ಸಹಜ ಸಾಗುವಳಿ ಹೊಸ ಸಂಚಿಕೆ ಮಾರುಕಟ್ಟೆಯಲ್ಲಿ :
– ಯಲ್ಲಪ್ಪ ರೆಡ್ಡಿ
ದಿನಕ್ಕೆ 12 ಗಂಟೆಗಳ ಕಾಲ ಸೂರ್ಯನ ಬೆಳಕು ಸಿಕ್ಕತಕ್ಕಂಥ ರಾಷ್ಟ್ರ ನಮ್ಮದು. ನಮ್ಮ ದೇಶದಲ್ಲಿ 500-600 ಜಾತಿಯ ಗುರುತಿಸಿದ ವೃಕ್ಷ ಸಂಪತ್ತು ಇದೆ. ಭೂಮಿಯ ಒಳಗಡೆ 15 ಅಡಿ ಆಳದವರೆಗೂ ಬೆಳೆೆಯುವ ಗೆಡ್ಡೆ ಗೆಣಸುಗಳಿವೆ. ಸಾರಜನಕ ಸ್ಥಿರೀಕರಿಸುವ ಇವು ಮಣ್ಣಿನ ಫಲವತ್ತು ಹೆಚ್ಚಿಸುತ್ತವೆ. ಹೇಳಬೇಕೆಂದರೆ ಮನುಷ್ಯ ಜೀವನ ಪ್ರಾರಂಭ ಮಾಡಿದ್ದೇ ಗೆಡ್ಡೆ ಗೆಣಸು ತಿಂದುಕೊಂಡು. ಕಾಡಿನಿಂದಲೇ ಪ್ರಾರಂಭವಾದ ನಾಗರಿಕತೆ ನಮ್ಮದು. ನಮ್ಮ ನಾಗರಿಕತೆಯ ಮೊದಲ 60-70 ಸಾವಿರ ವರ್ಷಗಳು ಮನುಷ್ಯ ಅನ್ನುವ ಪ್ರಾಣಿ ಕಾಡನ್ನೇ ಅವಲಂಭಿಸಿತ್ತು. 10 ಸಾವಿರ ವರ್ಷದಿಂದೀಚೆಗಷ್ಟೆ ಕೃಷಿ ಬಂದಿರುವುದು. ರವೀಂದ್ರನಾಥ ಟಾಗೋರರು ಒಮ್ಮೆ ಲಂಡನ್ನಲ್ಲಿ ಭಾಷಣ ಮಾಡುತ್ತಾ, ‘ನಿಮ್ಮದು ಹಿಂದುಳಿದ ನಾಗರಿಕತೆ’ ಎಂದು ಬ್ರಿಟಿಷರು ಹಂಗಿಸಿದ್ದನ್ನು ಪ್ರಸ್ತಾಪಿಸುತ್ತಾ, ‘ನಿಮ್ಮ ದೇಶದ ನಾಗರಿಕತೆ ಪಟ್ಟಣಗಳಿಂದ ಹುಟಿದ್ದು, ನಮ್ಮದು ಕಾಡಿನಿಂದ ಹುಟ್ಟಿದ ನಾಗರಿಕತೆ. ಆದ್ದರಿಂದಲೇ ನಾವು ಎಲ್ಲಾ ಕಾರ್ಯಗಳನ್ನು ‘ಅರಣ್ಯೆ’ ಎಂಬ ಸ್ತುತಿಯಿಂದ ಪ್ರಾರಂಭಿಸುವುದು. ಖುಗ್ವೇದದಲ್ಲಿ ಇದರ ಪ್ರಸ್ತಾಪ ಇದೆ. ಅರಣ್ಯೇ ಎಂದರೆ ಅನ್ನಪೂರ್ಣೆ, ತಾಯಿ ಎಂದೂ ಆಗುತ್ತದೆ.
ಈ ಶತಮಾನದ ಪ್ರಾರಂಭದಲ್ಲಿ ಶೂ ಮಾಕರ್ ಎನ್ನುವ ವಿಶ್ವ ವಿಖ್ಯಾತ ಅರ್ಥ ಶಾಸ್ತ್ರಜ್ನ ಭಾರತವನ್ನೆಲ್ಲಾ ಸುತ್ತಿ ಹಾಕುತ್ತಾರೆ. ‘ಇಂಡಿಯನ್ ಟ್ರೀಸ್’ ಎನ್ನುವ ಪುಸ್ತಕಕ್ಕೆ ಮುನ್ನುಡಿ ಬರೆಯುತ್ತಾ, ಇಂಡಿಯಾ ದೇಶದಲ್ಲಿ ಬಡತನಕ್ಕೆ, ನಿರುದ್ಯೋಗಕ್ಕೆ, ಅನಾರೋಗ್ಯಕ್ಕೆ, ಅಪೌಷ್ಟಿಕತೆಗೆ ಅವಕಾಶವಿಲ್ಲ, ಏಕೆಂದರೆ ಇಷ್ಟೊಂದು ಸಸ್ಯ ಪ್ರಬೇಧಗಳು, ಇಷ್ಟು ವೈವಿಧ್ಯತೆ ಪ್ರಪಂಚದಲ್ಲಿ ಎಲ್ಲೂ ಇಲ್ಲ ಎನ್ನುತ್ತಾರೆ. ನುಗ್ಗೆಯೊಂದರಲ್ಲೇ 150 ಪ್ರಬೇಧಗಳಿದ್ದಾವೆ ಇಲ್ಲಿ(ಅದನ್ನ ಅಮೆರಿಕದವರು ಪೇಟೆಂಟ್ ಪಡೆದುಕೊಂಡಿರುವುದು ಬೇರೆ ವಿಷಯ). ಪ್ರತಿ ಮನೆಯಲ್ಲೂ ನುಗ್ಗೆ ಗಿಡ ಇರುವಾಗ; ಅದರ ಕಾಯಿ, ಸೊಪ್ಪು, ಹೂವು ಪ್ರತಿಯೊಂದನ್ನೂ ಆಹಾರವಾಗಿ ಬಳಸುವಾಗ ಅಪೌಷ್ಟಿಕತೆ ಹೇಗೆ ಸಾಧ್ಯ ಎನ್ನುವುದು ಷೂ ಮಾಕರ್ ಇಂಗಿತ. ಅವರು ಮುಂದುವರೆದು ವಿಶ್ವ ಬ್ಯಾಂಕ್, ಐಎಂಎಫ್ನಲ್ಲಿ ಇರುವಷ್ಟು ಹಣದ ಎರಡು-ಮೂರು ಪಟ್ಟು ಮೌಲ್ಯವನ್ನು ಭಾರತದಲ್ಲಿ ಏನೂ ಶ್ರಮವಿಲ್ಲದೆ ಉತ್ಪತ್ತಿ ಮಾಡಬಹುದು ಎಂದು ಅಭಿಪ್ರಾಯ ಪಡುತ್ತಾರೆ.
ಕಾಡಿನ ಹಣ್ಣುಗಳು
ನಮ್ಮಲ್ಲಿನ ಜೀವ ಸಂಪತ್ತನ್ನ ಪಟ್ಟಿ ಮಾಡುತ್ತಾ ಹೋದರೆ ಅದರ ಅಗಾಧತೆಯಲ್ಲಿ ಕಳೆದೇ ಹೋಗುತ್ತೇವೆ. ಉತ್ತರ ಕನ್ನಡದಲ್ಲಿ ಎಷ್ಟು ವೈವಿಧ್ಯತೆ ಇದೆ ಅಂದರೆ ಗಾರ್ಸನಿಯ ಎಂಬ ಒಂದೇ ಕುಟುಂಬಕ್ಕೆ ಸೇರಿದ ಐದು ಮಹಾ ವೃಕ್ಷಗಳು, ಹಲಸಿನ ಕುಟುಂಬಕ್ಕೆ ಸೇರಿದ ಒಂದು ವಾಟೆ ಇದೆ. ಪ್ರಪಂಚದಲ್ಲೇ ಅತ್ಯಂತ ಪರಿಣಾಮಕಾರಿ ಆ್ಯಂಟಿ ಕೊಲೆಸ್ಟ್ರಲ್ ಎಂದು ಇವು ಪ್ರಸಿದ್ಧಿ. ಇದರಲ್ಲಿ ಕೋಕಮ್ ಅಥವಾ ಪುನರ್ಪುಳಿ ಅಂತ ಇದೆ. ಅದ್ಭುತವಾದ ತಂಪು ಪಾನೀಯ ಮಾಡುತ್ತಾರೆ ಅದರಲ್ಲಿ. ಅದರ ಬೀಜದಲ್ಲಿ ಬಟರ್ ಮಾಡುತ್ತಾರೆ. ಹೀಗೆ ಪ್ರತಿಯೊಂದು ವೃಕ್ಷದ ಮೌಲ್ಯವೂ ಬೆಲೆ ಕಟ್ಟಲಾಗದ್ದು.
ಬನ್ನಿ ಗಿಡ, ಲಕ್ಷ್ಮಿ ಫೋಟೊ
ನಮ್ಮ ಹಿರಿಯರಿಗೆ ಪರಿಸರದ ಬಗ್ಗೆ ಅತಿ ಸೂಕ್ಷ್ಮವಾದ ಒಳಗಣ್ಣು ಇತ್ತು. ಇವತ್ತು ಬನ್ನಿ ಗಿಡವನ್ನು ಪೂಜನೀಯ ಗಿಡ ಎಂದು ಪೂಜಿಸುತ್ತಾರೆ. ಆದರೆ ಪರಿಸರಾತ್ಮಕವಾಗಿ ನೋಡಿದಾಗ ಅದೊಂದು ಕೀಸ್ಟೋನ್ ಟ್ರೀ. ಅಂದರೆ ಆಧಾರಪ್ರಾಯವಾದ ಮರ. ಹೀಗೆನ್ನಲು ಕಾರಣ, ಈ ಬನ್ನಿ ಮರ ತನ್ನ ಪೊಟರೆಗಳಲ್ಲಿ ಎಂಟು ಹತ್ತು ಥರದ ಇರುವೆಗಳನ್ನು ಸಾಕಿಕೊಂಡಿರುತ್ತದೆ. ನಮ್ಮ ಬೆಳೆಗೆ ಕೀಟದ ಬಾಧೆ ಬಂದಾಗ ಆ ಇರುವೆಗಳು ದಂಡು ದಂಡಾಗಿ ಬಂದು ಕೀಟಗಳನ್ನು ತಿನ್ನುತ್ತವೆ. ಆದ್ದರಿಂದಲೇ ಬನ್ನಿ ಮರಕ್ಕೆ ರೈತರು ಪೂಜನೀಯ ಸ್ಥಾನ ಕೊಟ್ಟಿರುವುದು, ನಮ್ಮ ಹಿರಿಯರು ಅದನ್ನು ರಕ್ಷಣೆ ಮಾಡಬೇಕು ಎಂದಿರುವುದು. ಅದು ದ್ವಿದಳ ಸಸ್ಯ. ಅದರ ಎಲೆಯಲ್ಲಿ ಸಾರಜನಕ ಯತೇಚ್ಛವಾಗಿದೆ. ಅದು ಉದುರಿಸಿದ ಎಲೆ ಭೂಮಿಗೆ ಸೇರಿದರೆ ಉತ್ತಮ ಗೊಬ್ಬರ ಆಗುತ್ತದೆ. ಬನ್ನಿ ಎಲೆಯನ್ನ ಕೊಟ್ಟರೆ ಬಂಗಾರ ಕೊಟ್ಟಂತೆ ಎಂದು ಅದನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಬನ್ನಿ ಗಿಡವನ್ನ ಕಾಪಾಡಿಕೊಂಡರೆ ಸಂಮೃದ್ಧಿ ಸಿಗುತ್ತದೆ ಎಂಬುದನ್ನು ನಮ್ಮ ಹಿರಿಯರು ಹೀಗೆ ಹೇಳಿದ್ದಾರೆ.
ಅದಿರಲಿ, ಲಕ್ಷ್ಮಿ ಫೋಟೊದ ಕಲ್ಪನೆ ನೋಡಿ. ಏನೇನಿರುತ್ತೆ ಲಕ್ಷ್ಮಿ ಫೋಟೊದಲ್ಲಿ? ನೀರು, ನೀರಿನಲ್ಲಿ ಪದ್ಮಕಮಲ, ಪಕ್ಕದಲ್ಲಿ ಆನೆ ಇರುತ್ತದೆ. ಮಧ್ಯದಲ್ಲಿ ಲಕ್ಷ್ಮಿ ಸಂಪತ್ತು ಸೂರೆ ಮಾಡುತ್ತಾ ಕುಳಿತಿರುತ್ತಾಳೆ. ಇವು ನಾಲ್ಕಕ್ಕೆ ಇರುವ ಸಂಬಂಧ ನೋಡಿ. ಆನೆ ಎನ್ನುವುದು ಇಲ್ಲಿ ಮೋಡ. ಕಮಲ ಜಲ ಶುದ್ಧಿ ಮಾಡುವ ಹೂ. ಕಮಲ ತನ್ನ ಒಣತೂಕದ 20ರಷ್ಟು ಪ್ರಮಾಣದ ಬಾರ ಲೋಹಗಳನ್ನು(ಪಾದರಸ, ಕ್ಯಾಡ್ಮಿಯಮ್, ಕ್ರೋಮಿಯಮ್) ತನ್ನಲ್ಲಿ ಸಂಗ್ರಹ ಮಾಡಿ ಇಟ್ಟುಕೊಳ್ಳುತ್ತದೆ. ಇದರಿಂದ ನೀರನ್ನು ಶುದ್ಧಿ ಮಾಡಿ ನೀರಿನ ರಕ್ಷಣೆ ಮಾಡುತ್ತದೆ. ನಿಮಗೆ ಲಕ್ಷಿ ಬೇಕು ಎಂದರೆ ನೀರನ್ನು ಶುದ್ಧವಾಗಿ ಇಡಿ, ಮೋಡ ಹಾಳಾದರೆ ಮಳೆ ಸುರಿಯುವುದಿಲ್ಲ, ಆಸಿಡ್ ರೈನ್ ಸುರಿಯುತ್ತೆ, ಆದ್ದರಿಂದ ಮೋಡದ ರಕ್ಷಣೆ ಮಾಡಿಕೊಳ್ಳಿ. ನೀರನ್ನ, ಗಾಳಿಯನ್ನ ಶುದ್ಧವಾಗಿ ಇಟ್ಟುಕೊಂಡಾಗ ಸಿರಿ ಸಂಪತ್ತು ದಕ್ಕುತ್ತದೆ ಎಂಬ ಸಂದೇಶ ಸಾರುವುದು ಲಕ್ಷ್ಮಿ ಫೋಟೊ. ಪದ್ಮ ಕಮಲ, ನೀರು, ಮೋಡ ಮತ್ತು ಸಂಪತ್ತುಗಳಿಗೆ ಸಂಬಂಧವನ್ನು ಕಲ್ಪಿಸಿ ಲಕ್ಷ್ಮಿ ಫೋಟೋದಲ್ಲಿ ಅಳವಡಿಸಿದ ನಮ್ಮ ಹಿರಿಯರ ವಿವೇಕ ನೋಡಿದಿರಾ? ಅವರಿಗೆ ಎಷ್ಟು ಪಿಎಚ್ಡಿ ಇದ್ದಿರಬೇಕು ಎಂದು ಯೋಚಿಸುತ್ತಿದ್ದೀರಾ? 880 ಜಾತಿಯ ವೃಕ್ಷಗಳಿಗೆ ಆಧ್ಯಾತ್ಮಿಕ ವ್ಯಾಖ್ಯೆ ಕೊಟ್ಟಿದ್ದಾರೆ ನಮ್ಮ ಹಿರಿಯರು. ಇದಕ್ಕೆ ಇಂಥ ಗುಣ ಇದೆ, ಇದನ್ನು ಹೀಗೆ ಬಳಸಬೇಕು ಎಂದು ನಮಗೆ ಟಿಪ್ಸ್ ಕೊಟ್ಟಿದ್ದಾರೆ. ಆಥರ್ಿಕ ಲಾಭಕ್ಕೂ ಮಿಗಿಲಾದ ಮಹತ್ತಾದ ವಿಚಾರಗಳನ್ನು ಹೇಳಿಕೊಟ್ಟಿದ್ದಾರೆ.
ನಮ್ಮ ಪರಂಪರೆಯಲ್ಲಿ ಅಗ್ರೋಫಾರೆಸ್ಟ್ರಿ
ನಮ್ಮಲ್ಲಿ ಏನೇನು ಸಂಪನ್ಮೂಲಗಳಿವೆ, ಯಾವುದನ್ನು ಹೇಗೆ ಬಳಸುತ್ತಿದ್ದೇವೆ, ನಮ್ಮ ದೇಶದ ಸಂಪತ್ತನ್ನ ಜನಗಳಿಗೆ ಅನುಕೂಲವಾಗುವ ರೀತಿಯಲ್ಲಿ, ಉತ್ಪಾದನೆ ಹೆಚ್ಚಿಸುವ ರೀತಿಯಲ್ಲಿ ಇನ್ನೂ ಉತ್ತಮವಾಗಿ ಹೇಗೆ ಬಳಸಬಹುದು ಅನ್ನುವ ಬಗ್ಗೆ ಒಂದು ವರದಿ ಮಾಡಿಕೊಡಲು ಮದ್ರಾಸ್ ಪ್ರೆಸಿಡೆನ್ಸಿ ಡಾ| ಬೊಕಾನಿನ್ ಅನ್ನುವವರಿಗೆ ವಹಿಸುತ್ತದೆ(ಹಸಿರು ಕ್ರಾಂತಿಗೆ ಮುಂಚೆ). ಅವರು ಮದ್ರಾಸ್ನಿಂದ ಬೆಂಗಳೂರಿಗೆ ಬಂದು ರಾಮನಗರ, ಚನ್ನಪಟ್ಟಣ, ಮೈಸೂರು, ಕೊಡಗು ಎಲ್ಲಾ ಕಡೆ ಓಡಾಡುತ್ತಾರೆ. ಎತ್ತಿನ ಗಾಡಿಯಲ್ಲಿ, ಕಾಲ್ನಡಿಗೆಯಲ್ಲಿ ಓಡಾಡಿ ನಮ್ಮ ಕೃಷಿ ಆಚರಣೆಗಳ ಅಧ್ಯಯನ ಮಾಡುತ್ತಾರೆ. ಈ ದೇಶದಲ್ಲಿ ಎಂತಹ ಅದ್ಭುತವಾದ ಕೃಷಿ ಪದ್ಧತಿ ಇದೆ, ಅಗ್ರೋಫಾರೆಸ್ಟ್ರಿ ಇದೆ ಎನ್ನುವುದು ಅವರಿಗೆ ಅರ್ಥವಾಗುತ್ತದೆ. ವರದಿಯ ಕೊನೆಯಲ್ಲಿ, ‘ನಾನು ಹೇಳುವಂಥದ್ದು ಏನೂ ಇಲ್ಲ. ಕಲಿತದ್ದೇ ಎಲ್ಲ’ ಎಂದು ಸೇರಿಸುತ್ತಾರೆ.
ಅವರು ಕಂಡದ್ದೇನು? ಪ್ರತಿ ಊರಲ್ಲೂ ಒಂದು ಗುಂಡು ತೋಪು(5-10 ಕಿ.ಮೀಟರಿಗೆ ಒಂದು). ಪ್ರತಿಯೊಂದು ಹಳ್ಳಿಯಲ್ಲೂ ಒಂದು ಅಶ್ವತ್ಥ ಮರ/ಕಟ್ಟೆ. ಅದಕ್ಕೆ ಪ್ರತಿ ದಿನ ಪೂಜೆ. ಪ್ರದಕ್ಷಿಣೆ. ಅಲ್ಲಿ ಮದುವೆ ಮಾಡುತ್ತಾರೆ. ಊರಿನ ಹಿರಿಯರೆಲ್ಲ ಸಾಲಾಗಿ ನಿಂತುಕೊಂಡು ಎತ್ತುಗಳಿಗೆ ಜೋಳ ತಿನ್ನಿಸುತ್ತಾರೆ. ಅಲ್ಲೇ ಪಂಚಾಯತಿ ಕಟ್ಟೆ ಇದೆ. ಕಲ್ಯಾಣಿ ಇದೆ. ಕಲ್ಯಾಣಿ ಪಕ್ಕದಲ್ಲಿ ಒಂದು ಗೋಕಟ್ಟೆ ಇದೆ. ಅಲ್ಲೇ ಪಕ್ಕದಲ್ಲಿ ಕೆರೆ ಇದೆ. ಕೆರೆಯಿಂದ ನೀರು ಗೋಕಟ್ಟೆಗೆ ಬರುತ್ತದೆ. ಗೋಕಟ್ಟೆಯಲ್ಲಿ ಸಗಣಿ ಗಂಜಲ ಹಾಕಿ ನೀರು ಶುದ್ಧಿಯಾಗಿ ಕಲ್ಯಾಣಿಗೆ ಬರುತ್ತದೆ. ಕಲ್ಯಾಣಿ ಪಕ್ಕಕ್ಕೆ ಗುಂಡು ತೋಪು.
ಗುಂಡು ತೋಪುಗಳು ಹೆಜ್ಜೇನಿಗೆ ಮನೆಯಾಗಿವೆ. ಹಕ್ಕಿ ಪಕ್ಕಿಗಳಿಗೆ ಮನೆಯಾಗಿವೆ. ರೈತರು ಕರೆಯದೆ ಜೇನ್ನೊಣ ಬಂದು ಅವರ ಬೆಳೆಗಳಿಗೆ ಪರಾಗಸ್ಪರ್ಶ ಮಾಡಿಕೊಡುತ್ತದೆ. ಇದರಿಂದ ಬೆಳೆಗಳ ಇಳುವರಿ ಸಂಮೃದ್ಧವಾಗಿದೆ. ಬೆಳೆಗಳಿಗೆ ಹುಳ ಬಿದ್ದರೆ ಹಕ್ಕಿಗಳು ಕಬಳಿಸಿ ಬೆಳೆ ಕಾಪಾಡುತ್ತವೆ.. ಇತ್ಯಾದಿ..ಇತ್ಯಾದಿ.
ಪಕ್ಷಿಗಳು ಮರಿ ಹಾಕುವುದು ನಮ್ಮ ಹೊಲದಲ್ಲಿ ಬೆಳೆಗಳು ಇದ್ದಾಗ. ಏಕೆಂದರೆ ಹಕ್ಕಿಗೆ ತನ್ನ ಮರಿಗಳಿಗೆ ತಿನ್ನಿಸಲು ಕಂಬಳಿ ಹುಳ/ ಹಸಿರುಳ ಬೇಕು. 15 ದಿವಸದಲ್ಲಿ ಮರಿ ರೆಕ್ಕೆ ಬಂದು ಹಾರಿ ಹೋಗಬೇಕಾದರೆ ಅದಕ್ಕೆ ಚನ್ನಾಗಿ ತಿನ್ನಿಸಬೇಕು. ಅದು ಬಕಾಸುರನಂತೆ ಹುಳುಗಳನ್ನು ತಿನ್ನುತ್ತವೆ. ಹೀಗೆ ನಮ್ಮ ಬೆಳೆಗೆ ಬೀಳುವ ಹುಳುಗಳನ್ನು ಹಕ್ಕಿಗಳು ಸ್ವಚ್ಚವಾಗಿ ತಿಂದು ಮುಗಿಸುತ್ತವೆ. ಗುಂಡುತೋಪು ಅಸಂಖ್ಯಾತ ಹಕ್ಕಿಗಳಿಗೆ ಮನೆಯಾಗಿರುತ್ತಿತ್ತು. ಅಲ್ಲದೆ ಎಲ್ಲ ಹೊಲಗಳಲ್ಲೂ ಹೊಂಗೆ ಮರ, ಆಲದ ಮರ, ಗೋಣಿ ಮರ, ಬಸರಿ ಮರ, ಹಲಸಿನ ಮರ ಹೀಗೆ 25-30 ಥರದ ಮರಗಳನ್ನು ಹಾಕಿರುತ್ತಿದ್ದರು. ಹೀಗೆ ಗುಂಡು ತೋಪು, ಅಶ್ವಥಕಟ್ಟೆ, ಹೊಲದಲ್ಲಿ ಇರುತ್ತಿದ್ದ ಮರಗಿಡಗಳು ಇವೆಲ್ಲ ನಮ್ಮಲ್ಲಿ ಇದ್ದಂಥ ಅಗ್ರೋಫಾರೆಸ್ಟ್ರಿ ಮಾದರಿಗಳು. ಇದನ್ನು ನಾವು ಹಾಳು ಮಾಡಿಕೊಂಡುಬಿಟ್ಟೆವು.
ಈ ಉದಾಹರಣೆ ನೋಡಿ. ಹೊಸಕೋಟೆ ಹತ್ತಿರ ರಾಮೇನಹಳ್ಳಿ ಅನ್ನುವ ಊರಿನ ಮಧ್ಯೆ ದೊಡ್ಡ ಆಲದ ಮರ ಇದೆ. ಆ ಆಲದ ಮರದಲ್ಲಿ 600-700 ಹೆಜ್ಜೇನಿನ ಗೂಡಿದೆ. ಈ ಒಂದು ಮರ ಇರುವುದರಿಂದ ಆ ಊರಿನ ಹಿಪ್ಪುನೇರಳೆ ಬೆಳೆ ಇಳುವರಿ 25% ಹೆಚ್ಚಾಗಿದೆ. ಹಿಪ್ಪುನೇರಳೆಯ ಗುಣಮಟ್ಟ ಉತ್ಕೃಷ್ಟವಾಗಿದೆ. ಮಾತ್ರವಲ್ಲ, ಜೇನ್ನೊಣಗಳ ಕಾರಣಕ್ಕೆ ಅಲ್ಲಿ ಬೆಳೆಯುವ ಎಲ್ಲಾ ಬೆಳೆಗಳಲ್ಲೂ ಯಾವುದೇ ಖರ್ಚಿಲ್ಲದೆ 20-25% ಹೆಚ್ಚು ಇಳುವರಿ ಬರುತ್ತದೆ. ಯಾವ ವಿಶ್ವ ಬ್ಯಾಂಕಿನ ಸಾಲವೂ ಇಲ್ಲದೆ ಇಂಥ ಸೇವೆ ಈ ಒಂದು ಮರದಿಂದ, ಜೇನ್ನೊಣಗಳಿಂದ ಆಗುತ್ತಿದೆ. ನಮ್ಮಲ್ಲಿ 250 ಜಾತಿ ಜೇನುಗಳಿವೆ. ನಮ್ಮ ಪ್ರತಿ ಬೆಳೆಗಳಲ್ಲೂ ಇವುಗಳ ಪಾತ್ರ ಅತೀ ಮುಖ್ಯ. ಸೂರ್ಯಕಾಂತಿ ಹೂವಿಗೆ ಬೆಳಿಗ್ಗೆ ಎದ್ದು ಕಯ್ಯಾಡಿಸಿ ಪರಾಗಸ್ಪರ್ಶ ಮಾಡಿಸುತ್ತಾರೆ ರೈತರು. ಆದರೆ ಜೇನ್ನೊಣದಿಂದ ಆದ ಪರಾಗಸ್ಪರ್ಶದಿಂದ ಅತ್ಯುತ್ತಮ ಇಳುವರಿ ಬರುತ್ತದೆ.
ನಮ್ಮದೇ ನರ್ಸರಿ ಇರಲಿ
ನಾವು ಈಗ ಅಗತ್ಯವಾಗಿ ಮಾಡಬೇಕಾಗಿರುವುದು ನಮ್ಮ ನರ್ಸರಿಗಳನ್ನು ನಾವೇ ಬೆಳೆೆಸಿಕೊಳ್ಳುವ ಕೆಲಸ. ಇದಕ್ಕೆ ನಬಾಡರ್್ನ ಸಹಾಯ ಕೂಡ ಇದೆ. ಸಸಿಗಳ ಸಾಗಣೆಗೆ ತುಂಬಾ ಖರ್ಚಾಗುತ್ತದೆ. ಸಾಗಣೆಯಲ್ಲಿ ಸಸಿಗಳಿಗೆ ಡ್ಯಾಮೇಜ್ ಕೂಡ ಜಾಸ್ತಿ. ನಮ್ಮದೇ ನರ್ಸರಿ ಇದ್ದಾಗ ನಮಗೆ ಬೇಕಾದ ಜಾತಿಯ ಸಸ್ಯಗಳನ್ನು ನಮಗೆ ಹೊಂದಾಣಿಕೆ ಆಗುವ ರೀತಿಯಲ್ಲಿ ಬೆಳೆಸಿಕೊಳ್ಳಬಹುದು.
ರೈತರ ಹೊಲದಲ್ಲಿ ಮರಗಿಡಗಳನ್ನು ಮತ್ತೆ ತರಬೇಕು ಎಂದು ನಾನು ಅರಣ್ಯ ಇಲಾಖೆಯಲ್ಲ್ಲಿದ್ದಾಗ ಬೇವಿನ ಮರ, ನೇರಳೆ ಮರ, ಹಲಸಿನ ಮರ, ಎಲಚಿ ಮರ ನುಗ್ಗೆ ಮರ ಹೀಗೆ ಸುಮರು 150 ಥರದ ಮರಗಳನ್ನು ಬೆಳೆಸಿ ರೈತರಿಗೆ ಕೊಡುತ್ತಿದ್ದೆ. 1978ರಲ್ಲಿ ಒಂದು ದಿನ ನಾನು ಮದ್ದೂರಿನ ರಸ್ತೆ ಬದಿ ಟಿಫಾನಿಸ್ನಲ್ಲಿ ನಿಂತುಕೊಂಡು ತಿಂಡಿ ತಿನ್ನುತ್ತಿದ್ದೆ. ಪಕ್ಕದಲ್ಲಿ ಇಲಾಖೆಯ ವ್ಯಾನಿತ್ತು. ಅದರ ತುಂಬಾ ಹಲಸಿನ ಸಸಿಗಳನ್ನು ತುಂಬಿಕೊಂಡಿದ್ದೆ. ಅದನ್ನು ನೋಡಿದ ಕೆಲವು ರೈತರು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳಲು ಶುರು ಮಾಡಿದರು. ಕೊನೆಗೆ ನನ್ನ ಬಳಿ ಬಂದು ‘ನಮಗೆ ಸಸಿ ಕೊಡಿ’ ಎಂದು ಕೇಳಿದರು. ನಾನು ‘ಒಂದಕ್ಕೆ 50 ರೂಪಾಯಿ ಆಗುತ್ತೆ’ ಎಂದೆ. ‘ಏನು ಮಹಾ, ಕೊಡ್ತೀವಿ, ಕೊಡಿ’ ಅಂದರು. ನಾನು 50 ರೂಪಾಯಿ ತೆಗೆದುಕೊಂಡು ಸಸಿ ಕೊಟ್ಟೆ. ‘ನನಗೆರಡು, ನನಗೆರಡು’ ಎಂದು ಮುಗಿಬಿದ್ದು ಅಷ್ಟೂ ಸಸಿಗಳನ್ನು ಕೊಂಡುಕೊಂಡರು. ಅವರ ಆಸಕ್ತಿ ನೋಡಿ ನನಗೆ ಮನಸ್ಸು ತುಂಬಿ ಬಂದು ಅವರು ಕೊಟ್ಟ ದುಡ್ಡನ್ನು ಅವರಿಗೇ ಹಿಂದಿರುಗಿಸಿ ಕೊಟ್ಟು ಬಿಟ್ಟೆ.
ಮದ್ದೂರಿನ ಹತ್ತಿರ ಶಿವನಳ್ಳಿ ಅನ್ನುವಲ್ಲಿ ನಮ್ಮ ಸಂಶೋಧನಾ ಕೇಂದ್ರ ಇತ್ತು. ಅಲ್ಲಿ ಅದ್ಭುತವಾದ ನರಸರಿ ಮಾಡಿದ್ದೆವು. ಸುತ್ತ ಮುತ್ತ ಹಳ್ಳಿಗಳಲ್ಲಿ 2-3 ಲಕ್ಷ ಸಸಿಗಳನ್ನು ನನ್ನೇ ಕೊಟ್ಟಿದ್ದೇನೆ. ಈಗಲೂ ಅಲ್ಲಿ ನರ್ಸರಿ ಇದೆ. ಮಂಚಯ್ಯ ಎನ್ನುವ ಗಾರ್ಡ್ ಇದ್ದಾನೆ. ಅವನಿಗೆ ಗಿಡಮರಗಳ ಬಗ್ಗೆ, ನರ್ಸರಿ ಬಗ್ಗೆ ಅಗಾಧವಾದ ಜ್ನಾನ ಇದೆ. ನೀವು ಆತನನ್ನು ಹೋಗಿ ಕಾಣಬಹುದು.
ನಾನು ನೇರಳೆ ಇತ್ಯಾದಿ ಗಿಡಗಳ ನರ್ಸರಿ ಮಾಡಬೇಕಾದರೆ, ಹಳ್ಳಿಗಳಿಗೆ ಹೋಗಿ ಇಡೀ ಮರದ ಹಣ್ಣುಗಳನ್ನು(ಮರಕ್ಕೆ ಮರವನ್ನೇ) ಕೊಂಡುಕೊಂಡು ಬಿಡುತ್ತಿದ್ದೆ. ಬುಟ್ಟಿಗಳಲ್ಲಿ ಹಣ್ಣು ತುಂಬಿಕೊಂಡು ಬಂದು ಶಾಲೆ ಮಕ್ಕಳಿಗೆ ತಿನ್ನಲು ಕೊಡುತ್ತಿದ್ದೆ. ‘ಹಣ್ಣು ತಿಂದು, ಬೀಜ ಕೊಡಿ’ ಎನ್ನುತ್ತಿದ್ದೆ. ಮಕ್ಕಳಿಗೋ ‘ಹೋಳಿ’ ಹಬ್ಬ. ಸ್ಕೂಲು ಬಿಟ್ಟದ್ದೆ ತಡ, ಓಡೋಡಿ ಬರುತ್ತಿದ್ದರು. ಹೊಟ್ಟೆ ತುಂಬಾ ನೇರಳೆ ಹಣ್ಣು ತಿಂದು ಬೀಜವನ್ನು ಜೋಪಾನವಾಗಿ ಕೊಟ್ಟು ಹೋಗುತ್ತಿದ್ದರು. ಹೀಗೆ ಬೀಜ ಸಂಗ್ರಹಿಸಿ ನರ್ಸರಿ ಮಾಡುತ್ತಿದೆ. ಕೆಲವರು ತಾವೇ ಸಸಿ ಮಾಡಿ ಕೊಡುತ್ತಿದ್ದದ್ದೂ ಉಂಟು. ಸಿರಸಿಯಲ್ಲಿ ಒಬ್ಬರ ಹತ್ತಿರ ಒಳ್ಳೆ ಮಿಡಿ ಮಾವಿನಕಾಯಿ ಮರ ಇತ್ತು. ಅವರು ಬೀಜ ಕೊಡಲು ಒಪ್ಪುತ್ತಿರಲಿಲ್ಲ. ಬಹಳ ಕಷ್ಟ ಪಟ್ಟು ಒಪ್ಪಿಸಿ ಅವರಿಗೇ ಸಸಿ ಬೆಳೆಸಿ ಕೊಡಲು ಕೇಳಿದೆವು. ಕೊನೆಗೆ ಉತ್ತಮ ಸಸಿಗಳನ್ನು ಬೆಳೆಸಿಕೊಟ್ಟರು.
ತಾಯಿ ಮರ ಗುರುತಿಸಿ
ನರ್ಸರಿ ಮಾಡಬೇಕಾದರೆ ಮೊದಲು ನಿಮ್ಮ ಸ್ಥಳೀಯ ಮರಗಳನ್ನು ಗುರುತಿಸಿಕೊಳ್ಳಿ. ಮ್ಯಾಪ್ ಮಾಡಿ. ಅಂಥ ಮರಗಳ ಸಸಿಗಳನ್ನು ನರ್ಸರಿ ಮಾಡಿ ಬೆಳೆಸಿ. ಎಲ್ಲಿಂದಲೋ ಬೀಜ/ಸಸಿ ತಂದು ಹಾಕಿದರೆ ನಿಮ್ಮ ಪ್ರದೇಶಕ್ಕೆ ಹೊಂದಿಕೊಳ್ಳುವುದಿಲ್ಲ. ನಿಮ್ಮಲ್ಲೇ ಇರುವ ತಾಯಿ ಮರಗಳನ್ನ ಗುರುತಿಸಿಕೊಂಡು ಮ್ಯಾಪ್ ಹಾಕಿಕೊಂಡರೆ, ಇಂಥ ಊರಿನಲ್ಲಿ ಇಂಥ ಮರ ಇಂಥವರ ಜಮೀನಲ್ಲಿ ಇದೆ ಎಂದು ಗುರುತಿಸಿ. ಹೊರಗಿನಿಂದ ಸಸಿ ತರುವುದು ಬೇಕಾಗಿಲ್ಲ. ತಾಯಿ ಮರಗಳನ್ನು ಗುರುತಿಸಲು ಕೆಲ ಮಾನದಂಡಗಳಿವೆ. ಯಾವ ಯಾವ ಮರಕ್ಕೆ ಏನೇನು ಮಾನದಂಡ ಎನ್ನುವುದನ್ನು ನಾನು ಮುಂದೆ ನಿಮಗೆ ವಿವರವಾಗಿ ಹೇಳುತ್ತೇನೆ. ಇದರ ಬಗ್ಗೆ ನಾನು ಒಂದು ಪುಸ್ತಕ ಬರೆದಿದ್ದೇನೆ. ಅದು ಅರಣ್ಯ ಇಲಾಖೆಯ ಗ್ರಂಥಾಲಯದಲ್ಲಿದೆ. ನೀವು ಯಾರಾದರೂ ಹುಡುಕಿ ತೆಗೆಯಬಹುದು. ಹೀಗೆ ಒಳ್ಳೆ ತಾಯಿ ವೃಕ್ಷ ಗುರುತಿಸಿ ಅದರ ಬೀಜಗಳನ್ನು ತೆಗೆದುಕೊಳ್ಳಬೇಕು.
ಬೆಂಗಳೂರಿನ ಸಮೀಪ ಹೊಸಕೋಟೆಯಲ್ಲಿ ಅರಣ್ಯ ಇಲಾಖ್ಯೆಯ ಸಂಶೋಧನ್ ಕೇಂದ್ರ ಇದೆ. ಅಧಿಕ ಇಳುವರಿಯ ಹುಣಸೆ, ಹಲಸು, ಬೇಲ, ಬೆಟ್ಟನೆಲ್ಲಿ, ಜಂಬುನೇರಳೆ, ಇನ್ನಿತರ ಬಹುಪಯೋಗಿ ಗಿಡಗಳ ಉತ್ತಮ ನರ್ಸರಿ ಅಲ್ಲಿದೆ. ಅಲ್ಲಿ ನೀವು ತಾಯಿಮರಗಳನ್ನು ನೋಡಬಹುದು. ಆಯಾ ಪ್ರದೇಶಕ್ಕೆ ಚನ್ನಾಗಿ ಹೊಂದಾಣಿಗೆ ಮಾಡಿಕೊಂಡ ಗಿಡಗಳನ್ನು ಗುತರ್ಿಸಿ ನರಸರಿ ಮಾಡಿಕೊಂಡರೆ ಅದರಿಂದಲೆ ನಿಮಗೆ 20% ಹೆಚ್ಚಿನ ಇಳುವರಿ ಸಿಗುತ್ತದೆ. ಹೆಚ್ಚಿನ ಅಭ್ಯಾಸದಿಂದ ಇನ್ನೂ 20% ಹೆಚ್ಚು ಇಳುವರಿ ಪಡೆಯಬಹುದು. ಇವತ್ತು ಹಲಸಿನ ಹಣ್ಣಿನ 200 ಉತ್ಪನ್ನಗಳನ್ನ ಮಾಡಿ ಮಾರುತಿದ್ದಾರೆ. ಏನೂ ಇಲ್ಲದಿದ್ದರೆ ಬೀಜ ಒಲೆಗೆ ಹಾಕಿ ಸುಟ್ಟಿಕೊಂಡು ತಿಂದರೆ ಸಾಕು. ತುಂಬಾ ರುಚಿಯಾಗಿರುತ್ತದೆ. ಬೀಜ ಒಡೆದು ಸಾರಿಗೆ ಹಾಕಿದರೂ ಅಷ್ಟೇ ರುಚಿ. ಹಲಸಿನ ಎಳೆ ಕಾಯಿ ಸಾರು ಅದ್ಭುತ. ಮಾಂಸಹಾರಿಗಳಿಗೆ ಚಿಕನ್ ತಿಂದಂತೆ ಇರುತ್ತದೆ. ಇದೇ ಥರ ನೀವು ವಿವಿಧ ಮರಗಳಿಂದ ಉತ್ಪನ್ನಗಳನ್ನು ಮಾಡಬಹುದು. ಅದರ ಗುಣ, ಮೌಲ್ಯಗಳನ್ನು ಗುರುತಿಸಲು ಸಿಎಫ್ಟಿಆರ್ಐನವರ ಸಹಾಯ ತೆಗೆದುಕೊಳ್ಳಬಹುದು.
ಕುಲ ವೃಕ್ಷಗಳು
ನಮ್ಮಲ್ಲಿ ಸ್ಥಳ ವೃಕ್ಷಗಳು, ಕುಲವೃಕ್ಷಗಳು ಅಂತ ಇವೆ. ನಮ್ಮ ಹಿರಿಯರು ಒಂದೊಂದು ಕುಲದವರಿಗೆ ಒಂದೊಂದು ವೃಕ್ಷವನ್ನು ವಹಿಸಿ ಕೊಟ್ಟಿದ್ದರು. ಈ ಮರವನ್ನು ನೀವು ರಕ್ಷಣೆ ಮಾಡಿದರೆ ಈ ಮರ ನಿಮ್ಮ ಕುಲವನ್ನ ರಕ್ಷಣೆ ಮಾಡುತ್ತದೆ ಎಂದು ಹೇಳುತ್ತಿದ್ದರು. ಹೀಗೆ 15 ಸಾವಿರ ವೃಕ್ಷಗಳನ್ನ 15 ಸಾವಿರ ಕುಲಗಳಿಗೆ ರಕ್ಷಣೆ ಮಾಡಲು ಕೊಟ್ಟರು ಎಂದು ಕಂಡು ಬರುತ್ತದೆ. ಅವರು ಆ ಸ್ಥಳದಲ್ಲಿ ಇರತಕ್ಕಂಥ ಸ್ಥಳವೃಕ್ಷಗಳನ್ನು ಬೆಳೆಸಿ ಕಾಪಾಡುವ ಜೊತೆಗೆ ಬೇರೆಯವರಿಗೆ ಅದನ್ನು ಬೆಳೆಸಿ ಕೊಡಬೇಕು ಎನ್ನುವ ಆದೇಶ ಕೊಡುತ್ತಿದ್ದರು. ಒಂದು ಮರ ಅವನತಿಯಾಗಿಬಿಟ್ಟರೆ/ಕಳೆದುಹೋಗಿಬಿಟ್ಟರೆ ಮತ್ತೆ ಅದನ್ನು ಸೃಷ್ಟಿಸಲು ಸಾಧ್ಯವಿಲ್ಲ ಎನ್ನುವ ಮುಂದಾಲೋಚನೆಯಿಂದ ಹೀಗೆ ಮಾಡುತ್ತಿದ್ದರು. ಹೀಗೆ ಆಯಾ ಪ್ರದೇಶದ ಸಸ್ಯತಳಿ ಸಂಪತ್ತನ್ನು ರಕ್ಷಿಸುತ್ತಿದ್ದರು.
ಪಂಚವಟಿ
ಇದನ್ನು ನಾನು ಅನೇಕ ಕಡೆ ಮಾಡಿಸಿದ್ದೇನೆ. ಐದು ಮಹಾನ್ ವೃಕ್ಷಗಳ ಕಲ್ಪನೆ ಇದು.
1. ಬಿಲ್ವಪತ್ರೆ. ಇದು ಮಹಾವೃಕ್ಷ. ಈಶ್ವರನಿಗೆ ಪ್ರಿಯವಾದದ್ದು. ಇದರ ಮಹಾನ್ ಗುಣ ಅಂದರೆ, ಪ್ರಪಂಚದಲ್ಲೇ ಅತ್ಯದ್ಭುತ ಡಿ-ಟಾಕ್ಸಿಫೈಯಿಂಗ್ ಮರ ಇದು. ನಮ್ಮೊಳಗೆ ಸೇರಿಕೊಂಡಿರುವ ವಿಷವನ್ನೆಲ್ಲಾ ತೊಳೆಯುತ್ತದೆ ಇದು.
2. ಎರಡನೆ ಮಹಾವೃಕ್ಷ ಬೆಟ್ಟನೆಲ್ಲಿ. ರೋಗಗಳನ್ನು ತಡೆಗಟ್ಟಿ ಆರೋಗ್ಯವಂತರಾಗಿ ಮಾಡುವ ಅದ್ಭುತವಾದ ಒಂದು ಮರ. ಇದಕ್ಕೊಂದು ಕಥೆ ಇದೆ(ಬಾಕ್ಸ್ ನೋಡಿ).
3. ಮೂರನೆಯದ್ದು ಅಶೋಕ. ತಾಪಸವನ್ನ ಕಳೆಯುವಂಥ ಮಹಾ ವೃಕ್ಷ. ಖಿನ್ನತೆಯನ್ನು ತಡೆಯುವಂಥ ಅದ್ಭುತ ಗುಣ ಇದಕ್ಕೆ ಇದೆ. ರಾವಣ ಸೀತೆಯನ್ನು ಇಟ್ಟಿದ್ದು ಈ ಮರದ ಕೆಳಗೇ.
4. ನಾಲ್ಕನೆಯ ಮಹಾನ್ ವೃಕ್ಷ ಆಲ.
5. ಐದನೆಯದು ಅಶ್ವತ್ಥ. ವಟವೃಕ್ಷ. ಇವೆರಡೂ ನಮ್ಮ ಜ್ನಾನ ವೃದ್ಧಿ ಮಾಡುವಂಥದ್ದು.
ಈ ಐದು ವೃಕ್ಷಗಳ ಸಮಾಗಮವನ್ನು ಪಂಚವಟಿ ಎನ್ನುತ್ತೇವೆ. ಒಂದು ಹಳ್ಳಿಯ ಒಟ್ಟಾರೆಯಾದ ಆರೋಗ್ಯಕ್ಕೆ ಪಂಚವಟಿ ಅತ್ಯಗತ್ಯ.
ಒಳ್ಳೆ ಗುಣದ ಮರಗಳನ್ನು, ಹಿಂದಿನಿಂದ ನಮ್ಮಲ್ಲಿ ಇದ್ದಿರದಿದ್ದರೂ ನಾವು ಯಾಕೆ ತಂದು ಹಾಕಬಾರದು?
ಪ್ರತಿಯೊಂದು ಪ್ರದೇಶದಲ್ಲಿ ಬೆಳೆಯುವ ಮರಗಳು ಆಯಾ ಪ್ರದೇಶಕ್ಕೆ ಹೊಂದಾಣಿಕೆ ಆಗಿರುತ್ತವೆ. ಬಿಜಾಪುರದಲ್ಲಿ 40 ಡಿಗ್ರಿ ಉಷ್ಣಾಂಶ. ಮಳೆ ಕಮ್ಮಿ. ಕೆಲ ಜಾತಿ ಮರಗಳು ಯಾವಾಗಲೋ ಇಲ್ಲಿಗೆ ಬಂದು ಕಾಲಾಂತರದಲ್ಲಿ ಇಲ್ಲಿನ ಸ್ಥಿತಿಗತಿಗೆ ಹೊಂದಾಣಿಕೆ ಆಗಿರುತ್ತವೆ. ಅಂಥವನ್ನು ಬೆಳೆಸಿದರೆ ಚನ್ನಾಗಿ ಬೆಳೆಯುತ್ತವೆ. ಅದಕ್ಕೆ ಬೇಕಾದಂಥ ಪರಾಗಸ್ಪಶರ್ಿಗಳು ಆ ಪ್ರದೇಶದಲ್ಲಿ ಅಭಿವೃದ್ಧಿ ಆಗಿರುತ್ತವೆ. ಅವುಗಳಿಗೆ ಈ ಮರಗಳು ಸುಪರಿಚಿತವಾಗಿರುತ್ತವೆ. ಬೇರೆ ಪ್ರದೇಶದ ಮರಗಳನ್ನು ತಂದು ಬೆಳೆಸಿದರೆ ಉತ್ಪಾದನೆ ಕಡಿಮೆ ಆಗುತ್ತದೆ. ಕೆಂಪು ಮಣ್ಣಿಗೆ ಹೊಂದಿಕೊಂಡ ಮರಗಳನ್ನು ತಂದು ಕಪ್ಪು ಮಣ್ಣಿಗೆ ಹಾಕಿದರೆ ಅದಕ್ಕೆ ಉಸಿರು ಕಟ್ಟುತ್ತದೆ. ಸಾಯಲೂ ಬಹುದು. ಹಾಗೆಂದು ಹಾಕಲೇಕೂಡದು ಎಂದೇನಿಲ್ಲ. ಹಾಕಬಹುದು.
ಆದರೆ ವಿಶೇಷ ಗಮನ ಕೊಟ್ಟು ಬೆಳೆಸಬೇಕು. ಗೊಬ್ಬರ ನೀರು ಎಲ್ಲ ಕೊಡಬೇಕು.
ಇನ್ನು ಒಳ್ಳೆ ಗುಣ ಎಂದರೆ ಏನು ಎನ್ನುವ ಪ್ರಶ್ನೆ ಬರುತ್ತದೆ. ಸೇಬು ನೋಡಲು ದಪ್ಪ ಇದೆ ಎಂದು ಒಂದಕ್ಕೆ 25 ರೂಪಾಯಿಯಾದರೂ ಕೊಟ್ಟು ತರುತ್ತೇವೆ. ಅದರಲ್ಲಿ ಏನು ಸತ್ವ ಇರುತ್ತದೆ? ಚಾಕೊಲೆಟ್, ಸಿದ್ಧ ಆಹಾರ ಕೊಟ್ಟು ಬೆಳೆಸಿದ ಮಕ್ಕಳು ನೋಡಲು ಗುಂಡು ಗುಂಡಾಗಿರುತ್ತಾರೆ, ಚನ್ನಾಗಿದೆ ಮಗು ಅನ್ನುತ್ತೇವೆ. ಅದಕ್ಕೆ ಏನೊಂದೂ ತಾಳಿಕೊಳ್ಳುವ ಶಕ್ತಿ ಇರುವುದಿಲ್ಲ. ಹಳ್ಳಿ ಮಕ್ಕಳು ರೊಟ್ಟಿ ತಿಂದುಕೊಂಡು, ಮುದ್ದೆ ತಿಂದುಕೊಂಡು ಕುಣಿದಾಡಿಕೊಂಡು ಇರುತ್ತಾರಲ್ಲ, ಎಷ್ಟು ಗಟ್ಟಿ ಮುಟ್ಟಾಗಿರುತ್ತಾರೆ ಅವರು. ಹಾಗೆಯೇ ಮರಗಿಡಗಳು ಕೂಡ. ಅದಕ್ಕೆ ರಸಗೊಬ್ಬರ ಹಾಕಿ, ವಿಷ ಸಿಂಪಡಣೆ ಮಾಡಿ ಆರೈಕೆ ಮಾಡಿದರೆ ನೋಡಲು ಚನ್ನಾಗಿರುತ್ತೆ. ಅಷ್ಟೇ ದುರ್ಬಲವಾಗಿರುತ್ತದೆ.
ಒಳ್ಳೆ ಗುಣ ಎಂದರೆ ಸ್ಥಳೀಯವಾಗಿ ಹೊಂದಿಕೊಂಡು ಬೆಳೆಯುವ, ಸ್ಥಳೀಯ ಅಗತ್ಯಗಳನ್ನು ಪೂರೈಸುವ ಗುಣ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸಸ್ಯ ತಳಿಗಳನ್ನು ಸ್ಥಳೀಯವಾಗಿ ಸಂರಕ್ಷಣೆ ಮಾಡಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಬೇಕಾದ್ದು ಸರಿಯಾದ ಕ್ರಮ.
ಪಂಚಾಯತಿಗಳು
ಪಂಚಾಯತಿ ರಾಜ್ ಕಾಯ್ದೆ ಪ್ರಕಾರ, ಗ್ರಾಮ ಪಂಚಾಯತಿಗಳು ತಮ್ಮ ಪ್ರದೇಶದ ಮರವನ್ನು ಬೆಳೆಸಿ ಅಲ್ಲಿನ ಜನರ ಬಳಕೆಗೆ ಕೊಡಬೇಕು. ಹೆಚ್ಚಾದರೆ ಮಾತ್ರ ಮಾರಾಟ ಮಾಡಬೇಕು. ಸ್ಥಳೀಕರ ಬೇಡಿಕೆಗಳನ್ನು ಪೂರೈಸಿದ ನಂತರವಷ್ಟೆ ಮಾರಬೇಕು ಎಂದು ಕಾನೂನಲ್ಲಿದೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ, ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಕೊಡಬೇಕು. ಅದನ್ನು ಕೇಳಿ ಪಡೆದುಕೊಳ್ಳಬೇಕಾದ್ದು ಎಲ್ಲರ ಹಕ್ಕು. ಎಲ್ಲಿ ಇದಾಗುತ್ತಿಲ್ಲವೋ ಅಂಥ ಕಡೆ ಕಾನೂನಿನ ಸಹಾಯ ಪಡೆದುಕೊಳ್ಳಬಹುದು.
ಬಾಕ್ಸ್
ಸುಕನ್ಯಾ ಎನ್ನುವ ರಾಜಕುಮಾರಿ ಕಾಡಿನಲ್ಲಿ ವಿಹರಿಸುತ್ತಾ ಒಂದು ಹುತ್ತದಲ್ಲಿ ಹೊಳೆಯುತ್ತಿರುವ ಕಣ್ಣನ್ನು ನೋಡುತ್ತಾಳೆ. ಭಯವಾಗಿ ಚುಚ್ಚಿಡುತ್ತಾಳೆ. ರಕ್ತ ಬರುತ್ತದೆ. ಈಗ ಇನ್ನೊಂದು ಕಣ್ಣು ಕಾಣಿಸುತ್ತದೆ. ಅದನ್ನೂ ಚುಚ್ಚಿಬಿಡುತ್ತಾಳೆ. ಈಗ ಎರಡೂ ಕಣ್ಣಿಂದ ರಕ್ತ ಸುರಿಯತೊಡಗುತ್ತದೆ. ಅದು ತಪ್ಪಸ್ಸಿನಲ್ಲಿದ್ದ ವೃದ್ಧ ಚ್ಯವನ ಋಷಿಯ ಕಣ್ಣುಗಳು. ಕಣ್ಣು ಕಳೆದುಕೊಂಡು ಕೋಪಗೊಂಡ ಆತ ಇವಳಿಗೆ ಶಾಪ ಕೊಡುತ್ತಾನೆ. ಸುಕನ್ಯಳ ಸಖಿಯರು ಬೇಡಿಕೊಂಡ ನಂತರ, ರಾಜಕುಮಾರಿ ತನ್ನನ್ನು ಮದುವೆಯಾಗುವುದಾದರೆ ಶಾಪವನ್ನು ಹಿಂತೆಗೆದುಕೊಳ್ಳುತ್ತೇನೆ ಎನ್ನುತ್ತಾನೆ. ಸುಕನ್ಯಾ ಅವನನ್ನು ಮದುವೆಯಾಗಿ ನಿಷ್ಟೆಯಿಂದ ಅವನ ಸೇವೆ ಮಾಡುತ್ತಿರುತ್ತಾಳೆ. ಇವಳನ್ನು ಕಂಡು ಮರುಗಿದ ಅಶ್ವಿನಿ ದೇವತೆಗಳು ಅವಳಿಗೆ ಬೆಟ್ಟನೆಲ್ಲಿಯಲ್ಲಿ ಚ್ಯವನಪ್ರಾಶ ತಯಾರಿಸುವ ಫಾಮರ್ುಲಾ ಹೇಳಿಕೊಡುತ್ತಾರೆ. ಅದನ್ನು ಸೇವಿಸಿದ ಚ್ಯವನಋಷಿ ಕ್ರಮೇಣ ಯುವಕನಾಗಿ ಪರಿವರ್ತನೆಯಾಗುತ್ತಾನೆ. ಸಮರಸದ ಬಾಳು ಇವರದ್ದಾಗುತ್ತದೆ.






thanks for the informative column on trees and their value in our culture , i am very much interested to subscirbe the paper please guide how i can , if there is any more material from the same writer means plz share it .
Thank you. This bi-monthly magazine is totally dedicated to organic/natural farming and this is the 11th year of publication.
Contact Address: Editor, ‘Sahaja Saguvali’, No. 22, Michael Palya, New Tippasandra Post, Bangalore-560 075, Phone- 080-25283370, email:icrablr@gmail.com
ಸಮೃಧ್ಧವಾದ ಮಾಹಿತಿ, ನಿಮಗೆ ನನ್ನ ಕೋಟಿ ಪ್ರಣಾಮಗಳು.
ನಾನು ನರ್ಸರಿ ಮಾಡಬೇಕೆಂದಿದ್ದೇನೆ. ನಿಮ್ಮ ಸಲಹೆ ಅತ್ಯಮೂಲ್ಯವಾದದ್ದು ನಿಮ್ಮಲ್ಲಿಗೆ ಬರುತ್ತೇನೆ.
ವಂದನೆಗಳೊಂದಿಗೆ.
ನಂದಿ.
ಸೇಬು ನೋಡಲು ದಪ್ಪ ಇದೆ ಎಂದು ಒಂದಕ್ಕೆ 25 ರೂಪಾಯಿಯಾದರೂ ಕೊಟ್ಟು ತರುತ್ತೇವೆ. ಅದರಲ್ಲಿ ಏನು ಸತ್ವ ಇರುತ್ತದೆ? ಚಾಕೊಲೆಟ್, ಸಿದ್ಧ ಆಹಾರ ಕೊಟ್ಟು ಬೆಳೆಸಿದ ಮಕ್ಕಳು ನೋಡಲು ಗುಂಡು ಗುಂಡಾಗಿರುತ್ತಾರೆ, ಚನ್ನಾಗಿದೆ ಮಗು ಅನ್ನುತ್ತೇವೆ. ಅದಕ್ಕೆ ಏನೊಂದೂ ತಾಳಿಕೊಳ್ಳುವ ಶಕ್ತಿ ಇರುವುದಿಲ್ಲ. ಹಳ್ಳಿ ಮಕ್ಕಳು ರೊಟ್ಟಿ ತಿಂದುಕೊಂಡು, ಮುದ್ದೆ ತಿಂದುಕೊಂಡು ಕುಣಿದಾಡಿಕೊಂಡು ಇರುತ್ತಾರಲ್ಲ, ಎಷ್ಟು ಗಟ್ಟಿ ಮುಟ್ಟಾಗಿರುತ್ತಾರೆ ಅವರು. ಹಾಗೆಯೇ ಮರಗಿಡಗಳು ಕೂಡ..
True sir……!! superb. very informative article about trees. Thank you so much.