ಅರಳುಗಣ್ಣಿನ 'ಅನಂತ' ಪ್ರತಿಭೆ ಅನಂತಮೂರ್ತಿ – ಶ್ರೀಪತಿ ಮಂಜನಬೈಲು

– ಶ್ರೀಪತಿ ಮಂಜನಬೈಲು

ಒಂದು:
ಯು ಆರ್ ಅನಂತಮೂರ್ತಿಗಳ ಮತ್ತು ನನ್ನ ಪರಿಚಯ ಸುಮಾರು ಮೂವತ್ತು ವರುಷಗಳಷ್ಟು ಹಳೆಯದು. ನಾನು ಸಿಕ್ಕಾಗೊಮ್ಮೆ ಅವರು ಹೆಸರನ್ನು ಉಚ್ಚರಿಸುತ್ತಿದ್ದ ರೀತಿ ಮತ್ತು ಆ ಸ್ಪರ್ಶದ ಅನುಭವ ಈಗಲೂ ನನ್ನಲ್ಲಿ ಉಂಟಾಗುತ್ತದೆ. ನನ್ನ ಕಂಡೊಡನೆ, ಕಣ್ಣನ್ನು ಹಿರಿದುಗೊಳಿಸಿ ಶ್ರೀಪತಿ ಏನಯ್ಯ ಹೇಗಿದ್ದಿ? ಅಂತ ಆರಂಭಿಸಿ ನನ್ನ ಬೆಳಗಾವಿಯಲ್ಲಿನ ರಂಗಚಟುವಟಿಕೆಗಳ ಬಗ್ಗೆ ವಿಚಾರಿಸುತ್ತಿದ್ದರು.
ಮತ್ತೆ ಅವರು ಕೇಳುತ್ತಿದ್ದುದು ಯಾವ ಹೊಸ ಪುಸ್ತಕ ಓದಿದಿಯಾ ಅಂತ. ನಾನು ಓದಿದ ಯಾವುದೇ ಪುಸ್ತಕದ ಹೆಸರು ಹೇಳಿದರೆ ಸಾಕು, ಅವರು ಅದರ ಕುರಿತು, ನಾನು ಓದಿ ಅರ್ಥಮಾಡಿಕೊಂಡದ್ದಕ್ಕಿಂತಲೂ ಹೆಚ್ಚು ವಿಸ್ತೃತವಾಗಿ ಅರ್ಥಮಾಡಿಸುತ್ತಿದ್ದರು.
ಕನ್ನಡದ ಪ್ರಖ್ಯಾತ ವ್ಯಕ್ತಿಗಳು ಬೆಳಗಾವಿಗೆ ಬಂದರೆ ಸಾಮಾನ್ಯವಾಗಿ ಬೆಳಗಾವಿಯ ಮರಾಠಿ ಪತ್ರಿಕಾ ವರದಿಗಾರರು, ಕೇಳುತ್ತಿದ್ದುದು ಒಂದೇ ಒಂದು ಪ್ರಶ್ನೆ, ಆಮೇಲೆ ಕೇಳುತ್ತಿದ್ದುದು ಅದಕ್ಕೆ ಸಂಬಂಧಿಸಿದ ಪೂರಕ ಪ್ರಶ್ನೆಗಳು. ಬಂದಂತ ಉತ್ತರಗಳಿಗೆ ಹಳದಿ ಬಣ್ಣ ಲೇಪಿಸಿ, ವರದಿಯನ್ನು ಮರುದಿನದ ಮರಾಠಿ ಪತ್ರಿಕೆಗಳಲ್ಲಿ ಪ್ರಕಟಿಸಿದ ಪರಿಣಾಮ, ಎರಡೂ ರಾಜ್ಯಗಳ ಸಾಮಾನ್ಯ ಜನರ ಜೀವನ ಉಧ್ವಸ್ಥಗೊಳ್ಳುತ್ತಿತ್ತು.

ಕನ್ನಡದ ಖ್ಯಾತ ಲೇಖಕರಾದ ಶ್ರೀ ಮನು ಬಳಿಗಾರ ಮತ್ತು ಅವರ ಸಹೋದರ ಶ್ರೀ ವಿ ಪ ಬಳಿಗಾರರ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಬೆಳಗಾವಿಯಲ್ಲಿ. ಅನಂತಮೂರ್ತಿಗಳು ಮುಖ್ಯ ಅತಿಥಿ. ಆ ಸಂಬಂಧ ಮಿಲನ್ ಹೋಟೇಲಿನಲ್ಲಿ ಪ್ರೆಸ್ ಕಾನ್ಪರೆನ್ಸ್ ಏರ್ಪಡಿಸಲಾಗಿತ್ತು. ಮರಾಠಿ ಪತ್ರಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರು. ಆಗ ನಡೆದ ಪ್ರಶ್ನೋತ್ತರದ ವೈಖರಿ ನೋಡಿ.
ಓರ್ವ ಮರಾಠಿ ಪತ್ರಕರ್ತ: ಸರ್ ಬೆಳಗಾವಿಯ ಬಗ್ಗೆ ತಮ್ಮ ಅಭಿಪ್ರಾಯವೇನು?
ಯು ಆರ್ ಎ : ಹಾಗೆಂದರೆ ?!
ಮತ್ತೊಬ್ಬ ಮರಾಠಿ ಪತ್ರಕರ್ತ: ಅಂದರೆ ಗಡಿ, ಭಾಷೆಯ ಕುರಿತಾಗಿ
ಯು ಆರ್ ಎ: ದೇಶದ ಗಡಿಯ ಬಗ್ಗೆ, ಈ ದೇಶದವರಾದ ನಾವೆಲ್ಲ ಖಾಳಜಿ ಹೊಂದಿರಬೇಕು. ಇನ್ನು ರಾಜ್ಯದ ಗಡಿಗಳಿಗೆ ಆ ತರಹದ ಖಾಳಜಿ ಇರಬೇಕೆಂದು ನನಗನಿಸುವುದಿಲ್ಲ, ಇದು ದೇಶದ ಆಂತರಿಕ ವಿಷಯ. ಇನ್ನು ಭಾಷೆಯ ಕುರಿತಾಗಿ ಹೇಳಬೇಕು ಅಂದ್ರೆ ನಾನು ಬೆಳಗಾವಿಯಲ್ಲಿ ಕನ್ನಡಿಗನಾಗಿ ಹುಟ್ಟಿದ್ದರೆ ಮರಾಠಿ ಕಲೀತಿದ್ದೆ, ಮರಾಠಿಗನಾಗಿ ಹುಟ್ಟಿದ್ದರೆ ಕನ್ನಡ ಕಲೀತಿದ್ದೆ, ಅಂದರೆ, ಇಲ್ಲಿ ಹುಟ್ಟಿ ಬೆಳೆದವ ಸರಾಗವಾಗಿ ಈ ದೇಶದ ಎರಡು ಶ್ರೀಮಂತ ಭಾಷೆಗಳನ್ನು ಕಲಿಯಬಹುದು. ನೀವೆಲ್ಲ ಅಂತಹ ಪುಣ್ಯವಂತರು.
ಆಶ್ಚರ್ಯವಾಗಿದ್ದೆಂದರೆ ಆ ಪತ್ರಿಕಾ ಪರಿಷತ್ತಿನಲ್ಲಿದ್ದ ಎಲ್ಲ ವರದಿಗಾರರು ಈ ಮಾತಿಗೆ ಚಪ್ಪಾಳೆ ತಟ್ಟಿದ್ದು. ನಂತರ ನಡೆದದ್ದು ಇತರೆ ಸಾಹಿತ್ಯಿಕ ವಿಷಯಗಳು. ಆ ಮೇಲೆ ಶಿರಾ, ಇಡ್ಲಿ, ವಡಾ ಇತ್ಯಾದಿ ಇತ್ಯಾದಿ.
ಮರುದಿನ ಯಥಾವತ್ ವರದಿ, ಪಾಪ! ಹಳದಿ ಬಣ್ಣ ಹಚ್ಚಲು ಬ್ರಷ್ ಸಿಗಲಿಲ್ಲ.
ಎರಡು :
ಅನಂತಮೂರ್ತಿಯವರ ಅವಸ್ಥೆ ಕಾದಂಬರಿಯ ನಾಯಕ ಕೃಷ್ಣ, ಫ್ಯಾಸಿಸ್ಟರ ವಿರುದ್ಧ ಹೋರಾಡುವ ಸೋಷಲಿಸ್ಟ್. ವಿಧಾನಸಭೆಯ ವಿರೋಧ ಪಕ್ಷದ ನಾಯಕ. ಅವನು ಪಾಶ್ರ್ವವಾಯು ಪೀಡಿತ. ಅವನ ಹೆಂಡತಿ ಸೀತೆ, ಯಾವ ಇಸಮ್ಮುಗಳಿಲ್ಲದ, ಬ್ಯಾಂಕಿನ ನೌಕರದಾರಿಣಿ. ಸೈಟು, ಮನೆ, ಆಭರಣ ಮಾಡಿಡಬೇಕು ಅನ್ನುವ ಆಕಾಂಕ್ಷೆ ಉಳ್ಳವಳು. ರಾಜಕಿಯದಾಟ ಕೃಷ್ಣನ ಸುತ್ತ ನಡೆದು, ಪ್ರಾಮಾಣಿಕನಾಗಿ ರಾಜಕಿಯದಲ್ಲಿ ಇರುವುದು ಅಸಾಧ್ಯವೆಂಬುದನ್ನು ಮನಗಂಡ ಕೃಷ್ಣ ರಾಜಿನಾಮೆ ನೀಡುವಲ್ಲಿ ವ್ಯವಸ್ಥೆಯ ಅವಸ್ಥೆಯಿಂದ ಹೊರಬರುತ್ತಾನೆ.
ಈ ಕಾದಂಬರಿಯಲ್ಲಿ ಬರುವ ಮಹೇಶ್ವರಯ್ಯನೆಂಬಾತ ಅವದೂತನಂತ ವ್ಯಕ್ತಿ, ಕೃಷ್ಣನ ಜೀವನವನ್ನು ರೂಪಿಸಿದವ. ಕೃಷ್ಣ ಹಾಗೂ ಸೀತೆಯರ ನಡುವಿನ ಬಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಮಧ್ಯಸ್ಥ. ಈ ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಿ, ನಿರ್ದೇಶಿಸಿ ರಂಗಕ್ಕೆ ತಂದವರು ಖ್ಯಾತ ನಿರ್ದೇಶಕ ಶ್ರೀ ಪ್ರಕಾಶ ಬೆಳವಾಡಿಯವರು. ಅಭಿನಯ ತರಂಗ ಬೆಂಗಳೂರು ತಂಡಕ್ಕೆ ಈ ನಾಟಕವನ್ನು ನಿರ್ದೇಶಿಸಿ, ರಂಗಶಂಕರದಲ್ಲಿ 2007 ರಲ್ಲಿ ಪ್ರದರ್ಶಿಸಿದಾಗ, ಮಹೇಶ್ವರಯ್ಯನ ಪಾತ್ರವನ್ನು ನಿರ್ವಹಿಸಿದ್ದು ನಾನು. ಆ ಪಾತ್ರಕ್ಕೆ ಹಾಕಿದ ಮೇಕಪ್ ಹೇಗಿತ್ತೆಂದರೆ, ನನ್ನ ಗುರುತೇ ನನಗೆ ಸಿಗದಂತಿತ್ತು. ನಾಟಕ ಪ್ರದರ್ಶನಕ್ಕೆ ಅನಂತಮೂರ್ತಿಯವರು ಪತ್ನಿ ಸಮೇತರಾಗಿ ಎದುರಿನ ಸೋಫಾದಲ್ಲಿ ಕುಳಿತಿದ್ದನ್ನು ನಾನು ನೋಡಿದೆ. ಅವರು ಕಣ್ಣನ್ನು ಹಿರಿದಾಗಿಸಿ ನಾಟಕ ನೋಡುವಲ್ಲಿ ತಲ್ಲೀನರಾಗಿದ್ದಿರಬಹುದೆಂದು ನಾನು ತಿಳಿದೆ. ಒಂದು ಸನ್ನಿವೇಶದ ಸಂಭಾಷಣೆ ಹೀಗಿದೆ:
ಮಹೇಶ್ವರಯ್ಯ: ಸೀತಮ್ಮ ಸ್ವಲ್ಪ ಬನ್ನಿ ಇಲ್ಲಿ.
ಸೀತೆ: ಏನು?
ಮಹೇಶ: ತಗೊಳ್ಳಿ ಹತ್ತು ಸಾವಿರ ರೂಪಾಯಿ. ತಗೊಳ್ಳಿ. ನಿಮ್ಮ ಮನೆ ಕಟ್ಟಿಸೊಕ್ಕೆ. ನಾನು ಬೆಂಗಳೂರಿಗೆ ಬಂದಾಗ ಇಳ್ಕೋಳಕ್ಕೆ ಒಂದು ಮನೆ ಬೇಕಲ್ಲ. (ಕೃಷ್ಣನನ್ನು ಉದ್ದೇಶಿಸಿ) ಇವತ್ತು ಕುದುರೆ ರೇಸಿಂದ ಐವತ್ತು ಸಾವಿರ ಬಂತು ಕಣೋ. ನಾನೋ ಏಕಾಂಗಿ. ಇಷ್ಟು ಹಣ ಹೇಗೆ ಖರ್ಚುಮಾಡಲಿ. ಅದಕ್ಕೆ ಎಲ್ಲರ್ಗೆ ಹಂಚಿ ನನ್ನ ಖರ್ಚಿಗೇ ಅಂತ ಹತ್ತು ಸಾವಿರ ಇಟ್ಕೊಂಡು, ನನ್ನ ಧಾರವಾಡದ ತೋಟದ ಮನೆಗೆ ಹೋಗಿರ್ತೀನಿ.
ಸೀತೆ: ನನಗೆ ದುಡ್ಡು ಮುಖ್ಯವಲ್ಲ. ನನ್ನ ತಾಳಿ ಗಟ್ಟಿಯಾಗಿದ್ದರೆ ಸಾಕು. ಈ ಹಣ ಬೇಡ ತಗೊಳ್ಳಿ.
ಮಹೇಶ: ನಿನ್ನ ಗಂಡ ತುಂಬಾ ದೊಡ್ಡೋನಮ್ಮ. ಅವನನ್ನು ಬೆಳೀಲಿಕ್ಕೆ ನೀನು ಬಿಡಬೇಕು. ನನ್ನ ಹಣ, ಅವನ ಹಣ ಬೇರೆ ಅಲ್ಲ. ಇಟ್ಕೊ.
ಸೀತೆ: ದೊಡ್ಡ ಮನುಷ್ಯನ ಹೆಂಡತಿಯಾಗಿರೋ ಕಷ್ಟ ನಿಮಗೇನು ಗೊತ್ತು? ಎಲ್ರೂ ನನ್ನ ಎಷ್ಟು ಕೀಳಾಗಿ ನೊಡ್ತಾರೆ ಅಂತ ನನ್ಗೆ ಗೊತ್ತಿಲ್ವಾ? (ಅಳುವಳು)
ಈ ಸನ್ನಿವೇಶ ನಡೆದಾಗ ಮಹೇಶ್ವರಯ್ಯನ ಪಾತ್ರದಾರಿಯಾದ ನಾನು ತುಂಬಾ ಭಾವುಕನಾಗಿದ್ದೆೆ. ಮತ್ತು ಆಕೆ ದೊಡ್ಡಮನುಷ್ಯನ ಹೆಂಡತಿಯಾಗಿರೋ ಕಷ್ಟ ನಿಮಗೇನು ಗೊತ್ತು? ಅಂತ ಹೇಳುತ್ತಿರುವಾಗ ನಾನು ಆಕೆಯಿಂದ ಮುಖ ಸರಿಸಿ, ಪ್ರೇಕ್ಷಕಾಭಿಮುಖವಾಗಿ ನೋಡುತ್ತೇನೆ! ಅನಂತಮೂರ್ತಿಗಳು ಅದೆತ್ತಲೋ ನೋಡುತ್ತಿದ್ದಾರೆ.
ನಾಟಕ ಮಗೀತು. ಬಣ್ಣ ಕಳಚಿ ಹೊರ ಬಂದೆ. ”ಮೇಷ್ಟ್ರೇ ನಮಸ್ಕಾರ” ಅಂದೆ. ಅವರು ನನ್ನನ್ನು ನೋಡಿದವರೆ, ಯಥಾ ಪ್ರಕಾರ ಕಣ್ಣನ್ನು ಹಿರಿದುಗೊಳಿಸಿ ಶ್ರೀಪತಿ ಏನಯ್ಯ ಹೇಗಿದಿ?್ದ ಅಂತ ಕೇಳಿ, ಏನಯ್ಯಾ ನಾಟಕ ನೋಡ್ಲಿಕ್ಕೆ ಬಂದಿದ್ಯಾ, ಮಹೇಶನ ಪಾತ್ರ ಮಾಡಿದವನು ಎಷ್ಟು ಚೆನ್ನಾಗಿ ಅಭಿನಯಸಿದ ಅಲ್ವಾ!” ಅಂತ ಕಣ್ಣು ಹಿರಿದಾಗಿಸಿ ಕೇಳಿದರು. ಪಕ್ಕದಲ್ಲೇ ನಿಂತಿದ್ದ ಪ್ರಕಾಶ ಬೆಳವಾಡಿ ಹೇಳಿದ್ರು, ಸರ್ ಇವರೇ ಮಹೇಶ್ವರಯ್ಯನ ಪಾತ್ರ ಮಾಡಿದ್ದು ಅಂತ. ಆಗ ಮೇಷ್ಟ್ರು ಹಿರಿದಾದ ಕಣ್ಣಿನೊಂದಿಗೆ, ಜೋರಾಗಿ ನಗುತ್ತಾ, ಎಸ್ತೆರಾ ಮೇಡಂ ಅವರನ್ನು ಕರೆದು, ”ನೋಡು ಮಹೇಶನ ಪಾತ್ರ ಮಾಡಿದ್ದು ನಮ್ಮ ಶ್ರೀಪತಿ ! ಎಂದು ಹೇಳಿ ನನ್ನ ಎರಡು ಭುಜಗಳನ್ನು ಹಿಡಿದು ನಿಂತಾಗ, ನನಗಾದ ಸಾರ್ಥಕತೆಯ ಅನುಭವ ಹೇಗೆ ಹೇಳಲಿ.
ಅವರ ಪಾರ್ಥಿವ ಶರೀರದ ಅಂತಿಮ ದರ್ಶನ, ಅವರ ರೆಪ್ಪೆ ಮುಚ್ಚಿದ ಕಣ್ಣುಗಳನ್ನು ನೋಡುತ್ತಿದ್ದೆ; ನನ್ನ ಕಣ್ಣಾಲಿಗಳು ತುಂಬಿ ಮಂಜಾಗುತ್ತಿದ್ದಂತೆ, ಮೇಷ್ಟ್ರು ಕಣ್ಣುಗಳನ್ನು ಹಿರಿದಾಗಿಸಿ, ಜೋರಾಗಿ ನಗುತ್ತ ನನ್ನ ಎರಡೂ ಭುಜಗಳನ್ನು ಹಿಡಿದು ನಿಂತಂತ ಚಿತ್ರ. ಯಾರೋ ನನ್ನನ್ನು ನೂಕಿದಂತಾಯಿತು. ಮುಂದೆ ಸರಿದು ಕಣ್ಣೊರೆಸಿಕೊಂಡೆ.
ಅನಂತಮೂರ್ತಿಯವರ ಚಿತ್ರ ಕಂಡಾಗಲೆಲ್ಲ ಅವರ ಕೈಗಳು ನನ್ನ ಹೆಗಲುಗಳನ್ನು ಮುಟ್ಟುತ್ತಿವೆ ಏನೋ ಎಂದು ಭಾಸವಾಗುತ್ತದೆ.
 

‍ಲೇಖಕರು G

December 12, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಲಕ್ಷ್ಮೀಕಾಂತ ಇಟ್ನಾಳ

    ಶ್ರೀಪತಿ ಜಿ, ತಮ್ಮ ಅನಂತಮೂರ್ತಿಗಳ ನೆನಪುಗಳು ಮನಸ್ಸನ್ನು ಆರ್ದ್ರಗೊಳಿಸಿದವು. ದೊಡ್ಡ ಜೀವ ಅದು ಅನಂತಮೂರ್ತಿಯವರದು ಸರ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: