ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಬದಲಾವಣೆಯೇ ಜಗದ ನಿಯಮ



ಇವತ್ತಿನ ಆಯ್ಕೆ: ಬದಲಾವಣೆಯೇ ಜಗದ ನಿಯಮ


ಅಣ್ಣನಿಗೆ ಬೆಂಬಲಿಸಿದಾಗಲೇ ’ಬದಲಾವಣೆ’ ಅಂತಾರೆ ಅವಿನಾಶ್

ಭ್ರಷ್ಟಾಚಾರದ ವಿರುದ್ದ ನಿರಶನಕ್ಕೆ ಕೂತಿರುವ ಅಣ್ಣಾ ಹಜಾರೆಯವರ ಬೆಂಬಲಕ್ಕೆ ಕನ್ನಡ ಬ್ಲಾಗುಲೋಕವೂ ಸ್ಪಂದಿಸಿದೆ. ಅಂತಹ ಬ್ಲಾಗುಗಳಲ್ಲೊಂದು ಅವಿನಾಶರ ’ಬದಲಾವಣೆಯೇ ಜಗದ ನಿಯಮ.’  ವೆಬ್ದುನಿಯಾ ತಾಣದ ಸಂಪಾದಕರೂ ಆಗಿರುವ ಅವಿನಾಶ್, ತಮ್ಮ ಬ್ಲಾಗಿನಲ್ಲಿ ಸಮಕಾಲೀನ ವಿಷಯಗಳ ಬಗ್ಗೆ ಬರೆಯುತ್ತಾರೆ.  ಕನ್ನಡದ ’ಸೀರಿಯಸ್’ ಬ್ಲಾಗುಗಳಲ್ಲಿ ಇದೂ ಒಂದು. ಸಿಕ್ಕಾಪಟ್ಟೆ ಭಾವನೆ, ಪ್ರೀತಿ, ಲಹರಿ, ತಮಾಷೆಗಳನ್ನು ಇಲ್ಲಿ ಹುಡುಕಬೇಡಿ.   ಇಸವಿ ೨೦೦೬ರಿಂದಲೂ ಸಕ್ರಿಯವಾಗಿರುವ ಈ ಬ್ಲಾಗಿನಲ್ಲಿ ಅನೇಕ ಸಾಂದರ್ಭಿಕ ಬರಹಗಳು, ಚಿಂತನೆಗಳು ಇವೆ.

ಇಲ್ಲಿನ ’ನಾನು ಹೀಗಿದ್ದೇನೆ’ ಲಿಂಕನ್ನು ಕ್ಲಿಕ್ಕಿಸಿದರೆ ನಿಮಗೆ ಅವಿನಾಶ್ ಯಾರು ಅಂತ ಗೊತ್ತಾಗುತ್ತೆ. ಅಲ್ಲಿಂದ ಕೆಳಗೆ ಬಂದರೆ ನಿಮಗೊಂದು ಇಂಟರೆಸ್ಟಿಂಗ್ ಸಂಗತಿಯಿದೆ.  ಏಪ್ರಿಲ್ ೨೫, ೨೦೦೬ರಂದು ಶ್ರೀವತ್ಸ ಜೋಶಿಯವರು ಕನ್ನಡ ಬ್ಲಾಗ್‌ಲೋಕದಲ್ಲಿ ಒಂದು ರೌಂಡ್ ಹೋಗಿಬಂದು ಇಲ್ಲಿ ಕಮೆಂಟ್ ಹಾಕಿದ್ದಾರೆ. ಜೋಶಿಯವರ ಕೌಂಟಿಂಗ್ ಪ್ರಕಾರ ಅಂದಿನ ಕನ್ನಡ ಬ್ಲಾಗುಗಳ ಒಟ್ಟು ಸಂಖ್ಯೆ ಕೇವಲ ೨೭! ಈಗ ನೀವೇನಾದರೂ ಎಣಿಸಲು ಕುಳಿತರೆ ೨೭ ದಿನಗಳಾದರೂ ಮುಗಿಯುವುದು ಅನುಮಾನ!

ಅವಿನಾಶ್ ಇಂದಿನ ಪೋಸ್ಟಿನಲ್ಲಿ ಅಣ್ಣನ ಬೆಂಬಲಕ್ಕೆ ನಮ್ಮೆಲ್ಲರನ್ನು ಆಹ್ವಾನಿಸಿದ್ದಾರೆ. ಅವರ ಬರಹದಲ್ಲಿ ಅಣ್ಣ ನಡೆದು ಬಂದ ಹೋರಾಟದ ಹಾದಿಯ ಸಂಪೂರ್ಣ ಚಿತ್ರಣವಿದೆ. ಈ ನಿಸ್ವಾರ್ಥ ಜೀವಿಯ ನಿರಶನವನ್ನೂ ’ಆರೆಸ್ಸೆಸ್ ಕೈವಾಡ, ಸಂಘ ಪರಿವಾರದ ಸಂಚು ಇದೆ, ದೇಶವನ್ನು ದಾರಿ ತಪ್ಪಿಸುತ್ತಿದ್ದಾರೆ’ ಎಂದೆಲ್ಲ ಅರ್ಥೈಸುತ್ತಿರುವ ನಮ್ಮ ನಾಯಕರ ವಿರುದ್ದ ಕಿಡಿಕಾರಿದ್ದಾರೆ. ಈ ಅಹಿಂಸಾ ಹೋರಾಟವು ಸರಕಾರೀ ಮಟ್ಟದ ಭ್ರಷ್ಟಾಚಾರ ತೊಡೆಯುವಲ್ಲಿ ಪೂರಕವಾಗಲಿ ಎಂದು ಆಶಿಸಿದ್ದಾರೆ.

-‘ಅವಧಿ’ಗಾಗಿ ಸುಶ್ರುತ ದೊಡ್ಡೇರಿ

ಆಗ ಪ್ರೆಸ್…. ಈಗಂತೂ X- ಪ್ರೆಸ್…!

ನಾನು ಅವಿನಾಶ್ ಬಿ. ನನ್ನ ಬಗ್ಗೆ ತಿಳಿದುಕೊಳ್ಳುವ ಕುತೂಹಲವೇ?

ಮೂಲತಃ ಮಂಗಳೂರಿನ, ಈಗ ಚೆನ್ನೈಯಲ್ಲಿ ಉದ್ಯೋಗದಲ್ಲಿರುವ ನಾನು, ಪತ್ರಕರ್ತನಾಗಿ ಮುಂಬಯಿ, ಮಂಗಳೂರು, ಬೆಂಗಳೂರುಗಳಲ್ಲಿ ದಶಕಕ್ಕೂ ಹೆಚ್ಚು ಕಾಲ ದುಡಿದು, ಬದಲಾವಣೆಯೇ ಜಗದ ನಿಯಮ ಎಂಬ ಧ್ಯೇಯ ವಾಕ್ಯಕ್ಕೆ ಕಟ್ಟುಬಿದ್ದವ. ಪರಿಣಾಮವೋ ಎಂಬಂತೆ ಮುದ್ರಣ ಮಾಧ್ಯಮ ಕ್ಷೇತ್ರಕ್ಕೆ ಗುಡ್ ಬೈ ಹೇಳಿ, ತಂತ್ರಜ್ಞಾನ ಕ್ಷೇತ್ರಕ್ಕೆ ಕಾಲಿರಿಸಿದವನಾದರೂ, ಬಿಟ್ಟರೂ ಬಿಟ್ಟಿರಲಾಗದ ಮೀಡಿಯಾ ಎಂಬೋ ಧನಾತ್ಮಕ ವ್ಯಸನ ಮತ್ತೆ ಇಂಟರ್ನೆಟ್ ಮೂಲಕ ನನಗಂಟಿಕೊಂಡಿದ್ದು ನನಗರಿವಿಲ್ಲದಂತೆಯೇ. ಈ ಕ್ಷೇತ್ರವಂತೂ ನನಗೆ ಕಲಿಸಿದ ಪಾಠ ಅನೇಕ. ಅದಕ್ಕಾಗಿ ನನ್ನೊಳಗಿನ ಮಿಡಿತವನ್ನು ನೆಟ್ ಮೂಲಕ ಅಕ್ಷರ ರೂಪಕ್ಕಿಳಿಸುವ ಸಾಹಸದ ಫಲ ಈ ಬ್ಲಾಗು….

ಸಾಫ್ಟ್‌ವೇರ್ ಕ್ಷೇತ್ರಕ್ಕೇಂತ ಹೋದವನಾದರೂ, ಮಾಧ್ಯಮದ ಆಕರ್ಷಣೆ ಬಿಟ್ಟಿರಲಿಲ್ಲ. ಈಗ ಅಂತರ್ಜಾಲ ಮಾಧ್ಯಮ ವೆಬ್ ದುನಿಯಾ ಎಂಬ ಕನ್ನಡ ತಾಣದ ಹೊಣೆಯೊಂದಿಗೆ ನನ್ನನ್ನು ಕೈಬೀಸಿ ಎರಡೂ ತೋಳಿನಿಂದ ಅಪ್ಪಿಕೊಂಡಿದೆ… ಹಾಗಾಗಿ ಒಂದು ಮಟ್ಟದ ಜೀವನ ಚಕ್ರ ಪೂರ್ಣವಾಗಿದೆ ಅಂದುಕೊಳ್ಳುತ್ತೇನೆ.

ಹಿನ್ನೆಲೆ: ಕರ್ನಾಟಕ ಕರಾವಳಿಯ ರಮ್ಯಾದ್ಭುತ ಕಲೆ ಎಂದೆನಿಸಿಕೊಂಡು ದೇಶ ವಿದೇಶಗಳಲ್ಲಿ ಮನೆಮಾತಾಗಲು ಹೊರಟಿರುವಯಕ್ಷಗಾನವೆಂಬ ಶ್ರೀಮಂತ ಕಲಾ ಪ್ರಕಾರ ನನ್ನ ರಕ್ತದಲ್ಲೇ ಇದೆ ಎಂದು ಹೆಮ್ಮೆಯಿಂದಲೇ ಹೇಳಿಕೊಳ್ಳಬೇಕಾಗಿದೆ. ಇದಕ್ಕೆ ಕಾರಣ, ನನ್ನ ಹೆತ್ತವರು. ಯಕ್ಷಗಾನ ರಂಗದಲ್ಲಿ ಬೈಪಾಡಿತ್ತಾಯ ಎಂಬ ಉಪನಾಮ ಕೇಳದವರೇ ಇಲ್ಲ. ಅಷ್ಟರ ಮಟ್ಟಿಗೆ ತಂದೆ, ಹಿರಿಯ ಯಕ್ಷಗಾನ ಕಲಾವಿದರೂ, ಉತ್ತಮ ಗುರುಗಳೂ ಆದ ಹರಿನಾರಾಯಣ ಬೈಪಾಡಿತ್ತಾಯ ಮತ್ತು ತಾಯಿ, ಏಕೈಕ ವೃತ್ತಿಪರ ಮಹಿಳಾ ಭಾಗವತರೆಂಬ ಹೆಗ್ಗಳಿಕೆಗೆ ಪಾತ್ರವಾದ ಲೀಲಾ ಬೈಪಾಡಿತ್ತಾಯ ಅವರ ದಣಿವರಿಯದ ಸಾಧನೆ.

ಹವ್ಯಾಸ: ಇಂಥ ಹೆಮ್ಮೆಯ ಹೆತ್ತವರ ಮತ್ತು ಅವರು ಸವೆಸಿದ ಕ್ಷೇತ್ರದಲ್ಲಿಯೇ ಆಡುತ್ತಾಡುತ್ತಾ ಬೆಳೆದ ನನಗೆ ಯಕ್ಷಗಾನದ ಗಂಧ-ಗಾಳಿ ಹತ್ತದಿರಲು ಸಾಧ್ಯವೇ? ಯಕ್ಷಗಾನದಲ್ಲಿ ಹಿಮ್ಮೇಳದ ಸಾಧನಗಳಾದ ಚೆಂಡೆ-ಮದ್ದಳೆಗಳಲ್ಲಿ ಬೆರಳಾಡಿಸಬಲ್ಲಷ್ಟು ಪರಿಣತಿ ಪಡೆದಿರುವ ನಾನು, ತಾಯಿಯ ಗಾಯನ ಪರಂಪರೆಯನ್ನು ಉಳಿಸುವಲ್ಲಿ ಅದನ್ನು ಕಲಿಯಲಿಲ್ಲವಲ್ಲ ಎಂಬ ಕೊರಗು ಮನದ ಮೂಸೆಯಲ್ಲಿ ಇದ್ದೇ ಇದೆ. ಬದಲಾವಣೆಯೇ ಜಗದ ನಿಯಮ ಎಂಬುದು ಇಲ್ಲಿಯೂ ಅನ್ವಯಿಸಿತೇ ಎಂಬ ಪ್ರಶ್ನೆಯೊಂದಿಗೆ ನನ್ನನ್ನು ನಾನೇ ಸಮಾಧಾನಿಸಿಕೊಳ್ಳುತ್ತಿದ್ದೇನೆ.

ಮುಂದೆ ನನ್ನ ಸುಮ್ಮನಿರಲಾರದ ಕೈಗಳು, ಬಾಲ್ಯದಿಂದಲೂ ಸೆಳೆತಕ್ಕೀಡಾಗಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತದ ಅದ್ಭುತ ಧ್ವನಿ ಹೊಮ್ಮಿಸುವ ಮತ್ತು ಯಕ್ಷಗಾನದ ಮದ್ದಳೆಯನ್ನೇ ಸ್ವಲ್ಪಮಟ್ಟಿಗೆ ಹೋಲುವ ಮೃದಂಗ ಎಂಬ ತಾಳವಾದ್ಯದತ್ತ ತನ್ನ ಆಕರ್ಷಣೆಯನ್ನು ತಡೆಯದಾಯಿತು. ಪರಿಣಾಮ, ಕರ್ನಾಟಕದ ಶ್ರೇಷ್ಠ ಮೃದಂಗ ವಾದಕರಲ್ಲೊಬ್ಬರಾದ, ಮಂಗಳೂರು ಆಕಾಶವಾಣಿ ಕಲಾವಿದಎಂ.ಆರ್.ಸಾಯಿನಾಥ್ ಅವರ ಶಿಷ್ಯತ್ವ. ಇಲ್ಲೂ ಕಾಡಿದ್ದು ಬದಲಾವಣೆಯ ನಿಯಮವೋ, ವಿಧಿ ಬರಹವೋ… ಅಂತೂ ಅದರಲ್ಲಿ ಪರಿಪೂರ್ಣತೆ ಸಾಧಿಸಲಾಗಲಿಲ್ಲ. ಸಣ್ಣಪುಟ್ಟ ಸಂಗೀತ ಕಛೇರಿಗಳಿಗೆ ವಿದ್ವತ್ ಪ್ರದರ್ಶಿಸುವ ಗೋಜಿಗೆ ಹೋಗದೆ ಮೃದಂಗ ವಾದಿಸುವಷ್ಟಕ್ಕೇ ನನ್ನನ್ನು ಸೀಮಿತಗೊಳಿಸಿದ ನನ್ನದೇ ಔದಾಸೀನ್ಯವೋ ಅಥವಾ ಪತ್ರಕರ್ತನ ಕೆಲಸದ ಒತ್ತಡವೋ, ಅಂತೂ ಅದರ ಕಲಿಕೆಗೆ ಬೇರೆಯ ಕೆಲವು ಕಾರಣಗಳೂ ಸೇರಿಕೊಂಡು, ತಡೆಯುಂಟಾಯಿತು. ಇದರ ನಡುವೆಯೂ ಮಂಗಳೂರಿನ ಕಲಾನಿಕೇತನದಲ್ಲಿ ಹಿರಿಯರಾದ ಗೋಪಾಲಕೃಷ್ಣ ಅಯ್ಯರ್ ಅವರಲ್ಲಿ ಕೊಳಲು ವಾದನ ಅಭ್ಯಾಸ ಆರಂಭಿಸಿದ್ದೆನಷ್ಟೇ. ಅಷ್ಟರಲ್ಲಿ…..

ಅನಿರೀಕ್ಷಿತವಾಗಿ ಕರ್ನಾಟಕ ಸಂಗೀತವು ಇನ್ನಿಲ್ಲದಂತೆ ಬೆಳಗುತ್ತಿರುವ ಪ್ರದೇಶವಾದ ಚೆನ್ನೈಯಿಂದ ಉದ್ಯೋಗವೊಂದು ಕೈಬೀಸಿ ಕರೆದಾಗ, ಕಲಾ ಮಾತೆಯೇ ಕರೆದಂತಾಗಿ, ಕುಲದೇವಿಯೇ ಕರುಣಿಸಿದಂತಾಗಿ ಪುಳಕಗೊಂಡು ಆದದ್ದಾಗಲಿ ಎಂದು ಚೆನ್ನೈಯ ರೈಲೇರಿದಾಗ ಒಂದು ರೀತಿಯ ಧನ್ಯತಾ ಭಾವ. ಅಲ್ಲೀಗ ಮೃದಂಗ ವಿದ್ವಾಂಸ ಗಣೇಶ್ ಕೆ. ಆರ್. ಅವರಲ್ಲಿ ಮೃದಂಗಾಭ್ಯಾಸ ಮುಂದುವರಿಕೆ. ಸಂಗೀತ, ಭರತನಾಟ್ಯ ಕ್ಷೇತ್ರದಲ್ಲಿ ಹೆಸರು ಗಳಿಸುವ ಮಹದಾಸೆ.

ಪತ್ರಿಕಾ ರಂಗ: ವಿದ್ಯೆಗಾಗಿ ಹೋಟೆಲ್ ನಲ್ಲಿ, ಲಾಡ್ಜ್ ನಲ್ಲಿ ಕೆಲಸ ಮಾಡಿಕೊಂಡೇ ಹುಟ್ಟೂರಿಗೆ ದೂರದ ತಿಪಟೂರುಎಂಬಲ್ಲಿ ವಿಜ್ಞಾನ ಪದವಿ ಮುಗಿಸಿದ ತಕ್ಷಣ, ಬದಲಾವಣೆ ಬಯಸಿ ಮುಂಬಯಿಗೆ ಹಾರಿದ ನನಗೆ, ಪತ್ರಿಕಾ ರಂಗ ಪ್ರವೇಶಕ್ಕೆ ಮೊದಲ ಮೆಟ್ಟಿಲಾದ ಮುಂಬಯಿಯ ಕರ್ನಾಟಕ ಮಲ್ಲ ಕನ್ನಡ ದಿನಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ, ಆ ಬಳಿಕ ಅನಾರೋಗ್ಯದಿಂದಾಗಿ ಮತ್ತೆ ಮಂಗಳೂರಿಗೆ ಎಳೆದುತಂದಂತೆ ಬಂದು ಬಿದ್ದ ನನ್ನೊಳಗಿನ ಪತ್ರಕರ್ತನನ್ನು ಬಡಿದೆಬ್ಬಿಸಿದ ಮಂಗಳೂರಿನಕನ್ನಡ ಜನ ಅಂತರಂಗ ದಿನ ಪತ್ರಿಕೆ ಮತ್ತು ಕರಾವಳಿ ಅಲೆ ಸಂಜೆ ದೈನಿಕದ ಸಂಪಾದಕ ಮತ್ತು ಮಾಲೀಕರೂ ಆದಬಿ.ವಿ.ಸೀತಾರಾಂ, ದೇಶದ ನಂ.1 ಕನ್ನಡ ದಿನಪತ್ರಿಕೆ ಎಂಬ ನಾಮಧೇಯವನ್ನು ಅಲ್ಪ ಕಾಲಾವಧಿಯಲ್ಲಿ ಪಡೆದು ಪತ್ರಿಕಾ ರಂಗದಲ್ಲಿ ಕ್ರಾಂತಿಯ ಕಹಳೆಯೂದಿದ ವಿಜಯ ಕರ್ನಾಟಕಕ್ಕೆ ನನ್ನನ್ನು ಸೇರಿಸಿಕೊಂಡು ತಿದ್ದಿ ತೀಡಿದ ಈಶ್ವರ ದೈತೋಟ, ಆ ಬಳಿಕ ನನ್ನೊಳಗಿನ ಪತ್ರಕರ್ತನಿಗೆ ಹೊಸ ರೂಪ, ನವೀನತೆ ತುಂಬಿ, ಆಗಾಗ್ಗೆ ಗೆಳೆಯನಂತೆ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ, ವಿಜಯ ಕರ್ನಾಟಕದ ದಿಗ್ವಿಜಯದ ಏಣಿಯ ಆಧಾರ ಕಂಬವೇ ಆಗಿಬಿಟ್ಟಿರುವ ವಿಶ್ವೇಶ್ವರ ಭಟ್, ಮಂಗಳೂರು ಕಚೇರಿಯಲ್ಲಿ ಸದಾ ಕಾಲ ನನ್ನನ್ನು ಕಾರ್ಯನಿರತನಾಗುವಂತೆ ಮಾಡಿ, ನನ್ನೊಳಗಿನ ಔದಾಸೀನ್ಯವನ್ನು ತೊಡೆದು ಹಾಕಿದ ಕುಮಾರನಾಥ್….. ಹೀಗೆಯೇ ಬೆಳೆಯುತ್ತಿದೆ ನನ್ನನ್ನು ತಿದ್ದಿ ತೀಡಿದವರ ಪಟ್ಟಿ.

ಇಷ್ಟೆಲ್ಲದರ ಮಧ್ಯೆ, ಹೈಸ್ಕೂಲು ವಿದ್ಯಾಭ್ಯಾಸಕ್ಕಾಗಿ ಮಂಗಳೂರಿನ ಶ್ರೀ ರಾಮಕೃಷ್ಣ ಬಾಲಕಾಶ್ರಮ ಸೇರಿದ ನನ್ನೊಳಗಿನ ಒಳ್ಳೆಯ ಗುಣಗಳನ್ನು ಗುರುತಿಸಿ, ನನ್ನೊಳಗಿನ ನನ್ನತನವನ್ನು ಸರಿಯಾದ ದಿಕ್ಕಿಗೆ ಹೋಗುವಂತೆ ನಿರ್ದೇಶಿಸಿದ ಸ್ವಾಮೀಜಿಗಳಾದ ಶ್ರೀ ಜಿತಕಾಮಾನಂದಜಿ ಮಹಾರಾಜ್ ಅವರ ಮಾರ್ಗದರ್ಶನ ಎಂದಿಗೂ ಮರೆಯಲಾಗದು. ಇವರಿಗೆಲ್ಲಾ ಸದಾ ಋಣಿಯಾಗಿದ್ದುಕೊಂಡು, ವಾಣಿ ಜತೆಗೂಡಿ ನನ್ನ ಬಾಳ ಪಯಣ ಸಾಗುತ್ತಿದೆ.

ಒಟ್ಟಿನಲ್ಲಿ ನಾನೂ ಈಗ ಒಬ್ಬ “ಸಂಪಾದಕ” ಅನ್ನಿಸಿಕೊಂಡಿದ್ದೇನೆ.

ಬದಲಾವಣೆಯೇ ಜಗದ ನಿಯಮ ಯಾಕೆ?

ಬದಲಾವಣೆ ಎಂಬುದು ಆಟೋಮ್ಯಾಟಿಕ್ ಆಗಿ ನನ್ನ ಜೀವನದ ಧ್ಯೇಯವಾಗಿಬಿಟ್ಟಿದೆ. ಕಾರಣ ಹೇಳುತ್ತೇನೆ ಕೇಳಿ. ನನ್ನ ವಾಸಸ್ಥಳಗಳು ಚಿಕ್ಕಂದಿನಿಂದ ಇದುವರೆಗೆ ಬದಲಾಗುತ್ತಲೇ ಬಂದವು. ಕಡಬ, ಕಟೀಲು, ಕುಡುಪು, ಅಳದಂಗಡಿ(ಅರುವ), ಮಂಗಳೂರು, ಬೆಳ್ತಂಗಡಿ, ಧರ್ಮಸ್ಥಳ, ತಿಪಟೂರು, ಮುಂಬಯಿ, ಮಂಗಳೂರು(ಬಜಪೆ), ಮತ್ತೀಗ ಚೆನ್ನೈ. ಮುಂದೆ ಯಾವುದೋ….

ವಾಸಸ್ಥಳ ಬದಲಾವಣೆಯೊಂದಿಗೆ ನನ್ನ ಶಾಲೆ-ಕಾಲೇಜುಗಳೂ ಬದಲಾಗತೊಡಗಿದವು. ಆ ಮೇಲೆ ನನ್ನದೇ ಕಾರುಬಾರು. ಉದ್ಯೋಗಗಳನ್ನು ಬದಲಿಸಿದೆ, ಸೆಲ್ ಫೋನ್‌ಗಳನ್ನು ಬದಲಿಸಿದೆ, ಫೋನ್ ಸಿಮ್ ಕಾರ್ಡ್ ಬದಲಿಸಿದ ಕಾರಣ ನಂಬರ್‌ಗಳೂ ಬದಲಾಗತೊಡಗಿದವು. ಮೋಟಾರು ಬೈಕುಗಳನ್ನು ಬದಲಾಯಿಸಿದೆ, ಕಾರುಗಳನ್ನೂ ಖರೀದಿಸಿದೆ-ಬದಲಾಯಿಸುವ ಸಲುವಾಗಿ! ಇ-ಮೇಲ್ ಐಡಿಗಳನ್ನು ಬದಲಾಯಿಸತೊಡಗಿದೆ. ನನ್ನ ಇಚ್ಛೆಗಳನ್ನು ಬದಲಿಸಿದೆ, ಆಕಾಂಕ್ಷೆಗಳನ್ನು ಬದಲಿಸಿದೆ, ಮಹತ್ವಾಕಾಂಕ್ಷೆ ಬದಲಿಸಿದೆ, ಜತೆಯಲ್ಲೇ ಇತ್ಯಾದಿತ್ಯಾದಿ…. ಏನೇನೋ ಬದಲಾಗತೊಡಗಿದವು.

ಹಾಗಿದ್ದರೆ ಈಗ ನನ್ನ ಜೀವನದ ಧ್ಯೇಯವೇ ಆಗಿಬಿಟ್ಟಿರುವ ಬದಲಾವಣೆಯನ್ನೇ ಬದಲಿಸಿದರೆ ಹೇಗೆ?

ಪ್ರಶ್ನೆಗೆ ಉತ್ತರ ಗೊತ್ತಿಲ್ಲ!

ಸಂಪರ್ಕ: avinash.net@gmail.ಕಂ

ನಾನೂ ಹೋಗ್ಬಂದೆ ಜರ್ಮನಿಯ ಕಾರುಗಳ ಲೋಕಕ್ಕೆ!

ಕವಿಗಳು ಮತ್ತು ಚಿಂತಕರ ನಾಡು ಎಂದು ಕರೆಯಲಾಗುವ (Das Land der Dichter und Denker) ಜರ್ಮನಿಯಿಂದ, ನಮ್ಮ ನಿಮ್ಮೆಲ್ಲರ ಹೆಮ್ಮೆಯ ವೆಬ್‌ದುನಿಯಾವನ್ನು ಪ್ರತಿನಿಧಿಸುವ ಆಹ್ವಾನವೊಂದು ಕೈಬೀಸಿ ಕರೆದಾಗ, ಯಾವುದೋ ಹೊರದೇಶಕ್ಕೆ ಹೋಗುತ್ತೇನೆ ಎಂಬುದಷ್ಟೇ ನನ್ನ ಸಂತಸವಾಗಿರಲಿಲ್ಲ, ಬದಲಾಗಿ, ವಾಣಿಜ್ಯಾತ್ಮಕವಾಗಿ ಯೂರೋಪಿನ ಅತ್ಯಂತ ಬಲಿಷ್ಠ ರಾಷ್ಟ್ರವೊಂದಕ್ಕೆ ಮತ್ತು ಜನಸಾಮಾನ್ಯರಿಗೆ ಅಪರೂಪ ಎಂದು ಪರಿಗಣಿಸಲಾಗುವ ನಾಡೊಂದಕ್ಕೆ ಹೋಗುತ್ತಿದ್ದೇನೆ ಎಂಬ ಹೆಮ್ಮೆಯೂ ಜೊತೆಗಿತ್ತು.

ಅಸಾಧಾರಣ ಯುವ ಪತ್ರಕರ್ತರ ಅರಿವು (ಔಟ್‌ಸ್ಟ್ಯಾಂಡಿಂಗ್ ಯಂಗ್ ಜರ್ನಲಿಸ್ಟ್ಸ್ ಸ್ಕಾಲರ್‌ಶಿಪ್) ಕಾರ್ಯಕ್ರಮದಡಿಯಲ್ಲಿ ಯೂರೋಪಿನ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆ ವೋಕ್ಸ್‌ವ್ಯಾಗನ್ (ಜರ್ಮನ್ ಭಾಷೆಯಲ್ಲಿ ಉಚ್ಚರಿಸುವುದು ಫೋಕ್ಸ್‌ವ್ಯಾಗನ್) ಆಹ್ವಾನದಿಂದಾಗಿ, ತಂಡದಲ್ಲಿ ಏಕೈಕ ಕನ್ನಡಿಗನಾಗಿ ವೆಬ್‌ದುನಿಯಾವನ್ನು ಪ್ರತಿನಿಧಿಸುತ್ತಿರುವುದು ನನಗೆ ಮತ್ತಷ್ಟು ಹಿರಿಮೆಯ ಸಂಗತಿಯಾಗಿತ್ತು.

ಜೀವಮಾನದಲ್ಲೇ ದೊರೆಯಬಹುದಾದ ಅಪರೂಪದ ಅವಕಾಶವಿದು. ಅಮೆರಿಕ, ಆಸ್ಟ್ರೇಲಿಯಾ, ಸಿಂಗಾಪುರ ಮುಂತಾದೆಡೆಗಳಿಗೆ ಹೋಲಿಸಿದರೆ ಯೂರೋಪಿನ ಎರಡನೇ ಅತಿದೊಡ್ಡ ರಫ್ತುದಾರ ಮತ್ತು ಆಮದುದಾರ ರಾಷ್ಟ್ರ ಜರ್ಮನಿ ಭೇಟಿಗೆ ಅವಕಾಶ ದೊರೆಯುವುದೇ ಅಪರೂಪ. ಅಂತಲೇ ವೆಬ್‌ದುನಿಯಾ ಸಹೋದ್ಯೋಗಿಗಳು, ಗೆಳೆಯರು ಬೆನ್ನುತಟ್ಟಿ ಬೀಳ್ಕೊಟ್ಟಾಗ ಮನಸ್ಸಿನಲ್ಲಿ ಅದೇನೋ ಹೆಮ್ಮೆ.

ಹಳೇ ಕಾರು ಮಾಡೆಲ್ ಬಳಿಹಳೇ ಕಾರು ಮಾಡೆಲ್ ಬಳಿ 

19 ಮಂದಿ ಪತ್ರಕರ್ತರ ದಂಡಿನಲ್ಲಿ ಎನ್‌ಡಿಟಿವಿ, ಟೈಮ್ಸ್ ನೌ, ಬೂಮರಾಂಗ್ ಟಿವಿ, ಝೀ ಬಿಜಿನೆಸ್, ಸಿಎನ್‌ಬಿಸಿ ನೆಟ್ವರ್ಕ್-18 ಮುಂತಾದ ಚಾನೆಲ್‌ಗಳ ಪ್ರತಿನಿಧಿಗಳು ಹಾಗೂ ಪಿಟಿಐ, ಪಿಟಿಐ ಭಾಷಾ, ಟೈಮ್ಸ್ ಆಫ್ ಇಂಡಿಯಾ, ಫೈನಾನ್ಷಿಯಲ್ ಎಕ್ಸ್‌ಪ್ರೆಸ್, ಡಿಎನ್ಎ, ದಿ ಹಿಂದು, ದಿ ವೀಕ್, ಬಿಜಿನೆಸ್ ವರ್ಲ್ಡ್, ಬಿಜಿನೆಸ್ ಇಂಡಿಯಾ, ಇಟಿ ಝಿಗ್ ವೀಲ್ಸ್. ಟ್ವೆಂಟಿ-20 ಮೀಡಿಯಾ, ಮುಂತಾದ ರಾಷ್ಟ್ರೀಯ ಮಾಧ್ಯಮಗಳೊಂದಿಗೆ, ಭಾರತದ 9 ಭಾಷೆಗಳಲ್ಲಿ ಇಂಟರ್ನೆಟ್ ಸೇವೆ ಒದಗಿಸುತ್ತಿರುವ ಏಕೈಕ ಪೋರ್ಟಲ್ ವೆಬ್‌ದುನಿಯಾವನ್ನು ಪ್ರತಿನಿಧಿಸುತ್ತಿದ್ದುದು ಅತೀವ ಹೆಮ್ಮೆಯ ಸಂಗತಿಯಾಗಿತ್ತು. ಅದರಲ್ಲಿ ದಕ್ಷಿಣ ಭಾರತದಿಂದ ಈ ಮಾಧ್ಯಮಗಳನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿರುವವರಲ್ಲಿ ದಿ ಹಿಂದೂ ಬಿಟ್ಟರೆ, ವೆಬ್‌ದುನಿಯಾಕ್ಕೆ ಮಾತ್ರ.

ಆಗಸ್ಟ್ 29ರಂದು ಬೆಳ್ಳಂಬೆಳಗ್ಗಿನ ಬಿಸಿಲ ಬೆವರಿನೊಂದಿಗೆ ಚೆನ್ನೈಯಿಂದ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಜಿಟಿಜಿಟಿ ಮಳೆಯ ಸುಸ್ವಾಗತ. ಬೇಸಿಗೆಯಿಂದ ಮಳೆಗಾಲಕ್ಕೆ ದಿಢೀರ್ ಮಾರ್ಪಾಡು. ಅಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಐಷಾರಾಮಿ ಹೋಟೆಲ್ ಟ್ರೈಡೆಂಟ್‌ನಲ್ಲಿ ಕೊಠಡಿ ವ್ಯವಸ್ಥೆ. ಹದಿಮೂರು ವರ್ಷಗಳ ಹಿಂದೆ ನನ್ನ ವೃತ್ತಿ ಜೀವನವನ್ನು ಆರಂಭಿಸಿದ ಈ ವಾಣಿಜ್ಯ ನಗರಿಯಿಂದು ಅದ್ಭುತವಾಗಿ ಬೆಳೆದಿದೆ, ಬದಲಾಗಿದೆ – ಬಹುಶಃ ನನ್ನ ಜೀವನದ ಗತಿಯಂತೆಯೇ! ಕಂಪನಿ ಒದಗಿಸಿದ ಕಾರಿನಲ್ಲಿ ಒಂದಿಷ್ಟು ಸುತ್ತಾಡಿದಾಗ, ಶ್ರೀಕೃಷ್ಣ ಲೀಲೋತ್ಸವಕ್ಕೆ ಮತ್ತು ನಾಡಹಬ್ಬದ ಒಡೆಯ ಗಣಪನನ್ನು ಸ್ವಾಗತಿಸಲು ಇಡೀ ನಗರಕ್ಕೆ ನಗರವೇ ಸಜ್ಜಾಗುತ್ತಾ ಅಲ್ಲಲ್ಲಿ ಕಂಡು ಬಂದ ಹೋರ್ಡಿಂಗ್‌ಗಳು, ಬ್ಯಾನರ್‌ಗಳನ್ನು ನೋಡಿ, ಅಲ್ಲಿ ಹಬ್ಬ ಹರಿದಿನಗಳೂ ವಾಣಿಜ್ಯೀಕರಣಗೊಳ್ಳುತ್ತಿವೆ ಹಾಗೂ ರಾಜಕೀಕರಣಗೊಳ್ಳುತ್ತಿವೆ ಎಂಬುದನ್ನು ಸಂಕೇತಿಸುತ್ತಿತ್ತು.

ದಶಕದ ಹಿಂದೆ ತಿಂದಿದ್ದ ವಡಾ-ಪಾವ್ ರುಚಿಯ ನೆನಪು ಉಮ್ಮಳಿಸಿ ಬಂದು, ಮತ್ತೊಮ್ಮೆ ವಡಾ ಪಾವ್ ಸವಿದು ಹೋಟೆಲ್‌ಗೆ ಮರಳಿದಾಗ ರಾತ್ರಿ 10 ಗಂಟೆ. ಮಧ್ಯರಾತ್ರಿ ಕಳೆದು 2.50ಕ್ಕೆ ಫ್ರಾಂಕ್‌ಫರ್ಟ್ ತೆರಳುವ ಲುಫ್ತಾನ್ಸಾ ವಿಮಾನ ಏರಬೇಕಾಗಿತ್ತು. ಮಳೆಯಿಂದಾಗಿ ಒಂದು ಗಂಟೆ ತಡವಾಗಿ ಹೊರಟ ವಿಮಾನ, 9 ಗಂಟೆ ಪ್ರಯಾಣದ ಬಳಿಕ ಫ್ರಾಂಕ್‌ಫರ್ಟ್ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಇಳಿದಾಗ, ದೆಹಲಿಯಿಂದ ಬಂದ 10 ಮಂದಿಯ ತಂಡ ನಮ್ಮನ್ನು ಸೇರಿಕೊಂಡಿತು. ಓಹ್! ಫ್ರಾಂಕ್‌ಫರ್ಟ್‌ನಲ್ಲಿ ಹರ್ಟ್ ಮಾಡುತ್ತಿತ್ತು ಚಳಿಗಾಲದ ಕುಳಿರ್ಗಾಳಿ! ಅಲ್ಲಿಗೆ ವರ್ಷದ ಮೂರೂ ಋತುಗಳನ್ನು ಇಪ್ಪತ್ತನಾಲ್ಕು ಗಂಟೆಗಳೊಳಗೆ ಅನುಭವಿಸಿದ ವಿಶೇಷ ದಾಖಲೆ! ಅಲ್ಲಿಂದ ಹ್ಯಾನೋವರ್‌ಗೆ ಲುಫ್ತಾನ್ಸಾ-ಸ್ಟಾರ್ ಅಲಯನ್ಸ್ ವಿಮಾನದಲ್ಲಿ ಪ್ರಯಾಣ. ಅಲ್ಲಿ ನಮಗಾಗಿ ಕಾದಿದ್ದ ಬಸ್ಸೇರಿ, ಕಾರುಗಳ ಮಾಯಾನಗರಿ, ವೋಕ್ಸ್‌ವ್ಯಾಗನ್ ಕಾರಿನ ಜನ್ಮಭೂಮಿಯೂ ಕರ್ಮಭೂಮಿಯೂ ಆಗಿರುವ ವೂಲ್ಫ್ಸ್‌ಬರ್ಗ್‌ಗೆ ತಲುಪಿದಾಗ ಮಾಯಾಲೋಕವೊಂದಕ್ಕೆ ಕಾಲಿಟ್ಟ ಹಾಗಿತ್ತು. ಅಬ್ಬಾ! ಎಲ್ಲಿ ನೋಡಿದರೂ ಕಾರುಗಳು… ವೋಕ್ಸ್‌ವ್ಯಾಗನ್‌ನ ಬ್ರಾಂಡ್-ಕುಟುಂಬ ವರ್ಗಕ್ಕೆ ಸೇರಿದ ಕಾರುಗಳೇ ಎಲ್ಲೆಲ್ಲೂ! ಉಳಿದ ಬ್ರಾಂಡ್ ಕಾರುಗಳ ಸಂಖ್ಯೆ ಅಬ್ಬಬ್ಬಾ ಎಂದರೆ ಶೇ10-15 ಮಾತ್ರ!

 

ಹೋಟೆಲಿನಲ್ಲಿ ಇತರ ಪತ್ರಕರ್ತರೊಂದಿಗೆಹೋಟೆಲಿನಲ್ಲಿ ಇತರ ಪತ್ರಕರ್ತರೊಂದಿಗೆ 

ಕಾರು ಫ್ಯಾಕ್ಟರಿ: ಶತಮಾನದಷ್ಟು ಸುದೀರ್ಘ ಇತಿಹಾಸವುಳ್ಳ, 1.6 ಚದರ ಕಿ.ಮೀ. (395 ಎಕರೆ) ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ವೋಕ್ಸ್‌ವ್ಯಾಗನ್ ಒಳಾಂಗಣ ಕಾರು ಫ್ಯಾಕ್ಟರಿಗೆ ಹೊಕ್ಕರೆ ಅದೊಂದು ಅದ್ಭುತ ಯಂತ್ರಮಾನವರ ಲೋಕ. ರೋಬೋಟ್‌ಗಳಿಂದ ಕಾರು ಬಿಡಿಭಾಗ ಜೋಡಣೆಯ ಅದ್ಭುತ ಮಸಲತ್ತು ಕಣ್ಣಾರೆ ಕಾಣಬೇಕು! ಈ ಕಾರು ಫ್ಯಾಕ್ಟರಿಯಲ್ಲಿ 48 ಸಾವಿರ ಉದ್ಯೋಗಿಗಳೂ (ಯಂತ್ರಮಾನವರಲ್ಲ!) ಇದ್ದಾರೆಂದು ಕೇಳಿ ಮತ್ತಷ್ಟು ಅಚ್ಚರಿಯಾಯಿತು. ಇಲ್ಲಿ ದಿನವೊಂದಕ್ಕೆ 3000ಕ್ಕೂ ಹೆಚ್ಚು ಕಾರುಗಳು ತಯಾರಾಗುವ ಸಾಮರ್ಥ್ಯವನ್ನು ಈ ಫ್ಯಾಕ್ಟರಿ ಹೊಂದಿದೆ! ಇದರೊಳಗೆ ಪ್ರವಾಸಿಗರಿಗೆಂದೇ ಇರಿಸಲಾಗಿರುವ ಪುಟ್ಟ ರೈಲನ್ನು ಟಾರ್ಸ್ಟೆನ್ ಕ್ರಾಮ್ ಎಂಬವರು ಚಲಾಯಿಸುತ್ತಾ ನೀಡುತ್ತಿದ್ದ ವಿವರಣೆಯಂತೂ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿತ್ತು. ಒಂದು ಕಾರಿನ ಸಂಪೂರ್ಣ ಉತ್ಪಾದನಾ-ಚಕ್ರವನ್ನು ಇಷ್ಟು ಹತ್ತಿರದಿಂದ ನೋಡುತ್ತಿರುವುದು ಬಹುಶಃ ಜೀವಮಾನದ ಶ್ರೇಷ್ಠ, ಅಪರೂಪದ ಅವಕಾಶಗಳಲ್ಲೊಂದು ಎಂದರೆ ಅತಿಶಯೋಕ್ತಿಯಲ್ಲ.

ಆಟೋಸ್ಟಾಟ್: ಜಗತ್ತಿನ ಅತಿ ದೊಡ್ಡ ಕಾರು ವಿತರಣಾ ಕೇಂದ್ರವೆಂದು ಪರಿಗಣಿಸಲಾಗಿರುವ, ಎರಡು ಗಾಜಿನ ಟವರ್‌ಗಳಿರುವ ಕುಂಡನ್‌ಸೆಂಟರ್ (ಒಂದೊಂದು ಗಾಜಿನ ಟವರ್‌ನಲ್ಲಿ ತಲಾ 400 ಕಾರುಗಳು ಗ್ರಾಹಕರಿಗೆ ವಿತರಣೆಗೆ ಸಿದ್ಧ) ಬಳಿಯಲ್ಲೇ, ಆಟೋಸ್ಟಾಟ್ ಎಂಬ ಕಾರುಗಳ ಥೀಮ್ ಪಾರ್ಕ್ ಇದೆ. ಇಲ್ಲಿ ವೋಕ್ಸ್‌ವ್ಯಾಗನ್ ಮತ್ತು ಅದರ ಪ್ರತಿಸ್ಪರ್ಧಿ ಕಂಪನಿಗಳದ್ದೂ ಸೇರಿದಂತೆ 400ಕ್ಕೂ ಹೆಚ್ಚು ವಾಹನಗಳು, ಕಾರುಗಳ ಇತಿಹಾಸದ ಮೈಲಿಗಲ್ಲುಗಳಾಗಿ ಒಂದೊಂದು ಇತಿಹಾಸ ಸಾರುತ್ತವೆ. ಪಕ್ಕದಲ್ಲೇ, ಕಾರು ಹೇಗೆಲ್ಲಾ ಚಲಾಯಿಸಬಹುದು, ಎಷ್ಟು ಗಟ್ಟಿ ಇದೆ ಎಂದೆಲ್ಲಾ ಪರೀಕ್ಷಿಸಲು ಟೆಸ್ಟ್ ಟ್ರ್ಯಾಕ್ ಇದೆ. ಇಲ್ಲಿ ಹಳ್ಳ ದಿಣ್ಣೆಗಳು, ಮೆಟ್ಟಿಲುಗಳು, ನೀರು, ಹೊಂಡ-ಗುಂಡಿಯ ಮಾರ್ಗ ಮತ್ತು ಮರಳಿನಲ್ಲೆಲ್ಲಾ ಕಾರು ಓಡಿಸಿ ನೋಡಬಹುದು. ನನಗೂ ಕೂಡ ವೋಕ್ಸ್‌ವ್ಯಾಗನ್‌ನ ಟಾರೆಗ್ (Touarag) ಕಾರಿನ ಟೆಸ್ಟ್ ಡ್ರೈವಿಂಗ್ ಅವಕಾಶ ಸಿಕ್ಕಿತ್ತು. ಗೇರುಗಳಿಲ್ಲದ, ಕ್ಲಚ್ ಕೂಡ ಇಲ್ಲದ ಪೂರ್ಣ ಸ್ವಯಂಚಾಲಿತ ಕಾರು ಇದು. ಇದರ ಸವಾರಿ ಅದ್ಭುತ! ಕೊಳ್ಳೋಣವೆಂದುಕೊಂಡು ಬೆಲೆ ಕೇಳಿದರೆ…. ಅಂದಾಜು 55 ಲಕ್ಷ ರೂಪಾಯಿ ಮಾತ್ರ!

 

Fronfurtier ಪತ್ರಿಕೆಯ ಕಚೇರಿಯಲ್ಲಿ ಬೊಂಬೆ ಜೊತೆFronfurtier ಪತ್ರಿಕೆಯ ಕಚೇರಿಯಲ್ಲಿ ಬೊಂಬೆ ಜೊತೆ 

ಐದು ದಿನಗಳ ಪ್ರವಾಸದ ಅವಧಿಯಲ್ಲಿ ಜರ್ಮನಿಯ ರಾಷ್ಟ್ರೀಯ ಸಂಸತ್ತು ‘ಬುಂಡೆಸ್ಟಾಗ್’ಗೆ ಭೇಟಿ ನೀಡುವ ಅವಕಾಶವೂ ದೊರೆಯಿತು. ಅಲ್ಲಿ ಸಂಸತ್ತಿನೊಳಗೆ ನೈಸರ್ಗಿಕ ಬೆಳಕು ಒದಗಿಸುವ ವ್ಯವಸ್ಥೆಗೆ ಮಾರುಹೋದೆವು. ನಂತರ ಬರ್ಲಿನ್ ಅನ್ನು 360 ಡಿಗ್ರಿಯಲ್ಲಿ ವೀಕ್ಷಣೆ ಮಾಡಬಹುದಾದ, ಟಿವಿ ಟವರ್ ಎಂದು ಪ್ರೀತಿಯಿಂದ ಕರೆಯಲಾಗುವ, 368 ಮೀಟರ್ ಎತ್ತರದ, ಬರ್ಲಿನ್‌ನ ಅತಿ ಎತ್ತರದ ಬರ್ಲಿನ್ ಫರ್ನ್‌ಸೇಟರ್ಮ್ (Fernsehturm), ಲಿಫ್ಟ್ ಮೂಲಕ ಮೇಲೇರಿ, ಅದರ ಮಧ್ಯದಲ್ಲಿರುವ ಗೋಳದಂತಹಾ ಭಾಗದಲ್ಲಿ, ನಿಧಾನವಾಗಿ ಸುತ್ತುವ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಾ, ಇಡೀ ಜರ್ಮನಿಯನ್ನು ಪಕ್ಷಿನೋಟದ ಮೂಲಕ ವೀಕ್ಷಿಸಿ ಇಳಿದು ಮೇಲೆ ನೋಡಿದಾಗ, ಅಬ್ಬಾ, ನಾವು ಏರಿದ್ದು ಈ ಪುಟ್ಟ ಕಂಬದೊಳಗೆಯೇ? ಎಂಬ ಉದ್ಗಾರ ಬಾಯಿಯಿಂದ ಹೊರಬಂದಿತ್ತು!

ಅದರ ನಡುವೆ, ಭಾರತೀಯ ರಾಯಭಾರ ಕಚೇರಿ, ಜರ್ಮನಿಯ ಪತ್ರಕರ್ತರ ಒಕ್ಕೂಟ, ಅಲ್ಲಿನ ಪ್ರಮುಖ ದಿನಪತ್ರಿಕೆ ಫ್ರಾಂಕ್‌ಫರ್ಟರ್ ಅಲ್ಜೆಮೀನ್ ಕಚೇರಿ, ಸರಕಾರಿ ದೂರದರ್ಶನವಾದರೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಡೈಚ್‌ವಿಲ್ಲೆ (Deutsche Welle) ಟಿವಿ ಕೇಂದ್ರಕ್ಕೂ ಭೇಟಿ ನೀಡಿದೆವು. ನಂತರ ಯಹೂದಿಗಳ ಹತ್ಯಾಕಾಂಡದ ಪ್ರತೀಕವಾದ ಹೋಲೋಕಾಸ್ಟ್ ಸ್ಮಾರಕ, ತದನಂತರ ಯೂರೋಪಿನ ಅತ್ಯಂತ ಪ್ರಖ್ಯಾತ ಹೆಗ್ಗುರುತುಗಳಲ್ಲೊಂದಾಗಿರುವ ಬ್ರಾಂಡೆನ್‌ಬರ್ಗ್ ಗೇಟ್‌ಗೆ ಬಂದಾಗ ಮಳೆರಾಯ ಕಾದಿದ್ದ. ಆಕರ್ಷಕ ಕಾಮನಬಿಲ್ಲು ಮೂಡಿತ್ತು. ಸಂಜೆ 8 ಗಂಟೆಯವರೆಗೂ ಅಲ್ಲಿ ಬೆಳಕು ಇರುತ್ತಿದ್ದುದು ನೋಡಿ ಮುದವಾಯಿತು. ಇವಿಷ್ಟು ಜರ್ಮನಿ ಪ್ರವಾಸದ ಪಕ್ಷಿ ನೋಟ. ವಿವರಗಳು ಮುಂದಿನ ಲೇಖನದಲ್ಲಿ.

ಇನ್ನು ಜರ್ಮನಿ ಬಗೆಗೆ ಒಂದಿಷ್ಟು:
ಕಾಲಿಟ್ಟ ಕೂಡಲೇ ಇದು ಹೊರ ದೇಶ ಎಂದು ಅನ್ನಿಸಿಬಿಡುವುದೇಕೆ? ಏಕೆಂದರೆ ಇಲ್ಲಿನ ರಸ್ತೆಗಳು. ಹೌದು. ಯಾವುದೇ ಊರಿನ ಪರಿಸ್ಥಿತಿ ತಿಳಿಸುವುದೇ ಅಲ್ಲಿನ ರಸ್ತೆಗಳು. ಎಷ್ಟೊಂದು ಸ್ವಚ್ಛ ಮತ್ತು ಸುಂದರ! ಮತ್ತು ನಗರ ಎಂದು ಕರೆಸಿಕೊಂಡರೂ ಇಕ್ಕಟ್ಟಾದ ರಸ್ತೆಗಳಿಲ್ಲ. ಹೆಚ್ಚಿನವು ದ್ವಿಪಥ, ಚತುಷ್ಪಥ, ಷಟ್ಪಥ ಹಿರಿದಾದ ದಾರಿಗಳೇ! ಅದಕ್ಕೆ ಆತುಕೊಂಡಿರುವ ಕಟ್ಟಡಗಳು – ಎಷ್ಟು ವ್ಯವಸ್ಥಿತವಾಗಿ ನಗರವನ್ನು ರೂಪಿಸಲಾಗಿದೆ ಎಂಬುದನ್ನು ನೋಡಿದಾಗ, ಇದ್ದದ್ದನ್ನು ಬಾಚಿಕೊಂಡು, ರಸ್ತೆಯಲ್ಲಿಯೂ ಅತಿಕ್ರಮಿಸಿಕೊಂಡು ವ್ಯಾಪಾರ ಮಾಡುವ ನಮ್ಮ ಊರುಗಳ ನೆನಪಾಗುತ್ತದೆ.

 

ಜರ್ಮನಿ ಸಂಸತ್ತಿನ ಒಳಗೆಜರ್ಮನಿ ಸಂಸತ್ತಿನ ಒಳಗೆ 

ಜರ್ಮನ್ನರು ನಗರವನ್ನು ಎಷ್ಟು ವ್ಯವಸ್ಥಿತವಾಗಿ ರೂಪಿಸುತ್ತಿದ್ದಾರೆ, ಸಿಕ್ಕ ಯಾವುದೇ ಅವಕಾಶವನ್ನೂ ಪೋಲು ಮಾಡದೆ, ಭವಿಷ್ಯದ ಪೀಳಿಗೆಗೂ ಸಂಪನ್ಮೂಲ ಉಳಿಯುವಂತೆ ನೋಡಿಕೊಂಡು ಒಂದು ಪಟ್ಟಣವನ್ನು ಕಟ್ಟುತ್ತಿದ್ದಾರೆ ಎಂದರೆ, ನಮಗೇಕೆ ಸಾಧ್ಯವಾಗಲಾರದು? ಇದಕ್ಕೆ ದೊರೆಯುವ ಏಕೈಕ ಉತ್ತರವೆಂದರೆ ಜನಸಂಖ್ಯೆ. ಜನಸಂಖ್ಯೆ ಹೆಚ್ಚಾದಂತೆ, ಅಭಿವೃದ್ಧಿಗೆ ಅಡಚಣೆಯಾಗುತ್ತದೆ, ಸಂಪನ್ಮೂಲದ ಬೇಡಿಕೆ ಹೆಚ್ಚಾಗುತ್ತದೆ. ಹೀಗಾಗಿ ಹಣ ಮಾಡುವುದೇ ಏಕೈಕ ಉದ್ದೇಶವಾಗಿಬಿಡುತ್ತದೆ. ಭವಿಷ್ಯದ ಬಗೆಗೆ ಯೋಚಿಸುವ ಮನಸ್ಥಿತಿಗೆ ಕಾರ್ಮೋಡ ಕವಿದಿರುತ್ತದೆ. ಅದರ ನಡುವೆ ಜಾತಿ-ಪಂಗಡಗಳೆಂಬಂತಹಾ ಅಡ್ಡಗೋಡೆಗಳು ಮನುಷ್ಯನ ಮನಸ್ಸನ್ನು ಕುಬ್ಜವಾಗಿಸುತ್ತಿದೆ. ಹೀಗಂತ, ನಮ್ಮ ದೇಶವನ್ನು ಹೀಗಳೆಯುತ್ತಿಲ್ಲ. ಇದು ಪರಿಸ್ಥಿತಿಯ ಪ್ರಭಾವ ಎಂಬುದು ಗೊತ್ತು. ಆದರೆ, ಒಂದಿನಿತಾದರೂ ಯೋಚಿಸಿದರೆ, ದೂರದೃಷ್ಟಿ ಇದ್ದಿದ್ದರೆ ನಾವು ಇನ್ನಷ್ಟು ವ್ಯವಸ್ಥಿತವಾಗಿ ಜೀವನ ಮಾಡಬಹುದಿತ್ತು ಎಂಬುದು ಸುಳ್ಳಲ್ಲವಲ್ಲ!

 

ಜರ್ಮನಿಯ 3.57 ಸಾವಿರ ಚದರ ಕಿ.ಮೀ. ವಿಸ್ತೀರ್ಣದಲ್ಲಿ ಜನಸಂಖ್ಯೆ ಇರುವುದು 8.18 ಕೋಟಿಯಷ್ಟು, ಇಷ್ಟಾಗಿಯೂ ಇದು ಐರೋಪ್ಯ ಒಕ್ಕೂಟದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆಯಿರುವ ರಾಷ್ಟ್ರ! 16 ರಾಜ್ಯಗಳ ಫೆಡರಲ್ ಪಾರ್ಲಿಮೆಂಟರಿ ಸರಕಾರ ಇಲ್ಲಿದೆ. ಅತ್ಯುಚ್ಚ ಮಟ್ಟದ ಜೀವನ ಶೈಲಿಯಿದ್ದರೂ ಸಾಮಾಜಿಕ ಭದ್ರತೆಯ ನಿಟ್ಟಿನಲ್ಲಿ ಅವರ ಕಾಳಜಿಯಿಂದಾಗಿಯೇ ಬಹುಶಃ ಅವರು ಸಿರಿವಂತಿಕೆಯಿಂದ ಮೆರೆಯುತ್ತಿರುವುದು. ಹಲವು ಕ್ಷೇತ್ರಗಳಲ್ಲಿ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಲೀಡರ್ ಎಂದು ಪರಿಗಣಿಸಲ್ಪಟ್ಟಿದೆ ಜರ್ಮನಿ. ಇನ್ನೊಂದು ಗಮನ ಸೆಳೆದ ವಿಷಯವೆಂದರೆ, ಅವರ ಭಾಷಾಭಿಮಾನ. ಜಾಗತಿಕ ಭಾಷೆ ಎಂದು ಪರಿಗಣಿಸಲ್ಪಟ್ಟಿರುವ ಇಂಗ್ಲಿಷ್ ಪ್ರಚಲಿತದಲ್ಲಿದ್ದರೂ, ಅದರ ಮೇಲೆ ಹಿಡಿತ ಸಾಧಿಸಿದವರು ಭಾರತಕ್ಕೆ ಹೋಲಿಸಿದರೆ ಕಡಿಮೆ. ನಮ್ಮಲ್ಲಿ ನಾವು ರಾಷ್ಟ್ರಭಾಷೆ-ರಾಜ್ಯಭಾಷೆಯನ್ನು ಬಿಟ್ಟುಕೊಟ್ಟು, ಆಂಗ್ಲ ಭಾಷೆಯ ಪದಗಳಿಗೇ ಮೊರೆ ಹೋಗುತ್ತಿದ್ದರೆ, ಅವರು ಹಾಗಲ್ಲ. ಪಕ್ಕಾ ಜರ್ಮನ್ ಭಾಷೆಯೇ ಎಲ್ಲೆಲ್ಲೂ ನೋಡಸಿಗುತ್ತದೆ, ಕೇಳಸಿಗುತ್ತದೆ.

ಜಗಮಗಿಸುವ ರಾಜಧಾನಿ ನಗರ ಬರ್ಲಿನ್‌ನ ಟಿಗೆಲ್ ವಿಮಾನ ನಿಲ್ದಾಣದಿಂದ ಫ್ರಾಂಕ್‌ಫರ್ಟ್ ವಿಮಾನವೇರಿ, ಅಲ್ಲಿಂದ ಮರಳಿ ಲುಫ್ತಾನ್ಸಾ ವಿಮಾನದ ಮೂಲಕ ಚೆನ್ನೈ ಹಾದಿ ಹಿಡಿದಾಗ, ಐದು ದಿನಗಳಲ್ಲೇ ಆಪ್ತವಾಗಿಬಿಟ್ಟಿದ್ದ ಜರ್ಮನಿಯಿಂದ ಮತ್ತು ಜೊತೆಗೆ ಸಿಕ್ಕ ಹೊಸ ಗೆಳೆಯ-ಗೆಳತಿಯರಿಂದ ಬೀಳ್ಕೊಡುವ ಮನಸ್ಥಿತಿಯು ಎದೆಗೂಡನ್ನು ಭಾರವಾಗಿಸಿತ್ತು. ಜರ್ಮನಿಯ ಚಳಿಯ ನಡುವೆಯೂ ಹೃದಯದ ತುಂಬೆಲ್ಲಾ ಬೆಚ್ಚನೆಯ ಅನುಭವಗಳ ಗೋಪುರ. ಮರಳಿ ಭಾರತಕ್ಕೆ ಕಾಲಿಟ್ಟಾಗಲಂತಾ ನೆನಪಾಗಿದ್ದು, ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ (ಜನನಿ, ಜನ್ಮಭೂಮಿಗಳು ಸ್ವರ್ಗಕ್ಕಿಂತಲೂ ಮಿಗಿಲಾದವು) ಎಂಬ ಮಾತು.

 

‍ಲೇಖಕರು G

8 April, 2011

3 Comments

  1. shama, nandibetta

    avinash nanna blog gurugalu…

    blog andre enu anthale gottillada nange online moolakave blog rachane hegendu kalisi niranthara bennu thattutta bandavaru… best blog nannli e blog kandu nange bhaala khushiyagide…

  2. Avinash

    ಅವಧಿ ಮ್ಯಾಗಜಿನ್‌ಗೆ ಧನ್ಯವಾದ. ಹೆಕ್ಕಿದ್ದಕ್ಕೆ ಸುಶ್ರುತರಿಗೂ ಕೃತಜ್ಞತೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading