ಅಮೃತಾ ಪ್ರೀತಂ ಕನಸು ಭಗ್ನ

ಡಾ.ಎನ್.ಜಗದೀಶ್ ಕೊಪ್ಪ

ಪಂಜಾಬಿ ಕವಿಯತ್ರಿ ಅಮೃತಾರವರ ಕೊನೆಯ ಕನಸು ಕಡೆಗೂ ಭಗ್ನವಾಯಿತು. ದೆಹಲಿಯಲ್ಲಿ ಅವರು ವಾಸವಾಗಿದ್ದ ಮನೆಯನ್ನು ಅವರ ಮಗ ನವತೇಜ್ ಮಾರಿಹಾಕಿದ ಸುದ್ದಿ ಹೊರಬಿದ್ದಿದೆ. ತಮ್ಮ ಕಾಲಾನಂತರ ನನ್ನ ಮನೆಯನ್ನು ಮ್ಯೂಸಿಯಂ ಮಾಡಬೇಕೆಂದು ಅವರು ಕನಸು ಕಂಡಿದ್ದರು, ಅವರಿಗೆ ಆ ಮನೆ ತಂದೆಯಿಂದ ಬಳುವಳಿಯಾಗಿ ಬಂದಿತ್ತು. ವ್ಯಾಪಾರಸ್ಥರಾಗಿದ್ದ ಅವರ ತಂದೆ ದೇಶ ವಿಭಜನೆಯ ಕಾಲದಲ್ಲಿ ನಿರಾಶ್ರಿತರಾಗಿ ದೆಹಲಿಗೆ ಬಂದಾಗ ಸರ್ಕಾರ ಅವರಿಗೆ ನೀಡಿದ್ದ ಈ ಮನೆಯ ಬಗ್ಗೆ ಅಮೃತಾರವರಿಗೆ ಭಾವಾನಾತ್ಮಕ ಸಂಬಧವಿತ್ತು. ಅವರ ಸಂಗ್ರಹದಲ್ಲಿದ್ದ ಅಪರೂಪದ ಪುಸ್ತಕಗಳು ಹಾಗೂ ಅವರ ಸಂಗಾತಿ ಸೃಷ್ಟಿಸಿದ್ದ ವರ್ಣಮಯ ಕಲಾಚಿತ್ರಗಳು ಅಲ್ಲಿದ್ದವು.

ದೆಹಲಿ ಕೇಂದ್ರ ಭಾಗದ ಹಾಜ್ ಖಾಸ್ ಎಂಬಲ್ಲಿ ಇದ್ದ ಈ ಮನೆ ಈಗ ಖಾಸಾಗಿ ಬಿಲ್ಡರ್‌ಗಳ ಪಾಲಾಗಿದೆ.

ಭಾರತೀಯ ಕಾವ್ಯಾಸಕ್ತರಿಗೆ ಪಂಜಾಬಿನ ಅಮೃತಾ ಹಾಗೂ ಮಲೆಯಾಳಂನ ಕಮಲಾದಾಸ್ ಬಗ್ಗೆ ಅಪಾರ ಆಸಕ್ತಿ ಮತ್ತು ಪ್ರೀತಿ. ಏಕೆಂದರೆ, ಮಹಿಳಾ ಸಂವೇದನೆ ಅಭಿವ್ಯಕ್ತಿಗೊಳ್ಳಲು ಮುಜುಗರ ಪಡುತಿದ್ದ ಸಮಯದಲ್ಲಿ ಎಲ್ಲಾ ಅಡೆ ತಡೆಗಳನ್ನು ದಾಟಿ ಅಂತರಂಗದ ಕದವ ತೆರೆದಿಟ್ಟವರು ಇವರು.

ಅಮೃತಾ ಅವರ ಬದುಕೇ ಒಂದು ರೀತಿ ಕ್ರಾಂತಿಕಾರಕವಾದುದು. ತಾನು ಪ್ರೀತಿಸಿದ, ಆರಾಧಿಸಿದ ಹಿಂದಿ ಕವಿ ಸಾಹಿರ್ ಲೂಧಿಯಾನ್‌ಗಾಗಿ ಕಟ್ಟಿಕೊಂಡ ಗಂಡನನ್ನು ತೊರೆದು ಬಂದ ದಿಟ್ಟ ಹೆಣ್ಣು ಮಗಳು ಈಕೆ. ಆದರೆ ಇಲ್ಲಿ ವಿಧಿಯಾಟ ಬೇರೆಯದೆ ಆಗಿತ್ತು. ಸಾಹಿರ್ ಆ ವೇಳೆಗಾಗಲೇ ಇನ್ನೊಬ್ಬಳಲ್ಲಿ ಅನುರಕ್ತನಾಗಿದ್ದ. ಕೊನೆಗೆ ಅಮೃತಾ ಮದುವೆಯಾಗದೆ ಸಂಗಾತಿಯಾಗಿ ಕಲಾವಿದ ಇಮ್ರೋಜ್‌ರವರನ್ನು ಆಯ್ಕೆ ಮಾಡಿಕೊಂಡು ತಮ್ಮ ಕೊನೆಯ ಜೀವಿತಾವಧಿಯವರೆಗೆ ದೆಹಲಿಯಲ್ಲಿ ಅವರೊಂದಿಗೆ ಬದುಕಿದರು.

೧೯೧೯ ರಲ್ಲಿ ಲಾಹೋರ್ ನಗರದಲ್ಲಿ ಜನಿಸಿದ ಇವರು ೨೮ ಕಾದಂಬರಿ, ೧೮ ಕಾವ್ಯ ಸಂಕಲನ, ೫ ಕಥಾಸಂಕಲನ ಹಾಗೂ ೧೬ ಪ್ರಬಂಧ ಮತ್ತು ಗದ್ಯ ಲೇಖನಗಳನ್ನ ಹೊರತಂದು ೨೦೦೫ರಲ್ಲಿ ಇನ್ನಿಲ್ಲವಾದರು;

ಅವರ ಆತ್ಮಕಥೆ ರಶೀದಿ ಟಿಕೀಟು ಬದುಕು-ಬರಹಗಳ ನಡುವೆ ಅಂತರವಿಲ್ಲದ ಪ್ರಾಮಾಣಿಕ ಅಂತರಂಗದ ಅನಿಸಿಕೆಯಾಗಿದೆ. ಈ ಕೃತಿ ಕನ್ನಡವಲ್ಲದೆ ಭಾರತದ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದೆ.

ದೆಹಲಿಯಲ್ಲಿದ್ದ ಅಮೃತ ಪ್ರೀತಂರವರ ನಿವಾಸ ಕೇವಲ ಅವರ ವಾಸಸ್ಥಳವಾಗಿರಲಿಲ್ಲ. ಅದೊಂದು ಸಾಂಸ್ಕೃತಿಕ ಕೇಂದ್ರವಾಗಿತ್ತು. ಲೇಖಕರು, ಕಲಾವಿದರು, ಸಂಗೀತಗಾರರು, ನಾಟಕಕಾರರು ಇವರೆಲ್ಲರಿಗೂ ಅಮೃತಾರವರ ನಿವಾಸದ ಬಾಗಿಲು ಸದಾ ತೆರೆದೇ ಇರುತ್ತಿತ್ತು. ದಂಪತಿಗಳಿಬ್ಬರೂ ಅತಿಥಿಗಳಿಗೆ ಚಹಾ ನೀಡಿ ಸತ್ಕರಿಸುತ್ತಿದ್ದ ಬಗೆ ಈಗ ಕೇವಲ ನೆನಪು ಮಾತ್ರ.

ಧರ್ಮಾತೀತವಾಗಿ ಬದುಕಿದ ಅಮೃತಾರವರು ಸಾಹಿತ್ಯಕ್ಕೆ ಜಾತಿ ಧರ್ಮದ ಗಡಿರೇಖೆಗಳಿಲ್ಲ ಎಂದು ನಂಬಿದ್ದವರು ಅದರಂತೆ ಬದುಕಿದವರು.

ತಮ್ಮ ಕೊನೆಯ ದಿನಗಳಲ್ಲಿ ಮನೆಯನ್ನು ಮಾರಾಟ ಮಾಡದೆ ತಮ್ಮ ನೆನಪಿಗಾಗಿ ಮ್ಯೂಜಿಯಂ ಮಾಡಬೇಕೆಂದು ಉಯಿಲು ಬರೆದಿಟ್ಟರೂ ಸಹ, ಅಮ್ಮನ ಖ್ಯಾತಿ ಗೌರವಗಳ ಬಗ್ಗೆ ಅರಿವಿಲ್ಲದ ಮಗ ಹಣದಾಸೆಗಾಗಿ ಮಾರಾಟ ಮಾಡುವುದರ ಮೂಲಕ ಅಮೃತಾರವರ ಅಭಿಮಾನಿಗಳಿಗೆ ನೋವುಂಟು ಮಾಡಿದ್ದಾನೆ. ಈ ನೋವಿನ ನಡುವೆಯೂ ಸಮಾಧಾನಕರ ಸಂಗತಿ ಎಂದರೆ, ಈಗಲೂ ಬದುಕುಳಿದಿರುವ ಅಮೃತಾರವರ ಸಂಗಾತಿ ಇಮ್ರೋಜ್ ಅವರ ಎಲ್ಲಾ ಪುಸ್ತಕ ಹಾಗೂ ಅಪರುಪದ ಕಲಾಕೃತಿಗಳನ್ನು ತಾವು ಈಗ ವಾಸವಾಗಿರುವ ದೆಹಲಿಯ ಗ್ರೇಟರ್ ಕೈಲಾಸ್ ಬಡಾವಣೆಯ ಮನೆಯೊಂದರಲ್ಲಿ ಸಂರಕ್ಷಿಸಿದ್ದಾರೆ.

 

‍ಲೇಖಕರು G

July 15, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. Ramesh Aroli

  ಒಂದು ನೋವಿತ್ತು
  ನಾನದನ್ನು
  ಸಿಗರೇಟಿನಂತೆ
  ಸೇದಿದೆ!!

  ಎಂದು ಆಕೆ ಬರೆದದ್ದು ಓದಿದ ನೆನಪು. ದಿನಾಲೂ ಮುನಿರ್ಕಾದಿಂದ ಸಿರಿ ಫೋರ್ಟ್ ಆಡಿಟೋರಿಯಂ ಹತ್ತಿರದ ನನ್ನ ಕಾಲೇಜಿಗೆ ಹಾದು ಹೋಗಬೇಕಾದರೆ ಹೌಸ್ ಖಾಸ್ ನ ಗುಲ್ ಮೊಹರ್ ಪಾರ್ಕ್ ನಿವಾಸಗಳಲ್ಲಿ ಎಂದಾದರು ಅಮೃತಾ ಪ್ರೀತಂ ಮನೆ ಕಂಡೀತೆ ಅಂತ ಹುಡುಕಾಡುತಿದ್ದೆ. ಅಲ್ಲದೆ ಕಳೆದ ತಿಂಗಳು ಊರಿಂದ ಬಂದಿದ್ದ ಳೆಯರೆಲ್ಲ “ಏನಾದರು ಆಗಲಿ ಇವತ್ತು ಅಮೃತಾ ಪ್ರೀತಂ ಮನೆ ನೋಡಲೇಬೇಕು” ಅಂದುಕೊಂಡದ್ದು ಕುದುರಲಿಲ್ಲ. ಇಲ್ಲೇ ಇರ್ತಿನಲ್ಲ ಯಾವತ್ತಾದರೂ ನೋಡಿದರಾಯಿತು ಅಂದ್ಕೊಂಡು ಸುಮ್ಮನಾಗಿದ್ದೆ. ಆಕೆ ಉಸಿರಾಡಿದ ಆ ಮನಯೇ ಈಗ ಆಕೆಯ ಹೆಸರು ಅಳಿಸಿಕೊಂಡಿದೆ ಅಂದ ಮೇಲೆ ಹುಡುಕುವ ಇರಾದೆ ಕೂಡ ಹೋಯಿತು.

  ರಮೇಶ ಅರೋಲಿ.

  ಪ್ರತಿಕ್ರಿಯೆ
 2. D.RAVIVARMA

  JAGADISH SIR,NIMMA BARAHA CHENNAGIDE,AMRUTA PREETAM LIFE HISRORY RASHIDI TICKET ODIDDE,NIMMA BARAHADA ANTARALA MANAKALAKUVANTIDE,AMRTA PREETAM KONEASHEYANNU ARTHISIKOLLARADA MAGA MANEYANNU MARIDDU BUDUKINUDDAKKU ADARA HALUNDU,MUDIYADANANTARA DANAGALANNU KASAYIKANEGE MARUVASTE KRUTANA VENISUTTIDE,BIDI AMRUTA BADUKU,BARAHA TAMMA NIGUDATE,VISISTATEGALINDAGI ODUGARA MANADALLI NIRANTARAVAGI ULIYUTTAVE,AKEYA GELEYA KAMROJGONDU HATS OFF
  BAREYUTTIRI D.RAVI VARMA HOSPET

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: