ಮೌನವಾದ ಶ್ರವ್ಯ ರೂಪಕ ದ್ವನಿ

ಶಶಿಕಾಂತ ಯಡಹಳ್ಳಿ
ಎಚ್.ಎಸ್.ಪಾರ್ವತಿಯವರು 2015, ನವೆಂಬರ್ 9 ರಂದು ನಮ್ಮನ್ನಗಲಿದ್ದಾರೆ. ಆರು ದಶಕಕ್ಕೂ ಹೆಚ್ಚು ಕಾಲ ಸೃಜನಶೀಲವಾಗಿ ಸಾಹಿತ್ಯ ಹಾಗೂ ಭಾಷಾಂತರ ಕ್ಷೇತ್ರಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದ ಪಾರ್ವತಿಯವರು ಕನ್ನಡದ ಮಹಿಳಾ ಲೇಖಕಿಯರಲ್ಲಿ ಪ್ರಮುಖರು. ಪುರುಷ ಪ್ರಧಾನ ವ್ಯವಸ್ಥೆಯ ಶೋಷಣೆಯ ವಿರುದ್ಧದ ಪ್ರತಿಭಟನೆಯನ್ನು ತಮ್ಮ ಬದುಕಲ್ಲೂ ಹಾಗೂ ಸಾಹಿತ್ಯದಲ್ಲೂ ತೋರಿಸಿದವರು.
ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ 60 ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಅದರಲ್ಲಿ ಏಳು ಕಥಾ ಸಂಕಲನಗಳು, ಹನ್ನೊಂದು ಕಾದಂಬರಿಗಳು, ಏಳು ಲೇಖನಗಳ ಸಂಗ್ರಹಗಳು, ಒಂಬತ್ತು ಜೀವನ ಚರಿತ್ರೆಗಳು, ಎರಡು ವ್ಯಕ್ತಿ ಚಿತ್ರ ಕೃತಿಗಳು, ಹಲವಾರು ಅಭಿನಂದನಾ ಗ್ರಂಥಗಳೂ ಸೇರಿವೆ. ಹದಿನೆಂಟಕ್ಕೂ ಹೆಚ್ಚು ಕೃತಿಗಳನ್ನು ಬೇರ ಭಾಷಗಳಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾಷಾಂತರ ಕ್ಷೇತ್ರದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ರಂಗಭೂಮಿಯ ಇನ್ನೊಂದು ಅಂಗವಾದ ರಂಗ ಶ್ರವ್ಯ ಮಾಧ್ಯಮದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡು ರೇಡಿಯೋ ನಾಟಕಗಳ ಮೂಲಕ ಅಸಂಖ್ಯಾತ ಜನರನ್ನು ತಲುಪಿದ್ದನ್ನು ನೆನಪಿಸಿಕೊಳ್ಳುವ ಮೂಲಕ ಆ ಮಹಾನ್ ಚೇತನಕ್ಕೆ ನುಡಿ ನಮನ.
ಮೂರು ದಶಕಕ್ಕೂ ಹೆಚ್ಚು ಕಾಲ ಆಕಾಶವಾಣಿಯಲ್ಲಿ ಶೃವ್ಯ ನಾಟಕಗಳನ್ನು ಅನುವಾದಿಸಿ ಪ್ರಸಾರ ಮಾಡಿದ್ದಾರೆ. ಆಕಾಶವಾಣಿಗಾಗಿ ಪಾರ್ವತಿಯವರು ಅನುವಾದ ಮಾಡಿಕೊಟ್ಟಿರುವ ಹಾಗೂ ಇತರೇ ಭಾಷೆಗಳಿಂದ ರೂಪಾಂತರಿಸಿರುವ ಹಲವಾರು ಸಣ್ಣ, ಮಧ್ಯಮ ಹಾಗೂ ದೀಘರ್ಾವಧಿಯ ನಾಟಕಗಳ ಪಟ್ಟಿ ಅದೆಷ್ಟು ದೊಡ್ಡದೆಂದರೆ ಸ್ವತಃ ಪಾರ್ವತಿಯವರಿಗೇ ಲೆಕ್ಕ ಇಲ್ಲದಷ್ಟಿತ್ತು.
1950ರಲ್ಲಿ ಬುದ್ಧನ 2500 ನೇ ಜನ್ಮದಿನದ ಸಂದರ್ಭದಲ್ಲಿ ಕೆಲವು ಹಿಂದಿ ನಾಟಕಗಳನ್ನು ಪಾರ್ವತಿಯವರು ಆಕಾಶವಾಣಿಗೆ ಅನುವಾದಿಸಿ ಕೊಟ್ಟಿದ್ದರು. ಬೇರೆ ಭಾಷೆಯ ಅನುವಾದ ಎಂದು ಒಂದಿಷ್ಟೂ ಅನುಮಾನ ಬರದಂತೆ ಕನ್ನಡೀಕರಿಸಿದ ಪಾರ್ವತಿಯವರ ಭಾಷಾ ಸಾಮರ್ಥ್ಯವನ್ನು ಗುರುತಿಸಿದ ಆಕಾಶವಾಣಿಯು ಅವರನ್ನು ಕರೆದು ಕೆಲಸ ಕೊಟ್ಟಿತು. ಭಾಷಾಂತರಕಾರ್ತಿಯಾಗಿ 1958ರಲ್ಲಿ ಕೆಲಸಕ್ಕೆ ಸೇರಿದ ಪಾರ್ವತಿಯವರು ಮುಂದೆ ತಮ್ಮ ಆಸಕ್ತಿಯನ್ನು ವಿಸ್ತರಿಸಿಕೊಂಡು ಕಾರ್ಯಕ್ರಮಗಳ ನಿರ್ವಾಹಕಿಯಾಗಿ, ನಿವೇದಕಿಯಾಗಿ, ನಾಟಕ ನಿರ್ದೇಶಕಿಯಾಗಿ, ನಿರೂಪಕಿಯಾಗಿ…. 1990ರ ವರೆಗೂ ಸಮರ್ಥವಾಗಿ ಕೆಲಸವನ್ನು ನಿರ್ವಹಿಸಿದರು.

ಸ್ವಲ್ಪ ಶ್ರಮಪಟ್ಟರೆ ರಂಗನಾಟಕಗಳನ್ನು ರೂಪಾಂತರಿಸಬಹುದು. ಆದರೆ ರೇಡಿಯೋ ನಾಟಕಗಳನ್ನು ಬರೆಯುವುದು ಇನ್ನೂ ಕ್ಲಿಷ್ಟಕರವಾದದ್ದು. ಇಂತಹ ಸವಾಲನ್ನು ಸಮರ್ಥವಾಗಿ ಮೂರು ದಶಕಗಳ ಕಾಲ ಯಶಸ್ವಿಯಾಗಿ ನಿರ್ವಹಿಸಿದ ಎಚ್.ಎಸ್.ಪಾರ್ವತಿಯವರನ್ನು ರಂಗಭೂಮಿ ಅಭಿನಂದಿಸಲೇಬೇಕಿದೆ. ಬಾನುಲಿ ಕೇಂದ್ರಗಳಲ್ಲಿ ಚಿತ್ರಗೀತೆಗಳನ್ನು ಬಿಟ್ಟರೆ ನಾಟಕಗಳೇ ಅತ್ಯಂತ ಹೆಚ್ಚು ಜನಪ್ರಿಯವಾದವುಗಳು. ರೇಡಿಯೋ ಕೇಂದ್ರಗಳ ಹಸಿವನ್ನು ತಣಿಸುವಷ್ಟು ನಾಟಕಗಳು ಎಲ್ಲಿವೆ. ರೇಡಿಯೋ ನಾಟಕಗಳಿಗೆ ಅದರದೇ ಆದ ತಂತ್ರಗಾರಿಕೆ ಇದೆ. ಅದನ್ನು ಕರಗತಮಾಡಿಕೊಂಡು ಅದಕ್ಕೆ ತಕ್ಕಂತಹ ವಸ್ತುವನ್ನು ಆಯ್ದುಕೊಂಡು ಬಾನುಲಿ ಪ್ರಸಾರಕ್ಕಾಗಿಯೇ ನಾಟಕಗಳನ್ನು ಬರೆಯುವುದು ಕಷ್ಟಸಾಧ್ಯ. ರೇಡಿಯೋಗಳಿಗಾಗಿಯೇ ನಾಟಕಗಳನ್ನು ಬರೆಯುವವರು ಅಪರೂಪ. ಅಂತಹ ನಾಟಕಗಳೇ ಇಲ್ಲವೆಂದಾಗ ಕಥೆ ಕಾದಂಬರಿಗಳನ್ನು ಆಯ್ದುಕೊಂಡು ಅದನ್ನು ರೇಡಿಯೋ ನಾಟಕವಾಗಿ ರೂಪಾಂತರಿಸುವ ಕೆಲಸವನ್ನು ಪಾರ್ವತಿಯವರು ಅಚ್ಚುಕಟ್ಟಾಗಿ ಮಾಡಿ ಯಶಸ್ವಿಯಾದರು.
ಎಚ್.ಎಸ್.ಪಾರ್ವತಿಯವರು ಹಲವಾರು ರೇಡಿಯೋ ನಾಟಕಗಳನ್ನು ತಾವೇ ರಚಿಸಿದ್ದಾರೆ. ಅಸಂಖ್ಯಾತ ನಾಟಗಳನ್ನು ಹಿಂದಿ ಭಾಷೆ ಮೂಲಕ ಕನ್ನಡಕ್ಕೆ ಅನುವಾದಿಸಿದ್ದಾರೆ. ಬಂಗಾಳಿ, ತಮಿಳು, ಮರಾಠಿ, ಉರ್ದು, ಮಲಯಾಳಿ, ಗುಜರಾತಿ… ಹೀಗೆ ಭಾರತದ ಅನೇಕ ಭಾಷೆಗಳಿಂದ ಹಿಂದಿಗೆ ಅನುವಾದಗೊಂಡ ಕಥೆಗಳನ್ನು ಆಯ್ದು ಬಾನುಲಿ ನಾಟಕಗಳಾಗಿ ಕನ್ನಡಕ್ಕೆ ರಂಗ ರೂಪಾಂತರಿಸಿದ್ದಾರೆ. ಆಕಾಶವಾಣಿಯಲ್ಲಿ ಪಾರ್ವತಿಯವರ ನಾಟಕಗಳನ್ನು ಕೇಳಿದ ಶ್ರೋತೃಗಳು ಅದರಲ್ಲಿ ತಲ್ಲೀನರಾಗಿ ರಸಾನುಭವವನ್ನು ಅನುಭವಿಸಿದ್ದಾರೆ. ಕಮಲಕಾಂತನ ಸಾಕ್ಷಿ, ಇಂದಿನ ಸತ್ಯ, ಅಲೆಗಳು, ಬಾಡಿಗೆದಾರರ ಸಮ್ಮೇಳನ, ಹರಟೆ, ಸುಳ್ಳು ಹೇಳಿನೋಡು, ನಾವೆಲ್ಲರೂ ಒಂದೇ, ಮನುಷ್ಯ ವಿಚಿತ್ರ ಪ್ರಾಣಿ, ನೋ ವೆಕೆನ್ಸಿ… ಹೀಗೆ ಮುಂತಾದ ಅನುವಾದಿತ ರೇಡಿಯೋ ನಾಟಕಗಳು ತುಂಬಾ ಪ್ರಸಿದ್ದವಾಗಿವೆ.
ಸಂತಕವಿ ರಹೀಮ, ವೀರ ಅಭಿಮನ್ಯೂ, ವೆಂಕಣ್ಣನ ಸಾಹಸ… ಹೀಗೆ ಹಲವಾರು ಬಾನುಲಿ ನಾಟಕಗಳನ್ನು ಪಾರ್ವತಿಯವರೇ ರಚಿಸಿದ್ದಾರೆ. ದೂರದರ್ಶನಕ್ಕಾಗಿಯೂ ಕೆಲವು ನಾಟಕಗಳನ್ನು ಪಾರ್ವತಿಯವರು ಬರೆದಿದ್ದಾರೆ. ಪಾರ್ವತಿಯವರ ‘ಪ್ರೇಮ ಸಂಭಾಷಣೆ’ ರೇಡಿಯೋ ನಾಟಕವನ್ನು ಶ್ರೀನಿವಾಸ ಪ್ರಭುರವರು ದೂರದರ್ಶನಕ್ಕೆ ದೃಶ್ಯಮಾಧ್ಯಮದಲ್ಲಿ ಬಳಸಿಕೊಂಡರು. ಇದರಲ್ಲಿ ಸ್ವತಃ ಪಾರ್ವತಿಯವರೇ ಅಭಿನಯಿಸಿದ್ದರು. 1987 ರಲ್ಲಿ ವೈಶಾಲಿ ಕಾಸರವಳ್ಳಿಯವರು ದೂರದರ್ಶನಕ್ಕೆ ‘ಗೂಡಿನಿಂದ ಗಗನಕ್ಕೆ’ ದಾರಾವಾಹಿಯನ್ನು ನಿರ್ದೇಶಿಸಿದಾಗ ಸ್ಕ್ರಿಪ್ಟ್ ಬರೆದವರೇ ಪಾರ್ವತಿಯವರು. ಗಿರೀಶ್ ಕಾಸರವಳ್ಳಿಯವರ ‘ಘಟಶ್ರಾದ್ಧ’ ಸಿನೆಮಾದಲ್ಲಿ ಪಾರ್ವತಿಯವರು ನಟಿಸಿದ್ದನ್ನು ಮರೆಯಲಾಗದು.
“ನಾಟಕವು ಅಲ್ಪಾವಧಿಯಲ್ಲಿಯೇ ಮುಗಿಯಬೇಕು, ವೇಷಕ್ಕೆ ಬಣ್ಣವಿಲ್ಲ, ಬೂದಿಯಿಲ್ಲ, ನಾಟಕವಾಡುವುದು ರೇಡಿಯೋ ನಿಲಯದಲ್ಲಿ, ಕೇಳುವವರು ತಮ್ಮ ತಮ್ಮ ಮನೆಗಳಲ್ಲಿ, ನೂರಾರು ಮೈಲಿಗಳ ಆ ಬದಿ, ಮುಂದೆ ಮಾತ್ರ ರೇಡಿಯೋ ಪೆಟ್ಟಿಗೆ. ಇದು ಬರೀ ನಾಟಕವಷೇ ಅಲ್ಲ, ಕುರಡರಿಗಾಗಿ ಆಡಿದ ನಾಟಕ..” ಎಂದು ಬಾನುಲಿ ನಾಟಕಗಳ ಕುರಿತಂತೆ ಬೀಚಿ ಯವರು ಹೇಳಿದ್ದಾರೆ. ಅಂದರೆ ಮನೆಯಲ್ಲೇ ಕುಳಿತು ಕಣ್ಣಿಲ್ಲದವರೂ ಕೇಳಿ ಅನುಭವಿಸಬಹುದಾದ ಏಕೈಕ ರಂಗಮಾಧ್ಯಮವೆಂದರೆ ಶ್ರವ್ಯ ರೂಪಕಗಳಾಗಿವೆ.
ನಾಟಕಗಳ ಬೇಡಿಕೆ ಹೆಚ್ಚಾದಂತೆ ಹಿಂದೀ, ಮರಾಠಿ, ಬಂಗಾಲಿ, ಇಂಗ್ಲೀಷ್, ಪ್ರೆಂಚ್, ಗ್ರೀಕ್ ನಾಟಕಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಬಿತ್ತರಿಸಲಾಗುತ್ತಿತ್ತು. ಆಗ ಕಥೆಗಳನ್ನೇ ಆಧರಿಸಿ ನಾಟಕಗಳನ್ನು ಮಾಡುವ ಯೋಜನೆಯೊಂದನ್ನು ಬೆಂಗಳೂರು ಆಕಾಶವಾಣಿಯಲ್ಲಿ ರೂಪಿಸಲಾಯಿತು. ಆ ‘ಕಥಾತರಂಗ’ ಮಾಲಿಕೆಯ ಜವಾಬ್ದಾರಿಯನ್ನು ಪಾರ್ವತಿಯವರಿಗೆ ವಹಿಸಲಾಗಿತ್ತು. ಆಗ ಚಿದಂಬರರಾವ್ ರವರ ‘ಆಯುಷ್ಯ ಹೋಮ’, ಪೂರ್ಣಚಂದ್ರ ತೇಜಸ್ವಿಯವರ ‘ಕುಬಿ ಮತ್ತು ಇಯಾಲ’, ನಾ.ಡಿಸೋಜರವರ ‘ಹಳ್ಳಿಗೆ ನುಗ್ಗಿದ ಹೆಮ್ಮಾರಿ’, ಅಶ್ವತ್ಥರವರ ‘ಹುಲಿಸಿದ್ದನ ಹೆಂಡತಿ’, ಶೇಷನಾರಾಯಣರವರ ‘ಹಾವು’, ಈಶ್ವರಚಂದ್ರರವರ ‘ಯಾರೋ ಬಂದರು’, ಮಾವಿನಕೆರೆ ರಂಗನಾಥನ್ರವರ ‘ತಪ್ತ’… ಮುಂತಾದ ಕಥೆಗಳನ್ನು ರೇಡಿಯೋ ರೂಪಕವಾಗಿ ಪಾರ್ವತಿಯವರು ರಂಗರೂಪ ಮಾಡಿ ನಿದರ್ೆಶಿಸಿ ಬಿತ್ತರಿಸಿದರು. ನಿಜವಾದ ಕನ್ನಡ ಸಾಹಿತ್ಯದ ಕಂಪನ್ನು ನಾಟಕ ರೂಪದಲ್ಲಿ ಕೇಳುಗರಿಗೆ ಉಣಬಡಿಸಿದರು.
ಆದರೆ… ಅದ್ಯಾಕೋ ರೇಡಿಯೋ ನಾಟಕಗಳನ್ನು ರಂಗಭೂಮಿಯ ಭಾಗವೆಂದು ಪರಿಗಣಿಸಲಾಗಿಲ್ಲ. ನಾಟಕ ಅಂದರೆ ‘ಪ್ರದರ್ಶನ ಕಲೆ’ ಎನ್ನುವುದೇ ಎಲ್ಲರ ಮನಸ್ಸಲ್ಲಿ ಬೇರೂರಿಬಿಟ್ಟಿದೆ. ದೃಶ್ಯಾನುಭವದಂತೆಯೇ ಶ್ರವ್ಯಾನುಭವವೂ ಸಹ ನಾಟಕಗಳನ್ನು ಕಟ್ಟಿಕೊಡಬಲ್ಲುದಾಗಿವೆ. ಕೆಲವೊಮ್ಮೆ ರೇಡಿಯೋ ನಾಟಕಗಳು ತಮ್ಮ ದ್ವನಿ, ಸಂಗೀತ ಹಾಗೂ ಮಾತುಗಳ ಪೂರ್ವಭಾವಿ ಮುದ್ರಣದಿಂದಾಗಿ ಖರಾರುವಕ್ಕತೆಯನ್ನು ಕೊಡುತ್ತವೆ. ರಂಗನಾಟಕಗಳು ಕೊಡುವ ಲೈವ್ ಅನುಭವವನ್ನು ರೇಡಿಯೋ ನಾಟಕಗಳು ಕೊಡದೇ ಹೋದರೂ ಒಂದು ವಿಷಯವನ್ನು ಕೇಳುಗರಿಗೆ ಶ್ರವ್ಯ ನಾಟಕದ ಮೂಲಕ ತಲುಪಿಸುವ ಕೆಲಸವನ್ನು ಬಾನುಲಿ ನಾಟಕಗಳು ಮಾಡುತ್ತಲೇ ಬಂದಿದ್ದಾವೆ. ಮೊದಲ ಬಾರಿಗೆ ಶ್ರವ್ಯ ನಾಟಕಗಳೂ ಸಹ ಮುಖ್ಯ ರಂಗಭೂಮಿಯ ಅಂಗವೆಂದು ಅರಿತ ಸಿ.ಜಿ.ಕೃಷ್ಣಸ್ವಾಮಿ (ಸಿಜಿಕೆ) ರವರು 1999 ರಲ್ಲಿ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ರೇಡಿಯೋ ನಾಟಕ ಕ್ಷೇತ್ರದ ಸೇವೆಯನ್ನು ಗುರುತಿಸಿ ಎಚ್.ಎಸ್.ಪಾರ್ವತಿಯವರಿಗೆ ‘ನಾಟಕ ಅಕಾಡೆಮಿ ಫೆಲೋಶಿಪ್ ಗೌರವ ಪುರಸ್ಕಾರ’ವನ್ನು ಕೊಟ್ಟಿದ್ದು ಮಾದರಿಯಾಗಿದೆ. ನಾಟಕರೂಪ ದೃಶ್ಯ ಶ್ರವ್ಯ ಹೀಗೆ ಯಾವುದೇ ಮಾಧ್ಯಮದಲ್ಲಿದ್ದರೂ ನಾಟಕ ನಾಟಕವೇ ಆಗಿದೆ. ಹೀಗಾಗಿ ರೇಡಿಯೋ ನಾಟಕಗಳನ್ನೂ ಸಹ ರಂಗಭೂಮಿಯ ಶ್ರವ್ಯ ಮಾಧ್ಯಮ ನಾಟಕ ಪ್ರಕಾರವೆಂದು ಗುರುತಿಸಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೂ ನಾಟಕ ಅಕಾಡೆಮಿಯು ವಾರ್ಷಿಕ ಪ್ರಶಸ್ತಿಯನ್ನು ‘ಎಚ್.ಎಸ್.ಪಾರ್ವತಿ’ಯವರ ಹೆಸರಲ್ಲಿ ಕೊಡುವುದು ಸೂಕ್ತ ಹಾಗೂ ಪಾರ್ವತಿಯವರ ಸುದೀರ್ಘ ಸಾಧನೆಗೆ ರಂಗಭೂಮಿ ಕೊಡುವ ಗೌರವವೂ ಆಗಿದೆ.
ಪಾರ್ವತಿಯವರಿಗೆ ರಂಗಕಲೆಯಲ್ಲಿ ಬಾಲ್ಯದಿಂದಲೂ ಆಸಕ್ತಿ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ತಾವೇ ಬರೆದ ಒಂದು ಸ್ಕ್ರಿಪ್ಟ್ನ್ನು ತೆಗೆದುಕೊಂಡು, ತಮ್ಮ ಸಹಪಾಠಿಗಳನ್ನು ಸೇರಿಸಿಕೊಂಡು, ಮನೆಯಳಗಿದ್ದ ಸೀರೆಗಳನ್ನೇ ಪರದೆಗಳಾಗಿ ಮಾಡಿಕೊಂಡು ಮನೆಯ ಅಂಗಳದಲ್ಲಿ ನಾಟಕಗಳನ್ನು ಮಾಡಿಸುತ್ತಿದ್ದರಂತೆ. ಇದೇ ರಂಗಾಸಕ್ತಿ ಅವರನ್ನು ಬಾನುಲಿ ನಾಟಕದತ್ತ ಆಕರ್ಷಿಸಿದೆ. ಅವರ ಮಗಳು ಎಂ.ಎಸ್.ವಿದ್ಯಾರವರು ‘ಕನ್ನಡ ರಂಗಭೂಮಿಯಲ್ಲಿ ಹಾಸ್ಯ’ ಕುರಿತ ವಿಷಯದ ಮೇಲೆ ಡಾಕ್ಟರೇಟ್ ಮಾಡಿದ್ದು, ಕಲಾಗಂಗೋತ್ರಿ, ಪ್ರಯೋಗರಂಗ, ಸ್ಪಂದನ, ಸಮುದಾಯ, ಸಂಚಯ…. ಸೇರಿದಂತೆ ಹಲವಾರು ಹವ್ಯಾಸಿ ರಂಗತಂಡಗಳಲ್ಲಿ ಅಭಿನಯಿಸುತ್ತಾ ಕನ್ನಡ ರಂಗಭೂಮಿಯಲ್ಲಿ ಗಮನಾರ್ಹ ನಟಿಯಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಳಿಯ ಕಲಾಗಂಗೋತ್ರಿ ಕಿಟ್ಟಿಯವರಂತೂ ನಾಟಕ, ಧಾರಾವಾಹಿಗಳ ಅಭಿನಯವನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಹೀಗೆ… ಪಾರ್ವತಿಯವರ ಕುಟಂಬ ಪರಿವಾರವೇ ರಂಗಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ಇದಕ್ಕೆ ಪಾರ್ವತಿಯವರ ರಂಗಾಸಕ್ತಿ, ಪ್ರೇರಣೆ ಹಾಗೂ ಪ್ರಚೋದನೆಯೇ ಕಾರಣವಾಗಿದೆ. ಪಾರ್ವತಿಯವರಿಗೆ ನಾಟಕಗಳ ಮೇಲೆ ಆಸಕ್ತಿ ಹಾಗೂ ಅಕರ್ಷಣೆ ಅದೆಷ್ಟಿತ್ತೆಂದರೆ ರವೀಂದ್ರ ಕಲಾಕ್ಷೇತ್ರದಲ್ಲಾಗುವ ಬಹುತೇಕ ನಾಟಕಗಳನ್ನು ತಪ್ಪದೇ ವೀಕ್ಷಿಸುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೇರೆ ನಾಟಕಗಳನ್ನು ಕರೆಸಿ ಆಡಿಸುತ್ತಿದ್ದರು.
ಪಾರ್ವತಿಯವರು ಬರೆದ, ಅನುವಾದಿಸಿದ, ರೂಪಾಂತರಿಸಿದ ಅನೇಕಾನೇಕ ನಾಟಕಗಳು ಕಾಲಕಾಲಕ್ಕೆ ಗಾಳಿಯಲ್ಲಿ ತೇಲಿಹೋಗಿವೆ. ಬಾನುಲಿ ನಾಟಕಗಳು ಯಾವಾಗಲೂ ಅಲ್ಪಾಯುಷಿಗಳು. ಅವುಗಳನ್ನೆಲ್ಲಾ ಆಕಾಶವಾಣಿ ಕೇಂದ್ರದ ಮುದ್ರಣ ವಿಭಾಗದಿಂದ ಸಂಗ್ರಹಿಸಿ ಅವುಗಳನ್ನು ಮತ್ತೆ ಅಕ್ಷರ ರೂಪದಲ್ಲಿ ಬರೆಯಿಸಿ ಪುಸ್ತಕ ರೂಪದಲ್ಲಿ ಹೊರತರುವ ಜವಾಬ್ದಾರಿಯನ್ನು ನಾಟಕ ಅಕಾಡೆಮಿ ಇಲ್ಲವಾದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲ್ಲವೇ ಪುಸ್ತಕ ಪ್ರಾಧಿಕಾರವು ವಹಿಸಿಕೊಳ್ಳುವುದು ಈ ಕೂಡಲೇ ಆಗಬೇಕಾದ ಕೆಲಸವಾಗಿದೆ. ಸರಕಾರಿ ಕೃಪಾಪೋಷಿತ ಸಾಹಿತ್ಯಕ ಸಾಂಸ್ಕೃತಿಕ ಇಲಾಖೆಗಳು ಈ ಪ್ರಸ್ತಾವನೆಯತ್ತ ಗಮನ ಹರಿಸಿ ಕೂಡಲೇ ಕಾರ್ಯೋನ್ಮುಖವಾಗಬೇಕಿದೆ.





0 Comments