ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರುಣ್ ಜೋಳದಕೂಡ್ಲಿಗಿ : ಮೊಹರಂ ಚಿತ್ರಗಳು


ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಮೊಹರಂ ಬಂತೆಂದರೆ ಸಂಭ್ರಮ ಮುಗಿಲು ಮುಟ್ಟುತ್ತದೆ. ಇಡೀ ಊರಿಗೆ ಊರೇ ಸಾಂಸ್ಕೃತಿಕ ಜೀವಂತಿಕೆ ಪಡೆದು ತೆರೆದ ರಂಗಭೂಮಿಯಂತಾಗುತ್ತದೆ. ಇದೀಗ ಆ ಸಂಭ್ರಮಕ್ಕೆ ತೆರೆಬಿದ್ದು ಒಂದೆರಡು ದಿನಗಳಾಗಿವೆ. ಈ ಹಬ್ಬಕ್ಕೆ ದುಡಿಯಲೆಂದು ಕೂಲಿನಾಲಿಗೆ ದೇಶದಾದ್ಯಂತ ಹೋದ ವಲಸಿಗರು ತಮ್ಮ ತಮ್ಮ ಹಳ್ಳಿಗಳಿಗೆ ಮರಳುತ್ತಾರೆ. ಇದೊಂದು ರೀತಿಯಲ್ಲಿ ದಿನಪೂರ್ತಿ ಆಹಾರಕ್ಕಾಗಿ ಅಲೆದು ಸಂಜೆಗೆ ಗುಬ್ಬಿಗಳು ತಮ್ಮ ಗೂಡುಗಳಿಗೆ ಮರಳುವುದನ್ನು ಹೋಲುತ್ತದೆ.ಈ ಹಬ್ಬವನ್ನು ಒಂದು ತಿಂಗಳುಗಳ ಕಾಲ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಸಂದರ್ಭಕ್ಕೆ ಸಾವಿರಾರು ವೇಷದ ಹುಲಿಗಳು ಊರಲೆದು ಘರ್ಜಿಸುತ್ತವೆ. ಆಫ್ರಿಕಾ ಮೂಲದ ಸಿದ್ಧಿ ವೇಷದ ಕಳ್ಳಳ್ಳಿ ಬುವ್ವಾ ಮಸಿಬಳಿದುಕೊಂಡು ತಲೆಗೆ ಉದ್ದನೆ ಪಿರಮಿಡ್ಡಿನಂಥಹ ಬಣ್ಣದಾಳೆ ಅಂಟಿಸಿದ ಮುಂಡಾಸು ಸಿಕ್ಕಿಸಿಕೊಂಡು ಮಕ್ಕಳನ್ನು ರಂಜಿಸುತ್ತಾರೆ.
ಜಾತಿ ಧರ್ಮ ದೇಶಗಳ ಗಡಿಗಳನ್ನು ಮೀರಿದ ಒಂದು ಆಚರಣಲೋಕವಾಗಿ ಕರ್ನಾಟಕದ ಊರಬ್ಬವಾಗಿ ಇದು ಹುಟ್ಟಿಸಿದ ಕಲೆ ಹಾಡುಪರಂಪರೆ ಬಹುರೂಪಿಯಾಗಿದೆ. ಈ ಕುರಿತ ಅಪರೂಪದ ಪುಸ್ತಕವೊಂದನ್ನು ಪ್ರೊ.ರಹಮತ್ ತರೀಕೆರೆ ಅವರು ಅಚ್ಚಿನ ಮನೆಗೆ ಕಳಿಸುವ ತಯಾರಿ ನಡೆಸಿದ್ದಾರೆ. ನಾನು ಮೊಹರಂ ಅಧ್ಯಯನಕ್ಕೆಂದು ಕರ್ನಾಟಕದ ಒಂದಷ್ಟು ಹಳ್ಳಿಗಳ ಸಣ್ಣ ತಿರುಗಾಟ ಮಾಡಿದ್ದೇನೆ. ಅಂತಹ ತಿರುಗಾಟದಲ್ಲಿ ಕಂಡ ತುಂಬಾ ವಿಶಿಷ್ಠವೆನ್ನಿಸಿದ ಒಂದಷ್ಟು ಬಿಡಿ ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತಿದೆ.
ಅಲೆಕುಣಿಯಾಟ
ಮೊಹರಂ ಹಬ್ಬದ ಪ್ರಯುಕ್ತ ಅಲೆಕುಣಿಗೆ ಗುದ್ದಲಿ ಹಾಕಲಾಗುತ್ತದೆ. ಬಹುಪಾಲು ಈ ಕುಣಿಗಳು ತಿರುಗಿದ ಪಿರಮಿಡ್ಡಿನ ಆಕಾರದಲ್ಲಿರುತ್ತವೆ. ಆಗ ಮಕ್ಕಳು ಇದರಲ್ಲಿ ಓಟ ಶುರು ಮಾಡಿಕೊಳ್ಳುತ್ತಾರೆ. ಓಡುವುದು, ಓಡುವವರನ್ನು ಎಳೆದು ಬೀಳಿಸುವುದು, ತಾವೂ ಬಿದ್ದು ಮೈಯೆಲ್ಲಾ ಬೂದಿ ಮಾಡಿಕೊಳ್ಳುವುದು ಹೀಗೆ ತುಂಬಾ ಲವಲವಿಕೆಯಿಂದ ಕೂಡಿರುತ್ತದೆ. ನಾನು ಉಜ್ಜಯನಿಯಲ್ಲಿ ಐದು ಆರನೆ ತರಗತಿ ಓದುವಾಗ, ನಮ್ಮ ಶಾಲೆಯಿಂದ ಸ್ವಲ್ಪ ದೂರವಿದ್ದ ಹೆಣ್ಣುಮಕ್ಕಳ ಶಾಲೆಯ ಎದುರು ಮಸೀದಿಯಿದ್ದ ಕಾರಣ, ಅದರ ಮುಂದೆಯೇ ಅಲೆ ಕುಣಿ ಇರುತ್ತಿತ್ತು. ಈ ಹಬ್ಬ ಮುಗಿಯುವ ತನಕ ಮೇಷ್ಟ್ರು ಇಲ್ಲವೆಂದರೆ ಸಾಕು ನಾವು ಅಲೆಕುಣಿಗೆ ಜಿಗಿದು ತಿರುಗುತ್ತಿದ್ದೆವು. ಹೀಗೆ ತಿರುಗಿ ತಿರುಗಿ ತಲೆ ಸುತ್ತು ಬಂದಾಗ ಸಾರಾಯಿ ಕುಡಿದವರಂತೆ ಓಲಾಡುತ್ತಾ ಗೆಳೆಯರನ್ನು ಚೇಡಿಸುತ್ತಿದ್ದೆವು. ಹೀಗೆ ಅಲೆಕುಣಿಯ ಬಾಲ್ಯದ ನೆನಪುಗಳು ರೋಮಾಂಚನಕಾರಿಯಾಗಿವೆ. ಅಲೆಕುಣಿ ಇರುವ ಊರಿನವರು ಸಹಜವಾಗಿ ಈ ಅದ್ಭುತ ಅನುಭವದಿಂದ ವಂಚಿತರಾಗುವುದು ಕಡಿಮೆಯೆ.
ಅಲೆಕುಣಿಗೆ ಬೆಂಕಿ ಹಾಕಿದಾಗಲೂ ಹುಡುಗರು ದೊಡ್ಡವರು ಈ ಕುಣಿಯನ್ನು ವಾರೆಯಾಗಿ ಸುತ್ತುತ್ತಾರೆ. ಹೀಗೆ ಸುತ್ತಲು ಒಂದು ಬಗೆಯ ಚಾಕಚಕ್ಯತೆ ಬೇಕು. ಎಂದೂ ಸುತ್ತದ ಹೊಸಬರು ಸುತ್ತಲೋದರೆ ಕುಣಿಗೆ ಬೀಳುವ ಅಪಾಯವೂ ಇರುತ್ತದೆ. ಆದರೆ ಅಲೆಕುಣಿ ಸುತ್ತುವ ಕಲೆ ಹಳ್ಳಿಗಳಲ್ಲಿ ಮಕ್ಕಳಿಗೆ ಕರಗತವಾಗಿರುತ್ತದೆ. ಧಗಧಗಿಸುವ ಕೆಂಡದ ಬಿಸಿ ತಾಕುತ್ತಿದ್ದರೂ ಓಟದಲ್ಲಿ ಇದೊಂದು ರೀತಿಯ ಹಿತವೆನಿಸುವ ಶಾಖದಂತೆ ಅನುಭವವಾಗುತ್ತದೆ. ಈ ಅಲೆಕುಣಿ ಇಡೀ ಮೊಹರಂ ಹಬ್ಬದ ಕೇಂದ್ರಬಿಂದುವಿನಂತೆ ಕೆಲಸ ಮಾಡುತ್ತದೆ.
ಬೇಡರ ಕಣ್ಣಪ್ಪನ ವೇಷ
ಬಳ್ಳಾರಿ ಚಿತ್ರದುರ್ಗ ಜಿಲ್ಲೆಗಳಲ್ಲಿ ಬೇಡರಕಣ್ಣಪ್ಪನ ವೇಷ ಹಾಕಲಾಗುತ್ತದೆ. ಈ ವೇಷವು ಆಧಿಮ ಸಂಸ್ಕೃತಿಯೊಂದರ ಬೇಟೆಯ ನೆನಪನ್ನು ತರುತ್ತದೆ. ಈ ವೇಷ ಹಾಕುವವ ಎತ್ತರದ ಅಜಾನುಬಾಹು ವ್ಯಕ್ತಿಯಾಗಿರಬೇಕು. ದೈಹಿಕವಾಗಿ ಬಲಿಷ್ಠವಾಗಿರಬೇಕು. ಅಂತಹ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಥವಾ ಅಂತಹ ಮೈಕಟ್ಟಿರುವ ವ್ಯಕ್ತಿಗೆ ಹಳ್ಳಿಜನ ‘ಲೇ ಅಲೆಹಬ್ಬಕ್ಕ ಬೇಡರ ಕಣ್ಣಪ್ಪನ ವೇಸ ಹಾಕಾಕ ನೀ ಪಾಡು ಐದಿ’ ಎಂದು ಕಿಚಾಯಿಸುವುದೂ ಇದೆ. ಈ ವೇಷಗಾರ ಪೈಲ್ವಾನರ ಹಾಗೆ ಕಸೆ ಕಟ್ಟಿಕೊಂಡದ್ದನ್ನು ಬಿಟ್ಟರೆ ಬರಿ ಮೈಯಲ್ಲಿರುತ್ತಾನೆ. ಉಣ್ಣೆಯಿಂದ ದೊಡ್ಡ ಮೀಸೆಯನ್ನು ಅಂಟಿಸಿಕೊಂಡು ಚಿಕ್ಕ ಮಕ್ಕಳು ಭಯಬೀಳುವಂತಿರುತ್ತದೆ. ತಲೆಗೆ ಉದ್ದ ಕೂದಲನ್ನು ತೋರುವ ಹಾಗೆ ಕತ್ತಾಳೆಯ ಬಿಳಿ ನಾರನ್ನು ಇಳಿಬಿಟ್ಟಿರುತ್ತಾರೆ. ದೊಡ್ಡದೊಂದು ಕೋಲನ್ನು ಹಿಡಿದಿರುತ್ತಾನೆ. ಬೆನ್ನಿಗೆ ಬಟ್ಟೆಯಲ್ಲಿ ಮಾಡಿದ ಮಗುವನ್ನು ಕಟ್ಟಿಕೊಂಡಿರುತ್ತಾನೆ. ಕೈಯಲ್ಲಿ ನಿಂಬೆ ಹಣ್ಣು ಸಿಕ್ಕಿಸಿಕೊಂಡ ಕತ್ತಿ ಇರುತ್ತದೆ. ಈ ಬೇಡರ ಕಣ್ಣಪ್ಪನ ವೇಷದ ಜತೆ ಇರುವ ಹುಲಿ ವೇಷಗಳನ್ನು ಇರಿಯಲು ಹೋಗುವುದು ಈ ಹುಲಿಗಳು ವಿಪರೀತ ಭಯಗೊಂಡಂತೆ ನಟಿಸುತ್ತಾ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು ನಡೆಯುತ್ತದೆ. ಈ ಘಟನೆ ತುಂಬಾ ನಾಟಕೀಯವಾಗಿ ಅಭಿನಯಗೊಳ್ಳುತ್ತದೆ. ಒಂದೊಂದು ಓಣಿಯಲ್ಲಿಯೂ ಇಂತಹದ್ದೊಂದು ತಾತ್ಕಾಲಿಕ ರಂಗಭೂಮಿ ಚಿಗುರೊಡೆಯುತ್ತದೆ.
ಈ ಬೇಡರ ಕಣ್ಣಪ್ಪವ ವೇಷದ ಬಗ್ಗೆ ಜನರು ಕಟ್ಟಿಕೊಂಡ ಕಥೆ ಕುತೂಹಲಕಾರಿಯಾಗಿದೆ. ಕರ್ಬಲಾದಲ್ಲಿ ಯುದ್ಧ ನಡೆದು ಹಸೇನ್ ಹುಸೇನ ಕಡೆಗಿನ ಮಗುವೊಂದು ಯಜೀದನ ಕಡೆಯ ಸೈನಿಕರಿಂದ ತಪ್ಪಿಸಿಕೊಂಡು ಕಾಡಲ್ಲಿ ಓಡಿ ಬರುತ್ತದೆಯಂತೆ, ಆಗ ಕಾಡಲ್ಲಿ ಬೇಟೆಯಾಡಿಕೊಂಡಿರುವ ಬೇಡರ ಕಣ್ಣಪ್ಪನು ಆ ಮಗುವನ್ನು ಎತ್ತಿಕೊಂಡು ನೀರು ಕುಡಿಸುತ್ತಾನಂತೆ, ಅಷ್ಟೊತ್ತಿಗೆ ಬೆನ್ನಟ್ಟಿಕೊಂಡು ಬಂದ ಯಜೀದನ ಸೈನಿಕರು ಮಗುವನ್ನು ಬಿಟ್ಟುಕೊಡು ಎಂದು ಕೇಳುತ್ತಾರೆ. ಇದನ್ನರಿತ ಬೇಡರ ಕಣ್ಣಪ್ಪ ಮಗುವನ್ನು ಕೊಡಲು ನಿರಾಕರಿಸಿ, ಈ ಮಗು ನನ್ನ ಆಶ್ರಯದಲ್ಲಿದೆ ಹಾಗಾಗಿ ಈ ಮಗುವನ್ನು ರಕ್ಷಿಸಬೇಕಾದುದು ನನ್ನ ಧರ್ಮ. ನಾನು ನಿಮ್ಮೊಂದಿಗೆ ಯುದ್ಧ ಮಾಡುತ್ತೇನೆಂದು ಹೇಳುತ್ತಾನೆ. ಆಗ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಅವರೊಂದಿಗೆ ಕಾದಾಡಿ ಮಗುವನ್ನು ರಕ್ಷಿಸಿದನಂತೆ.
ಕರ್ಬಲಾದೊಂದಿಗೆ ಬಳ್ಳಾರಿ ದುರ್ಗದ ಹಳ್ಳಿಯೊಂದರ ಸಂಬಂಧ ಬೆಸೆಯುವ ಈ ಕಥನವನ್ನು ಜನರು ಕಟ್ಟಿಕೊಂಡು ಪೀರಲಬ್ಬವನ್ನು ತಮ್ಮ ಊರಬ್ಬವನ್ನಾಗಿಸಿಕೊಂಡಿದ್ದಾರೆ. ಅಂತೆಯೇ ಈ ಹಬ್ಬದ ಜತೆ ಒಂದು ಬಗೆಯ ಸಮುದಾಯಿಕ ಸಂಬಂಧವನ್ನು ಕಟ್ಟಿಕೊಳ್ಳುತ್ತಾರೆ. ಬಳ್ಳಾರಿ ಚಿತ್ರದುರ್ಗದ ಭಾಗದ ಈ ವೇಷಕ್ಕೂ ಈ ಭಾಗದಲ್ಲಿ ಬೇಡ ಸಮುದಾಯ ಹೆಚ್ಚಿರುವುದಕ್ಕೂ, ಅದು ಮೊಹರಂನ್ನು ಆಚರಿಸುವುದಕ್ಕೂ ಒಂದಕ್ಕೊಂದು ಸಂಬಂಧವಿದೆ. ಇದೆಲ್ಲವನ್ನೂ ಈಗಿನ ಬೇಡರಕಣ್ಣಪ್ಪನ ವೇಷ, ಕುಣಿತ ಅಡಗಿಸಿಕೊಂಡಂತಿದೆ. ಅದು ಪ್ರತಿವರ್ಷವೂ ಈ ನೆನಪನ್ನು ಮತ್ತೆ ಜೀವಂತಗೊಳಿಸುತ್ತದೆ.
ಲಂಕಾ ದಹನ
ಕರ್ನಾಟಕದಲ್ಲಿಯೇ ವಿಶಿಷ್ಟವಾದೊಂದು ಮೊಹರಂ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಆಂದ್ರದ ಗಡಿಗೆ ಹೊಂದಿಕೊಂಡ ಆಯನೂರು ಎಂಬ ಪುಟ್ಟ ಹಳ್ಳಿಯಲ್ಲಿ ನಡೆಯುತ್ತದೆ. ಅಲ್ಲಿಗೆ ಹಚ್ಚೊಳ್ಳಿಯಿಂದ ಹೋದರೆ ಈಗಲೂ ನದಿ ದಾಟಿಯೆ ಹೋಗಬೇಕು. ಆ ಊರಿನಲ್ಲಿ ನಾನು ಎರಡು ದಿನ ಮೊಹರಂ ನೋಡಲೆಂದು ಉಳಿದಿದ್ದೆ. ಇದೊಂದು ವಿಶಿಷ್ಟವಾದ ಅನುಭವ.
ಕತ್ತಲ ರಾತ್ರಿಯ ದಿನ ಮಸೀದಿಯ ಮುಂದೆ ಊರ ಬಯಲಿಗೆ ಅರ್ಧ ಎಕರೆಯಷ್ಟು ಜಾಗದಲ್ಲಿ ಸುತ್ತಲೂ ಕಂಬಗಳನ್ನು ನಿಲ್ಲಿಸಿ ಮಧ್ಯೆ ಯಾರೂ ನುಸುಳದಂತೆ ಅಡ್ಡಪಟ್ಟಿ ಕಟ್ಟುತ್ತಾರೆ. ಇದೊಂದು ಯುದ್ಧಭೂಮಿಯ ಕಲ್ಪನೆ. ಸುಮಾರು ಹದಿನೈದು ಅಡಿ ಎತ್ತರದ ರಾಮ, ಲಕ್ಷ್ಮಣ, ರಾವಣ, ಸೈನಿಕರ ಪ್ರತಿಕೃತಿಗಳನ್ನು ಮಾಡಿ ಒಂದೊಂದು ಕಂಬಗಳಿಗೆ ಕಟ್ಟಿರುತ್ತಾರೆ. ಪಾರಂಪರಿಕವಾಗಿ ಈ ಊರಿನ ಕುಂಬಾರರು ಮದ್ದನ್ನು ತಯಾರಿಸುತ್ತಾರೆ. ಮಣ್ಣಿನಲ್ಲಿ ಮದ್ದಿನ ಕೊಳವೆಗಳನ್ನು ಮಾಡಿ ಅದರಲ್ಲಿ ಮದ್ದನ್ನು ತುಂಬಿರುತ್ತಾರೆ. ಈ ಮದ್ದಿನ ಕೊಳವೆಯನ್ನು ಲಂಕೆಯ ಕಂಬಗಳಿಗೆ ಕಟ್ಟಿದ ರಾವಣ, ರಾಮ, ಲಕ್ಷ್ಮಣರ ಬುಡಕ್ಕೆ ಕಟ್ಟಿರುತ್ತಾರೆ. ಬೆಳಗಿನ ಜಾವ ಪೀರಲ ದೇವರು ಹೊರಟಾಗ ಲಂಕೆಯ ರಣರಂಗವನ್ನು ಪ್ರವೇಶಿಸಿ ಒಂದೊಂದು ಪ್ರತಿಕೃತಿಯ ಬುಡದ ಮದ್ದಿಗೆ ಕೊಳ್ಳಿ ಇಕ್ಕುವ ಮೂಲಕ ಮುಂದೆ ಸಾಗುತ್ತದೆ. ಆಗ ಒಬ್ಬೊಬ್ಬರೇ ಮದ್ದು ಸಿಡಿದು ನಾಶವಾಗುತ್ತಾರೆ. ಈ ರಣರಂಗದಲ್ಲಿ ಎಲ್ಲರೂ ನಾಶವಾದ ಮೇಲೆ ದೇವರು ಊರಾಡಿ ಗುಡಿ ತುಂಬುತ್ತದೆ.
ನನ್ನ ತಿರುಗಾಟದಲ್ಲಿ ಎಲ್ಲೂ ಕಾಣಸಿಗದ ಒಂದು ವಿಶಿಷ್ಟ ಆಚರಣೆಯಿದು. ಆದರೆ ಈ ಆಚರಣೆ ಆಂದ್ರದ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಾಣುವಂಥದ್ದು. ಬಹುಶಃ ಆಂದ್ರದ ಗಡಿಯ ಹಳ್ಳಿಗಳ ಪ್ರಭಾವದಿಂದ ಆಯನೂರಿಗೆ ಈ ಆಚರಣೆ ಬಂದಿರಲಿಕ್ಕೆ ಸಾಧ್ಯವಿದೆ. ಕರ್ಬಲಾದಲ್ಲಿ ನಡೆಯುವುದು ಒಂದು ಧರ್ಮ ಯುದ್ಧ. ಹಾಗಾಗಿ ರಾಮಾಯಣ ಮಹಭಾರತದಲ್ಲಿ ನಡೆವ ಧರ್ಮ ಯುದ್ಧಗಳಿಗೆ ಈ ಸಮೀಕರಣವಿದ್ದಂತಿದೆ. ಈ ಕಾರಣಕ್ಕೆ ರಿವಾಯ್ತ ಹಾಡುಗಳಲ್ಲಿ ರಾಮಾಯಣ ಮಹಾಭಾರತದ ಪಾತ್ರಗಳನ್ನು ತರುತ್ತಾರೆ. ಅವರನ್ನು ಹಸೇನ್ ಹುಸೇನರ ಜತೆ ಸಮೀಕರಿಸುತ್ತಾರೆ. ಇದೇ ಹೋಲಿಕೆ ಈ ಆಚರಣೆಯಲ್ಲಿ ಇರಲಿಕ್ಕೆ ಸಾಕು. ಈ ಬಗ್ಗೆ ಇನ್ನಷ್ಟು ಭಿನ್ನವಾಗಿ ಯೋಚಿಸಲು ಅವಕಾಶವಿದೆ.
ಅಲಿಪುರದಲ್ಲಿ ಕರ್ಬಲಾ ಪುನಸೃಷ್ಟಿ

ಕರ್ಬಲಾ ಯುದ್ಧದ ಪ್ರತಿಕೃತಿಯನ್ನು ನೀವು ನೋಡಬೇಕಿದ್ದರೆ, ಗೌರಿಬಿದನೂರು ಪಕ್ಕದ ಅಲಿಪುರಕ್ಕೆ ಹೋಗಬೇಕು. ಊರ ಹೊರಗೆ ಸುಮಾರು ಇಪ್ಪತ್ತು ಎಕರೆ ಆವರಣದಲ್ಲಿ ಕರಬಲಾ ಮೈದಾನವನ್ನು ನಿರ್ಮಿಸಲಾಗಿದೆ. ಅಲ್ಲೊಂದು ಕರ್ಬಲಾ ರಣರಂಗವನ್ನು ಸೃಷ್ಟಿಸಲಾಗುತ್ತದೆ. ಒಂಟೆ, ಕುದುರೆಗಳು ರಕ್ತವನ್ನು ಮೆತ್ತಿಕೊಂಡಿರುತ್ತವೆ. ಹಸೇನ ಹುಸೇನರ ಗುಡಿಸಲುಗಳನ್ನು ನಿರ್ಮಿಸಿರುತ್ತಾರೆ. ರಕ್ತಸಿಕ್ತವಾದ ರುಂಡ ಮುಂಡಗಳ ಕಳೇಬರಗಳು, ರಕ್ತ ಸಿಕ್ತವಾದ ಬಟ್ಟೆ ರುಮಾಲುಗಳನ್ನು ಇಟ್ಟಿರುತ್ತಾರೆ. ಇದು ಅರಬಸ್ತಾನದ ಕರ್ಬಲಾವನ್ನು ನೆನಪಿಸುತ್ತದೆ. ಜನರು ಇದರ ಸುತ್ತಲೂ ಸುತ್ತಿಕೊಂಡು ನೋಡುತ್ತಾರೆ. ಶೋಕ ಗೀತೆಗಳು ಮಂದವಾಗಿ ಹಿನ್ನೆಲೆ ಸಂಗೀತದಂತೆ ಕೇಳುತ್ತಿರುತ್ತದೆ.
ಕೃತಕವಾಗಿ ಯಜೀದನ ಸೈನ್ಯವನ್ನು ಮಾಡಲಾಗುತ್ತದೆ. ಅವರು ಮುಖಕ್ಕೆ ಕಪ್ಪು ಬಟ್ಟೆಯನ್ನು ಕಟ್ಟಿಕೊಂಡು ಒಂಟೆಯ ಮೇಲೆ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಈ ಯಜೀದರು ಹಸೇನ್ ಹುಸೇನರ ಗುಡಿಸಲುಗಳಿಗೆ ಬೆಂಕಿ ಹಾಕುವ ಅಣಕನ್ನು ಮಾಡಲಾಗುತ್ತದೆ. ಹೀಗೆ ಯಜೀದರಾಗುವುದು ಸಹ ಹರಕೆಯ ಭಾಗವಾಗಿದೆ.
ಸರಪಣಿ ಬಿಗಿದುಕೊಂಡು ಯುದ್ಧ ಕೈದಿಗಳಾಗುವ ಆಚರಣೆಯೊಂದಿದೆ. ನೂರಾರು ಜನ ಯುದ್ಧ ಕೈದಿಗಳಾಗಿ, ಕೈದಿಗಳಂತೆಯೇ ನೋವಾದವರಂತೆ ಬಗ್ಗಿಕೊಂಡು ನಡೆಯುವುದು, ಮುಲುಕುವುದು ಮುಂತಾಗಿ ಅಣಕನ್ನು ಮಾಡುತ್ತಾರೆ. ಇದಕ್ಕೆ ವಯೋಮಾನದ ಅಂತರವಿಲ್ಲ. ಪುಟ್ಟ ಪುಟ್ಟ ಮಕ್ಕಳೂ ಸಹ ಯುದ್ದ ಕೈದಿಗಳಾಗುವ ಆಚರಣೆ ಇದೆ. ಹೆಣ್ಣು ಮಕ್ಕಳು ಯುದ್ಧ ಕೈದಿಗಳಾಗುವುದಿಲ್ಲ.
ಚಿಕ್ಕಜಲ್ದಿ
ಮೊಹರಂ ಕಡೆಯ ದಿನದ ನಂತರದ ವಾರ ಚಿಕ್ಕ ಮೊಹರಂ ಎನ್ನುವ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ಚೋಟಾ ಮೊಹರಂ ಅಂತಲೂ, ಚಿಕ್ಕ ಜಲದಿ ಅಂತಲೂ ಕರೆಯುತ್ತಾರೆ. ಇದು ಮಕ್ಕಳದೇ ಮೊಹರಂ. ಮಕ್ಕಳೇ ದೇವರು ಕೂರಿಸಿ, ಮಕ್ಕಳೇ ಪೂಜಿಸಿ, ಕೊನೆಗೆ ಅವರೇ ದೇವರನ್ನು ನೀರಿಗೆ ಹಾಕುವಂತಹ ಆಚರಣೆ. ನಿಜಕ್ಕೂ ಮಕ್ಕಳು ಈ ಹಬ್ಬದಲ್ಲಿ ಅತ್ಯಂತ ಖುಷಿ ಮತ್ತು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.
ಮೊಹರಂ ಹಬ್ಬದ ಲಕ್ಷಣಗಳು ಮಕ್ಕಳು ಸಹಜವಾಗಿ ಭಾಗವಹಿಸುವಂತೆ ಮಾಡುತ್ತವೆ. ಅದಕ್ಕೆ ಕಾಕತಾಳೀಯವಾಗಿ ಚಾರಿತ್ರಿಕ ಸಂಗತಿಗಳು ಇಲ್ಲದಿಲ್ಲ. ಔರಂಗಜೇಬನ ಬಗ್ಗೆ ಇಂಥದ್ದೊಂದು ಐತಿಹ್ಯವಿದೆ. ಔರಂಗಜೇಬನು ಶೋಕಾಚರಣೆಯ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ಬೇಡ ಎಂದು ನಿಷೇದಾಜ್ಞೆ ಹೊರಡಿಸುತ್ತಾನ. ಇದಾದ ಒಂದು ವಾರದ ನಂತರ ಔರಂಗಜೇಬನು ರಾಜ ಪರಿವಾರದ ಜತೆ ಹೊರಗೆ ಹೊರಟಾಗ, ಮೈದಾನದಲ್ಲಿ ಮಕ್ಕಳು ಆಟವಾಡುತ್ತಿದ್ದರಂತೆ, ಆ ಚಿತ್ರ ರಾಜನಿಗೆ ರಣರಂಗದಂತೆಯೂ, ಮಕ್ಕಳು ಆಟವಾಡುವುದು ಯುದ್ಧದ ಸನ್ನಿವೇಷದಂತೆಯೂ, ರಕ್ತ ಚೆಲ್ಲಾಡಿ ರುಂಡ ಮುಂಡಗಳು ಬಿದ್ದಿರುವಂತೆ ಕಂಡು ಬೆಕ್ಕಸ ಬೆರಗಾದನಂತೆ.

ಔರಂಗಜೇಬನು ಆಶ್ಚರ್ಯವಾಗಿ ‘ಇದೇನು ನನಗೆ ಗೊತ್ತಿಲ್ಲದೆ ಯುದ್ಧವೊಂದು ನಡೆಯುತ್ತಿದೆ’ಎಂದು ಮಂತ್ರಿಗಳನ್ನು ಕೇಳಿದ. ಮಂತ್ರಿಗಳಿಗೆ ಆಟದ ಮೈದಾನದಲ್ಲಿ ಮಕ್ಕಳು ಲಗೋರಿ ಆಡುವುದು ಮಾತ್ರ ಕಾಣುತ್ತಿತ್ತು. ಆಗ ಅವರುಗಳು ಅಚ್ಚರಿಗೊಂಡು ‘ಪ್ರಭುಗಳೆ ನಮಗೆ ಮೈದಾನದಲ್ಲಿ ಮಕ್ಕಳು ಲಗೋರಿ ಆಡುವುದು ಮಾತ್ರ ಕಾಣಿಸುತ್ತಿದೆ. ಇದೇನು ನೀವು ಹೀಗೆ ಹೇಳುತ್ತೀರಿ’ ಎನ್ನುತ್ತಾರೆ. ಆಗ ರಾಜನು ವಿಚಲಿತವಾಗಿ ಅರಮನೆಗೆ ಹೋಗಿ ಮಂತ್ರಿಗಳನ್ನು ಕರೆಸಿ, ಹೀಗೆ ಕಾಣಲು ಕಾರಣವೇನು ಎಂದು ಕೇಳಿದಾಗ, ಇದು ಮೊಹರಂ ಹಬ್ಬವನ್ನು ನಿಷೇದಿಸಿದ್ದರ ಪರಿಣಾಮವಿರಬೇಕು ಎಂದು ಅಭಿಪ್ರಾಯ ಪಡುತ್ತಾರೆ.
ಇದನ್ನರಿತ ಔರಂಗಜೇಬನು ಮತ್ತೆ ಮೊಹರಂ ಆಚರಿಸುವಂತೆ ಆಜ್ಞೆ ಹೊರಡಿಸಲು ಸಿದ್ದವಾಗುತ್ತಾನೆ. ಆಗ ಮಂತ್ರಿಗಳು ಪ್ರಭುಗಳೆ ಮೊಹರಂನ್ನು ಯಾವಾಗೆಂದರೆ ಆವಾಗ ಮಾಡಲು ಬರುವುದಿಲ್ಲ, ಈಗ ಮೊಹರಂ ಹಬ್ಬವನ್ನು ಮಾಡಲು ಆಗದು, ಬೇಕಾದರೆ ಮಕ್ಕಳಿಗಾಗಿ ಚಿಕ್ಕ ಮೊಹರಂ ಎಂದು ಮಾಡಬಹುದು ಎಂದು ಸಲಹೆ ನೀಡುತ್ತಾರೆ. ರಾಜ ಹಾಗೆಯೆ ಆಗಲಿ ಎಂದನಂತೆ. ಅಂದಿನಿಂದ ರಾಜಾಜ್ಞೆಯಂತೆ ಮಕ್ಕಳ ಮೊಹರಂ ಚಾಲ್ತಿಗೆ ಬಂತಂತೆ. ಇದೊಂದು ಐತಿಹ್ಯವಷ್ಟೆ. ಆದರೆ ಇದು ಮಕ್ಕಳ ಮೊಹರಂಗೆ ಒಂದು ಚಾರಿತ್ರಿಕ ಘಟನೆಯನ್ನು ಜೋಡಿಸುತ್ತದೆ. ಕರ್ನಾಟಕದ ಬಹುಭಾಗಗಳಲ್ಲಿ ಈಗಲೂ ಮಕ್ಕಳ ಮೊಹರಂ ಆಚರಣೆಯಲ್ಲಿದೆ.
ಕರಡಿ ಫಕೀರ
ಮನುಷ್ಯರು ಹುಲಿ, ಕರಡಿ ವೇಷಹಾಕುವುದು ಸಾಮಾನ್ಯ. ಆದರೆ ನಿಜವಾದ ಕರಡಿಯೇ ಪೀರಲ ದೇವರ ಲಾಡಿ ಕಟ್ಟಿಸಿಕೊಂಡು ಫಕೀರನಾಗುವ ವಿಶಿಷ್ಟ ಆಚರಣೆಯೊಂದು ಕೊಪ್ಪಳ ತಾಲೂಕಿನ ಮಂಗಳಾಪುರ, ಗಂಗಾವತಿ ತಾಲೂಕಿನ ಹುಲಿಹೈದರ ಮುಂತಾದ ಗ್ರಾಮಗಳಲ್ಲಿದೆ. ಅರೆ ಹೇಗೆ ಸಾಧ್ಯ? ಕಾಡಿನಲ್ಲಿರುವ ಕರಡಿ ನಾಡಿಗೆ ಬಂದು ಮೊಹರಂ ಹಬ್ಬವನ್ನು ಮಾಡುತ್ತದೆಯೇ? ಎನ್ನುವ ಪ್ರಶ್ನೆಯೊಂದು ನಿಮ್ಮ ತಲೆಯಲ್ಲಿ ಸುಳಿದು ಹೋಗಿರಬೇಕು.
ಕರ್ನಾಟಕದಲ್ಲಿ ಹಾವು, ಕೋಲೆ ಬಸವ, ಕೋತಿ, ಕರಡಿ ಆಡಿಸುವ ಅಲೆಮಾರಿ ಸಮುದಾಯಗಳಿವೆ. ಇದರಲ್ಲಿ ಕರಡಿ ಆಡಿಸುವ ಖಲಂದರ್ ಸಮುದಾಯವೂ ಒಂದು. ಇವರನ್ನು ಪ್ರಾದೇಶಿಕವಾಗಿ ಜನರು ಕರಡಿ ಖಲಂದರರೆಂದೇ ಕರೆಯುತ್ತಾರೆ. ಇವರು ಹಿಂದೂ ಮತ್ತು ಮುಸ್ಲಿಂ ಲಕ್ಷಣಗಳಿರುವ ಒಂದು ಸಂಕರ ಸಮುದಾಯ. ಈ ಸಮುದಾಯ ಮೊಹರಂ ನಲ್ಲಿ ಭಾಗವಹಿಸುತ್ತದೆ. ಕರಡಿಗೆ ಅನಾರೋಗ್ಯವಾದಾಗ ಪೀರಲ ದೇವರಿಗೆ ನಮ್ಮ ಕರಡಿಯನ್ನು ಗುಣಪಡಿಸು ಫಕೀರನನ್ನಾಗಿ ಮಾಡುತ್ತೇವೆಂದು ಹರಕೆ ಕಟ್ಟಿರುತ್ತಾರೆ. ಹಾಗಾಗಿ ಅಲೆಹಬ್ಬಕ್ಕೆ ಕರಡಿಗಳು ಫಕೀರರಾಗುತ್ತವೆ. ಈ ಸಂದರ್ಭದಲ್ಲಿ ಕರಡಿಗಳು ಸುತ್ತಮುತ್ತಣ ಊರಾಡುತ್ತವೆ. ಹಲವು ಕರಡಿಗಳಿಗೆ ಖಲಂದರರು ಪೀರಲ ದೇವರ ಹೆಸರನ್ನೇ ನಾಮಕರಣ ಮಾಡಿರುತ್ತಾರೆ.
ಈಚೆಗೆ ಅರಣ್ಯ ಇಲಾಖೆಯವರು ಬಹುಪಾಲು ಕರಡಿಗಳನ್ನು ಖಲಂದರ್ ಸಮುದಾಯದಿಂದ ಕಸಿದುಕೊಂಡಿದ್ದಾರೆ. ಹಾಗಾಗಿ ಕರಡಿಯ ಜತೆಗೇ ಅವಿನಾಭಾವ ಸಂಬಂಧ ಬೆಸೆದುಕೊಂಡು ಬದುಕಿನ ಈ ಸಮುದಾಯ ಕರಡಿಗಳಿಲ್ಲದೆ ಅನಾಥವಾದಂತಾಗಿವೆ. ಅಂತೆಯೇ ಮನುಷ್ಯರೊಟ್ಟಿಗಿನ ಬದುಕಿಗೆ ಹೊಂದಿಕೊಂಡ ಈ ಕರಡಿಗಳು ಕಾಡಿನ ಬದುಕಿಗೆ ಒಗ್ಗಿಕೊಳ್ಳದೆ ಎಷ್ಟೋ ಕರಡಿಗಳು ತಮ್ಮ ಸಾಕುದಾರರ ನೆನಪಲ್ಲಿ ಕೊರಗಿ ಸಾವನ್ನಪ್ಪಿವೆ. ಇದು ಕಾಡು-ನಾಡಿನ ಬದುಕಿನ ವೈರುಧ್ಯಗಳಲ್ಲಿ ಅಲೆಮಾರಿ ಸಮುದಾಯಗಳು ಎದುರಿಸುವ ಬಿಕ್ಕಟ್ಟಿನ ಒಂದು ಸ್ವರೂಪವನ್ನು ತೋರುತ್ತಿದೆ.
ಕೊಟ್ಟೂರಿನ ಕಳ್ಳದೇವರು
ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ಉಜ್ಜಿನಿ ಸರ್ಕಲ್ನ ಮೂಲೆಯಲ್ಲಿ ಒಂದು ಮೊಹರಂ ದೇವರಿದೆ. ಹಸೇನ್ ಹುಸೇನ್ ಪೀರಲ ದೇವ್ರು ಮುಂತಾಗಿ ಈ ದೇವರನ್ನು ಕರೆಯುತ್ತಾರೆ. ಆದರೆ ಈ ಬಗ್ಗೆ ವಿಚಾರಿಸಿದಾಗ ಕುತೂಹಲಕಾರಿ ಸಂಗತಿಯೊಂದು ತಿಳಿಯಿತು. ಅದೇನೆಂದರೆ ಆ ದೇವರಿಗೆ ಇರುವ ಮತ್ತೊಂದು ಹೆಸರು ‘ಕಳ್ಳದೇವರು’ ಎನ್ನುವುದು. ಅರೆ ಪೀರಲ ದೇವರಿಗೆ ಕಳ್ಳದೇವರು ಎಂದು ಯಾಕಾಗಿ ಕರೆಯುತ್ತಾರೆಂದು ಕುತೂಹಲದಿಂದ ಕೆಲವರಲ್ಲಿ ವಿಚಾರಿಸಲಾಗಿ ಒಂದು ಅಂಶ ತಿಳಿಯಿತು.
ಅದೇನೆಂದರೆ ಯುದ್ಧ ನಡೆದಾಗ ಈ ಮಸೀದಿಯ ಹುಸೇನ್ ರಣರಂಗದಲ್ಲಿ ಹೋರಾಡಿ ಬಲಿಯಾಗದೆ ಪ್ರಾಣಭಯದಿಂದ ತಪ್ಪಿಸಿಕೊಳ್ಳುವ ದೇವರಂತೆ. ಹಾಗಾಗಿ ಇಲ್ಲಿನ ಮೊಹರಂ ಆಚರಣೆಯಲ್ಲಿ ದೇವರು ನೀರಿಗೆ ಬೀಳುವ ಕೊನೆಯ ದಿನ ಈ ದೇವರು ನೀರಿಗೆ ಬೀಳದೆ ತಪ್ಪಿಸಿಕೊಂಡು ತನ್ನ ಮಸೀದಿಗೆ ಓಡೋಡಿ ಬಂದು ಕೂರುತ್ತದೆ. ಆಗ ಭಕ್ತರು ಇದು ಪುಕ್ಕಲು ದೇವರು, ಕಳ್ಳತನದಿಂದ ತಪ್ಪಿಸಿಕೊಂಡು ಓಡಿಬಂದಿದೆ ಎಂದು ವರ್ಷಪೂರ್ತಿ ಪೂಜೆ ಮಾಡುತ್ತಾರೆ. ಹೀಗೆ ಪೀರಲ ದೇವರನ್ನು ವರ್ಷಪೂರ್ತಿ ಪೂಜೆ ಮಾಡುವುದು ತುಂಬಾ ವಿರಳ. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ತುಮಕೂರಿನ ಜೋಡಿ ಬಾಬಾಗಳು ಹೀಗೆ ವರ್ಷಪೂರ್ತಿ ಪೂಜೆಗೆ ಒಳಗಾಗುತ್ತವೆ.
ಇಲ್ಲಿನ ಮುಜಾವರರನ್ನು ಮಾತನಾಡಿಸಿದಾಗ ಕಳ್ಳದೇವರು ಅಂತಿರುವ ಕಾರಣ ಹಿಂದೆ ಈ ಭಾಗದ ಕಳ್ಳರು ವಿಶೇಷವಾಗಿ ನಡೆದುಕೊಳ್ಳುವ ದೇವರೂ ಇದಾಗಿತ್ತಂತೆ. ಈ ದೇವರಿಗೆ ನಡೆದುಕೊಂಡರೆ ಕಳ್ಳತನ ಸಲೀಸಾಗಿ ಆಗುತ್ತಿತ್ತಂತೆ. ಅಂತಹ ಕಳ್ಳರು ಈ ದೇವರಿಗೆ ಬೆಳ್ಳಿಯ ಹಸ್ತಮುದ್ರೆಗಳನ್ನು ಒಪ್ಪಿಸುತ್ತಿದ್ದರು ಎನ್ನುವ ಕಥೆಗಳೂ ಈ ದೇವರ ಬಗ್ಗೆ ಇವೆ. ಅಂತಹ ಭಕ್ತರು ಈಗ ಕಡಿಮೆಯಾಗಿದ್ದಾರೆ ಎನ್ನುವುದು ಇಲ್ಲಿನ ಮುಜಾವರರ ಅಳಲು.
ಮೌಲಾಲಿ-ಹನುಮ
ಪೀರಲ ಹಬ್ಬಕ್ಕೂ ಗರಡಿ ಮನೆಗಳಿಗೂ ಒಂದು ಬಗೆಯ ನಂಟಿದೆ. ಕಾಕತಾಳೀಯವಾಗಿ ಉತ್ತರ ಕರ್ನಾಟಕದ ಅನೇಕ ಮೊಹರಂ ಮಸೀದಿಗೆ ಹೊಂದಿಕೊಂಡಂತೆ ಸಮೀಪದಲ್ಲಿಯೇ ಗರಡಿ ಮನೆಗಳಿವೆ. ಈ ಗರಡಿಮನೆಯಲ್ಲಿ ಪೈಲ್ವಾನರು ಹನುಮನನ್ನು ಮತ್ತು ಮೌಲಾಲಿಯನ್ನು ಪೂಜಿಸುತ್ತಾರೆ. ಇವರಿಬ್ಬರೂ ಶಕ್ತಿಯನ್ನು ವೃದ್ಧಿಸುವ ದೇವರುಗಳು ಎಂದು ಅವರ ನಂಬಿಕೆ. ಕೆಲವು ಮೊಹರಂ ಮಸೂತಿಗಳ ಎದುರು ಯುವಕರ ಶಕ್ತಿ ಪ್ರದರ್ಶನಕ್ಕಾಗಿ ಕಲ್ಲುಗುಂಡುಗಳಿವೆ. ಮೌಲಾಲಿಯು ಕರ್ನಾಟಕದಲ್ಲಿ ಕುಸ್ತಿಯಾಡುವ ಗರಡಿ ಹುಡುಗರ ಗುರು. ಜೈ ಭಜರಗಂಬಲಿ ಎಂದು ಕೂಗುವಂತೆ ಯಾ ಮೌಲಾಲಿ ಎಂದು ಅವರು ಕೇಕೆ ಹಾಕುವುದುಂಟು. ರೋಣ ತಾಲೂಕಿನ ಹೊಳೆಮಣ್ಣೂರಿನಲ್ಲಿ ಇರುವ ಒಂದು ಗರಡಿಗೆ ಮೌಲಾಲಿ ಗರಡಿ ಎಂದೇ ಹೆಸರಿದೆ. ಅಲ್ಲಿ ಮುಸ್ಲಿಮರೇನು ವಿಶೇಷವಾಗಿಲ್ಲ ಆದರೆ ಅಲೆಹಬ್ಬವಿದೆ.
ಮೌಲಾಲಿಯು ಭಾರತದ ಆಂಜನೇಯನಂತೆ ಬಲಶಾಲಿತನದ ಸಂಕೇತ. ಹೀಗಾಗಿಯೇ ಮೊಹರಂ ಹಾಡುಗಳಲ್ಲಿ ಹನುಮ-ಮೌಲಾಲಿಯರ ಗರ್ವಭಂಗದ ಕತೆಗಳನ್ನು ರಿವಾಯ್ತಿನಲ್ಲಿ ಕಟ್ಟಿದ್ದಾರೆ. ಈ ಇಬ್ಬರನ್ನೂ ಸಮೀಕರಿಸಿ ಏಕೀಕರಿಸಿದ್ದಾರೆ. ಮೊಹರಂ ನಾಯಕರಾದ ಹಸೇನ ಹುಸೇನರ ತಂದೆಯಾದ ಮೌಲಾಲಿಯ ನೆನಪಿನಲ್ಲಿ ಮೊಹರಂ ಹಬ್ಬವು ಶಕ್ತಿಪ್ರದರ್ಶನದ ಕಸರತ್ತುಗಳನ್ನು ಕೂಡ ಹುಟ್ಟುಹಾಕಿದೆ. ಮೊಹರಂ ದೇವರು ಕತ್ತಲ ರಾತ್ರಿಯಂದು ಊರಿನ ಎಲ್ಲಾ ದೇವ ದೇವಿಯರ ಬೇಟಿ ಮಾಡುತ್ತದೆ. ಈ ಸಂದರ್ಭದಲ್ಲಿ ಹಸೇನ್ ಹುಸೇನರಿಗೆ ಹನುಮಂತ ಅಣ್ಣನಂತೆ ಎಂದು ಹೇಳುತ್ತಾನೆ. ಊರಲ್ಲಿನ ದುರುಗಮ್ಮ, ಮಾರಮ್ಮ, ದ್ಯಾಮವ್ವ ಮುಂತಾದ ಗ್ರಾಮದೇವತೆಗಳು ಹಸೇನ್ ಹುಸೇನರ ಅಕ್ಕ ತಂಗಿಯರು ಎಂದು ಊರ ಜನ ನಂಬುತ್ತಾರೆ. ಅಣ್ಣ ಹನುಮನನ್ನು ಬೇಟಿ ಮಾಡದೆ ಕರ್ನಾಟಕದ ಯಾವ ಮೊಹರಂ ದೇವರೂ ಧಪನ್ ಆಗುವುದಿಲ್ಲ.
ಮಳೆಬಿಟ್ಟರೂ ಮರದನಿ ಬಿಡದು..
ಮೊಹರಂ ಹಬ್ಬ ವಾರಗಟ್ಟಲೆ ಇರುವುದರಿಂದ, ಮಕ್ಕಳಲ್ಲಿ ಈ ಹಬ್ಬದ ಅನುಕರಣೆಯೂ ನಡೆಯುತ್ತದೆ. ಹಬ್ಬದ ನಂತರ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಮಕ್ಕಳು ಉದ್ದನೆಯ ಕೋಲಿಗೆ ಸೀರೆ ಉಡಿಸಿ, ರಟ್ಟಿನ ತುಂಡನ್ನು ಮುಖ ಮಾಡಿ, ಸ್ಲೇಟು, ತಟ್ಟೆಯನ್ನೆ ಹಲಗೆ ಮಾಡಿಕೊಂಡು ಬಾರಿಸುತ್ತಾ ಓಡಾಡುತ್ತಾರೆ. ಅದರಲ್ಲಿ ಕೆಲ ಮಕ್ಕಳು ದೇವರು ಬಂದಂತೆಯೂ, ಕೆಲವರು ಪೂಜಾರಿಗಳಂತೆಯೂ ನಟಿಸುತ್ತಾರೆ. ಮನೆಗಳಿಂದ ಅವ್ವನಿಗೆ ತಿಳಿಯದಂತೆ ಸಕ್ಕರೆಯನ್ನೋ, ಬೆಲ್ಲವನ್ನೋ ತಂದು ಮೊಹರಂ ದೇವರಿಗೆ ಓದಿಸಿ, ಎಲ್ಲರೂ ಹಂಚಿಕೊಂಡು ತಿನ್ನುತ್ತಾರೆ. ಕೈಗೆ ಕೆಂಪನೆ ಲಾಡಿಕಟ್ಟಿಕೊಂಡು ಪೀರರಾದಂತೆ ಆಟವಾಡುತ್ತಾರೆ. ಬೇರೆ ಬೇರೆ ಓಣಿಯ ಮಕ್ಕಳು ತಮ್ಮ ತಮ್ಮ ದೇವರುಗಳನ್ನು ಒಂದೆಡೆ ತಂದು ಹಸೇನ್ ಹುಸೇನರನ್ನು ಬೇಟಿ ಮಾಡಿಸುವುದೂ ಇರುತ್ತದೆ. ಹೀಗೆ ಹಳ್ಳಿಗಳಲ್ಲಿ ಹಬ್ಬಗಳ ಅನುಕರಣೆಯನ್ನೇ ಆಟವನ್ನಾಗಿಸಿದ ಮಕ್ಕಳಾಟ ನೋಡಲು ತುಂಬಾ ಕುತೂಹಲಕಾರಿಯಾಗಿರುತ್ತದೆ.
ಧರ್ಮದ ಗಡಿಗಳಿರದ ಆಚರಣಾಲೋಕ
ಬರೆಯುತ್ತಾ ಹೋದರೆ ಮೇಲಿನಂತಹವೇ ಮತ್ತಷ್ಟು ಚಿತ್ರಗಳನ್ನು ಕಟ್ಟಿಕೊಡಬಹುದು. ಇರಲಿ ಮುಂದೆ ಯಾವಾಗಲಾದರು ಬರೆಯುವೆ. ಈ ಆಚರಣೆ ಧರ್ಮ ಮತ್ತು ಜಾತಿಗಳ ಗಡಿಗಳನ್ನು ತಾತ್ಕಾಲಿಕವಾಗಿ ಅಳಿಸಿ ಹಾಕುತ್ತದೆ. ಈ ತಾತ್ಕಾಲಿಕ ಒಂದಾಗುವ ಪ್ರಕ್ರಿಯೆಯೇ ಉತ್ತರ ಕರ್ನಾಟಕ ಹೈದರಾಬಾದ್ ಕರ್ನಾಟಕದ ಜನರನ್ನು ಧರ್ಮಗಳಾಚೆಗೆ ಒಟ್ಟುಗೂಡಿಸಿದೆ. ಈ ಜನರ ಆಚರಣಾ ಲೋಕದಲ್ಲಿ ಬಿಡಿಸಿ ತೋರಲಾರಷ್ಟು ಹಿಂದು ಮುಸ್ಲಿಂ ಸಂಬಂಧ ಗಾಢವಾಗಿದೆ. ಇದನ್ನು ಸಾಮರಸ್ಯ ಎಂಬ ಸವಕಲು ಪದ ಸರಿಯಾಗಿ ವಿವರಿಸಲಾರದು. ಹಾಗಾಗಿ ಇಲ್ಲಿಯ ಜನರು ಹಿಂದು ಮಸ್ಲೀಮರು ಅಳಿಯ ಮಾವ ಎಂದು ಹಾಸ್ಯವಾಡಿಯೋ, ಬಾರೋ ಬೀಗ ಎಂದು ಕೆಣಕಿಯೋ, ಚಿಕ್ಕಪ್ಪ ದೊಡ್ಡಪ್ಪ ಎಂಬ ಸಂಬಂಧದಲ್ಲಿ ಗೌರವಿಸಿಯೋ ಪರಸ್ಪರರು ಬದುಕುತ್ತಾರೆ. ಹೀಗಾಗಿಯೇ ನೂರಾರು ಸೂಫಿ ಸಂತರ ದರ್ಗಾಗಳಿಗೆ ಜನರು ಒಗ್ಗೂಡಿ ನಡೆಯುತ್ತಾರೆ. ರಿವಾಯ್ತು ಹಾಡು ಪರಂಪರೆಯೂ ಇಂತಹ ಸಂಬಂಧವನ್ನು ಬೆಸೆಯುವ ಕಲಾತ್ಮಕ ಆವರಣವಾಗಿದೆ. ಇದರ ಭಾಗವಾಗಿಯೇ ಕಳ್ಳಳ್ಳಿ ಬುವ್ವಾ, ಹುಲಿವೇಷ ಮುಂತಾದ ಕಲಾಪ್ರಕಾರಗಳನ್ನು ಗಮನಿಸಬೇಕಾಗಿದೆ.
ಜನರ ದಿನಬದುಕಿನ ಸಾಮರಸ್ಯಕ್ಕೂ ಅವರ ಆಚರಲೋಕದಲ್ಲಿ ಒಗ್ಗೂಡುವುದಕ್ಕೂ ಒಂದಕ್ಕೊಂದು ಕಳ್ಳುಬಳ್ಳಿಯ ಸಂಬಂಧವಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಂಗಳೂರು, ಉಡುಪಿ ಭಾಗದಲ್ಲಿ ಧಾರ್ಮಿಕ ಮೂಲಭೂತವಾದ ಬಲಗೊಳ್ಳುವುದಕ್ಕೂ, ಧಾರ್ಮಿಕ ಸಮುದಾಯಗಳು ಒಗ್ಗೂಡಲು ಆಚರಣ ಲೋಕಗಳು ಇಲ್ಲದಿರುವುದಕ್ಕೂ ಸಂಬಧವಿದೆ. ಇದನ್ನು ನೋಡಿದರೆ ಜನತೆಯ ಹಬ್ಬವಾಗಿ ರೂಪಾಂತರ ಪಡೆದ ಮೊಹರಂನಂತಹ ದೊಡ್ಡ ಆಚರಣಲೋಕ ಹೈದರಾಬಾದ್ ಮತ್ತು ಉತ್ತರ ಕರ್ನಾಟಕದ ಜನರಲ್ಲಿ ಧಾರ್ಮಿಕ ಗಡಿಗಳನ್ನು ಅಳಿಸಿಹಾಕಿರುವುದು, ಧಾರ್ಮಿಕ ಮೂಲಭೂತವಾದ ನುಸುಳದಿರುವುದಕ್ಕೂ ಒಂದಕ್ಕೊಂದು ಸಂಬಂಧವಿದೆ. ಈ ಬೆಸುಗೆಯು ಸಡಿಲವಾಗದಂತೆ ಪ್ರತಿವರ್ಷದ ಅಲೆಹಬ್ಬ ಗಟ್ಟಿಗೊಳಿಸುತ್ತಿದೆ. ಇಂತಹ ಸಾಂಸ್ಕೃತಿಕ ಸಂಕರಶೀಲತೆಯನ್ನು ನಿರಂತರ ಹದಿನೈದು ವರ್ಷದ ತಿರುಗಾಟ ಮತ್ತು ಅಧ್ಯಯನದ ಫಲವಾಗಿ ಪ್ರೊ.ರಹಮತ್ ತರೀಕೆರೆ ಅವರು `ಕರ್ನಾಟಕ ಮೊಹರಂ’ ಎಂಬ ಪುಸ್ತಕದಲ್ಲಿ ಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಸಧ್ಯದಲ್ಲೆ ಹೊರತರಲಿದೆ. ಓದುವ ಕುತೂಹಲದಿಂದ ಕಾಯೋಣ.
 
 

‍ಲೇಖಕರು G

18 November, 2013

4 Comments

  1. siraj bisaralli

    ಭಾಗ್ಯನಗರ- ಮೊಹರಂ ಕೊನೆಯ ದಿನದ ಚಿತ್ರಗಳು

  2. kiran.m gajanur

    ಒಳ್ಳೆಯ ಮಾಹಿತಿ ಪೂರ್ಣ ಲೇಖನ

  3. Gururaj.L

    ಅರುಣ್, ನಿಮ್ಮ ಈ ಮೊಹರಂನ ನೋಟ ನನಗೆ ಇಷ್ಟವಾಯಿತು. ನಾನು ನನ್ನ ರಂಗಭೂಮಿಯ ಕಾರ್ಯವನ್ನು ನಮ್ಮ ಮಕ್ಕಳೊಂದಿ ಸೋಬಾನೆ ಹಾಗೂ ಅಲಾವಿಯ ಹೆಜ್ಜೆಕುಣಿತದ ಹುಡುಕಾಟವನ್ನು ನಮ್ಮ ಜಹಗೀರಗುಡದೂರಿನ ಗ್ರಾಮದಲ್ಲಿಯೇ ನಡೆಸಿ ರಂಗಪ್ರದರ್ಶನದಲ್ಲಿ ತರಲೂ ಕೈಗೊಂಡಿದ್ದೆ. ಹಿರಿಯರಿಂದ ಹಿಡಿದು ಯುವಕರು, ಮಕ್ಕಳು ಹಾಗೂ ಮಹಿಳೆಯರ ಭಾಗುವಹಿಸುವಿಕೆ ನನಗೆ ಬೇರೆಯದೇ ಅನುಭವ ನೀಡಿತು. ಅದೇ ರೀತಿ ಹುಲುಗಿಯ ಹತ್ತಿರ ಮಹಮದ್ ನಗರದಲ್ಲಿ ಯುವಕರ ಆಸಕ್ತಿ ನಂಬಿಕೆಗಳಿಂದ ದೂರವಾಗಿ ಆ ಕುರಿತು ನೆಗೆಟಿವ್ ಆಗಿ ವರ್ತಿಸುವುದು ಕಂಡುಬಂದಿದ್ದು ನನಗೆ ಸರಿ ಅನಿಸಲಿಲ್ಲ. ಗ್ರಾಮದ ಪುಟ್ಟ ಮಕ್ಕಳ ಆ ಕುಣಿತ, ಸಂಭ್ರಮವನ್ನು ಕಳೆದುಕೊಂಡ ಈ ಪಡೆ ಎತ್ತ ಸಾಗುತ್ತದೆ ಎಂಬ ಆತಂಕ.

  4. sudha.b.o.

    ದಕ್ಷಿಣ ಕನ್ನಡಿಗಳಾದ ನನಗೆ ಮೊಹರಂ ಆಚರಣೆಯ ವಿಶೇಷ ಅಷ್ಟಾಗಿ ಗೊತ್ತಿಲ್ಲ.ಉತ್ತರ ಕನ್ನಡದ ಈ ಸಾಂಪ್ರದಾಯಿಕ ಆಚರಣೆಯ ಕುರಿತು ಉಪಯುಕ್ತ ಲೇಖನವಿದು.ಓದಿ ನನಗೆ ಖುಷಿಯಾಯ್ತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading