ನನ್ನಂತಹ ತಿರುಗುಲತಿಪ್ಪಿ ಇಂತಹ ಜನಾಂಗದಲ್ಲಿ ಹುಟ್ಟಬಾರದಿತ್ತೇ ಎಂಬ ಆಸೆ ಹುಟ್ಟಿಹೋಯಿತು..

ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಹೋದಾಗ ಸ್ನೇಹಿತರೊಬ್ಬರು ಒಂದು ತೆಕ್ಕೆಗಾಗುವಷ್ಟು ಪುಸ್ತಕ ಕೊಟ್ಟರು. ಅದರ ಜೊತೆಗೆ ಇಂದು ಪುಟ್ಟ ಕಂಡಿಷನ್.  ಅವರು ಕೊಟ್ಟ ಮೂವತ್ತು ಪುಸ್ತಕಗಳಲ್ಲಿ ಈ ಪುಸ್ತಕವನ್ನೇ ಮೊದಲು ಓದಬೇಕು ಎನ್ನುವುದು ಅವರ ಕಂಡಿಷನ್.

ಮನೆಗೆ ಬಂದು ಬೇರೆ ಪುಸ್ತಕ ಓದಿದರೆ ಅವರಿಗೆ ಗೊತ್ತಾಗುವುದಿಲ್ಲ ಎಂಬ ಧೈರ್ಯ ಇದ್ದರೂ ಈ ಪುಸ್ತಕವನ್ನೇ ಮೊದಲು ಓದಲು ಹೇಳಿದ್ದು ಯಾಕೆ ಎಂಬ ಕುತೂಹಲವೇ ನನಗೆ ಈ ಪುಸ್ತಕವನ್ನು ಮೊದಲು ಓದಲು ಪ್ರೇರೇಪಿಸಿದ್ದು.

ಕುಪ್ಪೆ ನಾಗರಾಜ ಅವರು ಬರೆದ ‘ಅಲೆಮಾರಿಯ ಅಂತರಂಗ’ ಪುಸ್ತಕ ಇಲ್ಲಿಯವರೆಗೆ ಹೊರ ಜಗತ್ತಿಗೆ ಅಷ್ಟಾಗಿ ಪರಿಚಯವೇ ಇಲ್ಲದ ದೊಂಬಿದಾಸ ಎಂಬ ಅಲೆಮಾರಿ ಜನಾಂಗದ ಆಗುಹೋಗುಗಳನ್ನು ವಿವರಿಸುವ ಆತ್ಮಕಥೆ. ಅಲೆಮಾರಿ ಜನಾಂಗದ ಮೊದಲ ಆತ್ಮಕಥೆ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಂತಹ ಪುಸ್ತಕ ಇದು.

ಓದುತ್ತಿರುವಾಗಲೇ ಚಿಕ್ಕ ಮಗ “ಯಾವ ಪುಸ್ತಕ ಅದು?” ಎಂದ. ದೊಂಬಿದಾಸರ ಕುರಿತಾದ ಪುಸ್ತಕ ಅಂದೆ, ಪುಸ್ತಕದಿಂದ ಕಣ್ಣು ಕದಲಿಸದೇ. “ಅದೇನದು ದೊಂಬಿದಾಸ ಅಂದರೆ? ತಿಂಡಿನಾ?” ಮತ್ತೆ ಆತನ ಮುಗ್ಧ ಪ್ರಶ್ನೆ. ‘ಮೊನ್ನೆ ಊರಿಂದ ಬರುವಾಗ ಗ್ರೌಂಡ್‍ಲ್ಲಿ ಒಂದಿಷ್ಟು ಟೆಂಟ್ ನೋಡಿದ್ದೆಯಲ್ಲ? ಅವರಿಗೆ ಚಳಿ ಆಗಲ್ಲವಾ ಅಂತಾ ಕೇಳಿದ್ದೆಯಲ್ಲ? ಅಂತಹುದ್ದೇ ಜನಾಂಗ ದೊಂಬಿದಾಸ ಎಂದರೆ” ನಾನು ವಿವರಿಸಿದ್ದೆ. ಪೇಪರ್ ಒಳಗಿಂದ ಕಿಸಕ್ ಎಂಬ ನಗು, “ನಿನ್ನಮ್ಮನಿಗೆ ಅವರೆಂದರೆ ತುಂಬಾ ಪ್ರೀತಿ’ ಎಂಬ ಮಾತು ತೂರಿ ಬಂತು.

 

ಆ ದಿನವೂ ಆ ಟೆಂಟ್ ಹೊರಗೆ ಮಣ್ಣಿನಲ್ಲಿ ಆಡುತ್ತಿದ್ದ ಪುಟ್ಟ ಮಕ್ಕಳನ್ನು ನೋಡಿ ಪಾಪ ಎಂದಾಗಲೂ ಇದೇ ಮಾತು ತೂರಿ ಬಂದಿತ್ತು. ನಾನು ಕನ್ನಡ ಶಾಲೆಗೆ ಹೋಗುತ್ತಿದ್ದ ಸಮಯ ಅದು. ಅದೇ ಶಾಲೆಯಲ್ಲಿ ಅಕ್ಕೋರಾಗಿದ್ದ ಅಮ್ಮ ಮತ್ತು ಅದೇ ಶಾಲೆಯ ಹೆಡ್ಮಾಸ್ತರ್ ಆಗಿದ್ದ ಅಪ್ಪನ ಜೊತೆಗೆ ಯಾವತ್ತೂ ಶಾಲೆಗೆ ಹೋಗಿ ಬಂದು ಮಾಡಿದವಳಲ್ಲ. ನನಗಿಂತ ಆರು ವರ್ಷ ದೊಡ್ಡವಳಾಗಿದ್ದ ಅಣ್ಣ ಮನೆ ಬಿಟ್ಟರೆ ಶಾಲೆ, ಶಾಲೆ ಬಿಟ್ಟರೆ ಮನೆ ನಂತರ ಒಂದಿಷ್ಟು ಆಟ ಎಂದು ತೀರಾ ವಿಧೇಯನಂತೆ ಇರುತ್ತಿದ್ದುದೇ ನನ್ನ ದೊಡ್ಡ ಸಮಸ್ಯೆಯಾಗಿಬಿಟ್ಟಿತ್ತು.

“ಗಂಡು ಹುಡುಗ ಆಗಿ ಅವನೇ ನೆಟ್ಟಗೆ ಮನೆಗೆ ಬರುವಾಗ ನಿಂದೇನೇ ಅವಾಂತರ ಗಂಡುಬೀರಿ ಹಾಗೆ” ಎಂದು ಅಮ್ಮ ಬೈಯ್ಯುತ್ತಿದ್ದುದು ನನ್ನ ಉಡಾಳತನದಿಂದಲ್ಲದೇ, ಅವನ ವಿಧೇಯತೆಯಿಂದ ಎಂದು ನಾನು ನಂಬಿಕೊಂಡಿದ್ದ ದಿನಗಳು ಅವು. ಅದಕ್ಕೆ ತಕ್ಕ ಹಾಗೆ ಅಣ್ಣ ಕೂಡ ನಾನು ಬೇಡುವವರ ಬಿಡಾರದ ಬಳಿ ಅಡ್ಡಾಡುತ್ತ, ಅವರನ್ನು ಮಾತನಾಡಿಸುತ್ತಿದ್ದುದನ್ನು ಅಮ್ಮನ ಬಳಿ ಹೇಳಿ ಆ ದಿನದ ಬೈಗುಳ ಹೆಚ್ಚಾಗುವಂತೆ ಮಾಡುತ್ತಿದ್ದ. “ಹೋಗ್ಲಿ ಬಿಡು, ಅವರ ಸಂಗಡ ಮಾತಾಡಿದ್ರೆ ನೀನ್ಯಾಕೆ ಆಕಾಶ ತಲೆ ಮೇಲೆ ಬಿದ್ದವಳ ಹಾಗಾಡ್ತಿ?” ಅಪ್ಪ ನನ್ನ ಪರವಹಿಸಿ ಅಮ್ಮನ ದುಸುಮುಸು ಮತ್ತಿಷ್ಟು ಏರುವಂತೆ ಮಾಡುತ್ತಿದ್ದರು.

ನಾಳೆ ಅವರ್ಯಾರಾದರೂ ಇವಳನ್ನು ಎತ್ತಿಕೊಂಡು ಹೋಗಿ ಕೈಕಾಲು ಮುರಿದು ಬೇಡಲು ಹಚ್ಚಲಿ. ಆಗ ನನ್ನ ಬಳಿ ಹೇಳಬೇಡಿ.” ಅಮ್ಮನ ಕೋಪ ಕಣ್ಣೀರಲ್ಲಿ ಮುಕ್ತಾಯವಾಗುತ್ತಿತ್ತು. “ಸುಮ್ನಿರು, ಈಗ ಆ ಚಿನ್ನಯ್ಯ ಬರ್ತಾನಲ್ಲ? ಅವನೂ ಬೇಡುವವನೇ. ಆದರೆ ಎಷ್ಟು ಒಳ್ಳೆಯವನು..” ಅಪ್ಪನ ಮಾತಿಗೆ ಅಮ್ಮನ ಮುನಿಸು ಮುಗಿದು ಮುಖದಲ್ಲಿ ನಗುಕಾಣಿಸಿಕೊಂಡರೆ ನನ್ನ ಮುಖದಲ್ಲಿ ಕೋಪ ತುಂಬಿಕೊಳ್ಳಲಾರಂಭಿಸುತ್ತಿತ್ತು.

ಚಿನ್ನಯ್ಯ ಕೂಡ ಹೀಗೆ, ವರ್ಷಕ್ಕೊಮ್ಮೆ ಬರುವ ಅಲೆಮಾರಿ ಜನಾಂಗದವನು. ಭಿಕ್ಷೆ ಬೇಡೋದು, ಶಾಸ್ತ್ರ ಹೇಳೋದು, ಕವಡೆ ಹಾಕೋದು ಹೀಗೆ ನಾನಾ ವಿದ್ಯೆಗಳನ್ನು ಬಲ್ಲ ಪಾರಂಗತ. ಆತನ ಹೆಂಡತಿ, ಇಬ್ಬರು ಮೂವರು ಮಗಂದಿರು, ಅವರ ಹೆಂಡಂದಿರು ಹಾಗೂ ಯಾವತ್ತೂ ಅವರ ಕಂಕುಳಲ್ಲಿ ಇರುತ್ತಿದ್ದ ಮಗು ಹೀಗೆ ಒಂದು ತುಂಬಿದ ಸಂಸಾರ ವರ್ಷಕ್ಕೊಮ್ಮೆ ಬಂದು ಶಿರಸಿಯಲ್ಲಿ ನಮ್ಮ ಮನೆಯ ಕೆಳಗಿರುವ ಗದ್ದೆಬೈಲಿನಲ್ಲಿ ಬಿಡಾರ ಹೂಡುತ್ತಿತ್ತು.

ಊರಲ್ಲಿ ನಮಗೆ ಮೂವತ್ತು ಎಕರೆ ಜಮೀನಿದೆ. ಆದರೆ ಇದು ನಮ್ಮ ಕುಲ ಕಸುಬು. ಹೀಗಾಗಿ ವರ್ಷಕೊಂದು ಸಲ ಹೀಗೆ ಬರ್ತೀವಿ ಎನ್ನುತ್ತಿದ್ದರು. “ಅಣ್ಣ ಎಷ್ಟೊಂದು ಬೆಳ್ಳಗೆ, ನಾನ್ಯಾಕೆ ಕಪ್ಪು?” ನಾನು ಹಠ ಮಾಡಿದಾಗಲೆಲ್ಲ “ಆ ಚಿನ್ನಯ್ಯನ ಬಳಿ ಮಕ್ಕಳು ಜಾಸ್ತಿ. ಅವನಿಗೆ ಎರಡು ಮೊರ ಅಕ್ಕಿ ಕೊಟ್ಟು ನಿನ್ನ ತಗೊಂಡಿದ್ವಿ” ಎಂದು ಅಪ್ಪ ಹೇಳುತ್ತಿದ್ದ ಮಾತನ್ನು ಸರಿಸುಮಾರು ಹೈಸ್ಕೂಲು ಹೋಗುವವರೆಗೂ ಇದ್ದರೂ ಇರಬಹುದೇನೋ ಎಂದು ನಂಬಿಕೊಂಡಿದ್ದ ನಾನು ಮುಂದಿನ ಸಲ ಚಿನ್ನಯ್ಯ ಬಂದರೆ ಅವನ ಬಿಡಾರಕ್ಕೆ ಕಲ್ಲು ಹೊಡೆದು ಓಡಿಸಬೇಕು ಎಂದುಕೊಳ್ಳುತ್ತಿದ್ದೆ.

“ತಂಗಿಯ ಸಂಬಂಧಿಕರು ಬಂದರು..” ಎಂದು ಅಣ್ಣ ಕಿಚಾಯಿಸುವಾಗಲೆಲ್ಲ ಮಧ್ಯರಾತ್ರಿ ಯಾರೂ ಕಾಣದ ಹಾಗೆ ಅವರ ಟೆಂಟ್‍ಗೆ ಬೆಂಕಿಹಾಕಿಬಿಡಬೇಕು ಎಂದುಕೊಂಡಿದ್ದ ದಿನಗಳೆಲ್ಲ ಈ ಪುಸ್ತಕ ಓದುವಾಗ ಕಣ್ಣಮುಂದೆ ಸಿನೇಮಾ ರೀಲಿನಂತೆ ಸುತ್ತ ತೊಡಗಿದ್ದಂತೂ ಹೌದು.

 

ಯಾವುದೋ ಕೆಟ್ಟ ಗಳಿಗೆಯಲ್ಲೊಮ್ಮೆ ಈ ಬಾಲ್ಯದ ಕಥೆಯನ್ನು ಹೇಳಿಕೊಂಡುಬಿಟ್ಟಿದ್ದ ನನ್ನ ಮೂರ್ಖತನಕ್ಕೆ ಇಂತಹ ಟೆಂಟುಗಳು ಕಾಣಸಿಕ್ಕಾಗಲೆಲ್ಲ ವ್ಯಂಗ್ಯವೊಂದು ಸಿದ್ಧವಾಗಿರುತ್ತಿತ್ತು. ಆದರೆ ಅದೇ ಅಲೆಮಾರಿಗಳ ಜೀವನದ ಕಥೆಯೊಂದು ನನ್ನ ಕೈಯ್ಯಲ್ಲಿ ಪುಸ್ತಕವಾಗಿ ಕುಳಿತಿರುವಾಗ ಅದನ್ನು ಒಂದೇ ಗುಕ್ಕಿಗೆ ಓದದೇ ಹೇಗಿರಲಿ?

ಒಂದೆಡೆ ನೆಲೆ ನಿಲ್ಲಲು ಒಲ್ಲದ ದೊಂಬಿದಾಸರು, ಹಣೆಗೆ ವಿಭೂತಿ ಇಟ್ಟು, ಮುಂಡಾಸು ಸುತ್ತಿ, ಬೇಡಿ ಪಡೆದ ಹಳೆ ಕೋಟು ತೊಟ್ಟು, ಹೆಗಲಿಗೆ ಜೋಳಿಗೆ ತೂಗಿಕೊಂಡು, ತಂಬೂರಿಯನ್ನೋ, ಶೃತಿ ಪೆಟ್ಟಿಗೆಯನ್ನೋ ಹಿಡಿದುಕೊಂಡು ಹೋಗುವ ದೊಂಬಿದಾಸ ಜನಾಂಗಕ್ಕೆ ಒಂದೆಡೆ ನಿಲ್ಲುವುದೆಂದರೆ ಜೀವವನ್ನೇ ಜೀತಕ್ಕಿಟ್ಟ ಅನುಭವ. ಹೀಗಾಗಿಯೇ ಊರೂರು ತಿರುಗಿ, ಬೇಡುತ್ತ ಜೀವನ ಸಾಗಿಸುವುದನ್ನು ನಾಗರಾಜ್ ಅವರು ತುಂಬಾ ಅಂತಕರಣದಿಂದ ಹೇಳಿಕೊಂಡಿದ್ದಾರೆ.

ಆದರೆ ಲೇಖಕರ ತಂದೆಗೆ ಒಂದೆಡೆ ನಿಂತು ಜೀವನವನ್ನು ಕಟ್ಟಿಕೊಳ್ಳುವ ಹಂಬಲ, ಅದೆಲ್ಲಕ್ಕಿಂತ ಮಿಗಿಲಾಗಿ ಉಳುಮೆ, ಬಿತ್ತನೆಯ ಕಡೆ ಆಸಕ್ತಿ ಬೆಳೆಸಿಕೊಂಡ ಲೇಖಕರ ಅಣ್ಣ ಲೇಖಕರ ಇಡೀ ಬದುಕಿನ ಬುನಾದಿ. ಅವರು ಒಂದೆಡೆ ನಿಲ್ಲಲು ಮನಸ್ಸು ಮಾಡಿರದಿದ್ದರೆ ಲೇಖಕರಿಗೆ ಓದುವ ಯಾವ ಉಮ್ಮೇದಿಯೂ ಸಾಧ್ಯವಾಗುತ್ತಿರಲಿಲ್ಲ. ದೊಂಬಿದಾಸ ಜನಾಂಗದಲ್ಲಿ ಮೊದಲ ಬಾರಿಗೆ ವಿಧ್ಯಾಭ್ಯಾಸ ಪಡೆದ ಮೊದಲಿಗ ಎಂಬ ಹೆಗ್ಗಳಿಕೆಯೂ ಸಿಗುತ್ತಿರಲಿಲ್ಲ.

ತನ್ನ ಮದುವೆಗೆ ಎಂದು ಮಾವ ಕೊಡಿಸಿದ್ದ ಅಪರೂಪದ ಬಿಳಿ ಅಂಗಿಯನ್ನು ಶಾಲೆಗೆ ಹೋಗುವ ತಮ್ಮನಿಗಿರಲಿ ಎಂದು ಕೊಟ್ಟ ಅಣ್ಣನ ನಿಸ್ವಾರ್ಥತೆಯನ್ನು ಲೇಖಕರು ಮನದುಂಬಿ ನೆನೆದಿದ್ದಾರೆ. ಲೇಖಕರು ಅವರ ವಂಶದ ಬಗ್ಗೆ ಅಲ್ಲಲ್ಲಿ ಕೆಲವು ಕಡೆ ಹೇಳಿಕೊಳ್ಳುತ್ತಾರೆ. ಅದರಲ್ಲಿ ಮೂಗೂರಜ್ಜಿ ಕೂಡ ಒಬ್ಬಳು. ಯಾವತ್ತೂ ತಮ್ಮ ಅಜ್ಜನನ್ನು ನೋಡದ ಲೇಖಕರಿಗೆ ಅಜ್ಜನ ಮೂರನೆಯ ಹೆಂಡತಿ ಮಾತ್ರ ಚೆನ್ನಾಗಿ ಗೊತ್ತು. ಮಕ್ಕಳಿಲ್ಲದ ಆಕೆ ತನ್ನ ಗಂಡನ ಎರಡನೆಯ ಹೆಂಡತಿಯ ಮಗನ ಜೊತೆ ಕೆಲವು ವರ್ಷ ಇದ್ದವಳು ಕೊನೆಗೇನೋ ಸರಿ ಬರದೇ ಮನೆ ಬಿಟ್ಟು ಹೊರಟುಹೋಗುವುದರ ಕುರಿತು ಲೇಖಕರು ಹೇಳುತ್ತಾರೆ.

 

ಲೇಖಕರ ತಂದೆಗೂ ಇಬ್ಬರು ಹೆಂಡತಿಯರಿದ್ದುದನ್ನು ಸಲೀಸಾಗಿ ಹೇಳಿಕೊಳ್ಳುವ ಲೇಖಕರು ಅಂತಹುದ್ದೊಂದು ಕೂಡುಕುಟುಂಬದ ಪ್ರಸ್ತಾಪ ಇಲ್ಲಿ ಮಾಡುತ್ತಾರೆ. ವಿಶಿಷ್ಟ ಎಂದರೆ ಮಲತಾಯಿಯ ಮಗ ಎಂದಾಗಲಿ, ಸವತಿಯ ಮಗ ಎಂದಾಗಲಿ ಎಲ್ಲೂ ದ್ವೇಷ ಅಸೂಯೆಗಳು ಕಾಣದೇ ಇರುವುದು. ಇಲ್ಲಿ ತನ್ನ ಸವತಿಯ ಮಗನೊಡನೆ ಇರುವ ಮೂಗುರಜ್ಜಿಗೆ ಕೊತ್ತಿಯ ಮಾಂಸ ಎಂದರೆ ಪಂಚಪ್ರಾಣ. ಯಾರದ್ದಾದರೂ ಮನೆಯ ಬೆಕ್ಕು ಇವರ ಮನೆಯ ಹಾದಿಯಲ್ಲಿ ಸುಳಿದಾಡಿದರೂ ಸಾಕು, ಕೆಲವೇ ಗಂಟೆಗಳಲ್ಲಿ ಅದು ಅಜ್ಜಿಯ ಹೊಟ್ಟೆ ಸೇರುವುದರ ಕುರಿತಾಗಿ ಹೇಳುತ್ತಾರೆ.

‘ಬೆಕ್ಕಿನ ಮಾಂಸ ಸರ್ವರೋಗ ನಿರೋಧ ಎನ್ನುತ್ತಿದ್ದ ಅಜ್ಜಿ, ತುಂಬಾ ಸದೃಢವಾಗಿದ್ದುದರ ಗುಟ್ಟು ಬೆಕ್ಕು ಎನ್ನುವಾಗ ಚಿನ್ನಯ್ಯ ಬಂದರೆ ಒಂದು ಮರದಲ್ಲೂ ಚಿಗಳಿ( ಕೆಂಪಿರುವೆ) ಉಳಿಯೋದಿಲ್ಲ ಎಂದು ಊರವರೆಲ್ಲ ಮಾಡುತ್ತಿದ್ದ ತಮಾಷೆ ನೆನಪಾಯಿತು. ಇಡೀ ಚಿಗಳಿ ಗೂಡನ್ನೇ ತಂದು ಒಲೆಯ ಮೇಲಿಟ್ಟ ಹಂಚಿನ ಮೇಲೆ ಹಾಕಿ ಹುರಿದಾಗ ಮಕ್ಕಳು ಮರಿಗಳೆಲ್ಲ ಗರಿಗರಿ ಶೇಂಗಾ ತಿನ್ನುವಂತೆ ಕಸಿದಾಡಿ ತಿನ್ನುವುದು ಒಂದುಕ್ಷಣ ಕಣ್ಣೆದುರು ಬಂದು ಹೋಯಿತು.

ನಮ್ಮ ಶಾಲೆಯ ಬಳಿ ಬಿಡಾರ ಹೂಡುತ್ತಿದ್ದ ಇನ್ನೊಂದು ಕುಟುಂಬ ಗದ್ದೆಯಲ್ಲಿದ್ದ ಬಿಲಗಳನ್ನೆಲ್ಲ ಕೆದರಿ ಇಲಿ ಹೆಗ್ಗಣದ ಔತಣಕೂಟ ಮಾಡುತ್ತಿದ್ದುದು, ಆ ಇಲಿಗಳನ್ನು ಹಿಡಿಯಲು ನೆಲದೊಳಗಿನ ಬಿಲ ಎಲ್ಲೆಲ್ಲಿ ಹೋಗಿ ತಲುಪಿದೆ ಎಂದು ಹುಡುಕಿ ಆ ಬಿಲದ ಬಾಯೆದುರು ಕೋಲು ಹಿಡಿದು ನಿಂತು ಚಿಕ್ಕವರು ದೊಡ್ಡವರು ಎನ್ನದೇ ಎಲ್ಲರೂ ಸೇರಿ ಶಿಕಾರಿ ಮಾಡುವುದನ್ನು ನೋಡಲೆಂದೇ ನಾನು ಅವರ ಬಿಡಾರದ ಬಳಿ ಠಳಕಾಯಿಸುತ್ತಿದ್ದುದು, ‘ಅಮ್ಮ ಅವರು ಚಿಗಳಿ, ಇಲಿ, ಹೆಗ್ಗಣ ಎಲ್ಲಾ ತಿಂತಾರೆ’ ಎಂದು ಮೂಗು ಮುರಿದಾಗ, “ಯಾಕೆ? ನೀನೂ ಮೀನು, ಶೆಟ್ಲಿ ಎಲ್ಲಾ ತಿನ್ನೋದಿಲ್ವಾ? ನೀನು ತಿನ್ನೋ ಶೆಟ್ಲಿ ನೋಡಿದ್ರೆ ಬೇರೆಯವರೂ ನಿನಗೆ ಶೀ.. ಅಂತಾರೆ. ಅವರವರ ಆಹಾರ ಅವರದ್ದು. ಹಾಗೆ ಮಾತನಾಡಬಾರದು” ಎಂದು ಅಮ್ಮ ವಿವರಿಸುತ್ತ ಸಹಿಷ್ಣುತೆಯ ಪಾಠ ಹೇಳಿದ್ದು ಪುಸ್ತಕ ಓದುವಾಗ ಮತ್ತೆ ಮತ್ತೆ ನೆನಪಾಗುತ್ತಲೇ ಹೋಗುತ್ತದೆ

ಒಂದೊಂದು ಜನಾಂಗದ ಧಾರ್ಮಿಕ ಆಚರಣೆ ಒಂದೊಂದು ಬಗೆಯದು. ಇಲ್ಲಿ ಕುಲದೇವತೆ ಸವದತ್ತಿ ಎಲ್ಲಮ್ಮನ ಪೂಜೆಯ ವಿವರಣೆ ಒಂದೆಡೆಗೆ ಬರುತ್ತದೆ. ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಬೇರಾರೂ ಭಾಗವಹಿಸಕೂಡದೆಂಬ ಕಟ್ಟಾಚರಣೆಯ ಜೊತೆಗೆ ಈ ಹಬ್ಬದ ಆಚರಣೆಯನ್ನು ಮನೆಯೊಳಗೆ ಮಾಡದೇ ಯಾವುದೋ ಹೊರಗಿನ ಬಯಲಿನಲ್ಲಿ ಮಾಡಬೇಕೆಂಬ ಕಟ್ಟಳೆ. ಯಾರದ್ದೋ ಗದ್ದೆಯಲ್ಲಿ ಮರದ ಕೆಳಗೆ ತಾವೇ ಮಾಡಿದ ಮಣ್ಣಿನ ಮೂರ್ತಿ ಪ್ರತಿಷ್ಟಾಪಿಸಿ, ಪೂಜಿಸಿ ಬಲಿ ನೀಡಿ ಮನೆಮಂದಿಯಷ್ಟೇ ಆಚರಿಸುವ ಕಾಳರಾತ್ರಿಯ ಹಬ್ಬ ಇದು. ಬಲಿಕೊಟ್ಟ ಪ್ರಾಣ ಯ ಯಾವ ಅವಶೇಷವನ್ನೂ ಆ ಸರಹದ್ದಿನಿಂದ ಆಚೆ ಕೊಂಡೊಯ್ಯುವಂತಿಲ್ಲ. ನಂತರ ಅಲ್ಲಿ ಪೂಜೆ ಮಾಡಿದ ಗುರುತೂ ಇರುವಂತಿಲ್ಲ ಎಂಬುದು ಅವರ ಪದ್ದತಿ. ಇದಲ್ಲದೇ ಅಲ್ಲಲ್ಲಿ ಆ ಜನಂಗಾಕ್ಕೇ ವಿಶಿಷ್ಟವಾದ ಆಚರಣೆಗಳ ಕುರಿತು ಬರೆಯುತ್ತಾರೆ.

 

ಜೀವನದಲ್ಲಿ ಮೊಟ್ಟ ಮೊದಲು ಸವಿದ ಮಾದಕವಳಂ, ಗುಟ್ಟ ಬೆಟ್ಟ ಓಡಾಡಿ ಬೇಟೆಯಾಡಿ ತರುವ ಪ್ರಾಣ ಗಳ ಸಂಬಾರ್ ಸಿದ್ಧಪಡಿಸುವ ವಿಧಾನಗಳು ಕುತೂಹಲ ಹುಟ್ಟಿಸುತ್ತವೆ. ಈ ಎಲ್ಲಕ್ಕಿಂತ ಹೆಚ್ಚಾಗಿ ಇಂತಹ ಆತ್ಮಕಥೆಗಳು ಜಾತಿ ಕಾರಣದಿಂದಾಗಿ ಸಮಾಜವು ನಡೆಸಿಕೊಳ್ಳುವ ರೀತಿಯನ್ನು ಹೇಳುತ್ತವೆ. ತನ್ನ ಜನಾಂಗದ, ಹತ್ತಿರದ ಸಂಬಂಧಿಗಳು ತಾನು ಓದುತ್ತಿದ್ದ ಊರಿನ ಸಂತೆಗೆ ಬಂದರೆ ಅವರನ್ನು ಮಾತನಾಡಿಸಲು ಹಿಂದೇಟು ಹಾಕುತ್ತಿದ್ದುದನ್ನು ಖೇದದಿಂದ ವಿವರಿಸುತ್ತಾರೆ. ಯಾರೋ ಒಬ್ಬ ಸಹಪಾಠಿಗೆ ತನ್ನ ಜಾತಿವಿಷಯ ಗೊತ್ತಾಗಿ ಆತ ಹಿಂದಿನಿಂದ ಜಾತಿಯ ಕರ್ಮ ಹಿಡಿದು ಕರೆಯುತ್ತಿದ್ದುದೂ ಕೂಡ ಲೇಖಕರ ಮನಸ್ಸಿನಿಂದ ಮರೆಯಾಗಿಲ್ಲ.

ಸುಮಾರು ಪ್ರಾಥಮಿಕ ಶಾಲೆ ಮುಗಿಯುವವರೆಗೂ ತನ್ನದು ಪರಿಶಿಷ್ಟ ಜಾತಿ ಎಂದೇ ತಿಳಿದುಕೊಂಡಿದ್ದ ಲೇಖಕರಿಗೆ ತಾನು Dombidasa Nomadic and Seminomadic Tribe ಎನ್ನುವ ಇಲ್ಲಿಯವರೆಗೆ ಹೆಸರೇ ಕೇಳದಿದ್ದ ಬುಡಕಟ್ಟು ಜನಾಂಗಕ್ಕೆ ಸೇರಿದವನು ಎಂಬ ವಿಷಯವೇ ದಿಗಿಲು ಹುಟ್ಟಿಸಿ, ಅದು ಅಲ್ಲಿಯವರೆಗೆ ಅವರು ವಾಸಿಸುತ್ತಿದ್ದ, ಉಳಿದು ಓದಲು ಏಕೈಕ ಆಧಾರವಾಗಿದ್ದ ಹಾಸ್ಟೇಲ್‍ನ್ನೇ ಬಿಡುವಂತೆ ಮಾಡುತ್ತದೆ. ಇದು ಜಾತಿ ಪದ್ದತಿ ಮತ್ತು ಆ ಪದ್ದತಿಯನ್ನು ಆಧರಿಸಿ ಸರ್ಕಾರ ರೂಪಿಸಿದ ಕಾನೂನು ಹಾಗು ಸವಲತ್ತುಗಳ ನಡುವಿನ ಪ್ರಶ್ನೆಯಾಗಿಯೂ ನಮ್ಮನ್ನು ಕಾಡುತ್ತದೆ.

ಎರಡು ವರ್ಷಗಳ ಹಿಂದೆ ಒಂದು ಜನಾಂಗೀಯ ಅಧ್ಯಯನಕ್ಕಾಗಿ ಎ ಎಂ ಮದರಿಯವರ ‘ಗೊಂದಲಿಗ್ಯಾ’ ಓದುವಾಗ ಲೇಖಕರು ಊರೂರು ತಿರುಗುವ ‘ಮುಸಾಫಿರ್’ ಬಗ್ಗೆ ಪುಸ್ತಕದ ತುಂಬಾ ಮತ್ತೆ ಮತ್ತೆ ಪ್ರಸ್ತಾಪಿಸಿ ನನ್ನಂತಹ ತಿರುಗುಲತಿಪ್ಪಿಗೆ ಇಂತಹುದ್ದೊಂದು ಜನಾಂಗದಲ್ಲಿ ನಾನು ಹುಟ್ಟಬಾರದಿತ್ತೇ ಎಂಬ ಆಸೆ ಹುಟ್ಟಿಸಿದ್ದು ನೆನಪಾಗಿ ವರ್ಷಕ್ಕೆ ಒಮ್ಮೆಯಾದರೂ ನಮ್ಮ ವೃತ್ತಿಗೆ ಹೊರಡಲೇಬೇಕು ಎನ್ನುವ ಚಿನ್ನಯ್ಯ ಈ ಪುಸ್ತಕ ಓದುವ ಹೊತ್ತಿಗೆ ಮತ್ತೆ ಮತ್ತೆ ನೆನಪಾದ.

ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವ ಇಂತಹ ಜನಾಂಗಗಳ ಅಧ್ಯಯನ ಇನ್ನೂ ಪೂರ್ತಿಯಾಗಿ ಆಗಿಲ್ಲ. ಈ ಪುಸ್ತಕವೂ ಕೂಡ ದೊಂಬಿದಾಸ ಜನಾಂಗದ ಎಲ್ಲ ಒಳಸುಳಿಗಳನ್ನು ಬಿಟ್ಟುಕೊಡುತ್ತಿಲ್ಲ ಎಂಬ ಅನುಮಾನ ಸಣ್ಣಗೆ ಕಾಡಿದರೂ ಜನಾಂಗೀಯ ಅಧ್ಯಯನಕ್ಕಾಗಿ, ನಾವು ತಿಳಿದಿರದ ಒಂದು ಬೇರೆದ್ದೇ ಪ್ರಪಂಚದ ಸೂಕ್ಷ್ಮಗಳನ್ನು ನಮ್ಮೆದುರು ತೆರೆದುಕೊಳ್ಳುವ ಅನುಭವಕ್ಕಾದರೂ ಓದಲೇಬೇಕಾದ ಪುಸ್ತಕ ಇದು.

‍ಲೇಖಕರು Avadhi GK

January 28, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

14 ಪ್ರತಿಕ್ರಿಯೆಗಳು

 1. Ramesh gabbur

  ನಿಮ್ಮ ಓದಿನ ಪ್ರೀತಿ ಅಮೋಗವಾದುದು ಸಿರಿಯವರೆ

  ಪ್ರತಿಕ್ರಿಯೆ
 2. Chandrashekhar

  ನಾನು ಹಿಂದೆ ಬುಡಗ ಜನಾಂಗದಒಂದು ಸಣ್ಣ ಮಾಹಿತಿಯ ಓದಿದ್ದೆ ಪ್ರತಿ ಅಲೆಮಾರಿ ಜನಾಂಗವು ಒಂದು ಸಂಸ್ಕೃತಿ ಒಂದು ಕುತೂಹಲ ಒಂದು ಜೀವನದ ಹೋರಾಟದ ಮಜಲುಗಳನ್ನೂ ಪರಿಚಯಮಾಡುತ್ತದೆ
  ಓದಿದ ಪುಸ್ತಕಗಳ ಮಾಹಿತಿ ಯನ್ನು ಚಂದ
  ಆಸಕ್ತಿಯವಿಷಯಗಳಾಗಿ ಬರೆಹಇಷ್ಟವಾಯಿತು.

  ಪ್ರತಿಕ್ರಿಯೆ
 3. ಒಂದು ಮುತ್ತು

  ನಿಮ್ಮ ಈ ಅಂಕಣಕ್ಕಾಗಿ ಕಾಯುತ್ತಿದ್ದೆ. ಪ್ರತಿ ಸಲ ಅವಧಿಯಲ್ಲಿ ಐಕಾನ್ ಮೇಲೆ ಕ್ಲಿಕ್ ಮಾಡಿ ತೆರೆಯದಿದ್ದಾಗ ಬೇಸರವಾಗುತ್ತಿತ್ತು. ಓದಲಾರದ ಪುಸ್ತಕಗಳು – ಬದುಕುಗಳು ಬಹಳಷ್ಟಿದೆ ಎನ್ನಿಸಿತು. ಇಲ್ಲಿ ಅಂಕಣದಲ್ಲಿ ಬರುವ ಇಂತಹ ಅಲೆಮಾರಿ ಜನಾಂಗವನ್ನು ಕಂಡಾಗ ಹೇಂಗ ಬದುಕ್ತಾರ ಇವ್ರು ಅನ್ಕೊಂತಿದ್ದೆ. ಇಂದಿನ ಅಂಕಣ ಇನ್ನಷ್ಟು ಅರಿವನ್ನು ವಿಸ್ತಾರವಾಗಿಸಿದೆ, ಓದಲು ಹುರಿದುಂಬಿಸಿದೆ. ಥ್ಯಾಂಕ್ಯೂ ಮ್ಯಾಮ್.

  ಪ್ರತಿಕ್ರಿಯೆ
 4. Sudha ChidanandGowd

  ಅಲೆಮಾರಿ ಜನಾಂಗಗಳ ಜನರದು ನಿಜಕ್ಕೂ ವಿಶಿಷ್ಟ ಬದುಕು. ಮತ್ತು ಅವರ ಜೀವನದ ದೃಷ್ಟಿಕೋನವು ವಿಭಿನ್ನ. ಹೊಲ ಬೇಡ, ಗದ್ದೆ ಬೇಡ, ಇರಲೊಂದು ಮನೆ ಕೂಡ ಬೇಡ ಎಂಬುದು ಅವರು ನಂಬಿರುವ ಬದುಕು. ಅವೆಲ್ಲವೂ ಬೇಡದ ಮೇಲೆ ಸಂಗ್ರಹ, ಸಂಪಾದನೆ ಇತ್ಯಾದಿಗಳ ಪರಿಕಲ್ಪನೆಯೂ ಬದಲಾಗುತ್ತದಲ್ಲ ಎಂದು ಎಷ್ಟೋ ಬಾರಿ ಯೋಚಿಸಿದ್ದೇನೆ. ಯಾರದೋ ಸೈಟ್ ಗಳಲ್ಲಿ ಗುಡಾರ ಹಾಕಿ ಬೆಳಗಿನ ಜಾವ, ಮುಸ್ಸಂಜೆ ಹೊತ್ತು ಮೈಚಳಿ ಕಾಯಿಸುತ್ತಾ, ಅದೇ ಉರಿಯ ಮೇಲೆ ಚಹಾ ಕೆಟಲಿಯನ್ನಿಟ್ಟುಕೊಂಡು ಏಳೆಂಟು ಜನ ಹರಟೆ ಹೊಡೆಯುತ್ತಾ ಕುಳಿತ ದೃಷ್ಯ ಎಷ್ಟು ಆಕರ್ಷಕ ವಾಗಿರುತ್ತದೆಂದರೆ, ಆ ದಾರಿಯಲ್ಲಿ ವಾಕ್ ಮಾಡುವ ನನಗೆ ಅವರಲ್ಲೊಬ್ಬಳಾಗುವ ಬಯಕೆ ಇನ್ನಿಲ್ಲದಂತೆ ಕಾಡಿಬಿಟ್ಟಿತ್ತು. ನಾನು ಆಸೆಯನ್ನು ಹತ್ತಿಟ್ಟುಕೊಳ್ಳಲೂ ಇಲ್ಲ. ನೇರ ಅವರ ಬಳಿಹೋಗಿ ಯಜಮಾನನಿಗೆ ಪರಿಚಯ ಮಾಡಿಕೊಂಡು ಚೂಡಿದಾರ ಉಟ್ಟ ಹುಡುಗಿಯ ಪಕ್ಕ ಕುಳಿತೂಬಿಟ್ಟೆ. ಮನೆಯ ಒಳಗಿನಿಂದ ಇನ್ನೂ ಮೂರ್ನಾಲ್ಕು ಜನ ಹೊರಬಂದರು.
  “ಅವಾಗವಾಗ ನಿಂ ಥರಾ ಯಾರಾದ್ರೂ ಮಾತಾಡಿಸ್ತಾರ ನೋಡ್ರಿ ಮೇಡಮ್ಮೋರೆ”
  ಎಂದ ಯಜಮಾನನ ಮುಖದಲ್ಲಿ ದಿವ್ಯ ನಗು..
  ಹೊರಟಾಗ ” ಮತ್ತೆ ಬರ್ರಿ ನಾಳೆ” ಎಂಬ ಆಹ್ವಾನ…
  ನಿರುಮ್ಮಳವಾದ ಆ ಬದುಕನ್ನು ಪರಿಚಯಿಸಿದ ಕುಪ್ಪೆ ನಾಗರಾಜ್ ಅವರಿಗೆ ಅಭಿನಂದನೆಗಳು.
  ಬುಡುಗ ಜನಾಂಗದ ಬಗೆಗಿನ “ಬುಡಗನಾದ” ಎಂಬ ನಾಟಕ ಕೂಡಾ ನೆನಪಾಯಿತು.
  ಪುಸ್ತಕದ ಬಗೆಗಿನ ನಿಮ್ಮ ಈ ಕಾಲಂನ್ನು ಮಿಸ್ ಮಾಡದೆ ಓದುವೆ ಶ್ರೀ. ಕಂಗ್ರಾಟ್ಸ್.

  ಪ್ರತಿಕ್ರಿಯೆ
 5. ಹರಿನಾಥ ಬಾಬು

  ನಿಜವಾಗಿಯೂ ನೀವು ಅಂಥದ್ದೊಂದು ಜಾತಿಯಲ್ಲಿ ಹುಟ್ಟಬೇಕಿತ್ತು!
  ಈಗ ಆ ಜಾತಿಯವರಿಗಿಂತ ಕಡಿಮೆಯಿಲ್ಲದೇ ತಿರುಗುವ ನೀವು ನಿಜವಾದ ಅಲೆಮಾರಿ!
  ಜಾತಿಗಳನಳಿಸಿ ಮನುಷ್ಯತ್ವ ಉಳಿಸಬೇಕಾದ ಕಾಲವಿದು ಹಾಗಾಗಿ ಯಾವ ಜಾತಿಯೂ ಸಹ ತನ್ನ ಕುರುಹುಗಳನ್ನುಳಿಸಿಕೊಳ್ಳದಿರಲೆಂಬುದು ನನ್ನ ಬಯಕೆ!!!

  ಪ್ರತಿಕ್ರಿಯೆ
 6. Renuka Md

  Nanu obba DOMBIDAASA naagiruvudakke hemme ide.. Namma jaathiyannu barahada mulaka yellarigu parichaya madikotta nanna preethiya Nagraj uncle ge abhinandanegalu…
  Renuka M.D (Malekoppalu)

  ಪ್ರತಿಕ್ರಿಯೆ
 7. ಸುಧಾಕರ ಆಚಾರ್ಯ ಮೂಡಿಗೆರೆ

  ಇಲಿ ಹೆಗ್ಗಣಗಳ ಬೇಟೆಯ ಬಗ್ಗೆ ಓದುವಾಗ ಬಾಲ್ಯದ ನೆನಪಾಯಿತು , ನಾವು ಶಾಲೆಗೆ ಹೋಗುವ ದಾರಿಯ ಸಮೀಪದ ಗದ್ದೆಯ ಬದುವಿನ ಬಿಲಗಳಲ್ಲಿ ಅವಿತ ಇಲಿ ಹೆಗ್ಗಣಗಳ ಹಿಡಿಯಲು ಬೇಟೆಯಾಡುವವರು ಇಲಿಯ ಬಿಲಗಳಿಗೆ ಬೆಂಕಿಯ ಹೊಗೆ ಹಾಕಿ ಇಲಿ/ಹೆಗ್ಗಣ ಬರುವುದನ್ನು ಕಾಯುತ್ತಿರುವಾಗ ಬಿಲದಿಂದ ಹಾವೊಂದು ಬಂದುದನ್ನು ಕಂಡು ಹೆದರಿಕೆಯಿಂದ ಓಡಿಹೋಗುವಾಗ ಜಾರಿಬಿದ್ದದ್ದು ನೆನಪಾಯ್ತು ,
  ವಾ…ವ್ ಅದೊಂದು ಮರೆಯಲಾಗದ ಅದ್ಭುತ ಸಮಯ

  ಪ್ರತಿಕ್ರಿಯೆ
 8. ಧನಪಾಲ ‌ನೆಲವಾಗಿಲು

  ನಮಸ್ಕಾರ ಮೇಡಮ್‌.

  ಪುಸ್ತಕದ ಪರಿಚಯವನ್ನು ತುಂಬಾ ಚೆನ್ನಾಗಿ ಮಾಡಿಕೊಟ್ಟಿದ್ದೀರಿ. ಇದು ಪುಸ್ತಕದ ಪರಿಚಯದೊಂದಿಗೆ ಪುಸ್ತಕದ ವಿಶ್ಲೇಷಣೆಯಂತಿದೆ. ನಿಮ್ಮ ಲೇಖನವನ್ನು ಓದಿದ ಮೇಲೆ ನಿಜವಾಗಿಯೂ “ಅಲೆಮಾರಿಯ ಅಂತರಂಗ” ಪುಸ್ತಕವನ್ನು ಓದುವ ಮನಸ್ಸಾಗುತ್ತದೆ.

  ಧನ್ಯವಾದಗಳೊಂದಿಗೆ

  ಧನಪಾಲ ನೆಲವಾಗಿಲು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: