ಸಾಮಾನ್ಯವಾಗಿ ದಿನಬಳಕೆಯಲ್ಲಿ ಕೆಲವು ನುಡಿಗಟ್ಟುಗಳನ್ನು ಸಹಜವಾಗಿ ಬಳಸುತ್ತಿರುತ್ತೇವೆ. ಇಂತಹ ನುಡಿಗಟ್ಟುಗಳ ಬಳಕೆ ಗ್ರಾಮೀಣ ಭಾಗದಲ್ಲಿ ಇನ್ನು ಹೆಚ್ಚೇ ಇರುತ್ತದೆ. ಈ ನುಡಿಗಟ್ಟುಗಳು ಒಂದು ಬಗೆಯಲ್ಲಿ ಸಾಮಾಜಿಕ ನಂಬಿಕೆಗಳ ನಿಂಯತ್ರಕಗಳೂ ಆಗಿರುತ್ತವೆ. ಅಂತೆಯೇ ಹಳೆಕಾಲದ ನಂಬಿಕೆಗಳನ್ನು ಕಾಯುವ ಕಾವಲುಗಾರರಂತೆಯೂ ಕಾಣುತ್ತವೆ. ಇಂತಹ ಕೆಲವು ನುಡಿಗಟ್ಟುಗಳಲ್ಲಿ ಹೆಣ್ಣನ್ನು ಹೇಗೆ ಕಾಣಲಾಗಿದೆ ಎನ್ನುವುದನ್ನು ಗುರುತಿಸುವ ಪ್ರಯತ್ನ ಈ ಬರಹ.
ಜನಪದರಲ್ಲಿ ಬಳಕೆಯಾಗುವ ನುಡಿಗಟ್ಟುಗಳು ಸಮಾಜದ ರಚನೆಯ ಹಲವು ಸ್ಥರಗಳನ್ನು ಕಾಣಿಸುತ್ತವೆ. ಮುಖ್ಯವಾಗಿ ಆಹಾರ ಸಂಬಂಧಿ ನುಡಿಗಟ್ಟುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಲಿಂಗ ಸ್ಥರಗಳ ಫರಕುಗಳು ಎದ್ದು ಕಾಣುತ್ತವೆ. ಜನಪದ ನುಡಿಗಟ್ಟುಗಳ ಮಹಿಳಾ ವಲಯದ ಬಳಕೆಯ ನೆಲೆಯನ್ನು ಗುರುತಿಸಿದರೆ, ಈ ನುಡಿಗಟ್ಟುಗಳ ಒಳಗೆ ಲಿಂಗ ತಾರತಮ್ಯದ ಸೂಕ್ಷ್ಮಗಳನ್ನು ಹುಡುಕಬಹುದು. ಬಹುಶಃ ಜನಪದ ಸಾಹಿತ್ಯವನ್ನು ಮರು ವಿಮಶರ್ೆಗೆ ಒಳಪಡಿಸುವ ನೆಲೆಯಲ್ಲಿಯೂ ಇಂತಹ ವಿಶ್ಲೇಷಣೆಯ ಅಗತ್ಯವಿದೆ.
ಅಂತಹ ಕೆಲವು ನುಡಿಗಟ್ಟುಗಳನ್ನು ನೋಡಬಹುದು. `ಅನ್ನ ಅನ್ನ ನೀರು ನೀರು ಅನ್ನಿಸಿಬಿಡು’ ಎನ್ನುವುದೊಂದು ನುಡಿಗಟ್ಟು. ಇದು ಹಿಂಸೆ ಕೊಡು,ಅನ್ನ ನೀರು ಕೊಡದೆ ಹಿಂಸಿಸು, ಎನ್ನುವಂತಹ ಅರ್ಥವನ್ನು ಕೊಡುತ್ತದೆ. ಅದು ಬಳಕೆಯಲ್ಲಿ `ಅನ್ನ ಅನ್ನ ನೀರು ನೀರು ಅನ್ನಿಸಿದಾಗಲೇ ಈ ಜನ ಮಾತು ಕೇಳೋದು’ ಕೇಳೋದು ಎನ್ನುವಲ್ಲಿಯೂ ಗೌಡನೋ ಊರಿನ ಯಜಮಾನನೋ ಜನರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವಾಗ ಹೇಳುವಂತ ಮಾತಿದು. ಇದೇ ಮಾತನ್ನು ಗಂಡ ತನ್ನ ಹೆಂಡತಿಗೆ ಬೈಯುವಾಗಲೂ ಈ ಮಾತನ್ನು ಬಳಸುತ್ತಾನೆ. ಅಂದರೆ ಅನ್ನ ಅನ್ನ ನೀರು ನೀರು ಅನ್ನೋಹಾಗೆ ಮಾಡಿದ್ರೆ ನಿನ್ನ ಗರ್ವ ಮುರಿಯೋದು ಎನ್ನುವ ಮಾತು ಬರುತ್ತದೆ. ಅತ್ತೆ ಇದೇ ಮಾತನ್ನು ಸೊಸೆಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲೂ ಬಳಸುತ್ತಾಳೆ. ಅಂದರೆ ಆಹಾರದ ಅಗತ್ಯ ಮತ್ತು ಆ ಆಹಾರವನ್ನು ಕೊಡದಿರುವುದನ್ನೇ ಒಂದು ಶಿಕ್ಷೆಯ ಮಾದರಿಯನ್ನಾಗಿ ಮಾಡಿರುವುದನ್ನು ನೋಡಬಹುದು.
`ಅಂಬಲಿಯೋ ತುಂಬೆ ಸೊಪ್ಪೋ ತಿನ್ನು’ ಎನ್ನುವ ನುಡಿಗಟ್ಟು ಬಡತನದ ಬಾಳುವೆ ನಡೆಸು, ಕಷ್ಟಪಡು ಎಂದೆಲ್ಲಾ ಅರ್ಥ ಕೊಡುತ್ತದೆ. ಅದು ಮಹಿಳೆಯರ ಬಳಕೆಯಲ್ಲಿ `ಅಂಬಲಿಯೋ ತುಂಬೆ ಸೊಪ್ಪೋ, ಕಾರೆಕಾಯಿ ನೀರೋ ಮಜ್ಜಿಗೆಯೋ ತಿಂದು ಕುಡಿದು ಕಾಲ ಹಾಕಿದವಳೇ ಹೊತರ್ು ಒಬ್ಬರ ಮನೆ ಬಾಗಿಲಿಗೆ ಹೋದವಳಲ್ಲ’ ಎನ್ನುವಂತಹ ಪ್ರಯೋಗಗಳಿವೆ. ಹೆಣ್ಣಿನ ಗಟ್ಟಿತನದ ಬದುಕಿನ ರೀತಿಯನ್ನು ಇದು ಹೇಳುತ್ತಿದೆ. ಅಂತೆಯೇ ಇದು ಎಷ್ಟೇ ಕಷ್ಟ ಬಂದರೂ ಗಂಡನ ಮನೆಯೇ ಶ್ರೇಷ್ಠ ಎನ್ನುವ ಪುರುಷ ಪ್ರಧಾನ ಹೇರಿಕೆಯ ಆಶಯವೂ ಈ ನುಡಿಗಟ್ಟಿನಲ್ಲಿದೆ. `ರೊಟ್ಟಿತೊಳೆದ ನೀರು ಕುಡಿದು ಕಾಲ ಹಾಕು’ ( ಕಡುಬಡತನದ ಜೀವನ ಸಾಗಿಸು, ಬಳಕೆ- ಎಷ್ಟೋ ದಿವಸ ರೊಟ್ಟಿತೊಳೆದ ನೀರು ಕುಡಿದು ಕಾಲ ಹಾಕಿದೆ, ಆ ದಿನಗಳ ನೆನಸಿಕೊಂಡ್ರೆ ಈಗಲೂ ಕಣ್ಣು ಮಂಜಾಗ್ತಾವೆ) ಎನ್ನುವ ನುಡಿಗಟ್ಟು ಸಹಾ ಮೇಲಿನ ಅರ್ಥವನ್ನೇ ಕೊಡುತ್ತದೆ.
`ಆವುಗೆಯಲ್ಲಿ ಬೇಯು’ ಎನ್ನುವ ನುಡಿಗಟ್ಟು ಉಸಿರು ಕಟ್ಟುವ ವಾತವರಣದಲ್ಲಿ ಬದುಕು, ಸಂಕಟಪಡು ಎಂಬುದನ್ನು ಸೂಚಿಸುತ್ತದೆ. (ಆವುಗೆ=ಕುಂಬಾರ ಮಡಕೆಗಳನ್ನು ಬೇಯಿಸು ಒಲೆ) ಬಳಕೆಯಲ್ಲಿ ಇದು `ನಾನು ಆ ಆವುಗೇಲಿ ಬೇಯಲಾರೆ, ನಮ್ಮ ಪಾಲು ನಾವು ತಗಂಡು ಬೇರೆ ಹೋಗೋಣ’ ಎಂದು ಹೆಂಡತಿ ಗಂಡನಿಗೆ ಹೇಳಲು ಬಳಸುವಾಗ ಸ್ವತಂತ್ರ್ಯವಾಗುವ ಹಂಬಲವಿದ್ದಂತೆ ಕಾಣುತ್ತದೆ. ಅಂತೆಯೇ `ಆವುಗೆಯಲ್ಲಿ ಬೆಂದ್ರೂ ಗಂಡನ ಮನೆ ಬಿಡಬಾರದು’ ಎಂದು ತವರು ಮನೆಯವರು ಮಗಳಿಗೆ ಹೇಳುವುದಿದೆ. ಗಂಡನ ಮನೆ ವಿರುದ್ಧ ಚಕಾರವೆತ್ತದಂತೆ ಬಾಯಿ ಮುಚ್ಚಿ ಸಹಿಸಿಕೊಂಡಿರಬೇಕು ಎನ್ನುವಂತಹ ಕಟ್ಟುಪಾಡಿನ ಆಶಯವೂ ಈ ನುಡಿಗಟ್ಟಿನಲ್ಲಿದೆ.
ಇಂತಹದ್ದೇ ಅರ್ಥ ಬರುವ ನುಡಿಗಟ್ಟುಗಳೆಂದರೆ, `ಅನ್ನ ತಿನ್ನೊ ಬಾಯಲ್ಲಿ ಹೇಲು ತಿನ್ನು’ ಎನ್ನುವ ಮಾತು ಹೆಣ್ಣು ಅನೈತಿಕ ಸಂಬಂಧಕ್ಕೆ ಸಿಲುಕಿದಾಗ ಬಳಸಲಾಗುತ್ತದೆ. ಅದು ಸುಳ್ಳು ಹೇಳು, ತಪ್ಪು ಮಾತಾಡು ಎಂಬ ಅರ್ಥವನ್ನು ಕೊಡುತ್ತದಾದರೂ ಅದರ ಬಳಕೆಯ ವಲಯದಲ್ಲಿ ಮಾತ್ರ ಮಹಿಳೆಯರಿಗೆ ಹೆಚ್ಚು ಬಳಸಲಾಗುತ್ತದೆ. ಇದೇ ಅರ್ಥವನ್ನು `ಅನ್ನ ಹಾಕಿದ ಮನೆಗೆ ಕನ್ನ ಹಾಕು’ ಎನ್ನುವ ನುಡಿಗಟ್ಟು ಸಹ ಬಳಕೆಯಾಗುತ್ತದೆ..ಉಪಕಾರ ಮಾಡಿದವರಿಗೆ ಅಪಕಾರ ಮಾಡು (ಕನ್ನ ಹಾಕು=ಮನೆಗೆ ರಂದ್ರ ಕೊರೆದು ದೋಚು) ಅದು ಬಳಕೆಯಲ್ಲಿ `ಅನ್ನ ಹಾಕಿದ ಮನೆಗೆ ಕನ್ನ ಹಾಕೋ ಜನಾನ ನಂಬಿದೋರುಂಟ? ಎನ್ನುವ ಮಾತಿದೆ. ಇವುಗಳು ಬಹಳ ಸಲ ಹೆಣ್ಣಿನ ಮೋಸವನ್ನು ಹೇಳುವಾಗ ಈ ನುಡಿಗಟ್ಟುಗಳು ಬಳಕೆಯಾಗುತ್ತವೆ.
ಅಡುಗೆಯಲ್ಲಿ ಉಪ್ಪು ತುಂಬಾನೆ ಮುಖ್ಯ. ಈ ಉಪ್ಪಿನ ಗುಣವನ್ನು ಹೆಣ್ಣಿನ ಗುಣದೊಂದಿಗೆ ಸಮೀಕರಿಸಲಾಗಿದೆ. `ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂದುವಿಲ್ಲ’ ಎನ್ನುವಾಗ ಉಪ್ಪಿನ ರುಚಿಯನ್ನು ತಾಯಿಯ ಬಂಧುತ್ವದೊಂದಿಗೆ ಹೋಲಿಸಿದ್ದಾರೆ. ಹೀಗೆ ಉಪ್ಪನ್ನು ಆಧರಿಸಿ ಹುಟ್ಟಿದ ನುಡಿಗಟ್ಟುಗಳು ಹೆಣ್ಣನ ಬದುಕಿನ ಜತೆ ಸಮೀಕರಿಸುವ ಹೋಲಿಕೆಗಳಿವೆ. `ಉಗಿದು ಉಪ್ಪು ಹಾಕು'(ಛೀಮಾರಿ ಹಾಕು,ಬಯ್ಯು) ಎನ್ನುವ ನುಡಿಗಟ್ಟು `ಇವತ್ತು ಅವನಿಗೆ ಚೆನ್ನಾಗಿ ಉಗಿದು ಉಪ್ಪು ಹಾಕಿದ್ದೀನಿ’ ಎಂದು ಬಳಕೆಯಾಗುತ್ತದೆ. ಅಂತೆಯೇ ಈ ಬಳಕೆ ಗಂಡುಬೀರಿ ಹೆಣ್ಣುಗಳಲ್ಲಿ ಹೆಚ್ಚು ಬಳಕೆಯಲ್ಲಿರುತ್ತದೆ ಎನ್ನುವ ಉಲ್ಲೇಖಗಳಿವೆ. ಅಂದರೆ ಹೆಣ್ಣನ್ನು ಕೆಣಕುವ ಗಂಡನ್ನು ಹೆಣ್ಣು ಕೋಪದಿಂದ ಬೈಯುವುದನ್ನು ಈ ನುಡಿಗಟ್ಟು ದ್ವನಿಸುತ್ತದೆ. ಬಹುಶಃ ಅಡುಗೆ ಮಾಡುವಾಗ ಯಾವುದೇ ಪದಾರ್ಥವನ್ನು ಬೇಯಲು ಇಟ್ಟಾಗ ಉಪ್ಪನ್ನು ಹಾಕುವ ಪ್ರವೃತ್ತಿಗೆ ಪೂರಕವಾಗಿ ಈ ನುಡುಗಟ್ಟು ಬಳಕೆಯಾದಂತಿದೆ.
`ಉಪ್ಪಿಕ್ಕು’ ಎನ್ನುವುದು ಅನ್ನ ಹಾಕು, ಸಹಾಯ ಮಾಡು ಎಂಬ ಅರ್ಥದಲ್ಲಿ ಬಳಕೆಯಾಗಿದೆ. ಇದು `ಹೆಣ್ಣಮಕ್ಕಳಿಗೆ ಉಪ್ಪಿಕ್ಕೋ ಗುಣ ಇರಬೇಕು’ ಎಂಬಂತಹ ಹೆಣ್ಣಿನ ಗುಣವನ್ನು ಸಮೀಕರಿಸಲು ಬಳಕೆಯಾಗುತ್ತದೆ. `ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ನೆನೆ’ ಎಂಬ ಗಾದೆ ಮಾತಲ್ಲೂ ಉಪ್ಪಿಟ್ಟ ತಾಯಿಯನ್ನು ಮರೆಯದಿರು ಎಂಬಂತ ಮಾತುಗಳು ಇವೆ. ಇದೇ ಮಾತು ಗಂಡನನ್ನು ಹೆಂಡತಿ ಎಂದಿಗೂ ಮರೆಯಬಾರದು ಎಂದು ಹೇಳುವಾಗಲೂ ಬಳಕೆಯಾಗಿದೆ. `ಉಪ್ಪು ಹುಳಿಯಿಲ್ಲದವಳು’ ಎನ್ನುವ ನುಡಿಗಟ್ಟು ಅರಸಿಕ ಹೆಣ್ಣನ್ನು ಕುರಿತು ಹೇಳುತ್ತಿದ್ದರೆ, `ಉಪ್ಪುಕಾರ ಹಚ್ಚಿ ಹೇಳು’ (ಬಣ್ಣ ಕಟ್ಟಿ ಹೇಳು,ಉತ್ಪ್ರೆಕ್ಷಿಸಿ ಹೇಳು) ಎನ್ನುವ ನುಡಿಗಟ್ಟು ಹೆಣ್ಣಿನ ವಾಚಾಳಿ ಗುಣವನ್ನು ಹೇಳಲು ಸಹಾ ಬಳಕೆಯಾಗುತ್ತದೆ.
`ಉಪ್ಪುಕಾರ ಹಚ್ಚಿ ಹೇಳೋದ್ರಲ್ಲಿ ಆ ಹುಡುಗಿ ಎಕ್ಸಪರ್ಟ’ ಎನ್ನುವ ಆಧುನಿಕ ಪದ ಬಳಕೆಯಲ್ಲಿಯೂ ಸಹ ಇದು ವ್ಯಕ್ತವಾಗುತ್ತಿದೆ. `ಉಪ್ಪು ಮೆಣಸಿನಕಾಯಿ ನೀವಳಿಸು'(ದ್ರುಷ್ಟಿ ತೆಗೆ,ಇಳಿದೆಗೆ) ಎನ್ನುವ ಪದ ಅತ್ಯಂತ ಸುಂದರಿಯಾದ ಹುಡುಗಿ ಊರೆಲ್ಲಾ ಸುತ್ತಿ ಬಂದಾಗ ಆ ಮನೆಯ ಹಿರಿಯರು ಅವಳಿಗೆ ನೀವಳಿಸಿ ಎಂಬರ್ಥದಲ್ಲಿ ಒಂದು ತೆರನಾದ ಬಳಕೆ ಇದ್ದರೆ, ಇನ್ನೊಂದು ಅರ್ಥದಲ್ಲಿ ಹೆಣ್ಣನ್ನು ಬಾಯಿಗೆ ಬಂದಂತೆ ಬೈಯಿ ಎನ್ನುವಂತೆಯೂ ಬಳಕೆಯಾಗಿದೆ. `ಉರಿದು ಉಪ್ಪಾಗು’ (ಕೋಪಗೊಳ್ಳು,ಸಿಡಿಮಿಡಿಗೊಳ್ಳು) ಎನ್ನುವ ನುಡಿಗಟ್ಟು ಸಿಡಿಮಿಡಿಗೊಳ್ಳುವ ಹೆಣ್ಣಿನ ಗುಣವನ್ನು ದ್ವನಿಸುವಾಗ `ಅವಳು ಯಾರು ಮಾತಾಡಿಸಿದ್ರೂ,ಉರಿದ ಉಪ್ಪಾಗ್ತಾಳೆ’ ಎನ್ನುವಂತಹ ಬಳಕೆಗಳಾಗುತ್ತವೆ.
ಇನ್ನು ಅಂತಹ ಕೆಲವು ನುಡಿಗಟ್ಟುಗಳು ಹೀಗಿವೆ. `ಉರಿಯೋದರ ಮೇಲೆ ಉಪ್ಪು ಹಾಕು'(ಕೆರಳಿಸು,ಉಲ್ಬಣಿಸು) ಬಳಕೆ:`ತೆಪ್ಪಗಿರದೆ ಇವಳೊಬ್ಳು ಉರಿಯೋದರ ಮೇಲೆ ಉಪ್ಪು ಹಾಕಿದ್ಲು’. `ಅನ್ನದ ಬಾಯಿಗೆ ಮಣ್ಣು ಹಾಕು’ (ಕೆಡಕು ಮಾಡು, ಜೀವನ ಮಾರ್ಗ ತಪ್ಪಿಸು) ಬಳಕೆ: `ಕೊನೆಗೂ ನನ್ನ ಅನ್ನದ ಬಾಯಿಗೆ ಅವಳು ಮಣ್ಣು ಹಾಕಿದ್ಲು ಮನೆ ಹಾಳಿ’. `ಅನ್ನಾನ್ನಗತಿಕನಾಗು’ (ನಿರ್ಗತಿಕನಾಗು,ಅನ್ಯರ ಅನ್ನಕ್ಕೆ ಕೈಯೊಡ್ಡುವಂತಾಗು, ಅನ್ನಾನ್ನಗತಿಕ<ಅನ್ಯನ್ನಗತಿಕ=ಬೇರೆಯವರು ಹಾಕುವ ಅನ್ನವೇ ಗತಿಯಾದವನು) ಬಳಕೆ: ಸೂಳೆ ಸಹವಾಸ ಮಾಡಿ, ಎಲ್ಲಾ ಕಳೆದುಕೊಂಡು ಅನ್ನಾನ್ನಗತಿಕನಾಗಿ ಊರೂರು ಅಲೆದ. `ಊಟ ಹಾಕಿಸು'(ಮದುವೆಯಾಗು) ಬಳಕೆ: ಏ ಹುಡುಗಿ ಊಟ ಹಾಕಿಸ್ತಿಯೋ ಇಲ್ಲೋ? . `ರೊಟ್ಟಿ ಜಾರಿ ತುಪ್ಪಕ್ಕೆ ಬೀಳು’ ( ಆಸೆ ಈಡೇರು, ರೊಟ್ಟಿ ಜಾರಿ ತಾನಾಗಿಯೇ ತುಪ್ಪಕ್ಕೆ ಬಿತ್ತು ಅದೃಷ್ಟವಂತ ನೀನು) ಬಳಕೆ: ಆ ಹುಡುಗಿ ನಿನ್ನ ಬಲಿಗೆ ಬಿದ್ದದ್ದು ಒಳ್ಳೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಯಿತು. ಎನ್ನುವುದು.
ಇಂತಹದ್ದೇ ನೂರಾರು ಆಹಾರ ಸಂಬಂಧಿ ನುಡಿಗಟ್ಟುಗಳಿವೆ. ಅವುಗಳ ಮಹಿಳಾ ವಲಯದ ಬಳಕೆಯ ನೆಲೆಯನ್ನು ಶೋಧಿಸುತ್ತಾ ಹೋದರೆ ಅವುಗಳು ಮಹಿಳಾ ಬದುಕಿನ ಬೇರೆ ಬೇರೆ ಮಾದರಿಗಳನ್ನು ಸಾಮಾಜಿಕ ನಂಬಿಕೆಗಳನ್ನು ಹೊರಹಾಕುತ್ತವೆ. ಇವು ಹೇಗೆ ಮಹಿಳೆಯನ್ನು ಒಂದು ಚೌಕಟ್ಟಿನಲ್ಲಿ ಬಂಧಿಸಿಡಲು ವ್ಯವಸ್ಥೆಯ ಒಳಗೆ ಸಹಜವಾಗಿ ಹುಟ್ಟಿದ ನುಡಿಗಟ್ಟಿನಂತೆ ಬಳಕೆಯಾಗುತ್ತಿವೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು. ಇಂತಹ ನುಡಿಗಟ್ಟುಗಳನ್ನು ವರ್ತಮಾನದ ಬಳಕೆಯ ನೆಲೆಗಳನ್ನು ಶೋಧಿಸಬೇಕಿದೆ.
ಜಾನಪದ ತಜ್ಞರಾದ ಪ್ರೊ.ಸುಧಾಕರ್ ಅವರು ಸಂಗ್ರಹಿಸಿದ `ಜನಪದ ನುಡಿಗಟ್ಟುಗಳ ಕೋಶ’ (ಪ್ರಕಟಣೆ: ಕನ್ನಡ ವಿಶ್ವವಿದ್ಯಾಲಯ ಹಂಪಿ) ಕೃತಿಯಿಂದ ಮೇಲಿನ ನುಡಿಗಟ್ಟುಗಳನ್ನು ಆಯ್ದುಕೊಳ್ಳಲಾಗಿದೆ.






‘ಕನ್ನಡ ಜನಪದ ನುಡಿಗಟ್ಟುಗಳ ಸಮೃದ್ಧ ಮಾಹಿತಿಗಾಗಿ ,ಅದರಲ್ಲೂ ಅಡುಗೆ,ಆಹಾರ ಸಂಬಂಧವಾದ ನುಡಿಗಟ್ಟುಗಳ ವಿವರಣೆಗಾಗಿ ಅರುಣ್ ಅವರಿಗೆ ಅಭಿನಂದನೆಗಳು.’
ಮಾನ್ಯರೇ ,
`ಅಂಬಲಿಯೋ ತುಂಬೆ ಸೊಪ್ಪೋ ತಿನ್ನು’
`ರೊಟ್ಟಿತೊಳೆದ ನೀರು ಕುಡಿದು ಕಾಲ ಹಾಕು’
`ಅನ್ನ ತಿನ್ನೊ ಬಾಯಲ್ಲಿ ಹೇಲು ತಿನ್ನು’
`ಉಗಿದು ಉಪ್ಪು ಹಾಕು’
`ಉರಿದು ಉಪ್ಪಾಗು’
`ಉರಿಯೋದರ ಮೇಲೆ ಉಪ್ಪು ಹಾಕು’
`ಅನ್ನದ ಬಾಯಿಗೆ ಮಣ್ಣು ಹಾಕು’
ಇವು ಹೇಗೆ ಮಹಿಳೆಯನ್ನು ಒಂದು ಚೌಕಟ್ಟಿನಲ್ಲಿ ಬಂಧಿಸಿಡಲು ವ್ಯವಸ್ಥೆಯ ಒಳಗೆ ಸಹಜವಾಗಿ ಹುಟ್ಟಿದ ನುಡಿಗಟ್ಟಿನಂತೆ ಬಳಕೆಯಾಗುತ್ತಿವೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು.” —-ಎಂದು ವ್ಯಾಖ್ಯಾನಿಸುವ ನಿಮ್ಮ ಬರಹವನ್ನು ಓದಿ ಅಚ್ಚರಿ ಹಾಗೂ ಗಾಬರಿಯಾಯಿತು . ಈ ಮೇಲ್ಕಂಡ ನುಡಿ ಸಾಮಗ್ರಿಗಳಲ್ಲಿ ಹೆಣ್ಣಿನ ನಡೆನುಡಿಗಳನ್ನು ಪ್ರಮುಖವಾಗಿ ಅರಸುತ್ತಿರುವುದು ಸರಿಯಲ್ಲವೆಂದು ನಾನು ತಿಳಿದಿದ್ದೇನೆ . ಕನ್ನಡ ನುಡಿ ಸಮುದಾಯದ ಮಾತುಕತೆಗಳಲ್ಲಿ ಬಳಕೆಯಾಗುತ್ತಿರುವ ಸಂದರ್ಭಕ್ಕೆ ಅನುಗುಣವಾಗಿ ಗಂಡು-ಹೆಣ್ಣುಗಳಿಬ್ಬರಿಗೂ ಈ ನುಡಿಗಳು ಅನ್ವಯವಾಗುತ್ತವೆ ಎಂಬುದು ನನ್ನ ತಿಳುವಳಿಕೆ .
ಸಿ ಪಿ ನಾಗರಾಜ ,Bengaluru .
ಸಿ.ಪಿ.ನಾಗರಾಜ ಅವರಿಗೆ
ಸಾರ್, ನಿಮ್ಮ ಪ್ರತಿಕ್ರಿಯೆಗೆ ದನ್ಯವಾದಗಳು.ನೀವು ಕೇಳಿದ ಪ್ರಶ್ನೆ ಮೇಲುನೋಟಕ್ಕೆ ಸರಿಯಾಗಿಯೆ ಇದೆ. ನಾನು ಈ ಬರಹದ ಆರಂಭಕ್ಕೆ ಈ ನುಡಿಗಟ್ಟುಗಳ ಮಹಿಳಾ ವಲಯದ ಬಳಕೆಯ ನೆಲೆಯಲ್ಲಿ ವಿಶ್ಲೇಷಣೆಗೆ ಒಳಪಡಿಸಿದ್ದೇನೆ. ಇದೇ ನುಡಿಗಟ್ಟುಗಳ ಪುರುಷ ವಲಯದ ಬಳಕೆಯನ್ನು ನೋಡಿದರೆ, ಬೇರೆ ಬೇರೆ ಸಂಗತಿಗಳ ಬಳಕೆಯ ವಲಯದಲ್ಲಿ ನೋಡಿದರೆ ಬೇರೆಯದೇ ಅರ್ಥ ಬರುತ್ತದೆ. ಇಲ್ಲಿನ ನುಡಿಗಟ್ಟುಗಳು ಲಿಂಗ,ಜಾತಿ,ವರ್ಗ,ಸಂದರ್ಭದ ನೆಲೆಯಲ್ಲಿ ಅವುಗಳ ಅರ್ಥ ಬದಲಾಗುತ್ತದೆ. ಹೀಗಾಗಿ ನಿಮಗೆ ಮೇಲಿನಂತೆ ಅನ್ನಿಸಿರಬೇಕು. ನಾನು ಈ ನುಡಿಗಟ್ಟುಗಳ ಮಹಿಳಾ ನೆಲೆಯ ಬಳಕೆಯನ್ನು ಗಮನಿಸಿ ಚರ್ಚೆ ಮಾಡಿದ್ದೇನೆ. ಈ ನೆಲೆಯಲ್ಲಿ ನೀವು ಬರಹವನ್ನು ಮತ್ತೊಮ್ಮೆ ಓದಿ ನೋಡಿ.
CPN Sir is right. These sayings don’t have the connotation Arun has given.
I agree with Nagaraja. Recently, articles related to women are gaining merely lot of scope, so lots of authors are trying to bring this subject quite unrealistically and artificially, merely for the sake of ‘impact’ and publicity.
ಪ್ರಿಯ ಶಿವಪ್ಪ ನಾಯಕ, ಶರಧಿಯವರಿಗೆ
ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು
ಈ ಬರಹವು ಜನಪದ ಪರಂಪರೆಯೊಳಗೇ ಅವಿತಂತಿರುವ ಲಿಂಗ ತಾರತಮ್ಯವನ್ನು ನುಡಿಗಟ್ಟುಗಳ ಮಹಿಳಾ ವಲಯದ ಬಳಕೆಯನ್ನು ಆಧರಿಸಿ ವಿಶ್ಲೇಷಿಸಿರುವೆ. ಇದು ಅತಿರೇಕದ ವಿವರಣೆಯಾಗಲಿ, ಜನಪ್ರಿಯತೆಯ ಕಾರಣಕ್ಕಾಗಿ ಮಹಿಳಾಪರತೆಯ ನಟಿಸುವಿಕೆಯಾಗಲಿ ಅಲ್ಲವೆಂದು ನನ್ನ ವಯಕ್ತಿಕ ಅಭಿಪ್ರಾಯ.ಅಷ್ಟಕ್ಕೂ ಈತನಕ ಜಾನಪದ ಸಾಹಿತ್ಯವನ್ನು ರಮ್ಯವಾಗಿಯೇ ವಿವರಿಸುತ್ತಾ ಬರಲಾಗಿದೆ, ಹಾಗಾಗಿ ಇಂತಹ ವಿಶ್ಲೇಷಣೆಗಳನ್ನು ತಕ್ಷಣ ಒಪ್ಪಿಕೊಳ್ಳಲು ಕಷ್ಟವೂ ಆಗಬಹುದು. ಆದರೆ ಈ ನೆಲೆಯ ವಿಶ್ಲೇಷಣೆಯೇ ಇಂದಿನ ಅಗತ್ಯವೆಂಬುದು ನನ್ನ ತಿಳುವಳಿಕೆ.
ನಮಸ್ಕಾರ
Very interesting analysis
Interesting but flawed.
ದಿಟ,ನುಡಿಯೊಳಗಿನ ಎಷ್ಟೋ ನಡೆಗಳು ಹೆಣ್ಣು ಹಾಗೂ ಹೆಣ್ಣುತನದ ನಿಲುವು, ಅಸ್ತಿತ್ವ, ಅಸ್ಮಿತೆಯನ್ನು ನಿರಾಕರಿಸುವ ಇರಾದೆಯನ್ನು ಹೊಂದಿರುತ್ತವೆ. ಇದಕ್ಕೆ ಬೇಕಾದಷ್ಟು ಪುರಾವೆಗಳು ಪ್ರತಿಯೊಂದು ನುಡಿಯಲ್ಲಿಯೂ ಸಿಗುತ್ತವೆ. ಆದರೆ ಈ ಬರೆಹದಲ್ಲಿಯ ವಿವರಗಳು ಒತ್ತಾಯಿಸುವಂತೆ, ಇಲ್ಲಿಯ ಯಾವುದೇ ನುಡಿಗಟ್ಟು ಕೂಡ ಕೇವಲ ಹೆಣ್ಣನ್ನು ಗುರಿಯಾಗಿಸಿಕೊಂಡು ಹುಟ್ಟಿದಂತಹವುಗಳಲ್ಲ. ಈ ನುಡಿಗಟ್ಟುಗಳು ಯಾವುದೇ ಬಗೆಯ ಸಾಮಾಜಿಕ ಸನ್ನಿವೇಶದಲ್ಲಿ ಬದುಕುವ ಜನರ [ಹೆಣ್ಣು/ಗಂಡು] ಅಸ್ತಿತ್ವ, ಅಸ್ಮಿತೆಯನ್ನು ನಿರಾಕರಿಸುವ ಇಲ್ಲವೇ ಅಳಸಿ ಹಾಕುವ ತುಡಿತವನ್ನು ಹೊಂದಿರುತ್ತವೆ. ಹಾಗಾಗಿ ಅರ್ಥರಹಿತ ಚರ್ಚೆಗಳೆಲ್ಲವನ್ನೂ ವಿಶ್ಲೇಷಣೆಯೆಂಬ ಹಣೆಪಟ್ಟಿಯನ್ನು ಲಗತ್ತಿಸಿ ಬಣ್ಣಿಸಿದರೆ, ಅವುಗಳೆಲ್ಲವೂ ವಿಶ್ಲೇಷಣೆಗಳಾಗಲು ಸಾಧ್ಯವಿಲ್ಲ. ತಾತ್ವಿಕ ಚೌಕಟ್ಟುಗಳ ಆಚೆನಿಂತು, ನಾನು ಹೇಳುವುದೇ ಸರಿಯಾದ ವಿಶ್ಲೇಷಣೆಯೆಂದು ಹಠಮಾಡುವವರಿಗೆ, ಓದುಗರು ಏನೇ ಹೇಳಿದರೂ ತಪ್ಪಾಗಿ ಕಾಣುತ್ತದೆ. ಚರ್ಚೆಗಳು ತಿಳಿವನ್ನು ಹಿಗ್ಗಿಸುವುದಕ್ಕೆ ನೆಲೆಯಾಗಬೇಕು ಹೊರತು ವ್ಯಕ್ತಿಯೊಬ್ಬನ ಹಠಮಾರಿತನವನ್ನು ಪ್ರದರ್ಶಿಸುವುದಕ್ಕೆ ದಾರಿಮಾಡಿ ಕೊಡುವಂತೆಯಾದರೆ, ಅವುಗಳಿಂದ ಯಾರಿಗೂ ಪ್ರಯೋಜನವಾಗಲಾರದು. ಬರೆಹಗಾರನನ್ನೂ ಒಳ್ಗೊಂಡಂತೆ ಈ ಮಾತನ್ನು ಹೇಳಲಾಗಿದೆ.ಆದ್ದರಿಂದ ಡಾ.ಸಿ.ಪಿ.ನಾಗರಾಜ ಅವರ ಮಾತುಗಳನ್ನು ಮರುಚಿಂತಿಸಲೂ ಸಾಧ್ಯವಿಲ್ಲ, ನಾನು ಬರೆದಿರುವುದೇ ಸಾರ್ವತ್ರಿಕ ಸತ್ಯ ಎನ್ನುವ ಅಹಂನ್ನು ಈ ಲೇಖನದ ಬರೆಹಗಾರರು ತೋರಿಸಿದ್ದಾರೆ. ಇದರಿಂದ ಸಿಪಿಎನ್ ಅವರಿಗೆ ಯಾವುದೇ ಬಗೆಯ ನಷ್ಟವಾಗಿರಲಾರದು ಎನ್ನುವುದು ಮಾತ್ರ ದಿಟ. – ಮೇಟಿ ಮಲ್ಲಿಕಾರ್ಜುನ
ಮೇಟಿ ಮಲ್ಲಿಕಾರ್ಜುನ್ ಅವರಿಗೆ ನಮಸ್ತೆ,
ಪ್ರತಿಕ್ರಿಯೆಗಾಗಿ ಧನ್ಯವಾದಗಳು.ಇಲ್ಲಿನ ನುಡಿಗಟ್ಟುಗಳು ಮಹಿಳಾವಲಯದಲ್ಲಿ ಬಳಕೆಯಾದರೆ ಸಾಮಾಜಿಕ ಲಿಂಗ ಅಸಮಾನತೆಗೆ ಹೇಗೆ ಲಗತ್ತಾಗುತ್ತದೆ ಎನ್ನುವುದನ್ನು ಗಮನಿಸಲು ಪ್ರಯತ್ನಿಸಿರುವೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುವೆ. ಈ ಚೌಕಟ್ಟನ್ನು ಹೊರತುಪಡಿಸಿದ ಪ್ರತಿಕ್ರಿಯೆಗಳಿಗೆ ವಿನಯದಿಂದ ಸ್ಟಷ್ಟನೆಯನ್ನು ಕೊಟ್ಟಿದ್ದೇನೆಯೇ ಹೊರತು ನಾನು ಹೇಳುವುದೇ ಸರಿ ಎನ್ನುವ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ. ಈ ಆಶಯ ಯಾವ ಮಾತಿನಲ್ಲಿ ಇದೆ ಎಂದು ಹೇಳಿದರೆ ಸ್ಪಷ್ಟವಾಗಬಹುದು. ಅದು ಲೇಖಕರ ಅಹಂ ಎಂದು ನೀವು ಹೇಳುವುದು ಯಾವ ಕಾರಣಕ್ಕಾಗಿಯೋ ತಿಳಿಯುತ್ತಿಲ್ಲ. ಇರಲಿ ಹಿರಿಯ ವಿದ್ವಾಂಸರಾದ ತಾವುಗಳು ಚಿಕ್ಕವರ ಬರಹವನ್ನು ಓದಿ, ಇಷ್ಟು ನಿಷ್ಟುರವಾಗಿ ಮಾತನಾಡಿದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು.
ಪ್ರಿಯ ಅರುಣ ಅವರೇ,
“ಜನಪದ ನುಡಿಗಟ್ಟುಗಳ ಮಹಿಳಾ ವಲಯದ ಬಳಕೆಯ ನೆಲೆಯನ್ನು ಗುರುತಿಸಿದರೆ, ಈ ನುಡಿಗಟ್ಟುಗಳ ಒಳಗೆ ಲಿಂಗ ತಾರತಮ್ಯದ ಸೂಕ್ಷ್ಮಗಳನ್ನು ಹುಡುಕಬಹುದು.” ಅಂತ ಹೇಳಿದ್ದೀರಿ. ಆದರೆ ಇದಕ್ಕೆ ಉಧಾರಣೆಯಾಗಿ ನೀವು ಕೊಟ್ಟ “ಅನ್ನ ಅನ್ನ ನೀರು ನೀರು ಅನ್ನಿಸಿಬಿಡು” ಎಂಬ ನುಡಿಗಟ್ಟಿನ ವಿಶ್ಲೇಷಣೆಯಲ್ಲಿ ಲಿಂಗ ತಾರತಮ್ಯ ಕಂಡು ಬರಲಿಲ್ಲ. “ಅಂಬಲಿಯೋ ತುಂಬೆ ಸೊಪ್ಪೋ ತಿನ್ನು” ಎಂಬ ನುಡಿಗಟ್ಟಿನ ವಿಶ್ಲೇಷಣೆಯಲ್ಲಿ ತಾವು ಅನಗತ್ಯವಾಗಿ ಲಿಂಗತಾರತಮ್ಯ ಕಂಡಿದ್ದೀರಿ.