ಸಿ.ಎನ್.ರಾಮಚಂದ್ರನ್.ರವರ ಎರಡು ಅಪರೂಪದ ಕೃತಿಗಳ ಕುರಿತು

ಜಗದೀಶ್ ಕೊಪ್ಪ
ಸಿ ಎನ್ ಆರ್ ಎಂದು ಕನ್ನಡ ಸಾಹಿತ್ಯಲೋಕಕ್ಕೆ ಪರಿಚಿತರಾದ ಡಾ ಸಿ.ಎನ್.ರಾಮಚಂದ್ರನ್ ರವರ ಕೃತಿಗಳ ಕುರಿತು ಮಾತನಾಡುವುದಕ್ಕೆ ಎಂತಹವರಿಗೂ ಒಂದಿಷ್ಟು ಧೈರ್ಯಬೇಕು. ಜೊತೆಗೆ ಬೌದ್ಧಿಕ ಸಿದ್ಧತೆಯೂ ಬೇಕು. ಇಂಗ್ಲೀಷ್ ಭಾಷೆಯಲ್ಲಿ ಒಂಬತ್ತು ಹಾಗೂ ಕನ್ನಡದಲ್ಲಿ ಹದಿನಾರು ಕೃತಿಗಳನ್ನು ರಚಿಸಿರುದ ಶ್ರೀಯುತರಿಗೆ ಕನ್ನಡ, ಇಂಗ್ಲೀಷ್ ಮತ್ತು ಸಂಸ್ಕೃತ ಭಾಷೆಗಳ ಮೇಲೆ ಅನನ್ಯವಾದ ಹಿಡಿತವಿದೆ. ಹಾಗಾಗಿ ಬಹು ವಿಸ್ತ್ರುತವಾದ ಅವರ ಓದು ವಿಮರ್ಶೆಯ ದೃಷ್ಟಿಕೋನಕ್ಕೆ ಖಚಿತತೆಯನ್ನು ತಂದುಕೊಟ್ಟಿದೆ.
ಈ ಹಿನ್ನೆಲೆಯಲ್ಲಿ ಸಿ.ಎನ್.ಆರ್ ರವರು ವಿಮರ್ಶೆಯಲ್ಲಿ ತೋರುವ ನಿಷ್ಟುರತೆ ಹಾಗೂ ಸ್ಥಿತ ಪ್ರಜ್ಞತೆಯ ನಿಲುವು ಮತ್ತು ನ್ಯಾಯಯುತವಾಗಿ ಕೃತಿಗೆ ಸಲ್ಲಬೇಕಾದ ನ್ಯಾಯವನ್ನು ಸಲ್ಲಿಸುವಲ್ಲಿ ಅವರು ಹಾಕಿಕೊಂಡಿರುವ ಮಾರ್ಗ ನಿಜಕ್ಕೂ ಈ ತಲೆಮಾರಿಗೆ ಮಾದರಿಯಾಗಿದೆ. ಯಾವುದೇ ರೀತಿಯ ರಾಗ ದ್ವೇಷವಿಲ್ಲದೆ, ಅತ್ಯಂತ ನಿರ್ಲಿಪ್ತತೆಯಿಂದ ಕೃತಿಕಾರ ಮತ್ತು ಅವನ ಕೃತಿಯನ್ನು ವಿಭಿನ್ನ ಆಯಾಮಗಳಿಂದ ಶೋಧಿಸುವ ಸಿ ಎನ್ ಆರ್ ರವರ ದೈತ್ಯ ಪ್ರತಿಭೆಯ ಹಿಂದೆ ಅಪಾರವಾದ ಓದು ಮತ್ತು ಆಳವಾದ ಅಧ್ಯಯನದ ಪರಿಶ್ರಮಕ್ಕೆ ಅರ್ಧ ಶತಮಾನದ ಇತಿಹಾಸವಿದೆ.
ಇತ್ತೀಚೆಗೆ ಅನುವಾದ ಕುರಿತಂತೆ ಬಂದಿರುವ ಅವರ “ ಭಾಷಾಂತರ: ಸೈದ್ಧಾಂತಿಕ ನೆಲೆಗಳು ಹಾಗೂ ಆನ್ವಯಿಕ ನೆಲೆಗಳು” ಎಂಬ ಕೃತಿ ಭಾಷಾಂತರ ಕುರಿತಂತೆ ನಮಗಿರುವ ಎಲ್ಲಾ ಸಂದೇಹಗಳನ್ನು ಹಾಗೂ ಗೊಂದಲಗಳನ್ನು ನಿವಾರಿಸುವ ಒಂದು ಅಭಿಜಾತ ಕೃತಿ ಎಂದರೆ ತಪ್ಪಾಗಲಾರದು. ಈ ಕೃತಿಗಾಗಿ ತಮ್ಮ ಓದಿನ ಅನುಭವವನ್ನು ಹಾಗೂ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಮತ್ತು ವಿದೇಶಿ ವಿ.ವಿ.ಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಓದು ಮತ್ತು ಪ್ರವಚನದ ಮೂಲಕ ತಾವು ಮನಗಂಡ ಅನುಭವಗಳನ್ನು ಈ ಕೃತಿಯಲ್ಲಿ ಕರಾರುವಕ್ಕಾಗಿ ದಾಖಲಿಸಿದ್ದಾರೆ. ಇವೊತ್ತಿಗೂ ನಮಗೆ ಅನುವಾದ ಅಥವಾ ಭಾಷಾಂತರ ಕುರಿತು ಅನೇಕ ಬಗೆಯ ಗೊಂದಲಗಳಿವೆ. ನಮ್ಮ ನಡುವಿನ ಭಾಷಾ ಶಾಸ್ತ್ರಜ್ಞ ನೋಮ್ ಚಾಮ್ಸ್ಕಿ ಹೇಳುವ ಹಾಗೆ “ ಅನುವಾದವೆಂಬುದು ವೃತ್ತವನ್ನು ಚೌಕ ಮಾಡಿದ ಹಾಗೆ ಅಥವಾ ಚೌಕವನ್ನು ವೃತ್ತ ಮಾಡಿದ ಹಾಗೆ” ಎನ್ನುವಂತಹ ಅಯೋಮಯ ಸ್ಥಿತಿಯಲ್ಲಿ ನಾವಿದ್ದೇವೆ.
ಆದರೆ ಡಾ.ಸಿ.ಎನ್. ರಾಮಚಂದ್ರನ್ ಈ ಅಭಿಜಾತ ಕೃತಿಯ ಮೂಲಕ ನಮ್ಮೆಲ್ಲರ ಗೊಂದಲಗಳನ್ನು ನಿವಾರಿಸಿದ್ದಾರೆ. ಅನುವಾದ ಕುರಿತಂತೆ ಜಗತ್ತಿನ ಪ್ರಪಥಮ ಮಹಾಕಾವ್ಯ ಎನಿಸಿದ ಗಿಲ್ಗಮೇಶನ ಮಹಾಕಾವ್ಯದಿಂದ ಹಿಡಿದು, ಬೈಬಲ್ ಗಳ ಅನುವಾದದ ಇತಿಹಾಸ, ಭಾರತದ ಪುರಾಣ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣದ ಭಾಷಾಂತರದ ಬಿಕ್ಕಟ್ಟು ಮತ್ತು ಸವಾಲುಗಳು, ಷೇಕ್ಸ್ ಪಿಯರನ ಕನ್ನಡ ಭಾಷಾಂತರ ಕೃತಿಗಳ ವೈಶಿಷ್ಯ, ಗ್ರಾಮೀಣ ಭಾಷೆಯ ಭಾರತೀಯ ಭಾಷೆಯ ಕಥೆ, ಕಾದಂಬರಿಗಳನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸುವಾಗ ಎದುರಾಗುವ ತೊಡಕುಗಳು ಹೀಗೆ ಹಲವು ಆಯಾಮಗಳಲ್ಲಿ ಅವರು ಈ ಕೃತಿಯಲ್ಲಿ ವಿಸ್ತ್ರುತವಾಗಿ ಚರ್ಚಿಸಿದ್ದಾರೆ. ಅನುವಾದ ಪ್ರಕ್ರಿಯೆಯಲ್ಲಿ ತೊಡಗಿರುವ ಬರಹಗಾರರು ಮತ್ತು ಪತ್ರಕರ್ತಕರಿಗೆ ಈ ಕೃತಿಯು ಅತ್ಯಮೂಲ್ಯ ಆಸ್ತಿ ಎಂದರೆ ತಪ್ಪಾಗಲಾರದು.
ಕಳೆದ ಜನವರಿ ತಿಂಗಳಿನಲ್ಲಿ ಧಾರವಾಡದಲ್ಲಿ ನಡೆದ ಸಾಹಿತ್ಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ಧಾರವಾಡಕ್ಕೆ ಬಂದಿದ್ದ ಅವರು ಆಹ್ವಾನದ ಮೇರೆಗೆ ನನ್ನ ಮನೆಗೆ ಅತಿಥಿಯಾಗಿ ಆಗಮಿಸಿದ್ದರು. ಮನೆಯ ಸೋಫಾದ ಮೇಲಿದ್ದ ಅವರ ಕೃತಿಯನ್ನು ನೋಡಿ ಆಶ್ಚರ್ಯ ಪಟ್ಟರು. “ಕೊಪ್ಪ ನೀವೊಬ್ಬ ಪತ್ರಕರ್ತರಾಗಿ ಇಂತಹ ಗಂಭೀರ ಕೃತಿಗಳನ್ನು ಓದುವ ಹವ್ಯಾಸ ಇದೆಯಾ?” ಎಂದು ಪ್ರಶ್ನಿಸಿದರು. ನಾನು ಅವರ ಸಂದೇಹಗಳನ್ನು ಹೀಗೆ ನಿವಾರಿಸಿದೆ. “ ಹೌದು ಸರ್ ನಾನು ವೃತ್ತಿಯಲ್ಲಿ ಪತ್ರಕರ್ತ ಹಾಗೂ ಪ್ರವೃತ್ತಿಯಲ್ಲಿ ಲೇಖಕ. ಆದರೆ ಇವೆರೆಡಕ್ಕಿಂತ ಹೆಚ್ಚಾಗಿ ಗಂಭೀರ ಓದುಗ. ಇಂಗ್ಲೀಷ್ ಭಾಷೆಯಲ್ಲಿ ನಾನು ಕಥೆ, ಕಾದಂಬರಿ, ಕಾವ್ಯಗಳನ್ನು ಹೊರತು ಪಡಿಸಿ, ಇತಿಹಾಸ, ರಾಜಕೀಯ ಮತ್ತ ಆರ್ಥಿಕ ವಿದ್ಯಮಾನಗಳು, ವಿಜ್ಞಾನ ರಂಗದಲ್ಲಾಗುತ್ತಿರುವ ಬದಲಾವಣೆ ಹಾಗೂ ಸಾಂಸ್ಕೃತಿಕ ಪಲ್ಲಟಗಳ ಕುರಿತಾದ ಯಾವುದೇ ಕೃತಿಯನ್ನು ಮಿಸ್ ಮಾಡಿಕೊಳ್ಳುವುದಿಲ್ಲ, ಜೊತೆಗೆ ಕನ್ನಡದಲ್ಲಿ ಎಲ್ಲಾ ಪ್ರಕಾರದ ಉತ್ತಮ ಕೃತಿಗಳನ್ನು ತಪ್ಪದೇ ಓದುತ್ತೀನಿ” ಎಂದು ಹೇಳುವುದರ ಮೂಲಕ ನನ್ನ ಓದಿನ ಹಸಿವನ್ನುವಿವರಿಸಿದೆ. ಕಳೆದ ಒಂದು ದಶಕದ ಹಿಂದೆ ಲಂಕೇಶ್ ಮತ್ತು ಡಿ.ಆರ್, ನಾಗರಾಜು ಅವರ ಕೃತಿಗಳಲ್ಲಿ ಸಿಗುತ್ತಿದ್ದ ಓದಿನ ಸುಖ ನನಗೆ ಈ ಕೃತಿಯಲ್ಲಿ ಸಿಕ್ಕಿತು ಹಾಗಾಗಿ ಎರಡನೆಯ ಬಾರಿಗೆ ಮತ್ತೆ ಓದುತ್ತಿದ್ದೀನಿ ಎಂದೆ.
ಒಬ್ಬ ಲೇಖಕನಿಗೆ ಓದುಗನಿಂದ ದೊರೆಯುವ ಇಂತಹ ಪ್ರತಿಕ್ರಿಯೆಗಳಿಗಿಂತ ಬೇರೊಂದು ಪ್ರಶಸ್ತಿ ಬೇಡ ಎಂಬಂತೆ ನನ್ನ ಭುಜದ ಮೇಲೆ ಕೈ ಹಾಕಿ ಸಿ.ಎನ್.ಆರ್. “ ಕೊಪ್ಪ ನನ್ನ ಶ್ರಮ ಸಾರ್ಥಕವಾಯಿತು ಎಂಬ ಸಂತೃಪ್ತ ಭಾವನೆ ನನ್ನಲ್ಲಿ ಮೂಡಿದೆ, ನಾನು ಬೆಂಗಳೂರಿಗೆ ಹೋದ ನಂತರ ನಿಮಗೆ ಇನ್ನೊಂದು ಕೃತಿಯನ್ನು ಕಳಿಸಿಕೊಡುತ್ತೀನಿ” ಎಂದು ತಿಳಿಸಿದರು. ಅದರಂತೆ “ ಸಂವಾದ” ಎನ್ನುವ ಕೃತಿಯನ್ನು ಕಳಿಸಿಕೊಟ್ಟರು. ಕಳೆದ ಹತ್ತು ವರ್ಷಗಳಿಂದ ಅವರ ಜೊತೆ ಸಂಪರ್ಕದಲ್ಲಿರುವ ನನಗೆ ಅವರ ಒಂದು ವಿಶಿಷ್ಟ ಗುಣ ತುಂಬಾ ಆಪ್ತವೆನಿಸುತ್ತದೆ. ಅವರಿಗೆ ಯಾವುದೇ ಲೇಖಕನ ಕೃತಿ ತಲುಪಲಿ ಅಥವಾ ಓದುಗ ಪತ್ರ ಬರೆಯಲಿ ತಕ್ಷಣ ಪ್ರತಿಕ್ರಿಯೆ ನೀಡುವುದು ಅವರ ಬಹು ದೊಡ್ಡ ಗುಣ. ಇಂತಹ ಗುಣವನ್ನು ನಾನು ಹಾ.ಮಾ.ನಾಯಕರಲ್ಲಿ ಕಂಡಿದ್ದೆ.
1978-81 ರಲ್ಲಿ ಬೆಂಗಳೂರಿನಲ್ಲಿ ಪದವಿ ಓದುತ್ತಿದ್ದಾಗ, ಸುಧಾ ವಾರಪತ್ರಿಕೆಯಲ್ಲಿ ಅಂಕಣ ಬರೆಯುತ್ತಿದ್ದ ಡಾ, ಹಾ.ಮಾ.ನಾ. ರವರೆಗೆ ಪತ್ರ ಬರೆಯುತ್ತಿದ್ದೆ. ಅವರು ಸಹ ಕೂಡಲೆ ಆ ಕಾಲದ ಹದಿನೈದು ಪೈಸೆ ಪೋಸ್ಟ್ ಕಾರ್ಡ್ ನಲ್ಲಿ ಕಾಗದದ ಬಲ ಬದಿಯ ಮೇಲ್ಭಾಗದಲ್ಲಿ ದಿನಾಂಕ ಮತ್ತು ಗೋಧೂಳಿ, ಜಯಲಕ್ಷ್ಮಿಪುರಂ, ಮೈಸೂರು ಎಂದು ನಮೂದಿಸಿ, ಅತ್ಯಂತ ಮುದ್ದಾದ ಅಕ್ಷರಗಳಲ್ಲಿ ಕಿರಿಯವರು, ಹಿರಿಯವರು ಎನ್ನದೆ ಪ್ರೀತಿಯಿಂದ ಪತ್ರ ಬರೆಯುತ್ತಿದ್ದರು. ಅಂತಹ ಗುಣವನ್ನು ನಾನು ಇದೀಗ ಸಿ.ಎನ್. ಆರ್ ರವರಲ್ಲಿ ಕಂಡಿದ್ದೀನಿ. ಇವೊತ್ತಿಗೂ ಅವರು ತಾವು ಬರೆದ ಲೇಖನಗಳನ್ನು ಸಮಾನ ಮನಸ್ಕರಿಗೆ ಇ-ಮೈಲ್ ಮೂಲಕ ಕಳಿಸಿ ಅಭಿಪ್ರಾಯ ಕೇಳುವ ಸಹೃದತೆಯನ್ನು ಉಳಿಸಿಕೊಡಿದ್ದಾರೆ.
ಸಂವಾದ ಕೃತಿಯಲ್ಲಿ ಅವರು ವಿಮರ್ಶೆಗೆ ಎತ್ತಿಕೊಂಡಿರುವ ಕೃತಿಗಳು ಹಾಗೂ ಕೃತಿಕಾರನ ದೌರ್ಬಲ್ಯಗಳನ್ನು ಮತ್ತು ತಪ್ಪ ಮಾಹಿತಿಯನ್ನು ಆಧಾರಗಳ ಸಮೇತ ಎತ್ತಿ ತೋರಿಸಿರುವ ವೈಖರಿ ಅವರ ದೈತ್ಯ ಪ್ರತಿಭೆಗೆ ಸಾಕ್ಷಿಯಾಗಿದೆ. ಅಪಾರವಾದ ಓದು ಮತ್ತು ತಿಳುವಳಿಕೆಯ. ಸಿ.ಎನ್. ಆರ್ ರಂತಹ ವಿಮರ್ಶಾಲೋಕದ ಬಹು ಎತ್ತರದ ಪ್ರಖರ ಶಿಖರವನ್ನು ವಿಮರ್ಶಿಸಲು ಅಥವಾ ಬಣ್ಣಿಸಲು ನನಗೆ ಯಾವುದೇ ಯೋಗ್ಯತೆಯಿಲ್ಲ. ಆದರೆ ಈ ಎರಡು ಕೃತಿಗಳಲ್ಲಿ ನಾನು ಗ್ರಹಿಸಿದ ಹಾಗೂ ಕೆಲವು ಇಷ್ಟವಾದ ಸಂಗತಿಗಳನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ.
ಧಾರವಾಡದ ಮನೋಹರ ಗ್ರಂಥಾಲಯ ಕಳೆದ ವರ್ಷ ಪ್ರಕಟಿಸಿರುವ : ಭಾಷಾಂತರ: ಸೈದ್ಧಾಂತಿಕ ಹಾಗೂ ಆನ್ವಯಿಕ ನೆಲೆಗಳು “ ಕೃತಿ ಭಾಷಾಂತರ ಕುರಿತಂತೆ ಜಾಗತಿಕ ಮಟ್ಟದಲ್ಲಿ ಹಾಗೂ ಭಾರತದಲ್ಲಿ ಈವರೆಗೆ ನಡೆದಿರುವ ಚರ್ಚೆಗಳನ್ನು ದಾಖಲಿಸಿರುವ ಅಪರೂಪದ ಕೃತಿ. ಈ ಕೃತಿ ರಚನೆಗಾಗಿ ಸಿ.ಎನ್.ಆರ್. ರವರು ತೆಗೆದುಕೊಂಡಿರುವ ಶ್ರಮ ನಿಜಕ್ಕೂ ಬೆರಗು ಮೂಡಿಸುತ್ತದೆ. ಮೊದಲ ಅಧ್ಯಾಯದಲ್ಲಿ ಇತಿಹಾಸವನ್ನು ಸಂಕ್ಷಿಪ್ತವಾಗಿ ಹೇಳುವ ಲೇಖಕರು, ಎರಡನೆಯ ಅಧ್ಯಾಯದಲ್ಲಿ ಪಾಶ್ಚಿಮಾತ್ಯ ಚಿಂತನೆಗಳನ್ನು ನಮ್ಮ ಮುಂದೆ ತೆರದಿಡುತ್ತಾರೆ. ವಾಲ್ಟರ್ ಬೆಂಜಮಿನ್, ಅನುವಾದ ಮತ್ತು ಭಾಷಾ ವಿಜ್ಞಾನ ಕುರಿತಂತೆ ಯುಜೀನ್ ನೀಡಾ ಹಾಗೂ ಜೆ.ಸಿ. ಕ್ಯಾಟ್ ಪರ್ಡ್ ರವರ ಚಿಂತನೆಗಳನ್ನು ದಾಖಲಿಸಿದ್ದಾರೆ. ಅನುವಾದ ಮತ್ತು ಪ್ರಭುತ್ವ ಹಾಗೂ ಸಾಮ್ರಾಜ್ಯವಾದ ಕುರಿತಂತೆ ಜಾರ್ಜ್ ಸ್ಪೇನರ್, ಎಲ್ಸಿ ವಿಯೇರ, ಮಾರಿಯಾ ಟಿಮೋಸ್ಕೊ, ಸ್ತ್ರೀವಾದ ಕುರಿತು ಲೋರಿ ಚೇಂಬರ್ಲೇನ್ ರವರ ಪ್ರಬುದ್ಧ ಚಿಂತನೆಗಳನ್ನು ಹಾಗೂ ಅನುವಾದ ಸಂಸ್ಕೃತಿ ಕುರಿತಂತೆ ಆಂದ್ರೆ ಲೆಫೆವರೆ, ಸೂಜನ್ ಬಾಸ್ನೆಟ್ , ಲಾರೆನ್ಸ್ ವೆನುಟಿ ಅಭಿಪ್ರಾಯಗಳನ್ನು ಈ ಕೃತಿಯಲ್ಲಿ ನಿರ್ವಚಿಸಿರುವುದು ಆಸಕ್ತರಿಗೆ ಸಹಕಾರಿಯಾಗಿದೆ.
ಅನುವಾದ ಅಥವಾ ಭಾಷಾಂತರ ಕುರಿತಂತೆ ಭಾರತೀಯ ಚಿಂತನೆ ವಿಭಾಗದಲ್ಲಿ ( ಅಧ್ಯಾಯ-ಮೂರು) ಎ.ಕೆ.ರಾಮಾನುಜನ್, ಸುಜೀತ್, ಮುಖರ್ಜಿ. ತೇಜಸ್ವಿ ನಿರಂಜನ, ಗಾಯತ್ರಿ ಚಕ್ರವರ್ತಿ ಸ್ವಿವಕ್, ಗಣೇಶ್ ದೇವಿ, ಹರೀಶ್ ತ್ರಿವೇದಿ ಯವರ ಭಾಷಾಂತರ ಕುರಿತಂತೆ ಮಂಡಿಸಿರುವ ಅವರ ಚಿಂತನೆಗಳನ್ನು ದಾಖಲಿಸಿದ್ದಾರೆ.
ಅಧ್ಯಾಯ ಐದರಲ್ಲಿ ಷೇಕ್ಸ್ ಪಿಯರ್ ನ ಕೃತಿಗಳು ಕನ್ನಡಕ್ಕೆ ಅನುವಾದ ಮತ್ತು ರೂಪಾಂತರ ಮಾದರಿಯಲ್ಲಿ ಬಂದಿರುವ ವಿವರಗಳನ್ನು ಮತ್ತು ಆ ಕೃತಿಗಳ ವೈಶಿಷ್ಟತೆಯನ್ನು ತುಂಬಾ ಆಳವಾಗಿ ಚರ್ಚೆ ಮಾಡುವುದರ ಮೂಲಕ ಕನ್ನಡ ಮತ್ತು ಇಂಗ್ಲೀಷ್ ಸಾಹಿತ್ಯದ ವಿದ್ಯಾರ್ಥಿಗಳಿಂದ ಹಿಡಿದು ಎಲ್ಲಾ ಸಾಹಿತ್ಯಾಸಕ್ತರ ಪಾಲಿಗೆ ದಾರಿ ದೀಪವಾಗಿದ್ದಾರೆ. ಷೇಕ್ಷ್ ಪಿಯರ್ 1871 ರಲ್ಲಿ ಡೆಪ್ಯುಟಿ ಚೆನ್ನಬಸಪ್ಪನವರ ಮೂಲಕ, ಆನಂತರ ಎಂ.ಎಲ್.ಶ್ರೀಕಂಠೇಶಗೌಡರ ಮೂಲಕ ನಾಟಕಗಳ ಅಳವಡಿಕೆ ಮತ್ತು ರೂಪಾಂತರಗಳ ಮೂಲಕ ಬಂದ ಬಗೆಯನ್ನು ವ್ಯಾಖ್ಯಾನಿಸುತ್ತಾ, ಈವರೆಗೆ ಬಂದಿರುವ ಅನುವಾದಗಳ ವೈಶಿಷ್ಟ್ಯ ಕುರಿತು ವಿಸ್ತ್ರತವಾಗಿ ಚಿಂತನೆ ನಡೆಸಿದ್ದಾರೆ.
ಈ ಕೃತಿಯ ಅಧ್ಯಾಯ ಆರರಲ್ಲಿ “ಭಿನ್ನ ಲಕ್ಷ್ಯಗಳು ಮತ್ತು ಕೃತಿಯ ಅವತಾರಗಳು”ಎಂಬ ಶೀರ್ಷಿಕೆಯಡಿ ಸಂಸ್ಕೃತವನ್ನೂ ಒಳಗೊಂಡತೆ ಭಾರತೀಯ ಭಾಷೆಯ ಕೃತಿಗಳು ಇಂಗ್ಲೀಷ್ ಭಾಷೆಗೆ ಅನುವಾದಗೊಂಡಿರುವ ಇತಿಹಾಸವನ್ನು ದಾಖಲಿಸಿತ್ತಾ. 1852 ರಲ್ಲಿ ಜೈಮಿನಿಭಾರತವನ್ನು ಡಾನಿಯಲ್ ಸಾಂಡರ್ ಸನ್ ಎಂಬ ಕ್ರೈಸ್ತ ಮಿಷನರಿ ಸಂಪಾದಿಸಿ, ಅನುವಾದಿಸಿರುವ ಅಪರೂಪದ ವಿವರವನ್ನು ಇಲ್ಲಿ ನೀಡಿದ್ದಾರೆ. ಪ್ರಾಯಶಃ ಇದೇ ಇಂಗ್ಲೀಷ್ ಭಾಷೆಗೆ ಅನುವಾದವಾದ ಮೊದಲ ಕೃತಿ ಇರಬೇಕೆಂದು ಅಭಿಪ್ರಾಯ ಪಡುತ್ತಾ, ಇದಕ್ಕೂ ಮೊದಲು ಚಾಮರಸನ ಪ್ರಭುಲಿಂಗಲೇಲೆ ಮತ್ತು ಕುಮಾರ ವ್ಯಾಸನ ಜೈಮಿನಿಭಾರತ ಮರಾಠಿ ಭಾಷೆಗೆ ಅನುವಾದವಾಗಿರುವ ವಿಷಯವನ್ನೂ ಸಹ ಪ್ರಸ್ತಾಪಿಸಿದ್ದಾರೆ.
ಇಂಗ್ಲೀಷ್ ಭಾಷೆಗೆ ಅನುವಾದಗೊಂಡಿರುವ ಭಾರತದ ಪುರಾಣ ಕಾವ್ಯಗಳು, ಸಂಸ್ಕೃತ ಭಾಷೆಯ ಕೃತಿಗಳು ಮತ್ತು ಕನ್ನಡದ ಕಾದಂಬರಿಗಳು, ಹಳೆಗನ್ನಡ ಕಾವ್ಯಗಳನ್ನು ವಿವರವಾಗಿ ಚರ್ಚಿಸಿ ಅವುಗಳ ಸಾಧಕ ಬಾಧಕಗಳನ್ನು ಓದುಗರಿಗೆ ವಿವರಿಸಿದ್ದಾರೆ. ನಮ್ಮ ಕನ್ನಡದ ಜನಪ್ರಿಯ ಕಥೆಗಾರ/ಕಾದಂಬರಿಗಾರ ಶ್ರೀ ಕೃಷ್ಣ ಆಲನಹಳ್ಳಿಯವರ “ ಪರಸಂಗದ ಗೆಂಡೆತಿಮ್ಮ” ಕಾದಂಬರಿ ಅನುವಾದ ಕುರಿತು ಒಬ್ಬ ಭಾಷಾಂತಕಾರ ಎದುರಿಸಬೇಕಾದ ಬಿಕ್ಕಟ್ಟುಗಳನ್ನು ವಿವರಿಸಿದ್ದಾರೆ. ಪರಸಂಗ ಎಂಬ ಪದ ಹಿಂದಿನ ಅರ್ಥ ಮತ್ತೆ ಗೆಂಡೆತಿಮ್ಮ ಎಂಬ ನಾಮಸೂಚಿತ ಪದದ ಹಿಂದಿನ ವಿಶೇಷಣಗಳನ್ನು ಇಂಗ್ಲೀಷ್ ಭಾಷೆಗೆ ವಿವರಿಸುವುದು ಹೇಗೆ? ಕೇವಲ ಒಬ್ಬ ವ್ಯಕ್ತಿಯ ಹೆಸರಾಗಿ ಮಾತ್ರ ಇತರೆ ಭಾಷೆಗಳಲ್ಲಿ ಕಾಣಿಸಿಕೊಳ್ಳಬಹುದಾದ “ ಪರಸಂಗದ ಗೆಂಡೆತಿಮ್ಮ” ಶಬ್ದ ಬೇಡುವ ವಿವರಗಳನ್ನು ಭಾಷಾಂತರಿಸುವ ಬಗೆ ಹೇಗೆ? ಎಂಬುದರ ಕುರಿತು ಬಹಳ ಅರ್ಥ ಪೂರ್ಣವಾಗಿ ವ್ಯಾಖ್ಯಾನಿಸಿದ್ದಾರೆ. ಅದೇ ರೀತಿ ರನ್ನನ ಗಧಾಯುದ್ಧದ “ ನೀರೊಳಿರ್ದುಂ ಬೆಮರ್ದನ್ ಉರಗಪತಾಕಂ: ಪದ್ಯವನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸುವಾಗ ವಹಿಸಬೇಕಾದ ಎಚ್ಚರಗಳು, ಮತ್ತು ತೇಜಸ್ವಿ ಮತ್ತು ಕೃಷ್ಣ ಆಲನಹಳ್ಳಿಯವರ ಕಾದಂಬರಿಗಳಲ್ಲಿ ಬರುವ ಗ್ರಾಮ್ಯ ಭಾಷೆಯ ಪದಗಳಾದ ಗಡಿಗೆಯಂತಹ ಮೊಲೆಯವಳು, ನಿನ್ನ ಬುಂಡ್ಗೆ ನನ್ನ ಆಟುಯ್ಯಾ, ನಾಯಕ್ಸಾನಿ ಮುಂಡೆ, ತಿಕ, ಉಚ್ಚೆ, ಇಂತಹ ಪದಗಳು ಬೇಡುವ ಪ್ರತ್ಯೇಕ ವಿವರಣೆಗಳನ್ನು ಈ ಕೃತಿಯಲ್ಲಿ ಪ್ರಸ್ತಾಪಿಸಿರುವುದು ವಿಶೇಷ.
ಕನ್ನಡದ ಮಲೆ ಮಹಾದೇಶ್ವರ ಕಾವ್ಯ ಮತ್ತು ವೀರಪ್ಪ ಮೊಯ್ಲಿಯವರ ರಾಮಾಯಣ ಮಹಾಕಾವ್ಯ ಹಾಗೂ ಜತ್ತಪ್ಪ ರೈ ರವರ “ಬೇಟೆಯ ನೆನಪುಗಳು” ಮುಂತಾದ ಕೃತಿಗಳನ್ನು ಸಮರ್ಥವಾಗಿ ಇಂಗ್ಲೀಷ್ ಭಾಷೆಗೆ ಅನುವಾದಿಸಿರುವ ಸಿ.ಎನ್.ಆರ್ ರವರು ಓರ್ವ ಅಂತರಾಷ್ಟ್ರೀಯ ಮಟ್ಟದ ಪ್ರಬುದ್ಧ ವಿದ್ವಾಂಸ ಹಾಗೂ ಹಿರಿಯ ವಿಮರ್ಶಕರಾಗಿದ್ದುಕೊಂಡು, ಇಂಗ್ಲೀಷ್ ಪ್ರಕಾಶನ ಸಂಸ್ಥೆಗಳಲ್ಲಿ ಕಿರಿಯ ವಯಸ್ಸಿನ ಕಾಪಿ ಎಡಿಟರ್ ಗಳಿಂದ ಕಲಿಯಬಹುದಾದ ಪಾಠಗಳನ್ನು ತಮ್ಮ ಅನುಭವದೊಂದಿಗೆ ಸ್ವಾರಸ್ಯಪೂರ್ಣವಾಗಿ ವಿವರಿಸಿದ್ದಾರೆ.
ಮೊಯ್ಲಿಯವರ ರಾಮಾಯಣ ಕಾವ್ಯದ ಅನುವಾದ ಕೃತಿಯ ಸಂಪಾದಕರಾಗಿದ್ದ ಸಂದರ್ಭದಲ್ಲಿ ಲೇಖಕರು ಸಿಂಧೂರ ಎಂಬ ಶಬ್ದ ಬಳಸಿದ್ದನ್ನು ಒಬ್ಬ ಕಾಪಿ ಎಡಿಟರ್ ಪ್ರಶ್ನಿಸಿದಾಗ, ಹಣೆಯ ಮೇಲಿನ ಕುಂಕುಮ ಎಂದು ಆಕೆಗೆ ವಿವರಿಸಿದೆ. ನಂತರ ಯಾವುದಕ್ಕೂ ಇರಲಿ ಎಂದು ಸಂಸ್ಕೃತ ಮತ್ತು ಇಂಗ್ಲೀಷ್ ಶಬ್ದ ಕೋಶವನ್ನು ನೋಡಿದಾಗ ಸಿಂಧೂರ ಎಂಬ ಶಬ್ದಕ್ಕೆ ಆನೆ ಎಂಬ ಅರ್ಥವಿತ್ತು ಎನ್ನುತ್ತಾರೆ. ಅದೇ ರೀತಿ ಶ್ರೀ ರಾಮನ ಬಳಿ ಬಂದ ಬುಡಕಟ್ಟು ಮಹಿಳೆಯೊಬ್ಬಳು ನನ್ನ ಗಂಡನಿಗೆ ನಿನ್ನ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕೋರುತ್ತಾ, ನನ್ನ ಗಂಡ ಭೀಮನಂತೆ ಧೈರ್ಯಶಾಲಿ” ಎನ್ನುವ ವಾಕ್ಯವನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿದಾಗ, ಇದು ತಪ್ಪಲ್ಲವೆ, ರಾಮಾಯಣ ಕಾಲದಲ್ಲಿ ದ್ವಾಪರ ಯುಗದ ಮಹಾಭಾರತದ ಪಾತ್ರವನ್ನು ಹೆಸರಿಸುವುದು ಹೇಗೆ? ಎಂಬ ಕಾಪಿ ಎಡಿಟರ್ ಎತ್ತುವ ಪ್ರಶ್ನೆಗಳು ಹಾಗೂ ಅವರಿಗೆ ಭಾಷೆ ಮತ್ತು ಸಂಸ್ಕೃತಿಯ ಕುರಿತಂತೆ ಇರುವ ಎಚ್ಚರವನ್ನು ಕೊಂಡಾಡಿರುವುದು ಸಿ.ಎನ್.ಆರ್. ರವರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ.
ಇನ್ನು ಅವರ ಇನ್ನೊಂದು ಕೃತಿ “ ಸಂವಾದ” ವಿವಿಧ ಸಂದರ್ಭಗಳಲ್ಲಿ ಬರೆದ ವಿಮರ್ಶೆ ಮತ್ತು ಸಾಹಿತ್ಯ ಚಿಂತನೆ ಕುರಿತಾದ ಲೇಖನಗಳ ಸಂಕಲನ. ಡಾ.ವಿದ್ಯಾಶಂಕರ್ ರವರ ಪ್ರಿಯದರ್ಶಿನಿ ಪ್ರಕಾಶನದ ಮೂಲಕ ಪ್ರಕಟವಾಗಿರುವ ಈ ಕೃತಿಯಲ್ಲಿ ಒಟ್ಟು ಹದಿನೈದು ಲೇಖನಗಳಿದ್ದು, ಅವುಗಳಿಗೆ ಪೂರಕವಾಗಿ ಏಳೆಂಟು ಲೇಖನಗಳಿವೆ. ಎರಡು ಭಾಗಗಳಲ್ಲಿ ಲೇಖನಗಳಿದ್ದು, ಮೊದಲ ಭಾಗದಲ್ಲಿ ವ್ಯವಸ್ಥೆಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಎ,ಕೆ.ರಾಮಾನುಜನ್ ರವರ ಮುನ್ನೂರು ರಾಮಾಯಾಣ ಹಾಗೂ ಯೋಗೇಶ್ ಮಾಸ್ತರ ಡುಂಡಿ ಕಾದಂಬರಿ ಕುರಿತು ವಿವೇಚಿಸಿದ್ದಾರೆ. ಜೊತೆಗೆ ಕನ್ನಡ ಭಾಷೆ, ಶಿಕ್ಷಣ, ಮಾಧ್ಯಮ ಇತ್ಯಾದಿ, ಪರಂಪರೆ, ಸ್ವಾತಂತ್ಯ, ಸಾಹಿತ್ಯ ಚರಿತ್ರೆ ಇತ್ಯಾದಿ, ವಚನ ಚಳುವಳಿ: ಮೌಖಿಕ ಮತ್ತು ಲಿಖಿತ ಪರಂಪರೆಗಳ ಗ್ರಹಿಕೆ, ಸಂಶೋಧನೆ ಮತ್ತು ಪಿ.ಹೆಚ್.ಡಿ. ವ್ಯವಸ್ಥೆ, ಚರಿತ್ರೆ, ಧರ್ಮ ಮತ್ತು ಟಿಪ್ಪು ಸುಲ್ತಾನ್ ಹಾಗೂ ಎಸ್.ಎಲ್.ಭೈರಪ್ಪನವರ ಆವರಣ ಮುಂತಾದ ಮೌಲ್ಯಯುತವಾದ ಲೇಖನಗಳಿವೆ. ಎರಡನೆಯ ಭಾಗದಲ್ಲಿ ವರ್ತಮಾನದ ಬಿಕ್ಕಟ್ಟುಗಳಿಗೆ ಮುಖಾಮುಖಿಯಾಗಿ ವಿಶ್ಲೇಷಿಸಿದ “ ವಸಾಹತು ಯುಗದಲ್ಲಿ ಪಶ್ಚಿಮದ ಧೋರಣೆ” , “ಪ್ರಗತಿ, ಪರಿಸರ ರಕ್ಷಣೆ, ಉದಾರೀಕರಣ ಇತ್ಯಾದಿ” ಜಾಗತೀಕರಣ: ಸೈದ್ಧಾಂತಿಕ ನೆಲೆಗಳು, ವಂದನಾ ಶಿವರವರ ಉಪ್ಪಿನ ಸತ್ಯಾಗ್ರಹ, ಕಾಮಸೂತ್ರ, ಮನುಧರ್ಮ, ಭಾರತೀಯ ಸಂಸ್ಕೃತಿ ಇತ್ಯಾದಿ, ಭಾಷೆ, ಲಿಪಿ. ಮತ್ತು ಲೋಕಗ್ರಹಿಕೆ ಹೀಗೆ ಹಲವು ಆಯಾಮಗಳಲ್ಲಿ ಅರ್ಥಪೂರ್ಣ ಚಿಂತನೆ ನಡೆಸುವುದರ ಮೂಲಕ ನಮ್ಮನ್ನು ಪ್ರಬುದ್ಧ ಚಿಂತನೆಯತ್ತ ಕೊಂಡೊಯ್ದಿದ್ದಾರೆ.
ಸ್ಥಳಾವಕಾಶದ ಮಿತಿಯಿಂದ ಎಲ್ಲಾ ಲೇಖನಗಳ ಚರ್ಚೆ ಇಲ್ಲಿ ಸಾಧ್ಯವಾಗದಿದ್ದರೂ, ಭೈರಪ್ಪನವರ ಆವರಣ ಕುರಿತು ತಾಳಿರುವ ಸಿ.ಎನ್ನಾರ್. ಅವರ ನಿಲುವಿನ ಹಿಂದೆ ಎಂತಹ ಆಳವಾದ ಓದು ಮತ್ತು ಗ್ರಹಿಕೆ ಇದೆ ಎನ್ನುವುದಕ್ಕೆ ಈ ವಿಮರ್ಶಾ ಲೇಖನವನ್ನುಕನ್ನಡಿಗರು ತಪ್ಪದೇ ಓದಬೇಕು. ಯಾವುದೇ ಪೂರ್ವಾಗ್ರಹವಿಲ್ಲದೆ ಒಬ್ಬ ಕಾದಂಬರಿಕಾರ ಗ್ರಹಿಕೆಯ ಮಿತಿಗಳನ್ನು ಮತ್ತು ಆತನ ಮನೋಧರ್ಮವನ್ನು ಆಧಾರ ಸಾಕ್ಷಿಗಳ ಸಮೇತ ಅನಾವರಣಗೊಳಿಸಿದ್ದಾರೆ. ಅದೇ ರೀತಿ ತಮ್ಮ ಪ್ರಖರ ವೈಚಾರಿಕ ಚಿಂತನೆಯ ನೆಪದಲ್ಲಿ ಎಡವಿರುವ ಕೆ.ಎಸ್.ಭಗವಾನ್ ಮತ್ತು ಡಾ.ಎಂ.ಚಿದಾನಂದಮೂರ್ತಿಯವರ ಗ್ರಹಿಕೆಯ ಮಿತಿಯನ್ನು ತೋರಿಸುವುದರ ಜೊತೆ ಜೊತೆಗೆ ಭಾರತೀಯ ಸಂಸ್ಕೃತ ಕಾವ್ಯಗಳು ಹಾಗೂ ಗ್ರಂಥಗಳ ಕುರಿತು ಆರೋಗ್ಯಪೂರ್ಣ ನಿಲುವನ್ನು ತಳೆಯುವದರ ಮೂಲಕ ಒಬ್ಬ ವಿಮರ್ಶಕ ಅಥವಾ ವಿದ್ವಾಂಸನ ನಿಜವಾದ ಕಾರ್ಯ ಏನೆಂಬುದನ್ನು ಈ ಕೃತಿಯ ಮೂಲಕ ತೋರಿಸುವುದರ ಮೂಲಕ ನಮ್ಮೆಲ್ಲರ ಗೌರವಕ್ಕೆ ಪಾತ್ರರಾಗುತ್ತಾರೆ.
ಕಾದಂಬರಿಕಾರ ಬೈರಪ್ಪನವರ ಆವರಣವನ್ನು ಹಲವು ಕಾರಣಕ್ಕಾಗಿ ಸಾರಾಸಗಟಾಗಿ ತಿರಸ್ಕರಿಸಿದವರು ಹೆಚ್ಚು ಮಂದಿ. ಆದರೆ, ಸಿ.ಎನ್.ಆರ್ ರವರು ಈ ಕಾದಂಬರಿಯು ಯಾವ ಕಾರಣಕ್ಕಾಗಿ ತಿರಸ್ಕಾರಕ್ಕೆ ಯೋಗ್ಯ ಕೃತಿಯಾಗಿದೆ ಎಂಬುದನ್ನು ಮಂಡಿಸಲು ಕೃತಿ ಮಾತ್ರವಲ್ಲದೆ ಕೃತಿಕಾರನ ಮನೋಧರ್ಮವನ್ನು ವಿಮರ್ಶೆಯ ಒರೆಗಲ್ಲಿಗೆ ಹಚ್ಚಿರುವ ವೈಖರಿ ನಿಜಕ್ಕೂ ವಿಮರ್ಶಾ ಲೋಕಕ್ಕೆ ಮಾದರಿಯಾಗಿದೆ. ಕಾದಂಬರಿಯ ನಿರೂಪಣಾ ತಂತ್ರ, ಭಾವಪ್ರಚೋದಕ ಸಂಗತಿಗಳ ಮೇಲೆ ನೀಡಿರುವ ಒತ್ತು, ವಿಡಂಬನೆಗೆ ಒಳಗಾದ ಪಾತ್ರಗಳು, ಭಾಷೆ, ಹೀಗೆ ಇಂಚು ಇಂಚಾಗಿ ಕಾದಂಬರಿಯ ಪ್ರತಿ ಪುಟವನ್ನು ಅಳೆದು, ತೂಗಿದ್ದಾರೆ.
ಇಡೀ ಕಾದಂಬರಿಯ ಸಂವಿಧಾನ ನಾವು x ಅವರು ಎಂಬಂತಹ, ಇಸ್ಲಾಂ ಧರ್ಮಾನುಯಾಯಿಗಳನ್ನು ಅನ್ಯರಾಗಿಸುವ ನಿಲುವಿನಿಂದ ಕಟ್ಟಲ್ಪಟ್ಟಿದೆ ಎನ್ನುವ ಲೇಖಕರು, ಮುಸ್ಲಿಂರನ್ನು ಆಪಾದಿತರ ಸ್ಥಾನದಲ್ಲಿ ನಿಲ್ಲಿಸಿ” ಅವರಿಂದಾಗಿ ಘೋರ ಕೃತ್ಯಗಳನ್ನು ಚಿತ್ರಿಸುವುದು ಕಾದಂಬರಿಕಾರರ ಮುಖ್ಯ ಉದ್ದೇಶವಾಗಿದೆ ಎಂಬುದನ್ನು ನಿಖರವಾಗಿ ಹೇಳಿದ್ದಾರೆ. ಕೆಲವು ಪಾತ್ರಗಳನ್ನು ಉದ್ದೇಶಪೂರ್ವಕವಾಗಿ ವಿಡಂಬನೆಗೆ ಒಳಪಡಿಸಿರುವುದನ್ನು ಗುರುತಿಸಿದ್ದಾರೆ. ಉದಾಹರಣೆಗೆ ಸೆಕ್ಯೂಲರ್ ನಿಲುವಿನ ಶಾಸ್ತ್ರಿಯನ್ನು ಪಕ್ಕ ಢೋಂಗಿಯಂತೆ ಹಾಗೂ ಇಚ್ಚಾಶಕ್ತಿಯಿಲ್ಲದ ಅಮೀನ್ ರ ಪಾತ್ರ, ಅನ್ಯ ಮತೀಯರನ್ನು ದ್ವೇಷಿಸುತ್ತಿದ್ದ ಟಿಪ್ಪು, 17 ನೇ ಶತಮಾನದ ಹಾಜಿ ಹಮ್ ದುಲ್ಲಾ ಇವರೆಲ್ಲರನ್ನೂ ಧರ್ಮಾಂಧರಂತೆ, ಕ್ರೂರಿಗಳಂತೆ ಚಿತ್ರಿಸಿರುವುದನ್ನು ಎತ್ತಿ ತೋರಿಸಿದ್ದಾರೆ.
ಇವೆಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಕಾದಂಬರಿಕಾರ ತಾನು ಬಳಸುವ ಭಾಷೆಯ ಹಿಂದೆ ಎಂತಹ ವಿಕೃತ ಮನೋಭಾವವನ್ನು ಹೊಂದಿರುತ್ತಾನೆ ಎಂಬುದನ್ನು ಸಾಕ್ಷೀಕರಿಸಲು, ಭೈರಪ್ಪನವರ ಉಪಯೋಗಿಸಿರುವ ಶಬ್ದಗಳನ್ನು “ ಮುಸ್ಲಿಂ ಆಕ್ರಮಣಕಾರರು, ದೇಶಕ್ಕೆ ನುಗ್ಗಿದ ಮುಸ್ಲಿಮರು, ಆ ಜನರು, ಇತ್ಯಾದಿ ವ್ಯಂಗ್ಯ ಮತ್ತು ವಿಡಂಬನೆಯಿಂದ ಬಳಸಿರುವುದನ್ನು ಸಿ.ಎನ್.ಆರ್ ಎತ್ತಿ ತೋರಿಸಿದ್ದಾರೆ. ಇಡೀ ಕಾದಂಬರಿಯನ್ನ ಸುಧೀರ್ಘವಾಗಿ ಚರ್ಚಿಸಿ ಅದರ ಹುಳುಕುಗಳನ್ನು ಹೊರ ತೆಗೆದಿರುವ ಲೇಖಕರು, ಸತ್ಯದಲ್ಲಿ ಪ್ರಭುತ್ವದ ಪಾಲೆಷ್ಟು, ಧರ್ಮದ ಪಾಲೇಷ್ಟು, ಎಂಬಂತಹ ಮಾರ್ಮಿಕವಾದ ಪ್ರಶ್ನೆಯನ್ನು ಎತ್ತುವುದರ ,ಮೂಲಕ ಕಾದಂಬರಿಕಾರ ಭೈರಪ್ಪ ಹೊರಿಸಿರುವ ಅಪವಾದಗಳಿಗೆ ಅದೇ ಇತಿಹಾಸದ ಸಾಕ್ಷಾಧಾರಗಳ ಮೂಲಕ ಉತ್ತರ ನೀಡಿದ್ದಾರೆ.
ಕಾಶಿ ಮತ್ತು ಮಥುರಾ ದೇವಾಲಯಗಳನ್ನು ಔರಂಗಜೇಬನು ನಾಶಪಡಿಸಿದ ಎಂದು ಬೊಬ್ಬೆ ಹಾಕುವ ಭೈರಪ್ಪನವರಿಗೆ, ಔರಂಗಜೇಬನು, ಅಲಹಾಬಾದಿನ ಸೋಮೇಶ್ವರನಾಥ ದೇವಾಲಯ, ಗೌಹಾತಿಯ ಉಮಾನಾಥ ದೇವಾಲಯ, ಕಾಶಿಯ ಜಂಗಮ ಶಿವ ದೇವಾಲಯಕ್ಕೆ ದತ್ತಿ ಕೊಟ್ಟಿರುವ ವಿಷಯವನ್ನು ಮುಂದಿಟ್ಟು ಪ್ರಶ್ನಿಸಿದ್ದಾರೆ. ಜೊತೆಗೆ ಆ ಕಾಲಘಟ್ಟದ ಅನೇಕ ಹಿಂದೂ ಸಂಸ್ಥಾನದ ಸಾಮ್ರಾಟರಲ್ಲಿ ಮುಸ್ಲಿಂರು ಸೇನಾ ದಂಡನಾಯಕರಾಗಿರುವುದನ್ನು ಪ್ರಸ್ತಾಪಿಸಿರುವುದಲ್ಲದೆ, ವಿಜಯನಗರದ ಅರಸನು ಬೀಜಾಪುರದ ಸುಲ್ತಾನನ್ನು ಮಗನಂತೆ ಕಾಣುತ್ತಿದ್ದ ಇತಿಹಾಸ ಅಪರೂಪದ ಸಂಗತಿಗಳನ್ನು ನಮ್ಮೆದುರು ತೆರೆದಿಟ್ಟಿದ್ದಾರೆ.
ಚರಿತ್ರೆ ಎಂಬುದು ಒಂದು ಸಿದ್ಧ ವಸ್ತುವಲ್ಲ, ಅದೊಂದು ರಚನೆ. ಕಾಲಕಾಲಕ್ಕೆ ಆಯಾ ಸಂದರ್ಭಗಳು ಮತ್ತು ವೈಚಾರಿಕ ಒತ್ತಡಗಳು ಕಟ್ಟಿಕೊಡುವ ರಚನೆ ಎನ್ನುವ ಸಿ.ಎನ್ನಾರ್, ಶಾಸನಗಳು, ನಾಣ್ಯಗಳು, ಪತ್ರಗಳು ಇವೆಲ್ಲವೂ ಇತಿಹಾಸದ ಕಚ್ಚಾ ವಸ್ತುಗಳು ಮಾತ್ರ ಎನ್ನುವುದರ ಮೂಲಕ ಭೈರಪ್ಪನವರ ಗ್ರಹಿಕೆಯ ಮಿತಿಗೆ ಕನ್ನಡಿ ಹಿಡಿದಿದ್ದಾರೆ.
ಈಗಾಗಲೇ ಅತ್ಯಂತ ಜನಪ್ರಿಯ ವೈಚಾರಿಕ ಕೃತಿಯಾಗಿ ಹಲವಾರು ಮುದ್ರಣಗಳನ್ನು ಕಂಡಿರುವ ಕೆ.ಎಸ್.ಭಗವಾನರ್ “ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ” ಕೃತಿಯಲ್ಲಿ ಶಂಕರಾಚಾರ್ಯರಿಂದ ಹಾಗೂ ಅವರ ಗೂಂಡಾಗಿರಿ ವರ್ತನೆಯಿಂದ ನಾಗಾರ್ಜುನ ಕೊಂಡದ ಬೌದ್ಧ ದೇಗುಲ” ಧ್ವಂಸವಾಯಿತು ಎಂಬ ವಿವರಣೆಯ ಮೂಲವನ್ನು ಶೋಧಿಸಿದಾಗ, ಲಾಂಗ್ ಹರ್ಸ್ಟ್ ಎಂಬುವನ ಕೃತಿಯಿಂದ ಆಯ್ದ ಭಾಗ ಎಂಬುದು ತಿಳಿಯುತ್ತದೆ. ಮೂಲ ಲೇಖಕ ಇಂಗ್ಲೀಷ್ ಭಾಷೆಯಲ್ಲಿ ದಾಖಲಿಸಿರುವ ಪದಗಳಿವು. “Local tradition relates that the great Hindu philosopher and teacher Shankaracharya of medival times came to Nagarjunakonda with a host of followers and destroyed the monuments. Be this as at may” ಎಂದು ದಾಖಲಿಸಿರುವ ಕೃತಿಯಲ್ಲಿ ಲೇಖಕ ಇದು ಹೇಗಾದರೂ ಇರಲಿ ಎಂಬ ಕೊನೆಯ ಶಬ್ದದ ಮೂಲಕ ಕಥೆಯ ಖಚಿತತೆಗೆ ಯಾವುದೇ ಮಹತ್ವ ನೀಡಿಲ್ಲ. ಏಕೆಂದರೆ, ಅದು ಐತಿಹ್ಯವಾಗಿ ಅಥವಾ ದಂತ ಕಥೆಯಂತೆ ಲೇಖಕ ಈ ಮಾತುಗಳನ್ನು ದಾಖಲಿಸಿದ್ದಾನೆ. ಬಹು ಮುಖ್ಯವಾಗಿ ಲೇಖಕ ಇತಿಹಾಸಕಾರನಲ್ಲ, ಈಸ್ಟ್ ಇಂಡಿಯ ಕಂಪನಿಯ ಒಬ್ಬ ಸರ್ವೆಯರ್ ಎಂಬುದು ಸಹ ಮುಖ್ಯ.
ಶಂಕರಾಚಾರ್ಯ ಓರ್ವ ಪ್ರಬಲ ಹಿಂದೂ ಧರ್ಮದ ಪ್ರತಿಪಾದಕರಾಗಿದ್ದ ಸನ್ಯಾಸಿ. ಇಂತಹ ವ್ಯಕ್ತಿಯ ಕೈಯಲ್ಲಿ ಯಾವುದೇ ಆಯುಧ ಅಥವಾ ಸೈನ್ಯ ಇಲ್ಲದಿರುವಾಗ ನಾಗಾರ್ಜುನ ಕೊಂಡದ ಧ್ವಂಸ ಕುರಿತಂತೆ ಇರುವ ಊಹಾಪೋಹಗಳನ್ನು ಸತ್ಯವೆಂದು ದಾಖಲಿಸುವುದು ಎಷ್ಟರ ಮಟ್ಟಿಗೆ ಔಚಿತ್ಯ ಎಂಬ ಮೌಲಿಕ ಪ್ರಶ್ನೆಯನ್ನು ಎತ್ತುವುದರ ಮೂಲಕ ಹೊಸ ಹುಡುಕಾಟಗಳಿಗೆ ಅನುವು ಮಾಡಿಕೊಟ್ಟಿದ್ದಾರೆ. ಇದೇ ರೀತಿ ಡಾ.ಎಂ. ಚಿದಾನಂದಮೂರ್ತಿಯವರು ಕರ್ನಾಟಕದ ಇತಿಹಾಸದ ಬಗ್ಗೆ ಭಾವೋದ್ರೇಕದಿಂದ ಮಾತನಾಡುತ್ತಾ. “ ಅರ್ಧ ಮಹಾರಾಷ್ಟ್ರ ಕರ್ನಾಟಕದ ಭಾಗವಾಗಿತ್ತು” ಎಂಬ ಮಾತನ್ನು ಎತ್ತಿಕೊಂಡಿರುವ ಸಿಎನ್ನಾರ್ ರವರು “ ಬೆಂಗಳೂರು ಸೇರಿದಂತೆ ಅರ್ಧ ಕರ್ನಾಟಕ ಮರಾಠರ ಆಡಳಿತದ ಭಾಗವಾಗಿತ್ತು ಎಂದು ಅರ್ಥಪೂರ್ಣವಾಗಿ ವ್ಯಾಖ್ಯಾನಿಸುವುದರ ಮೂಲಕ ತಿರುಗೇಟು ನೀಡಿದ್ದಾರೆ.
ಒಟ್ಟಾರೆ ತಮ್ಮ ಅರ್ಧ ಶತಮಾನದ ಓದು ಮತ್ತು ಗ್ರಹಿಕೆಯ ಅನುಭವವನ್ನು ಧಾರೆಯೆರೆಯುವುದರ ಮೂಲಕ ಈ ಎರಡು ಕೃತಿಗಳಲ್ಲಿ ಸಿಎನ್ನಾರ್ ಅಡಕಗೊಳಿಸಿರುವ ಲೇಖನಗಳು ಕನ್ನಡದ ಬೌದ್ಧಿಕ ಪ್ರಜ್ಞೆಯನ್ನು ವಿಸ್ತರಿಸುವಲ್ಲಿ ಸಹಕಾರಿಯಾಗಿವೆ ಎಂದರೆ ಅದು ಅತಿಶಯದ ಮಾತಾಗಲಾರದು.





ತುಂಬಾ ಆಪ್ತವಾಗಿ, ದೀರ್ಘವಾಗಿ ಮತ್ತು ಆಳವಾಗಿ ನನ್ನ ಎರಡು ಕೃತಿಗಳನ್ನು ಡಾ. ಜಗದೀಶ್ ಕೊಪ್ಪ ಅವರು ವಿಶ್ಲೇಷಿಸಿದ್ದಾರೆ; ಆ ಲೇಖನವನ್ನು ತುಂಬಾ ಪ್ರೀತಿಯಿಂದ ಹಿಂದಿನ ಭಾವಚಿತ್ರಗಳ ಸಮೇತ ತಮ್ಮ ಬ್ಲಾಗಿನಲ್ಲಿ ಪ್ರಿಯ ಸಂಧ್ಯಾ ರಾಣಿ ಅವರು ಯೋಜಿಸಿದ್ದಾರೆ. ಇವರಿಬ್ಬರಿಗೂ ಹೃದಯಪೂರ್ವಕ ಕೃತಜ್ಞತೆಗಳು. ಸಿ. ಎನ್. ರಾಮಚಂದ್ರನ್
cnr kannada sandarbadalli aparupada vimarshakaragirudaradara hindina alavada vidvattina jatege avra kachitavada janapara drustikonavu adannu avaru aste nirbitiyinda samarthavagi mandisuva vidanavu kaaranavagide.avra krutigalannu samarthavagi parichayisiruva nimage abinandanegalu. bashantara pathamaduva sahityacharirtreyannu ksalisuva nannatavrige avra krutigalu amulya agaravagive.danyavadagalu
ಪ್ರಿಯ ರಘುನಾಥ್ ಅವರಿಗೆ ಧನ್ಯವಾದಗಳು. ರಾಮಚಂದ್ರನ್