ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮೀರ್ ಖಾನ್, ಒ೦ದು ನಿಮಿಷ…

– ಸುಮ ಸುಧಾಕಿರಣ್

ನಿನ್ನೆ ಅವಧಿಯಲ್ಲಿ ಪ್ರಕಟವಾಗಿದ್ದ ಟಿ ಕೆ ದಯಾನ೦ದ್ (ಲೇಖನಕಾಗಿ ಇಲ್ಲಿ ಕ್ಲಿಕ್ಕಿಸಿ) ಅವರ ಅಭಿಪ್ರಾಯಕ್ಕೆ ಬ೦ದ ಒ೦ದು ಪ್ರತಿಕ್ರಿಯೆ : ಆಮೀರ್ ಖಾನ್ ಈ ವಾರದ ಸತ್ಯಮೇವ ಜಯತೆ ನಲ್ಲಿ ಪ್ರೇಮ ವಿವಾಹವನ್ನು ವಿರೋಧಿಸುವ ಪೋಷಕರ ಬಗ್ಗೆ ನಡೆಸಿಕೊಟ್ಟ.  ಪ್ರೇಮಿಸಿ ಮದುವೆಯಾಗಿದ್ದಕ್ಕಾಗಿ ಪ್ರಾಣ ತೆಗೆದ ಪೋಷಕರ , ಪಂಚಾಯತ್ ವ್ಯವಸ್ಥೆಯ ತಪ್ಪುಗಳನ್ನು ಎತ್ತಿ ತೋರಿಸಿದ್ದು ಸರಿಯಾಗಿತ್ತು. ಇಂತಹ ಮರ್ಯಾದಹತ್ಯೆಗಳು ನಿಜಕ್ಕೂ ಖಂಡನಾರ್ಹ. ಯಾವುದೇ ಸಭ್ಯ ಸಮಾಜದಲ್ಲಿ ನಡೆಯಬಾರದ್ದು . ಒಂದು ಬೇಸರದ ಸಂಗತಿ ಎಂದರೆ ಪ್ರೇಮವಿವಾಹದ ಇನ್ನೊಂದು ಮುಖದ ಬಗ್ಗೆ ಪ್ರಸ್ತಾಪವೇ ಇಲ್ಲದ್ದು. ಪ್ರೇಮವಿವಾಹವೆಂಬುದು ಇಬ್ಬರು ಪ್ರಬುದ್ಧ, ಜವಾಬ್ದಾರಯುತ ವ್ಯಕ್ತಿಗಳ ನಡುವೆ ನಡೆದಾಗ ಸುಂದರ . ಆದರೆ ಹದಿನೆಂಟು ಹತ್ತೊಂಬತ್ತರ ವಯಸ್ಸಿನಲ್ಲಿ ಇನ್ನೂ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಲಾಗದ ಸ್ಥಿತಿಯಲ್ಲಿ , ಕೇವಲ ವಯೋ ಸಹಜ ಆಕರ್ಷಣೆಯನ್ನು ಪ್ರೀತಿ ಎಂದು ತಿಳಿದು ಅದುವರೆಗೆ ಬೆಳೆಸಿದ ತಂದೆ ತಾಯಿಯರನ್ನು ವಿರೋಧಿಸಿ ಮನೆ ಬಿಟ್ಟು ಹೋಗುವವರು ಕೊನೆಗೆ ಬದುಕಿನ ಸಂಘರ್ಷದಲ್ಲಿ ಸೋತು ಸುಣ್ಣವಾಗುವ ಉದಾಹರಣೆಗಳು ಸಾಕಷ್ಟಿವೆ . ಆಮೀರ್ ತನ್ನ ಕಾರ್ಯಕ್ರಮದ ಮೂಲಕ ಪೋಷಕರಿಗೆ ಪ್ರೇಮವಿವಾಹನ್ನು ವಿರೋಧಿಸಬೇಡಿ ಎಂದು ತಿಳಿಹೇಳಿದ. ಪ್ರೇಮಿಗಳಿಗೆ ತಂದೆ ತಾಯಿಯ ಆಶೀರ್ವಾದ ಕೂಡ ಮುಖ್ಯ ಅವರ ಅನುಭವದ ಪಡೆಯಿರಿ ಎಂದು ಕೊನೆಯಲ್ಲಿ ಹೇಳಿದನಾದರೂ …ಇನ್ನಷ್ಟು ತಿಳಿ ಹೇಳಬಹುದಿತ್ತು. ಏಕೆಂದರೆ ಆತನ ಮಾತುಗಳಿಗೆ ಬೆಲೆ ಕೊಡುವ ಸಾವಿರಾರು ಯುವಜನರಿದ್ದಾರೆ . ನಮ್ಮ ಭಾರತೀಯ ಪದ್ಧತಿಯಲ್ಲಿ ವಿವಾಹವೆನ್ನುವುದು ಕೇವಲ ಇಬ್ಬರು ವ್ಯಕ್ತಿಗಳ ಸಂಗಮವಲ್ಲ . ಅದು ಎರಡು ಸಂಸಾರದ ಸಂಗಮ . ಹೀಗಿರುವಾಗ ಅಂತರಜಾತೀಯ ಅಥವಾ ಅಂತರಧರ್ಮೀಯ ಏನೇ ಆದರೂ ಇಬ್ಬರ ಕುಟುಂಬದ ಒಪ್ಪಿಗೆ ದೊರೆತಾಗಲಷ್ಟೆ ಬಾಳು ನೆಮ್ಮದಿಯಾಗಿರಲು ಸಾಧ್ಯ ಎಂಬುದು ನನ್ನ ಅಭಿಪ್ರಾಯ .  ]]>

‍ಲೇಖಕರು G

5 June, 2012

4 Comments

  1. prakash hegde

    ಸುಮಾರವರೆ..
    ನಿಮ್ಮ ಮಾತು ನಿಜ…
    ಇಂಥಹ ಉದಾಹರಣೆಗಳೂ ಸಾಕಷ್ಟು ಇವೆ….

  2. ಅಮಾಸ

    ಆಸ್ಸಾಮಿನ ಬುಡುಕಟ್ಟುಗಳಲ್ಲಿ ಮದುವೆ ಆಗುವ ಗಂಡಸು ತನ್ನ ವಿರೋಧಿ ಗುಂಪಿನ(ಪಂಗಡದ) ಯಾವನಾದರೂ ಒಬ್ಬನ ತಲೆ ಕಡಿದು ತಂದಾಗ ಮಾತ್ರ ಅವನ ಗಂಡಸತನ ಸಾಬೀತಾಗುತ್ತಿತ್ತು. ಆಗ ಪಂಗಡದ ಹಿರಿಯರೆಲ್ಲ ಸೇರಿ ಅವನಿಗೆ ಮದುವೆ ಮಾಡುತ್ತಿದ್ದರು. ಅದು ತಪ್ಪು ಅಲ್ಲವೆ! ಹಾಗಿದ್ದರೆ ಅಮೀರ ಅದರ ಕುರಿತಾಗಿಯೂ ಹೇಳಬೇಕಿತ್ತು ಅನ್ನಿಸೋದಿಲ್ಲವಾ? ಕಾಶ್ಮೀರದಲ್ಲಿ ಬಲವಂತವಾಗಿ ಧರ್ಮಗಳ ನಡುವೆ ಮದುವೆ ಮಾಡಿಸುತ್ತಾರೆ ಎಂಬೆಲ್ಲ ಮಾತುಗಳನ್ನ ಧರ್ಮಾಂಧರು ಒಬ್ಬರಮೇಲೊಬ್ಬರು ಆರೋಪಿಸುತ್ತಲೆ ಬರುತ್ತಿದ್ದಾರೆ ಅದರ ಕುರಿತಾಗಿ ಮಾತಾಡಬೇಕಿತ್ತು ಅಲ್ಲವಾ! ಮೈಸೂರು ಸೀಮೆಯ ಬೂಡಿನ ಜನ ಮದುವೆ ಆಗುವ ಹೆಣ್ಣು-ಗಂಡುಗಳನ್ನು ವಾರಗಟ್ಟಲೆ ಯಾವ ಆಸರೆ ಇಲ್ಲದೆ ಕಾಡಿನಲ್ಲಿ ಬಿಟ್ಟುಬರುವ ಪದ್ಧತಿಯಿತ್ತು… ಅದನ್ನು ಸ್ವಲ್ಪ ಹೇಳಬೇಕಿತ್ತಲ್ಲವಾ..! ಎಳೆ ಹುಡುಗರ ಆಕರ್ಷಣೆ ಅನುಭವಕ್ಕೆ ದಕ್ಕುತ್ತದೆ. ಒಂದೊಮ್ಮೆ ತಿಳುವಳಿಕೆ ಬಂದು ಆ ಇಬ್ಬರು ಸಂಸಾರದ ಗುಟ್ಟು ರಟ್ಟುಗಳನ್ನು ಅರ್ಥೈಸಿಕೊಳ್ಳಬಲ್ಲವರಾಗಿರುತ್ತಾರೆ. ಇದೆಲ್ಲದಕ್ಕೂ ಮೂಲಾಕರ್ಷಣೆ ಲೈಂಗಿಕ ಆಸಕ್ತಿಯಾಗಿರುತ್ತದೆ. ಆದರೆ ಅಮೀರ ಹೇಳಲು ಬಯಸಿದ್ದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಇಲ್ಲಿರುವುದು ನಾಗರಿಕ ಸಮಾಜದ ಮರ್ಯಾದಾಹತ್ಯಯೆಂಬ ಹೀನಕೃತ್ಯದ ಕುರಿತಾದ್ದು, ಪಂಚಾಯತ್ ನ್ಯಾಯಾಲಯದ ಏಕಮುಖಿ ಧೋರಣೆಯ ನ್ಯಾಯ ಪಮಚಾಯ್ತಿಕೆಯದ್ದು ಅಲ್ಲವಾ..? ಇಂಥ ಕಾರ್ಯಕ್ರಮವೊಂದು ಕನ್ನಡದಲ್ಲಿ ಬರುವಂತಾಗಿದ್ದರೆ ಅದೆಷ್ಟು ಚನ್ನಾಗಿರುತ್ತಿತ್ತು. ಡಬ್ಬಿಂಗ್ ತಮ್ಮ ಕ್ರಿಯಾಶೀಲತೆಗೆ ಸಂಚಕಾರವಾದೀತು ಎಂಬಂಥ ಭದ್ರತೆಯ ಪಟ್ಟಭದ್ರರ ಸ್ವಹಿತಾಸಕ್ತಿಯ ದೆಸೆಯಿಂದಾಗಿ ಡಬ್ಬ ಸಾಧ್ಯವಾಗಲಿಲ್ಲ ಅನ್ನೋದು ಬೇಜಾರು…

  3. shama, nandibetta

    ಸುಮಾ, ನೀವು ಹೇಳಿದ್ದು ಅಕ್ಷರಶಃ ನಿಜ.

  4. ಸುಮ ಸುಧಾಕಿರಣ್

    ಅಮಾಸ ಅವರಿಗೆ – ನಾನಿಲ್ಲಿ ಹೇಳುತ್ತಿರುವುದು ಪ್ರೇಮವಿವಾಹವನ್ನು ಒಪ್ಪಿಕೊಳ್ಳುವಂತೆ ಪೋಷಕರಿಗೆ ಸಲಹೆ ನೀಡಿದ ಆಮೀರ್ ಪ್ರೇಮಿಗಳಿಗೂ ಕೂಡ ಪ್ರಬುದ್ಧತೆಯಿರಲೆಂಬ ಸಂದೇಶವನ್ನು ನೀಡಬಹುದಿತ್ತು ಎಂದಷ್ಟೇ , ಇದು ಆತನ ಕಾರ್ಯಕ್ರಮಕ್ಕೆ ರೆಲೆವೆಂಟ್ ಆಗಿಯೇ ಇದೆಯೆಂಬುದು ನನ್ನ ಅನಿಸಿಕೆ . ನೀವು ಎತ್ತಿದ ಪ್ರಶ್ನೆಗಳು ಆತ ವಿವಿಧ ವಿಧದ ಮದುವೆಗಳು ಎಂಬ ವಿಚಾರದ ಕಾರ್ಯಕ್ರಮ ಮಾಡಿದ್ದರೆ ಮೂಡುತ್ತಿದ್ದವೇನೋ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading