ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವನು ಗಜ಼ಲ್, ಅವಳು ಶಾಯಿರಿ…

ರೋಹಿತ್ ಎಸ್ ಎಚ್


“ಉತ್ತಮ ಹಾಸ್ಯವು ಆನಂದದ ಸ್ವರೂಪ; ಜ್ಞಾನಕ್ಕೆ ಒಂದು ಬಾಗಿಲು” -ಡಿ.ವಿ.ಜಿ.
ಹೌದು, ಉತ್ತಮವಾದ ಹಾಸ್ಯ, ಹಾಸ್ಯಾಭ್ಯಾಸವು ನಮ್ಮ ಮನಸ್ಸಿನ ನೋವನ್ನು, ದು:ಖವನ್ನುದೂರಮಾಡಿ, ಕಳೆದು ಹೋದ ನೆಮ್ಮದಿಯನ್ನು ವಾಪಸ್ಸು ತಂದು ಕೊಡುತ್ತದೆ ಎನ್ನುವದರಲ್ಲಿ ಯಾವುದೇ ಅನುಮಾನವಿಲ್ಲ. ಸದಾ ದೇಶದ ಸಮಸ್ಯೆಗಳ ಬಗ್ಗೆ ಯೋಚನೆ ಮಾಡುತ್ತಿದ್ದ, ಗಾಂಭೀರ್ಯದಿಂದ ಕೂಡಿದವರು ಎಂದು ಜನರೆಲ್ಲಾ ತಿಳಿದುಕೊಂಡಿದ್ದ ಗಾಂದೀಜಿಯವರೂ ಸಹ, ‘ನನಗೆ ಹಾಸ್ಯ ಪ್ರಜ್ಣೆ ಇಲ್ಲದೇ ಹೋಗಿದ್ದರೆ, ಎಂದೋ ಆತ್ಮಹತ್ಯೆ ಮಾಡಿ ಕೊಳ್ಳಬೇಕಿತ್ತು’ ಎಂದು ಹೇಳಿದ್ದಾರೆ. ನಮ್ಮೆಲ್ಲರ ದಿನ ನಿತ್ಯದ ಒತ್ತಡದ ಬದುಕಿನಲ್ಲೂ, ಲೋಪದೋಷಗಳಲ್ಲೂ, ಸಮಸ್ಯೆಗಳಲ್ಲೂ ಹಾಸ್ಯ ಹಾಸು ಹೊಕ್ಕಾಗಿರುತ್ತದೆ. ಆದರೆ ಆ ಹಾಸ್ಯ ದರ್ಶನದ ಕುಶಲತೆ ನಮಗಿರಬೇಕಷ್ಟೆ. ಅಂತಹ ಹಾಸ್ಯ ದರ್ಶಿತೆಯನ್ನು ನಮಗೆಲ್ಲಾ ಪರಿಚಯಿಸುವ ನಾಟಕವೇ ‘ಅವನು ಘಜಲ್, ಅವಳು ಶಾಯಿರಿ’.

ಈ ನಾಟಕ ಹಾಸ್ಯಮಯವಷ್ಟೇ ಅಲ್ಲ, ಘಜಲ್-ಶಾಯಿರಿಗಳಿರುವುದರಿಂದ ಕಾವ್ಯಮಯವೂ ಹೌದು, ಪ್ರೇಮಮಯವೂ ಹೌದು.
ಇತ್ತೀಚೆಗೆ ‘ರಂಗಶಂಕರ’ದಲ್ಲಿ VASP ತಂಡ ಪ್ರಸ್ತುತ ಪಡಿಸಿದ ನಾಟಕ ‘ಅವನುಘಜಲ್, ಅವಳುಶಾಯಿರಿ’.  ೧೯೭೦ – ೮೦ರ ದಶಕದ ಸರಳವಾದ ಕೌಟುಂಬಿಕ ಪ್ರೇಮ ಕಥೆಯುಳ್ಳದ್ದಾದರೂ, ಚಕ್ಕುಲುಗುಲಿಯಿಡುವ ಹಾಸ್ಯದಿಂದಲೂ, ತಿವಿಯುವ ಪ್ರತಿಭಟನೆಯ ಮಾತುಗಳಿಂದಲೂ, ಕರಗಿಸುವ ಘಜಲ್-ಶಾಯಿರಿಗಳಿಂದಲೂ ಕೂಡಿರುವುದರಿಂದ ವಿಭಿನ್ನವೆನಿಸುತ್ತದೆ.

ನಾಟಕದ ದೃಶ್ಯವೊಂದರ ಝಲಕ್ ಹೀಗಿದೆ….
ಕನ್ನಡಿಯೆದುರು ಕೂತು ಅಲಂಕರಿಸಿ ಕೊಳ್ಳುವ ಅಮ್ಮನ ಬಳಿ ಹೋಗುವ ಅಪ್ಪ, “ಅಲಂಕಾರ ಅಂದ್ರೆ, ‘ಡಾರ್ವಿನ್ಹೇಳಿಕೆಯನ್ನ ಕೇಳುವ ಮುನ್ನವೇ ಕನ್ನಡಿಯ ಹೇಳಿಕೆಯಿಂದ ತಾವು ಕಪಿ ಸಂತತಿ ಎಂದು ಪತ್ತೆ ಹಚ್ಚಿಕೊಂಡ ಸ್ತ್ರೀ ಪುರುಷರು ಅದನ್ನು ಮರೆ ಮಾಚಲು ಅನುಸರಿಸುವ ಆತ್ಮವಂಚನೆಯ ವೈಖರಿ” ಎಂದು ಕಾಲೆಳೆದರೆ, ಕೋಪಗೊಂಡ ಅಮ್ಮ, ‘ನನ್ನನ್ನು ಕೋತಿಗೆ ಹೋಲಿಸ್ತಿದ್ದೀರಾ?’ ಎಂದು ಕೇಳುತ್ತಾಳೆ. ಅಪ್ಪನ ಮಾತಿನ ಝರಿ ಅಲ್ಲಿಗೇ ನಿಲ್ಲುವುದಿಲ್ಲ. ‘ಕೋತಿ ಬಗ್ಗೆ ನಿಕೃಷ್ಟವಾಗಿ ಮಾತನಾಡಬೇಡ. ಕೋತಿ ಪದದ ಅರ್ಥ ಗೊತ್ತಾ ಎಂದು ಕೇಳುತ್ತಲೇ, ‘ಕೋತಿ ಎಂದರೆ ನಮ್ಮ ವಂಶ ವೃಕ್ಷದ ಮೇಲೆ ನೇತಾಡುವ ಪ್ರಾಣಿ; ಮನುಷ್ಯರಂತೆ ತಪ್ಪು ದಾರಿಯನ್ನ ಹಿಡಿಯದೆ, ನೇರವಾದ ಮಾರ್ಗವನ್ನ ಹಿಡಿದು, ಪಿರಂಗಿ, ಅಣುಬಾಂಬ್ಗಳನ್ನು ಕಂಡು ಹಿಡಿಯದೆ ಪರಸ್ಪರ ಯುದ್ದ ಹೂಡದೆ ಬಾಳುವ ಪ್ರಾಣಿ’ ಎಂದುವಿವರಿಸುತ್ತಾನೆ!!   ಎಲ್ಲವನ್ನೂ ಯಥಾವತ್ತಾಗಿ ಗ್ರಹಿಸುವ ಮುಗ್ದ ಸ್ವಭಾವದ ಅಮ್ಮ ಯಾವುದೂ ಅರ್ಥವಾಗದೆ, ತಲೆ ಚಚ್ಚಿ ಕೊಳ್ಳುತ್ತಾ ಮುಸಿ ಮುಸಿ ಅಳಲು ಪ್ರಾರಂಬಿಸಿದರೆ, ರಾಯರು ಅಲ್ಲಿಯೂ ತಮಾಷೆ ಮಾಡುತ್ತಾರೆ, ‘ಓಹೋ!! ಕಂಬನಿ…ಲೋಕದಲ್ಲೆಲ್ಲಾ ಅತ್ಯಂತ ಪ್ರಭಾವಶಾಲಿಯಾದ ಜಲಪಾತ’.

ಹೀಗೆ, ನಾ.ಕಸ್ತೂರಿಯವರ ‘ಅನರ್ಥಕೋಶ’ವನ್ನೇ ಕಂಠ ಪಾಠ ಮಾಡಿಕೊಂಡಿರುವ ಅಪ್ಪ ಒಂದು ಕಡೆಯಾದರೆ, ಮತ್ತೊಂದು ಕಡೆ ಎಲ್ಲವೂ ಕೆಂಪಾಗಿ ಕಾಣಿಸುವ, ಪ್ರತಿಭಟನೆ, ಸಂಘಟನೆ, ಚಳುವಳಿಯೆಂದು ದಿಕ್ಕಾರ ಕೂಗುತ್ತಾ, ಸಿಟ್ಟಿನ ಭಾಷಣ ಮಾಡುವ ಹರೆಯದ ಮಗ, ಅಪ್ಪನ ಮಾತುಗಳನ್ನು ಅರ್ಥಮಾಡಿಕೊಳ್ಳಲಾಗದ ಅಮ್ಮನ ಬಳಿ ಬಂದು, ‘ಅರ್ಥ ಮಾಡ್ಕೋ ಅಮ್ಮ, ಅರ್ಥಮಾಡ್ಕೊ. ‘ನೀರಿಗಂಜುತ ಕುಳಿತರೆ ಇಲ್ಲಿ ಈಜಲಾಗುವುದಿಲ್ಲ, ಬೆಂಕಿ ಗಂಜುತ ಕುಳಿತರೆ ಇಲ್ಲಿ ಬೆಳಗಲಾಗುವುದಿಲ್ಲ’ ಎಂದು ಬಂಡಾಯದ ಕವಿತೆ ಹೇಳಿ ಅವಳನ್ನು ಮತ್ತಷ್ಟು ಗೊಂದಲಕ್ಕೆ ಸಿಕ್ಕಿಸುತ್ತಾನೆ. ಹೀಗೆ ಪಾತ್ರಗಳು ಎದುರಿಸುವ ಪರಿಸ್ಥಿತಿಯಲ್ಲಿ, ವೈಪರೀತ್ಯದಲ್ಲಿ ನಿರ್ಮಲ, ಸಹಜ ಹಾಸ್ಯದ ಹೊನಲಿದೆ.
ಈ ವಿಚಿತ್ರಗಳನ್ನು ತಡೆದು ಕೊಂಡರೂ, ಅಮ್ಮನಿಗಿರುವ ಒಂದೇ ಒಂದು ಆಸೆಯೆಂದರೆ ಮಗನಿಗೆ ಮದುವೆ ಮಾಡುವುದು. ಇದೇ ಸಮಯಕ್ಕೆ ಪಕ್ಕದ ಮನೆಗೆ ಬಾಡಿಗೆಗೆ ಒಂದು ಸಂಸಾರ ಬರುತ್ತದೆ. ಗಂಡಸರ ನೆರಳು ಕಂಡರೂ ಆಗದ ಹರೆಯದ ಹುಡುಗಿ ಶಾಯಿರಿ, ಅವಳ ಈ ನಡುವಳಿಕೆಯಿಂದ ಬೇಸತ್ತಿರುವ ಅವಳ ಅಮ್ಮ, ಮಗಳ ಬಗ್ಗೆ ಬಹಳ ಪ್ರೀತಿಯಿಂದಿರುವ, ಶಿಸ್ತಿನ ರಿಟೈರ್ಡ್ಮಿಲಿಟರಿ ಆಫೀಸರ್ ಅಪ್ಪ.
ತಮ್ಮ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿರುವ, ಅಕ್ಕ-ಪಕ್ಕದ ಮನೆಯಲ್ಲಿರುವ ಇಬ್ಬರೂ ಅಮ್ಮಂದಿರೂ ತಮ್ಮ ಚಿಂತೆಯನ್ನು ಪರಸ್ಪರ ತೋಡಿಕೊಂಡು, ಮಕ್ಕಳಿಗಾಗಿ ಒಂದು ಖೆಡ್ಡಾ ರೂಪಿಸುತ್ತಾರೆ. ಹೌದು, ಅದು ಅವರಿಬ್ಬರನ್ನೂ ಒಂದು ಗೂಡಿಸುವ, ತಾವು ಬೀಗರಾಗಲು ರೂಪಿಸುವ ಖೆಡ್ಡಾ. ಆ ಖೆಡ್ಡಾ ಯೋಜನೆ ಯಶಸ್ವಿಯಾಗುತ್ತದೆಯೆ? ಅಲ್ಲಿ ಅವರು ಎದುರಿಸುವ ಸವಾಲುಗಳೇನು? ಹುಡುಗ ಚಿದಾನಂದನ ಬಂಡಾಯ, ಹೋರಾಟದ ಕಥೆ ಏನು? ಹುಡುಗಿ ಶಾಯಿರಿ ಕರಗುತ್ತಾಳ? ಅಮ್ಮಂದಿರ ಖೆಡ್ಡಾ ಹೀಗಾದರೆ, ಅದಕ್ಕೆ ಅಪ್ಪಂದಿರ ಸಮ್ಮತಿ ಇದೆಯೇ?ಇವೆಲ್ಲಕ್ಕೂ ಉತ್ತರವನ್ನು ನಾಟಕ ನೋಡಿಯೇ ಪಡೆಯಬೇಕು, ಸವಿಯಬೇಕು.

ಇನ್ನು, ನಾಟಕದ ಎಲ್ಲಾ ಪಾತ್ರಧಾರಿಗಳೂ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಚುರುಕಾದ ಸಂಭಾಷಣೆಗೆ ತಕ್ಕಂತೆ ಚುರುಕಾಗಿ ಅಭಿನಯಿಸುವಲ್ಲಿ ಎಲ್ಲಾ ನಟರು ಯಶಸ್ವಿಯಾಗಿದ್ದಾರೆ. ಅದರಲ್ಲೂ, ಚಿದಾನಂದನ ತಾಯಿಯ ಪಾತ್ರದಲ್ಲಿ ಅಭಿನಯಿಸಿರುವ ದೀಪಿಕಾಳ ಅಭಿನಯವಂತೂ ನಾಟಕದ ಹೈಲೈಟ್! ಇಡೀ ನಾಟಕವನ್ನು ನಿರ್ದೇಶಕರು ಪ್ರಸ್ತುತ ಪಡಿಸಿರುವ ರೀತಿಯೂ ಮೆಚ್ಚುಗೆ ಗಳಿಸುತ್ತದೆ. ಕಡಿಮೆ ರಂಗ ಪರಿಕರಗಳನ್ನು ಬಳಸಿ ರೂಪಿಸಿರುವ ರಂಗ ವಿನ್ಯಾಸ, ವಸ್ತ್ರ ವಿನ್ಯಾಸ ಎಲ್ಲವೂ ನಿರ್ದೇಶಕರ ಜಾಣ್ಮೆಯನ್ನು ತೋರುತ್ತದೆ. ಬೆಳಕಿನ ವಿನ್ಯಾಸವೂ ಕೂಡ ನಾಟಕವನ್ನು ಸಮರ್ಪಕವಾಗಿ ಪ್ರಸ್ತುತ ಪಡಿಸುತ್ತದೆ.
ಅದಕ್ಕಾಗಿಯೇ, ಈ ನಾಟಕ ‘ರಂಗಶ್ರೀ ಕಲಾ ಸಂಸ್ಥೆ’ಯ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ’ಎರಡನೇ ಅತ್ಯುತ್ತಮ ನಾಟಕ’ ಪ್ರಶಸ್ತಿಯ ಜೊತೆಗೆ, ಅತ್ಯುತ್ತಮ ನಟಿ (ದೀಪಿಕಾ – ಚಿದಾನಂದನ ಅಮ್ಮನ ಪಾತ್ರಧಾರಿ), ಅತ್ಯುತ್ತಮ ಬೆಳಕು (ಮುಸ್ತಫ), ಅತ್ಯುತ್ತಮ ನಿರ್ದೇಶನ (ವಿನಯ್ಶಾಸ್ತ್ರಿ), ಹೀಗೆ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ಗಳಿಸಿಕೊಂಡಿದೆ.
ಅರ್ಥವಿಲ್ಲದ ಅವಸರದಿಂದಲೂ, ಒಣ ಧಾವಂತದಿಂದಲೂ ಸ್ವಲ್ಪ ಕಾಲವಾದರೂ ವಿಶ್ರಾಂತಿ, ನೆಮ್ಮದಿ ಬಯಸಿ ಬರುವ ಎಲ್ಲರ ನಿರೀಕ್ಷೆಯನ್ನು ನಿಪುಣತೆಯಿಂದಲೇ ಮೀರಿ ನಿಲ್ಲುತ್ತದೆ ‘ಅವನು ಘಜಲ್, ಅವಳು ಶಾಯಿರಿ’ ನಾಟಕ. ಇಲ್ಲಿ ಬುದ್ದಿಗೆ ಭಾರವೆನಿಸುವ, ಕೆಲಸ ಕೊಡುವ ಸಂಗತಿಗಳಿಲ್ಲ, ಯಾವುದೋ ಸಂದೇಶವನ್ನು ಪ್ರೇಕ್ಷಕರಿಗೆ ತಲುಪಿಸುವ ತವಕವಿಲ್ಲ ನಿಜ. ಆದರೆ, ಮನಸ್ಸನ್ನು ಹಗುರಾಗಿಸುವ, ಗಡಿಬಿಡಿ ಮರೆಸುವ, ದ್ವಂದ್ವಾರ್ಥವಿಲ್ಲದ ಹಾಸ್ಯವಿದೆ. ಸರಳ ಕಥೆಯಾದರೂ, ಸುಂದರವಾಗಿ, ಯಾವುದು ಎಲ್ಲರನ್ನೂ ಮೆಚ್ಚಿಸಬಹುದೋ, ಯಾವುದು ಎಲ್ಲರನ್ನೂ ನಗಿಸಬಲ್ಲುದೋ, ಅದನ್ನೆಲ್ಲ ತುಂಬಾ ಎಚ್ಚರ ವಹಿಸಿ ನಿರೂಪಿಸಿ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ ನಾಟಕಕಾರ ಮಹೇಶ್. ಇಲ್ಲಿ ವಾಕ್ಚತುರತೆಯ ಹಲವಾರು ಉದಾಹರಣೆಗಳಿವೆ, ಪ್ರತಿಯೊಂದು ದೃಶ್ಯವೂ ಹಾಸ್ಯದ, ಕವಿತೆಯ, ವಿನೋದದ ಹಬ್ಬ! ಇತ್ತೀಚಿನ ಕನ್ನಡ ಹಾಸ್ಯ ನಾಟಕಗಳ ಸಾಲಿಗೆ ಇದೊಂದು ಉತ್ತಮವಾದ ಕೊಡುಗೆ.
 
 

‍ಲೇಖಕರು avadhi

13 September, 2013

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. Prabhakar Nimbargi

    Nanagoo gazalna puzzle, shayariya mushshayari noduva vanchhe mooduttide. Aadarenmaduvdu, naaniroodu bengaloorinalli allawalla!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading