Wednesday at 07:30 PM–09 PM
RANGASHANKARA
ವೈದೇಹಿ ಕನ್ನಡದ ಪ್ರಮುಖ ಕವಯಿತ್ರಿ. ಬುದ್ಧಿ ಭಾವದ ಅಪೂರ್ವ ಸಂಗಮವಾದ ವೈದೇಹಿಯ ಕವನಗಳ ಕೇಂದ್ರ ಬಿಂದು ಹೆಣ್ಣು.
ಸಂಚಾರಿ ಥಿಯೇಟರ್ ಪ್ರಯೋಗದ “ವ್ಯಾನಿಟಿ ಬ್ಯಾಗ್”ವೈದೇಹಿಯ ಕಾವ್ಯಲೋಕದ ವಿವಿಧ ನೆಲೆಗಳನ್ನು ಅನಾವರಣಗೊಳಿಸುತ್ತಾ ಆ ಮೂಲಕ ಹೆಣ್ಣಿನ ಚಿತ್ತ ಚಿತ್ತಾರದ ಅನೂಹ್ಯ ಸಂಗತಿಗಳನ್ನು ಹೆಣ್ಣಿಗೆ ಮಾತ್ರ ಅನುಭವಗಮ್ಯವಾಗುವ ಹಲವು ಅಮೂರ್ತ ಪ್ರಸಂಗಗಳನ್ನು, ಅವಳ ಭಾವ ಪ್ರಪಂಚದ ಹಲವು ಸೂಕ್ಷ್ಮ ನೇಯ್ಗೆಗಳನ್ನು ದೃಶ್ಯ ರೂಪಕದಲ್ಲಿ ಕಾಣಿಸುತ್ತದೆ.
“ನೋಡಬಾರದು ಚೀಲದೊಳಗನು” ಎನ್ನುವ ವೈದೇಹಿಯವರ ಮಾತನ್ನೇ ವಿಸ್ತರಿಸುತ್ತಾ, “ನೋಡಲಾಗದ” ಆ ಬ್ಯಾಗಿನ ವ್ಯಾನಿಟಿಯ ಒಳಗಿರುವ ವಸ್ತು ಪ್ರಪಂಚವನ್ನು ವೈದೇಹಿಯವರ ಕಾವ್ಯಲೋಕದ ಹಲವು ಪ್ರಸಂಗಗಳ ಮೂಲಕ ಪ್ರಸ್ತುತಪಡಿಸಲಾಗುತ್ತದೆ.
ವ್ಯಾನಿಟಿ ಬ್ಯಾಗ್ ನ ರೂಪಕದಲ್ಲಿ ಹೆಣ್ಣಿನ ಅಂತರಂಗದ ಒಳನೋಟಗಳಿಗೆ ಸರ್ಚ್ ಲೈಟ್ ಬೀರಿ, ಹೆಣ್ಣಿನ ವಿಶ್ವರೂಪ ದರ್ಶನ ಮಾಡಿಸುವ ವೈದೇಹಿಯವರ ಪ್ರಯತ್ನವನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವ ಹಂಬಲ ಸಂಚಾರಿ ಥಿಯೇಟರ್ ದು.
ವ್ಯಾನಿಟಿ ಬ್ಯಾಗ್ ಎಂಬ ಈ ಸ್ತ್ರೀಲೋಕದ ಕ್ಯಾನ್ ವಾಸ್ ನಲ್ಲಿ ಹೆಣ್ಣಿನ ಅಂತರಂಗದ ಪಿಸು ಮಾತು, ಮುತ್ತಿನಂತಹ ಗೀಚು ಕೊಟ್ಟು ಮಾಯವಾದವನು ಮಾಡಿದ ಗಾಯದ ನೋವು, ನಿತ್ಯದ ಅನ್ನಕ್ಕಾಗಿ ಬೆರಣಿ ತಟ್ಟುವ ಹುಡುಗಿ, ಆ ಕಾಯ ಕಷ್ಟದ ಬಾಲೆಯ ಎದೆನೋವು, ತನ್ನದೆನ್ನುವ ಆಸ್ತಿಯೇ ಇರದ ಹೆಣ್ಣು ಬರೆವ ಉಯಿಲು, ತ್ರಿಲೋಕ ಸಂಚಾರಿಯಾದ ಶಿವಗೆ, ಸೇವೆ ಮಾಡುತ್ತಲೇ ನಾನೆಷ್ಟನೆಯ ನಾರಿ? ಎಂದು ಲೇವಡಿ ಮಾಡುತ್ತಾ ಬಿಕ್ಕುವ ಗೌರಿಯ ತಲ್ಲಣವಿದೆ.
ಹಾಗೆಯೇ ಒಂದಕೊಂದಕೆ ಅರ್ಥಾರ್ಥವಿಲ್ಲದೆಯೂ, ಅರ್ಥವಾಗದ ಭಾಷೆಯ ನಡುವೆಯೂ ಜೀವಿಸುವ ಜೋಡಿಗಳ ವಾಸ್ತವಿಕತೆ- ಒಟ್ಟಾರೆಯಾಗಿ “ನಿತ್ಯ ಮೂಡುತ ನಿತ್ತ್ಯ ಮುಳುಗುತ ಕಷ್ಟ ಸುಖಗಳ ಬೆಟ್ಟ ಕಡಲಲಿ ನಿತ್ಯ ಸುಡುತಿಹ ಸೂರ್ಯಳಾಗಿ ಪ್ರಜ್ವಲಿಸುತ್ತಿರುವ ಹೆಣ್ಣಿನ ಮನಸ್ಸಿನ ಒಳಲೋಕವನ್ನು ಪ್ರತಿನಿಧಿಸುವ ರೂಪಕವಾದ ವ್ಯಾನಿಟಿ ಬ್ಯಾಗಿನಲ್ಲಿ ವೈದೇಹಿಯ ಎಲ್ಲ ಪ್ರಮುಖ ಕವನಗಳನ್ನು ಅಡಗಿಸಿಟ್ಟಿರುವುದು ಈ ರಂಗಪ್ರಯೋಗದ ವಿಶೇಷ.






Abinandanegalu nataka yashaswiyagali. Vaidehi Nanna priti ya lekhaki.
adbhuta naataka…naanu eegge 2 varshada hinde heggodinalli nodidde…