ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮನೊಡನೆ ಕಾಶಿಗೆ..

girija shasthri

ಗಿರಿಜಾ ಶಾಸ್ತ್ರಿ 

ಅಮ್ಮನಿಗೆ ಕಳೆದ ವರುಷ ತೊಂಬತ್ತು ವರುಷದ ಹುಟ್ಟಿದ ಹಬ್ಬ ಆಚರಿಸಿದೆವು. ‘ಯಾರೂ ಫೋನು ಮಾಡುವುದಿಲ್ಲ…. ನೋಡಲು ಬರುವುದಿಲ್ಲ ಎಂದು ಕಾಲಕಳೆಯುವುದೇ ದುರ್ಭರವಾಗಿರುವುದರಿಂದ, ಕಂಪ್ಲೇಂಟ್ ಮಾಡುವಾಗ ನೆಂಟರೆಲ್ಲಾ ಬಂದು ಅಮ್ಮನ್ನು ಮಾತನಾಡಿಸಿದ್ದೇ ಅವಳಿಗೆ ದೊಡ್ಡ ಸಂಭ್ರಮ- ಹುಟ್ಟಿದ ಹಬ್ಬದ ಆಚರಣೆಗಿಂತ.

ಅಂದು ನೆಂಟರೆಲ್ಲಾ ಹೋದ ಮೇಲೆ ನನ್ನ ಬಳಿ ಬಂದು ನಾನು ಕಾಶಿಯನ್ನು ಇನ್ನೊಮ್ಮೆ ನೋಡಬೇಕೆನಿಸುತ್ತದೆ ನನ್ನನ್ನು ಕರೆದುಕೊಂಡು ಹೋಗ್ತೀಯಾ? ಎಂದು ಕೇಳಿದಳು. ಅವಳಿಗೆ ಇತ್ತೀಚೆಗೆ ಬಹಳ ಮರೆವು ಕಾಡುತ್ತಿರುವುದರಿಂದ ಕಾಶಿಯ ಮಾತನ್ನೂ ಮರೆತಾಳು ಈ ವಯಸ್ಸಿನಲ್ಲಿ ಅಷ್ಟು ದೂರ ಅವಳನ್ನು ಕರೆದುಕೊಂಡು ಹೋಗುವುದು ಹೇಗೆ ಎಂದು ನಾನು ಅವಳ ಮಾತಿಗೆ ಹೆಚ್ಚು ಗಮನ ಕೊಟ್ಟಿರಲಿಲ್ಲ.

shivaಆದರೆ ಮುಂಬಯಿಯಿಂದ ಬೆಂಗಳೂರಿನಲ್ಲಿರುವ ಅವಳಿಗೆ ಪದೇ ಪದೇ ಫೋನ್ ಮಾಡಿದಾಗಲೆಲ್ಲಾ ಅದೇ ಮಾತು ‘ಕಾಶಿಗೆ ಯಾವಾಗ ಕರೆದುಕೊಂಡು ಹೋಗ್ತೀಯಾ?’ ಒಂದು ವರುಷದಿಂದ ಅವಲತ್ತು ಕೊಳ್ಳುತ್ತಿದ್ದಾಳಲ್ಲ ಎಂದು ಅವಳನ್ನು ಮುಂಬಯಿಗೆ ಕರೆದುಕೊಂಡು ಬಂದೆ.

ನನ್ನ ಮನೆಗೆ, ನನಗೆ ವಯಸ್ಸಾಯಿತು ಇನ್ನು ಎಲ್ಲಿರಬೇಕೋ ಅಲ್ಲಿರಬೇಕು ನಾನು ಬಂದರೆ ನಿಮಗೆಲ್ಲಾ ತೊಂದರೆ ಯಾಕೆ ? ಎಂದು ನನ್ನ ಮನೆಗೆ ಬರಲು ಒಲ್ಲೆನುತ್ತಿದ್ದವಳು ಈಗ ಕಾಶಿಗೆ ಹೋಗಬೇಕು ಎನ್ನುವ ಒಂದೇ ಕಾರಣಕ್ಕೆ ನನ್ನ ಜೊತೆ ಲಗುಬಗೆಯಿಂದ ಹೊರಟು ಬಂದಳು.

ಮುಂಬಯಿಂದ ಕಾಶಿಗೆ, ಕಾಶಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಸೀಟು ಬುಕ್ ಮಾಡಿದ್ದಾಯಿತು. ಅವಳ ಸಂಭ್ರಮ ಹೇಳತೀರದು ‘ಯಾವ ಸೇವೆ ಮಾಡಿಸಬೇಕು ಗಂಗಾ ಸ್ನಾನಕ್ಕೆ ಬೇಗನೇ ಎದ್ದು ಹೋಗಬೇಕು. ಯಾವ ಯಾವ ದೇವಸ್ಥಾನಗಳನ್ನು ನೋಡಬೇಕು, ಸಂಕಲ್ಪ ಮಾಡಿಸಲು ಎಲ್ಲಿ ಚೀಟಿ ಬರೆಸಬೇಕು……ಈಗಲೇ ಬಟ್ಟೆ ರೆಡಿ ಮಾಡಿಡು… ಹೊರಡೋ ಗಳಿಗೆಯಲ್ಲಿ ಮರೆತು ಹೋದರೆ ಕಷ್ಟ” ಹೀಗೆ ಅಬ್ಬಬ್ಬಾ ಅವಳ ಹುರುಪು ಉತ್ಸಾಹದಿಂದೆ ಓಡಲು ಸಾಧ್ಯವೇ? ಹೊರಡಲು ತಯಾರಾಗಿದ್ದೇವೆ.

ಇಂದು ಬೆಳಿಗ್ಗೆ ನನ್ನ ತೀರಾ ಹತ್ತಿರದ ಬಂಧು ಒಬ್ಬಳಿಂದ ಫೋನ್ ಬಂದಿತು. “ಧೈರ್ಯ ಮಾಡಿ ಕರಕೊಂಡು ಹೋಗ್ತೀದ್ದೀ ತುಂಬಾ ಸಂತೋಷ ಕಣೆ, ವಿಶ್ವನಾಥ ಇದ್ದಾನೆ . ಏನೂ ಆಗೋದಿಲ್ಲ ಹೆದರಬೇಡ. ನಾವೆಲ್ಲಾ ಪಾರ್ಥಿಸ್ತಿರ್ತೀವಿ. ಧೈರ್ಯವಾಗಿ ಹೋಗಿ ಬಾ” ಎಂದು ಹೀಗೆಲ್ಲಾ ಹಾರೈಸುತ್ತಾಳೆ ಎಂದೇ ಭಾವಿಸಿದ್ದೆ. ಆದರೆ ಅವಳು ಹೇಳಿದ್ದು ಏನು ಗೊತ್ತೇ, “ನಿನ್ನ ಗಂಡ ನಿನ್ನ ಜೊತೆಯಲ್ಲಿ ಬರ್ತಾ ಇರೋದು ಒಳ್ಳೇದಾಯಿತು. ಯಾಕೇಂದ್ರೆ ಒಬ್ಬರೇ ಕರ್ಕೊಂಡು ಹೋದಾಗ, ಹಾಗೆ ಕರ್ಕೊಂಡು ಹೋದೋರಿಗೇ ಏನಾದರೂ ಆಗಿಬಿಟ್ಟರೆ? ಭಾಷೆ ಬರದೆ ಇರೋ ಆ ವಯಸ್ಸಾದವರ ಗತಿ ಏನು” ಎಂದು ಅವಳ ಗಂಡ ಹೇಳಿದ್ದನ್ನು ನನಗೆ ರವಾನಿಸಿದಳು.

ಅವಳು ಹೇಳಿದ್ದು ವಾಸ್ತವವಾದರೂ, ಬದುಕಿರುವಾಗಲೇ ಅಮ್ಮನಿಗೆ ಏನಾದರೂ ಮಾಡಬೇಕು ಎನ್ನುವ ನಂಬಿಕೆ ಇರುವ ನಾನು ಅಳುಕಿನಿಂದಲೇ ಅಮ್ಮನ ಕೊನೆಯ ಆಸೆಯನ್ನು ಪೂರೈಸಲು ಹೊರಟಿರುವಾಗ, ನನ್ನ ಬಂಧು ಕೊಟ್ಟ ಉತ್ತರದಿಂದ ಎದೆ ಧಸಕ್ಕೆಂದಿತು. ನನ್ನವರೇ ನನ್ನೆದೆಗೆ ಚೂರಿ ಅಲಗು ಹಾಕುತ್ತಾರೆ. ತಾವೂ ಕರೆದುಕೊಂಡು ಹೋಗುವುದಿಲ್ಲ ಕರೆದುಕೊಂಡು ಹೋಗುತ್ತಿರುವ ನನ್ನನ್ನೂ ಹೆದರಿಸುತ್ತಾರೆ. ಯಾಕೆಂದರೆ ಎಲ್ಲರಿಗೂ ತಮ್ಮನ್ನು, ತಮ್ಮೊಳಗಿರುವ ಗಿಲ್ಟನ್ನು ಮುಚ್ಚಿಕೊಳ್ಳಬೇಕಾಗಿದೆ. ಎಷ್ಟಾದರೂ ನಮ್ಮದು ವೈಕುಂಠಸಮಾರಾಧನೆಯ ಸಂಸ್ಕೃತಿ!

ನನ್ನ ಹೆದರಿಕೆ ಇನ್ನೂ ಹೆಚ್ಚಾಗಿದೆ. ಹೊಟ್ಟೆ ಸಂಕಟ ತಾಳಲಾರದೆ ಹಂಚಿಕೊಳ್ಳುತ್ತಿದ್ದೇನೆ. ಸ್ನೇಹಿತರೇ ನಿಮ್ಮೆಲ್ಲರ ಹಾರೈಕೆಗಳೆ ನನಗೆ ಶ್ರೀರಕ್ಷೆ. ನನ್ನ ನಂಬಿಕೆಯನ್ನು ರಕ್ಷಿಸುತ್ತೀರಲ್ಲಾ?

‍ಲೇಖಕರು Admin

5 June, 2016

3 Comments

  1. lalitha sid

    ನಿಮ್ಮ ಉದ್ದೇಶ ಒಳ್ಳೆ.ದು. ಹಾಗಾಗಿ ಯಾತ್ರೆ ಸಂಪೂರ್ಣ ಸಫಲವೂ ಯಶಸ್ವಿಯೂ ಆಗುತ್ತದೆ. ವಿಶ್ವನಾಥ ಅನ್ನಪೂರ್ಣೆಯರೂ ವೃದ್ಧರೇ. ಅವರಿಗೆ ವೃದ್ಧರ ಕಷ್ಟ ಗೊತ್ತು. ಕೈ ಹಿಡಿತಾರೆ ಹೋಗಿಬನ್ನಿ.. ಒಳ್ಳೇದಾಗಲಿ.

  2. Sangeeta Kalmane

    ಅಯ್ಯೋ, ಧೈಯ೯ವಾಗಿ ಕರೆದುಕೊಂಡು ಹೋಗಿ ಬನ್ನಿ. ಏನೂ ಆಗೋದಿಲ್ಲ. ಕಾಶಿಯಲ್ಲೂ ನಮ್ಮಂತೆ ಮನುಷ್ಯರೇ ಇರೋದು. ಸರಿಯಾದ ಪೂರ್ವ ತಯಾರಿಯಲ್ಲಿ ಹೊರಟರೆ ಆಯಿತು. .ಈಗಿನ ಕಾಲದಲ್ಲಿ ಉಪದೇಶ ಮಾಡೊ ಮಂದಿ ಬೇಕಾದಷ್ಟಿದ್ದಾರೆ. ಸಹಾಯ ಮಾಡುವವರು ಯಾರೂ ಇಲ್ಲ. ವಾಸ್ತವಕ್ಕಿಂತ ಕಲ್ಪನೆಯಲ್ಲಿ ಹೆದರಿಕೆ ಜಾಸ್ತಿ. ಎಲ್ಲ ಬಿಟ್ಟಾಕಿ. ನಿಮ್ಮ ಪ್ರಯಾಣ ಸುಖಕರವಾಗಿರಲಿ. ಅಜ್ಜೀ HAPPY JOURNEY.

  3. Shama, Nandibetta

    ಆಚಾರವಿಲ್ಲದ ನಾಲಿಗೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading