ಅದೊಂದು ವಿಶೇಷ ಕಾರ್ಯಕ್ರಮ. ಯಶವಂತ ಚಿತ್ತಾಲರ ಕಥೆ ಇದೆಯಲ್ಲ.. ‘ಕನ್ನಡಿಯಲ್ಲಿ ಕಂಡಾತ ಮನೆಗೂ ಬಂದು ಬಾಗಿಲು ತಟ್ಟಿದ’ ಅಂತ ಹಾಗೆ.. ಥೇಟ್ ಹಾಗೇ.. ಅದುವರೆಗೂ ಪುಸ್ತಕದಲ್ಲಿ ಕಂಡವರು ನಮ್ಮ ಮುಂದೆಯೇ ಓಡಾಡುತ್ತಿದ್ದರು. ಮುಗುಳ್ನಗುತ್ತ, ನಗಿಸುತ್ತಾ, ಗಂಭೀರ ಮುಖ ಹೊತ್ತು, ಇಲ್ಲ ನಗುವುದೇ ಇಲ್ಲ ಎನ್ನುವಂತೆ ಮುಖ ಮಾಡಿ, ತೆಳು ನಗು ಹರಡುತ್ತಾ… ಹೀಗೆ
ಇನ್ನೂ ವಿಶೇಷವೆಂದರೆ ಅವರು ಆ ದಿನ ರಂಗದ ಮೇಲೆ ಅನಾವರಣಗೊಳ್ಳಲಿದ್ದ ಪುಸ್ತಕದಲ್ಲಿ ನೋಡ ನೋಡುತ್ತಿದ್ದಂತೆಯೇ ಸೇರಿ ಹೋದರು
ಇದು ಒಂದು ರೀತಿಯ ಪವಾಡದ ಕಾರ್ಯಕ್ರಮ. ಪುಸ್ತಕದಿಂದ ನೇರ ಇಳಿದವರು ಪುಸ್ತಕದೊಳಗೇ ಮತ್ತೆ ಸೇರಿ ಹೋಗುವ ಕಾರ್ಯಕ್ರಮ.
ಆ ಮ್ಯಾಜಿಕ್ ಮಾಡಿದವರು ಇನ್ನಾರೂ ಅಲ್ಲ.. ದಶಕಗಳ ಕಾಲ ತಮ್ಮ ಕ್ಯಾಮೆರಾವನ್ನು ಕೊರಳಿಗೆ ನೇತು ಹಾಕಿಕೊಂಡು ಸಂಗಾತಿ ಉಮಾರನ್ನು ಬಗಲಿಗೆ ಹಾಕಿಕೊಂಡು ಹೀಗೆ ಅನೇಕ ‘ಮುಖ ಮುದ್ರೆ’ಗಳನ್ನು ಕನ್ನಡ ಲೋಕಕ್ಕೆ ಕೊಟ್ಟ, ಆ ಮೂಲಕ ಕನ್ನಡದ ಬನಿಯನ್ನು ಮುಂದಿನ ಪೀಳಿಗೆಗೂ ಕಾಪಿಟ್ಟ ಎ ಎನ್ ಮುಕುಂದ್ ಅವರು.
ಈ ಮಧ್ಯೆ ಇನ್ನೂ ಒಂದು ವಿಶೇಷವಿತ್ತು.
ಸಿ ಎನ್ ರಾಮಚಂದ್ರನ್, ಟಿ ಪಿ ಅಶೋಕ, ಗಿರೀಶ್ ಕಾಸರವಳ್ಳಿ, ಓ ಎಲ್ ನಾಗಭೂಷಣ ಸ್ವಾಮಿ ಅವರು ಪುಸ್ತಕದಿಂದ ಹೊರ ಬಂದದ್ದೇ ಅಲ್ಲದೆ, ಆ ಪುಸ್ತಕವನ್ನು ತಾವೇ ಅನಾವರಣ ಮಾಡಿ.. ಹಾಗೆ ಅನಾವರಣ ಮಾಡಿದ ಪುಸ್ತಕದೊಳಗೇ ಸೇರಿ ಹೋದರು..
ಎ ಎನ್ ಮುಕುಂದ್, ಉಮಾ ಮುಕುಂದ್, ಪ್ರತೀಕ್ ಎಂಬ ಪುಟ್ಟ ಕುಟುಂಬದ ಸಾಧನೆ ಇದು.
