ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರು ನನ್ನೊಳಗಿನ 'ಆನಂದ'..

ಬೆರಳು ಕೇಳದ ದ್ರೋಣಾಚಾರ್ಯ
ಜಿ ಎನ್ ಮೋಹನ್ 
ಮುಖಚಿತ್ರ: ಚಂದ್ರನಾಥ್ ಆಚಾರ್ಯ
leaves design
 
 
 
 
ಆಗುಂಬೆಯಲ್ಲೇ ಮಳೆ ಇಲ್ಲ! –
ಈ ಸಾಲು ಓದುತ್ತಿದ್ದಂತೆ ನನ್ನೊಳಗೆ ಕುಡಿಯೊಡೆಯುತ್ತಿದ್ದ ವರದಿಗಾರನನ್ನು ಬದಿಗೆ ತಳ್ಳಿ ಲೇಖಕನೊಬ್ಬ ಎದ್ದು ಕುಳಿತುಬಿಟ್ಟ.
ಕೇವಲ ತಲೆಬರಹದ ಮೂಲಕವೇ ನನ್ನನ್ನು ಹಾಗೆ ಚಿತ್ ಮಾಡಿದವರು- ಆನಂದ
ಆಗ ಹೀಗಿರಲಿಲ್ಲ. ಮಳೆ ಬೆಳೆ ಎಲ್ಲಾ ಚನ್ನಾಗಿಯೇ ಇತ್ತು
ಚೆನ್ನಾಗಿ ಇತ್ತು ಎನ್ನುವುದನ್ನು ಸುಳ್ಳು ಮಾಡಬೇಕು ಎನ್ನುವ ಒಂದೇ ಕಾರಣಕ್ಕೆ ಆಗುಂಬೆಯಲ್ಲಿ ಮಳೆ ಕಡಿಮೆಯಾಗಿ ಹೋಯಿತು.
ಆಗುಂಬೆ ಎಂದರೆ ಆಗುಂಬೆಯೇ.. ಅಲ್ಲಿ ಮಳೆ ಬೀಳುತ್ತಲೇ ಇರಬೇಕು.
ದೇಶಕ್ಕೊಂದು ಚಿರಾಪುಂಜಿಯಾದರೆ, ರಾಜ್ಯಕ್ಕೊಂದು ಆಗುಂಬೆ
ಅಂತಹ ಆಗುಂಬೆ ‘ಉಹುಂ’ ಎಂದು ಕೈ ಎತ್ತಿಬಿಟ್ಟರೆ..?
ಆಗಲೇ ಎಂ ಜಿ ರೋಡ್ ಎಕ್ಸ್ ಪ್ರೆಸ್ ಆಗುಂಬೆ ತಲುಪಿದ್ದು
ಮಳೆಯ ಮೋಡದ ಕೆಳಗೆ ಹೆಜ್ಜೆ ಹಾಕಿದ ಆನಂದರು ಆ ಲೇಖನಕ್ಕೆ  ಅವರು ಕೊಟ್ಟ ಹೆಸರು- ಆಗುಂಬೆಯಲ್ಲೇ ಮಳೆ ಇಲ್ಲ!
ಓಹ್ ! ಹೀಗಲ್ಲದೆ ಇನ್ನು ಹೇಗೆ ಹೇಳಲು ಸಾಧ್ಯ ಅನಿಸಿಹೋಯಿತು.
ಆಗ ತಾನೇ ಕವಿತೆಯ ಕೈ ಹಿಡಿದಿದ್ದೆ. ಜೊತೆಗೆ ಒಂದು ಕಣ್ಣು ಪತ್ರಿಕೋದ್ಯಮದ ಮೇಲಿತ್ತು
ಆನಂದರ ಈ ಲೇಖನ ನನ್ನೊಳಗೆ ಗುದ್ದಾಡುತ್ತಿದ್ದ ವರದಿಗಾರ- ನುಡಿಚಿತ್ರ ಬರಹಗಾರನ ಪೈಕಿ ಎರಡನೆಯವನೇ ‘ವಿನ್’ ಎಂದು ಸಾರಿಬಿಟ್ಟಿತು
ಆನಂದ, ನಾಗೇಶ್ ಹೆಗಡೆ, ಆರ್ ಪೂರ್ಣಿಮಾ, ಗೋಪಾಲ ಹೆಗಡೆ, ಶ್ರೀಪಡ್ರೆ ನನ್ನೊಳಗೆ ನುಡಿಚಿತ್ರ ಬರಹಗಾರನೊಬ್ಬನನ್ನು ಹುಟ್ಟು ಹಾಕಿದವರು
ಆನಂದ ಅವರದ್ದು ಒಂದು ಕೈ ಹೆಚ್ಚೇ ಎನ್ನಬೇಕು. ಏಕೆಂದರೆ ನನ್ನ ಲೇಖನಗಳೆಲ್ಲವೂ ಹೆಚ್ಚಾಗಿ ಬಂದು ಬೀಳುತ್ತಿದ್ದುದೇ ಆನಂದರ ಟೇಬಲ್ ಮೇಲೆ
ಹಾಗಾಗಿ ಆನಂದ ಅವರು ನನಗೆ ದ್ರೋಣಾಚಾರ್ಯರಿದ್ದಂತೆ. ಬೆರಳು ಕೇಳದ ದ್ರೋಣಾಚಾರ್ಯ.
sughosh1 022
‘ಮಳೆ- 
ಸೋವಿಯತ್ ಉತ್ಸವಕ್ಕೆ ಹವಾಮಾನ ಇಲಾಖೆ ಬರೆದ ಭಾಷ್ಯ 
ಹೌದು ಭವಿಷ್ಯ ಸುಳ್ಳಾಗದಂತೆ ಇಡೀ ರಾತ್ರಿ ಇನ್ನಿಲ್ಲದ ಮಳೆ 
ಚಪ್ಪಾಳೆಯ ಸುರಿ’ಮಳೆ’- 
ಎಂದು ನಾನು ಬರೆದಿದ್ದರೆ ಅದರ ಹಿಂದೆ ಆನಂದರ ಕಿವಿಮಾತುಗಳಿವೆ
ಇಂಗ್ಲಿಷ್ ಪತ್ರಿಕೋದ್ಯಮದಲ್ಲಿದ್ದು ಕನ್ನಡಕ್ಕೆ ಹೊರಳಿಕೊಂಡ ಪತ್ರಕರ್ತರ ಪೈಕಿ ಆನಂದ ಸಹಾ ಒಬ್ಬರು
ನಾಗೇಶ್ ಹೆಗಡೆ ಅವರ ಬಗ್ಗೆ ಬರೆಯುವಾಗ ನಾನು ಒಂದು ಮಾತು ಹೇಳಿದ್ದೆ. ನಾಗೇಶ್ ಹೆಗಡೆ ವಿಜ್ಞಾನ ಕ್ಷೇತ್ರ ಬಿಟ್ಟು ಪತ್ರಿಕೋದ್ಯಮಕ್ಕೆ ಬಂದದ್ದರಿಂದ ವಿಜ್ಞಾನ ಕ್ಷೇತ್ರಕ್ಕೆ ಏನು ನಷ್ಟವಾಯಿತೋ ಗೊತ್ತಿಲ್ಲ, ಆದರೆ ಪತ್ರಿಕೋದ್ಯಮಕ್ಕಂತೂ ಲಾಭವಾಯಿತು ಎಂದು. ಆನಂದ ಅವರ ವಿಷಯದಲ್ಲೂ ಅದು ಅಷ್ಟೇ ನಿಜ. ಇಂಗ್ಲಿಷ್ ಪತ್ರಿಕೋದ್ಯಮ ಏನು ಕಳೆದುಕೊಂಡಿತು ಗೊತ್ತಿಲ್ಲ, ಆದರೆ ಕನ್ನಡ ಪತ್ರಿಕೋದ್ಯಮ ಅದರಲ್ಲೂ ಮ್ಯಾಗಸಿನ್ ಪತ್ರಿಕೋದ್ಯಮ ಅಪಾರವಾಗಿ ಪಡೆಯಿತು.
ಆನಂದ ಅವರ ಹೆಸರು ಇಲ್ಲದೆ ಕನ್ನಡ ಮ್ಯಾಗಸಿನ್ ಪತ್ರಿಕೋದ್ಯಮದ ಇತಿಹಾಸ ಮುಂದೆ ಹೆಜ್ಜೆ ಹಾಕುವಂತಿಲ್ಲ.
ಆನಂದ ಅವರು ಒಂದು ರೀತಿ ಈಗಿನ ಜಾಗತೀಕರಣದ ಭಾಷೆಯಲ್ಲಿ ಹೇಳುವುದಾದರೆ ‘ಕಾಂಬೋ’ ಪ್ಯಾಕೇಜ್. ಮಸಾಲೆದೋಸೆ- ಹ್ಯಾಂಬರ್ಗರ್ ಎರಡೂ ಸೇರಿಸಿದ ಒಂದು ಹೈಬ್ರಿಡ್ ತಳಿ. ಬಹುಷಃ ಈ ರೀತಿಯ ‘ಕಾಂಬೋ’ತನ ಇದ್ದವರು ಆನಂದ ಅವರ ತಲೆಮಾರಿನಲ್ಲಿ ತೀರಾ ತೀರಾ ಕಡಿಮೆ. ಆನಂದ ಅವರೊಳಗೆ ಎಷ್ಟು ಗಾಢವಾಗಿ ಒಬ್ಬ  ನುಡಿಚಿತ್ರ ಬರಹಗಾರನಿದ್ದಾನೋ ಅಷ್ಟೇ ಪ್ರಖರ ವರದಿಗಾರನೂ ಇದ್ದಾನೆ. ಆನಂದ ಅವರೊಳಗೆ ಹೇಗೆ ಒಬ್ಬ ಗಂಭೀರ ವ್ಯಕ್ತಿಯಿದ್ದಾನೋ ಅದೇ ರೀತಿ ಒಬ್ಬ ಹಸನ್ಮುಖನೂ ಇದ್ದಾನೆ. ಹಾಗಾಗಿಯೇ ಆನಂದ ‘ವಾರೆ ನೋಟ’ವನ್ನೂ ಬರೆಯಬಲ್ಲರು, ಪ್ರಜಾವಾಣಿಯ ಸುದ್ದಿ ಡೆಸ್ಕ್ ಅನ್ನೂ ಸಮರ್ಥವಾಗಿ ನಿಭಾಯಿಸಬಲ್ಲರು, ಅಷ್ಟೇ ಅಲ್ಲ ಪ್ರತಿಯೊಬ್ಬರ ಮನದೊಳಗೂ ದೀರ್ಘಕಾಲ ಉಳಿಯುವಂತೆ ನುಡಿ ಚಿತ್ರದ ಮಾಲೆ ಹೆಣೆಯಬಲ್ಲರು. ಈ ಮೂರೂ ನನ್ನ ಅನುಭವಕ್ಕೆ ಬಂದಿದೆ.
ನಾನು ಕಲಬುರ್ಗಿಯಲ್ಲಿದ್ದೆ. ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಆವೃತ್ತಿ ತರುವ ಹುಮ್ಮಸ್ಸಿನಲ್ಲಿತ್ತು. ಅದಕ್ಕಾಗಿ ನಾನು ಕಲಬುರ್ಗಿ ತಲುಪಿಕೊಳ್ಳಬೇಕಾಗಿ ಬಂತು. ಅಲ್ಲಿ ಮುಟ್ಟಿದ ಒಂದಷ್ಟು ದಿನಕ್ಕೆ ನನಗೆ ಅದನ್ನು ಅಚ್ಚರಿ ಎಂದು ಬಣ್ಣಿಸಬಾರದೇನೋ.. ವಿಲಕ್ಷಣ ಅನುಭವವಾಯಿತು. ನಗರದ ಜನನಿಬಿಡ ಪ್ರದೇಶದಲ್ಲಿ ಅರೆ ಬೆತ್ತಲೆ ಮೆರವಣಿಗೆ ಹೊರಟಿತ್ತು. ಒಂದಲ್ಲ, ಎರಡಲ್ಲ, ಬಹುತೇಕ ಪ್ರತೀ ದಿನ. ನಾನು ಆ ಚಿತ್ರ ತೆಗೆಸಿದವನೇ ಬೆಂಗಳೂರಿನ ಪ್ರಧಾನ ಕಚೇರಿಗೆ ರವಾನಿಸಿದೆ. ಆ ದಿನ ಸುದ್ದಿ ನೇತೃತ್ವ ವಹಿಸಿದ್ದವರು ಆನಂದ. ಅವರಿಗೆ ಫೋನ್ ಮಾಡಿದವನೇ ಅದನ್ನು ಮೂರನೇ ಪುಟಕ್ಕೆ ತೆಗೆದುಕೊಂಡು ಬಿಡಿ ಸಾರ್ ಎಂದೆ.
ಬಂದರೆ ಸಾಕು ಎನ್ನುವಂತಹ ಪರಿಸ್ಥಿಯಲ್ಲಿ ಜಿಲ್ಲಾ ವರದಿಗಾರರಿದ್ದರು. ಆನಂದ ಆಗಲೇ ದನಿ ಗಂಭೀರ ಮಾಡಿಕೊಂಡಿದ್ದು. ‘Why not in page 1′ ಅಂದರು. ನಾನು ಬೆಬ್ಬೆಬ್ಬೆ ಎಂದೆ. ಏಕೆಂದರೆ ಆ ವೇಳೆಗೆ 6 ವರ್ಷ ಜಿಲ್ಲೆಯಲ್ಲಿ ಕೆಲಸ ಮಾಡಿದ್ದ ನನಗೆ ಆ ರೀತಿ ಕೇಳಿದವರು ಇವರೊಬ್ಬರೇ. ಅಲ್ಲಿಯವರೆಗೂ ಕಳಿಸಿದ್ದು ಬಂದರೆ ಸಾಕಪ್ಪ ಅಂತ ಅದನ್ನು ಅರ್ಥೈಸುವಷ್ಟರಲ್ಲಿ ನಾಲಿಗೆ ಬಿದ್ದು ಹೋಗುತ್ತಿತ್ತು. ಆನಂದ ಅದನ್ನು ಮೊದಲ ಪುಟದಲ್ಲಿ ಕಲರ್ ಫೋಟೋ ಪ್ರಕಟಿಸಿದರು. ಬರೀ ಕಲಬುರ್ಗಿ ಆವೃತ್ತಿಯಲ್ಲಲ್ಲ, ರಾಜ್ಯದ ಎಲ್ಲಾ ಅವೃತ್ತಿಗಳಲ್ಲೂ, ಮೊದಲ ಪುಟದಲ್ಲಿ ಈ ಫೋಟೋ ಕಾಣಿಸಿಕೊಂಡಿತು.
ಒಂದು ಚಿತ್ರ ಅಷ್ಟೇ.. ಕಲ್ಬುರ್ಗಿ ಮಾತ್ರವಲ್ಲ, ಇಡೀ ಕರ್ನಾಟಕ ಅಲುಗಿ ಹೋಯಿತು. ರಾಜ್ಯ ಸರ್ಕಾರಕ್ಕೆ ಮುಜುಗರವಾಗುವಷ್ಟು ಪ್ರಶ್ನೆಗಳು ತೂರಿ ಬಂದವು. ಆಮೇಲೆ ನಾನು ಅನುಭವಿಸಬೇಕಾಗಿ ಬಂದದ್ದಂತೂ ನನಗೆ ಪತ್ರಿಕೋದ್ಯಮ ಯಾವ ರೀತಿ  ಪರಿಣಾಮ ಬೀರಬಹುದು ಎಂಬುದನ್ನು ಮನದಟ್ಟು ಮಾಡಿಬಿಟ್ಟಿತು. ನಾನು ನನ್ನ ಪತ್ರಿಕೋದ್ಯಮ ವೃತ್ತಿಯಲ್ಲಿ ಹೆಮ್ಮೆಯಿಂದ ಮೆಲುಕು ಹಾಕುವ ವರದಿಗಳಲ್ಲಿ ಇದೂ ಒಂದು.
ಆನಂದ ಅವರಿಗೆ ಸರಿಯಾದ ಮೂಗಿತ್ತು. ಅದು ನಶ್ಯ ಏರಿಸಿಕೊಂಡು ಇಲ್ಲವೇ ಕಂಡದ್ದನ್ನೆಲ್ಲಾ ಮೂಸಿ ತನ್ನತನ ಕಳೆದುಕೊಂಡಿರಲಿಲ್ಲ. ಯಾಕೆಂದರೆ ನಮಗೆ ಪತ್ರಿಕೋದ್ಯಮದ ತರಗತಿಗಳಲ್ಲಿ ಹೇಳಿಕೊಟ್ಟಿದ್ದರಲ್ಲಾ ಪತ್ರಕರ್ತನಾಗಬೇಕು ಎಂದರೆ ಆತನಿಗೆ ಒಳ್ಳೆಯ ಸುದ್ದಿ ನಾಸಿಕವಿರಬೇಕು. Nose for News ಅಂತ. ಹಾಗೆಆನಂದರ ಮೂಗು ಸರಿ ಇದೆ ಎನ್ನುವುದನ್ನು ಈ ರೀತಿಯ ಎಷ್ಟೋ ಘಟನೆಗಳು ನನಗೆ ಮನವರಿಕೆ ಮಾಡಿಕೊಡುತ್ತಾ ಹೋಯಿತು. ಆನಂದ ಅವರಿಗೆ ಸರಿಯಾದ ಮೂಗಿತ್ತು ಎನ್ನುವುದಕ್ಕೆ ಅವರಿಗಿಂತ ಬೇರೆಯವರೇ ಹೆಚ್ಚು ಪ್ರೂಫ್ ಒದಗಿಸುತ್ತ ಹೋಗುತ್ತಿದ್ದರು
