ಅಂವಾ ಸಿಐಡಿ ಆಫೀಸರ್ ಅಂತೆ, ಊರಲ್ಲೆಲ್ಲ ಏನೇನು ಆಗುತ್ತೆ ಅಂತಾ ತಿಳ್ಕಂಬಲೆ ಹಂಗೆಲ್ಲ ಓಡಾಡ್ತ್ನಡ. ಮಳ್ಳರಂಗೆ ಮಾಡ್ಕ್ಯಂಡು. ನಮ್ಮನೆಲಿ ಹೇಳ್ಕತ್ತಿದ್ರು… ಗೆಳತಿ ರೇಖಾ ಭಟ್ಟ ಒಬ್ಬ ಮಾನಸಿಕ ಅಸ್ವಸ್ಥನನ್ನು ತೋರಿಸಿ ಹೇಳುತ್ತಿದ್ದರೆ ನಾವೆಲ್ಲ ಬಿಟ್ಟ ಬಾಯಿ ಬಿಟ್ಟುಕೊಂಡೇ ಇರುತ್ತಿದ್ದೆವು. ಅಲ್ಲಲ್ಲಿ ಹರಿದು ಹೋದ ಅಂಗಿ ಯಾವುದು… ಏನು ಹಾಕಿದ್ದಾನೆ ಎಮಬುದೇ ಗೊತ್ತಾಗದಂತಹ ಚಿಂದಿ ಉಡುಪು ಧರಿಸಿ, ತನ್ನಷ್ಟಕ್ಕೇ ಗೊಣಗುತ್ತ ಆತ ರಸ್ತೆಯ ಮೇಲೆ ಹೋಗುತ್ತಿದ್ದರೆ ಯಾರೆಂದರೆ ಯಾರೂ ತಕ್ಷಣ ಅವನೊಬ್ಬ ಹುಚ್ಚ ಎಂದು ಹೇಳಿಬಿಡಬಹುದಾದಷ್ಟು ಅಸ್ವಸ್ಥ. ಆದರೆ ತಿಂಗಳಲ್ಲಿ ಎರಡು ಮೂರು ಸಲ ಅದೇ ರಸ್ತೆಯಲ್ಲಿ ಕಾಣಸಿಗುತ್ತಿದ್ದ. ಕೆಲವೊಮ್ಮೆ ನಾವೆಲ್ಲೋ ಆಡಲು ಹೋದರೆ ಅಲ್ಲೂ ಕಾಣಸಿಕ್ಕು ಭಯ ಹುಟ್ಟಿಸುತ್ತಿದ್ದ. ಎಷ್ಟೋ ಸಲ ನಮ್ಮನ್ನೇ ಹಿಂಬಾಲಿಸುತ್ತಿದ್ದಾನೇನೋ ಎನ್ನಿಸಿ ಆತ ಕಂಡರೆ ಸಾಕು ನಾವು ದಿಕ್ಕು ಬದಲಿಸುವಂತಾಗಿದ್ದೂ ಸುಳ್ಳಲ್ಲ. ಹೀಗಾಗಿ ಎಷ್ಟೋ ಸಲ ಇವ ಹುಚ್ಚನೋ ಅಥವಾ ಹುಚ್ಚರ ವೇಷದಲ್ಲಿರುವ ಗೂಢಾಚಾರನೋ ಎನ್ನಿಸಿಬಿಡುತ್ತಿತ್ತು. ಅದರಲ್ಲೂ ಮಾರ್ಚ ತಿಂಗಳಲ್ಲಿ ಪರೀಕ್ಷೆ ಮುಗಿಸಿ ಬೆಟ್ಟ ಬ್ಯಾಣ ತಿರುಗಿ, ಗೇರು ಬೀಜ, ಮಾವಿನ ಮಿಡಿ ಎಂದೆಲ್ಲ ಕುರುಕುವಾಗ ಧುತ್ತನೆ ಎದುರಿಗೆ ಪ್ರತ್ಯಕ್ಷನಾಗಿ ಈತ ಖಂಡಿತಾ ನಮ್ಮ ಅಪ್ಪ ಅಮ್ಮಂದಿರೇ ನೇಮಿಸಿದ ಗೂಢಾಚಾರ ಇದ್ದರೂ ಇರಬಹುದು ಎನ್ನಿಸುತ್ತದ್ದುದಂತೂ ಸುಳ್ಳಲ್ಲ. ಹಾಗಂತ ಆತ ಎದುರು ಬಂದು ನಿಂತರೂ ಆತನ ಕಣ್ಣು ಯಾರನ್ನೂ ಗುರುತಿಸಿದ ಹಾಗೆ ಕಾಣುತ್ತಿರಲಿಲ್ಲ. ನಾವೇನೇ ತಿನ್ನಲು ಕೊಟ್ಟರೂ ಅದರತ್ತ ತಿರುಗಿಯೂ ನೋಡುತ್ತಿರಲಿಲ್ಲ.

ಮಳೆಗಾಲದಲ್ಲಿ ಒದ್ದೆಯಾದ ಬಟ್ಟೆಯಲ್ಲಿಯೇ ಇಹದ ಪರಿವೆ ಇಲ್ಲದೇ ಒಂಟಿ ಸಲಗನ ಹಾಗೆ ಆತ ಹೋಗುತ್ತಿದ್ದರೆ, ಅರೆ..!! ಅವಂಗೆ ಮಳೇನೇ ತಾಗ್ತಿಲ್ಲೆ ಎಂದು ಅಚ್ಚರಿ ಪಡುತ್ತಿದ್ದೆವು. ಚಳಿಗಾಲದಲ್ಲಿ ಆ ಸಿರಸಿ ತಾಲೂಕಿನ ಪುಟ್ಟ ಹಳ್ಳಿಯಲ್ಲಿ ‘ಮೂರು ಕಂಬಳಿ ಚಳಿ’ ಇದ್ದು ನಾವೆಲ್ಲ ಒಂದಿಷ್ಟು ಬಿಸಿಲಿಗೆ, ಒಂದಿಷ್ಟು ‘ಹೊಡತ್ಲ’ಕ್ಕೆ ಪರದಾಡುತ್ತಿದ್ದರೆ ಆತ ಚಳಿ ತನ್ನನ್ನಲ್ಲ ತನ್ನ ಒಂದು ಕೂದಲನ್ನೂ ಸೋಕದು ಎಂಬಷ್ಟು ತನ್ನ ಹರಕು ಅಂಗಿಯಲ್ಲೇ ರಾಜಾರೋಷವಾಗಿ ಓಡಾಡಿಕೊಂಡಿದ್ದ. ಒಂದು ತೂತಿನಲ್ಲಿ ಒಳ ಹೊಕ್ಕ ಚಳಿ ಇನ್ನೊಂದು ತೂತಿನಲ್ಲಿ ತನ್ನಷ್ಟಕ್ಕೇ ತಾನು ಹೊರಟು ಹೋಗುತ್ತೆ. ಅದಕ್ಕೂ ನನಗೂ ಸಂಬಂಧವೆ ಇಲ್ಲ ಅನ್ನುವ ಹಾಗೆ ಬಿಂದಾಸ್ ಆಗಿದ್ದು ಬಿಡುತ್ತಿದ್ದ. ಅಂತಹ ಸಪೂರ ದೇಹದ ತಲೆಯೆಲ್ಲ ಕೆದರಿಕೊಂಡು ಉರು ಸುತ್ತುವ ಆತ ಸಿ.ಐ.ಡಿ ಇರಬಹುದು ಎನ್ನುವ ಅನುಮಾನ ನನಗೂ ಕಾಡಲಾರಂಭಿಸಿತ್ತು. ಸುಮ್ನೆ ಹಾಗೆ ಹೇಳ್ತಿದ್ದೀನಿ, ಹುಚ್ಚನನ್ನು ಸಿ.ಐಡಿ ಅನ್ನುವ ಇವಳೊಬ್ಬಳು ಹುಚ್ಚಿ ಅಂದ್ಕೋಬೇಡಿ. ನಾನು ಹಾಗೆ ಹೇಳೋದಕ್ಕೂ ಕಾರಣ ಇದೆ. ನಾನು ಶಾಲೆಗೆ ರಜೆ ಎಂದು ಅಕ್ಟೋಬರ್ ಮತ್ತು ಎಪ್ರಿಲ್ ತಿಂಗಳಲ್ಲಿ ಶಿರಸಿಯ ಆ ಹಳ್ಳಿ ಬಿಟ್ಟು ಕುಮಟಾದ ಹಿರೇಗುತ್ತಿಗೆ ಬಂದರೆ ಅರೆ..!! ಆತ ಅಲ್ಲೂ ಕಾಣಿಸಿಕೊಳ್ಳುತ್ತಿದ್ದ. ಬಸ್ ಹತ್ತದ, ನಡೆದುಕೊಂಡೇ ಬರುವ ಆತ ಅಷ್ಟೆಲ್ಲ ವೇಗವಾಗಿ ಹೇಗೆ ಸಾಧ್ಯ ಎಂಬುದು ನನ್ನ ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ಅದಕ್ಕಿಂತ ಹೆಚ್ಚಾಗಿ ಆತ ಊಟ ಮಾಡಿದ್ದನ್ನೇ ನಾನು ಕಂಡಿರಲಿಲ್ಲ.
ಯಾರು ಏನು ಕೊಟ್ಟರೂ ತೆಗೆದು ಕೊಳ್ಳದ ಆತ ಯಾವಾಗ ಹೊಟ್ಟೆಗೆ ಏನು ತಿನ್ನುತ್ತಾನೆ ಎಮಬುದನ್ನು ಗಮನಿಸಲು ಒಂದನೇ ತರಗತಿಯಲ್ಲಿದ್ದ ನಾವು ನಾಲ್ವರೂ ಎಷ್ಟೋ ಸಲ ಆತನನ್ನು ಹಿಂಬಾಲಿಸಿ, ಅದು ಅದೇ ಶಾಲೆಯ ಹೆಡ್ ಮಾಸ್ಟರ್ ಆಗಿರುವ ಅಪ್ಪನಿಗೂ ಮತ್ತು ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಅಮ್ಮನಿಗೂ ಗೊತ್ತಾಗಿ ಮೈಮೇಲೆ ಬಾಸುಂಡೆ ಬರುವಂತೆ ಹೊಡೆಸಿಕೊಂಡಿದ್ದೂ ಆಗಿತ್ತು. ನಾನು ಏನೂ ತಪ್ಪು ಮಾಡದಿದ್ದರು ನನ್ನ ತರಗತಿಯ ಯಾರದ್ದೇ ತಪ್ಪಿದ್ದರೂ,ಹೆಡ್ ಮಾಸ್ತರ್ರು ಮಗಳಿಗೆ ಹೊಡೆಯೊದೆ ಇಲ್ಲ ಅಂತಾ ಯಾರಾದ್ರೂ ಹೇಳಿ ಬಿಡ್ತಾರೇನೋ ಎಂಬ ಕಾರಣಕ್ಕೆ ಮೊದಲು ನನಗೇ ಹೊಡೆದು ಮುಂದೆ ಬೇರೆಯವರನ್ನು ವಿಚಾರಿಸಿಕೊಳ್ಳುತ್ತಿದ್ದ ಅಪ್ಪ ಆತನನ್ನು ಹಿಂಬಾಲಿಸಿದ್ದಕ್ಕೆ ನನ್ನನ್ನು ಸುಮ್ಮನೆ ಬಿಟ್ಟಾರೆಂದು ನನಗೇನೂ ಅನ್ನಿಸಿರದ ಕಾರಣ ಹೊಡೆತಕ್ಕೆ ಸಿದ್ಧವಾಗಿ ನಿಂತು ಬಿಟ್ಟಿದ್ದೆ. ಯಾವತ್ತೂ ಅಮ್ಮನಿಗೆ ನಿನ್ನ ಮಗಳು ಎನ್ನದಿದ್ದ ಅಪ್ಪ ಅದೇ ಮೊದಲ ಸಲ ನಿನ್ನ ಮಗಳು ಮತ್ತು ಅವಳ ಕ್ಲಾಸಿನ ಮಕ್ಕಳು ಆ ಹುಚ್ಚನ್ನ ಹಿಂಬಾಲಿಸಿಕೊಂಡು ಹೋಗಿದ್ರಂತೆ ಎಂದು ಹೇಳಿದ್ದು ಮಾತ್ರ ತುಂಬಾ ನೋವುಂಟು ಮಾಡಿತ್ತು. ಆ ದಿನದಿಂದ ಆ ಮಾನಸಿಕ ಅಸ್ವಸ್ಥ ನನ್ನ ಆಜನ್ಮಶತ್ರುವಾಗಿ ಹೋಗಿದ್ದ.
ಇದೆಲ್ಲ ನಡೆದದ್ದು ಒಂದನೆ ತರಗತಿಯಲ್ಲಿ. ಅದೆಲ್ಲ ಮುಗಿದು ನಾನು ಶಿರಸಿಯ ಎಂ.ಎಂ ಆರ್ಟ ಆಮಡ್ ಸೈನ್ಸ್ ಕಾಲೇಜಿನಲ್ಲಿ ಗಲಾಟೆ ಎಬ್ಬಿಸಿ ಪ್ರಾಚಾರ್ಯರಾದ ಶಂಕರ್ರಾವ್ ಜೊತೆ’ನೀವೊಬ್ಬರೆ ಕಾರಿಡಾರ್ ಮೇಲೆ ಓಡಾಡೋದು ಯಾಕೆ? ನಾನೂ ನಿಮ್ಮ ಜೊತೆ ಬರ್ತೀನಿ ಸರ್ ಎಂದೆಲ್ಲ ಹೇಳಿ ಮಹಾನ್ ಪೋಕರಿ ಎನ್ನಿಸಿಕೊಂಡಿದ್ದು ಎಲ್ಲ ಮುಗಿದ ಮೇಲೂ ಆತ ಅದೇ ವೇಷದಲ್ಲಿ ಕಾಲೇಜಿನ ಬಳಿಯೂ ಸುತ್ತಾಡುತ್ತಿದ್ದುದು ಕಾಣುತ್ತಿತ್ತು. ಆದರೆ ಅಷ್ಟು ಹೊತ್ತಿಗೆ ನಮ್ಮೆಲ್ಲ ಆಸಕ್ತಿಯ ವಿಷಯಗಳು ಬದಲಾಗಿ ಆತ ಲೆಕ್ಕಕ್ಕಿಲ್ಲದವನಾಗಿದ್ದ.
ಇತ್ತೀಚೆಗೆ ಆತ ಎಲ್ಲೂ ಕಾಣುತ್ತಿಲ್ಲ. ಬಹುಶಃ ಆತನ ದಿನಗಳು ಮುಗಿದಿರಬಹುದು. ಆದರೂ ಎಂದಾದರೊಮ್ಮೆ ಬಾಲ್ಯದೊಂದಿಗೆ ನೆನಪಾಗುತ್ತಾನೆ. ಮತ್ಯಾರಾದರೂ ಅವನಂತವರೇ ಕಂಡರೆ ಮತ್ತೆ ಸಿ.ಐಡಿ ನೆನಪಾಗಿ ನಗು ಬರುತ್ತದೆ
'ಅವನು ಸಿಐಡಿ ಆಫೀಸರ್ ಅಂತೆ…….' – ಶ್ರೀದೇವಿ ಕೆರೆಮನೆ
ನಿಮಗೆ ಇವೂ ಇಷ್ಟವಾಗಬಹುದು…





Shankar rao kathe beku nange!
avana kala mugidirabahudu. adre ega yallello… antavare tumbidare. vesha badalagide aste.
.ಕೆಲವು ವರ್ಷಗಳಹಿಂದೆ ದಾರವಾಡದಿಂದ ಮಂಗಳೂರಿಗೆ ರಾತ್ರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದಾಗ ಶಿರಸಿ ಸ್ತಾಪಿನಲ್ಲಿ ಆ .ನಟ್ಟಿರುಳಿನಲ್ಲಿ ಕೊಳಕಾದ ಹರಿದ ಅಂಗಿ ಧರಿಸಿ ಕುರುಚಲು ಗಡ್ಡಬಿಟ್ಟ ವ್ಯಕ್ತಿಯೊಬ್ಬ ಹವ್ಯಕ ಭಾಷೆಯಲ್ಲಿ ಏನೇನೋ ಬಡಬಡಿಸುತ್ತಿದ್ದದ್ದು ಮನಸ್ಸಿನಿಂದ ಮರವೆಯಾಗಿಲ್ಲ.ನಿಮ್ಮ ಬರಹವನ್ನು ಓದುತ್ತಿದ್ದಂತೆ ನೆನಪಿಗೆ ಬಂತು.
ಭಾರತಿ ಅಕ್ಕ ಅದು ಕಥೆ ಅಲ್ಲ…. ಕಾದಂಬರಿ…
ಮಹೇಶ್ವರಿ ಮ್ಯಾಡಂ…. ನೆನಪುಗಳು. ಅಲ್ವಾ?