‘ಕ್ಲಿಕ್ ಅನ್ನಿಸುವುದಷ್ಟೇ ಅಲ್ಲವೇ, ತಮ್ಮ ಮುಂದೆ ನಿಂತ ಮುಖಗಳತ್ತ..’ ಎಂದು ಮಾತ್ರ ಭಾವಿಸುವವರಿಗೆ ಒಂದು ಪುಟ್ಟ ಸಲಹೆ- ಎ ಎನ್ ಮುಕುಂದ್ ಅವರು ಇತ್ತೀಚಿಗೆ ತಾನೇ ‘ಪ್ರಜಾವಾಣಿ’ಯ ದೀಪಾವಳಿ ವಿಶೇಷಾಂಕದಲ್ಲಿ ತಾವು ಕ್ಲಿಕ್ ಎನ್ನಿಸಲು ಪಟ್ಟ ಕಥೆಯನ್ನು ಓದಿ ನೋಡಿ. ಆಗ ಗೊತ್ತಾಗುತ್ತದೆ ಒಂದು ‘ಮುಖ ಮುದ್ರೆ’ ಹಿಡಿಯುವುದರ ಹಿಂದೆ ಅಡಗಿರುವ ಸೃಜನಶೀಲತೆ.
ಭಾವ ಚಿತ್ರವನ್ನು ಸ್ವಭಾವ ಚಿತ್ರ ಮಾಡುವುದು ಅಷ್ಟು ಸುಲಭವಲ್ಲ ಎನ್ನುವುದು ಆ ಅಂಗಳದಲ್ಲಿ ಗೊತ್ತಾಗಿ ಹೋಯಿತು. ಅಂದ ಹಾಗೆ ‘ಸ್ವಭಾವ ಚಿತ್ರ’ ಎಂಬ ಪದ ಟಂಕಿಸಿದವರು ಗಿರೀಶ್ ಕಾಸರವಳ್ಳಿ. ಮುಕುಂದ್ ಅವರ ಕೈಚಳಕ ನೋಡಿ ಅವರಿಗೆ ಹಾಗೆ ಅನಿಸಿಹೋಯಿತು. ‘ಛಾಯಾ ಚಿತ್ರ ಅಲ್ಲ ಛಾಯಾ ಕಲಾಕೃತಿ’ ಎಂದು ಬಣ್ಣಿಸಿದ್ದು ಪ್ರೊ ಸಿ ಎನ್ ರಾಮಚಂದ್ರನ್.
ಅಂತಹ ಸ್ವಭಾವ ಕಲಾಕೃತಿಗಳನ್ನು ಕೈಗಿತ್ತ ಮುಕುಂದ್ ಹಾಗೂ ಅವರ ಗುಬ್ಬಿ ಸಂಸಾರ ಇಡೀ ಅಂಗಳದಲ್ಲಿ ಓಡಾಡುತ್ತಾ, ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುತ್ತಾ.. ಇದ್ದಾಗ ಮಣಿಪಾಲ ಯುನಿವರ್ಸಿಟಿ ಪ್ರೆಸ್ ಇಂತಹ ಒಳ್ಳೆಯ ಕೆಲಸ ಮಾಡಿತಲ್ಲಾ ಎಂದು ಅನಿಸಿಹೋಯಿತು.


ಅವರು ನೇರ ಪುಸ್ತಕದಿಂದಲೇ ಹೊರ ಜಿಗಿದರು..
ನಿಮಗೆ ಇವೂ ಇಷ್ಟವಾಗಬಹುದು…




‘ಕನ್ನಡಿಯಲ್ಲಿ ಕಂಡಾತ’ ಶಿವರಾಮ ಕಾರಂತರ ಕಾದಂಬರಿಯ ಶೀರ್ಷಿಕೆ . ‘ಕಥೆಯಲ್ಲಿ ಬಂದಾತ ಮನೆಗೂ ಬಂದು ಕದ ತಟ್ಟಿದ’ ಅನ್ನುವುದು ಯಶವಂತ ಚಿತ್ತಾಲರ ಕಥೆಯ ಶೀರ್ಷಿಕೆ. ಇದನ್ನು ನೆನಪಿನ ಆಧಾರದಿಂದ ಬರೆದಿದ್ದೇನೆ.