ಪ್ರಕಾಶ್ ಕಡಮೆ
’ನಾಗಸುಧೆ’ ಯಲ್ಲಿ ನಡೆದ ಹುಬ್ಬಳ್ಳಿಯ ’ಅಕ್ಷರ ಸಾಹಿತ್ಯ ವೇದಿಕೆ’ ಮಾರ್ಚ್ ತಿಂಗಳ ಮನೆ-ಮನೆ ಕಾರ್ಯಕ್ರಮದಲ್ಲಿ ಕವಿ ನಿರ್ಮಲಾ ಶೆಟ್ಟರ್ ತಮ್ಮ ಹೊಸ ಕವಿತೆಗಳನ್ನು ಪ್ರಸ್ತುತ ಪಡಿಸಿ, ಕಾವ್ಯದ ಸ್ಪೂರ್ತಿಯ ಕುರಿತು ಮಾತಾಡಿದರು. ಅವರ ಒಟ್ಟೂ ಕಾವ್ಯದ ಕುರಿತು ಕವಿ ಮಹಾಂತಪ್ಪ ನಂದೂರ ಮತ್ತು ಕವಿ ಚಿದಾನಂದ ಕಮ್ಮಾರ್ ಸವಿವರವಾಗಿ ಮಾತಾಡಿದರೆ, ನೆರೆದ ಕಾವ್ಯಪ್ರಿಯರಾದ ರೂಪಾ ಜೋಷಿ, ಮಂಜುನಾಥ ಮಂಜ, ಡಾ.ಸಿದ್ದೇಶ್ವರ ಕಟ್ಕೋಳ್, ಶ್ರೀಪತಿ ಕಾಶೀಕರ, ಸಿ.ಎಂ ಚೆನ್ನಬಸಪ್ಪ, ಸುನಂದಾ ಮತ್ತು ನಾನು… ನಿರ್ಮಲಾ ಅವರ ಕವಿತೆಗಳ ನೆಪದಲ್ಲಿ ನಮ್ಮ ನಮ್ಮ ಅನಿಸಿಕೆಗಳನ್ನು ಹಂಚಿಕೊಂಡೆವು..
ಕಳೆದ ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ನಮ್ಮ ’ಅಕ್ಷರ ವೇದಿಕೆ’ ಈಗ ನೆನಪಿನಲ್ಲಿ ಮಾತ್ರ ಉಳಿದ ಹೋರಾಟಗಾರ ಕವಿ ಜಗದೀಶ ಮಂಗಳೂರಮಠ, ಲೇಖಕ ಆರೂರು ಲಕ್ಷ್ಮಣ ಶೇಟ್ ಅವರಿಂದ ಹಾಗೂ ಕಥೆಗಾರರೂ ವಿಮರ್ಶಕರೂ ಆದ ಪ್ರಹ್ಲಾದ ಅಗಸನಕಟ್ಟೆ ಮತ್ತು ಡಾ. ರಮೇಶ ಬಾಬು ಮುಂತಾದವರ ಮುಂದಾಳತ್ವದಲ್ಲಿ ನಡೆದುಕೊಂಡು ಬಂದಿದ್ದು, ಹುಬ್ಬಳ್ಳಿಯಲ್ಲಿ ವಾಸಿಸುವ ಕವಿಗಳು ,ಕಥೆಗಾರರು, ಕಾದಂಬರಿಕಾರರು, ನಾಟಕಕಾರರು, ಅನುವಾದಕರು ಹಾಗೂ ವಿಮರ್ಶಕರು ಹೀಗೆ ನಾನಾ ಪ್ರಕಾರದಲ್ಲಿ ಕೃಷಿ ಮಾಡಿದ ಸುಮಾರು ಮೂವತ್ತು ಸೃಜನಶೀಲ ಬರಹಗಾರರನ್ನು ಹೊಂದಿದೆ.
ಇದೀಗ ’ಅಕ್ಷರ ವೇದಿಕೆ’ ಯು – ಸಂಚಾಲಕ, ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಬ್ಯಾನರ್, ಲೆಟರ್ ಪ್ಯಾಡ್ ಇಂಥ ಯಾವ ಔಪಚಾರಿಕ ಸಿದ್ಧ ಪರಿಕಲ್ಪನೆಗಳೂ ಇಲ್ಲದ ಸಮಾನ ಆಸಕ್ತರ ಒಂದು ಪರಿಶುದ್ಧ ಸಂವೇದನಾಶೀಲ ’ಅಕ್ಷರ ಬಳಗ’ವಾಗಿ ಪ್ರತಿ ತಿಂಗಳೂ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕ್ರಿಯಾಶೀಲವಾಗಿದೆ. ’ಅಕ್ಷರ ವೇದಿಕೆ’ ಡಾ. ಕಲಬುರ್ಗಿ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಲ್ಲದೇ, ಕಳಸಾ ಬಂಡೂರಿ ರೈತ ಹೋರಾಟವನ್ನೂ ಸಹ ಬೆಂಬಲಿಸಿತ್ತು







ಹೆಮ್ಮೆಯ ವಿಚಾರ.