ಆನಂದ ಅವರು ವೈ ನಾಟ್ ಇನ್ ಪೇಜ್ ೧ ಅಂತ ಕೇಳಿದ್ದೂ ಅದು ಪ್ರಕತವಾಗಿದ್ದೂ ಕರ್ನಾಟಕ ಒಮ್ಮೆ ಅಲುಗಿದ್ದೋ ಎಲ್ಲಾ ಆಗಿ ನಾನು ಉತ್ಸಾಹದ ಉತ್ತುಂಗದಲ್ಲಿದ್ದೆ. ಹಾಗಾಗಿ ಮತ್ತೆ ಒಂದಲ್ಲ ಸಾಮೂಹಿಕ ಅರೆ ಬೆತ್ತಲೆ ಸೇವೆ ಹಾಗೂ ಸಾಮೂಹಿಕ ಪ್ರಾಣಿಬಲಿ ಸುದ್ದಿಯನ್ನು ಸಾಕ್ಷಿ ಸಮೇತ ಹಿಡಿದೆ. ಅದೇ ಉತ್ಸಾಹದಲ್ಲಿ ಸಂಪಾದಕರ ಕುರ್ಚಿಯಲ್ಲಿದ್ದವರಿಗೆ ಫೋನ್ ಮಾಡಿದೆ .’ಸಾರ್ ಇದು ಪೇಜ್ ಒನ್ ಗೆ ಬರಲಿ’ ಅಂತ. ಅವರು ‘ಪೇಜ್ ಒನ್ ಗೆ ಬರೋದು ಇದರಲ್ಲೇನಿದೆ’ ಎಂದರು. ನಾನು ಖುರ್ಚಿ ಮೇಲೆ ಇದ್ದರೆ ಸಾಲದು, ಮೂಗಿರಬೇಕು ಎಂಬ ಪಾಠ ಕಲಿತೆ.
IMG-20160704-WA0004
ಈ ಮೂಗು, ಹಾಸ್ಯ ಪ್ರಜ್ಞೆ, ವರದಿಗಾರಿಕೆ ಹೀಗೆ ಮೂರೂ ಮಸಾಲೆಯ ಮಿಕ್ಸ್ ಆದ ಕಾರಣಕ್ಕೇ ಇರಬೇಕು ಆನಂದ ಸುದ್ದಿಯ ಹಿಂದಿನ ಸುದ್ದಿಯನ್ನೂ, ಅಷ್ಟೇ ಅಲ್ಲ ಸುದ್ದಿಯ ಹಿಂದಿನ ಸುದ್ದಿಯ ಹಿಂದನ್ನೂ ಹುಡುಕುತ್ತಿದ್ದರು. ಇದು ನನಗೆ ಅನುಭವಕ್ಕೆ ಬಂದದ್ದು ಅವರ ನುಡಿಚಿತ್ರಗಳಿಂದಲೇ.
ಮುಖ್ಯಮಂತ್ರಿಗಳು ಜನತಾ ದರ್ಬಾರ್ ನಡೆಸುವುದು ಎಲ್ಲರಿಗೂ ಗೊತ್ತು. ಆದರೆ ಆ ಜನತಾ ದರ್ಬಾರ್ ಒಂದು ಮುಖ್ಯ ಸುದ್ದಿ ಅನಿಸುವುದಿಲ್ಲ ಅಥವಾ ಮುಖ್ಯ ಸುದ್ದಿ ಎಂದು ಅನಿಸಲೂಬಹುದು ಆದರೆ ಆ ಜನತಾ ದರ್ಬಾರ್ ನಲ್ಲಿ ಸ್ವೀಕರಿಸಿದ ಅರ್ಜಿಗಳು ಮುಂದೆ ಎಲ್ಲಿ ಹೋಗುತ್ತದೆ ಎನ್ನುವುದು ಕಾಣುವುದಕ್ಕೆ ಮಾತ್ರ ಆನಂದರೇ ಆಗಬೇಕಿತ್ತು.
ಸುಧಾದಲ್ಲಿ ಅವರು ಬರೆದ ‘ದೂರು, ದೂರು’ ಲೇಖನ ಆನಂದರಿಗೆ ಕನ್ನಡಿ ಹಿಡಿಯುವಂತಿತ್ತು.
‘ದಿನದ ಕತ್ತಲು ಸರಿಯುತ್ತಿದೆ. ಇನ್ನೊಂದು ಹಗಲಿನ ಉದಯಕ್ಕೆ ಹೆಚ್ಚಿನ ಸಮಯ ಬೇಕಾಗಿಲ್ಲ. ಆರೋಗ್ಯ ಪ್ರಜ್ಞೆಯ ಮಂದಿ ವ್ಯಾಯಾಮಕ್ಕೆ ಇಳಿದಿದ್ದಾರೆ. ಹಲವರು ಹಾಸಿಗೆಯಲ್ಲೇ ಕಾಲು ಚಾಚಿ ವಿಶ್ವದ ಆಗುಹೋಗುಗಳತ್ತ ಗಮನ ಹರಿಸಿದ್ದಾರೆ- ಪೇಪರ್ ಮೂಲಕ. ಇನ್ನು ಕೆಲವರಿಗೆ ಬೆಳಗಿನ ಜಾವದ ಸಕ್ಕರೆಯ ನಿದ್ದೆ. ಮೊದಲ ಪಾಳಿಯ ಕೆಲಸಕ್ಕೆ ಕಾರ್ಖಾನೆ, ಗಿರಣಿಗಳಿಗೆ ಹೋಗುವ ತರಾತುರಿ.
ಆದರೆ….
·         ಮಾಲೂರಿನ ಸಾಧು ಮುನಿಯಪ್ಪನಿಗೆ ಕಾಶೀಯಾತ್ರೆಯ ಹಂಬಲ. ಆದರೆ ಕೈಯಲ್ಲಿ ಕಾಸಿಲ್ಲ,
·         ಗುಲ್ಬರ್ಗ ಜಿಲ್ಲೆಯ ರುದ್ರವಾಡಿಯ ಜಿ.ಕೆ. ಬದ್ದೂರ್ ಅವರಿಗೆ ವರ್ಗದ ಚಿಂತೆ.
·         ಸಿರಸಿಯ ಎನ್.ಆರ್.ಕುಂಟಗಲ್ಲಿ ಅವರಿಗೆ ಬಾರದಿರುವ ಸಂಬಳದ ಬಗ್ಗೆ ಯೋಚನೆ.
