ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರಲ್ಲಿ ಇಲ್ಲದ್ದು ಇಲ್ಲಿದೆ, ಇಲ್ಲಿರುವುದು ಹೀಗಿದೆ ..

-ಸಂತೋಷ್ ಅನಂತಪುರ

ಪ್ರವಾಸ ನನ್ನ ಪ್ರೀತಿಯ ವಿಷಯ. ನಾನು ಎಲ್ಲೇ ಹೋದರೂ ಆ ಮಣ್ಣಿನ ಸೊಗಡನ್ನು ಅನುಭವಿಸಿಯೇ ಬರುವವನು. ಯಾಕೆಂದರೆ, ಆಯಾ ಪ್ರದೇಶದ ಒಳಹನ್ನು ಅರಿಯಬೇಕಾದರೆ, ಅಲ್ಲಿನ ಸಂಸ್ಕೃತಿಪರಂಪರೆ,ಆಚಾರವಿಚಾರ,ಹಬ್ಬಹರಿದಿನ, ಆಹಾರಉಡುಗೆ ತೊಡುಗೆ ಇವೆಲ್ಲವನ್ನು ಸಾಧ್ಯವಾದಷ್ಟು ಮಟ್ಟಿಗೆ ಅರಿತುಕೊಂಡು ಅಲ್ಲಿ ಅದನ್ನು ಅನುಭವಿಸಿದರೆನೇ ಪ್ರವಾಸ ಸಾರ್ಥಕ ! ಇವುಗಳಲ್ಲಿ ಬಹು ಸುಲಭವಾಗಿ ನಾವು ಮಾಡಬಹುದಾದ ಕೆಲಸವೆಂದರೆ ಆಯಾ ಪ್ರದೇಶದ ರುಚಿಯನ್ನು ನಮ್ಮ ನಾಲಗೆಗೆ ಸವರುವುದು ! ಇದು ತಕ್ಷಣಕ್ಕೆ ನಮ್ಮ ಪಂಚೇಂದ್ರಿಯಗಳನ್ನು ಚುರುಕುಗೊಳಿಸಿ ಪ್ರವಾಸದ ಮುಂದಿನ ಹಂತಕ್ಕೆ ನಮ್ಮನ್ನು ತಯಾರು ಮಾಡುತ್ತವೆ. ಹಾಗೆ ನಾನು ಹೋದ ಮತ್ತು ಹೋಗಲೇಬೇಕೆಂದುಕೊಂಡಿದ್ದ ಜಾಗ ಹಂಪಿ“. ವಿಜಯನಗರದ ಆ ವೈಭವವನ್ನು ಓದಿ, ಕೇಳಿ ಗೊತ್ತಿರುವ ನನಗೆ, ಹಾಳು ಹಂಪೆ ಎಂದು ಕೇಳಿಯೂ ಗೊತ್ತಿತ್ತು . ಹಾಗಂತ ನೋಡಿರಲಿಲ್ಲ. ಸರಿ ಎಂದು ನಾವೊಂದಿಷ್ಟು ಜನ ಸಮಾನ ಮನಸ್ಕರು ಹೊರಟೇ ಬಿಟ್ಟೆವು.

ವಿಜಯ ನಗರದ ಆ ವೈಭವದ ದಿನಗಳನ್ನು ಮತ್ತು ನಂತರದ ಅಧ:ಪತನದ ದಿನಗಳನ್ನು ನೆನೆದು ಕಣ್ಣಾಲಿಗಳು ತೇವಗೊಂಡವು. ಎಂಥ ವಾಸ್ತು ಶಿಲ್ಪ, ವೈಭೋಗ, ಪರಂಪರೆ, ಸಂಸ್ಕೃತಿಗಳಿದ್ದಿರಬೇಡ ! ಪಕ್ಕದಲ್ಲೇ ಹರಿಯುವ ತುಂಗಭದ್ರೆ ಅದೆಷ್ಟು ಪುಣ್ಯವಂತೆ ಹಾಗೂ ನತದೃಷ್ಟೇ ! ವೈಭವದ ಆ ದಿನಗಳನ್ನು ಮತ್ತು ಶಿಥಿಲಾವಸ್ಥೆಯ ಈ ದಿನಗಳನ್ನು ಮೈ ತುಂಬಿ ಅನುಭವಿಸಿದವಳಲಲ್ಲವೇ !ಪುರಂದರ ದಾಸರು ತುಂಗೆಯ ಮಡಿಲಲ್ಲಿ ಕುಳಿತು ಹಾಡುತ್ತಿದ್ದ ದಿನಗಳೆಂತ ಸೊಬಗಿನದ್ದಾಗಿರಬಹುದು ಎಂದು ಒಮ್ಮೆ ಊಹಿಸಿಕೊಳ್ಳಿ. ಅಂತಹ ಶ್ರೇಷ್ಟ ದಾಸವರೆಣ್ಯರು ಉತ್ತಮ ಪ್ರಭುತ್ವ ಲೊಳಲೊಟ್ಟೆ ಎಂದಿದ್ದು ಸಾಮಾನ್ಯವಾದ ಮಾತೆ !! ಆಗಿನ ಕಾಲದಲ್ಲೇ ನೀರು ಸರಬರಾಜಿಗೆ ಕಂಡುಕೊಂಡ ಮಾರ್ಗೋಪಾಯಗಳು ಎಷ್ಟು ಅಧ್ಬುತ. ಕಲ್ಲರಳಿ ಹೂವಾಗಿದ್ದು ಇಲ್ಲೇ ಅಲ್ಲವೇ , ಮುತ್ತು ,ರತ್ನ, ಚಿನ್ನ, ಬೆಳ್ಳಿ, ವೈಢೂರ್ಯಗಳನ್ನು ಬೀದಿಯಲ್ಲಿ ಮಾರುತ್ತಿದ್ದ ಫಲವತ್ತಿನ ಜಾಗವಲ್ಲವೇ, ವಿರೂಪಾಕ್ಷ ನೆಲೆಸಿದ ಬಿಡಲ್ಲವೇ,ಅಕ್ಕ ತಂಗಿಯರು ಕಲ್ಲಲ್ಲೂ ಜೊತೆಯಾಗಿರುವ ಪ್ರದೇಶವಲ್ಲವೇ, ಉಗ್ರ ನರಸಿಂಹ ಉಗ್ರನಾಗಿ ಸುಮ್ಮನೇ ಕುಳಿತದ್ದು ಇಲ್ಲೇ ಅಲ್ಲವೇ ! ಉಗ್ರ ನರಸಿಂಹನ ಉಗ್ರ ಶಿಲ್ಪವು ಬಿರುಕು ಗೊಂಡಾಗ, ನಮ್ಮ ಕಡಲ ತಡಿಯ ಉಗ್ರ ನರಸಿಂಹ ಶಿವರಾಮ ಕಾರಂತರು ಉಗ್ರ ರೂಪ ತಾಳಿದ್ದೂ ಮನದ ಸುಳಿಯಲ್ಲಿ ಒಮ್ಮೆ ಹಾದು ಹೋಯಿತು. ಇದೀಗ ಒಬ್ಬರು ಮಣ್ಣಾಗಿ ಇನ್ನೊಬ್ಬರು ಕಲ್ಲಾಗಿ ಸುಮ್ಮನೇ ಕುಳಿತು ಮಲಗಿಹರು !

ಅಂತಹ ಹಂಪಿ,ವಿಜಯನಗರವನ್ನು ವಾರ ಪೂರ್ತಿ ನೋಡಿದರೂ ಮೈ ಮನಗಳು ತಣಿಯುವುದಿಲ್ಲ ಅಂದರೆ ಅದೆಷ್ಟು ರೋಚಕತೆಗಳನ್ನು ಇನ್ನೂ ಅದು ತನ್ನ ಗರ್ಭದಲ್ಲಿರಿಸಿಕೊಂಡಿದೆ ಎಂದು ಒಮ್ಮೆ ಯೋಚಿಸಿ. ನಮ್ಮ ದೇಶದಲ್ಲೇ ನೋಡಲು, ಅರಿಯಲು, ಮನವ ತಣಿಸಲು ಅದೆಷ್ಟು ಜಾಗಗಳಿಲ್ಲ ಹೇಳಿ ? ಅದನ್ನೇ ಸರಿಯಾಗಿ ನೋಡದೇ ಸಮುದ್ರ ಹಾರುವವರಿಗೆ ಏನನ್ನೋಣ !? ಇರಲಿ, ಅವರವರ ಭಾವ, ಭಕುತಿ ಸ್ವಾಮಿ. ನಮ್ಮಲ್ಲಿನ ಲೌಕಿಕ ಸಂಪತ್ತನ್ನು ದಾಳಿಕೋರರು ಎಷ್ಟೇ ದೋಚಿಕೊಂಡು ಹೋದರೂ ನಮ್ಮ ಅಲೌಕಿಕ, ಬೌದ್ಧಿಕ, ಸಂಸ್ಕೃತಿಸಂಸ್ಕಾರಗಳನ್ನು ದೋಚಲು, ಹಾಳುಗೆಡವಲು ಸಾಧ್ಯವಾಗಲಿಲ್ಲ. ಸಾಮಾನ್ಯವಾಗಿ, ಭಾರತ ಅಂದ್ರೆ, ಹಾವಾಡಿಗರ, ಮಾಟಮಾಂತ್ರೀಕರ ದೇಶವೆಂದು ಬಿಂಬಿತವಾಗಿತ್ತು. ಇಂದು ಅದು ಅಷ್ಟು ಪ್ರಮಾಣದಲ್ಲಿ ಇಲ್ಲದಿದ್ದರೂ ಅಲ್ಪ ಪ್ರಮಾಣದಲ್ಲಿ ಇದ್ದೇ ಇದೆ ಎಂದು ನನ್ನ ಭಾವನೆ. ಅದಕ್ಕೆ ಪೂರಕವಾಗಿ ನಾನು ಹಂಪಿಯಲ್ಲಿ ಕಂಡ ಕೆಲವೊಂದು ದೃಶ್ಯಗಳನ್ನು ಸೆರೆ ಹಿಡಿದಿದ್ದೇನೆ ಅದು ಇಲ್ಲಿದೆ ನೋಡಿ !!!

ಬಹುಶ ಪಾಶ್ಚಾತ್ಯರ ಕಣ್ಣಿಗೆ ಭಾರತವೆಂದರೆ ಇಂದೂ ಹೀಗೆ ಏನು ? ಅದು ಛಾಯಾಗ್ರಹಣದ ಆಸಕ್ತಿಯೆ ? ಅಥವಾ ಅಲ್ಲಿ ಇಲ್ಲದ್ದು ಇಲ್ಲಿದೆಯೆಂಬ, ಅವರಲ್ಲಿ ಇಲ್ಲದ್ದು ಇಲ್ಲಿದೆ, ಇಲ್ಲಿರುವುದು ಹೀಗಿದೆ ಎಂದು ಜಗತ್ತಿಗೆ ತೋರಿಸುವ ಸಂಕಲ್ಪವೇ…? ಒಂದೂ ಅರ್ಥವಾಗಲಿಲ್ಲ. ಒಂದು ಮಾತ್ರ ಅರ್ಥವಾಯಿತು, ಬೀದಿಯಲ್ಲಿ ಮುತ್ತು ,ರತ್ನ, ಚಿನ್ನ, ಬೆಳ್ಳಿ, ವೈಢೂರ್ಯಗಳನ್ನು ಮಾರುತ್ತಿದ್ದ ವೈಭೋಗದ ದಿನಗಳು ಅಂದಾಗಿದ್ದಾರೆ, ಇಂದು ಮಣ್ಣನ್ನು ಮಾರಿ ಬಂಗಾರದ ಕಿರೀಟಗಳನ್ನು ಧಾರೆಯೆರವ, ಧರಿಸುವವರೇ ಹೆಚ್ಚು. ಪ್ರಗತಿಯ ಹೆಸರಲ್ಲಿ ಎಲ್ಲೆಲ್ಲೂ ಅಗೆದು, ಬಗೆದು ಕೆಂಧುಳನ್ನು ಎಬ್ಬಿಸುವ ಭೂದಾಹದ ನಮ್ಮ ಇಂದಿನ ದೊರೆಗಳೆಲ್ಲಿ, ಅಂದಿನ ಅರಸರೆಲ್ಲಿ….? ಭಾರತ ಬಡವರ, ಹಾವಾಡಿಗರ ಮಾಟಮಂತ್ರಗಳ ದೇಶವೆಂದು ಇಂದಿಗೂ ನಂಬಿರುವ , ನಂಬಿಸುತ್ತಿರುವ ವಿದೇಶೀಯರೆಲ್ಲಿ……? ಯಾರು ಹಿತವರು ನಿಮಗೆ ಈ ಮೂವರೊಳಗೆ….???

 

‍ಲೇಖಕರು avadhi

28 October, 2011

1 Comment

  1. sudha chidanandagowda

    kelamattige idu nijavadaru, Bhaaratada bagge videsheeyarigiruvashtu gowrava illiyavarige illavende anisuttade. Hampiya itihaasavannu dakhalisiruvavaru videshi pravasigaru. Bahuteka pravaasigaru adanu odi, prabhaavitaraagiye baruttarenduu toruttade. Aadare banda mele bahutekaru bramanirasalagolluvudu khandita!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading