜಿ ಗೊಣಗಿದಳು
ಯಾಕೊ ಅವಳ ದ್ವನಿಯಲ್ಲಿ ನಿರಾಶೆಯಿದ್ದಂತಿತ್ತು
ನಮ್ಮನ್ಯಾರು ಕರೆಯಲಿಲ್ಲ, ನಾವೂ ಹೋಗಲಿಲ್ಲ
ಆಮೇಲೂ ಸಾವಿರ ಸಾರಿ ಅವಳು ನೆನಪಾಗುತ್ತಲೇ ಇದ್ದಳು
ಪ್ರತಿಸಂಜೆ ಅಂಗಳದಲ್ಲಿ ಕೂತು ತಲೆಬಾಚುತ್ತಿದ್ದವಳ
ಚಿತ್ರ ಅಚ್ಚಳಿಯದೆ ನಿಂತಿತ್ತು.
ಆಮೇಲೊಂದು ಸೋಮವಾರ ಸಂತೆಗೆ ಹೋಗಿ
ತಿರುಗಿ
ಬರುವಷ್ಟರಲ್ಲಿ ಅವಳ ಮನೆಯ ಮುಂದೆ ಗುಂಪುಗುಂಪಾಗಿ
ಸೇರಿದ್ದ ಜನರ ಅಳುವಿನ ಶಬ್ದ!
ಅವಳ ಗಂಡ ಹಾವು ಕಡಿದು ಸತ್ತು ಹೋದನಂತೆ
ಪಾಪ
ಮದುವೆಯಾಗಿ ವರ್ಷಕ್ಕೆ ಮುಂಡೆಯಾದಳು
ಹೇಳುವಾಗ ಅಜ್ಜಿಯ ಗಂಟಲು ಕಟ್ಟಿತ್ತು
ಆಮೇಲಾಮೇಲೆ ನಾನು ಹಿತ್ತಲಿಗೆ ಹೋದಾಗೆಲ್ಲ
ಅವಳು ನಿಂತಿರುತ್ತಿದ್ದಳು ಮನೆಯ ಬಾಗಿಲಲ್ಲಿ
ಬಿಳಿ ಸೀರೆಯನುಟ್ಟು
ಆಕಾಶ ನೋಡುತ್ತಿದ್ದವಳ ಕೆನ್ನೆಗಳತ್ತ ನೋಡುವ ಧೈರ್ಯವಿರದೆ
ತಲೆತಗ್ಗಿಸಿ ಒಳಬರುತ್ತಿದ್ದೆ
ವರ್ಷದ ನಂತರ ಹೆಣ್ಣಿನ ಕಡೆಯವರು ನಮ್ಮ ಮನೆಗೆ ಬಂದರು
ನನಗ್ಯಾಕೊ ಇಷ್ಟವಾಗಲಿಲ್ಲ.
ಎಂದೂ ಇಲ್ಲದವ ಅಪ್ಪನೆದುರು ನಿಂತು
ನನಗೀ ಮದುವೆ ಬೇಡವೆಂದೆ
ರಾತ್ರಿ ಹಾಸಿಗೆಯ ಪಕ್ಕದಲ್ಲಿ ಬಂದು ಕೂತ ಅಜ್ಜಿ
ಇದೆಲ್ಲ ಆಗುವ ಹೋಗುವ ಮಾತಲ್ಲ
ಸುಮ್ಮನೆ ಕನಸು ಕಾಣಬೇಡ
ಅವಳು ಮೇಲ್ಜಾತಿಯವಳು ಜೊತೆಗೆ
ಗಂಡ ಸತ್ತವಳು ಮರೆತುಬಿಡು
ಹಟ ಮಾಡಬೇಡ ಎಂದಳು
ಮೂರೇ ತಿಂಗಳಿಗೆ ಮದುವೆಯಾಯಿತು
ಮಗುವೂ ಆಯಿತು ವರುಷಕ್ಕೆ
ಈಗವಳು ಮದ್ಯಾಹ್ನದ ಹೊತ್ತು
ನಮ್ಮ ಹಿತ್ತಲಿಗೆ ಬಂದು ಬಟ್ಟೆ ಒಗೆಯುವ ಕಲ್ಲಿನ ಮೇಲೆ ಕೂತು
ನನ್ನವಳ ಜೊತೆ ಹರಟೆ ಹೊಡೆಯುತ್ತಾಳೆ
ನನ್ನ ಮಗುವನೆತ್ತಿಕೊಂಡು ಮುದ್ದಾಡುತ್ತಾಳೆ.
ಅಕಸ್ಮಾತ್ ನಾನತ್ತ ಹೋದರೆ ನೋಡಿ ಮುಗುಳ್ನಕ್ಕು ಹೆಂಡತಿಯೊಡನೆ
ಮಾತು ಮುಂದುವರೆಸುತ್ತಾಳೆ
ಅವಳ ಕೆನ್ನೆಯೊಳಗೀಗ ಗುಳಿಬೀಳುತ್ತಿಲ್ಲ!
ಬೀಳಬಹುದೇನೊ ನೋಡುವ ಧೈರ್ಯ ನನಗೆ ಸಾಲುತ್ತಿಲ್ಲ
ಎಂಥ ಭಾವಭಿವ್ಯಕ್ತಿ !!! hats offfff
ಕವನ ಶರೀರ ಪ್ರಕೃತಿ ಕಲಿಸಿದ ಪಾಠಕ್ಕೆ ತಲೆಬಾಗಿದೆ
ಭಾವಸಾರ ಚನ್ನಾಗಿದೆ