·         ಬೆಳಗಾಂ ಜಿಲ್ಲೆಯ ರಟ್ಟೇಹಳ್ಳಿಯ ಶಾಲಾ ಪ್ರಾಧ್ಯಾಪಕಿ ಎಸ್.ಎ.ತತ್ತೂರ ಅವರಿಗೆ ವರ್ಗ ಬೇಕು.
·         ನಿವೃತ್ತ ಜವಾನ ಸಾಧನ್ ಗೆ ಪೆನ್ಶನ್ ಹಣ ಕೈ ಸೇರಿಲ್ಲ. ಸಂಸಾರ ಸಾಗಿಸಲು ಹಣಬೇಕು.
·         ನಿವೃತ್ತ ಯೋಧ ಮಹಮದ್ ಅಲಿಗೆ ಆಟೋರಿಕ್ಷಾ ಓಡಿಸಲು ಪರ್ಮಿಟ್ ಸಿಗುವದೇ ಎಂಬ ಚಿಂತೆ.
·         ಬೆಂಗಳೂರಿನ ಕಾಕ್ ಬರ್ನ್ ರಸ್ತೆಯಲ್ಲಿದ್ದ ಗುಡಿಸಲು ವಾಸಿಗಳ ದೂರು: ತಮ್ಮಮನೆಗಳನ್ನು ಕೆಡವಿದ್ದಾರೆ.
ಇವರೆಲ್ಲ, ಜೊತೆಗೆ ಇನ್ನೂ ಅನೇಕರು, ನಸುಕಿನಲ್ಲೇ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ‘ಕೃತಿಕಾ’ ನಿವಾಸದ ಮುಂದೆ ಸಾಲುಗಟ್ಟಿದ್ದಾರೆ. ಎಲ್ಲರ ಕೈಯಲ್ಲೂ ಅವರವರ ಅರ್ಜಿ. ಹೆಗಡೆ ಹೊರ ಬರುವುದನ್ನೇ ಕಾಯುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ. ವಾಯುಸಂಚಾರಕ್ಕೆ ಹೊರಡುವ ಮುನ್ನ. 6 ರಿಂದ 6.30ರ ವರೆಗೆ ಹೆಗಡೆ ಅವರಿಂದ ‘ಧರ್ಮದರ್ಶನ’ ಸಾಲುಗಟ್ಟಿ ನಿಂತವರ ಬಳಿಗೇ ಬಂದು ಅವರಿಂದ ಅರ್ಜಿ ಸ್ವೀಕರಿಸುತ್ತಾರೆ.
ಖಾಸಗಿ ಪತ್ತೇದಾರರು ಎಂದರೆ ಹಲವರನ್ನು ಹಿಂಬಾಲಿಸುವವರು ಅಂತಹ ಪತ್ತೇದಾರರನ್ನೇ ಹಿಂಬಾಲಿಸುವುದು ಆನಂದರ ವಾರೆ ನೋಟಕ್ಕೆ ಮಾತ್ರ ಸಾಧ್ಯವಾಗುತ್ತಿತ್ತು. ಸುಧಾದಲ್ಲಿ ಪ್ರಕಟವಾದ ‘ಹನಾಆ’ ಹೆಸರಿನಲ್ಲಿ ಬರೆದಿದ್ದ ‘ಇತರರ ವಿಷಯಗಳಲ್ಲಿ ತಲೆಹಾಕುವ ಖಾಸಗಿ ಪತ್ತೇದಾರರು’ ಲೇಖನ ನೋಡಿ-
ನೆನ್ನೆ ನಾನು ಚೈನೀ ಹೋಟೆಲೊಂದರಲ್ಲಿ ಊಟಮಾಡಿದೆ. ಏನು ವಿಶೇಷ ಅದರಲ್ಲಿ? ತಾಳಿ, ಆ ಕಡೆ ಮೂಲೆಯಿಂದ ಒಬ್ಬ ಎಂ.ಎಲ್.ಎ. “ಒಂದು ಲಾರ್ಜ್ ತಾ” ಎಂದು ಹೇಳಿ, `555’ ಸಿಗರೇಟ್ ಹಚ್ಚಿ, ಮಂತ್ರಿಗಳ ಪಿ.ಎ.-ಎಂತಹ ಅಜಾನುಬಾಹು ಆತ?- ಮತ್ತು ಇನ್ನೊಬ್ಬನೊಡನೆ ‘ಸಾವಿರಾರು ರೂಪಾಯಿ’, ‘ಚೀಫ್ ಇಂಜಿನಿಯರ್, ‘ನೀವು ಯಾರಿಗೂ ಹೇಳಬೇಡಿ’ ಮುಂತಾದ ಮಾತಿನಲ್ಲಿ ತೊಡಗಿದ್ದರು. ಈ ಕಡೆಯ ಮೇಜಿನಲ್ಲಿ ವೇಟರ್ ನನ್ನು ಕರೆಯಬೇಕಾದರೂ ‘ಎಕ್ಸ್ ಕ್ಯೂಸ್ ಮಿ’ ಎನ್ನುತ್ತಿದ್ದವರೊಬ್ಬರು ಸೋಡಾವನ್ನೇ ವಿಸ್ಕಿಯಂತೆ ಗುಟುಕರಿಸುತ್ತಿದ್ದರು. ಮತ್ತೊಂದು ಮೂಲೆಯಲ್ಲಿ ಇಬ್ಬರು ಏನು ಮಾತನಾಡಿದರೋ, ಏನು ತಿಂದರೋ ತಿಳಿಯುವ ಹಾಗಿರಲಿಲ್ಲ. ಉಳಿದ ಮೇಜುಗಳು ಖಾಲಿ…
”ವಿವರಣೆ ನೋಡಿದರೆ ಅಂತಹ ಹೋಟೇಲಿಗೆ ನಿಮ್ಮ ಪ್ರಥಮ ಭೇಟಿ ಎಂದೆನಿಸುತ್ತದೆ’ ಎಂದು ನೀವಂದರೆ ನಿಮ್ಮ ಮಾತು ನಿಜ. ಆದರೆ ಇಲ್ಲಿ ಸುದ್ದಿ ನನ್ನ ಹೋಟೆಲ್ ಭೇಟಿಯದ್ದಲ್ಲ, ನನ್ನ ಜೊತೆಗಾರರದ್ದು.
ಏಕೆಂದರೆ ನಾನು ಅಲ್ಲಿಗೆ ಹೋಗಿದ್ದು ಬೆಂಗಳೂರು ಖಾಸಗಿ ಪತ್ತೇದಾರರಿಬ್ಬರ ಜೊತೆ.
ಖಾಸಗಿ ಪತ್ತೇದಾರರು!
ಕಾಂಚೀನಗರ ಪತ್ತೇದಾರ ಪುರುಷೋತ್ತಮ, ರಾಮನಾಥ: ನಂತರ ಬಂದ ಮಧುಸೂಧನ, ಅರಿಂಜಯ; ಡಿಟೆಕ್ಟಿವ್ ಚಲಂ, ಇತ್ತೀಚಿನ ಗಾಳಿರಾಯ… ಇವರೆಲ್ಲಾ ಅಚ್ಚ ಕನ್ನಡಿಗರು!
ಕಡಲಾಚೆಯ ಶೆರ್ಲಾಕ್ ಹೋಮ್ಸ್, ಹರ್ ಕೂಲ್ ಪಾಯಿರೂ, ಪಾಲ್ ಡ್ರೇಕ್, ಬರ್ತಾ ಕೂಲ್, ಡೊನಾಲ್ಡ್ ಗ್ರೂಮ್… ಪ್ರಚಂಡ ‘007…’ ಆದರೆ ಈ ಮಂದಿ ಕಾದಂಬರಿಕಾರರ ಕಲ್ಪನಾ ವ್ಯಕ್ತಿಗಳು. ಪುಸ್ತಕದಲ್ಲಿ ಮೂಡಿಬಂದ ವ್ಯಕ್ತಿತ್ವದಿಂದ ಅವರೆಲ್ಲಾ ಅತಿಮಾನವರು, ಹೀರೋಗಳು. ಕೈಯಲ್ಲಿ ಪಿಸ್ತೂಲು, ಬಾಯಲ್ಲಿ ಸಿಗರೇಟು, ಬಗಲಲ್ಲಿ ಸುಂದರ ತರುಣಿ, ವಿದೇಶಿ ಮದ್ಯ, ಪಂಚತಾರಾ ಹೋಟೆಲು, ವಿಮಾನಯಾನ. ಕೃತಕವೇಷ, ಗೂಂಡಾಗಳೊಡನೆ ಹೊಡೆದಾಟ.
ಅದೆಲ್ಲಾ ಪುಸ್ತಕಗಳಲ್ಲಿ, ಸಿನಿಮಾಗಳಲ್ಲಿ. ನನ್ನ ಬಳಿ ಕುಳಿತ ಇಬ್ಬರು ಪತ್ತೇದಾರರು ನನ್ನಂತೆಯೇ.
ಕನ್ನಡಕ್ಕೆ ಬರೀ ಯಾವುದು ಸುದ್ದಿ ಎನ್ನುವುದನ್ನು ನೋಡುವ ಕಣ್ಣನ್ನಷ್ಟೇ ಅಲ್ಲ, ಅದನ್ನು ಹೇಗೆ ಮನದಾಳಕ್ಕೆ ಇಳಿಯುವಂತೆ ಬರೆಯಬೇಕು ಎಂದು ತೋರಿಸಿಕೊಟ್ಟವರೂ ಆನಂದರೇ
‘ಹಾಡಿಗಳಲ್ಲಿ ಬದಲಾವಣೆಯ ಹೊಸ ಗಾಳಿ’ ಎಂಬ ಲೇಖನದಲ್ಲಿ ಹೇಗಿತ್ತು ಬರವಣಿಗೆ.
”ಮೈಸೂರು ಜಿಲ್ಲೆಯ ಹುಣಸೂರಿನ ಸುತ್ತಮುತ್ತ ಡಾಂಬರು ರಸ್ತೆದಾಟಿ ಸರ್ಕಾರದ ವಾಹನಗಳು ಸುಳಿಯುವ ದಾರಿಯಲ್ಲಿ ಬಿಳಿಯ ಜೀಪೊಂದು ಆಗಾಗ್ಗೆ ಕಂಡುಬರುತ್ತದೆ. ಸೌದೆಯ ಹೊರೆ ಹೊತ್ತ ಕುರುಬ ಹೆಂಗಸರೋ, ಶಾಲೆಗೆ ಹೊರಟ ಕುರುಬ ಮಕ್ಕಳೋ ಆ ಜೀಪನ್ನು ಕಂಡಾಗ ಖುಷಿ ಪಡುತ್ತಾರೆ. ವಾಹನ ಹತ್ತಿರ ಬರುತ್ತಿದ್ದಂತೆ ಅರಳಿದ ಮುಖತುಂಬಾ ನಗೆ ತುಂಬಿಕೊಂಡು ‘ನಮಸ್ಕಾರ ಸಾ’ ಎಂದು ತಮ್ಮ ಅಗಲಿದ ಹಸ್ತವನ್ನು ಹಣೆಯ ಬಳಿ ತಂದುಕೊಳ್ಳುತ್ತಾರೆ. ಜೀಪು ನಿಲ್ಲಬಹುದು. ನಿಲ್ಲದಿದ್ದರೆ ಅದನ್ನು ನಡೆಸುವ ವ್ಯಕ್ತಿ ಅವರ ಮುಂದೆ ಕೈ ಆಡಿಸಿ ಮುಂದೆ ಹೋಗಬಹುದು. ಮುಂದೆ, ಗಂಭೀರ ಮುಖ ಹೊತ್ತ ಕುರುಬ ವಯಸ್ಕ ಕಂಡುಬರುತ್ತಾನೆ. ಜೀಪನ್ನು ನೋಡಿದ ತಕ್ಷಣ ಆತ ಅಲ್ಲೇ ನಿಂತು ಭಕ್ತಿಯಿಂದ ನಮಸ್ಕಾರ ಮಾಡುತ್ತಾನೆ.
ಜೀಪು ಭರ್ರೆಂದು ಎತ್ತರ ತಗ್ಗು, ಕಲ್ಲು ದಿಣ್ಣೆಗಳ ಮೇಲೆ ಥಕ ಧೀಂ ಎಂದು ಕುಣಿದು ಸಾಗುತ್ತಾ ನಗರ ಪರಿಸರದಿಂದ ಇನ್ನಷ್ಟು ದೂರ ಸರಿದು ಕಾಡಿನ ಸಮೀಪಕ್ಕೆ ಬಂದಂತೆ ಅಲ್ಲಲ್ಲಿ ಈ ‘ನಮಸ್ಕಾರ ಸಾ’ಗಳು, ಅರಳಿದ ಮುಖಗಳು ಮೂಡಿಬರುತ್ತವೆ. ಆದರೆ ಜೀಪಿನ ವ್ಯಕ್ತಿ ಯಾವ ಸರ್ಕಾರಿ ಅಧಿಕಾರಿಯೂ ಅಲ್ಲ.
‘ಗೆಜ್ಜೆ ಹೋಯ್ತು ಬುಟ್ಟಿ ಬಂತು’ ಲೇಖನದಲ್ಲಿ-
ಹಾಸನ ಜಿಲ್ಲೆಯ ಗೆಝಟೀರ್ ನಲ್ಲಿ ಅರಸೀಕೆರೆ ಬಳಿ ಇರುವ ಮಲದೇವಿಹಳ್ಳಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಒಂದಾನೊಂದು ಕಾಲದಲ್ಲಿ ಇಲ್ಲಿ ಚಿನ್ನದ ಹೊಗೆ ಏಳುತ್ತಿತ್ತಂತೆ ಪ್ರತಿದಿನ. ಹಾಗೆಂದು ನೆರೆ ಊರಿನ ಜನ ಹೇಳುತ್ತಿದ್ದರೆಂದು ಇಂದು ಈ ಕುಗ್ರಾಮದಲ್ಲಿ ಅನೇಕರು ಜ್ಞಾಪಿಸಿಕೊಳ್ಳುತ್ತಾರೆ.
ಚಿನ್ನದ ಹೊಗೆ ಏಳುತ್ತಿತ್ತು ಎಂದರೆ ಇಲ್ಲಿ ಬಂಗಾರವನ್ನು ಪುಟಕ್ಕೆ  ಹಾಕುತ್ತಿದ್ದರು ಎಂದಲ್ಲ. ಪುಟಕ್ಕೆ ಬೀಳುತ್ತಿದ್ದುದು ಯಃಕಶ್ಚಿತ್ ಹಿತ್ತಾಳೆ. ಆದರೆ ಇದನ್ನೇ ಬಂಗಾರಕ್ಕೆ ಹೋಲಿಸುತ್ತಿದ್ದುದಕ್ಕೆ ಕಾರಣ ಹಿತ್ತಾಳೆಯಿಂದಲೇ ಅಷ್ಟೊಂದು ವರಮಾನ ಇದ್ದುದರಿಂದ. ಏಕೆಂದರೆ ಮಲದೇವಿ ಹಳ್ಳಿಯಲ್ಲಿ ತಯಾರಾಗುತ್ತಿದ್ದ ಹಿತ್ತಾಳೆ ಗೆಜ್ಜೆಗಳು ಪ್ರಸಿದ್ಧಿಯಾಗಿ ಇಡೀ ರಾಜ್ಯದಲ್ಲಿ ಮತ್ತು ನೆರೆ ರಾಜ್ಯಗಳಲ್ಲಿ ಸಹ ಅವುಗಳಿಗೆ ಅಪಾರ ಬೇಡಿಕೆ ಇರುತ್ತಿತ್ತು.
ಈ ಎಲ್ಲವನ್ನೂ ಮೆಲುಕು ಹಾಕುತ್ತಾ ಆನಂದರ ‘ವಾರೆನೋಟ’ ಕೃತಿಯನ್ನು ನನ್ನ ಎದುರು ಹರಡಿಕೊಂಡು ಕುಳಿತಿದ್ದೇನೆ. ಸುಧಾ ಎಂದಾಕ್ಷಣ ಅರ್ಧ ಪುಟದಲ್ಲಿರುತ್ತಿದ್ದ ಆದರೆ ಅರ್ಧ ಜಗತ್ತನ್ನೇ ನಮ್ಮೆದುರು ತಂದು ಕೂರಿಸುತ್ತಿದ್ದ, ವ್ಯಂಗ್ಯವಿದ್ದ ಆದರೆ ವಿಷಾದದ ನಿಟ್ಟುಸಿರು ಹುಟ್ಟುವಂತೆ ಮಾಡುತ್ತಿದ್ದ ವಾರೆನೋಟ ನೆನಪಾಗುತ್ತಿದೆ
ಆನಂದ ಅವರು ಕೇವಲ ಪತ್ರಕರ್ತರಾಗಿ ಮಾತ್ರವಲ್ಲ ಅದರಾಚೆಗೂ ನನಗೆ ಸಿಕ್ಕರು ಎನ್ನುವುದು ನನಗೆ ಹೆಮ್ಮೆಯ ವಿಷಯ. ‘ಕೊರವಂಜಿ’ಯ ಬಂಧುವಾಗಿ, ಒಳ್ಳೆ ಸಂಗೀತದ ಕೇಳುಗರಾಗಿ, ನಮ್ಮೊಳಗೇ ಒಂದು ಖುಷಿ ಕೂರಿಸಬಲ್ಲ ಹಿರಿಯರಾಗಿ..
ಅವರು ನನ್ನೊಳಗಿನ ಆನಂದ 

‍ಲೇಖಕರು Avadhi

7 July, 2016

5 Comments

  1. ಹೇಮಾ

    ಬಹಳ ಆಪ್ತವಾದ ಬರಹ. ಆನಂದರ ಬರಹದ ಸೂಕ್ಷ್ಮತೆಗಳನ್ನು ಬಹಳ ಚೆಂದದಲ್ಲಿ ತೆರೆದುತೋರಿಸಿದ್ದೀರಿ.
    ಧನ್ಯವಾದಗಳು ಸರ್

  2. ಭುವನಾ

    ಸರ್, ಗುರುದಕ್ಷಿಣೆ ಎಂದರೆ ಇದೇ ತಾನೇ…
    ಮನದುಂಬಿದ ಕೃತಜ್ಞತೆಯನ್ನು ಹಂಚಿಕೊಳ್ಳುವುದು.

  3. ಎಚ್.ಎಸ್. ರಾಘವೇಂದ್ರ ರಾವ್

    ಅಪರೂಪದ ಗುರುದಕ್ಷಿಣೆ. ಶ್ರೀ ಹ.ನ. ಆನಂದ ಅವರು ನ್ಯಾಷನಲ್ ಕಾಲೇಜಿನಲ್ಲಿ ನನ್ನ ಹಿರಿಯ ಸಹಪಾಠಿ. ಹೆಚ್ಚಿನ ಪ್ರಚಾರ ಮಾಡದೆ ವಿದ್ಯಾರ್ಥಿಸಂಘದ ಅಧ್ಯಕ್ಷರಾಗಿ ಆಯ್ಕೆಯಾದವರು. ವಿಜ್ಞಾನದಿಂದ ಪತ್ರಿಕೋದ್ಯಮಕ್ಕೆ ಹೋಗಿ, ಅಲ್ಲಿ ಅಬ್ಬರವಿಲ್ಲದೆ, ಪ್ರಚಾರವಿಲ್ಲದೆ ಒಳ್ಳೆಯ ಕೆಲಸ ಮಾಡಿದವರು. ಪ್ರಜಾವಾಣಿ ಬೆಳೆದಿದ್ದು ಇಂಥ ಹಲವರ ದುಡಿಮೆಯಿಂದ. ನಿಮ್ಮ ಬರವಣಿಗೆ ಆರ್ದ್ರವಾಗಿದೆ. ಆನಂದರ ಬಗ್ಗೆ ಹೇಗೋ ಹಾಗೆಯೇ ಪತ್ರಿಕೋದ್ಯಮದ ಬಗ್ಗೆಯೂ ಹೇಳುತ್ತದೆ. ಅಭಿನಂದನೆಗಳು.

  4. lalitha sid

    ನಮಸ್ಕಾರ ಜಿಎನ್ ಎಂ,
    ಈ ಲೇಖನದೊಳಗಿನ ತನಿ ಎಂತಹ ಬರಡು ಎದೆಯೊಳಗೂ ತೇವ ಹನಿಸುವಂತಿದೆ. ಮುಖ್ಯವಾದುದೆಂದರೆ ನನ್ನ ಹಾಗೆ ಶ್ರೀ. ಆನಂದರನ್ನು ಏನೇನೂ ಅರಿಯದ ಅನೇಕರಿಗೆ ಅವರ ಘನ ವ್ಯಕ್ತಿತ್ವದ ಅರಿವು ಮೂಡಿಸುತ್ತದೆ. ನಿಮಗೆ ಧನ್ಯವಾದಗಳು.
    ಹಾಗೆಯೇ ಹಿರಿಯರಾದ ಹೆಚ್ ಎಸ್ ಆರ್ ಬರೆದಿರುವ ಪ್ರತಿಕ್ರಿಯೆಯು ಲೇಖನದ ಆಯಾಮವನ್ನು ಹಿಗ್ಗಿಸಿದೆ.

  5. asha

    Excellent article Sir..I used to enjoy Mr.Anand’s Vaarenota in Sudha magazine. Great person and a a great human being..God bless him.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading