ಅಮೃತಾ ಹೆಗಡೆ ಅಂಕಣ- ಕ್ರಿಕೇಟರ್​ ‘ಬ್ರೆಟ್​ಲೀ’ ಜತೆ ಅಥರ್ವ…

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

27

‘ಒರ್ವ ಮಗುವಿಗೆ ಶ್ರವಣಶಕ್ತಿ ಇಲ್ಲ ಎಂದಾಗ, ಅದರ ತಂದೆತಾಯಿ ಅದೆಷ್ಟರ ಮಟ್ಟಿಗೆ ಮಾನಸಿಕ ಕಷ್ಟ ಅನುಭವಿಸುತ್ತಾರೆ ಎಂಬುದು ನನಗೂ ಗೊತ್ತು. ಆ ನೋವಿನ ಅನುಭವ ನನಗೂ ಇದೆ.’ ಎಂದು ಅವರೆಂದಾಗ, ಆಶ್ಚರ್ಯವಾಗಿತ್ತು ನನಗೆ. ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ‘ಕಷ್ಟ ಯಾರಿಗೂ ತಪ್ಪಿದ್ದಲ್ಲ’ಎಂದುಕೊಂಡೆ ಮನಸ್ಸಿನಲ್ಲಿಯೇ. ಅವರ ಮಾತು ಮುಂದು ವರೆಯುತ್ತಲೇ ಇತ್ತು. ‘ನನ್ನ ಮಗ ಪ್ರಿಸ್ಟನ್​ ಲೀ ೫ ವರ್ಷ ವಯಸ್ಸಿನವನಾಗಿದ್ದಾಗ, ಆಕಸ್ಮಿಕವಾಗಿ ಬಿದ್ದು ಆಗಿದ್ದ ಗಾಯ ಅತ್ಯಂತ ತೀವ್ರತರವಾಗಿತ್ತು. ಬಿದ್ದ ರಭಸಕ್ಕೆ ಅವನ ತಲೆಗೆ ಏಟುಬಿದ್ದು, ಒಂದು ವರ್ಷಗಳ ತನಕ, ತನ್ನ ಒಂದು ಕಿವಿಯ ಶ್ರವಣಶಕ್ತಿಯನ್ನು ಸಂಪೂರ್ಣ ಕಳೆದುಕೊಂಡಿದ್ದ. 

ದೇವರ ದಯೆ ಮತ್ತು ಸತತ ಚಿಕಿತ್ಸೆಯಿಂದಾಗಿ ಒಂದು ವರ್ಷದ ನಂತರ ನನ್ನ ಮಗನಿಗೆ ಶ್ರವಣ ಶಕ್ತಿ ಮರಳಿ ಬಂತು. ಈಗ ನನ್ನ ಮಗ ಮೊದಲಿನಂತೆ ಕೇಳಿಸಿಕೊಳ್ಳುತ್ತಾನೆ. ‘ವೇಗದ ಬೌಲರ್​, ಅಂತರಾಷ್ಟ್ರೀಯ ಕ್ರಿಕೆಟರ್​ ಬ್ರೆಟ್​ ಲೀ ಮಾತುಗಳು ಇವು. ಮೈಸೂರಿನಲ್ಲಿ ‘ಸ್ಕೈ ಸ್ಪೀಚ್​ ಅಂಡ್​ ಹಿಯರಿಂಗ್​ ಕೇರ್​’ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಪತ್ರಿಕಾ ಪ್ರಕಟಣೆಯಲ್ಲಿ ಬ್ರೆಟ್​ಲೀ ಮಾತನಾಡುತ್ತಿದ್ದರು. ಅದೇ ವೇದಿಕೆಯಲ್ಲಿಯೇ ಅಥರ್ವ ಕೂಡ ಭಾಗವಹಿಸಿದ್ದ. ಅವನ ಜತೆ ನಾನೂ ಇದ್ದೆ. 

ತಮ್ಮ ಮಗ ಶ್ರವಣ ಶಕ್ತಿಯನ್ನು ಕಳೆದುಕೊಂಡಾಗ ತಾವು ಅನುಭವಿಸಿದ ಮಾನಸಿಕ ಯಾತನೆಯನ್ನ ವರ್ಣಿಸಲು ಸಾಧ್ಯವಿಲ್ಲ ಎನ್ನುತ್ತಿದ್ದರು ಅವರು. ತಮ್ಮ ಮಗನಿಗಾದ ಅಪಘಾತದಿಂದ ಬ್ರೆಟ್​ಲೀ ಅವರಿಗೆ ಶ್ರವಣ ದೋಷ ಮತ್ತು ಅದರ ಚಿಕಿತ್ಸೆಗಳ ಬಗ್ಗೆ ಆಸಕ್ತಿ ಹುಟ್ಟಿತ್ತು. ಹೀಗಾಗಿ ಈ ವಿಷಯದ ಕುರಿತು ಓದಿಕೊಳ್ಳಲು ಪ್ರಾರಂಭಿಸಿದ್ದರಂತೆ. ಸಂಪೂರ್ಣ ಶ್ರವಣದೋಷಕ್ಕೆ ಕಾಕ್ಲಿಯರ್​ ಇಂಪ್ಲಾಂಟ್ ಒಂದೇ ಪರಿಹಾರ ಎಂಬುದನ್ನ ಅರಿತೊಂಡ ಬ್ರೆಟ್​ಲೀ, ಈ ಬಗ್ಗೆ ಜಾಗತಿಕ ಜಾಗೃತಿ ಮೂಡಿಸುವ ಸಲುವಾಗಿ ಗ್ಲೋಬಲ್​ ಹಿಯರಿಂಗ್​ ಅಂಬಾಸಿಡರ್​ ಆಗಿ ಗುರುತಿಸಿಕೊಂಡಿದ್ದಾರೆ. ಇದೆಲ್ಲವನ್ನೂ ತಮ್ಮ ಆಷ್ಟ್ರೇಲಿಯನ್​ ಇಂಗ್ಲೀಷ್​ನಲ್ಲಿ ಮಾತನಾಡಿದ್ದರು. ಅವರ ಭಾಷಣ ಸಂಪೂರ್ಣ ಅರ್ಥವಾಗದಿದ್ದರೂ, ಅದರಲ್ಲಿರುವ ಭಾವ, ಕಾಳಜಿ ನಮಗೆಲ್ಲ ಅರ್ಥವಾಗುವಂತಿತ್ತು.  

ಆವತ್ತು ಸಪ್ಟೆಂಬರ್​ 7, 2018. ಅಥರ್ವನಿಗೆ ಕಾಕ್ಲಿಯರ್​ ಸರ್ಜರಿಯಾಗಿ 6 ತಿಂಗಳಾಗಿದ್ದವು ಅಷ್ಟೆ. ಎರಡು ಶಬ್ಧಗಳನ್ನು ಜೋಡಿಸಿ ಮಾತನಾಡಲು ಆಗಷ್ಟೇ ಕಲಿತಿದ್ದ. ತನಗೆ ಬಂದಷ್ಟು ಮಾತುಗಳನ್ನು ನಾಚದೆ, ಅಂಜದೇ ಎಲ್ಲರೊಂದಿಗೆ ಮಾತನಾಡುತ್ತಿದ್ದ ಅಥರ್ವನನ್ನ ಬ್ರೆಟ್​ಲೀ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡಿದ್ದರು ಶೈಲಜಾ.  

ಆವತ್ತು ಅದೇನೋ ಧಾವಂತ. ಒಳಗೊಳಗೇ ಖುಷಿ. ಹಿಂದಿನ ದಿನವೇ ಸ್ಕೂಲ್​ನಲ್ಲಿ ಹೇಳಿ ಬಂದಿದ್ದೆ. ನಾಳೆ ಶಾಲೆಗೆ ನಾವು ಬರುವುದಿಲ್ಲ ಎಂದು.  ಬೆಳಗ್ಗೆ  ಶೈಲಜಾ ಮೇಡಮ್​ ಹೇಳಿದ ಸಮಯಕ್ಕೆ ಸರಿಯಾಗಿ ನಾನು ಅಥರ್ವ ಇಬ್ಬರೂ ಸಿದ್ಧಗೊಂಡು ಕಾಯುತ್ತಿದ್ದೆವು. ಶೈಲಜಾ ನಮ್ಮ ಮನೆಯ ಬಳಿ ಬಂದಿದ್ದೇ ಅವರ ಕಾರು ಏರಿದೆವು. ನಾವು ಮೂವರೂ ಹೋಗಿ ತಲುಪಿದ್ದು ಮೈಸೂರಿನ ಒಂದು ಫೈವ್​ಸ್ಕಾರ್​ ಹೋಟೆಲ್​ಗೆ. ಅಲ್ಲಿಯೂ ಅಷ್ಟೇ. ಅದಾಗಲೇ ಕಾಕ್ಲಿಯರ್​ ಇಂಪ್ಲಾಂಟ್​ ಮಾಡಿಸಿಕೊಂಡು ಚೆಂದವಾಗಿ ಮಾತನಾಡುತ್ತಿದ್ದ ಕೆಲವು ಮಕ್ಕಳು ಅವರ ತಾಯಂದಿರೊಂದಿಗೆ ಕುಳಿತಿದ್ದರು. ಅವರೆಲ್ಲ ನಮ್ಮ ಪಿ.ಎ.ಡಿ.ಸಿ ಶಾಲೆಯ ಹಳೆಯ ವಿದ್ಯಾರ್ಥಿಗಳಂತೆ. ಪರಿಚಯವಾಯ್ತು. ಕುಶಲೋಪರಿಯ ಮಾತುಕತೆಗಳಾದವು. 

ಬೆಳಗ್ಗೆ ಹತ್ತುಗಂಟೆ ಸಮೀಪಿಸುತ್ತಿದ್ದಂತೆ, ನಮ್ಮನ್ನೆಲ್ಲ ಪ್ರೆಸ್​ ಮೀಟ್​ನಡೆಯಲಿರುವ ಕೊಠಡಿಗೆ ಕರೆದೊಯ್ಯಲಾಯ್ತು. ಆ ಸ್ಟಾರ್​ ಹೋಟೆಲ್​ನ ಪ್ಲೇ ಏರಿಯಾದಲ್ಲಿ ಆಡುತ್ತಿದ್ದ ಅಥರ್ವನನ್ನ ಹರಸಾಹಸಪಟ್ಟು ಎತ್ತಿಕೊಂಡು ಬಂದಿದ್ದೆ. ಪ್ರೆಸ್​ಮೀಟ್​ಗಾಗಿ ಎಲ್ಲವನ್ನೂ ಸಿದ್ಧಗೊಳಿಸಲಾಗಿತ್ತು. ವೇದಿಕೆಯಮೇಲೆ ಕುಳಿತುಕೊಳ್ಳಲಿದ್ದ ಎಲ್ಲರ ಹೆಸರುಗಳಿರುವ ನೇಮ್​ ಪ್ಲೇಟ್​ಗಳನ್ನ ಆಯಾ ಕುರ್ಚಿಯ ಮುಂದೆ ಇರಿಸಲಾಗಿತ್ತು.   ಆಡಿಯಾಲಾಜಿಸ್ಟ್​ ಶೈಲಜಾ ಶುಕ್ಲಾ, ಇ.ಎನ್​.ಟಿ ಸರ್ಜನ್​ಡಾ. ದತ್ತಾತ್ರಿ, ಹಾಗೂ ಗ್ಲೋಬಲ್​ ಹಿಯರಿಂಗ್​ ಅಂಬಾಸಿಡರ್​ ಆಗಿರುವ ಆಷ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್​ಲೀ ಅವರ ಹೆಸರುಗಳ ಜತೆಗೆ, ನಮ್ಮ ಅಥರ್ವನ ಹೆಸರೂ ಕೂಡ ಅಲ್ಲಿತ್ತು. ‘ಬ್ರೆಟ್​ಲೀ’ ಹೆಸರಿನ ನೇಮ್​ಪ್ಲೇಟ್​ಪಕ್ಕದಲ್ಲಿಯೇ ‘ಮಾಸ್ಟರ್​ಅಥರ್ವ’ ಎಂಬ ನೇಮ್​ಪ್ಲೇಟ್​ನಗುತ್ತಾ ಕುಳಿತಿತ್ತು. 

ಅದನ್ನ ನೋಡಿ ನನಗಾದ ಸಂತೋಷವನ್ನ ಹತ್ತಿಕ್ಕಿಕೊಳ್ಳುತ್ತಲೇ, ಅಥರ್ವನನ್ನ ಅವನ ಹೆಸರಿರುವ ಕುರ್ಚಿಯ ಮೇಲೆ ಕೂರಿಸಿ, ನಾನು ಪಕ್ಕದಲ್ಲಿ ಕುಳಿತೆ. ಬೇರೆಬೇರೆ ಪತ್ರಿಕೆಯ ಪತ್ರಕರ್ತರು, ವೀಕ್ಷಕರು, ಬಂದು ಕುಳಿತರು. ಕೊಠಡಿ ತುಂಬಿಕೊಳ್ಳತೊಡಗಿತ್ತು. ಸ್ವಲ್ಪ ಹೊತ್ತಿನ ನಂತರ ಬ್ರೆಟ್​ಲೀ ಹಾಗೂ ವೈದ್ಯರು ಒಟ್ಟಿಗೇ ವೇದಿಕೆಗೆ ಆಗಮಿಸಿ ಆಸೀನರಾದರು. ಪಕ್ಕದಲ್ಲಿಯೇ ಕುಳಿತಿದ್ದ ಅಥರ್ವನನ್ನು ನೋಡಿ ಬ್ರೆಟ್​ಲೀ ಅವರು ‘ಹಲೋ ಫ್ರೆಂಡ್​’ ಎನ್ನುತ್ತಾ ಕೈಕುಲುಕಿ ಮಾತನಾಡಿಸಿದರು. ಅಥರ್ವ ಕಣ್ಣು ಮಿಟುಕಿಸದೇ ಅವರನ್ನೇ ನೋಡಿ ನಕ್ಕು ಕೈ ಕುಲುಕಿದ. ಅಥರ್ವನ ಬಾಯಲ್ಲಿ ‘ಹಲೋ ಸರ್​’ ಹೇಳಿಸಿ ನಾನೂ ಅವರಿಗೆ ಶುಭಹಾರೈಸಿದೆ.  

ಕಾರ್ಯಕ್ರಮ ಶುರುವಾಯ್ತು. ಪ್ರಸ್ತಾವನೆ, ಸ್ವಾಗತ ಭಾಷಣ ಸಂಪನ್ನಗೊಂಡ ಮೇಲೆ ಬ್ರೆಟ್​ಲೀ ಮಾತನಾಡಿದರು. ‘ಇಡೀ ಜಗತ್ತಿನಲ್ಲಿ ಒಟ್ಟೂ 466 ಮಿಲಿಯನ್​ ಜನರಿಗೆ ಶ್ರವಣದೋಷವಿದೆ. ಅವರಲ್ಲಿ ಮಕ್ಕಳ ಸಂಖ್ಯೆ 34 ಮಿಲಿಯನ್​. ಕಾಕ್ಲಿಯರ್​ಇಂಪ್ಲಾಂಟ್​ ಎಂಬುದು  ಈ ಎಲ್ಲರ ಪಾಲಿನ ವರದಾನ. ಆಷ್ಟ್ರೇಲಿಯಾದಲ್ಲಿ ಹುಟ್ಟಿದ ಎಲ್ಲ ಮಕ್ಕಳ ಕಿವಿ ಪರೀಕ್ಷೆ ಖಡ್ಡಾಯ. ಆಷ್ಟ್ರೇಲಿಯಾದಂತೆ, ಭಾರತದಲ್ಲಿಯೂ ಕೂಡ, ಎಲ್ಲಾ ಪ್ರಸೂತಿ ಆಸ್ಪತ್ರೆಗಳಲ್ಲಿಯೂ, ಹುಟ್ಟಿದ ಎಲ್ಲಾ ಮಕ್ಕಳಿಗೆ  ಶ್ರವಣ ಪರೀಕ್ಷೆ ನಡೆಯಬೇಕು. ಇದರಿಂದ ಹುಟ್ಟಿನಿಂದಲೇ ಶ್ರವಣ ದೋಷವನ್ನ ಪತ್ತೆಹಚ್ಚಿ, ಆರಂಭಿಕ ಚಿಕಿತ್ಸೆ ಮತ್ತು ಶ್ರವಣ ಸಾಧನಗಳನ್ನ ಒದಗಿಸಿ ಆ ಮಕ್ಕಳಿಗೆ ಸಾಮಾನ್ಯ ಜೀವನ ನೀಡಲು ಸಾಧ್ಯವಿದೆ. ‘ಅರ್ಲಿ ಇಂಟರ್​ವೆನ್ಶನ್​ ಈಸ್​ ದ ಬೆಸ್ಟ್​’ ಎಂದು ಕರೆನೀಡಿದರು’.

ಅಂತರಾಷ್ಟ್ರೀಯ ಮಟ್ಟದ ಕ್ರಿಕೇಟ್​ ಆಟಗಾರನಾಗಿ, ವೇಗದ ಬೌಲರ್​ ಅಂತ್ಲೇ ಗುರುತಿಸಿಕೊಂಡ ಬ್ರೆಟ್​ಲೀ, ಗ್ಲೋಬಲ್​ ಹಿಯರಿಂಗ್​ ಅಂಬಾಸಿಡರ್​ ಆಗಿ ಸಮಾಜಮುಖಿ ಕೆಲಸ ಮಾಡುತ್ತಿರುವುದೇಕೆ ಎಂಬ ಎಲ್ಲರ ಅನುಮಾನಕ್ಕೆ ಅಲ್ಲಿ ತೆರೆಬಿದ್ದಿತ್ತು. ತಮ್ಮ ಮಗನಿಗಾದ ಅವಘಡ ಅವರಿಗೆ ಕಿವಿಯ ಮಹತ್ವವನ್ನ ಅರ್ಥ ಮಾಡಿಸಿತ್ತು ಮತ್ತು ಅದಕ್ಕಾಗಿ ಅವರು ಇಡೀ ಜಗತ್ತಿಗೆ ಜಾಗೃತಿ ಮೂಡಿಸಲು ಬದ್ಧರಾಗಿದ್ದರು. 

ಕಾರ್ಯಕ್ರಮದ ಆಯೋಜಕರು ಇದೇ ವೇದಿಕೆಯಲ್ಲಿಯೇ ನನಗೂ ಮಾತನಾಡಲು ಅವಕಾಶ ಕೊಟ್ಟಿದ್ದರು. ಅಥರ್ವನ ಕಥೆಯನ್ನೇ ನಾನಲ್ಲಿ ಹೇಳಿಕೊಂಡಿದ್ದೆ. ಪತ್ರಿಕೆಯವರು ಈ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೆ. 

ಕಾರ್ಯಕ್ರಮದ ನಂತರ ಬ್ರೆಟ್​ಲೀ ಜತೆ ಪತ್ರಿಕೆಯವರೆಲ್ಲ ಫೋಟೋ ತೆಗೆದುಕೊಳ್ಳುತ್ತಿದ್ದರು. ಪತ್ರಿಕೆಯವರ ಬೇಡಿಕೆಯಂತೆ ಅಥರ್ವ ಮತ್ತು ಇನ್ನೊಬ್ಬ ಕಾಕ್ಲಿಯರ್​ ಬಾಲಕನನ್ನು ಕಾಲಮೇಲೆ ಕೂರಿಸಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡರು ಬ್ರೆಟ್​ಲೀ. ಅಥರ್ವ ಅದೇನು ಅರ್ಥ ಮಾಡಿಕೊಂಡಿದ್ದನೋ ತಿಳಿಯೆ. ಬ್ರೆಟ್​ಲೀ ಅಥರ್ವನನ್ನ ನೋಡಿದಾಗಲೆಲ್ಲ ‘ಹಲೋ ಸರ್​’ ಎನ್ನುತ್ತಲೇ ಇದ್ದ. ಬ್ರೆಟ್​ ಲೀ ಅವರಿಗೂ ಇದೊಂಥರ ಮಜವೆನಿಸಿರಬಹುದು. ಫೋಟೋ ಶೂಟ್​ಎಲ್ಲ ಮುಗಿದಮೇಲೆ ಅವಾಗಾವಾಗ ‘ಹಲೋ ಸರ್​’ ಅನ್ನುತ್ತಲೇ ಇದ್ದ ಈ ಪುಟಾಣಿ ಅಥರ್ವನ ಮುಂದೆ ಮಂಡಿಯೂರಿ ಕುಳಿತುಕೊಂಡು, ಕೈ ಅಗಲಿಸಿ ‘ಯೂ ವನ್ನಾ ಹಗ್​ಮೀ..?’ ಎಂದರು ಬ್ರೆಟ್ ಲೀ. ಅಥರ್ವ ತಕ್ಷಣ ಹೋಗಿ ಬ್ರೆಟ್​ಲೀ ಅವರನ್ನು ಹಗ್​ಮಾಡಿ ‘ಹಲೋ ಸರ್​’ ಎಂದುಬಿಟ್ಟ. ಸುತ್ತಮುತ್ತೆಲ್ಲ ನಗುವಿನ ಹೊಳೆಯೇ ಹರಿದಿತ್ತು. 

ನನ್ನ ಪಾಲಿಗಂತೂ ಈ ಕಾರ್ಯಕ್ರಮ ಬಯಸದೇ ಬಂದ ಭಾಗ್ಯವಾಗಿತ್ತು. ದೊಡ್ಡ ದೊಡ್ಡ ವ್ಯಕ್ತಿಗಳೊಂದಿಗೆ ವೇದಿಕೆ ಏರುವ ಅವಕಾಶ ಒದಗಿ ಬಂದಿದ್ದು ನನ್ನ ಮಗನಿಂದ ಎಂಬ ಹೆಮ್ಮೆ ಮನಸ್ಸಿನೊಳಗೆಲ್ಲ ಹರಡಿಕೊಂಡಿತ್ತು. ಎರಡೂವರೆ ವರ್ಷ ವಯಸ್ಸಿನ ಅಥರ್ವ ಅಲ್ಲಿ ‘ಅರ್ಲಿ ಇಂಟರ್​ವೆನ್ಶನ್​’ನ ಪ್ರಾತ್ಯಕ್ಷಿಕೆಯಾಗಿದ್ದ. ಕನ್ನಡ, ಇಂಗ್ಲೀಷ್ ಪತ್ರಿಕೆಗಳಲ್ಲೆಲ್ಲ ಈ ಕಾರ್ಯಕ್ರಮ ಸುದ್ದಿಯಾಯ್ತು. 

ಇಂಪ್ಲಾಂಟ್ ಆಗಿ ಆರು ತಿಂಗಳು ಕಳೆಯುತ್ತಿದ್ದಂತೆ ಅಥರ್ವ, ಪಿ.ಎ.ಡಿ.ಸಿ ಶಾಲೆಯ ಕಲಿಕೆಯಲ್ಲಿ ಎರಡನೇ ಹಂತವನ್ನು ಪ್ರವೇಶಿಸಿದ್ದ. ಮೊದಲ ಹಂತವಾದ ‘ಆಬ್ಜೆಕ್ಟ್​ಲೆವೆಲ್​’ನಿಂದ ‘ಒನ್​ಲೈನ್​ಪಾಠ’ ಎಂಬ ಎರಡನೇ ಹಂತಕ್ಕೆ ಅಥರ್ವನನ್ನು ಮುಂದೂಡಲಾಯಿತು. ಒನ್​ಲೈನ್​ಪಾಠದಲ್ಲಿ ಮಕ್ಕಳಿಗೆ ಕ್ರಿಯಾಪದಗಳನ್ನ ಪರಿಚಯಿಸಲಾಗುತ್ತದೆ. ದಿನನಿತ್ಯ ನಾವೆಲ್ಲರೂ ಮಾತಿನಲ್ಲಿ ಬಳಸುವಂಥ ಕ್ರಿಯಾಪದಗಳೇ ಅವು. ತಿನ್ನು, ಕುಡಿ, , ಸುಲಿ, ತೊಳೆ, ಉಜ್ಜು, ತುಂಬಿಸು, ನೇತುಹಾಕು, ಇಂಥ ಇಪ್ಪತ್ತಕ್ಕೂ ಹೆಚ್ಚು ಕ್ರಿಯಾಪದಗಳನ್ನ ಪರಿಚಯಿಸುತ್ತಾ ಹೋಗಲಾಗುತ್ತದೆ. ಒಂದು ಕ್ರಿಯಾಪದವನ್ನು ಒಂದು ವಾರದವರೆಗೆ ಪ್ರತಿ ಮಗುವಿಗೂ ಪಾಠ ಮಾಡಬೇಕು. 

ಮೊಟ್ಟ ಮೊದಲನೆಯದಾಗಿ  ‘ತಿಂದನು’ ಕ್ರಿಯಾಪದವನ್ನು ವಾಕ್ಯ ರೂಪದಲ್ಲಿ ಕಲಿಸಬೇಕು.  

’ಅಥರ್ವ ದೋಸೆ ತಿಂದನು’ ಈ ವಾಕ್ಯವನ್ನು ಅರ್ಥ ಮಾಡಿಸುವಾಗ, ನಾನು ಮನೆಯಲ್ಲಿ ಬೆಳಗ್ಗೆ ದೋಸೆ ಮಾಡಿರಲೇ ಬೇಕು. ದೋಸೆ ತಿನ್ನಿಸಿ ಈ ವಾಕ್ಯವನ್ನ ಹೇಳಿಕೊಟ್ಟು, ಬರೆದು, ಅದರ ಮೇಲೆ ತಿದ್ದಿಸಿ ಪ್ರತಿ ಪದವನ್ನೂ ಅರ್ಥ ಮಾಡಿಸಬೇಕು. ನಂತರ ಇದೇ ವಾಕ್ಯದ ಮೇಲೆ ಪ್ರಶ್ನೆಗಳನ್ನು ಕೇಳಬೇಕು. ‘ಯಾರು ದೋಸೆ ತಿಂದರು..?’ ಪ್ರಶ್ನೆ ಕೇಳಿ, ಉತ್ತರವನ್ನೂ ಹೇಳಿಕೊಡಬೇಕು. ‘ಅಥರ್ವ ದೋಸೆ ತಿಂದನು’. ‘ಅಥರ್ವ ಏನು ತಿಂದನು?’ ‘ಅಥರ್ವ ದೋಸೆ ತಿಂದನು’. ‘ಅಥರ್ವ ದೋಸೆ ಏನು ಮಾಡಿದನು?’ ಅಥರ್ವ ದೋಸೆ ತಿಂದನು’. ಮೂಲ ವಾಕ್ಯದ ಮೇಲೆ ಇಂಥ ಸರಳ ಪ್ರಶ್ನೆಗಳನ್ನು ಕೇಳುತ್ತಾ, ಮಕ್ಕಳ ಬಾಯಿಯಿಂದಲೇ ಉತ್ತರ ಪಡೆದಾಗ, ಈ ಕ್ರಿಯೆ ಮಗುವಿಗೆ ಅರ್ಥವಾಗಿದೆ ಎಂದು ಅರ್ಥ. ‘ತಿಂದನು’  ಕ್ರಿಯಾಪದ ವಾರವಿಡೀ ನಡೆಯಬೇಕು. ದೋಸೆ, ಚಪಾತಿ, ಉಪ್ಪಿಟ್ಟು, ಪೂರಿ ಹೀಗೆ ವಾರಪೂರ್ತಿ ಬೇರೆ ಬೇರೆ ತಿಂಡಿಗಳನ್ನು ಮಾಡಿ, ಅವನ್ನು ತಿನ್ನಿಸಿ ‘ತಿಂದೆನು’ ಕ್ರಿಯಾಪದದ ಪಾಠ ಮಾಡಬೇಕು.   

ಮಧ್ಯಾಹ್ನ ಊಟವಾದ ಮೇಲಿನ ಸಮಯದಲ್ಲಿ, ಸ್ಕೂಲ್​ನಲ್ಲಿ ಪಾಠ ಮಾಡುವ ಬೇರೆ ತಾಯಿ ಮಕ್ಕಳಿಗೆ ಅಮ್ಮ ಕಲಿಸದ  ಕ್ರಿಯಾಪದಗಳನ್ನು ಹೇಳಿಕೊಡುತ್ತಾರೆ. ಪಾಠದ ತಾಯಿಯರಿಗಾಗಿಯೇ ಮತ್ತಷ್ಟು ಕ್ರಿಯಾಪದಗಳಿವೆ. ‘ಎಸೆದೆನು, ಕಿತ್ತೆನು, ತಳ್ಳಿದೆನು, ಮುರಿದೆನು’ ಇಂಥ ಕ್ರಿಯಾಪದಗಳು ಅವು. ಉದಾಹರಣೆಗೆ ಕಡ್ಡಿ ತಂದು, ಅದನ್ನ ಮಗುವಿನ ಕೈಯಲ್ಲಿಯೇ ಮುರಿಸಿ, ‘ಅಥರ್ವ ಕಡ್ಡಿ ಮುರಿದನು’ ಎಂದು ಹೇಳಿಕೊಟ್ಟು, ಆ ಕ್ರಿಯೆಯನ್ನ ಅರ್ಥ ಮಾಡಿಸುವುದು ಪಾಠಕ್ಕೆ ಪಡೆದ ತಾಯಿಯ ಜಬಾಬ್ಧಾರಿ. ಹೀಗೆ ‘ಒನ್​ಲೈನ್​ಪಾಠ’ಕ್ಕೆ ಬಂದ ಮಕ್ಕಳು ಇಡೀ ದಿನ ಪ್ರಶ್ನೆ, ಉತ್ತರ, ವಾಕ್ಯ, ಕ್ರಿಯಾಪದಗಳ ಗುಂಗಿನಲ್ಲಿಯೇ ಮುಳುಗಿರುತ್ತಾರೆ. 

ಇಂಪ್ಲಾಂಟ್​ ಆಗಿ 8-9 ತಿಂಗಳು ಕಳೆಯುವ ಹೊತ್ತಿಗೆ, ಈ ಒನ್ ​ಲೈಲ್ ​ಪಾಠದ ಕರಾಮತ್ತಿನಿಂದ ಅಥರ್ವನ ಬಾಯಲ್ಲಿ ವಾಕ್ಯಗಳು ಸರಾಗವಾಗತೊಡಗಿದವು. ಮೂರು ನಾಲ್ಕು ಪದಗಳನ್ನು ಸೇರಿಸಿ ವಾಕ್ಯದಲ್ಲಿ ಮಾತನಾಡಲು ಆರಂಭಿಸಿದ್ದ. ಒಂದೇ ವಾಕ್ಯದ ಸುತ್ತಮುತ್ತ, ಅದನ್ನ ತಿರುಗಾಮುರುಗಾ ಪ್ರಶ್ನೆ ಕೇಳಿ, ಅರ್ಥ ಮಾಡಿಸುತ್ತಿದ್ದುದರಿಂದ ಅವನ ತಲೆಯಲ್ಲಿ ಯೋಚನಾ ಶಕ್ತಿಯೂ ಬೆಳೆಯತೊಡಗಿತ್ತು. ಆರೆಂಟು ಕ್ರಿಯಾಪದ ಮುಗಿಯುವಷ್ಟರಲ್ಲಿಯೇ ಅಥರ್ವ, ಒನ್​ಲೈನ್ ​ಪಾಠದ ನ್ಯಾಕ್​ ಅರ್ಥೈಸಿಕೊಂಡುಬಿಟ್ಟಿದ್ದ. ಮೊದಲೆರಡ್ಮೂರು ವಾರ ಪಟ್ಟ ಕಷ್ಟ ಬರಬರುತ್ತಾ ನನಗೂ ಅಥರ್ವನಿಗೂ ಸರಳವಾಗತೊಡಗಿತ್ತು. 

ಅಲ್ಲದೇ, ಪ್ರತಿಯೊಂದನ್ನೂ ನಾನು ಅಥರ್ವನೊಂದಿಗೆ ವಾಕ್ಯದಲ್ಲಿಯೇ ಮಾತನಾಡುತ್ತಿದ್ದೆ. ಉದಾಹಣೆಗೆ ಹೇಳಬೇಕೆಂದರೆ, ಚಾಪೆಯನ್ನು ಹಾಸುತ್ತಿದ್ದೇನೆ ಎಂದುಕೊಳ್ಳಿ. ‘ಇದು ಚಾಪೆ. ಚಾಪೆ ನಮಗೆ ಕುಳಿತುಕೊಳ್ಳಲು ಬೇಕು. ಅಮ್ಮ ಚಾಪೆ ಹಾಸಿದರು. ಅಥರ್ವ ಮತ್ತು ಅಮ್ಮ ಚಾಪೆಯ ಮೇಲೆ ಕುಳಿತುಕೊಂಡರು.’ ಎನ್ನುವುದು. ಅದಾದಮೇಲೆ ಚಾಪೆಯನ್ನು ಹಾಸಿದ ಆ ಪ್ರಕ್ರಿಯೆಯ ಮೇಲೆಯೇ ಪ್ರಶ್ನೆಗಳನ್ನು ಕೇಳುವುದು. ಚಾಪೆ ಎಲ್ಲಿತ್ತು ? ಚಾಪೆಯನ್ನ ಯಾರು ಹಾಸಿದರು? ಚಾಪೆ ನಮಗೆ ಏಕೆ ಬೇಕು ? ಇಂಥ ಸರಳ ಪ್ರಶ್ನೆಗಳಾಗಿರುತ್ತಿದ್ದವು ಅವು. ಬರಬರುತ್ತಾ ಇಂಥದ್ದೇ ಪ್ರಶ್ನೆಗಳು ಬರುತ್ತವೆ ಎಂಬುದು ಅಥರ್ವ ಅಂದಾಜಿಸಲು ಶುರು ಮಾಡಿಬಿಟ್ಟಿದ್ದ. ನಾನು ಕೇಳುವುದಕ್ಕೂ ಮುಂಚೆಯೇ ಸ್ವತಃ ತನಗೆ ತಾನೇ ಪ್ರಶ್ನೆ ಕೇಳಿಕೊಂಡು ಉತ್ತರ ಹೇಳಿಬಿಡುತ್ತಿದ್ದ. ಆಗ ಅದೇ ವಿಷಯದ ಮೇಲೆ ಸ್ವಲ್ಪ ಕಷ್ಟದ ಪ್ರಶ್ನೆ ಕೇಳುತ್ತಿದ್ದೆ. ಚಾಪೆಯ ಉದಾಹರಣೆಯನ್ನೇ ಮುಂದುವರೆಸುತ್ತೇನೆ ನೋಡಿ, ‘ನಮ್ಮ ಮನೆಯಲ್ಲಿ ಚಾಪೆ ಇಲ್ಲದಿದ್ದರೆ ನೀನೇನು ಮಾಡುತ್ತಿದ್ದೆ ? ಬರೀ ನೆಲದ ಮೇಲೆ ಕುಳಿತುಕೊಳ್ಳಬಹುದಾ ? ಚಾಪೆ ಯಾವ ಅಂಗಡಿಯಲ್ಲಿ ಸಿಗುತ್ತದೆ ? ಎಂಬಂಥ ಸ್ವಲ್ಪ ವಿಚಾರ ಮಾಡಿ ಉತ್ತರಿಸುವಂಥ ಪ್ರಶ್ನೆಗಳನ್ನು ಕೇಳುವುದು. ಉತ್ತರ ಗೊತ್ತಾಗದಿದ್ದಾಗ, ‘ಒತ್ತಿನ್ನ’ (ಗೊತ್ತಿಲ್ಲ) ಅನ್ನುತ್ತಿದ್ದ. ಈ ‘ಗೊತ್ತಿಲ್ಲ’ ಎಂಬ ಪದವೂ ಅಷ್ಟೇ, ಸಹಜವಾಗಿ ಅವನ ಬಾಯಲ್ಲಿ ಬಂದಿತ್ತು. 

ಕಿವುಡು ಮಕ್ಕಳಿಗೆ ಕಣ್ಣಿನ ನೆನಪಿನ ಶಕ್ತಿ ಅತೀ ಚುರುಕು. ಯಾವುದನ್ನೇ ಆಗಲಿ ಬರೆದು ತೋರಿಸಿ ಹೇಳಿಕೊಟ್ಟುಬಿಟ್ಟರೆ, ಅವರ ತಲೆಯಲ್ಲಿ ಅಚ್ಚೊತ್ತಿ ಬಿಡುತ್ತೆ. ಅಥರ್ವನ ವಿಷಯದಲ್ಲಿಯೂ ಹಾಗೆಯೇ. ಹೀಗಾಗಿ ಅವನಿಗೆ ಕಲಿಸಬೇಕಾದ ಎಲ್ಲವನ್ನೂ ಬರೆದು ಮನೆಯ ಗೋಡೆಗೆ ಅಂಟಿಸಿಬಿಟ್ಟಿದ್ದೆ. ಶ್ಲೋಕ, ಹಾಡು, ಪಾಠ, ಎಲ್ಲವೂ ಮನೆಯ ಗೋಡೆಯ ಮೇಲೆ ರಾರಾಜಿಸತೊಡಗಿದವು. ಬಾಗಿಲು, ಕಿಟಕಿ, ಚಾಪೆ, ಗೋಡೆ, ಅಡುಗೆ ಮನೆ, ಬಚ್ಚಲು, ಹಾಸಿಗೆ ಹೀಗೆ ನಮ್ಮ ಮನೆಯಲ್ಲಿರುವ ಎಲ್ಲ ವಸ್ತುಗಳೂ ಅದರದರ ಹೆಸರಿನ ಚೀಟಿ ಅಂಟಿಸಿಕೊಂಡಿದ್ದವು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: